ಚಿಲ್ಲಂ ಚಿಮ್ಮಿಸಿದ ಹೊಗೆ
ದೇಹವೂ ಆವಿಯಾಗುತ್ತದೆ. ಕಾಲಬೆರಳ ತುದಿಗೆ ಸೂತ್ರ ಕಟ್ಟಿ ಹಾರಿಸಿಬಿಟ್ಟರೆ ಗಾಳಿಪಟಕ್ಕಿಂತ ಹಗುರ. ಘಟಾವಕಾಶದಲ್ಲಿನ ಗಾಳಿಯನ್ನೆಲ್ಲ ಬರಿದು ಮಾಡಿಕೊಂಡು ಚಿಲ್ಲಂನಿಂದ ಗಾಂಜಾ ಎಳೆದಾಗ ಅಗ್ನಿ ಶ್ರೀಧರ್ ತೂಕ, ಹಗುರದಿಂದ ಹಗುರವನ್ನು ಭಾಗಿಸಿದಷ್ಟು ಮೊತ್ತ. ಧ್ಯಾನಿಯಾಗಲು ದರ್ಗಾಗಳಲ್ಲಿ ಫಕೀರರೊಂದಿಗೆ, ಏಕತಾನತೆಯಿಂದ ಕಳಚಿಕೊಳ್ಳಲು ಜೈಲಿನಲ್ಲಿ ಕೈದಿಗಳೊಂದಿಗೆ ಸೇದಿದ ಗಾಂಜಾಕ್ಕಿಂತ ತಪನ್ ಕೊಟ್ಟ ಈ ಗಾಂಜಾದ್ದು ಗಣಿಸಲಾರದ ಉನ್ಮಾದ. ತಪನ್ ಸೂಚನೆಯಂತೆ ಹೊಕ್ಕುಳದ ಎಡಭಾಗಕ್ಕೆ ದೃಷ್ಟಿ ನೆಟ್ಟರು ಅಗ್ನಿ. 'ಓಂ ತಾರೆ ತುತ್ತೂರೆ ತೂರೆ' ಎನ್ನುತ್ತಾ ಮನಸ್ಸನ್ನು ದೇಹದ ಕಡೆಗೆ ಹೊರಳಿಸಿದರು.
ಅಗ್ನಿ ಹೀಗೆ ಧ್ಯಾನಸ್ಥರಾಗಿದ್ದು ತಾರಾಪುರದಲ್ಲಿ. ಕೋಲ್ಕತಾದಿಂದ ನೂರೈವತ್ತು ಕಿ.ಮೀ. ದೂರ. ಆ ಪುರ ಊರಲ್ಲ. ಸ್ಮಶಾನ. ಕಾಲಿಟ್ಟಲ್ಲೆಲ್ಲ ಚಟ್ಟ. ಅಘೋರಿಗಳು, ಬಾಬಾಗಳು, ಸಾಧುಗಳು ಆ ಸಾವಿನೂರಿನ ಸರದಾರರು. ಹಣೆ ಮೇಲೆ ಕಾಸಿನಗಲ ಕುಂಕುಮ, ಆಪಾದಮಸ್ತಕ ಕಪ್ಪು ನಿಲುವಂಗಿ, ಗಾಂಜಾ ಉಕ್ಕೇರಿಸಿದ ರಕ್ತರಂಜಿತ ಕಣ್ಣುಗಳನ್ನು ನೋಡಲಿಕ್ಕಾಗದೆ ಅಲ್ಲಿ ಹೆಣಗಳೇ ಕಣ್ಣುಮುಚ್ಚಿರುತ್ತವೆ! ಚಿತೆಯೊಳಗೆ ಶವದ ಬುರುಡೆಯೊಡೆದಾಗ ಆಗುವ ಚಿಟಪಟ ಸದ್ದನ್ನು ಆ ಸಾಧಕರು ರೆಹಮಾನ್‌ನ ಮ್ಯೂಸಿಕಿನಂತೆ ಆಲಿಸಿ ನಲಿಯುತ್ತಾರೆ. ಅಲ್ಲಿ ಹೆಣ ಸುಟ್ಟರೆ ಆತ್ಮ ಎಲ್ಲೂ ಸ್ಟಾಪ್ ಕೊಡದೆ ನೇರ ಸ್ವರ್ಗ ಸೇರುತ್ತದಂತೆ. ಚಿತೆಗಳೆದುರೇ ಸಾಧಕರ ಧ್ಯಾನ. ಆ ಧ್ಯಾನದ ರುಚಿಗೆ ಅಗ್ನಿ ಧಾವಿಸಿದ್ದರು.
'ನೀನು ಮೊಟ್ಟಮೊದಲು ನೋಡಿದ ಹೆಣದ ಮುಖ ಯಾವುದು?' ಅಮವಾಸ್ಯೆಯ ಅಪರಾತ್ರಿಯಲ್ಲಿ, ಕಿರ್ರೆನ್ನುವ ಆ ಕಾಗೆಗಳ ಕಂಠಕರ್ಕಶದ ನಡುವೆ ಗಾಂಜಾ ಹೊಡೆದು ಹೆಣದಂತೆ ಜಡವಾಗಿದ್ದ ಅಗ್ನಿಗೆ, ತಪನ್ ಕೇಳಿದರು. ಅಗ್ನಿಯವರ ಕಿವಿಯೊಳಗೆ ಕೆಂಡವೇ ಬಿದ್ದಂತಾಯಿತು. ಜೀವನದಲ್ಲಿ ಇಲ್ಲಿಯ ತನಕ ಯಾರೂ ಈ ಥರ ಕೇಳಿಲ್ಲ. ನೆನಪಿನಿಂದ ಅಳಿಸಿಹೋದ ಹಲವು ಸಾವುಗಳಲ್ಲಿ ಮೊದಲನೆಯದು ಸ್ಮೃತಿಯ ದಾಖಲೆಯಲ್ಲಿಲ್ಲ. ಬಾಬಾ ಕೆದಕುತ್ತಾ ಹೋದರು. ಅಗ್ನಿ ನೆನಪಿನ ಕೂಪಕ್ಕಿಳಿದರು. ಯಾವುದೋ ಮಸುಕು ಮಸುಕು ಮುಖ. ಯಾವುದದು? ಆರೇಳು ವರ್ಷವಾಗಿದ್ದಾಗ ರಾಮನಗರದಲ್ಲಿ ಇವರ ಮನೆಯ ಹಿಂದಿನ ಬೀದಿಯಲ್ಲಿ ಮೂವತ್ತು ವರ್ಷದ ಮಹಿಳೆ ನೇಣು ಬಿಗಿದುಕೊಂಡು ಸತ್ತಿದ್ದಳು. ತಾಯಿಯ ಸೂಚನೆ ಮೀರಿಯೂ, ಕಿಟಕಿಯಿಂದ ಇಣುಕಿ ಆ ಶವವನ್ನು ಮುಕ್ಕಾಲು ಗಂಟೆ ನೋಡಿದ್ದರು ಅಗ್ನಿ. ದೊಡ್ಡ ತಿಲಕವಿಟ್ಟ ಹಣೆ, ಕಡುನೀಲಿ ಬಣ್ಣದ ಸೀರೆ, ಹೆಣದ ಬಾಯಿಗೆ ಹಾಕಿದ್ದ ಎಲೆಅಡಕೆಗಳೆಲ್ಲ ಕಣ್ಣಮುಂದೆ ಬಂದು ಮಲಗಿದವು. ಆ ಹೆಣದ ಮುಖವನ್ನೇ ನೋಡಿ, ಧ್ಯಾನಿಸಲು ಹೇಳಿದರು ತಪನ್. ಬಾಯೊಣಗುವಂತೆ ಸೇದಿದ್ದ ಗಾಂಜಾ, ಮನದ ತೆರೆಮೇಲೆ ಅನೂಹ್ಯ ಅವತಾರಗಳನ್ನು ತೋರಿಸತೊಡಗಿತು.
ಗಾಂಜಾ ಹೊಡೆದರೆ ದೇಹ ಬೇಕಾಬಿಟ್ಟಿ ಅಲೆಯದು. ಮನಸ್ಸು ಅಲೆದಾಡುತ್ತದೆ, ತನ್ನೊಳಗೆ! 20- 25 ವಸಂತಗಳ ಹಿಂದೆ ಶಿಂಶಾದಲ್ಲಿ ಶುರುವಾದ ಗಾಂಜಾ ಸ್ನೇಹವನ್ನು ಅಗ್ನಿ, ಆರೋಗ್ಯದ ದೃಷ್ಟಿಯಿಂದ ಕಳೆದವರ್ಷವಷ್ಟೇ ತೊರೆದರು. ಅವರ 'ಆಧುನಿಕ ಮಾಂತ್ರಿಕರ ಜಾಡಿನಲ್ಲಿ' ಗಾಂಜಾ ಘಮಗುಟ್ಟಿದೆ. ಅವರು ಮೋಜಿಗಾಗಿ ಗಾಂಜಾ ಸೇದುವುದಿಲ್ಲ. 'ಗುಡುಗುಡಿಯ ಸೇದಿ ನೋಡೋ, ಒಡಲೊಳಗಿನಾ ರೋಗ ತೊರೆದು ಈಡಾಡೋ...' ಸಂತ ಶಿಶುನಾಳರ ಗೀತೆಯೂ ಆ ಕ್ಷಣ ಕಾಡುವುದಿಲ್ಲ. ವಾರಕ್ಕೊಮ್ಮೆ ಸಿಹಿ ಏಕಾಂತ ಬೇಕಾಗುತ್ತದೆ. ಆಗ ಧ್ಯಾನಪ್ರಿಯ ಮನಸ್ಸು ಗುಡುಗುಡಿಯನ್ನು ಬಯಸುತ್ತಿತ್ತಷ್ಟೇ. ಗಾಂಜಾದ ಬಲೆಗೆ ಕೋಟಿ ಜನ ಬಿದ್ದರೆ, ಬಲಿಷ್ಠ ಮನಸ್ಸಿನ ಒಬ್ಬ ಅಗ್ನಿ ಶ್ರೀಧರ್ ಅಷ್ಟೇ ಹೊರಬರಲು ಸಾಧ್ಯ. 'ಅದು ಮೋಹದ, ಅಪಾಯದ ಬಲೆ. ಈಗಿನ ಹುಡುಗರು ಮೋಜಿಗಾಗಿ ಸೇವಿಸಿದರೆ, ಸಾವು ಅವರನ್ನು ಶೀಘ್ರ ಹುಡುಕಿಕೊಂಡು ಬರುತ್ತೆ. ಆರೋಗ್ಯ ಎಲ್ಲರಿಗೂ ಮುಖ್ಯ. ಆ ತಪ್ಪನ್ನು ಯಾರೂ ಮಾಡಬಾರದು' ಎಂಬ ಕಟ್ಟಾಜ್ಞೆ ಅಗ್ನಿಯವರದು.
ಒಬ್ಬರೇ ಚೆಸ್ ಆಡುವುದು ಅಗ್ನಿಯವರ ತೀರಾ ಅಸಹಜ ಸ್ವಭಾವ. ಗಂಟೆಗಟ್ಟಲೆ ಆಡುತ್ತಾರೆ. ಐದಾರು ಮನೆಗಳನ್ನು ನಡೆಸಿದ ಬಳಿಕ, ಆಟದೊಳಗೆ ಅಗ್ನಿ ಸಂಪೂರ್ಣ ಮುಳುಗುತ್ತಾರೆ. ಮೈಂಡನ್ನು ಮೈಂಡ್ ಜತೆ ಲಾಕ್ ಮಾಡುವ ತಂತ್ರ ಇದಂತೆ. ಚಂಚಲ ಮನಸನ್ನು ಈ ರೀತಿಯೂ ಹಿಡಿದಿಡಬಹುದಂತೆ. ಸಾಹಿತ್ಯ, ಹಾಡು ಕೇಳುವುದು... ಇವೆಲ್ಲಕ್ಕಿಂತ ಹೆಚ್ಚಾಗಿ ಅಗ್ನಿಯವರ ಏಕಾಂತವನ್ನು ಈ ಚೆಸ್ ಹಿಡಿದಿಟ್ಟಿದೆ.
ಅಗ್ನಿಯವರಿಗೆ ರೆಡ್‌ವೈನ್ ಬಲು ಇಷ್ಟ. ಆರೋಗ್ಯ ದೃಷ್ಟಿಯಿಂದ ರೂಢಿಸಿಕೊಂಡಿದ್ದಾರೆ. ದಿನಕ್ಕೊಂದೇ ಪೆಗ್ಗು. ಒಂದಕ್ಕಿಂತ ಹೆಚ್ಚು ತೆಗೆದುಕೊಂಡರೆ, ಹೆಲ್ತಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂಬುದನ್ನು ದೀಕ್ಷೆಯ ದಿನವೇ ಕಂಡುಕೊಂಡರು. ನಲ್ವತ್ತು ವರ್ಷದ ಹಿಂದೆ ವಿಸ್ಕಿ ಮೂಲಕ ಅವರ ಮದ್ಯಯಾಗ ಶುರುವಾಯಿತು. ಯುರೋಪಿಯನ್ನರು ವೈನಿನ ಆರೋಗ್ಯ ಪ್ರಯೋಜನವನ್ನು ಚೆನ್ನಾಗಿ ಬಲ್ಲರು. ಆದರೆ, ಭಾರತೀಯರಿಗೆ ಡ್ರಿಂಕ್ಸ್ ಡಯಟಿನ ಭಾಗ ಅಂತನ್ನಿಸುವುದೇ ಇಲ್ಲ ಎಂಬ ಬೇಜಾರೂ ಅಗ್ನಿಯವರಿಗಿದೆ.
ಸುಖಾಸುಮ್ಮನೆ ಇನ್ನೊಬ್ಬರು ಕೆಣಕಿಬಿಟ್ಟರೆ, ಇವರಿಗೆ ಸಹಿಸಿಕೊಳ್ಳಲಾಗದು. ಜಯರಾಜ್ ಒಮ್ಮೆ, 'ಇದೇನ್ ಗಂಡಸ್ತನರೀ ನಿಮ್ದು? ಡೈಲಿ ಒಂದ್ ಪೆಗ್ಗಂತೆ, ಅದೂ ಹೆಲ್ತ್ ಕಾರಣಕ್ಕಂತೆ. ಹೆಚ್ಚು ಕುಡಿದರೆ ನಿಮ್ಮ ಬಾಡಿ ಓಲಾಡುತ್ತೆ ಅನ್ನಿ' ಎಂದು ತಮಾಷೆ ಮಾಡಿದರು. ಮರುದಿನವೇ ಮದ್ಯ ಪಂದ್ಯ ನಡೆಯಿತು. ಅಗ್ನಿ ಕುಡಿದ ಪೆಗ್ಗುಗಳ ಲೆಕ್ಕವೆಣಿಸಿ ಜಯರಾಜ್, ಬಚ್ಚನ್, ಸ್ಯಾಮ್ಸನ್ ಸೋತಿದ್ದರು. ಅವರೆಲ್ಲರೂ ತೂರಾಡುತ್ತಿದ್ದರೆ, ಅಗ್ನಿ ನೈಂಟಿ ಡಿಗ್ರಿಯಲ್ಲೇ ನಡೆಯುತ್ತಿದ್ದರು!
ಮೂವತ್ತು ವರ್ಷದ ಹಿಂದೆ ಅಗ್ನಿ ಚೈನ್ ಸ್ಮೋಕರ್. ಅನಿರೀಕ್ಷಿತವಾಗಿ ಅಂಡರ್‌ವರ್ಲ್ಡ್‌ಗೆ ಕಾಲಿಟ್ಟಾಗ, ತಲೆಯಲ್ಲಿ ನಾನಾ ಆಲೋಚನೆಗಳು ಸುಳಿದಾಡಿದವು. ರಿಲ್ಯಾಕ್ಸ್ ಬೇಕೆನ್ನುವ ಕಾರಣಕ್ಕೆ ಪ್ಯಾಕುಗಟ್ಟಲೆ ಸಿಗರೇಟುಗಳಿಗೆ ಅಗ್ನಿಸ್ಪರ್ಶ ಮಾಡುತ್ತಿದ್ದರು. ಆದರೆ, ಒಮ್ಮೆ ತುಮಕೂರಿನ ನಿಜಗಲ್ ಬೆಟ್ಟವನ್ನೇರುವಾಗ ಎದೆ ಹಿಡಿದುಕೊಂಡಿತು. ಇದು ಸಿಗರೇಟಿನ ಎಫೆಕ್ಟೆಂದು ಗೊತ್ತಾದ ಕೂಡಲೇ, ಆ ಚಟವನ್ನು ಅಲ್ಲಿಗೆ ಬಿಟ್ಟರು. ಅಗ್ನಿಯವರ ಬದುಕು- ಬರಹ ಗಮನಿಸಿದಾಗ, ಪಾಶ್ಚಾತ್ಯ ಲೇಖಕನೊಬ್ಬ ದಾರಿ ತಪ್ಪಿ ಕನ್ನಡಕ್ಕೆ ಬಂದಿದ್ದಾನೆ ಅಂತನ್ನಿಸುತ್ತದೆ!
- ಕೀರ್ತಿ
kolgarkeerthi@gmail.com