ನಾದದಲ್ಲೇ ಲೀನವಾಯ್ತು ಸ್ವರ ರತ್ನ
'ಶಿಂಗಪೋಯಂ ಕೋಲಂ' ಪಾಂಡಿಚೇರಿ ಬಳಿಯಿರುವ ಚಿಕ್ಕ ರೇಲ್ವೆ ನಿಲ್ದಾಣ. ನಿಲ್ದಾಣದಲ್ಲಿ ಕುರುಡು ಕುರುಡಾದ ಮಂದವಾದ ಬೆಳಕು. ರಾತ್ರಿ ಪಾಳಿಯ ರೇಲ್ವೆ ಸಿಬ್ಬಂದಿಯನ್ನು ಬಿಟ್ಟರೆ ಅಲ್ಲಿ ಇಲ್ಲಿ ಮುರುಕು ಬೆಂಚಿನ ಮೇಲೆ ಯಾರೋ ಒಂದಿಬ್ಬರು ಮಲಗುವ ಸಿದ್ಧತೆಯಲ್ಲಿದ್ದರು. 1937 ನೇ ಇಸ್ವಿಯ ಅಕ್ಟೋಬರ್ 27 ರ ರಾತ್ರಿ. ನಿಲ್ದಾಣದ ಗಡಿಯಾರ ಹನ್ನೊಂದು ಗಂಟೆ ತೋರಿಸುತ್ತಿತ್ತು. ಕೆಲವೇ ಕ್ಷಣಗಳಲ್ಲಿ ಚೆನ್ನೈನಿಂದ ಪಾಂಡಿಚೇರಿಗೆ ಸಾಗುತ್ತಿದ್ದ ರೈಲು ಪ್ರತಿದಿನದಂತೆ ಜೋರಾಗಿ ಶಬ್ದ ಮಾಡುತ್ತ ಕತ್ತಲಿಂದ ಹೊರಬಂದ ಹೆಬ್ಬಾವಿನಂತೆ ಬಂದು ನಿಲ್ದಾಣದಲ್ಲಿ ಸ್ಥಾಪಿತವಾಯಿತು. ಕ್ಷಣಕಾಲ ನೀರವ ನಿಲ್ದಾಣದಲ್ಲಿ ಚಟುವಟಿಕೆ. ಯಾರೋ ಇಳಿದವರು ತಮ್ಮ ಚೀಲವನ್ನು ಹೊತ್ತು ಬಿರಬಿರನೆ ಸಾಗಿದರು.
ಆದರೆ ರೈಲು ಇನ್ನೇನು ಹೊರಡಬೇಕೆನ್ನುವಷ್ಟರಲ್ಲಿ ಇಳಿಯಲೋ ಬೇಡವೋ ಎಂಬಂತೆ ಯಾವುದೋ ಗೊಂದಲದಲ್ಲಿದ್ದಂತೆ ಆ ವ್ಯಕ್ತಿ ಕೋಲನ್ನೂರಿ ಕೆಳಗಿಳಿದರು. ಅವರ ಮುಖದ ತುಂಬ ಉದ್ವೇಗ. ಎಪ್ಪತ್ತರ ಆಸುಪಾಸಿನ ವ್ಯಕ್ತಿ. ಸಣಕಲು ದೇಹ, ಕೋಲು ಮುಖ, ಕಪ್ಪು ಶೇರವಾನಿ ತೊಟ್ಟು ಉತ್ತರ ಹಿಂದೂಸ್ತಾನದವರಂತೆ ತೋರುತ್ತಿದ್ದರು. ಹೊಟ್ಟೆಯ ಮೇಲೆ ಕೈಯಿಟ್ಟು ಆಗಾಗ್ಗೆ ಜೋರಾಗಿ ಉಸಿರೆಳೆದುಕೊಳ್ಳುತ್ತಿದ್ದರು. ಅವರು ಆ ನಿಲ್ದಾಣದಲ್ಲಿ ಇಳಿಯುವವರಂತಿರಲಿಲ್ಲ. ಅವರ ಜತೆಯೇ ಅದೇ ಬಗೆಯ ಉದ್ವೇಗಲ್ಲಿ ಕೆಳಗಿಳಿದ ಮೂವರು ತಾವು ಇಳಿದೊಡನೆ ಹೊರಟ ರೈಲನ್ನು ನೋಡಿ ನಿರಾಶೆಗೊಂಡು ಉರ್ದು ಭಾಷೆಯಲ್ಲಿ ಏನೋ ಹೇಳುತ್ತಿದ್ದರು. ಮತ್ತೆ ನಿಲ್ದಾಣದಲ್ಲಿ ಕತ್ತಲೊಡನೆ ಮೌನ ಮನೆಮಾಡಿಕೊಂಡಿತು. ಆದರೆ ಈ ವ್ಯಕ್ತಿಗೆ ಅದಾವುದರ ಪರಿವೆಯೂ ಇದ್ದಂತಿರಲಿಲ್ಲ. ಅವರು ಬಡಿಗೆ ಊರುತ್ತ ಅತ್ತಿಂದಿತ್ತ - ಇತ್ತಿಂದತ್ತ ನಡೆಯತೊಡಗಿದರು. ಒಂದರ್ಧ ನಿಮಿಷ ನಡೆಯುತ್ತಲೇ ಸಾಕಾದವರಂತೆ ಭಾರವಾದ ಧ್ವನಿಯಲ್ಲಿ ತಮ್ಮ ಜತೆಗಾರರಿಗೆ ಏನೋ ಹೇಳಿದರು. ತತ್ಕ್ಷಣ ಆ ಮೂವರಲ್ಲೊಬ್ಬನು ತನ್ನ ಬಳಿಯಿದ್ದ ಚೀಲದಿಂದ ಚಂದವಾಗಿ ಹೂವಿನ ಚಿತ್ರವಿದ್ದ ದೊಡ್ಡ ಚಚ್ಚೌಕಾಕಾರದ ಬಟ್ಟೆಯನ್ನು ತೆಗೆದು ಅಲ್ಲೇ ನಿಲ್ದಾಣದ ಮೇಲೆ ಹಾಸಿದರು.
ಅದರ ಮೇಲೆ ಕಾಲನ್ನು ಹಿಂದೆ ಮಡಿಚಿಕೊಂಡು ಕುಳಿತ ಆ ವ್ಯಕ್ತಿ ಜೋರಾಗಿ ಉಸಿರೆಳೆದುಕೊಳ್ಳುತ್ತ ಕಣ್ಣು ಮುಚ್ಚಿ ಕೈಯನ್ನೆತ್ತಿ ಆಗಸದೆಡೆ ನೋಡುತ್ತ, ಮಂದವಾದ ಧ್ವನಿಯಲ್ಲಿ ನಮಾಜು ಮಾಡತೊಡಗಿದರು.ನೀರವವಾದ ಆ ರಾತ್ರಿಯಲ್ಲಿ ಮಧುರವಾದ ಅವರ ಕಂಠದಿಂದ ಹೊರಬಂದ ಕುರ್ಆನ್ ವಾಕ್ಯಗಳಲ್ಲಿ ಹೇಳಲಾಗದ ದೈನ್ಯತೆ. ಐದು ನಿಮಿಷ ನಮಾಜ್ ಮಾಡಿದವರೇ ಆ ವ್ಯಕ್ತಿ ಹಾಡತೊಡಗಿದರು. ಮಧ್ಯರಾತ್ರಿಯ ಗಾಂಭೀರ್ಯವನ್ನು ಹೊತ್ತ ಧೀಮಂತ ರಾಗ 'ದರ್ಬಾರಿ'ಯಲ್ಲಿ ಭಗವಂತನ ನಾಮವನ್ನು ಹಾಡಲು ಪ್ರಾರಂಭಿಸಿದ ಆ ವ್ಯಕ್ತಿ ಕ್ಷಣಾರ್ಧದಲ್ಲಿ ಆ ಸ್ವರಗಳೊಳಗೆ ಮುಳುಗಿಹೋದರು. ಎಂಥ ಭಾವಪೂರ್ಣ ಧ್ವನಿ! ಅವರ ಶರೀರವನ್ನು ನೋಡಿದರೆ ಅಂಥ ಮದ ಭರಿತ ಗಂಭೀರ ಧ್ವನಿ ಹೊರಬಂದಿತೆಂದು ಯಾರಿಗೂ ಊಹಿಸಲು ಸಾಧ್ಯವಿರಲಿಲ್ಲ. ಆದರೆ ಅದು ಕೇವಲ ಅಂತಿಂಥ ಧ್ವನಿಯಲ್ಲ...ಸಂಗೀತ ಸರಸ್ವತಿಯ ಮಂತ್ರ ಸ್ಪರ್ಶವಾದ ಅದ್ಭುತ ಧ್ವನಿ 'ರಾಗ ದರ್ಬಾರಿ' ಧಾರೆಯಾಗಿ ಹರಿಯತೊಡಗಿತು. ಜೇನಿನಂತೆ ಸವಿಯಾದ, ನಯವಾದ, ಅಪ್ರತಿಮ ಆ ಕಂಠಶ್ರೀಯಿಂದ ಹೊರಬಂದ ಆ ಗಾಯನದ ಅಲೆಅಲೆಗಳಲ್ಲಿ ಭಾವ ಸ್ಫುರಿಸುತ್ತಿತ್ತು. ಹೇಳಲಾಗದ ನೋವಿತ್ತು. ಭಕ್ತಿ ರಸವಿತ್ತು. ನೋವಿನಲ್ಲೊಂದು ಆನಂದವಿತ್ತು. ನಿಂತಿದ್ದ ಮೂವರೂ ಆ ಗಾಯನದಲ್ಲಿ ಪ್ರವಹಿಸಿ ಬರುತ್ತಿದ್ದ ಭಾವದೊಳಗೆ ಮುಳುಗಿ ತಡೆಯಲಾಗದೆ ಕಣ್ಣೀರಿಡುತ್ತಿದ್ದರು. ಏನೊಂದು ತಿಳಿಯದೇ ಆಶ್ಚರ್ಯವಾಗಿ ನೋಡುತ್ತ ನಿಂತಿದ್ದ ಆ ರೇಲ್ವೆ ಸಿಬ್ಬಂದಿಯ ಹೃದಯವೂ ಆ ಸ್ವರಮಾಧುರ್ಯಕ್ಕೆ ಕಲಕಿ ಹೋಯಿತು. ನಿದ್ರಿಸುತ್ತಿದ್ದವರೂ ಮಂತ್ರಸ್ಪರ್ಶವಾದಂತೆ ಎದ್ದು ಕುಳಿತು ತಿಳಿಯದೇ ಕಣ್ಣೀರಿಡುತ್ತಿದ್ದರು. ಆದರೆ ಇದೆಲ್ಲವೂ ಕ್ಷಣಕಾಲ- ಕೇವಲ ಸ್ವಲ್ಪ ಕಾಲವಷ್ಟೇ. ಇಡೀ ವಾತಾವರಣವೇ ದರ್ಬಾರಿಯ ನಾದದೊಳಗೆ ಮುಳುಗಿ ಮೈ ಮರೆತಿರುವಾಗ, ಏನಾಯಿತೆಂದು ಅರ್ಥವಾಗುವ ಮೊದಲೇ, ಸುತ್ತ ನಿಂತಿದ್ದವರೆಲ್ಲ ತಮ್ಮ ತಮ್ಮ ಭಾವನಾ ಲೋಕದಿಂದ ಹೊರಬರುವ ಮೊದಲೇ ಆ ವ್ಯಕ್ತಿ ಆ ಹಾಸಿದ್ದ ಬಟ್ಟೆಯ ಮೇಲೆ ಉರುಳಿದ್ದರು. ಗಂಧರ್ವ ಗಾಯನ ಸ್ತಬ್ಧವಾಗಿತ್ತು. ಸಂಗೀತದ ಆ ಸ್ವರ ಮಾಂತ್ರಿಕ ಅನಹತ ನಾದದೊಡನೆ ಒಂದಾಗಿ ತಮ್ಮ ಕೊನೆಯುಸಿರೆಳೆದಿದ್ದರು.
ಯಾರಿವರು? ಈ ನಾದಯೋಗವನ್ನು ಪ್ರತ್ಯಕ್ಷ ತೋರಿಸಿ ಇಂಥ ಪುಣ್ಯತಮ ಮರಣವನ್ನು ಅಪ್ಪಿದ ಮಾಂತ್ರಿಕ ಇನ್ನರೂ ಅಲ್ಲ...ಕಿರಾನಾ ಘರಾಣೆಯ ಕೀರ್ತಿಯನ್ನು ಉತ್ತುಂಗಕ್ಕೇರಿಸಿದ ಸಂಗೀತದ ಅವತಾರ ಪುರುಷ, ಸ್ವರ ರತ್ನ ಉಸ್ತಾದ್ ಅಬ್ದುಲ್ ಕರೀಂ ಖಾನ್.
(ಮುಂದುವರಿಯುವದು)
- ಶ್ರುತಿ ಭಟ್
shrutikbhat@gmail.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.