ಸ್ತ್ರೀ ಸಂವೇದನೆಯ ಕಥೆಗಳು
ಕನ್ನಡ ಸಾಹಿತ್ಯದಲ್ಲಿ ಎಚ್.ವಿ. ಸಾವಿತ್ರಮ್ಮ ಅವರ ಕಥೆಗಳಿಗೆ ಅದರದ್ದೇ ಆದ ಒಂದು ಸ್ಥಾನವಿದೆ. ಒಂದು ಕಾಲಘಟ್ಟ ಮತ್ತು ಸಮಾಜದ ಮನಸ್ಥಿತಿಯನ್ನು ಸ್ತ್ರೀ ಸಂವೇದನೆಯ ಮೂಲಕ ಹೇಳುವ ಪ್ರಯತ್ನವನ್ನು ಸಾವಿತ್ರಮ್ಮ ಅವರು ತಮ್ಮ ಕಥೆಗಳ ಮೂಲಕ ಮಾಡಿದ್ದಾರೆ. ಸ್ತ್ರೀವಾದ ಮೇಲ್ನೋಟಕ್ಕೆ ಪುರುಷ ವಿರೋಧಿಯಂತೆ ಗೋಚರವಾದರೂ ಅಂತರಾಳದಲ್ಲಿ, ಹೆಣ್ಣಿನಲ್ಲಾಗುವ ಬದಲಾವಣೆ ಮತ್ತು ಆಕೆ ತನ್ನನ್ನು ತುಳಿಯುವ ಪುರುಷ ವರ್ಗಕ್ಕೆ ಯಾವ ರೀತಿ ಸ್ಪಂದಿಸುತ್ತಾಳೆ, ವಿರೋಧಿಸುತ್ತಾಳೆ ಮತ್ತು ಧಿಕ್ಕರಿಸುತ್ತಾಳೆ ಎಂಬುದು ಕೂಡಾ ಅಷ್ಟೇ ಮುಖ್ಯ. ಅಂಥ ಪ್ರಯತ್ನಗಳುಳ್ಳ ಎಚ್.ವಿ. ಸಾವಿತ್ರಮ್ಮ ಅವರ ಕಥೆಗಳನ್ನು 'ಸಮಸ್ತ ಕಥೆಗಳು' ಎಂಬ ಶೀರ್ಷಿಕೆಯಡಿಯಲ್ಲಿ ಒಂದುಗೂಡಿಸಿದ್ದಾರೆ ನ. ರವಿಕುಮಾರ್ ಮತ್ತು ಎಲ್.ಜಿ. ಮೀರಾ.
ಎಚ್.ವಿ. ಸಾವಿತ್ರಮ್ಮ ಅವರ 'ಹೊಸ ಜಗತ್ತು', 'ಪ್ರತೀಕ್ಷೆ', 'ಲಕ್ಷ್ಮೀ', 'ಸರಿದ ನೆರಳು', 'ಮರುಮದುವೆ', 'ನಿರಾಶ್ರಿತೆ' ಕಥಾ ಸಂಕಲನಗಳನ್ನು ಒಂದುಗೂಡಿಸಿ, 'ಸಮಸ್ತ ಕಥೆಗಳು' ರೂಪದಲ್ಲಿ ಕೊಡಲಾಗಿದೆ.
ಇಲ್ಲಿರುವ ಅಷ್ಟೂ ಕಥೆಗಳಲ್ಲಿ ಎದ್ದು ಕಾಣುವ ಅಂಶವೆಂದರೆ, ಒಂದು ಕಾಲ ಘಟ್ಟದ ಸಮಾಜದ ಸ್ಥಿತಿ. ಅಂದರೆ, ಸಮಾಜ ಅತ್ತ ಆಧುನಿಕತೆಗೂ ಒಗ್ಗಿಕೊಳ್ಳದ ಇತ್ತ ಸಂಪ್ರದಾಯವನ್ನೂ ಬಿಟ್ಟುಕೊಡದಂಥ ಒಲ್ಲದ ಸ್ಥಿತಿ(ಖಜಟ್ಡ್ಛಡಿಛಟಿಡಿ ಂ್ಝಟಿಜ)ಯಲ್ಲಿರುವಂಥದ್ದು. ಇದಕ್ಕೆ ಉದಾಹರಣೆಯಾಗಿ ನಿಲ್ಲುತ್ತದೆ 'ಹಳೆಯ ಜೋಡು' ಕಥೆ. 50ರ ಆಸುಪಾಸಿನಲ್ಲಿರುವ ಸ್ವಾಮಿ ಹಾಗೂ ಅವರ ಪತ್ನಿ ರುಕ್ಮಿಣಿ ಮತ್ತೊಂದು ಪ್ರಣಯಕ್ಕೆ ಜಾರಿ, ಅಪಾಯನ್ನರಿತು ಎಚ್ಚೆತ್ತುಕೊಳ್ಳುವ ಕಥಾವಸ್ತು. ಈ ತರಹ ಕಥೆಗಳು ಈಗ ಅಷ್ಟಾಗಿ ಗಮನ ಸೆಳೆಯಲಿಕ್ಕಿಲ್ಲ. ಆದರೆ, ಒಂದು ಕಾಲದಲ್ಲಿ ಇಂಥ ಮನಸ್ಥಿತಿಯ ಕಥೆಗಳು ಏನೆಲ್ಲ ಪ್ರಭಾವ ಬೀರಿರಬಹುದು ಊಹಿಸಿ. ಈ ಕಥೆಯಲ್ಲಿ ಸ್ವಾಮಿ 25ರ ಆಸುಪಾಸಿನ ಯುವತಿಯ ಮೋಹಕ್ಕೆ ಬೀಳುವುದು ಮತ್ತು ರುಕ್ಮಿಣಿ ತನ್ನದೇ ವಾರಿಗೆಯ ಅತ್ತೆ ಮಗನನ್ನು ಆಕರ್ಷಿಸುವುದು ಇದೆ. ಇದಕ್ಕೆ ಕಾರಣ ಮದುವೆಯಾಗಿ ಅಷ್ಟು ವರ್ಷಗಳು ಕಳೆದರೂ, ಒಬ್ಬ ಮಗ ದೊಡ್ಡವನಾದರೂ ಗಂಡ ಹೆಂಡತಿಯ ಮಧ್ಯೆ ಇರಬೇಕಾದ ಅನ್ಯೋನ್ಯತೆಯ ಕೊರತೆ. ಅದನ್ನೇ ತಪ್ಪಾಗಿ ಭಾವಿಸಿ ಇಬ್ಬರೂ ಇಳಿವಯಸ್ಸಿನಲ್ಲಿ ಮತ್ತೊಂದು ಸಂಬಂಧ ಕೈ ಚಾಚುತ್ತಲೇ, ಹಿಂತೆಗೆದುಕೊಂಡು ಬಚಾವಾಗುತ್ತಾರೆ. ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ತಾವು ಮಾಡಲು ಹೊರಟಿದ್ದ 'ಕೆಲಸ'ದ ಬಗ್ಗೆ ಪಶ್ಚಾತ್ತಾಪ ಪಡುತ್ತಾರೆ. ಈ ಕಥೆಯಲ್ಲಿ ಮುಖ್ಯವಾಗಿ ಹೆಣ್ಣಿನ ಅಂತರಾಳವನ್ನು ಅರಿಯುವ ಪ್ರಯತ್ನವನ್ನು ಪುರುಷರು ಮಾಡುವುದಿಲ್ಲ ಎಂಬುದನ್ನು ಬಿಂಬಿಸುತ್ತಾರೆ ಲೇಖಕಿ. ಹಾಗೆಯೇ ಈ ಕಥೆಯಲ್ಲಿ ಕ್ಲಬ್ ಕಲ್ಚರ್ ಕೂಡಾ ಬಂದು ಹೋಗುತ್ತದೆ. ಈ ತರಹ ಸುಮಾರು ಕಥೆಗಳು ಈ ಸಂಕಲನದಲ್ಲಿವೆ.
'ಹೊಸ ಜಗತ್ತು' ಎಂಬ ಕಥೆಯಲ್ಲಿ ಲೇಖಕಿ ತನ್ನ ಸ್ವಭಾವಕ್ಕೆ ವಿರುದ್ಧವಾದ ವಸ್ತುವನ್ನು ಹೆಣೆದಿದ್ದಾರೆ ಎನಿಸುತ್ತದೆ. ಇಲ್ಲಿಯ ಕಥೆ ಅರಳುವುದೇ ದೇಶಕ್ಕೆ ಸ್ವಾತಂತ್ರ್ಯ ಸಿಗುವ ಕಾಲಘಟ್ಟದಲ್ಲಿ. ಸುಮಾರು ವರ್ಷಗಳವರೆಗೂ ಬ್ರಿಟಿಷರ ಶಾಲೆಯಲ್ಲಿ ಶಿಕ್ಷಕನಾಗಿದ್ದವ ವ್ಯಕ್ತಿ ಕೊನೆಗೊಂದು ದಿನ ಇದ್ದಕ್ಕಿದ್ದಂತೆ ಕ್ವಿಟ್ ಇಂಡಿಯಾ ಚಳವಳಿಗೆ ಧುಮುಕುತ್ತಾನೆ. ಇದಕ್ಕೆ ಆತನ ಅಂತರಾತ್ಮ ಕರೆ ಕಾರಣವೋ ಅಥವಾ ಎದೆಯೆತ್ತರ ಬೆಳೆದು ನಿಂತ ಮಗ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯನಾಗಿದ್ದು ಕಾರಣವೋ ಗೊತ್ತಾಗುವುದಿಲ್ಲ. ಆದರೂ ಇಳಿ ವಯಸ್ಸಿನಲ್ಲಿ ಧುಮುಕಿ, ತನ್ನೂರಿನ ಚಳವಳಿಯ ಪ್ರಮುಖನಾಗುತ್ತಾನೆ. ಅನೇಕ ಮಹತ್ವದ ಸಭೆಗಳು ಕಥಾ ನಾಯಕನ ಮನೆಯಲ್ಲೇ ನಿರ್ಧಾರವಾಗುತ್ತವೆ. ಇನ್ನೇನು ಸ್ವಾತಂತ್ರ್ಯ ಸಿಕ್ಕಿತು ಅನ್ನುವ ಹಂತದಲ್ಲಿ ಈತನಿಗೆ ಪಾರ್ಶ್ವವಾಯು ಬಡಿದು, ಮನೆಯಲ್ಲೇ ಇರಬೇಕಾಗುತ್ತದೆ. ಹೊರಗಡೆ ಸ್ವಾತಂತ್ರ್ಯ ಪಡೆದು ಸಂಭ್ರಮಿಸುವ ಕ್ಷಣಗಳು ಅನುಭವಿಸುತ್ತಿದ್ದರೆ, ಈತ ಮನೆಯೊಳಗಡೇ ಅಂತರ್ಮುಖಿಯಾಗಿ ಇರಬೇಕಾದ ಪರಿಸ್ಥಿತಿ. ಇಲ್ಲೂ ಒಂದು ಸ್ತ್ರಿ ಸಂವೇದನೆಯ ಎಳೆಯನ್ನು ಲೇಖಕಿ ಕಥಾನಾಯಕನ ಹೆಂಡತಿಯ ರೂಪದಲ್ಲಿ ಬಿಡಿಸಿಟ್ಟಿದ್ದಾರೆ. ಶಿಕ್ಷಕ ವೃತ್ತಿಗೆ ಗುಡ್ಬೈ ಹೇಳಿ, ಚಳವಳಿಗೆ ಧುಮಕುವ ನಾಯಕನಿಗೆ ಹೆಂಡತಿ ಹೇಗೆ ಬೆಂಗಾವಲಾಗಿ ನಿಲ್ಲುತ್ತಾಳೆ ಎಂಬುದನ್ನು ತುಂಬಾ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ.
'ಮೇನಕಾ' ಕಥೆಯಲ್ಲಿ ಅದೇ ಸ್ತ್ರೀವಾದದ ಭಾವ ಢಾಳಾಗಿದೆ. ಈ ಕಥೆಯ ಕೊನೆಗೆ ಮೇನಕಾ ಒಂದು ಮಾತು ಹೇಳುತ್ತಾಳೆ, 'ಜಯರಾಂ, ಅವರು ಹೊರಟುಹೋದ ಮೇಲೆ ಬೀದಿ ಬಾಗಿಲು ಹಾಕು' ಎಂದು. ಹೀಗೆ ಹೇಳುವ ಮೂಲಕ ತನ್ನ ಗಂಡನಿಂದಾದ ಅನ್ಯಾಯದ ವಿರುದ್ಧ ಒಟ್ಟು ಪ್ರತಿಭಟನೆಯನ್ನು ಒಂದೇ ಸಾಲಿನಲ್ಲಿ ವ್ಯಕ್ತಪಡಿಸುತ್ತಾಳೆ. ಗಂಡ ಇದ್ದೂ ಪರಿತ್ಯಕ್ತಳಾಗುವ ಮೇನಕಾ ಸ್ಥಿತಿಯ ಬಗ್ಗೆ ಒಂದೆಡೆ ಕೊರಗು ಉಂಟಾದರೆ, ಆಕೆಯನ್ನು ನಡೆಸಿಕೊಂಡ ಸಮಾಜ ಧೋರಣೆ ಬಗ್ಗೆ ಸಿಟ್ಟು ಬರುತ್ತದೆ. ಹಾಗಂತ ಎಲ್ಲೂ ನಿಮ್ಮನ್ನು ಪ್ರಚೋದಿಸುವುದಿಲ್ಲ. ಇದೇ ಹಾದಿಯಲ್ಲಿ ಸಾಗುವ 'ತೆರೆ ಸರಿದಾಗ', 'ಅವಳದೊಂದು ಕಥೆ' ಕಥೆಗಳಲ್ಲೂ ಸ್ತ್ರೀ ಶೋಷಣೆಯ ವಿರುದ್ಧದ ಹೋರಾಟವೇ ತಿರುಳು.
ಹೀಗೆ... ಇಲ್ಲಿರುವ ಅಷ್ಟೂ ಕಥೆಗಳು, ಓದುತ್ತಾ ಹೋದಂತೆ ಒಂದೊಂದು ಭಾವ ಹೊರಡಿಸುತ್ತವೆ. ಆದರೆ, ಬಹುತೇಕ ಎಲ್ಲ ಕಥೆಗಳ ಭಾವ ನಿಮಗೆ ಅಂತಿಮವಾಗಿ ನೀಡುವ ಸುಳಿವು- ಸ್ತ್ರಿ ಸಂವೇದನೆ! ಇದರ ಸುತ್ತಲೇ ಗಿರಕಿ ಹೊಡೆಯುತ್ತವೆ. ಸ್ತ್ರೀ ಶೋಷಣೆಗೆ ಹಿಂದೆ ಇದ್ದ ರೂಪ ಈಗಿಲ್ಲ. ಈಗಿರುವ ಸ್ತ್ರೀ ಶೋಷಣೆಯ ಲಕ್ಷಣಗಳೇ ಬೇರೆ. ಆದರೆ, ಆಗಿನಂತೆ ಈಗಲೂ ಬಂಡಾಯ ಮಾತ್ರ ನಿಂತಿಲ್ಲ. ಸಾವಿತ್ರಮ್ಮನವರ ಎಲ್ಲ ಕಥೆಗಳ ಒಂದು ಗುಣವೆಂದರೆ, ಎಲ್ಲೂ ಅವರು ವ್ಯಗ್ರರಾಗುವುದಿಲ್ಲ ಅಥವಾ ಕೇವಲ ಪುರುಷನನ್ನು ಮಾತ್ರ ದೂಷಿಸುವುದಿಲ್ಲ. ಹೆಣ್ಣು ಹೆಣ್ಣಿನಿಂದಲೂ ಶೋಷಿತಳಾಗುತ್ತಳೆ ಎಂಬುದು ಮೇನಕಾ ಕಥೆಯಲ್ಲಿ ನಿರೂಪಿಸಿದ್ದಾರೆ. ಅವರೆಲ್ಲ ಕಥೆಗಳಲ್ಲೂ ಬಂಡಾಯವನ್ನು ತುಂಬಾ ಸಂಯಮದಿಂದಲೋ ಜಾಗೃತಗೊಳಿಸುತ್ತಾರೆ.
ಹಾಗೆ ನೋಡಿದರೆ, ಇದನ್ನು ತಪ್ಪು ಎಂದು ಹೇಳಲಾಗದು. ಒಂದು ಕಾಲಘಟ್ಟದ ಪರಿಸ್ಥಿತಿಯನ್ನು ವಿವರಿಸುವಾಗ, ಅಲ್ಲಿ ಆಗುವಂಥ ನೈಜ ಸ್ಥಿತಿಯನ್ನು ಸೃಜನಶೀಲತೆಗೆ ಬಳಸಿಕೊಳ್ಳುವುದು ಈಗಲೂ ಇದೆ. ಆಗಲೂ ಇತ್ತು. ನೀವು ಎಷ್ಟೇ ಕಾಲ್ಪನಿಕವಾಗಿ, ಭಾವನಾತ್ಮಕ ಕಥಾವಸ್ತುವನ್ನು ಆಯ್ದುಕೊಂಡರೂ ಅಂಥ ಕಥೆಗಳಲ್ಲಿ ವಾಸ್ತವದಲ್ಲಿ ಕಂಡ ಕೆಲವು ಅಂಶಗಳಾದರೂ ಅಡಗಿರುತ್ತೇವೆ ಮತ್ತು ಇದನ್ನೇ ನಾವು ಸಾಹಿತ್ಯಿಕ ಶಕ್ತಿಯೂ ಎಂದೂ ಭಾವಿಸಬಹುದು. ಅಂಥ ಪ್ರಯತ್ನ ಇಲ್ಲಿರುವ ಕಥೆಗಳಲ್ಲಿ ಎದ್ದು ಕಾಣುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.
ಎಚ್.ವಿ.ಸಾವಿತ್ರಮ್ಮ- ಸಮಸ್ತ ಕಥೆಗಳು
ಸಂಪಾದಕರು: ನ.ರವಿಕುಮಾರ್ ಮತ್ತು ಎಲ್.ಜಿ.ಮೀರಾ
ಪ್ರಕಾಶನ: ಅಭಿನವ ಪ್ರಕಾಶನ, ಬೆಂಗಳೂರು : ರು. 500
-ಮಲ್ಲಿಕಾರ್ಜುನ ತಿಪ್ಪಾರ