ದೂರು ನೀಡಬಹುದು
ಹೆಸರು ಬೇಡ, ದೊಡ್ಡಬಳ್ಳಾಪುರ
ಅನುದಾನಿತ ಕಾಲೇಜಿನ ಉಪನ್ಯಾಸಕರೊಬ್ಬರು ಪತ್ರಿಕೆಯೊಂದಕ್ಕೆ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಹಲವಾರು ಕಾರ್ಯಕ್ರಮಗಳಿಗೆ ಸಾರ್ವಜನಿಕರಿಂದ ವಂತಿಗೆ ವಸೂಲಿ ಮಾಡಿ ಲೆಕ್ಕ ಕೊಡುವುದಿಲ್ಲ. ಇದು ನಿಯಮಗಳಿಗೆ ವಿರುದ್ಧವಲ್ಲವೇ?
- ಹೌದು. ನೀವು ಬೇಕಾದರೆ ಅವರ ಆಡಳಿತ ಮಂಡಳಿ ಹಾಗೂ ಸಂಬಂಧಿಸಿದ ಶಿಕ್ಷಣ ಇಲಾಖೆಗೆ ದೂರು ನೀಡಬಹುದು.
ಠಾಣೆಗೆ ದೂರು ಕೊಡಲು ಅವಕಾಶವಿಲ್ಲ
ಚಂದ್ರಶೇಖರ, ಬಾಲಕುಂಟನಹಳ್ಳಿ, ಚಿಕ್ಕಬಳ್ಳಾಪುರ ತಾ.
ಮಾಹಿತಿ ಹಕ್ಕಿಗೆ ಸಂಬಂಧಿಸಿದಂತೆ ಇರುವ ಕಾನೂನು, ನಿಯಮಗಳ ಬಗ್ಗೆ ಮಾಹಿತಿ ಕೊಡಿ.
- ಅರ್ಜಿ ನೀವೇ ಬರೆದು ಕೊಡಬಹುದು. ಮಾಹಿತಿ ಕೇಳಲು ಕಾರಣ ಕೊಡಬೇಕಾಗಿಲ್ಲ. ಎಷ್ಟು ಬಾರಿ ಬೇಕಾದರೂ ಅರ್ಜಿ ಕೊಡಬಹುದು. ವೈಯಕ್ತಿಕ ಮಾಹಿತಿ ಕೇಳಿದರೆ ಕೊಡಲು ನಿರಾಕರಿಸಬಹುದು. ಆದರೆ ಠಾಣೆಗೆ ದೂರು ಕೊಡಲು ಅವಕಾಶವಿಲ್ಲ. ದಿನಬೆಳಗಾದರೆ ನೀವು ಅರ್ಜಿ ಸಲ್ಲಿಸುತ್ತಿದ್ದರೆ ಅದು ಮಾನಸಿಕ ಚಿತ್ರಹಿಂಸೆಯೇ ಅಲ್ಲದೆ ಸರ್ಕಾರಿ ಕೆಲಸಕ್ಕೆ ಅಡ್ಡಿಯಾಗುತ್ತದೆ. ನೀವು ಕ್ಷುಲ್ಲಕ ವಿಷಯಗಳ ಬಗ್ಗೆ ಪ್ರಶ್ನೆ ಕೇಳುತ್ತಲೇ ಇದ್ದು ಅವರು ಕೆಲಸ ಮಾಡಲು ಅವಕಾಶವನ್ನೇ ಕೊಡದಿದ್ದರೆ ಅವರು ಠಾಣೆಗೆ ಅರ್ಜಿ ಸಲ್ಲಿಸದೇ ಇನ್ನೇನು ಮಾಡಿಯಾರು? ಕಾನೂನನ್ನು ತಪ್ಪಾಗಿ ಅರ್ಥೈಸಿದರೆ ಮಾಹಿತಿ ಆಯುಕ್ತರಿಗೆ ಅರ್ಜಿ ಕೊಡಬಹುದು.
ಹೊಸ ವಿಲ್ ಮಾಡಬೇಕು
ಮೂರ್ತಿ, ಬೆಂಗಳೂರು
ರಿಜಿಸ್ಟರ್ಡ್ ವಿಲ್ ಮಾಡಿದರೂ ಈಗ ಅದರಲ್ಲಿರುವ ಒಂದು ನಿವೇಶನವನ್ನು ಮಾರಾಟ ಮಾಡಬೇಕೆಂದಿದ್ದೇನೆ. ಹಾಗೆ ಮಾಡಿದರೆ ಬೇರೆ ವಿಲ್ ಮಾಡಬೇಕೇ?
- ಹೌದು. ಹಳೆಯ ವಿಲ್ ರದ್ದಾಗುತ್ತದೆ. ಆದ್ದರಿಂದ ಹೊಸದಾಗಿ ವಿಲ್ ಮಾಡಬೇಕು.
ಯಾವುದೇ ಅಡ್ಡಿಯಿಲ್ಲ
ಆರತಿ, ಸಾಗರ
ಶಿಕ್ಷಕಿಯಾಗಿ 10 ವರ್ಷ ಕೆಲಸ ಮಾಡಿದ್ದು ಮಧ್ಯೆ 44 ದಿನಗಳ ವೇತನರಹಿತ ರಜೆ ಪಡೆದಿದ್ದೇನೆ. ಈಗ ನನಗೆ ಕಾಲಮಿತಿ ಆಧಾರಿತ ವೇತನ ಬಡ್ತಿಗೆ ಇದು ಅಡ್ಡಿಯಾಗುತ್ತದೆಯೇ?
- ವೇತನರಹಿತ ರಜೆ ಮಂಜೂರಾಗಿದ್ದರೆ ಅಂತಹ ಅಸಾಧಾರಣ ರಜೆಯಿಂದ ಟೈಮ್‌ಬಾಂಡ್ ಅಡ್ವಾನ್ಸ್ ಮೆರಿಟ್‌ಗೆ ಯಾವ ಬಾಧಕವೂ ಇಲ್ಲ. (ನಿಯಮ 107-ಎ ಹಾಗೂ 162 ಮತ್ತು 254 ನಾಗರಿಕ ಸೇವಾ ನಿಯಮ).
ದಾವಾ ಹಾಕಿ
ಪಿ.ಬಿ.ಎಸ್. ಗೌಡ, ಮಡಿಕೇರಿ
ನಮ್ಮ ತಾತನಿಗೆ ಒಬ್ಬ ಮಗಳು ಒಬ್ಬ ಮಗ ಇದ್ದು ತಾತನವರು ನಮ್ಮ ತಾಯಿಯವರಿಗೆ ತಮ್ಮ 15 ಎಕರೆ ಜಮೀನಿನಲ್ಲಿ 5 ಎಕರೆ ಹಾಗೂ ಒಂದು ನಿವೇಶನ ಕೊಟ್ಟು ತಾಯಿಯ ಹೆಸರಿಗೆ ಖಾತೆಯಾಗಿತ್ತು. ಈಗ ನನ್ನ ತಾಯಿಯ ಸಹೋದರ ಅನಕ್ಷರಸ್ಥಳಾದ ನನ್ನ ತಾಯಿಯಿಂದ ಖಾಲಿ ಹಾಳೆಗೆ ಹೆಬ್ಬೆಟ್ಟು ಗುರುತು ಮಾಡಿಸಿಕೊಂಡು ಆ 5 ಎಕರೆಯನ್ನು ತನ್ನ ಹೆಸರಿಗೆ ಖಾತಾ ಮಾಡಿಸಿಕೊಂಡಿದ್ದಾನೆ. ಈ ಅನ್ಯಾಯವನ್ನು ಹೇಗೆ ಸರಿಪಡಿಸಬೇಕು? ಅಲ್ಲದೆ, ತಾತನ ಆಸ್ತಿಯಲ್ಲಿ ಆಕೆ ಸಮಪಾಲು ಕೇಳಬಹುದೇ?
-ತಾಲೂಕು ಕಚೇರಿ ಹಾಗೂ ಉಪವಿಭಾಗಾಧಿಕಾರಿ ಕಚೇರಿಗೆ ಅರ್ಜಿ ನೀಡಿ ಖಾತೆ ಬದಲಾವಣೆ ರದ್ದು ಮಾಡಬೇಕೆಂದು ಪ್ರಾರ್ಥಿಸಿ. ಜತೆಗೆ ಆಸ್ತಿಯಲ್ಲಿ ಸಮಪಾಲು ಕೇಳಿ ದಾವಾ ಹಾಕಿ. ಸಮಸ್ಯೆ ಪರಿಹಾರವಾಗಬಹುದು.
- ಎಚ್.ಆರ್. ಕಸ್ತೂರಿರಂಗನ್