ಕತೆಗಾಲ
ಜೋರೆಂದು ಸುರಿವ ಮಳೆ. ಮನೆಯ ಒಳಗೂ, ಬಯಲಲ್ಲೂ, ಕೊಡೆಯ ಅಡಿಯಲ್ಲೂ, ಹನಿಗಳ ತಟಪಟದ ನಡುವೆಯೂ ಒಂದು ಏಕಾಂತವಿದೆ. ಈ ಏಕಾಂತವನ್ನು ತುಂಬಲು ನಮ್ಮ ಕತೆಗಳಿವೆ. ಈ ಪುಟ್ಟ ಪುಟ್ಟ ಸೊಗಸಾದ ಕತೆಗಳು ನಿಮ್ಮ ಮಳೆಗಾಲದ ಮಧ್ಯಾಹ್ನಕ್ಕೆ ಅಕ್ಕರೆಯ ಆವರಣ ನೀಡಬಲ್ಲವು.
ಹಕ್ಕಿ ಹಾಡು
ಚಳಿಯ ಸೂಜಿ ಮೊನೆಗಳು ಸಾವಿರ ರಂಧ್ರಗಳ ಮೂಲಕ ದೇಹದೊಳಕ್ಕೆ ಇಳಿದು ಏರುವ ಒಂದು ಮಂಜಿನ ಮುಂಜಾವ, ಹೊರಗೊಂದು ಹಕ್ಕಿ ಹಾಡುತ್ತಿದೆ.
ಕತ್ತಿನತನಕ ಹೊದ್ದುಕೊಂಡು ಕಿಟಕಿಯ ಕದ ತೆರೆದು ನೋಡಿದೆ, ಹೂಗಳಿಂದಾವೃತ ಒಂದು ಮರದ ತುತ್ತ ತುದಿಯ ಕೊಂಬೆಯಲ್ಲಿ ಕುಳಿತು ಒಂದು ಹಕ್ಕಿ ಹಾಡುತ್ತಿದೆ. ಉದಯರಾಗ.
ಆತ ಕೇಳಿದ, ಈ ಮಂಜಿನಕಾಲದಲ್ಲಿ ನನ್ನ ಕನಸುಗಳನ್ನು ಹರಿದು ಚಿಂದಿ ಮಾಡಿ ನನ್ನನ್ನು ಎಬ್ಬಿಸಿದ್ದೇಕೆ?
ಆತ ದುಃಖಿಸಿದ
'ನಿನಗೆ ಬೇಕಾದರೆ ನನ್ನನ್ನು ನಿದ್ರೆ ಮಾಡಿಸಲು ಜೋಗುಳ ಹಾಡಿ ಮಲಗಿಸ ಬಾರದೇ? ಕೆಂಪಗೆ ಉಬ್ಬಿಕೊಂಡ ನಿನ್ನ ಈ ಹಾಡಿನಲ್ಲಿ ನೀನಿದ್ದೀ ಎಂದೂ ಅದು ನನ್ನನ್ನು ಸಟ್ಟುಬಿಟ್ಟೀತೆಂದೂ ನಿನಗೇಕೆ ಗೊತ್ತಾಗುವುದಿಲ್ಲ ?'
ಹಕ್ಕಿ ರೆಕ್ಕೆ ಬಡಿದು ಆತನನ್ನು ಹಾಸ್ಯ ಮಾಡಿತು.
'ಆಕಾಶವೇ ನಿನ್ನ ಸೀಮೆಯೆಂಬ ನಿನ್ನ ಅಹಂಕಾರವನ್ನು ನಾನಿಂದು ಅಡಗಿಸಿಯೇನು'
ಆತ ಕೋವಿ ತೆಗೆದು ಹೊಡೆದ. ತೂತು ಬಿದ್ದ ಹಕ್ಕಿ ಮರಿ ಕೆಳಗೆ ಬಿತ್ತು. ಅಂದು ರಾತ್ರಿ ಆತನ ಮನಸ್ಸಿನಲ್ಲಿ ನೋವಿನ ಒಂದು ಮರಿ ಹಕ್ಕಿಯೂ ರೆಕ್ಕೆ ಬಡಿಯಲಿಲ್ಲ, ಆತ ಸುಖವಾಗಿ ನಿದ್ರಿಸಿದ.
ಮಾರನೇ ದಿನ ಆತನ ಅಂಗಳದ ಹೂವಿನ ಮರದ ಮೇಲೆ ಕುಳಿತು ಸಾವಿರ ಹಕ್ಕಿಗಳು ಹಾಡುತ್ತಿರುವುದು ಅವನ ಕಿವಿಗೆ ಬಿತ್ತು.
ಮೋಡಗಳಿಂದ ಚಾಚಿ ಬರುವ ಕೈಗಳು
ಗೋಡೆಯ ಮೇಲಿಂದ ತೂಗ ಹಾಕಿದ ಚಿತ್ರವನ್ನೇ ಅವಳು ಬಹಳ ಹೊತ್ತಿನಿಂದ ನೋಡುತ್ತಿದ್ದಳು.
ಮೋಡಗಳಿಂದ ಹೊರ ಚಾಚಿದ ಮೃತ್ಯುವಿನ ಕೈಗಳನ್ನು ಹಿಡಿದೆಳೆಯುವಾಗಲೂ ಹಾಸಿಗೆಗೆ ಹಿಂದಿರುಗಿ ಬರಲು ಆಸೆ ಪಡುವ ಒಬ್ಬ ಸ್ತ್ರೀ ಅವಳ ಕೈಗಳು ಮೃತ್ಯುವಿನ ಕೈಗಳಲ್ಲಿ - ಕುತೂಹಲದಿಂದ ಕತ್ತು ಚಾಚಿ ಹಾಸಿಗೆಯ ಮೇಲೆ ನೀಲ ಮೇಘಗಳಾಚೆ ಬೂದು ಬಣ್ಣ.
ಮತ್ತೆ ಕಪ್ಪು -
ಅದೇ ಸ್ತ್ರೀ ಎಂದು ಅವಳಿಗೆ ತೋರಿತು. ಮೇಘಗಳಿಂದ ಹೊರ ಚಾಚಿದ ಕೈಗಳ ತಂಪು ಸ್ಪರ್ಶಕ್ಕಾಗಿ ಅವಳ ಒಳ ಮನಸ್ಸು ಹಾತೊರೆಯಿತು. ಕಿಟಕಿಯ ಸೆರೆಯ ಮೂಲಕ ಶೀತ ಸೋಸಿ ಬರುತ್ತಿದೆ -
ಅವಳು ಕಿಟಕಿಯ ಕದಗಳನ್ನು ತೆರೆದಳು
ದೂರ ಎಲ್ಲೋ ಮಳೆ ಸುರಿಯುತ್ತಿದೆಯೆಂದು ಅವಳಿಗನ್ನಿಸಿತು, ಇದ್ದಕ್ಕಿದ್ದಂತೆ ಸಿಡಿಲೊಡೆದ ಸದ್ದು - ಅವಳು ಬೆಚ್ಚಿದಳು, ಈಗ ಅವಳಲ್ಲೊಂದು ನೆನಪಿನ ಮಿಂಚಿನ ಝಳಕು.
ಒಂದು ಬಿಡುವಿನ ಸಂಜೆ - ಪ್ರೀತಿಯ ಮಾತುಗಳನ್ನಾಡುತ್ತಾ ಅವರು ಹೊರಜಗಲಿಯಲ್ಲಿ ಕುಳಿತರು.
ಗಟ್ಟಿಯಾದ ಧ್ವನಿಯಲ್ಲಿ ಆತ ಯಾವುದೇ ಕವನ ಗುನುಗಿದ :
'ಯುಗಗಳಿಂದ, ಮನ್ವಂತರಗಳಿಂದ, ಲಕ್ಷೋಪಲಕ್ಷ ಹೃದಯಗಳಿಂದ ಹೊರಡುವ ಅಳು - ನಿಟ್ಟುಸಿರುಗಳು ಮೇಲೇರಿ ಮೋಡಗಳಾಗಿ ಸೇರಿ ನಿಂತಿರಬೇಕು'. ಆತ ತನ್ನನ್ನೇ ಮರೆತು ಕವಿತೆ ಗುನುಗುತ್ತಿದ್ದಂತೆ ಹೊರಗೆ ಗಾಳಿಯ ಸದ್ದು, ಒಂದು ದೊಡ್ಡ ಮಳೆ ಸುರಿಯಲು ಹೊರಟಿದೆ. ಗಾಳಿ ಜೋರಾಗಿ ಬೀಸುತ್ತಿದೆ. ಭಯ ಹುಟ್ಟಿಸುವ ರೀತಿಯಲ್ಲಿ ಮರಗಳು ಓಲಾಡುತ್ತಿವೆ.
'ನಾವು ಒಳಗೆ ಹೋಗೋಣ' ಅವಳೆಂದಳು.
ಆತ ನಕ್ಕ, ಪುನಃ ಮೆಲ್ಲನೆ ಏನೋ ಗುನುಗಿದ
'ನೆನಪು ನಿನ್ನ ಚಿತ್ರವನ್ನಲ್ಲದೆ ಬೇರೇನನ್ನೂ ತರುತ್ತಿಲ್ಲ'
ನಿನ್ನ ಚುಂಬನವೂ ಮಳೆಯೂ ಮಾತ್ರ ಇಲ್ಲಿ ಸುರಿಯುತ್ತಿರುವುದು'
ಮಳೆ ಯಾವಾಗಲೂ ಅವನ ದೌರ್ಬಲ್ಯವಾಗಿತ್ತು, ಮಳೆ ಸುರಿಯುತ್ತಿರುವುದನ್ನು ನೋಡಿ ಮೈಮರೆಯುವುದನ್ನು ಕಂಡು ಎಷ್ಟೋ ಬಾರಿ ತುಂಬ ಅಚ್ಚರಿಯೆನಿಸಿದ್ದಿದೆ.
ಒಳಗೆ ಹೋಗೋಣವೆಂದು ಪುನಃ ಒತ್ತಾಯಿಸ ಹೊರಟಿದ್ದಳು. ಫಕ್ಕನೆ ಮೋಡದೊಳಗಿಂದ ಹೊರಟ ಬೆಂಕಿಯ ಜ್ವಾಲೆಗಳ ಕೈಗಳು ಆತನನ್ನು ನೇವರಿಸಿದವು.
ಪ್ರಜ್ಞೆ ಬಂದಾಗ ಅವಳು ಆಸ್ಪತ್ರೆಯ ಬಿಳಿ ಹೊದೆಸಿದ ಹಾಸಿಗೆಯಲ್ಲಿದ್ದಳು. ಮತ್ತೆ ಮನಸ್ಸಿನ ತುಂಬ ಉರಿದು ಬೂದಿಯಾಗಿ ಬಿದ್ದ ನಕ್ಷತ್ರದ ನೆನಪಿನಿಂದ ಹಿಂದ ಹಾಕಿದ ನೋವಿನ ದಿನಗಳು - ಗಾಳಿಗೆ ಕಿಟಕಿಯ ಕದಗಳು ಜೋರಾಗಿ ಅಪ್ಪಳಿಸಿದಾಗ ಅವಳು ಬೆಚ್ಚಿಬಿದ್ದಳು.
ದೇವರೇ, ಇದೋ ಮತ್ತೊಂದು ಮಳೆಗಾಲ, ಹೊರಗೆ ಮೆಲುವಾಗಿ ಗಾಳಿ ಬೀಸುತ್ತಿದ್ದೆ.
ಅವಳು ಬಾಗಿಲು ತೆರೆದು ಹೊರ ಜಗಲಿಗೆ ಬಂದಳು, ಆಗಲೇ ಅವಳೊಳಗೆ ಯಾತನೆಯ ಮಳೆ ಜಡಿಗುಟ್ಟಿ ಸುರಿಯಲಾರಂಭಿಸಿತ್ತು.
ಅವಳು ಅಂಗಳಕ್ಕೆ ಬಂದಳು ಮೋಡಗಳಿಂದ ಹೊರ ಚಾಚಿದ ಕೈಗಳಿಗಾಗಿ ಕಾದು ನಿಂತಳು.
ಕೋಳಿ
ಆತ ಶಯ್ಯಾಗೃಹದಲ್ಲಿದ್ದ
ಸೂರ್ಯನ ಬೆಳಕು ಒಳಗೆ ಪ್ರವೇಶಿಸಲು ಅನುಮಾನಿಸುತ್ತಿತ್ತು, ಪೇಪರಿನವನ ದನಿ ಕೇಳಿ ಹೆಂಡತಿ ಹೊರ ಬಂದಳು. ಪೇಪರ್ ತೆಗೆದುಕೊಂಡು ಒಳ ಬಂದಳು. ಅಡುಗೆ ಮನೆಯಲ್ಲಿ ಉಪಯೋಗಿಸುವ ಕೈ ಬಟ್ಟೆಯಿಂದ ಆಕೆ ಪೇಪರನ್ನು ಹಿಡಿದುಕೊಂಡಿದ್ದಳು.
ಪೇಪರಿನಿಂದ ಒಂದೇ ಸಮನೆ ರಕ್ತ ಸುರಿಯುತ್ತಿದೆ. ಪೇಪರ್ ಹತ್ತಿರ ಬರುತ್ತಿದ್ದಂತೆ ಹೆಣದ ವಾಸನೆ ಅಸಹನೀಯವಾಗುತ್ತಿದೆ.
ಆತ ಕೈ ಬಟ್ಟೆ ಹಿಡಿದು ಪೇಪರ್ ತೆಗೆದುಕೊಂಡು ಕಿಟಕಿ ತೆರೆದು ಅದನ್ನು ಹೊರಗೆಸೆದ. ತೆರೆದ ಕಿಟಕಿಯಿಂದ ನೆರೆಮನೆಯವನ ಆಕ್ರಂದನ ಕೇಳಿಸಿತು. ಆಕ್ರಂದನ ಕೇಳಿಸದಿರಲೆಂದು ಆತ ಕಿಟಕಿಯನ್ನು ಭದ್ರವಾಗಿ ಮುಚ್ಚಿದ. ಇದ್ದಕ್ಕಿದ್ದಂತೆ ಪುಟ್ಟ ಮಗು ಎಚ್ಚರಗೊಂಡು ನಿಲ್ಲಿಸದೇ ಅಳತೊಡಗಿತು. ಆತ ತಾನು ವಿದೇಶದಿಂದ ತಂದಿದ್ದ ಮೊಲದ ಮರಿಯ ಗೊಂಬೆಯನ್ನು ಮಗುವಿಗೆ ಕೊಟ್ಟ. ಮಗು ಗೊಂಬೆಯನ್ನು ದೂರ ಬಿಸುಟು ಮತ್ತೆ ಅತ್ತಿತು. ಹೆಂಡತಿ ನಸುನಕ್ಕು ಅತನ ಪಿಸ್ತೂಲು ತೆಗೆದು ಮಗುವಿಗೆ ಕೊಟ್ಟಳು. ಮಗು ಅಳು ನಿಲ್ಲಿಸಿತು. ನಗುತ್ತ ಖುಷಿಯಿಂದ ಆಡಿತು.
ಆತನಿಗೆ ತುಂಬಾ ಬಾಯಾರಿಕೆಯೆನ್ನಿಸಿತು. ಅದು ಅರ್ಥವಾದಂತೆ ಆತನ ಹೆಂಡತಿ ಒಂದು ಲೋಟ ತುಂಬ ಕಣ್ಣೀರನ್ನು ಆತನೆಡೆಗೆ ಚಾಚಿದಳು, 'ಈ ಸೆಕೆಗಾಲದಲ್ಲಿ ಬೆವರಿನ ಮೂಲಕ ಉಪ್ಪು ಹೋಗುವುದರಿಂದ ಇದು ಒಳ್ಳೆಯದು'
ಹೆಂಡತಿಯ ವ್ಯಾವಹಾರಿಕ ಚಾತುರ್ಯವನ್ನೆಣಿಸಿ ಆತನಿಗೆ ಅಭಿಮಾನವೆನಿಸಿತು. ಪೇಪರು ಒಳಗೆ ತಂದ ನಂತರ ಹೆಂಡತಿ ಬಾಗಿಲನ್ನು ಭದ್ರವಾಗಿ ಮುಚ್ಚಿದಳು. ಹೊರಗೆ ಏನೋ ನೋಡಿದ. ಬಾಗಿಲೆಡೆಯಿಂದ ಒಂದು ಕತ್ತಿಯಲಗಿನ ಹೊಳಪು ಆತನ ಕಣ್ಣಿಗೆ ಹೊಡೆಯಿತು. ಆತ ತಿರುಗಿ ಶಯ್ಯಾಗೃಹದೊಳ ಹೊಕ್ಕು ಕುಳಿತ.
'ಇವತ್ತು ಮಧ್ಯಾಹ್ನದ ಊಟಕ್ಕೆ ಏನು ಮಾಡಲಿ ?'
ಆತನಿಗೆ ಸಿಟ್ಟು ಬಂದಿತು. ದಪ್ಪ ಗೋಡೆಯ ಮತ್ತು ಭದ್ರವಾದ ಬಾಗಿಲುಗಳ ಸುರಕ್ಷಿತತ್ವದಲ್ಲಿ ಕುಳಿತು ಆತನೆಂದ;
'ಕೇಳಲಿಕ್ಕೇನಿದೆಯಪ್ಪ? ಸಾಮಾನ್ಯವಾಗಿ ಮಾಡುವುದೇ ಸಾಕಲ್ಲ?'
ಆತನಿಗೆ ದಿನವೂ ಬೇಕಾಗುವುದು ಒಂದು ಕೋಳಿ. ಹುರಿದ ಒಂದು ಇಡೀ ಕೋಳಿ.
ಹೆಂಡತಿ ಒಳ ನಡೆದಳು. ಆಕೆ ಕೋಳಿಯ ಗೂಡು ತೆರೆದ ಶಬ್ದ ಶಯ್ಯಾಗೃಹದಲ್ಲಿ ಕುಳಿತ ಆತನಿಗೆ ಕೇಳಿಸಿತು.
ನಂತರ ಮಾಡಲು ಕೆಲಸವೇನೂ ಇಲ್ಲದ್ದರಿಂದ ಆತ ಶಯ್ಯಾಗೃಹದ ಬಾಗಿಲು ಹಾಕಿ ನಿದ್ದೆ ಹೋದ. ನಿದ್ದೆಯಲ್ಲಿ ಆತನೊಳಗೆ ಮಲಗಿ ಕೋಳಿಗಳು ಹೊಡೆದಾಡಿದವು.
ಆತ ಎಷ್ಟು ಹೊತ್ತು ನಿದ್ರೆ ಮಾಡಿದನೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಯಾರೋ ಬಾಗಿಲು ಬಡಿದಂತನ್ನಿಸಿತು. ಆತ ಕುತೂಹಲದಿಂದ ಎದ್ದು ಹೋಗಿ ಬಾಗಿಲು ತೆರೆದ.
ಆತ ಒಮ್ಮೆ ನೋಡಿದ್ದಷ್ಟೇ, ಒಂದು ತಟ್ಟೆಯಲ್ಲಿ ಇಡಿಯಾಗಿ ಬೇಯಿಸಿದ ಆತನ ಹೆಂಡತಿಯನ್ನು ಹಾಕಿಕೊಂಡು ತುಂಬಾ ಕೋಳಿಗಳು ಆತನ ಶಯ್ಯಾಗೃಹದೊಳಗೆ ನುಗ್ಗಿದವು.
ಸುತ್ತಲೂ ನಿಂತು ಕೋಳಿಗಳು ಜೋರಾಗಿ ಕಿರಿಚಿದವು 'ಕ್ಕೋ ಕ್ಕೋ ಕ್ಕೋ ಕೊಕ್ಕರೇ ಕೋ'
ಬುದ್ಧ
ಸಿದ್ಧಾರ್ಥ ಅರಮನೆ ಬಿಟ್ಟು ಹೊರಟಿದ್ದಾನೆ. ನಮಗೆ ತಿಳಿದಿರುವಂತೆ ಅರಳಿ ಮರದ ಎಲೆಗಳು ಕೂಡಾ ನಿದ್ರಿಸುವ ಬ್ರಾಹ್ಮಿ ಮುಹೂರ್ತವದು...
ಯಶೋಧರೆಯನ್ನು ಎಬ್ಬಿಸದೇ, ರಾಹುಲನಿಗೆ ತಿಳಿಯದಂತೆ ರಾಜಕುಮಾರನು ಅರಮನೆಯ ಮೆಟ್ಟಿಲುಗಳನ್ನಿಳಿಯುತ್ತಿದ್ದಾನೆ.
ಫಕ್ಕನೆ ಆತನ ಕಣ್ಣುಗಳು ತೀಕ್ಷ್ಣವಾಗಿ ಹೊಳೆಯುತ್ತವೆ.
ದೂರದರ್ಶನ, ಏಷ್ಯಾ ನೆಟ್, ಸನ್ ಟಿ.ವಿ...
ವೀಡಿಯೋ ಕ್ಯಾಮೆರಾಗಳ ಪ್ರಳಯ.
'ದೇವರೇ! ರಾಜಕುಮಾರ ಮೊದಲ ಬಾರಿಗೆ ದೇವರನ್ನು ಕರೆದುಬಿಟ್ಟ'
ಕ್ಯಾಮೆರಾದವರ ನೂಕು ನುಗ್ಗಲು.
ಒಳಗೆ ಬಂದ ಯಾರೋ ಒಬ್ಬ ಪತ್ರಕರ್ತ ಯಶೋಧರೆಯನ್ನು ಕರೆದೆಬ್ಬಿಸುತ್ತಿದ್ದಾನೆ.
ಯಶೋಧರೆಯ ಹಲವು ಭಂಗಿಗಳಲ್ಲಿ ತೆಗೆದ ಭಾವಚಿತ್ರಗಳು. ಯಶೋಧರೆಯೊಂದಿಗೆ ಮುಖಾಮುಖಿ.
'ಬೇಡಿ, ಬೇಡಿ' ಎಂದು ಚೀರಿ ಹೇಳುತ್ತಿರುವ ರಾಹುಲನ ಬಣ್ಣದ ಭಾವ ಚಿತ್ರ.
ಫಕ್ಕನೆ ಸಿದ್ಧಾರ್ಥ ಕತ್ತಲಲ್ಲಿ ಮಾಯವಾಗುತ್ತಾನೆ.
ಈಗ ಕ್ಯಾಮೆರಾದವರು ಮತ್ತು ಪತ್ರಕರ್ತರು ಯಾವುದೋ ಅರಳಿ ಮರವನ್ನು ಹುಡುಕುತ್ತ ಓಡುತ್ತಿದ್ದಾರೆ. ಅರಳಿಯ ನೆರಳನ್ನರಸುತ್ತ ಸಿದ್ಧಾರ್ಥ ನಡೆದು ಬರುವ ಚಿತ್ರಗಳು. ರಾಜಕುಮಾರನ ಆಗಿನ ಮುಖಭಾವಗಳು
ದೂರದಿಂದ ಒಂದೆಡೆ ಕುಳಿತು ಮಾರ್ಡೋಕ್ ನಗುತ್ತಾನೆ.
ಬೆಕ್ಕಿನ ಕಣ್ಣುಗಳ ಒಬ್ಬ ಬಿಳಿಯ ಹೇಳಿದ
'ಬುದ್ಧನನ್ನು ಮಾಡ್ತಾ ಇರೋದು ನಾನು'
ಬುದ್ಧಿ ಜೀವಿ
ಮನೆಯ ಹೊರ ಜಗಲಿಯಲ್ಲಿ ಒಂದು ಕುರ್ಚಿಯಲ್ಲಿ ನೆಟ್ಟಗೆ ಕುಳಿತು ಯಾವುದೋ ವಿದೇಶಿ ಭಾಷೆಯ ಒಂದು ಕವಿತೆಯನ್ನು ಭಾಷಾಂತರ ಮಾಡುತ್ತಿದ್ದ ಸಾಹಿತಿ.
ಫಕ್ಕನೆ ಅಂಗಳದಿಂದ ಏನೋ ಅಲುಗಾಟದ ಸದ್ದು ಕೇಳಿ ತಿರುಗಿ ನೋಡಿದರೆ, ಒಬ್ಬ ಭಿಕ್ಷುಕ! ಮುಖದಲ್ಲಿ ದೈನ್ಯತೆ, ಹೆಗಲಲ್ಲಿ ಜೋಳಿಗೆ.
'ಹೂಂ?'
'ಊಟ ಮಾಡಿ ಮೂರು ದಿನ ಆಯ್ತು'
ಕೂಡಲೇ ಸಾಹಿತಿ ಭಿಕ್ಷುಕನಿಗೆ ಪಾಬ್ಲೊನೆರೂಡ ಮತ್ತು ಬ್ರೆಹ್ಟ್ನ ಒಂದೊಂದು ಕವನ ಸಂಕಲನಗಳನ್ನು ನೀಡಿದ.
ಪುಸ್ತಕಗಳ ರಕ್ಷಾಪುಟದಲ್ಲಿ ಹೀಗೆ ಮುದ್ರಿಸಲಾಗಿತ್ತು : ಹಸಿದ ಮನುಷ್ಯನೇ, ಪುಸ್ತಕ ಕೈಯಲ್ಲೆತ್ತಿಕೋ. ಅದೊಂದು ಆಯುಧ.
ಭಿಕ್ಷುಕ ಸೀದಾ ರದ್ದಿ ಕಾಗದ ಮಾರುವ ಅಂಗಡಿಗೆ ಹೋದ.
ಪುಸ್ತಕವನ್ನು ತೂಗಿ ಭಾರ ನೋಡಿ ಮಾರಿದ. ಮರಗೆಣಸು ಮತ್ತು ಚಹ ಕೊಂಡು ಹಸಿವು ಹಿಂಗಿಸಿಕೊಂಡ.
ಪ್ರಕಾಶ
ಆಕಾಶದತ್ತ ಬೆರಳು ತೋರಿಸಿ ಅವನೆಂದ
'ಆ ನಕ್ಷತ್ರ ನೋಡು, ನಮ್ಮತ್ತ ನೋಡಿ ಕಣ್ಣು ಮಿಟುಕಿಸುವ ಆ ನಕ್ಷತ್ರ ಹೊಳೆಯತೊಡಗಿ ವರ್ಷಗಳೆಷ್ಟಾಗಿರಬಹುದು ? ಅದರ ಪ್ರಕಾಶ ಭೂಮಿಗೆ ತಲುಪಲು ಎಷ್ಟೋ ವರ್ಷಗಳು!'
'ಈಗ ಇಲ್ಲದ ಒಂದು ನಕ್ಷತ್ರವನ್ನು ನಾವು ನೋಡುತ್ತಿದ್ದೇವೆ' ಆತನೆಂದ
ಹತ್ತಿರ ಕುಳಿತ ಅವಳು ಯಾಕೆ ಏನೂ ಹೇಳುತ್ತಿಲ್ಲವೆಂಬ ಚಿಂತೆಯಲ್ಲಿ ಅವನು ಅವಳತ್ತ ನೋಡಿದ. ಅವಳು ಅಲ್ಲಿರಲಿಲ್ಲ.
ವರ್ಷಗಳ ಹಿಂದೆ ಕಂಡಿದ್ದ ಅವಳ ನಗುವಿನ ಪ್ರಕಾಶದಲ್ಲಿ ಮಿಂದ ಅವನೀಗ ಒಂಟಿ.
ಪಂಜರ
ಮದುವೆಯ ನಂತರ ತಾನು ಕಟ್ಟಿದ ಸುಂದರ ಗೃಹಕ್ಕೆ ಅವಳನ್ನು ಆತ ಕರೆದುಕೊಂಡು ಹೋದ.
'ಬಲಗಾಲಿಟ್ಟು ಪ್ರವೇಶಿಸು'
ಹೊಸ್ತಿಲ ಬಳಿ ನಿಂತು ಆತ ಹೇಳಿದ. ಅವರು ಒಳಗೆ ಹೋದರು.
ಎಲ್ಲ ಆಧುನಿಕ ಸೌಕರ್ಯಗಳಿರುವ ಮನೆ. ವಾಷಿಂಗ್ ಮೆಷಿನ್, ಫ್ರಿಜ್, ಟಿ.ವಿ.
ಮತ್ತು ಸ್ವಾಗತ ಕೋಣೆಯ ಮೂಲೆಯಲ್ಲಿ ತೂಗಿಸಿಟ್ಟಿದ್ದ ದೊಡ್ಡ ಗಿಳಿಯ ಪಂಜರ ನೋಡಿ ಆಕೆ ಗಾಬರಿಗೊಂಡಳು. ಗಿಳಿಯಿಲ್ಲದ ಪಂಜರದತ್ತ ಕೈ ತೋರಿಸಿ ಆಕೆ ಕೇಳಿದಳು.
'ಇದೇನು?'
ಅದಕ್ಕುತ್ತರವಾಗಿ ಆತನೆಂದ
'ಬಲದ ರೆಕ್ಕೆ ಬಿಡಿಸಿ ಪ್ರವೇಶಿಸು'
ಮುಂದೆ ಅವಳೇನೂ ಹೇಳುವುದಕ್ಕೆ ಮೊದಲು ಆತ ಅವಳನ್ನು ಪಂಜರದೊಳಗೆ ಹಾಕಿ ಕದವಿಕ್ಕಿ ಬೀಗ ಜಡಿದ.
ಮೂಲ: ಪಿ.ಕೆ. ಪಾರಕ್ಕಡವು
(ಮಲಯಾಳಂ, ಕೇರಳದ ಪ್ರಸಿದ್ಧ ದೈನಿಕ 'ಮಾಧ್ಯಮಂ' ಸಂಪಾದಕರು)
-ಅನುವಾದ: ಡಾ.ಪಾರ್ವತಿ ಜಿ. ಐತಾಳ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.