ಕಾಡಿನಲ್ಲಿ ಬೆಕ್ಕು
ಬೆಕ್ಕೊಂದು ಆಹಾರ ಹುಡುಕಿಕೊಂಡು ಮನೆಮನೆ ಸುತ್ತಾಡಿತು. ಎಲ್ಲಿಯೂ ಆಹಾರ ಸಿಗಲಿಲ್ಲ. ಕೊನೆಗೆ ಅದು ಕಾಡಿನ ದಾರಿ ಹಿಡಿಯಿತು. ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿ ಒಂದು ತೋಟ ಕಾಣಿಸಿತು. ಅಲ್ಲಿ ಇಲಿಗಳು ಓಡಾಡುವುದನ್ನು ನೋಡಿತು. ಹಸಿವಿನಿಂದ ಬಳಲಿದ್ದ ಬೆಕ್ಕಿಗೆ ಆನಂದವಾಗಿಹೋಯಿತು. ಛಂಗನೆ ನೆಗೆದು ಎರಡು ಇಲಿಗಳನ್ನು ಒಂದೇ ಬಾರಿಗೆ ಹಿಡಿದು ತಿಂದು ಮುಗಿಸಿತು. ಒಮ್ಮೆ ಕಾಡಿನ ದಾರಿ ಕಂಡ ಬೆಕ್ಕು ದಿನ ಬಿಟ್ಟು ದಿನ ಇಲಿ ಬೇಟೆಗೆ ಹೋಗಲಾರಂಭಿಸಿತು.
ಹೀಗೆ ಹೋಗುತ್ತಿರುವಾಗ ಒಂದು ದಿನ ಎದುರಿನಿಂದ ಕಾಡಿನ ಬೆಕ್ಕು ಬರುತ್ತಿರುವುದನ್ನು ನೋಡಿತು. ಹತ್ತಿರ ಬಂದ ಕಾಡಿನ ಬೆಕ್ಕು 'ನಿನ್ನದು ಯಾವ ಊರು?' ಎಂದು ವಿಚಾರಿಸಿತು. 'ನಾನು ಇಲ್ಲೇ ಹತ್ತಿರದ ಊರಿನಿಂದ ಬಂದಿದ್ದೇನೆ. ಅಲ್ಲಿ ತಿನ್ನಲು ಏನೂ ಸಿಗುತ್ತಿಲ್ಲ. ಇಲಿಗಳಂತೂ ಇಲ್ಲವೇ ಇಲ್ಲ. ಅಲ್ಲಿ ಸಾಕಷ್ಟು ಇಲಿಗಳು ಸಿಕ್ಕಿದ್ದರೆ ನಾನೇಕೆ ಇಲ್ಲಿಗೆ ಬರುತ್ತಿದ್ದೆ?' ಎಂದಿತು ಊರ ಬೆಕ್ಕು. ಇಬ್ಬರೂ ಸ್ನೇಹಿತರಾದವು.
'ಊರ ಇಲಿಗಳೆಲ್ಲ ಏನಾದವು?' ಕಾಡಿನ ಬೆಕ್ಕು ಕೇಳಿತು.
'ಹಿಂದೆ ಮಳೆ-ಬೆಳೆ ಉತ್ತಮವಾಗಿತ್ತು. ದವಸ-ಧಾನ್ಯ ಎಲ್ಲಿ ತುಂಬಿಡುವುದೆಂದು ಜನರಿಗೆ ಯೋಚನೆಯಾಗುತ್ತಿತ್ತು. ಧಾನ್ಯಗಳ ಮೂಟೆಗಳನ್ನು ಒಂದು ಕಡೆ ಪೇರಿಸಿಡುತ್ತಿದ್ದರು. ಅವುಗಳ ಸಂದಿಗಳಲ್ಲಿ ಇಲಿಗಳು ಸಮೃದ್ಧವಾಗಿರುತ್ತಿದ್ದವು. ಸಂತೃಪ್ತಿಯ ಕಾಲ ಅದು. ಈಗ ಬೆಳೆ ಬೆಳೆಯುವುದೂ ಕಡಿಮೆ, ದವಸ-ಧಾನ್ಯಗಳನ್ನು ತುಂಬ ಜೋಪಾನವಾಗಿ ಮುಚ್ಚಿಡುತ್ತಾರೆ. ಇಲಿಗಳು ಹೋಗಲಿ ಒಂದು ಇರುವೆಯೂ ನುಗ್ಗಲು ಸಾಧ್ಯವಾಗುವುದಿಲ್ಲ. ಹಾಗಾಗಿ ಇಲಿಗಳೂ ಕಾಡು ಸೇರಿವೆ' ಎಂದಿತು ಊರ ಇಲಿ.
'ದವಸ-ಧಾನ್ಯ ಇಲ್ಲದಿದ್ದರೇನು? ಊರಿನಲ್ಲಿ ಹಾಲು-ಮೊಸರು ಯಥೇಚ್ಛವಾಗಿರಬೇಕಲ್ಲ? ಅದನ್ನೇ ತಿಂದು ಹಾಯಾಗಿರಬಹುದಲ್ಲ?' ಎಂದಿತು ಕಾಡಿನ ಬೆಕ್ಕು.
'ಅಯ್ಯೋ! ಈಗಿನ ಜನ ದನ-ಎಮ್ಮೆಗಳನ್ನು ಸಾಕುವುದೇ ಕಡಿಮೆಯಾಗಿದೆ. ದನಕರುಗಳಿಗೆ ಕುಡಿಯಲು ನೀರಿಲ್ಲ, ತಿನ್ನಲು ಮೇವಿಲ್ಲ. ಜನರಿಗೇ ಕುಡಿಯಲು ನೀರಿಲ್ಲ, ಇನ್ನು ದನಕರುಗಳಿಗೆಲ್ಲಿಂದ ಬರಬೇಕು? ಜನರೂ ಊರು ಬಿಟ್ಟು ನಗರ ಸೇರುತ್ತಿದ್ದಾರೆ. ಊರಿನಲ್ಲಿರುವ ಕೆಲವೇ ಕೆಲವು ಜನರು, ತಮಗೆ ಬೇಕಾದಷ್ಟೇ ಹಾಲನ್ನಿಟ್ಟುಕೊಂಡು ಉಳಿದದ್ದನ್ನು ಡೈರಿಗೆ ಮಾರುತ್ತಾರೆ. ಹಿಂದೆ ನಮ್ಮ ಪೂರ್ವಿಕರು ಯಥೇಚ್ಛವಾಗಿ ಹಾಲು, ಮೊಸರನ್ನು ಉಂಡಿದ್ದಾರೆ. ಈಗ ಅದೆಲ್ಲ ಕನಸು. ಇದಕ್ಕೆಲ್ಲ ಕಾರಣ ಮನುಷ್ಯರ ದುರಾಸೆ. ಸಕಲ ಜೀವರಾಶಿಗೂ ಆಹಾರ ಸಿಗಬೇಕಾದರೆ ಮಳೆ ಸರಿಯಾಗಿ ಆಗಬೇಕು. ಆಗ ಗಿಡ-ಮರ ಸೊಂಪಾಗಿ ಬೆಳೆಯುತ್ತದೆ. ಹಣ್ಣು-ಹಂಪಲು ಸಿಗುತ್ತದೆ. ರೈತರು ದವಸ-ಧಾನ್ಯ ಬೆಳೆಯುತ್ತಾರೆ. ಇದರಿಂದ ಪ್ರಾಣಿ-ಪಕ್ಷಿಗಳಿಗೆ ಆಹಾರ ದೊರೆಯುತ್ತದೆ. ಮಳೆಯೇ ಸರಿಯಾಗಿ ಆಗದಿದ್ದರೆ ಯಾವ ಸಸ್ಯಸಂಕುಲವೂ ಬೆಳೆಯುವುದಿಲ್ಲ. ಸಸ್ಯ ಸಂಕುಲವಿಲ್ಲವೆಂದರೆ ಜೀವಿಗಳು ಉಳಿಯುವುದಿಲ್ಲ' ಎಂದಿತು ಊರ ಬೆಕ್ಕು.
'ನೀನು ಬಹಳ ತಿಳಿದುಕೊಂಡಿದ್ದೀಯ. ನಿನ್ನ ಊರನ್ನು ನಾನು ನೋಡಬೇಕು. ನಿನ್ನ ಜತೆ ಬರಲೇ?' ಎಂದಿತು ಕಾಡಿನ ಬೆಕ್ಕು. 'ಖಂಡಿತವಾಗಿ ಬಾ, ನನ್ನೂರಿನ ಬಗ್ಗೆ ತಿಳಿಯುವಿಯಂತೆ' ಎಂದು ಕಾಡಿನ ಬೆಕ್ಕನ್ನು ಕರೆದುಕೊಂಡು ಊರಿನತ್ತ ಹೊರಟಿತು ಊರ ಬೆಕ್ಕು.
- ಸಾ.ಮ. ಶಿವಮಲ್ಲಯ್ಯ,
ರಾಮನಗರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.