ಓಲೆಯ ತಂದೆನು...
ಅಂಚೆ ಇಲಾಖೆಯೆಂದರೆ ಅಂಚೆ ಕಚೇರಿ ಮಾತ್ರ ಎಂದು ತಿಳಿದಿರುವ ಸಾರ್ವಜನಿಕರಿಗೆ, ಆರ್ಎಂಎಸ್ ಅಪರಿಚಿತ. ಡಬ್ಬದಲ್ಲಿ ಹಾಕಿದ ಪತ್ರ ವಿಳಾಸದಾರನನ್ನು ತಲಪುವ...
ಆತ್ಮೀಯರೊಬ್ಬರು ಬರೆದ ಕಾಗದವನ್ನು ನಿಮ್ಮ ಕೈಗಿಟ್ಟು, ತನ್ನ ಪಾಡಿಗೆ ಹೋಗುತ್ತಿದ್ದಾನೆ ಪೋಸ್ಟ್ಮ್ಯಾನ್. ಅವನಿನ್ನೂ ಎಷ್ಟೊಂದು ಮನೆಗಳಿಗೆ ಪತ್ರ ಹಂಚಲಿಕ್ಕಿದೆಯೊ! ದೂರದಲ್ಲಿರುವ ಗೆಳೆಯನ ಅಕ್ಷರಗಳು ನಿಮ್ಮ ಎದೆಯಾಳಕ್ಕಿಳಿಯುತ್ತಿರುವುದೇನೋ ನಿಜ. ಆದರೆ ಅವು ಸಾಗಿ ಬಂದ ದಾರಿಯನ್ನು ಒಮ್ಮೆಯಾದರೂ ನೋಡಿದ್ದೀರಾ?
ಅಂಚೆ ಇಲಾಖೆಯೆಂದರೆ ಅಂಚೆ ಕಚೇರಿ ಮಾತ್ರ ಎಂದು ತಿಳಿದಿರುವ ಸಾರ್ವಜನಿಕರಿಗೆ, ಆರ್ಎಂಎಸ್ ಅಪರಿಚಿತ. ಡಬ್ಬದಲ್ಲಿ ಹಾಕಿದ ಪತ್ರ ವಿಳಾಸದಾರನನ್ನು ತಲಪುವ ನಡುವೆ ಏನೆಲ್ಲ ನಡೆಯುತ್ತದೆ? ಹೀಗೆ ತೆರೆಮರೆಯಲ್ಲಿ, ಹೃದಯ ಹೃದಯಗಳನ್ನು ಬೆಸೆಯುವ ಕೆಲಸ ಮಾಡುತ್ತಿರುವ 'ಆರ್ಎಂಎಸ್'(ರೈಲ್ವೆ ಮೇಲ್ ಸರ್ವೀಸ್)ಗೆ ಒಂದೂವರೆ ಶತಮಾನ ತುಂಬುತ್ತಿದೆ ಎಂಬುದೇ ಸಂಭ್ರಮದ ವಿಷಯ.
ಅಂಚೆ ಕಚೇರಿಗಳು ಸಾರ್ವಜನಿಕರ ಪತ್ರಗಳನ್ನು ಸಂಗ್ರಹಿಸಿ ಆರ್ಎಂಎಸ್ಗೆ ಕಳುಹಿಸುತ್ತವೆ. ಅಲ್ಲಿ ಈ ಎಲ್ಲಾ ಅಂಚೆಗಳು ವಿಂಗಡನೆಗೊಂಡು ನಂತರದ ವಿಂಗಡನಾ ಕಚೇರಿ ಅಥವಾ ಆಯಾ ಪೋಸ್ಟ್ ಆಫೀಸನ್ನು ತಲಿಪುತ್ತವೆ. ರೈಲ್ವೆ ನಿಲ್ದಾಣದಲ್ಲಿ ಅಥವಾ ಬಳಿಯಿರುವ ವಿಂಗಡಣಾ ಕಚೇರಿಗಳನ್ನು ಆರ್ಎಂಎಸ್ ಎಂದು ಕರೆಯುತ್ತಾರೆ. ರೈಲ್ವೆ ನಿಲ್ದಾಣದಿಂದ ದೂರವಿದ್ದರೆ ಅದು ಅಂಚೆ ವಿಂಗಡಣಾ ಕಚೇರಿ ಅಥವಾ ಸಾರ್ಟಿಂಗ್ ಆಫೀಸು.
ಸಾಮಾನ್ಯವಾಗಿ ಬಹುತೇಕ ಆರ್ಎಂಎಸ್ಗಳು ರಾತ್ರಿ ಹೊತ್ತೇ ಕಾರ್ಯ ನಿರ್ವಹಿಸಬೇಕಾಗುತ್ತದೆ. ಹಾಗಾಗಿ ಅದಕ್ಕೆ 'ರಾತ್ರೆ ಮಲಗದ ಸೇವೆ' ಎಂಬ ತಮಾಷೆಯ ಹೆಸರೂ ಅಂಟಿಕೊಂಡಿದೆ. ಇಲ್ಲಿ ಕೆಲಸ ಮಾಡುವವರಿಗೆ ವಿಂಗಡಣಾ ಸಹಾಯಕರು ಅಥವಾ ಸಾರ್ಟಿಂಗ್ ಅಸಿಸ್ಟೆಂಟ್ ಎಂದು ಕರೆಯುತ್ತಾರೆ. ಇವರಿಗೆ ಜಾಗತಿಕ ತಿಳುವಳಿಕೆ ಅಗತ್ಯ. ಊರ ಹೆಸರುಗಳು, ಪಿನ್ಕೋಡ್ ಜ್ಞಾನ ಬಹಳ ಅವಶ್ಯ. ಒಂದೂವರೆ ಶತಮಾನಗಳ ಭಾರತೀಯ ಅಂಚೆ ವಿಶ್ವದಾದ್ಯಂತ ದಕ್ಷತೆ ಮತ್ತು ಪ್ರಾಮಾಣಿಕತೆಗಳಿಗೆ ಖ್ಯಾತವಾದದ್ದು.
ಒಂದಿಷ್ಟು ಇತಿಹಾಸ
1854 ಅಕ್ಟೋಬರ್ ಒಂದರಂದು ಭಾರತದಲ್ಲಿ ಅಂಚೆ ವ್ಯವಸ್ಥೆ ಜಾರಿಗೆ ಬಂತು. ಅಂದಿನ ಗವರ್ನರ್ ಜನರಲ್ ಲಾರ್ಡ್ ಡಾಲ್ಹೌಸಿ ಖಾಸಗಿ ರೈಲ್ವೇ ಕಂಪನಿಗಳಿಗೆ ಮುಚ್ಚಿದ ಅಂಚೆ ಚೀಲಗಳನ್ನು ಒಂದು ನಿಲ್ದಾಣದಿಂದ ಮತ್ತೊಂದೆಡೆ ಗಾರ್ಡ್ ವ್ಯಾನಿನಲ್ಲಿ ಒಯ್ಯಲು ಆದೇಶ ನೀಡಿದರು. 9 ವರ್ಷ ನಂತರ ಈಸ್ಟ್ ಇಂಡಿಯಾ ಕಂಪನಿ ಅಲಹಾಬಾದ್- ಕಾನ್ಪುರಗಳ ನಡುವೆ ಚಲಿಸುವ ರೈಲಿನಲ್ಲಿ ಪತ್ರ ವಿಂಗಡಣೆಯ ವ್ಯವಸ್ಥೆಯನ್ನು ಮೊದಲ ಬಾರಿಗೆ ಜಾರಿಗೆ ತಂದಿತು. ಆ ರೈಲ್ವೆಯ ವಿಭಾಗವನ್ನು 'ಸೆಕ್ಷನ್' ಎಂದು ಹೆಸರಿಸಲಾಯಿತು. 1857ರಲ್ಲಿ ಈಸ್ಟ್ ಇಂಡಿಯಾ ರೈಲ್ವೇ ಕಂಪನಿ ಅನೇಕ 'ಸೆಕ್ಷನ್'ಗಳನ್ನು ಸ್ಥಾಪಿಸಿ ಅಂಚೆಯ ತ್ವರಿತ ಬಟವಾಡೆಗೆ ನಾಂದಿ ಹಾಡಿತು. 1877ರಲ್ಲಿ ಇದಕ್ಕೇ ರೈಲ್ವೆ ಮೇಲ್ ಸರ್ವೀಸ್ ಎಂಬ ನಾಮಕರಣ.
1955ರ ಫೆಬ್ರವರಿಯಲ್ಲಿ ಅಂದಿನ ಮೈಸೂರು ರಾಜ್ಯಕ್ಕೆ ಪ್ರತ್ಯೇಕ ಆರ್ಎಂಎಸ್ ವಿಭಾಗವಿತ್ತು. ಇದಕ್ಕೆ ಆರ್ಎಂಎಸ್ 'ಕ್ಯೂ' ವಿಭಾಗವೆಂದು ಕರೆಯಲಾಯಿತು. ಉತ್ತರ ಕರ್ನಾಟಕದ ಬಹುತೇಕ ಆಫೀಸುಗಳನ್ನು ಇದರ ವ್ಯಾಪ್ತಿಗೆ ಸೇರಿಸಲಾಯಿತು. 1961ರಲ್ಲಿ ಹೈದರಾಬಾದ್ ಪ್ರಾಂತ್ಯದ ಆಫೀಸುಗಳು ಕ್ಯೂ ವಿಭಾಗಕ್ಕೆ ಸೇರಿದವು. ಕ್ಯೂ ವಿಭಾಗದ ಕೇಂದ್ರ ಕಚೇರಿ ಬೆಂಗಳೂರಲ್ಲಿತ್ತು. ಕಚೇರಿಗಳು ಹೆಚ್ಚಾಗುತ್ತಿದ್ದಂತೆ ಆಡಳಿತಾತ್ಮಕ ದೃಷ್ಟಿಯಿಂದ ಹುಬ್ಬಳ್ಳಿ ಕೇಂದ್ರವನ್ನಾಗಿಸಿ 1967ರಲ್ಲಿ 'ಎಚ್.ಬಿ.' ಡಿವಿಜನ್ ಅಸ್ತಿತ್ವಕ್ಕೆ ಬಂತು. ಉತ್ತರ ಕರ್ನಾಟಕದ ಆಫೀಸುಗಳು ಇದರ ವ್ಯಾಪ್ತಿಗೆ ಬಂದವು. 1977ರ ಜೂನ್ನಲ್ಲಿ ಬೆಂಗಳೂರು ನಗರದ ನಾಲ್ಕು ಕಚೇರಿಗಳನ್ನು ಸೇರಿಸಿ ಬೆಂಗಳೂರು ಸಾರ್ಟಿಂಗ್ ಡಿವಿಜನ್ ಹುಟ್ಟು ಹಾಕಲಾಯಿತು. ರಾಜ್ಯದಲ್ಲೇ ಬಹು ದೊಡ್ಡ ಆಫೀಸು ಮತ್ತು ಅತಿ ಹೆಚ್ಚು ಅಂಚೆ ವಿಂಗಡಣೆ ಇಲ್ಲಿ ನಡೆಯುತ್ತದೆ.
1.1.963ರಂದು ಅಸ್ತಿತ್ವಕ್ಕೆ ಬಂದ ಎಂಎಂಎಸ್ (ಮೋಟಾರು ಅಂಚೆ ಸೇವೆ)ನ್ನು ಕ್ಯೂ ವಿಭಾಗದಿಂದ ಬೇರ್ಪಡಿಸಿ 1973 ಆಗಸ್ಟ್ ಒಂದರಂದು ಸ್ವತಂತ್ರ ವಿಭಾಗವನ್ನಾಗಿ ರೂಪಿಸಿ ಅದಕ್ಕೊಬ್ಬ ಮೇನೇಜರನ್ನು ನೇಮಿಸಲಾಯಿತು. ಕರ್ನಾಟಕದಲ್ಲಿ ಬೆಂಗಳೂರಿನಲ್ಲಿ ಮಾತ್ರ ಎಂಎಂಎಸ್ ಇದೆ.
ಚಲಿಸುವ ರೈಲಿನಲ್ಲಿ ಅಂಚೆ ವಿಂಗಡಣೆ ನಡೆಯುತ್ತಿದ್ದ ಕಾಲವೊಂದಿತ್ತು. 1982ರಲ್ಲಿ ದಿವಂಗತ ಸಿ.ಎಂ. ಸ್ಟೀಫನ್ ಸಂಪರ್ಕ ಖಾತೆಯ ಮಂತ್ರಿಯಾದಾಗ ರೈಲಿನಲ್ಲಿ ನಡೆಯುವ ವಿಂಗಡಣೆಯನ್ನು ಹಂತ ಹಂತವಾಗಿ ರದ್ದುಗೊಳಿಸಲು ಆಜ್ಞೆ ಹೊರಡಿಸಿದರು. ಆರ್ಎಂಎಸ್ ನೌಕರರ ಸಂಘಟನೆಗಳು ಇದನ್ನು ಪ್ರತಿಭಟಿಸಿದವು. ಅದಕ್ಕೆ ಪ್ರತಿ ಜಿಲ್ಲೆಯಲ್ಲೂ ಆರ್ಎಂಎಸ್ ಆಫೀಸು ತೆರೆಯುವುದಾಗಿ ಸರಕಾರ ಆಶ್ವಾಸನೆ ನೀಡಿತು. ಆದರೆ ಆ ಭರವಸೆ ಹುಸಿಯಾಯಿತು.
ಕಡಿಮೆ ದರದಲ್ಲಿ ಅತ್ಯುತ್ತಮ ಸೇವೆ ನೀಡುವುದರಲ್ಲಿ ಅಂಚೆ ಇಲಾಖೆ ಪ್ರಖ್ಯಾತ. ಆದರೆ ಸರಕಾರ ಇಲಾಖೆಯ ಅಗತ್ಯ ಸೇವೆಯಲ್ಲೂ ಲಾಭ ನಿರೀಕ್ಷಿಸತೊಡಗಿತು. ಅಂಚೆಯಲ್ಲುಂಟಾಗುವ ನಷ್ಟ ತಗ್ಗಿಸಲು, ಲಾಭದತ್ತ ಒಯ್ಯಲು ಇಲಾಖೆ ಹಲವಾರು ಯೋಜನೆಗಳನ್ನು ರೂಪಿಸತೊಡಗಿತು. ಕೊರಿಯರ್ ಸಂಸ್ಥೆಗಳ ಭರಾಟೆಯಲ್ಲಿ ಅಂಚೆ ಸಾಕಷ್ಟು ಸೊರಗಿದೆ. ಆದರೆ ಈ ಮಾತು ನಗರ ಪ್ರದೇಶಕ್ಕೆ ಮಾತ್ರ ಅನ್ವಯಿಸುತ್ತದೆ. ದೇಶದ ಗಡಿಯಲ್ಲಿರುವ ಯೋಧರನ್ನು, ಹಳ್ಳಿಯ ರೈತರನ್ನು ತಲುಪುವುದು ಅಂಚೆಯಣ್ಣನೇ. ರಾಜಕೀಯ ವ್ಯಕ್ತಿಗಳು, ಸರಕಾರಗಳು ಇದನ್ನು ಸಂಪೂರ್ಣ ಮರೆತಂತಿದೆ.
ಇತ್ತೀಚೆಗಿನ ಬೆಳವಣಿಗೆ
ಆಧುನೀಕರಣದಿಂದಾಗಿ ಕಂಪ್ಯೂಟರ್ ಎಂಬ ವಿಸ್ಮಯವೂ ಅಂಚೆ ಕಚೇರಿಯನ್ನು ಪ್ರವೇಶಿಸಿದೆ. ಇತ್ತೀಚೆಗೆ ಅಂಚೆ ಸಾಗಣೆ ಮತ್ತು ಬಟವಾಡೆ ತ್ವರಿತಗೊಳಿಸಲು ಇಲಾಖೆಯು ವಿದೇಶಿ ಮೂಲದ ಕಂಪನಿಯೊಂದರ ಸಲಹೆ ಪಡೆದಿದೆ. ನಮ್ಮ ದೇಶದ ಭೌಗೋಳಿಕ ಜ್ಞಾನವೇ ಇಲ್ಲದ ಜರ್ಮನಿ ಮೂಲದ ಮೆಕನ್ಸಿ ಎಂಬ ಕಂಪನಿ ಹಲವಾರು ಶಿಫಾರಸುಗಳನ್ನು ಮಾಡಿತು. ಇದಕ್ಕೆ ಇಲಾಖೆ ಎಂಎನ್ಒಪಿ (ಮೇಲ್ ನ್ಯಾಷನಲ್ ಆಫ್ಟಿಮಿಷಿನ್ ಪ್ರೊಜೆಕ್ಟ್) ಎಂದು ಹೆಸರಿಸಿತು. 15.2.2012ರಿಂದ ಅವುಗಳನ್ನು ಜಾರಿಗೆ ತಂದಿತು. ಆರ್ಎಂಎಸ್ಗಳನ್ನು ಎಲ್1 ಮತ್ತು ಎಲ್2 ಕಚೇರಿಗಳನ್ನಾಗಿ ನವೀಕರಿಸಲಾಯಿತು. ಕರ್ನಾಟಕದಲ್ಲಿರುವ 26 ಆರ್ಎಂಎಸ್ ಆಫೀಸುಗಳಲ್ಲಿ 4ನ್ನು ಎಲ್1 ಎಂದೂ ಉಳಿದವುಗಳನ್ನು ಎಲ್2 ಎಂದೂ ಗುರುತಿಸಲಾಯಿತು. ಎಲ್2 ಆಫೀಸುಗಳು ಜಿಲ್ಲೆಯ ಅಂಚೆಗಳನ್ನು ಮಾತ್ರ ವಿಂಗಡಿಸಬೇಕು. ಬೇರೆ ಜಿಲ್ಲೆಗಳ ಅಥವಾ ರಾಜ್ಯಗಳ ಅಂಚೆಗಳನ್ನು ಎಲ್1 ಆಫೀಸುಗಳಿಗೆ ಕಳುಹಿಸಬೇಕು.
ಇದನ್ನು ಉದಾಹರಣೆ ಮೂಲಕ ಸ್ಪಷ್ಟಪಡಿಸಿಕೊಳ್ಳಬಹುದು. ಕೊಡಗು ಜಿಲ್ಲೆಯ ಯಾವುದಾದರೊಂದು ಊರಿನಿಂದ ಸಂಪಾಜೆಗೆ ಒಂದು ಪತ್ರವನ್ನು ಕಳುಹಿಸಿದರೆ, ಅದರ ರವಾನೆಯ ರೀತಿ ಹೀಗಿರುತ್ತದೆ:
ಒಂದು ತಿಂಗಳ ಕಸ
ಆರ್ಎಂಎಸ್ಗಳಲ್ಲಿ ಗುಡಿಸಿದ ಕಸವನ್ನು ಕೂಡಲೇ ಬಿಸಾಡುವಂತಿಲ್ಲ. ಈ ಕಸದಲ್ಲಿ ಪತ್ರಗಳೇನಾದರೂ ಸೇರಿಕೊಂಡಿದೆಯೆ ಎಂದು ಪರಿಶೀಲಿಸುವುದು ಪಾಳಿಯ ಮುಖ್ಯಸ್ಥರ ಕರ್ತವ್ಯದ ಒಂದು ಭಾಗ. ಅವುಗಳನ್ನು ಬೇರ್ಪಡಿಸಿ ವಿಳಾಸದಾರನಿಗೆ ಕಳುಹಿಸಬೇಕು. ಗುಡಿಸಿದ ಕಸವನ್ನು ಒಂದು ತಿಂಗಳ ಕಾಲ ಸುರಕ್ಷಿತವಾಗಿಡಬೇಕೆಂಬುದು ಅಂಚೆ ಇಲಾಖೆಯ ಕಾನೂನಿನಲ್ಲಿ ಸೇರಿದೆ!
ಯೂಸ್ ಪಿನ್!
ವಿಂಗಡನಾಕಾರನ ಏಕತಾನತೆಯ ವೃತ್ತಿಯಲ್ಲಿ ಕೆಲವೊಮ್ಮೆ ಸ್ವಾರಸ್ಯಕರ ಪ್ರಸಂಗಗಳು ನಡೆಯುತ್ತವೆ. ಪೋಸ್ಟಲ್ ಇಂಡೆಕ್ಸ್ ನಂಬರ್ ಎನ್ನುವುದರ ಸಂಕ್ಷಿಪ್ತ ರೂಪ ಕಿಐಃ. ಇಲಾಖೆಯವರು ಅಂತರ್ದೇಶೀಯ ಪತ್ರ ಮತ್ತು ಲಕೋಟೆಗಳಲ್ಲಿ '್ಖಖಊ ಕಿಐಃ' ಎಂದು ಅಚ್ಚಿಸುತ್ತಿದ್ದರು. ಆದರೆ ಸಾರ್ವಜನಿಕರು ಇದನ್ನೇ ತಪ್ಪಾಗಿ ಅರ್ಥೈಸಿ ಪತ್ರದ ತುಂಬಾ ಗುಂಡು ಅಥವಾ ಪ್ಲಾಸ್ಟಿಕ್ ಪಿನ್ನುಗಳನ್ನು ಬಡಿದು ಅಂಚೆ ಡಬ್ಬಕ್ಕೆ ಹಾಕುತ್ತಿದ್ದರು. ಇದನ್ನು ವಿಂಗಡಿಸುವಾಗ ಸಿಬ್ಬಂದಿ ಕೈಗೆ ಪಿನ್ಗಳು ಚುಚ್ಚಿ ರಕ್ತ ಹರಿದಿರುವ ಪ್ರಸಂಗಗಳು ಇತ್ತು. ಆದರೆ ಕ್ರಮೇಣ ಇದು ಕಡಿಮೆಯಾಗುತ್ತಾ ಬಂತು.
ಆ ಅಂಚೆ ಕಚೇರಿಯಿಂದ ಮಡಿಕೇರಿ ಅಂಚೆ ವಿಂಗಡಣಾ ಕಚೇರಿಗೆ ಬರುತ್ತದೆ. ಮಡಿಕೇರಿಯಿಂದ ಸಂಪಾಜೆಗೆ ಇರುವ ಅಂತರ 30 ಕಿ.ಮೀ. ಆದರೆ ಮಡಿಕೇರಿ ಕಚೇರಿಯು ಅದರ ಎಲ್1 ಆಫೀಸು ಮೈಸೂರು ವಿಂಗಡಣಾ ಕಚೇರಿಗೆ ಸಂಪಾಜೆಯ ಅಂಚೆಯನ್ನು ಕಳುಹಿಸಬೇಕು. ಮೈಸೂರಿನಲ್ಲಿ ಆ ಪತ್ರ ಮಂಗಳೂರು ಆರ್ಎಂಎಸ್ನ ಚೀಲವನ್ನು ಸೇರಬೇಕು. ಮಂಗಳೂರಿನಿಂದ ನೇರವಾಗಿ ಸಂಪಾಜೆ ಅಂಚೆ ಕಚೇರಿಗೆ ರವಾನಿಸಲ್ಪಡಬೇಕು. ಆದರೆ ಮಡಿಕೇರಿಯಿಂದ ಮೈಸೂರಿಗೆ ಅಂಚೆ ಚೀಲ ಬರುವಾಗ ರಾತ್ರಿ 12 ಆಗಿರುತ್ತದೆ. ಅಷ್ಟರಲ್ಲಿ ಮೈಸೂರು- ಮಂಗಳೂರು ಅಂಚೆ ವಾಹನ ಹೊರಟುಹೋಗಿರುತ್ತದೆ. ಮಂಗಳೂರಿಗೆ ಹೋಗುವ ಅಂಚೆ ಚೀಲ ಬೆಂಗಳೂರು ಸಿಟಿ ಆರ್ಎಂಎಸ್ಗೆ ರವಾನೆಯಾಗುತ್ತದೆ. ಬೆಂಗಳೂರಿನಿಂದ ಮಂಗಳೂರಿಗೆ ಮರುದಿನ ರಾತ್ರೆ ಆ ಚೀಲ ಹೋಗುತ್ತದೆ. ಒಟ್ಟಿನಲ್ಲಿ, ಮರುದಿನ ತಲುಪಬೇಕಾದ ಪತ್ರ 5 ದಿನಗಳ ನಂತರ ತಲುಪುತ್ತದೆ. ಇದು ಹೊಸ ವ್ಯವಸ್ಥೆಯ ಪರಿಣಾಮ.
ಉಡುಪಿಯ ಶಿರೂರಿನಿಂದ ಉತ್ತರ ಕನ್ನಡದ ಭಟ್ಕಳಕ್ಕೆ ಪತ್ರದ ರವಾನೆ ಇಂತಿದೆ: ಶಿರೂರು- ಉಡುಪಿ ಅಂಚೆ ಕಚೇರಿ- ಮಂಗಳೂರು ಕಚೇರಿ- ಹುಬ್ಬಳ್ಳಿ ಕಚೇರಿ- ಕುಮಟಾ ಕಚೇರಿ- ಭಟ್ಕಳ. ಹಿಂದೆ ಉಡುಪಿ ಕಚೇರಿಯಿಂದ ಕುಮಟಾಗೆ ಚೀಲ ಕಟ್ಟಲಾಗುತ್ತಿತ್ತು. ಉಡುಪಿಯಿಂದ ಭಟ್ಕಳಕ್ಕೆ ಇರುವ ದೂರ ಕೇವಲ 20 ಕಿ.ಮೀ. ಆದರೆ ಬಟವಾಡೆಗೆ ಈಗ ತೆಗೆದುಕೊಳ್ಳುವ ಸಮಯ 5 ದಿನ.
ಇಂತಹ 'ಅಮೂಲ್ಯ' ಸಲಹೆ ಕೊಟ್ಟ ಮೆಕನ್ಸಿ ಕಂಪನಿಗೆ ಕೇಂದ್ರ ಸರಕಾರ ನೀಡಿದ ಮೊತ್ತ 20 ಕೋಟಿ ರುಪಾಯಿ! ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು ಈಗಿನ ಅಂಚೆ ವ್ಯವಸ್ಥೆಯ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಅಂಚೆ ಇಲಾಖೆಯ ಆಧುನೀಕರಣದ ಫಲ- ನಗರದವರು ಕೊರಿಯರ್ನತ್ತ ಮುಖ ಮಾಡಿದರೆ, ಹಳ್ಳಿಯವರು ಇನ್ನೂ ಅಂಚೆಯ ಹಿಂಸೆಯನ್ನೇ ಮೌನವಾಗಿ ಸಹಿಸಿಕೊಳ್ಳುತ್ತಿದ್ದಾರೆ.
ಆರ್ಎಂಎಸ್ನಲ್ಲಿ ರಾತ್ರಿ ಪಾಳಿ ಕೆಲಸ ಮಾಡಿ ಉನ್ನತ ಶಿಕ್ಷಣ ಪಡೆದವರು ಅನೇಕರು. ಕೆಲವರು ತಮ್ಮ ಇಷ್ಟದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರೂ ಇದ್ದಾರೆ. ಅವರ ಪೈಕಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ತಮಿಳು ಸಾಹಿತಿ ಅಖಿಲನ್, ಕರ್ನಾಟಕದ ಫಿಲಂ ಸೆನ್ಸಾರ್ ಬೋರ್ಡ್ ಆಫೀಸರಾಗಿದ್ದ ಎ. ಚಂದ್ರಶೇಖರ್, ಕವಿ ದೊಡ್ಡರಂಗೇಗೌಡ, ನಟ ಹಾಸಾಕೃ, ಸಾಹಿತ್ಯ ಕ್ಷೇತ್ರದಲ್ಲಿ ಖ್ಯಾತರಾದ ರಾಮಚಂದ್ರ ಬಾವೆ, ರೇಣುಕ, ರಂಗಭೂಮಿ ಮತ್ತು ಟಿ.ವಿ. ಧಾರಾವಾಹಿಯ ನಟ ಸುಂದರರಾಜ್, ವಿಮರ್ಶಕ ಡಾ.ಬಿ. ಗೋಪಾಲಕೃಷ್ಣ, ಅನುವಾದಕ, ಲೇಖಕ ಪ್ರೊ. ಬಿ. ಗಂಗಾಧರ ಮೂರ್ತಿ ಕೆಲವರು.
ರೈಸ್ಪಾಂಡ್ ಎಲ್ಲಿದೆ?
ವಿಳಾಸ ಬರೆಯುವಾಗ ಕೆಲವೊಮ್ಮೆ ಊರ ಹೆಸರನ್ನೇ ತಮ್ಮ ಮಾತೃ ಭಾಷೆಗೆ ಭಾಷಾಂತರಿಸಿ ವಿಂಗಡನಾಕಾರನಿಗೆ ಸವಾಲಾಗುವುದೂ ಉಂಟು. ತಮಿಳುನಾಡಿನ ಪತ್ರವೊಂದರ ವಿಳಾಸ ಹೀಗಿತ್ತು: ವೀರಸ್ವಾಮಿ, ಲಕ್ಷ್ಮೀಪುರಂ, ರೈಸ್ಪಾಂಡ್, ಕರ್ನಾಟಕ. ಹೆಸರು ಬಡಾವಣೆ ಎಲ್ಲವೂ ವಿಂಗಡನಾಕಾರನಿಗೆ ಬೇಕಾಗಿರಲಿಲ್ಲ. ಆದರೆ ಕರ್ನಾಟಕದಲ್ಲಿರುವ ರೈಸ್ಪಾಂಡ್ ಯಾವುದು? ಸಾಮಾನ್ಯವಾಗಿ ಆರ್ಎಂಎಸ್ನಲ್ಲಿ ಎಲ್ಲಾ ಭಾಷಿಗರು ಇರುತ್ತಾರೆ. ಈ ಪತ್ರ ತಮಿಳುನಾಡಿನಿಂದ ಬಂದದ್ದರಿಂದ ತಮಿಳು ಮಾತೃಭಾಷಿಗನಿಗೆ ಈ ಪತ್ರವನ್ನು ಒಪ್ಪಿಸಲಾಯಿತು. ಆತ ಬುದ್ಧಿವಂತ. ರೈಸ್ ಅಂದರೆ ತಮಿಳಿನ 'ಅರಸಿ' ಪಾಂಡ್ ಅಂದರೆ ಕನ್ನಡದ 'ಕೆರೆ'. 'ಅರಸೀಕೆರೆ'ಯಾಗಿ ಭಾಷಾಂತರಿಸಲಾಯಿತು. ಕೊನೆಗೂ ಆ ಪತ್ರ ವಿಳಾಸಕಾರನನ್ನು ತಲುಪಿತು. ವಿಳಾಸದಾರನ ಹೆಸರನ್ನು ಬರೆದು ಊರ ಹೆಸರು 'ಫಿಗರ್ಪೋರ್ಟ್' ಎಂದು ಬರೆಯಲಾಗಿತ್ತು. ಅಂಚೆ ವಿಂಗಡನಾ ಸಹಾಯಕನಿಗೆ ಅದೊಂದು ಕುತೂಹಲದ ಊರಾಗಿತ್ತು. ಫಿಗರ್ ಎಂದರೆ ಚಿತ್ರ, ಫೋರ್ಟ್ ಎನ್ನುವುದು ಕೋಟೆ. ಚಿತ್ರಕೋಟೆ ಎಂದು ಸೇರಿಸಿ ಓದಿದರೂ ಅಂಥದ್ದೊಂದು ಊರಿರುವುದು ಅನುಮಾನ. ಕೊನೆಗೆ ಕೋಟೆಗೆ ದುರ್ಗವೆಂದು ಹೇಳಿದರೆ ಚಿತ್ರದುರ್ಗವೆಂದು ಹೆಸರಾಗುತ್ತದೆ. ಅಂಚೆ ವಿಂಗಡನಾಕಾರರ ಬುದ್ಧಿಗೆ ಸವಾಲಾಗುವ ಇಂತಹ ಅನೇಕ ಪ್ರಸಂಗಗಳು ನಡೆಯುವುದುಂಟು.
ಪಾಟ್ನಾದ ಶ್ರೀರಂಗ
ವಿಳಾಸದಾರನ ಹೆಸರನ್ನು ಬರೆದು ಊರನ್ನು ಬರೆಯುವಾಗ ಆಗುವ ಎಡವಟ್ಟುಗಳಿಗೆ ಇಲ್ಲೊಂದು ತಾಜಾ ಉದಾಹರಣೆಯಿದೆ.
K. Shivappa
Ganjam
Sriranga
Patna
ಈ ಪತ್ರ ಮೈಸೂರಿನ ಅಂಚೆ ಡಬ್ಬದಲ್ಲಿ ಹಾಕಲಾಗಿತ್ತು. ಅಲ್ಲಿಂದ ಅದು ಬಿಹಾರದ ರಾಜಧಾನಿಯತ್ತ ಪ್ರಯಾಣ ಬೆಳೆಸಿತ್ತು. ವಿಂಗಡನೆಯ ತರಾತುರಿಯಲ್ಲಿ ಇದು ಪಾಟ್ನಾ ಸೇರಿತ್ತು. ಪುನಃ ಅದು ಮಂಡ್ಯ ಅಂಚೆ ವಿಂಗಡನಾ ಕಚೇರಿಗೆ ಬಂದು, Sriranga ವನ್ನು Patna ನೊಂದಿಗೆ ಸೇರಿಸಿ ಬರೆದು ಶ್ರೀರಂಗಪಟ್ಟಣ ಸೇರಿ ವಿಳಾಸದಾರನ ಕೈ ಸೇರಿತು.
ಗಣ್ಯರ ತಾಣ
ಮೈಸೂರು ಆರ್ಎಂಎಸ್ (ಆಗ ಮೈಸೂರು ರೈಲ್ವೆ ನಿಲ್ದಾಣದಲ್ಲಿತ್ತು) ಹಲವಾರು ಹಿರಿಯ ಸಾಹಿತಿಗಳ ಪತ್ರಕರ್ತರ ಪರಿಚಿತ ತಾಣ. ಇಂಗ್ಲಿಷ್ ಲೇಖಕ ಆರ್.ಕೆ. ನಾರಾಯಣ್, ಯು.ಆರ್. ಅನಂತಮೂರ್ತಿ, ನಟ ಕೆ.ಎಸ್. ಅಶ್ವಥ್, ಪತ್ರಕರ್ತ ರಾಜಶೇಖರ ಕೋಟೆ ಮುಂತಾದ ಖ್ಯಾತರು ತಮ್ಮ ಪತ್ರಗಳನ್ನು ಆರ್ಎಂಎಸ್ನ ಅಂಚೆ ಡಬ್ಬಿಯಲ್ಲಿಯೇ ಹಾಕುತ್ತಿದ್ದರು.
ದಕ್ಷತೆಯ ಪ್ರಶಂಸೆ
ಜಾವಾ ಮೋಟಾರ್ ಬೈಕ್ನ ಮಾಲೀಕರಾದ ಎಫ್.ಕೆ. ಇರಾನಿಯವರು ಹೇಳಿದ ಮಾತನ್ನು ಸ್ಮರಿಸುವುದು ಸೂಕ್ತ. ಅಮೆರಿಕಾದ ನ್ಯೂಯಾರ್ಕ್ನಿಂದ ಪತ್ರವೊಂದು ಐದು ದಿವಸಗಳಲ್ಲಿ ಅವರ ಕೈ ಸೇರಿತ್ತು. ಎಫ್.ಕೆ. ಇರಾನಿ, ಇಂಡಿಯಾ. ಇದು ಪತ್ರದ ಮೇಲಿನ ವಿಳಾಸ. ಆದರೆ ಆ ಪತ್ರ ಯಾವುದೇ ರೀತಿಯ ವಿಳಂಬವಿಲ್ಲದೆ ಐದನೆಯ ದಿನ ಅವರ ಕೈಸೇರಿತ್ತು. ಇದನ್ನು ಅವರು ಬಹುತೇಕ ಸಭೆಗಳಲ್ಲಿ ಉಲ್ಲೇಖಿಸಿ ಅಂಚೆ ಇಲಾಖೆಯ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಪ್ರಶಂಶಿಸುತ್ತಿದ್ದರು.
- ಕೆ.ಕೆ. ಗಂಗಾಧರನ್
9945976401
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.