ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ನಿಮ್ಮಿಷ್ಟದಂತೆಯೇ ವಿಲ್ ಮಾಡಬಹುದು

Mainashree
Updated On : 27 Jul 2013, 3:36 am

-ಕೆ.ಎಸ್. ರಾಮಚಂದ್ರ, ಜೆ.ಪಿ.ನಗರ, ಬೆಂಗಳೂರು
ನನಗೆ ಮೂವರು ಗಂಡುಮಕ್ಕಳು. ಎಲ್ಲರೂ ನೆಮ್ಮದಿಯಾಗಿದ್ದಾರೆ. ನನ್ನ ಜತೆ ಎರಡನೆಯ ಮಗ ಮತ್ತು ಅವನ ಸಂಸಾರ ಇದೆ. ನನ್ನ ಸ್ವಯಾರ್ಜಿತ ಮನೆಯನ್ನು ನನ್ನ ಎರಡನೇ ಮಗನ ಹೆಸರಿಗೆ ವಿಲ್ ಮಾಡಿ, ಅವನು ಅದನ್ನು ಅನುಭವಿಸಿಕೊಂಡಿದ್ದು, ಕಂದಾಯ, ವಿದ್ಯುತ್ ಬಿಲ್ ವಗೈರೆ ಅವನೇ ಕಟ್ಟಬೇಕೆಂದು ತಿಳಿಸಬಹುದೇ? ಅಥವಾ ಬಿಬಿಎಂಪಿಗೆ ಬರೆಯಬೇಕೇ? ಒಂದು ವೇಳೆ ಮನೆ ಮಾರಾಟ ಮಾಡಬೇಕಾದರೆ ಮಾರಿ ಬಂದ ಹಣವನ್ನು ಎಲ್ಲರೂ ಸಮನಾಗಿ ಹೆಚಿಕೊಳ್ಳಬಹುದೆಂದು ವಿಲ್‌ನಲ್ಲಿ ನಮೂದಿಸಬಹುದೇ?
- ನೀವು ಹೇಳಿದಂತೆಯೇ ವಿಲ್ ಮಾಡಬಹುದು. ಬಿಬಿಎಂಪಿಗೆ ಬರೆಯುವ ಅಗತ್ಯವಿಲ್ಲ. ವ್ಯಾಜ್ಯ ಬಂದರೆ ನಿಮ್ಮ ವಿಲ್ ನಕಲನ್ನು ಬಿಬಿಎಂಪಿ ಅಧಿಕಾರಿಗಳಿಗೆ ತೋರಿಸಿದರಾಯಿತು. ಅಲ್ಲದೆ ಮನೆ ಖಾತೆ/ಮಾಲೀಕತ್ವ ನಿಮ್ಮದೇ ಆಗಿರುವುದರಿಂದ ಎಲ್ಲ ಮಕ್ಕಳೂ ಮನೆ ಮಾರಾಟಕ್ಕೆ ಒಪ್ಪಿ ಸಹಿ ಮಾಡಬೇಕು.

ನಿಮ್ಮ ತಾಯಿಗೂ ಹಕ್ಕಿದೆ
-ಟಿ. ಕರಿಯಪ್ಪ, ನಿಟ್ಟುವಳ್ಳಿ, ದಾವಣಗೆರೆ
ನನ್ನ ತಂದೆ, ಚಿಕ್ಕಪ್ಪ ಹಾಗೂ ನನ್ನ ತಾಯಿಯ ತಂದೆ ಒಟ್ಟು ಕುಟುಂಬದಿಂದ ಬಂದು ಆಸ್ತಿಯನ್ನು ಖರೀದಿ ಮಾಡಿ, ನನ್ನ ತಾಯಿಯ ತಂದೆಯ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ. ಎಲ್ಲರೂ ಆಸ್ತಿ ವಿಭಾಗ ಮಾಡಿಕೊಂಡು ವಾಸಿಸುತ್ತಿದ್ದು ಈಗ ಎಲ್ಲರೂ ಮರಣ ಹೊಂದಿರುತ್ತಾರೆ. ಈಗ ನನ್ನ ತಾಯಿಯ ಸಹೋದರರು ತಮ್ಮ ಹೆಸರಿಗೆ ಖಾತೆ ಮಾಡಿಕೊಳ್ಳಲು ಅರ್ಜಿ ಕೊಟ್ಟಿದ್ದು ನಮಗೆ ಅದರಲ್ಲಿ ಹಕ್ಕಿಲ್ಲ ಎನ್ನುತ್ತಿದ್ದಾರೆ. ಇದು ಸರಿಯೇ? ಅಲ್ಲದೆ ನಮ್ಮ ತಾಯಿಗೆ ಆಕೆಯ ತಂದೆಯ ಆಸ್ತಿಯಲ್ಲಿ ಭಾಗ ಬರುತ್ತದೆಯೇ?
- ಒಟ್ಟು ಕುಟುಂಬದ ಆಸ್ತಿ ಎಂದು ಸಾಬೀತುಪಡಿಸಲು ಸಾಕ್ಷ್ಯಾಧಾರಗಳಿದ್ದರೆ ಅದರಲ್ಲಿ ಭಾಗ ಕೇಳಿ ದಾವಾ ಹೂಡಬಹುದು. ಅಲ್ಲದೆ ನಿಮ್ಮ ತಾತನ ಆಸ್ತಿಯಲ್ಲಿ ನಿಮ್ಮ ತಾಯಿಗೂ ಇತರ ಎಲ್ಲ ಮಕ್ಕಳಂತೆ ಸಮಾನ ಹಕ್ಕು ಇರುತ್ತದೆ. ನಿಮ್ಮ ತಾಯಿಯ ಆಸ್ತಿ ನಿಮಗೂ ಬರುತ್ತದೆ.

ಇಬ್ಬರಿಗೂ ಸೇರಿ ಒಂದು ಪಾಲು
-ಜಿ.ಎಸ್. ಕೋಟಿ, ಬಾಗಲಕೋಟ
ನನ್ನ ತಂದೆಗೆ ಇಬ್ಬರು ಗಂಡುಮಕ್ಕಳು, ಒಬ್ಬಳು ಹೆಣ್ಣುಮಗಳು ಇದ್ದು, ತಂದೆ ತೀರಿಕೊಂಡಿದ್ದಾರೆ. ನಂತರ ಅಣ್ಣನೂ ತೀರಿಕೊಂಡಿದ್ದು ಆತನಿಗೆ ಹೆಂಡತಿ ಮತ್ತು ಒಬ್ಬ  ಮಗನಿದ್ದಾನೆ. ತಂದೆಯ ಆಸ್ತಿಯಲ್ಲಿ ತನಗೆ ಹಾಗೂ ತನ್ನ ಮಗನಿಗೆ ಒಂದೊಂದು ಪಾಲು ಆಸ್ತಿ ಕೇಳುತ್ತಿದ್ದಾಳೆ. ಇದು ಸರಿಯೇ?
- ಕಲಂ 6 ಹಾಗೂ ಉತ್ತರಾಧಿಕಾರ ಕಾಯಿದೆಯಂತೆ ನಿಮ್ಮ ಅಕ್ಕನೂ ಸೇರಿದಂತೆ ಎಲ್ಲ ಮಕ್ಕಳು ಹಾಗೂ ನಿಮ್ಮ ತಾಯಿಗೂ(ಇದ್ದರೆ) ಸಮಾನ ಪಾಲು. ಅಣ್ಣ ತೀರಿಕೊಂಡಿರುವುದರಿಂದ ಆತನ ಪಾಲು ಆತನ ಹೆಂಡತಿ ಹಾಗೂ ಮಗನಿಗೆ ಬರುತ್ತದೆ. ಅಂದರೆ ಅವರಿಬ್ಬರಿಂದ ಒಂದು ಪಾಲು.

ಸ್ವಯಾರ್ಜಿತ ಆಸ್ತಿಯಲ್ಲಿ ಯಾರಿಗೂ ಹಕ್ಕಿಲ್ಲ
-ವೆಂಕಟಾಚಲಮೂರ್ತಿ ಕಾಮನೂರು, ಕೊಪ್ಪಳ ಜಿಲ್ಲೆ
ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿರುವ ವ್ಯಕ್ತಿಗೆ ಸರ್ಕಾರದಿಂದ ಮಂಜೂರಾದ ಜಮೀನಿನ ಮೇಲೆ ಆತನ ತಂದೆ ಅಥವಾ ತಾತನಿಗೆ ಹಕ್ಕಿದೆಯೇ?
- ಈ ಜಮೀನು ಪಿತ್ರಾರ್ಜಿತವಲ್ಲವಾದ್ದರಿಂದ ತಂದೆ, ತಾತಂದಿರಿಗೆ ಅದರ ಮೇಲೆ ಯಾವ ಹಕ್ಕೂ ಇಲ್ಲ. ಅಷ್ಟೇ ಅಲ್ಲ ಅವರ ಮಕ್ಕಳಿಗೂ ಅದರ ಮೇಲೆ ಯಾವ ಹಕ್ಕೂ ಇಲ್ಲ. ಇದು ಸ್ವಯಾರ್ಜಿತ ಆಸ್ತಿ.

ಕಾನೂನಿನಲ್ಲಿ ಅವಕಾಶವಿಲ್ಲ
-ಹೆಸರು, ಊರು ಬೇಡ
ನಿವೃತ್ತ ಉದ್ಯೋಗಿ. ಪೆನ್ಷನ್ ಬರುತ್ತಿದೆ. ಮೊದಲನೇ ಹೆಂಡತಿ ತೀರಿಕೊಂಡಿದ್ದು ಎರಡನೇ ಹೆಂಡತಿ ಜತೆ ಇದ್ದೇನೆ. ಇತ್ತೀಚೆಗೆ ಆಕೆ ಬಹಳ ಕಿರುಕುಳ ಕೊಡುತ್ತಿದ್ದು, ತಾನು ಬೇರೆ ಇದ್ದು, ನನ್ನ ಪಿಂಚಣಿಯಲ್ಲಿ ಅರ್ಧಪಾಲು ಕೇಳುವುದಾಗಿ ಬೆದರಿಸುತ್ತಿದ್ದಾಳೆ. ನಾನು ಪಿಂಚಣಿಯನ್ನು ಆಕೆಗೆ ಬರದಂತೆ ಮಾಡಿ, ಮಕ್ಕಳಿಗೇ ಹೋಗುವಂತೆ ಮಾಡಬಹುದೇ?
- ಬೇಕಾದರೆ ನೀವು ನಿಮ್ಮ ಹೆಂಡತಿಯ ವಿರುದ್ಧ ಕೋರ್ಟಿಗೆ ದೂರು ನೀಡಬಹುದು. ಕಾರಣವಿಲ್ಲದೇ ನಿಮ್ಮ ಹೆಂಡತಿ ನಿಮ್ಮಿಂದ ಬೇರೆ ಇದ್ದು, ನಿರ್ವಹಣಾ ವೆಚ್ಚ ಕೇಳುವಂತಿಲ್ಲ. ನಿಮ್ಮ ಮಕ್ಕಳು ನಿಮ್ಮನ್ನು ನೋಡಿಕೊಳ್ಳುವುದು ಅವರ ಕರ್ತವ್ಯವಾಗಿರುತ್ತದೆ. ನಿಮ್ಮ ಪೆನ್ಷನ್ ಹಣವನ್ನು ಹೆಂಡತಿಗೆ ಸಿಗದಂತೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ.

- ಎಚ್.ಆರ್. ಕಸ್ತೂರಿರಂಗನ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments