ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ರೇ ಹಾದಿಯ ಪಥೇರ್ ತೇರು (ಗಾಂಧಿಸೀಟು)

Mainashree
Updated On : 26 Jan 2013, 2:58 am

ಜಗತ್ತಿನ ಹಲವು ಸತ್ಯದ ವಿಚಾರಗಳಲ್ಲಿ 'ಸತ್ಯಜಿತ್ ರೇ ಅತ್ಯುತ್ತಮ ನಿರ್ದೇಶಕ' ಎಂಬುದೂ ಹೌದು. ಇವರ ಚಿತ್ರಗಳ ಕಥೆ, ಪಾತ್ರಗಳು ಬಿಡದೆ ಕಾಡುತ್ತವೆ. ಹೀಗಾಗಿ ರೇ ಅವರ ಚಿತ್ರಗಳ ಪೈಕಿ 'ಪಥೇರ್ ಪಾಂಚಾಲಿ' ದೃಶ್ಯ ಕಾವ್ಯ ಒಂದು 'ಮಾಸ್ಟರ್ ಪೀಸ್‌'. ನಿಜಕ್ಕೂ ರೇ ಚಿತ್ರಗಳು ಹೇಗಿರಬಹುದೆಂಬ ಕುತೂಹಲದಲ್ಲೇ 'ಪಥೇರ್ ಪಾಂಚಾಲಿ', 'ಅಪರಾಜಿತೋ' ಹಾಗೂ 'ಅಪೂರ್ ಸಂಸಾರ್‌' ಈ ಮೂರು ಚಿತ್ರಗಳನ್ನೂ ತೆಗೆದಿಟ್ಟುಕೊಂಡಿದ್ದೆ. ಈ ಮೂರರಲ್ಲಿ ಮೊದಲು ನೋಡಿದ್ದು 'ಪಥೇರ್ ಪಾಂಚಾಲಿ'. ಈಗಾಗಲೇ ಈ ತ್ರಿವಳಿ ಚಿತ್ರಗಳು ಸಿನಿಮಾ ಆಸಕ್ತರ ಹಾಗೂ ವಿಮರ್ಶಕರ ಬರವಣಿಗೆಯಲ್ಲಿ ಮೂಡಿಯೂ ಬಂದಿದೆ.
ಜಾಗತಿಕ ಚಿತ್ರರಂಗದಲ್ಲಿ ಈ ಮೂರು ಚಿತ್ರಗಳು 'ಅಪು ಟ್ರಿಯಾಲಜಿ' ಎಂದು ಗುರುತಿಸಿಕೊಂಡಿವೆ. ಅದಕ್ಕೆ ಕಾರಣ ಈ ಮೂರು ಚಿತ್ರಗಳ ನಾಯಕ ಒಬ್ಬನೇ. ಆತನೇ ಅಪು. ಒಂದೇ ಕಥೆ ಮೂರು ಆಯಾಮಗಳನ್ನು ಒಳಗೊಂಡಿದ್ದು ಅದು ಮೂರೂ ಚಿತ್ರಗಳಿಗೆ ವಿಸ್ತರಣೆಗೊಂಡಿದೆ. 'ಪಥೇರ್ ಪಾಂಚಾಲಿ' ನೋಡಿದ ಮೇಲೆ ರೇ ಚಿತ್ರಗಳು, ಭಾರತೀಯ ಚಿತ್ರರಂಗಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರಕಿಸಿಕೊಟ್ಟಿವೆ ಎನ್ನುವ ಮಾತುಗಳಲ್ಲಿ ಯಾವ ಉತ್ಪ್ರೇಕ್ಷೆಯೂ ಇಲ್ಲ ಅಂತನ್ನಿಸಿತು. ಇದೇ ಹೆಸರಿನ ಕಾದಂಬರಿ ಆಧರಿಸಿ ಮೂಡಿ ಬಂದಿರುವ ಈ ಕಪ್ಪು ಬಿಳುಪಿನ ಚಿತ್ರ ಕಾವ್ಯವನ್ನು ಪಶ್ಚಿಮ ಬಂಗಾಳ ಸರ್ಕಾರ ನಿರ್ಮಾಣ ಮಾಡಿದೆ. ಬರ್ಲಿನ್, ನ್ಯೂಯಾರ್ಕ್, ಫ್ರೆಂಚ್, ಸ್ಕಾಟ್ಲೆಂಡ್, ಕೆನಡಾ, ಜಪಾನ್, ಡೆನ್ಮಾರ್ಕ್ ಮುಂತಾದ ದೇಶಗಳ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿದೆ.
ಇಂಗ್ಲಿಷ್‌ನಲ್ಲಿ 'ಸಾಂಗ್ ಆಫ್ ದಿ ಲಿಟ್ಲ್ ರೋಡ್‌' ಎಂದು ಕರೆಸಿಕೊಳ್ಳುವ 'ಪಥೇರ್ ಪಾಂಚಾಲಿ', ಬಂಗಾಳಿ ಬಡ ಬ್ರಾಹ್ಮಣ ಕುಟುಂಬದ ಸುತ್ತ ಮೂಡುವ ಚಿತ್ರ. ಹರಿಹರ- ಸರ್ಬೋಜ ಹಾಗೂ ಇವರ ಮಕ್ಕಳು ದುರ್ಗಾ ಮತ್ತು ಅಪು. ಇವರ ಮನೆ ಮುಂದೆಯೇ ಶಿಲಾಯುಗದ ಪಳೆಯುಳಿಕೆಯಂತಿರುವ ಹಣ್ಣು ಹಣ್ಣು ಮುದುಕಿ ಇಂದಿರಾ. ಹರಿಹರ ವೃತ್ತಿಯಲ್ಲಿ ಅರ್ಚಕನಾದರೂ ಆತನ ಪ್ರವೃತ್ತಿ ಸಾಹಿತ್ಯ ರಚನೆ. ತಂಬಾಕು ಹೊಗೆ ಎಳೆಯುತ್ತ ಸೀಮೆಎಣ್ಣೆ ಬುಡ್ಡಿಯ ಬೆಳಕಿನಲ್ಲಿ ಕಥೆಗಳನ್ನು ಬರೆಯುವುದರಲ್ಲೇ ಜೀವನದ ಸಂತೃಪ್ತಿ ಕಾಣುವಾತ. ಆಗೋ ಈಗೋ ಬಿದ್ದು ಹೋಗುವ ಮನೆಯಲ್ಲಿ ವಾಸಿಸುತ್ತಿರುವ ಈ ಕುಟುಂಬಕ್ಕೆ ಜೀವನ ನಡೆಸುವುದು ದುಬಾರಿಯಾಗಿ ಹರಿಹರ ದುಡಿಮೆಗಾಗಿ ದೂರದ ಊರಿಗೆ ಹೋಗುತ್ತಾನೆ. ಇಲ್ಲಿಂದ ಕತೆ ಮತ್ತೊಂದು ತಿರುವು ಪಡೆದುಕೊಂಡು, ದುರ್ಗಾ ಅನಾರೋಗ್ಯದಿಂದ ಸಾವಿಗೀಡಾಗುತ್ತಾಳೆ. ಬದುಕಿನ ಪ್ರತಿ ಕ್ಷಣದಲ್ಲೂ ತನ್ನೊಂದಿಗೆ ಇದ್ದ ಅಕ್ಕನನ್ನು ಕಳೆದುಕೊಳ್ಳುವ ಅಪು ಈಗ ಅಮ್ಮ, ಅಪ್ಪ ಇದ್ದರೂ ಅನಾಥ!
ಚಿತ್ರ ಇನ್ನೇನು ಮುಗಿಯಿತು ಎನ್ನುವಾಗ ಮನೆಗೆ ಬರುವ ಹರಿಹರ ತನ್ನ ಮಗಳ ಸಾವು ಆತನಿಗೂ ಬರಸಿಡಿಲಿನಂತಾಗುತ್ತದೆ. ಪ್ರಕೃತಿಯ ಸಿಟ್ಟಿಗೆ ಮನೆ, ಮಠ ಎಲ್ಲವನ್ನೂ ಕಳೆದುಕೊಳ್ಳುವ ಹರಿಹರನ ಕುಟುಂಬ ವಾರಾಣಸಿಗೆ ಪಯಣ ಬೆಳೆಸುವುದರೊಂದಿಗೆ ಚಿತ್ರ ಅಂತ್ಯಗೊಳ್ಳುತ್ತದೆ. ಕಪ್ಪುಬಿಳುಪಿನಲ್ಲಿ ಮೂಡುವ ಪಾತ್ರಗಳ ಭಾವನೆಗಳು, ನಾಟಕೀಯತೆ ಇಲ್ಲದ ಸಹಜ ಮತ್ತು ಬದುಕಿನ ವಿವಿಧ ಮುಖಗಳನ್ನು ಅನಾವರಣಗೊಳಿಸುತ್ತಲೇ ಸಾಗುತ್ತದೆ. ಮಿಠಾಯಿಗಾಗಿ ಕಾತರಿಸುವ, ಶ್ರೀಮಂತರ ಮನೆ ಮದುವೆಯಲ್ಲಿ ಸಿಹಿ ತೆಗೆದುಕೊಳ್ಳುವುದು, ರೈಲಿನ ಹಿಂದೆ ಓಡುವುದು- ಹೀಗೆ ಸಣ್ಣ ಸಣ್ಣ ಸಂಗತಿಗಳನ್ನೂ ಗಾಢವಾಗಿ ಚಿತ್ರಿಸುತ್ತದೆ. ದುರ್ಗಾ ಮತ್ತು ಅಪುವಿನ ಬೆಳವಣಿಗೆ ಮತ್ತು ಸಂಬಂಧ ಅಪೂರ್ವವಾಗಿ ಕಂಡರೂ ತೀರಾ ಆಪ್ತವಾಗಿ ಪದೇ ಪದೇ ಕಾಡುವ ಮತ್ತೊಂದು ಜೀವ, ಅನಾಥೆಯಂತೆ ಬದುಕುತ್ತಿರುವ ಮುದುಕಿ.
ದೇಹದಲ್ಲಿ ಮಾಂಸವೆಲ್ಲ ಬರಿದಾಗಿರುವ ಬರೀ ಮೂಳೆಗಳ ತಡಿಕೆ, ಪಾತಾಳ ಸೇರಿರುವ ಕಣ್ಣುಗಳು, ಅರೆ ಬರೆ ಚಿಪ್ಪು ತೆಗೆದ ತೆಂಗಿನಕಾಯಿಯಂತೆ ಕಾಣುವ ತಲೆ, ಹಳೇ ಗೋಣಿ ಚೀಲವನ್ನು ನೆನಪಿಸುವ ಹರಿದ ಬಿಳಿ ಸೀರೆ, ಎದ್ದರೆ ಕೂರಲಾಗದು, ಕೂತರೆ ಎದ್ದೇಳಲು ಆಗದ ಈ ಮುದುಕಿ ಸದ್ಯ ಕಾಲನ ಕರೆಗೆ ಮಾತ್ರ ಕಾಯುತ್ತಿದ್ದಾಳೆ. ಆದರೂ ಈಕೆಯ ಬೊಚ್ಚು ಬಾಯಿಂದ ಹೊರ ಬರುವ ನಗು, ಸ್ವತಂತ್ರ ಜೀವನ ನೋಡಿದಾಗ ಜೀವನೋತ್ಸಾಹ ಹೆಚ್ಚಾಗಿತ್ತದೆ. ಬಿದಿರಿನ ಬುಡದಲ್ಲೇ ಕೂತು ಅಲ್ಲೇ ಪ್ರಾಣ ಬಿಡುವ ಮುದುಕಿ ತನ್ನ ಸಾವು ಕೂಡ ಇನ್ನೊಬ್ಬರಿಗೆ ಹೊರೆಯಾಗದಂತೆ ಬದುಕಿದ ಜೀವ ಅದು. ಈ ಮುದುಕಿಯೇ ಹಾಗೆ ಸುಮ್ಮನೆ ತಾನು ಒಮ್ಮೆ ಗುನುಗಿದ ಹಾಡಿಗೆ ಅನ್ವರ್ಥಳಾಗುತ್ತಾಳೆ. ಪಾತ್ರಗಳ ನೆರಳಿಗೂ ಜೀವ ತುಂಬುವ ಕ್ಯಾಮೆರಾ ವೈಶಿಷ್ಟ್ಯತೆ, ಪಾತ್ರಗಳ ವರ್ತನೆ, ಮಾತು... ಯಾವುದಕ್ಕೂ ಕೃತಕತೆಯ ಬಣ್ಣವಿಲ್ಲ. ಸಹಜತೆ ಚೌಕಟ್ಟಿನಲ್ಲೇ ಅರಳುವ ಈ ಚಿತ್ರ ಮತ್ತೆ ಮತ್ತೆ ನೋಡಬೇಕು ಎನ್ನಿಸುತ್ತದೆ. ಚಿತ್ರ ನೋಡಿದ ಮೇಲೆ ಕಪ್ಪು ಬಿಳುಪಿನ ಪರದೆಯಿಂದ ಬಂಗಾರವನ್ನು ಕಣ್ತುಂಬಿಕೊಂಡ ಅನುಭವ.

- ಆರ್. ಕೇಶವಮೂರ್ತಿ
keshavarkm1@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement