ಮಹಿಳಾ ಮಾಧ್ಯಮ
ಪತ್ರಿಕೋದ್ಯಮ ಕೇವಲ ಪುರುಷರ ಉದ್ಯೋಗ ಎನ್ನುವ ಅಭಿಪ್ರಾಯ ಒಂದು ಕಾಲದಲ್ಲಿತ್ತು. ಆದರೆ ಇಂದು ಸಾಕಷ್ಟು ಮಹಿಳೆಯರು ಮುದ್ರಣ ಮತ್ತು ದೃಶ್ಯಮಾಧ್ಯಮಗಳಲ್ಲಿ ಹೆಸರು ಮಾಡಿದ್ದಾರೆ. ಈ ಸಾಧನೆಯ ಹಾದಿ ಹೂವು ಚೆಲ್ಲಿದಂತೂ ಅಲ್ಲ. ಪತ್ರಕರ್ತೆಯರ ಸಾಧನೆಯ ದಾಖಲೆಯನ್ನು 'ಪತ್ರಕರ್ತೆಯ ಪುರಾವೆಗಳು' ಕೃತಿಯಲ್ಲಿ ಎಂ. ಜಯರಾಮ ಅಡಿಗ ಮತ್ತು ಡಿ. ಯಶೋದಾ ಸಂಪಾದಿಸಿದ್ದಾರೆ. ವೃತ್ತಿಯಲ್ಲಿ ಪರ್ತಕರ್ತೆ ಎದುರಿಸುತ್ತಿರುವ ಸಮಸ್ಯೆಗಳು ಸವಾಲುಗಳ ಬಗ್ಗೆ ಈ ಕ್ಷೇತ್ರದಲ್ಲಿ ಬಹುಕಾಲ ಕೆಲಸ ಮಾಡಿದವರು ಪುರಾವೆಯನ್ನು ಈ ಕೃತಿಯಲ್ಲಿ ಒದಗಿಸಿದ್ದಾರೆ. ಈ ಎಲ್ಲರ ಅನುಭವಗಳಿಗೆ ಪ್ರಾತಿನಿಧಿಕ ಎನ್ನಿಸಬಲ್ಲ ರಾಧಾ ಹಿರೇಗೌಡರ್ ಅವರ ಲೇಖನದ ಒಂದು ಭಾಗವನ್ನು ಇಲ್ಲಿ ಉಲ್ಲೇಖಿಸಬಹುದು: 'ಪತ್ರಕರ್ತರು ಮತ್ತು ಪರ್ತಕರ್ತೆಯರು ಅನ್ನೋದರಲ್ಲಿ ಅಂಥ ವ್ಯತ್ಯಾಸ ಏನಿಲ್ಲ. ಗಂಡು- ಹೆಣ್ಣು ಅನ್ನೋವಷ್ಟೇ ಸಹಜತೆ ಇದೆ ಅನ್ನೋದು ನನ್ನ ಭಾವನೆ. ಎಲ್ಲಾ ವೃತ್ತಿಗಳಲ್ಲಿ ಇದ್ದಂತೆ ಇಲ್ಲೂ ಪ್ಲಸ್ ಅಂಡ್ ಮೈನಸ್ ಇವೆ. ಆದರೆ, ಪತ್ರಕರ್ತೆಯರಿಗೆ ಸುದ್ದಿಸಂಗ್ರಹ ಇತ್ಯಾದಿ ವಿಷಯಗಳಲ್ಲಿ ಅಡ್ವಾಂಟೇಜ್ ಜಾಸ್ತಿ. ಅದನ್ನು ಜಾಣ್ಮೆಯಿಂದ ಬಳಸಿಕೊಳ್ಳಬೇಕಷ್ಟೇ. ಸ್ವಲ್ಪ ಯಾಮಾರಿದ್ರೂ ಕಷ್ಟಕ್ಕೆ ಸಿಲುಕಬೇಕಾಗುತ್ತೆ. ನನಗೆ ಸ್ಟುಡಿಯೋದಲ್ಲಿ ಕುಳಿತು ಮಾತನಾಡಿ ಜನಸಂಪರ್ಕ ಇದೆ. ನಮ್ಮ ಚಾನೆಲ್ಗಳಲ್ಲಿ ಕೆಲಸ ಮಾಡುವ ವರದಿಗಾರ್ತಿಯರ ಅನುಭವ ಮತ್ತಷ್ಟು ವಿಭಿನ್ನ. ಎಷ್ಟೋ ಬಾರಿ ಸುದ್ದಿಗಾಗಿ ಪತ್ರಕರ್ತ ಪ್ರಯತ್ನಪಟ್ಟರೂ ಆಗದ್ದು ಪತ್ರಕರ್ತೆಯಿಂದ ಆಗುವುದಿದೆ. ಹೆಣ್ಣು ಅನ್ನೋ ಅಡ್ವಾಂಟೇಜ್ ಬಳಸಿಕೊಂಡು ಸುದ್ದಿ ತೆಗೆಯುವುದಷ್ಟಕ್ಕೆ ಸೀಮಿತಗೊಳಿಸಿಕೊಂಡರಷ್ಟೇ ಇದು ಸಾಧ್ಯ. ಪತ್ರಕರ್ತೆ ಅನ್ನೋ ಕಾರಣಕ್ಕೆ ಕಿಂಡಲ್ ಮಾಡುವ, ಕೀಳಾಗಿ ನೋಡುವ ಕೆಲಸವೂ ಆಗುತ್ತದೆ. ಎದೆಗುಂದದೆ ಫೇಸ್ ಮಾಡಬೇಕು...' ಮಾಧ್ಯಮ ಕ್ಷೇತ್ರವನ್ನು ಹೊರಗಿನಿಂದ ಕುತೂಹಲದಿಂದ ನೋಡುವವರಿಗೆ ಹಲವು ಮಾಹಿತಿಗಳು ಇಲ್ಲಿವೆ.
ಕೃತಿ: ಪತ್ರಕರ್ತೆಯ ಪುರಾವೆಗಳು
ಪ್ರಕಾರ: ಸಂಪಾದನೆ
ಏಕೆ ಓದಬೇಕು?: ಪತ್ರಕರ್ತೆಯರ ಸಮಸ್ಯೆ ಅರಿಯಲು
ಪ್ರ: ಪ್ರೆಸ್ಕ್ಲಬ್ ಪ್ರಕಾಶನ, ಬೆಂಗಳೂರು, ಪುಟಗಳು 176, ಬೆಲೆ ರು. 180
ಶರಣರ ಜಾತಿ ಚಿಂತನೆ
ಹನ್ನೆರಡನೇ ಶತಮಾನದ ಶರಣರು ಕರ್ನಾಟಕದಲ್ಲಿ ಒಂದು ವೈಚಾರಿಕ ಕ್ರಾಂತಿಯನ್ನು ನಡೆಸಿಬಿಟ್ಟರು. ಬೌದ್ಧ ಧರ್ಮ ಮತ್ತು ಜೈನಧರ್ಮಗಳು ತಮ್ಮ ಪ್ರಾಬಲ್ಯವನ್ನು ಕಳೆದುಕೊಂಡು ದುರ್ಬಲವಾಗಿದ್ದಾಗ ಬಲಗೊಂಡ ಹಿಂದೂ ಧರ್ಮವು ಮನು ಪ್ರಣೀತ ವರ್ಣಾಶ್ರಮ ವ್ಯವಸ್ಥೆಗೆ ಮಣೆಹಾಕಿತ್ತು. ಇದರ ವಿರುದ್ಧ ಬಸವಣ್ಣನವರು ಕಲ್ಯಾಣದಲ್ಲಿ ಧಾರ್ಮಿಕ ಕ್ರಾಂತಿಗೆ ಮುಂದಾದರು. ಜಾತ್ಯತೀತ ಮನೋಭಾವವು ಸಮಾಜದ ಸ್ಥಾಯಿಭಾವವಾಗಬೇಕು ಎಂದು ಅವರು ಬಯಸಿದರು. ಶರಣರಲ್ಲಿಯೂ ವಿವಿಧ ಕಾಯಕ ಮಾಡುವವರಿದ್ದರು. ಕಾಯಕದ ಕಾರಣದಿಂದಾಗಿ ಜಾತಿಯನ್ನು ಗುರುತಿಸುವ ಪದ್ಧತಿಯನ್ನು ದೂರಮಾಡಲು ಜಾತಿಯನ್ನು ವಿನಾಶಗೊಳಿಸಿ ಕಾಯಕವನ್ನು ಮಾತ್ರ ಅವರು ಉಳಿಸಿಕೊಂಡರು. ಇದು ಸಮಾಜದ ಪಟ್ಟಭದ್ರ ಹಿತಾಸಕ್ತಿಗೆ ಸಹಿಸಲಾಗದೆ ಬಸವಣ್ಣನವರ ವಿರುದ್ಧ ಸಂಚು ರೂಪಿಸಿದರು. ಇಂಥ ಬಸವಣ್ಣನವರು ಹಾಗೂ ಶರಣರು ಜಾತಿವ್ಯವಸ್ಥೆಗೆ ಹೇಗೆ ಸವಾಲಾದರು ಎಂಬುದನ್ನು ರಂಜಾನ್ ದರ್ಗಾ 'ಜಾತಿ ವ್ಯವಸ್ಥೆಗೆ ಸವಾಲಾದ ಶರಣರು' ಕೃತಿಯಲ್ಲಿ ವಿವರಿಸಿದ್ದಾರೆ.
ಕೃತಿ: ಜಾತಿ ವ್ಯವಸ್ಥೆಗೆ ಸವಾಲಾದ ಶರಣರು
ಪ್ರಕಾರ: ಲೇಖನಗಳು
ಏಕೆ ಓದಬೇಕು?: ಜಾತಿ ವ್ಯವಸ್ಥೆಯ ಕುರೂಪ ಅರಿಯಲು
ಪ್ರ: ಲೋಹಿಯಾ ಪ್ರಕಾಶನ, ಬಳ್ಳಾರಿ, ಪುಟಗಳು 88, ಬೆಲೆ 30
ಸನದಿಯವರ ವಿಮರ್ಶೆ
ಹೊರನಾಡ ಕನ್ನಡಿಗರಾಗಿತುಂಬಾ ವರ್ಷ ಕೆಲಸ ಮಾಡಿ ಈಗ ಒಳನಾಡಿಗೆ ಬಂದು ನೆಲೆಸಿರುವ ಬಿ.ಎ. ಸನದಿಯವರು ಸದ್ದಿಲ್ಲದೆ ವಿಮರ್ಶೆಯ ಕೆಲಸವನ್ನು ಮಾಡುತ್ತಿದ್ದಾರೆ. ಅವರ 'ಸಾಹಿತ್ಯ ವಲಯ' ವಿಮರ್ಶೆಗಳ ಸಂಕಲನದಲ್ಲಿ 15 ಲೇಖನಗಳಿವೆ. ಕೆಲವು ಲೇಖನಗಳನ್ನು ಅವರು ತಮ್ಮ ಮುಂಬಯಿ ವಾಸ್ತವ್ಯದಲ್ಲಿಯೇ ಬರೆದವುಗಳು. ಹಾಗಂತ ಅವು ಪ್ರಸ್ತುತತೆಯನ್ನು ಕಳೆದುಕೊಂಡಿಲ್ಲ. ಸನದಿಯವರು ಕೃತಿಯ ಉತ್ತಮ ಓದುಗರು. ವಿಮರ್ಶೆಗೆ ಮೊದಲು ಕೃತಿಯನ್ನು ಸಂಗ್ರಹಿಸಿ ಹೇಳುವರು. ನಂತರ ಕೃತಿಯ ಉತ್ತಮ ಅಂಶಗಳೇನು ಎಂಬುದನ್ನು ವಿವರಿಸುವರು. ಕಾವ್ಯವನ್ನು ಅವರು ಆಸ್ವಾದಿಸುವ, ಅರ್ಥವನ್ನು ವಿವರಿಸುವ ರೀತಿ ಅಪೂರ್ವವಾದದ್ದು. ಕಾವ್ಯ ವಿವರಣೆಯಲ್ಲಿ ತೀನಂಶ್ರೀಯವರದು ದೊಡ್ಡ ಹೆಸರು. ಆ ಸಾಲಿನಲ್ಲಿ ನಿಲ್ಲಬಲ್ಲವರು ಸನದಿ. ಈ ಕೃತಿಯಲ್ಲಿ ಬೇಂದ್ರೆ ಮೊದಲಾದವರ ಕವಿತೆಗಳ ಅತ್ಯುತ್ತಮ ವಿವರಣೆಗಳಿವೆ. ಸನದಿಯವರದು ನವೋದಯದ ಮನಸ್ಸು. ವಿಮರ್ಶೆಯೂ ಸಹೃದಯ ವಿಮರ್ಶೆ.
ಕೃತಿ: ಸಾಹಿತ್ಯ ವಲಯ, ಪ್ರಕಾರ: ವಿಮರ್ಶೆ, ಏಕೆ ಓದಬೇಕು?: ಸನದಿಯವರ ವಿಮರ್ಶೆ ಅರಿಯಲು
ಪ್ರ: ಕನ್ನಡನಾಡು ಪ್ರಕಾಶನ, ಗುಲಬರ್ಗಾ, ಪುಟಗಳು 120, ಬೆಲೆ ರು. 100
ಸಿಂಪಿಯವರ ಸಿಂಪಲ್ ವಿಮರ್ಶೆ
ಪ್ರೊ. ವೀರೇಂದ್ರ ಸಿಂಪಿಯವರ ಸಾಹಿತ್ಯ ವಿಮರ್ಶೆಯ ಎರಡನೇ ಸಂಕಲನ 'ಸಾಹಿತ್ಯ ಸಂಚಯ'. ಇದರಲ್ಲಿ 20 ವಿಮರ್ಶೆಗಳಿವೆ. ಅವರೇ ಹೇಳಿಕೊಂಡಂತೆ ಅವರದು ರಸ ವಿಮರ್ಶೆ. ಅವರು ಕೃತಿಯಲ್ಲಿಯ ಉತ್ತಮ ಅಂಶಗಳನ್ನು ವಿವರಿಸುತ್ತಾರೆ. ಕೃತಿಯನ್ನು ಅವರು ಮೌಲ್ಯಮಾಪನ ಮಾಡುವುದಿಲ್ಲ. ಅಥವಾ ಕೃತಿಯ ಸ್ಥಾನ ನಿರ್ದೇಶನ ಮಾಡುವುದಿಲ್ಲ. ಒಂದು ಕೃತಿಯನ್ನು ಓದಿದಾಗ ತಮಗಾದ ಸಂತೋಷವನ್ನು ಇತರರೊಂದಿಗೆ ಹಂಚಿಕೊಳ್ಳುವ ಉದಾರ ಮನಸ್ಸು ಅವರದು. ಡಾ. ಜಿ.ಎಸ್. ಕಾಪಸೆ ಅವರ ಜೀವನ ಮತ್ತು ಸಾಹಿತ್ಯ, ಬೀಚಿಯವರ ಸಾಹಿತ್ಯ, ಶಿವರುದ್ರಪ್ಪನವರ ಕಾವ್ಯಾರ್ಥ ಚಿಂತನ, ಕೆ. ಸತ್ಯನಾರಾಯಣ ಅವರ 'ಪ್ರಸಿದ್ಧನಾಮಾ' ಕೃತಿಯ ಪರಾಮರ್ಶೆಗಳಲ್ಲೆಲ್ಲ ಕೆಲವು ವಿಮರ್ಶಾತ್ಮಕ ಮಾತುಗಳು ಬಂದಿವೆ. ಇವನ್ನೆಲ್ಲ ಒಟ್ಟುಸೇರಿಸಿ ವೀರೇಂದ್ರ ಸಿಂಪಿಯವರ ವಿಮರ್ಶೆಯ ಒಟ್ಟೂ ಧೋರಣೆ ಏನು ಎಂಬುದನ್ನು ಹೇಳಬಹುದು. ತುಸು ಅತಿಯೇನೋ ಎನಿಸುವಷ್ಟು ಮೆಚ್ಚುಗೆ ಅವರ ವಿಮರ್ಶೆಯಲ್ಲಿ ವ್ಯಕ್ತವಾಗಿದ್ದರೆ ಅದಕ್ಕೆ ಅವರ ದಾಕ್ಷಿಣ್ಯದ ಪ್ರವೃತ್ತಿ ಕಾರಣವಾಗಿರಬಹುದು.
ಕೃತಿ: ಸಾಹಿತ್ಯ ಸಂಚಯ, ಪ್ರಕಾರ: ವಿಮರ್ಶೆ, ಏಕೆ ಓದಬೇಕು?: ಸಿಂಪಿಯವರ ವಿಮರ್ಶೆ ಅರಿಯಲು, ಪ್ರ: ಕನ್ನಡನಾಡು ಪ್ರಕಾಶನ, ಗುಲಬರ್ಗಾ, ಪುಟಗಳು 112, ಬೆಲೆ ರು. 100
- ಡಾ. ವಾಸುದೇವ ಶೆಟ್ಟಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.