ನನ್ನಿಷ್ಟದ ವರ್ಮ ಜಗತ್ತು!
ಸಿನಿಮಾ ಬರವಣಿಗೆಯನ್ನು ಸಾಹಿತ್ಯಲೋಕ ಗಂಭೀರವಾಗಿ ಪರಿಗಣಿಸಿದ್ದು ಕಡಿಮೆ. ಮಾಸ್, ಕಮರ್ಷಿಯಲ್ ಹಾಗೂ ಜನಪ್ರಿಯ ಲೇಬಲ್ಗಳನ್ನು ಹೊತ್ತ ಚಿತ್ರಗಳ ನಡುವೆ ಮೂಲೆಗುಂಪು ಆಗುತ್ತಿರುವ ಆರ್ಟ್ ಸಿನಿಮಾಗಳಂತೆ ಸಿನಿಮಾ ಸಾಹಿತ್ಯ ಕೂಡ. ಹಾಗಂತ ಸಿನಿಮಾ ಮಾಧ್ಯಮವನ್ನು ತೆಗೆದು ಹಾಕುವಂತೆಯೂ ಇಲ್ಲ. ಏಕಕಾಲಕ್ಕೆ ವಿಜ್ಞಾನ, ವಾಣಿಜ್ಯ, ಕಲೆ, ಸಮಾಜ ಎಲ್ಲವನ್ನೂ ತನ್ನೊಡಲಿನಲ್ಲಿ ಹುದುಗಿಸಿಕೊಂಡು ತ್ವರಿತಗತಿಯಲ್ಲಿ ಪ್ರಭಾವಿಸುವ ಮಾಧ್ಯಮ ಸಿನಿಮಾ.
ಆದರೂ, ಸಿನಿಮಾ ಬರವಣಿಗೆಗೆ ಮಡಿವಂತಿಕೆಯ ಮೈಲಿಗೆ ಅಂಟಿರುವುದು ಯಾಕೆ? ಎನ್ನುವ ಪ್ರಶ್ನೆ ಕಾಡುತ್ತದೆ. ಇದರ ನಡುವೆಯೇ ಸಿನಿಮಾ ಮತ್ತು ಅದರಲ್ಲಿ ತೊಡಗಿಸಿಕೊಂಡವರ ಕುರಿತು ಅತ್ಯಂತ ಆಪ್ತವಾದ ಲೇಖನ, ವರದಿ, ಕೃತಿಗಳು ಮೂಡಿಬರುತ್ತಲೇ ಇವೆ. ಸಂತಸ, ಸಂಭ್ರಮ, ರೋಚಕತೆ, ರೋಮಾಂಚನ, ನೋವು, ಸಂಕಟ, ಸುಖ- ದುಃಖ, ಗಾಸಿಪ್, ಸ್ಟಾರ್ಡಮ್... ಹೀಗೆ ಎಲ್ಲವನ್ನೂ ತನ್ನ ಅಂತರಂಗದಲ್ಲಿ ಬಚ್ಚಿಟ್ಟುಕೊಂಡಿರುವ ಸಿನಿಮಾ ಅಥವಾ ಸಿನಿಮಾ ಮಂದಿಯ ಬದುಕಿನ ಚಿತ್ರಣಗಳು ಅಕ್ಷರ ರೂಪಕ್ಕಿಳಿದಾಗ ನಿಬ್ಬೆರಗಾಗಿ ಓದುತ್ತೇವೆ. ಖ್ಯಾತ ನಿರ್ದೇಶಕ ರಾಮ್ಗೋಪಾಲ್ ವರ್ಮ ಕುರಿತು ಬಂದಿರುವ 'ನನ್ನಿಷ್ಟ' ಕೃತಿ ಕೂಡ ಹಾಗೆ ಬೆರಗಿನಿಂದ ಒಂದೇ ಸಿಟಿಂಗಿನಲ್ಲಿ ಓದಿಸಿಕೊಳ್ಳುತ್ತದೆ. ತೆಲುಗಿನ 'ನಾ ಇಷ್ಟಂ' ಕೃತಿಯನ್ನು ಲೇಖಕ ಸೃಜನ್ 'ನನ್ನಿಷ್ಟ' ಹೆಸರಿನಲ್ಲಿ ಕನ್ನಡಕ್ಕಿಳಿಸಿದ್ದಾರೆ.
ಓದಿ ಮುಗಿಸಿದಾಗ ರಾಮ್ಗೋಪಾಲ್ ವರ್ಮ ಎಂಬ ಉದ್ದ ಹೆಸರಿನ ಗಿಡ್ಡ ವ್ಯಕ್ತಿಯ ವಿಕ್ಷಿಪ್ತ ವ್ಯಕ್ತಿತ್ವದ ಸಂಕ್ಷಿಪ್ತ ರೂಪವೊಂದನ್ನು ಕಣ್ಣಾರೆ ಕಂಡ ಅನುಭವಕ್ಕೆ ಪಾತ್ರರಾಗುತ್ತೇವೆ. ಇಲ್ಲಿ 'ವಿಕ್ಷಿಪ್ತ' ಎನ್ನುವ ಮಾತನ್ನು ಹೇಗೆ ಬೇಕಾದರೂ ಅರ್ಥೈಸಿಕೊಳ್ಳಬಹುದು. ಒಳ್ಳೆಯವನಾ? ಕೆಟ್ಟವನಾ? ದುರಹಂಕಾರಿಯಾ, ಅಧ್ಯಾತ್ಮವಾದಿಯಾ, ಅಸ್ತಿಕನಾ, ನಾಸ್ತಿಕನಾ, ಮೋಸಗಾರನಾ, ಪೋಲಿನಾ, ಸ್ಟ್ರೀಟ್ ರೌಡಿನಾ, ಭೂತ, ಪ್ರೇತ ಎಂದು ಹೆದರಿಸುವ ಅಘೋರಿಯಾ... ಹ್ಞೂಂ ನೀವೇನೂ ಬೇಕಾದರೂ ಅಂದುಕೊಳ್ಳಿ. ವರ್ಮಗೆ ಯಾವುದೇ ಅಭ್ಯಂತರವಿಲ್ಲ. ಯಾಕೆಂದರೆ ಆತನ ಜಗತ್ತನ್ನು ಅರ್ಥಮಾಡಿಕೊಳ್ಳುವುದಕ್ಕೋ ಅಥವಾ ಆತನ ಲೋಕದ ಪ್ರವೇಶಕ್ಕೆ ನಿಮಗೆ ಅವಕಾಶವಿಲ್ಲ. ಆತನೂ ನಿಮ್ಮ ಜಗತ್ತಿಗೆ ಬರಲಾರ! 'ನಿಮ್ಮ ಜಗತ್ತಿನಲ್ಲಿ ನೀವಿರಿ, ನನ್ನ ಜಗತ್ತಿನಲ್ಲಿ ನಾನಿರುತ್ತೇನೆ' ಎನ್ನುತ್ತಾನೆ. ಇದು ಈತನ ವ್ಯಕ್ತಿತ್ವದ ಒಟ್ಟಾರೆ ಮನಸ್ಥಿತಿಯಾ? ಗೊತ್ತಿಲ್ಲ. ಆದರೆ ವರ್ಮನಂಥ ಭಿನ್ನ ಕ್ಯಾರೆಕ್ಟರ್ವೊಂದನ್ನು ಲೇಖಕ ಸೃಜನ್ ಓದುಗರರ ಮುಂದಿಟ್ಟಿದ್ದಾರೆ.
ಹಾಗಂತ ಇದು ಆರ್ಜಿವಿಯ ಪೂರ್ಣ ಪ್ರರ್ಮಾಣದ ಜೀವನ ಚರಿತ್ರೆಯಲ್ಲ. ಆತನ ಜೀವನದಲ್ಲಿ ನಡೆದ ಕೆಲ ಆಕಸ್ಮಿಕ ತಿರುವುಗಳು, ರೋಚಕ ಮತ್ತು ಅಚ್ಚರಿ ಘಟನೆಗಳನ್ನು ಮಾತ್ರ ವರ್ಮರ ಮಾತಿನಲ್ಲೇ ಸೃಜನ್ ದಾಖಲಿಸುತ್ತಾರೆ. ಹೀಗಾಗಿ ಆತನ ಹೆಂಡತಿ, ಮಕ್ಕಳು, ಸಂಸಾರ, ಪ್ರೀತಿ, ಪ್ರೇಮ ಅಂತ ತೀರಾ ವೈಯಕ್ತಿಕ ವಿಷಯಗಳನ್ನು ಹುಡುಕಲು ಹೊರಟರೆ, 'ದಯವಿಟ್ಟು ಈ ಕೃತಿಯಿಂದ ಹೊರಗಿದ್ದು ಬಿಡಿ' ಎನ್ನುತ್ತಾರೆ ವರ್ಮ.
ಚಿತ್ರರಂಗದವರ ಕುರಿತು ನಿರ್ದಿಷ್ಟವಾಗಿ ಮಾತನಾಡಲು ಕನಿಷ್ಠ ಅವರ ಏಳೆಂಟು ಚಿತ್ರಗಳನ್ನಾದರೂ ನೋಡಿರಲೇಬೇಕು. ಆದರೆ ವರ್ಮ ವಿಚಾರದಲ್ಲಿ ಇದು ಪೂರ್ತಿ ಉಲ್ಟಾ. ಈತನನ್ನು ಅರ್ಥ ಮಾಡಿಕೊಳ್ಳಲು, ವರ್ಮ ಚಿತ್ರಗಳನ್ನು ನೋಡಬೇಕೆಂಬ ಷರತ್ತಿಲ್ಲ. ಆತನ ಸಂದರ್ಶನವೋ, ಲೇಖನ, ಸುದ್ದಿ ಅಥವಾ ಟಿವಿಗಳಲ್ಲಿ ಬರುವ ಆತನ ಚಿತ್ರಗಳ ಟ್ರೈಲರ್ಗಳನ್ನು ಒಮ್ಮೆ ನೋಡಿದರೆ ಸಾಕು. ಹಾಗೆ 'ನನ್ನಿಷ್ಟ' ಕೃತಿ ಓದಿದವರು ವರ್ಮ ಜಗತ್ತು ಗೊತ್ತಿಲ್ಲದವರೂ 'ಐ ನೋ ಆರ್ಜಿವಿ' ಎಂದು ಧೈರ್ಯವಾಗಿ ಹೇಳಬಹುದು. ಹಾಗಂತ ವರ್ಮ ನಮಗೆ ಅರ್ಥವಾಗಿಬಿಟ್ಟ ಎಂದರೆ ನಮ್ಮಷ್ಟು ಮೂರ್ಖರು ಬೇರೊಬ್ಬರಿಲ್ಲ. 'ಹ್ಯಾಪಿ ಬರ್ತ್ ಡೇ' ಶುಭಾಷಯವನ್ನು 'ಹ್ಯಾಪಿ ಡೆತ್ ಡೇ' ಎಂದು ಭಾವಿಸುವ ಆರ್ಜಿವಿಯನ್ನು ಅರ್ಥೈಸಿಕೊಳ್ಳುವುದು ಅಷ್ಟು ಸುಲಭವಲ್ಲ. ಆತನನ್ನು ಅರ್ಥ ಮಾಡಿಕೊಳ್ಳುವುದು ಸ್ವತಃ ವರ್ಮನಿಗೂ ಬೇಕಿಲ್ಲ. ಯಾಕೆಂದರೆ 'ಸಾಮಾಜಿಕ ಹೊಣೆಗಾರಿಕೆ, ಕೌಟುಂಬಿಕ ಮೌಲ್ಯಗಳು, ಆದರ್ಶಗಳು, ಮದುವೆ, ಮಕ್ಕಳು, ಸಂಸಾರ ಅಂತ ನೀವು ಮಾತನಾಡಲು ಶುರು ಮಾಡಿದರೆ ನಾನು ಕಣ್ಮುಚ್ಚಿಕೊಂಡು ಮಲಗಲು ಸಿದ್ಧನಾಗುತ್ತೇನೆ. ಬೈ...' ಎನ್ನುವ ಉಡಾಫೆ, ಬೇಜವಾಬ್ದಾರಿ ವರ್ಮ ಇಲ್ಲಿದ್ದಾನೆ. ಆದರೆ, 'ಅವನಿಗೆ ಜಗತ್ತಿನಲ್ಲಿ ಯಾವುದರ ಮೇಲೂ ಮೋಹವಿಲ್ಲ. ನಿರಾಸಕ್ತಿ ಜೀವಚ್ಛವವಾಗಿದ್ದಾನೆ' ಎಂದು ತನ್ನ ಗೆಳೆಯ ಸತ್ಯೇಂದ್ರನ ಬಗ್ಗೆ ಹಾಗೂ ಹಿರಿಯ ನಿರ್ದೇಶಕ ಬಸು ಚಟರ್ಜಿ ಕುರಿತು, 'ಅವರ ದನಿ ಕೇಳಿದ್ದು ಅದೇ ಕೊನೆಯ ಸಲ. ಆಮೇಲೆ ಅವರ ಹೆಸರೂ ಕೇಳಲಿಲ್ಲ. ಈಗಲೂ ನನಗೆ ಅವರ ಕುರಿತು ಅಗೌರವವಾಗಿ ನಡೆದುಕೊಂಡ ಬಗ್ಗೆ ನೋವಿದೆ' ಎಂದು ಹೇಳಿಕೊಳ್ಳುವ ಭಾವುಕ ವ್ಯಕ್ತಿ ವರ್ಮನಲ್ಲಿದ್ದಾನೆ.
ಆರ್ಜಿವಿ ಎಂದರೆ ಕೇವಲ ರಾಮ್ಗೋಪಾಲ್ ವರ್ಮ ಅಲ್ಲ. ಹಾಕಿ ಸ್ಟಿಕ್, ಸೈಕಲ್ ಚೈನ್, ರಾಡುಗಳ ಬಗ್ಗೆ ಕ್ರೇಜು ಇಟ್ಟುಕೊಂಡಿರುವ ಸ್ಟ್ರೀಟ್ ರೌಡಿ, 'ನಿದ್ದೆ ಬಾರದ ರಾತ್ರಿಗಳಲ್ಲಿ ಕೈಯಲ್ಲಿದ್ದ ಪುಸ್ತಕವೇ ಆಕೆಯಾಗಬಾರದೆ' ಎಂದು ಕಾಲೇಜು ಬಳಿ ನೋಡಿದ ಗಾರೆ ಕೆಲಸದ ಹುಡುಗಿ ಬಗ್ಗೆ ಕನಸು ಕಾಣುವ ರಸಿಕ, ಬ್ರೂಸ್ ಲೀಯನ್ನು ಆರಾಧಿಸುತ್ತಲೇ ಆತನ ಥಿಯರಿಯನ್ನು ನೆನಪಿಸಿಕೊಳ್ಳುವ ಫಿಲಾಸಫರ್, 'ನಾನು ನಾಸ್ತಿಕ' ಎನ್ನುತ್ತಲೇ 'ಆಸ್ತಿಕವಾದವನ್ನು ಬಂಡವಾಳ ಮಾಡಿಕೊಂಡೆ' ಎಂದು ಬೀಗುವ ವ್ಯಕ್ತಿ, ಸ್ಟಾರ್ಟ್- ಕ್ಯಾಮೆರಾ- ಆ್ಯಕ್ಷನ್ ಎನ್ನುವ ಬದಲು 'ಆರ್ಡರ್ ಸಾರ್' ಎಂದು ತನ್ನ ಅಸಿಸ್ಟೆಂಟ್ನಿಂದಲೇ ಬೈಸಿಕೊಂಡ ಪೆದ್ದು ನಿರ್ದೇಶಕ, ನಾನು ಆ ಚಿತ್ರದಿಂದ ಹೇಗೆ ಗೆದ್ದೆ ಗೊತ್ತಾ? ಎಂದು ತನ್ನ ಬೆನ್ನನ್ನೇ ತಾನೇ ತಟ್ಟಿಕೊಳ್ಳುವ, 'ಯಾವುದಕ್ಕೂ ಭಯ ಬೀಳಬೇಡಿ' ಎನ್ನುತ್ತಲೇ ತಾನೇ ಭಯ ಬಿದ್ದ ಪುಕ್ಕಲ, ಸೋಲನ್ನು ಹೆಮ್ಮೆಯಿಂದಲೇ ಹೇಳಿಕೊಳ್ಳುವ, ಗೆಲುವನ್ನು ಆಕಸ್ಮಿಕ ಎನ್ನುವ, ತನ್ನನ್ನು ತಾನು ವ್ಯಂಗ್ಯ ಮಾಡಿಕೊಳ್ಳುವ, ಸಿನಿಮಾಗಳನ್ನು ಹುಚ್ಚನಂತೆ ಪ್ರೀತಿಸುವ ಬೀದಿ ಪೋಲಿ... ಇಂಥ ಹತ್ತಾರು ಮುಖಗಳು ಆರ್ಜಿವಿಯ ವ್ಯಕ್ತಿತ್ವದಲ್ಲಿ ಅಡಗಿವೆ. ಈ ಎಲ್ಲ ಸಂಗತಿಗಳನ್ನು ಲೇಖಕರು ನಮ್ಮ ಮುಂದಿಟ್ಟಿದ್ದಾರೆ.
ಮೌನ, ಸಂಗೀತ, ಬೆಳಕು, ಸೌಂಡ್, ಕತ್ತಲು... ಇಷ್ಟರಲ್ಲೇ ಸಿನಿಮಾ ಮಾಡುವ ತಾಕತ್ತು ವರ್ಮಗಿದೆ. ಕಥೆಗಿಂತ ಅದರ ಕಥನಕ್ಕೆ ಒತ್ತುಕೊಡುವುದು ಆರ್ಜಿವಿ ಸಿನಿಮಾ ಕೃಷಿಯ ವಿಶೇಷತೆ. ಆದರೆ ವರ್ಮ ಬಗ್ಗೆ ಮಾತು ಬಂದರೆ 'ಶಿವ' ಹಾಗೂ 'ಸತ್ಯ' ಚಿತ್ರಗಳ ಬಗ್ಗೆ ಮಾತನಾಡುತ್ತೇವೆ. ಈ ಎರಡು ಚಿತ್ರಗಳ ಕಥೆ ಆತನ ಅನುಭವದ ಚಿತ್ರಣ. ವಿಜಯವಾಡದ ರಾಧಾ ಎಂಬ ರೌಡಿ, 'ಶಿವ'ದ ಭವಾನಿ, ಸ್ವತಃ ವರ್ಮನೇ ಭಾಗವಹಿಸಿದ ನೋಡಿದ ಕೆಲ ಸ್ಟ್ರೀಟ್ ಫೈಟ್ಗಳನ್ನೇ ಚಿತ್ರದಲ್ಲಿ ತಂದಿದ್ದಾರೆ. ಇನ್ನು 'ಸತ್ಯ', ಕತ್ತಲ ಲೋಕದ ಬಗ್ಗೆ ವರ್ಮಗಿದ್ದ ಕುತೂಹಲ, ಕ್ರೇಜಿನಲ್ಲಿ ಮೂಡಿಬಂದ ಚಿತ್ರ. ಈ ಎರಡು ಚಿತ್ರಗಳು ಸೂಪರ್ ಹಿಟ್ ಆಗಿದ್ದು ಮಾತ್ರವಲ್ಲ, ಆತನ ವೃತ್ತಿಜೀವನದ ದೊಡ್ಡ ಶಿಖರಗಳು. ಇದರ ತಾತ್ಪರ್ಯವಿಷ್ಟೆ, ಸಾಹಿತ್ಯ, ಸಿನಿಮಾ ಯಾವುದೇ ಆಗಿರಬಹುದು ತಮ್ಮ ಅನುಭವಗಳನ್ನೇ ತೆರೆ ಮೇಲಿಟ್ಟಾಗ ಗೆದ್ದಿದ್ದಾರೆ. ಇದು ಎಲ್ಲರಿಗೂ ಸಲ್ಲುವ ಮಾತು.
ಅಗ್ನಿ ಶ್ರೀಧರ್ ತಂಡವನ್ನೇ ನೋಡಿ. 'ಆ ದಿನಗಳು', 'ಎದೆಗಾರಿಕೆ' ಚಿತ್ರಗಳು ಅವರಿಗೆ ಕೊಟ್ಟ ಗೆಲುವು 'ತಮಸ್ಸು', 'ಕಳ್ಳರ ಸಂತೆ' ಚಿತ್ರಗಳು ಕೊಡಲಿಲ್ಲ. ಹಾಗಂತ ಈ ಚಿತ್ರಗಳ ರಾಜಕೀಯ ಅಗ್ನಿ ಶ್ರೀಧರ್ಗೆ ಹೊಸದೇನೂ ಅಲ್ಲ. ಆದರೆ ತಮ್ಮ ಅನುಭವಕ್ಕೆ ಬಾರದ ಸಂಗತಿಗಳನ್ನು ಹೇಳಲಿಕ್ಕೆ ಹೊರಟಾಗ ಪರಕೀಯ ಎನ್ನಿಸುತ್ತವೆ. ಕೇಳಿಸಿಕೊಳ್ಳುವವರಿಗೆ ಮಾತ್ರವಲ್ಲ, ಸ್ವತಃ ಹೇಳಿದವನಿಗೂ! ಈ ಹಿನ್ನೆಲೆಯಲ್ಲಿ ಸ್ಕ್ರೀನ್ನಲ್ಲಿ ಕಾಣುವ ವರ್ಮ, 'ನನ್ನಿಷ್ಟ' ಕೃತಿಯ 'ರಾಮೂಯಿಸಂ' ಅನ್ನು ಅರ್ಥ ಮಾಡಿಕೊಳ್ಳಬೇಕಿದೆ. "It is a peculiar feature of complex systems, both societal and biological, that they exhibit extreme and frequently unpredictable nonlinear behavior' - ಇದು ಆತನ ಕೊರಳ ಗೆಳೆಯ ಸತ್ಯೇಂದ್ರ, ಆರ್ಜಿವಿ ಪುಸ್ತಕಕ್ಕೆ ಬರೆದ ಲೇಖನದ ಆರಂಭದ ಸಾಲು. 'ನಾನು ನನ್ನಿಷ್ಟದಂತೆ ಬದುಕಿದೆ. ನನ್ನಿಷ್ಟದಂತೆ ಉಳಿದೆ. ನನ್ನಿಷ್ಟದ ಕೆಲಸ ಕಷ್ಟವಾದರೂ ಪ್ರೀತಿಯಿಂದ ಮಾಡಿದೆ' ಎನ್ನುವ ಆರ್ಜಿವಿಯ ಮಾತುಗಳನ್ನು ಓದಿದಾಗ ಆತನ ಇಷ್ಟ-ನಷ್ಟಗಳು ನಿಮಗಿಷ್ಟವಾದರೆ ಸೃಜನ್ ಅವರ 'ನನ್ನಿಷ್ಟ' ಕೃತಿ 'ನಮ್ಮಿಷ್ಟ'ವೂ ಆಗುತ್ತದೆ.
ಕೃತಿ: ರಾಮ್ಗೋಪಾಲ್ ವರ್ಮ
ಕನ್ನಡಕ್ಕೆ: ಸೃಜನ್
ಪ್ರ: ಪಲ್ಲವ ಪ್ರಕಾಶನ
ಪುಟಗಳು: 168, ಬೆಲೆ: 200
= ಆರ್. ಕೇಶವಮೂರ್ತಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.