ಸಾಪ್ತಾಹಿಕಪ್ರಭ

ಸಂಯಮ ಮೂರ್ತಿ ಶಿವರಾಜಸಿಂಗ್ ಚೌಹಾಣ್

ಬಿಜೆಪಿಯ ಪರವಾಗಿ ರಾಜ್ಯಾಡಳಿತದ ಸೂತ್ರಗಳನ್ನು ಹಿಡಿದು ಅಧಿಕಾರ ಚಲಾಯಿಸುತ್ತಿರುವ ಮುಖ್ಯಮಂತ್ರಿಗಳಲ್ಲಿ ಅತಿ ಪ್ರಸಿದ್ಧರೆನಿಸಿದವರು ಗುಜರಾತಿನ ನರೇಂದ್ರ ಮೋದಿ. ಒಂದು ರೀತಿಯಲ್ಲಿ ಈಗ ನರೇಂದ್ರ ಮೋದಿ ಬಿಜೆಪಿಯ ಅನೇಕ ಪ್ರತಿಷ್ಠಿತರ ಪಾಲಿನ ಮಹಾನಾಯಕ.
ಆದರೆ, ಆರೆಸ್ಸೆಸ್ ಹಾಗೂ ಬಿಜೆಪಿ ಭದ್ರವಾಗಿ ಬೇರು ಬಿಟ್ಟಿರುವ, ಜನಜೀವನದಲ್ಲಿ ಹಾಸುಹೊಕ್ಕಾಗಿ ಸೇರಿರುವ ರಾಜ್ಯಗಳ ಮಧ್ಯಮ ದರ್ಜೆಯ ಪಕ್ಷದ ನಾಯಕರಲ್ಲಿ, ಮೊದಲ ಸ್ಥಾನ ಪಡೆದಿರುವುದು ನರೇಂದ್ರ ಮೋದಿ ಅಲ್ಲ ಶಿವರಾಜ ಸಿಂಗ್ ಚೌಹಾಣ್.
ಮಧ್ಯಪ್ರದೇಶದಂಥ ತೀರಾ ಹಿಂದುಳಿದ, ನಿಸರ್ಗ ಸಂಪತ್ತಿನ ಆಸರೆಯೂ ಇಲ್ಲದ, ಇನ್ನೂ ಯಜಮಾನ ಸಂಸ್ಕೃತಿಯ ಪಾಳೇಗಾರಿಕೆ ಹಾಗೂ ಊಳಿಗಮಾನ್ಯ ವ್ಯವಸ್ಥೆ ಸಾಕಷ್ಟು ಬಲವಾಗಿರುವ ರಾಜ್ಯದಲ್ಲಿ, ಕಳೆದ ಒಂದು ದಶಕದಲ್ಲಿ ಸದ್ದು-ಗದ್ದಲವಿಲ್ಲದ ಅನೇಕರ ಕಣ್ಣಿಗೆ ಕಾಣದ ಸಾಮಾಜಿಕ ಕ್ರಾಂತಿಯನ್ನೇ ಆರಂಭಿಸಿರುವ ಕೀರ್ತಿ ಪಡೆದಿರುವುದು ಶಿವರಾಜ ಸಿಂಗ್ ಚೌಹಾಣ.
ಆದರೆ ಅವರ ಹೆಸರು, ಅವರು ಮಾಡಿರುವ ಕೆಲಸಕ್ಕೆ ಅಖಿಲ ಭಾರತ ಪ್ರಚಾರ ಸಿಕ್ಕಿಲ್ಲ. ಅದಕ್ಕೆ ಮೂಲ ಕಾರಣ ತತ್ವಶಾಸ್ತ್ರದಲ್ಲಿ ಎಂ.ಎ. ಪದವಿ ಪಡೆದಿದ್ದರೂ, ಚೊಕ್ಕವಾಗಿ, ಸ್ಪಷ್ಟವಾಗಿ ತಮ್ಮ ಅನಿಸಿಕೆ- ಅಭಿಪ್ರಾಯಗಳನ್ನು ಇಂಗ್ಲಿಷಿನಲ್ಲಿ ಬರೆಯಬಲ್ಲ ಶಕ್ತಿ ಇದ್ದರೂ, ಆಡುಮಾತಿನಲ್ಲಿ ಇಂಗ್ಲಿಷ್ ಬಳಸಲು ಅವರ ಹಿಂಜರಿಕೆ. ಎಲ್ಲಿ ಇಂಗ್ಲಿಷ್‌ನಲ್ಲಿ ತಪ್ಪು ಪ್ರಯೋಗಗಳನ್ನು ಬಳಸಿ ನಗೆಪಾಟಲಿಗೆ ಸಿಕ್ಕಿ ಬೀಳುತ್ತೇನೋ, ಎನ್ನುವ ಅಳುಕು ಅವರಲ್ಲಿದೆ. ಅದಕ್ಕೇ ಅವರು ಇಂಗ್ಲಿಷ್ ಬಳಸುವುದಿಲ್ಲ, ಪ್ರತಿಷ್ಠಿತ ಅಖಿಲ ಭಾರತ ಖ್ಯಾತಿಯ ಪತ್ರಕರ್ತ- ಪ್ರಚಾರಕರ ಗಮನ ಅವರ ಕಡೆ ಹರಿದಿಲ್ಲ.
ಐದು ಬಾರಿ ಸತತವಾಗಿ ಲೋಕಸಭೆ ಚುನಾವಣೆಯಲ್ಲಿ ಗೆದ್ದು, ಮೂರು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿದ್ದರೂ, ಅವರ ಹೆಸರು ಮಧ್ಯ ಭಾರತದ ಗಡಿಯನ್ನು ದಾಟಲೇ ಇಲ್ಲ. ಅವರಿಗೆ ಪ್ರಚಾರ ಸಿಕ್ಕಿದ್ದು ಉಮಾಭಾರತಿ ಅವರು ಬಿಜೆಪಿಗೆ ಹಿಂತಿರುಗುವ ಸಮಯದಲ್ಲಿ. ಉಮಾ ಭಾರತಿ ರಾಷ್ಟ್ರೀಯ ನಾಯಕಿಯಾಗೇ ಉಳಿದುಕೊಳ್ಳಲಿ, ಆದರೆ ಮಧ್ಯಪ್ರದೇಶದ ತಂಟೆ ಅವರಿಗೆ ಬೇಡ ಎಂದಾಗ. ಸಾಮಾನ್ಯವಾಗಿ ಜಗಳವನ್ನೇ ಆಡದೆ, ಸಂಯಮ ಸಡಿಲವಾಗದಂತೆ ನೋಡಿಕೊಂಡು, ಅವರ ಸಮೀಪ ವರ್ತುಲಗಳಲ್ಲಿ ಗೌರವಾದರಗಳಿಗೆ ಪಾತ್ರರಾಗಿರುವ ಶಿವರಾಜ ಸಿಂಗ್, ಅದೇಕೋ ಉಮಾಭಾರತಿಯನ್ನು ಸಹಿಸಿಲ್ಲ.
ಕಳೆದವಾರ, ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ, ಸಂಸತ್ ಸದಸ್ಯ, ಕಲ್ಯಾಣ ಸಿಂಗ್ ಬಿಜೆಪಿಗೆ ಹಿಂತಿರುಗಿದಾಗ ನಡೆದ ಒಂದು ಸಮಾರಂಭದಲ್ಲಿ ಪಕ್ಷದ ಅತಿರಥ- ಮಹಾರಥರಲ್ಲಿ ಬಹುಮಂದಿ ಶಿವರಾಜ ಸಿಂಗ್ ಚೌಹಾಣ್ ಪಕ್ಷದ ನಿಜವಾದ ಆದರ್ಶ ಮುಖ್ಯಮಂತ್ರಿ ಎಂದು ಹೊಗಳಿದ್ದು ಉಂಟು. ಆದರೆ ಅವರಲ್ಲಿ ಯಾರೂ ನರೇಂದ್ರ ಮೋದಿಯ ಹ್ಯಾಟ್ರಿಕ್ ವಿಧಾನಸಭೆ ಚುನಾವಣೆಯ ವಿಚಾರವನ್ನು ಪ್ರಸ್ತಾಪಿಸಲಿಲ್ಲ.
ನಾಲ್ಕೂ ದಶಕಗಳ ಕಾಲ ಸಂಘಪರಿವಾರ- ಬಿಜೆಪಿಯ ನಾಯಕರಾಗಿದ್ದರೂ, ರಾಜ್ಯದ ಮುಖ್ಯಮಂತ್ರಿಯಾಗಿ ಅವರು ಕಣ್ಣಿಗೆ ಕಾಣುವಂತೆ'ಸೆಕ್ಯುಲರ್‌' ಎನ್ನಬಹುದಾದ ರೀತಿಯಲ್ಲೇ ವರ್ತಿಸಿದ್ದಾರೆ. ಕ್ರಿಸ್ಮಸ್ ದಿನ ಮನೆಯಲ್ಲೇ ಪಾರ್ಟಿ ಕೊಡುತ್ತಾರೆ. ಮುಸ್ಲಿಮರ ಹಬ್ಬದ ದಿನಗಳಲ್ಲಿ ಸೂಕ್ತ ರೀತಿಯಲ್ಲಿ ತಮ್ಮ ಗೌರವವನ್ನು ಸೂಚಿಸುತ್ತಾರೆ.
ಅಯೋಧ್ಯೆಯ ಬಾಬರಿ ಮಸೀದಿ ಕಟ್ಟಡ ನೆಲಸಮವಾದ ಸಂದರ್ಭದಲ್ಲಿ ಮಧ್ಯಪ್ರದೇಶದಲ್ಲಿ ನಡೆದ ಕೋಮು ಗಲಭೆಗಳಲ್ಲಿ 150 ಮಂದಿ ಪ್ರಾಣ ಕಳೆದುಕೊಂಡರು. ಕಳೆದ ಹತ್ತು ವರ್ಷಗಳಲ್ಲಿ ಈಚಿನ ರತ್ನಾಮ್ ಪ್ರದೇಶದ ಪುಟ್ಟ ಗಲಭೆಯನ್ನು ಬಿಟ್ಟರೆ ಒಂದೇ ಒಂದು ಕೋಮು ಸಂಘರ್ಷದ ಘಟನೆ ನಡೆದಿಲ್ಲ. ಯಾತ್ರಾಸ್ಥಳಗಳಿಗೆ ಹೋಗುವವರಿಗೆ ಮಧ್ಯಪ್ರದೇಶ ಸರ್ಕಾರ ಸಬ್ಸಿಡಿಯನ್ನು ಕೊಡುತ್ತಿದೆ. ಆ ಸ್ಥಳಗಳ ಪಟ್ಟಿಯಲ್ಲಿ ಅಜ್ಮೀರ್ ಮಸೀದಿಯೂ ಇದೆ. ಇಂತಹ ಸಂಕೇತಗಳನ್ನು ಪ್ರತಿಷ್ಠಿತ ಸೆಕ್ಯುಲರ್ ಪ್ರಚಾರಕರು ಗಮನಿಸುವುದೇ ಇಲ್ಲ.
ಈಗಾಗಲೇ ಶಿವರಾಜ ಸಿಂಗ್ ಚೌಹಾಣ್‌ರ ನೇತೃತ್ವದಲ್ಲಿ ಮಧ್ಯ ಪ್ರದೇಶದಲ್ಲಿ ಬಿಜೆಪಿ ಎರಡು ಚುನಾವಣೆಗಳನ್ನು ಗೆದ್ದಿದೆ. ಈಗ ಮೂರನೆಯ ಚುನಾವಣೆಗೆ ವೇದಿಕೆ ಸಿದ್ಧವಾಗುತ್ತಿದೆ. ಈಗಲೂ ಅಲ್ಲಿ ಬಿಜೆಪಿ ಗೆದ್ದರೆ, ಚೌಹಾಣರೂ ಹ್ಯಾಟ್ರಿಕ್ ಮುಖ್ಯಮಂತ್ರಿಯೇ.
ಮಧ್ಯಪ್ರದೇಶ ನಿಜಕ್ಕೂ ಒಂದು ಕಡುಬಡವರ ರಾಜ್ಯ. ಚತ್ತೀಸಘಡ ಪ್ರತ್ಯೇಕ ರಾಜ್ಯವಾದ ಅನಂತರ ಖನಿಜ ಸಂಪತ್ತೆಲ್ಲ ಆ ರಾಜ್ಯಕ್ಕೇ ಹೋಯಿತು. ಅಭಿವೃದ್ಧಿಗೆ ಕೇಂದ್ರದ ನೆರವೂ ನಿರೀಕ್ಷಿತ ಮಟ್ಟದಲ್ಲಿ ಸಿಗಲಿಲ್ಲ.
ಈಗ ಮಧ್ಯಪ್ರದೇಶದ ಮುಂಚೂಣಿ ಉದ್ಯಮ ಕೃಷಿ ಗೋಧಿ ಹಾಗೂ ಸೋಯಾಬೀನ್. ಸೋಯಾಬೀನ್‌ಗೆ ವಿದೇಶಗಳಲ್ಲಿ ಬೇಡಿಕೆ ಇದೆ. ಹಿಂದೆ ದೇಶದ ಗೋಧಿ ಬೆಳೆಯುವ ಪ್ರದೇಶಗಳ ಪಟ್ಟಿಯಲ್ಲಿ ಮಧ್ಯಪ್ರದೇಶದ ಹೆಸರು ಇರಲಿಲ್ಲ. ಈಗ ಆ ಕೊರತೆ ನೀಗಿದೆ. ಪಂಜಾಬ್, ಹರ್ಯಾಣ, ಉತ್ತರ ಪ್ರದೇಶದ ಪಶ್ಚಿಮ ಜಿಲ್ಲೆಗಳ ಜತೆಯಲ್ಲೇ ಮಧ್ಯಪ್ರದೇಶದ ಉತ್ತರ ಭಾಗದ ಜಿಲ್ಲೆಗಳೂ ಗೋದಿಯ ಕಣಜಗಳಾಗಿವೆ.
ಅಲ್ಲಿ ಈಗಲೂ ಬೇಕಾದಷ್ಟು ಭೂಮಿ ಇದೆ. ಉದ್ಯಮಗಳಿಗೆ ಒಳ್ಳೆಯ ಅವಕಾಶ. ಉದ್ಯಮಿಗಳನ್ನು ಆಕರ್ಷಿಸಲು ಶಿವರಾಜ ಸಿಂಗ್ ಪ್ರಚಾರಾಂದೋಲನಕ್ಕೆ ಮುಂದಾಗಿಲ್ಲ. ಉದ್ಯಮಿಗಳೇ ಬರುತ್ತಿದ್ದಾರೆ. ಮುಂದಿನ ದಶಕದಲ್ಲಿ ಆ ವಲಯದಲ್ಲೂ ರಾಜ್ಯ ಮುಂದೆ ಬರಬಹುದು.
ಈಗಲೂ ಹೇಳಿಕೇಳಿ ಆ ರಾಜ್ಯ ಊಳಿಗಮಾನ್ಯ ಪದ್ಧತಿಯ ಪಾಳೆಗಾರಿಕೆಯ ಸಂಸ್ಕೃತಿಯನ್ನು ಗಮನಾರ್ಹವಾದ ಪ್ರಮಾಣದಲ್ಲೇ ಉಳಿಸಿಕೊಂಡಿದೆ. ಪ್ರಕಟಿತ ಅಂಕಿ- ಅಂಶಗಳ ಪ್ರಕಾರ ಅಲ್ಲಿ ಮಹಿಳೆಯರ ಮೇಲಿನ ಅತ್ಯಾಚಾರದ ಪ್ರಕರಣಗಳು ಹೆಚ್ಚು. ಶಿಕ್ಷಣ, ಜನಾರೋಗ್ಯ, ಸಾಮಾಜಿಕ ಸಮಾನತೆಯಂಥ ಮಾನವ ಅಭಿವೃದ್ಧಿ ವಲಯದಲ್ಲಿ ಸಾಧನೆ ಕಡಿಮೆ.
ಇದುವರೆಗೆ ಮಾಡಿರುವ ಪ್ರಯತ್ನ ಈಗ ತಾನೆ ಫಲ ಕೊಡುತ್ತಿದೆ. ಮುಂದೆ ಪರಿಸ್ಥಿತಿ ಸುಧಾರಿಸಬಹುದು.
ಭ್ರಷ್ಟಾಚಾರ, ಇತರ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ. ಉನ್ನತ ಮಟ್ಟದಲ್ಲಿನ ಭ್ರಷ್ಟಾಚಾರದ ಪ್ರಕರಣಗಳು ಹೆಚ್ಚಿಲ್ಲ. ಮುಖ್ಯಮಂತ್ರಿಯ ಮೇಲಂತೂ ಭ್ರಷ್ಟಾಚಾರದ ಆರೋಪಗಳು ಇಲ್ಲವೇ ಇಲ್ಲ.
ಶಿವರಾಜಸಿಂಗ್ ಚೌಹಾಣ್ ಆ ಪ್ರದಶಗಳಲ್ಲಿನ ಒಂದು ಸಾಮಾನ್ಯ ರಜಪೂತ ಮನೆತನದಲ್ಲಿ ಹುಟ್ಟಿದವರು. ಇನ್ನೂ ಅವರಿಗೆ 53 ವಯಸ್ಸು. ಸಂತೃಪ್ತ ಸಂಸಾರ ಅವರದ್ದು. ಇಬ್ಬರು ಮಕ್ಕಳಿದ್ದಾರೆ.
ಬಿಜೆಪಿಯ ವಲಯಗಳಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿಯ ಮಾತಿಗೆ ಬೆಲೆ ಇದೆ. ದೆಹಲಿಯಲ್ಲೇ ಬೀಡು ಬಿಟ್ಟು, ರಾಷ್ಟ್ರೀಯ ನಾಯಕರೆಂದು ಮೆರೆಯುವ ಜನ ಮಧ್ಯಪ್ರದೇಶದ ವ್ಯವಹಾರಗಳಲ್ಲಿ ಕೈ ಹಾಕುವುದು ಕಡಿಮೆ. ಅದಕ್ಕೆ ಚೌಹಾಣ್ ಅವಕಾಶ ನೀಡಿಲ್ಲ. ಶಿವರಾಜ ಸಿಂಗ್ ಚೌಹಾಣ್‌ರಿಗಿಂತ ಮುಂಚೆ ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿದ್ದವರು ಬಾಬುಲಾಲ್ ಗೌರ್. ರಾಜಕೀಯ ಪರಿಸ್ಥಿತಿಯ ಒತ್ತಡಗಳಿಂದಾಗಿ, ಚೌಹಾಣ ಮುಖ್ಯಮಂತ್ರಿಯಾದಾಗ, ಬಾಬುಲಾಲ್ ಗೌರ್ ಸಚಿವ ಸಂಪುಟವನ್ನು ಸೇರಿದರು. ಒಂದು ದಶಕದಿಂದಲೂ ಈ ಮಂತ್ರಿಮಂಡಲ ಕೆಲಸ ಮಾಡಿದೆ. ಹೇಳಿಕೊಳ್ಳುವಂಥ ರಾಜಕೀಯ ತಿಸ್ರಗಳು ಕಂಡುಬಂದಿಲ್ಲ.
ರಾಜಕೀಯ ಭಿನ್ನಾಭಿಪ್ರಾಯಗಳನ್ನು ನಿಭಾಯಿಸುವುದರಲ್ಲಿ ಚೌಹಾಣ್ ನಿಜವಾಗಲೂ ನಿಪುಣರು. ಪಕ್ಷದಲ್ಲಿನ ಮುಖಂಡರಿಗೆ ಯಾವುದೇ ವಿಚಾರದಲ್ಲಿ ಅತೃಪ್ತಿ- ಅಸಮಾಧಾನ ಆಗಿದ್ದರೆ, ಅದು ಗಮನಕ್ಕೆ ಬಂದ ಕೂಡಲೇ ಮುಖ್ಯಮಂತ್ರಿಯೇ ಮಂತ್ರಿ ಮನೆಗೆ ಹೋಗ್ತಾರೆ. ಸಂಯಮ- ವಿಶ್ವಾಸದಿಂದ ಮಾತಾಡಿ ಪರಿಸ್ಥಿತಿಯನ್ನು ಸುಧಾರಿಸುತ್ತಾರೆ. ಇದು ವಾಜಪೇಯಿ ಅವರಿಂದ ಚೌಹಾಣ್ ಕಲಿತ ಪಾಠ.
ಶಿವರಾಜ ಸಿಂಗ್ ಅವರನ್ನು ಕುರಿತು ಅವರ ಅಭಿಮಾನಿಯೊಬ್ಬರು ಆಡಿದ ಮಾತು; 'ನರೇಂದ್ರ ಮೋದಿ ಜನರ ಮೇಲೆ ಪ್ರಭಾವ ಬೀರುತ್ತಾರೆ. ಆದರೆ ಶಿವರಾಜ್ ಸಿಂಗ್, ಜನರ ಮೈತ್ರಿ ಗಳಿಸುತ್ತಾರೆ'.

-ಸತ್ಯ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video