ಹರಿ ರಚಿತ
ಶಿಕಾರಿಪುರ ಹರಿಹರೇಶ್ವರ ಹೆಸರು ವಿಶ್ವದ ಕನ್ನಡಿಗರಿಗೆ ಚಿರಪರಿಚಿತ. ಜೀವನದ ಕೊನೆಯ ಉಸಿರಿರುವ ತನಕ ಕನ್ನಡದ ಕೆಲಸ ಮಾಡುತ್ತಲೇ ಇದ್ದರು. ಅವರು ಇಹಲೋಕ ತ್ಯಜಿಸಿ 3 ವರ್ಷಗಳಾಗುತ್ತಿವೆ. ಅವರ ಪತ್ನಿ ನಾಗಲಕ್ಷ್ಮಿ ಹರಿಹರೇಶ್ವರ, ಕನ್ನಡದ ಕೆಲಸವನ್ನು ಅಚ್ಚುಕಟ್ಟಾಗಿ ಮುಂದುವರಿಸುತ್ತಿದ್ದಾರೆ.
'ಬೈಬಲ್ನಲ್ಲಿ ಜಾನ್ನ ಸುವಾರ್ತೆ- ಒಂದು ಅಧ್ಯಯನ' ಕೃತಿ, ಹರಿ ಅವರ ಹಲವು ಸಂವತ್ಸರಗಳ ಅವಿರತ ತಪಸ್ಸಿನ ಫಲ. ಇನ್ನೂ ಕೆಲವು ಟಿಪ್ಪಣಿಗಳನ್ನು ಬಳಸಿ, ಕೆಲಸ ಮುಗಿಸಬೇಕೆನ್ನುವಷ್ಟರಲ್ಲಿ ಹರಿ ಕಣ್ಮುಚ್ಚಿದರು. ಅವರ ಕೃತಿ ಆಸೆಯನ್ನು ಪೂರೈಸುವ ಹೊಣೆ ತಮ್ಮ ಪಾಲಿಗೆ ಬಂದಿದೆ. ಅವರ ಆಶೀರ್ವಾದದಿಂದಲೇ ಅದೀಗ ಸಾಧ್ಯವಾಗಿದೆ ಎಂದು ನಾಗಲಕ್ಷ್ಮಿ ಹರಿಹರೇಶ್ವರ ನಂಬಿದ್ದಾರೆ.
ಕನ್ನಡದ ಕೃತಿ, ಕನ್ನಡಿಗರಿಗಷ್ಟೇ ಸೀಮಿತ. ಇದನ್ನು ಇಂಗ್ಲಿಷಿನಲ್ಲಿ ಅನುವಾದಿಸಿದರೆ ಇಡೀ ಪ್ರಪಂಚದಾದ್ಯಂತ ಹರಿಯ ಅಭಿಮಾನಿಗಳು, ಸ್ನೇಹಿತರು, ಬೈಬಲ್ ಬಗ್ಗೆ ಆಸಕ್ತಿ ಇರುವವರು ಓದಬಹುದು ಎಂಬ ಕಾರಣಕ್ಕಾಗಿ ಹರಿ ಅವರ ಗುರುಗಳೂ ಆದ ನಿವೃತ್ತ ಪ್ರಾಧ್ಯಾಪಕ ಎಚ್.ಜಿ. ಸುಬ್ಬರಾವ್ ಅವರ ಕಡೆಯಿಂದ ಅನುವಾದ ಮಾಡಿಸಿದ್ದಾರೆ.
ಇಂದು ಎಲ್ಲಾ ಜನಾಂಗಗಳ ಮೇಲೆ ಒಂದಲ್ಲ ಒಂದು ರೀತಿ ಕ್ರೈಸ್ತಧರ್ಮ ಪ್ರಭಾವ ಬೀರಿದೆ. ಧಾರ್ಮಿಕ ಆಸಕ್ತರು, ಅಧ್ಯಯನಪ್ರಿಯರು ಬೈಬಲ್ಲಿನ ಹಳೆಯ ಮತ್ತು ಹೊಸ ಒಡಂಬಡಿಕೆಗಳ ಮೇಲೆ ಕಣ್ಣಾಡಿಸುತ್ತಾರೆ. ಹೊಸ ಒಡಂಬಡಿಕೆಯ ಮೊದಲ ನಾಲ್ಕು ವಿಭಾಗಗಳು ಒಂದೊಂದೂ ಪ್ರತ್ಯೇಕ ಪುಸ್ತಕ ರೂಪದಲ್ಲಿದ್ದು, ಅವು ಯೇಸುವಿನ ಜೀವನ ಚಿತ್ರಣಕ್ಕೆ ಮೀಸಲಿಟ್ಟ ಕಥಾನಕಗಳಾಗಿವೆ. ಇವೇ ಜನಪ್ರಿಯ ಸುವಾರ್ತೆಗಳು (ಗಾಸ್ಪೆಲ್). ಸಾಂಪ್ರದಾಯಿಕವಾಗಿ ತಮ್ಮ ತಮ್ಮ ಕರ್ತೃಗಳ ಸಂತರ ಅಭಿದಾನವನ್ನು ಹೊತ್ತ ಮ್ಯಾಥ್ಯೂ, ಮಾರ್ಕ್, ಲ್ಯೂಕ್ ಮತ್ತು ಜಾನ್ನ ಸುವಾರ್ತೆಗಳು ಹೊಸ ಬಡಂಬಡಿಕೆಯ ಪ್ರಧಾನ ಉಸಿರು. ಬಹಳ ಕಾಲದವರೆಗೆ 'ಕಿಂಗ್ ಜೇಮ್ಸ್ ವರ್ಷನ್' ಎಂಬ ಬೈಬಲ್ನ ಆವೃತ್ತಿಯೇ ಅಧಿಕೃತವಾಗಿ ಪ್ರಚಾರದಲ್ಲಿತ್ತು. ಪ್ರವರ್ತಮಾನದ ಭಾಷೆ ನುಡಿಗಟ್ಟು ಮತ್ತು ಶೈಲಿಯನ್ನು ಅನುಸರಿಸಿ, ಕಾಲಕಾಲಕ್ಕೆ ಬೈಬಲ್ನ ಇಂಗ್ಲಿಷ್ ಅನುವಾದದ ವಿವಿಧ ಪರಿಷ್ಕೃತ ಆವೃತ್ತಿಗಳು ಬಂದಿವೆ. ಕನ್ನಡದ ಈ ಕೃತಿಗೆ ಸಾಹಿತಿ ಡಾ.ಬಿ.ಎಸ್. ತಲ್ವಾಡಿ, ಇಂಗ್ಲಿಷ್ ಕೃತಿಗೆ ಪುತ್ರಿ ನಂದಿನಿ ಹರಿಹರೇಶ್ವರ ಮುನ್ನುಡಿ ಬರೆದಿದ್ದಾರೆ.
10 ದಿನದಲ್ಲಿ ಸಿದ್ಧವಾಯ್ತು!
ಪ್ರೊ.ಎಚ್.ಜಿ. ಸುಬ್ಬರಾವ್ (92) ಅವರು ಹರಿ ಅವರ ಕೃತಿಯನ್ನು ಅಚ್ಚುಕಟ್ಟಾಗಿ ಅನುವಾದಿಸಿ, ಹಸ್ತಪ್ರತಿಯನ್ನು ನಾಗಲಕ್ಷ್ಮಿ ಅವರ ಕೈಗಿತ್ತ ಕೆಲವೇ ದಿನಗಳಲ್ಲಿ ನಿಧನರಾದರು. '2012ರ ಸೆಪ್ಟಂಬರ್ನಲ್ಲಿ ಅನುವಾದದ ಬಗ್ಗೆ ತಿಳಿಸಿದೆವು. ನವೆಂಬರ್ನಲ್ಲಿ ಅನುವಾದಿಸಿಕೊಟ್ಟರು. ಡಿ.24 ರಂದು ನಿಧನರಾದರು. ಅವರಿಗೆ ಹೇಗಾದರೂ ಮಾಡಿ ಗುರು ಕಾಣಿಕೆ ಸಲ್ಲಿಸಬೇಕು ಎಂದು ನಿರ್ಧರಿಸಿದ ನಾಗಲಕ್ಷ್ಮಿ ಅವರು ಸುಬ್ಬರಾವ್ರ 'ಗೀತಾಸಾರ ಸಂದೇಶ' ಕೃತಿಯನ್ನು ಹತ್ತೇ ದಿನಗಳಲ್ಲಿ ಮುದ್ರಿಸಿ, ವೈಕುಂಠ ಸಮಾರಾಧನೆಗೆ ಬಂದಿದ್ದವರಿಗೆಲ್ಲಾ ಉಚಿತವಾಗಿ ಹಂಚಿ, ಸಾರ್ಥಕತೆ ಮೆರೆದರು.
-ಅಂಶಿ ಪ್ರಸನ್ನಕುಮಾರ್
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.