ಸಾಪ್ತಾಹಿಕಪ್ರಭ

ಬೆಟ್ಟದ ನಿರ್ಜೀವ!

ಚಿತ್ರ: ಕೊಯೆರ್ ಅನಿಮಲ್ (2009)
ಭಾಷೆ: ಫ್ರೆಂಚ್, ನಿರ್ದೇಶನ: ಸೆವೆರೈನ್ ಕೊರ್ನಾಮುಸಾಝ್
ಅವಧಿ: 91 ನಿಮಿಷ
ತಾರಾಗಣ: ಆಲಿವಿಯರ್ ರಾಬೊರ್ಡಿನ್, ಕ್ಯಾಮಿಲ್ ಜಾಪಿ, ಅಂಟೋನಿಯೋ ಬ್ಯುಲ್.



ಆತ ಭಾವರಹಿತ ಮನುಷ್ಯ. ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ ಹಸು ಮತ್ತು ಮಾನವನ ನಡುವೆ ವ್ಯತ್ಯಾಸ ತಿಳಿಯದವ. ಆಕೆ ಹಾಗಲ್ಲ. ಭಾವುಕ ಮನಸ್ಸಿನ ಅಸಹಾಯಕ ಹೆಣ್ಣು. ಹೊಟ್ಟೆಯಲ್ಲಿ ಕರುಳು ಹಿಂಡುವ ಕಾಯಿಲೆಯನ್ನು ಸಹಿಸಿಕೊಳ್ಳುವ ಆಕೆಗೆ, ಭಾವನೆಗಳೇ ಇಲ್ಲದ ಬದುಕೂ ಒಂದು ಬದುಕೇ? ಇಷ್ಟಕ್ಕೂ ನಾನು ಪ್ರಾಣಿನಾ, ಮನುಷ್ಯನಾ? ನನ್ನ ಬದುಕು ಹೀಗ್ಯಾಕೆ? ಇಂಥ ಪ್ರಶ್ನೆಗಳು ಅವಳ ಮನಸ್ಸಿನಲ್ಲಿ ಕಾಡುತ್ತಿವೆ. ಇಂಥ ಎರಡು ವಿರುದ್ಧ ದಿಕ್ಕಿನ ಮನಸ್ಸುಗಳು ಅಲ್ಲಿ ಗಂಡ, ಹೆಂಡತಿ ಹೆಸರಿನಲ್ಲಿ ಒಂದೇ ಮನೆಯಲ್ಲಿ ಒಟ್ಟಾಗಿದ್ದಾರೆ ಅಷ್ಟೇ! ಅವರು ಜೀವಿಸುತ್ತಿಲ್ಲ. ಈ ಎರಡು ಪಾತ್ರಗಳು ನೋಡುಗನಿಗೆ ಕಾರ್ಖಾನೆಯ ಯಂತ್ರಗಳಂತೆ ಕಾಣಿಸುತ್ತಿವೆ. ಹಾಗೆ ನೋಡಿದರೆ ಚಿತ್ರದ ಶೀರ್ಷಿಕೆ ಕೂಡ ಈ ಯಂತ್ರ ರೂಪದ ಮನುಷ್ಯ ಪಾತ್ರಗಳಿಗೆ ಹೇಳಿ ಮಾಡಿಸಿದಂತಿದೆ. ಸ್ವಿಜ್ಜರ್ಲೆಂಡಿನ 'ಕೊಯೆರ್ ಅನಿಮಲ್‌' ಎಂಬ ಫ್ರೆಂಚ್ ಚಿತ್ರ ಆರಂಭದಲ್ಲೇ ನೋಡುಗನನ್ನು ಆಕರ್ಷಿಸುವುದು ಹೀಗೆ. ಚಿತ್ರದ ಹೆಸರಿನ ಆಂಗ್ಲ ಅರ್ಥ 'ಅನಿಮಲ್ ಹಾರ್ಟ್‌'. ಎರಡು ಭಿನ್ನ ರೂಪದ ಪಾತ್ರಗಳ ಮೂಲಕ ಸಾಗುವ ಈ ಚಿತ್ರದ ಕೊನೆಯಲ್ಲಿ ಬರುವ 'ನಾನೂ ಒಂದು ಹೆಣ್ಣಲ್ಲವೇ. ಯಾಕೆ ನೀವು ಅರ್ಥಮಾಡಿಕೊಳ್ಳುತ್ತಿಲ್ಲ?' ಎನ್ನುವ ಸಂಭಾಷಣೆ ಇಲ್ಲಿ ಮೂಲ ಶಕ್ತಿ.
ಕರಿಬಂಡೆಗಳಿಂದ ಕೂಡಿದ ಬೆಟ್ಟಗುಡ್ಡ. ಅರೆಬರೆ ಹಸಿರು ಹೊದಿಕೆ, ಬೆಚ್ಚಗಿಡುವ ಕೌದಿಯಂತೆ ಆಗಾಗ ಬಂದು ಆವರಿಸಿಕೊಳ್ಳುವ ಹಿಮ. ಆ ಬೆಟ್ಟದ ಮೇಲೊಂದು ಕಬ್ಬಿಣದ ತಗಡುಗಳಿಂದ ಕೂಡಿದ ಮನೆ. ಅಲ್ಲಿ ಹತ್ತಾರು ಹಸುಗಳು, ಮೇಕೆಗಳು, ಹಂದಿ, ಕೋಳಿಗಳಿವೆ. ಪಕ್ಕಾ ಅದು ಪ್ರಾಣಿ ಸಾಮ್ರಾಜ್ಯ. ಈ ಪ್ರಾಣಿ ಪ್ರಪಂಚದಲ್ಲಿ ಅಪ್ಪಟ ಪ್ರಾಣಿಗಳಂತೆ ಜೀವಿಸುತ್ತಿರುವ ಗಂಡ, ಹೆಂಡತಿ. ಇವರೇ ಚಿತ್ರದ ಮುಖ್ಯ ಕೇಂದ್ರಬಿಂದುಗಳು. ಇಲ್ಲಿ ಎರಡು ಭಿನ್ನ ಪಾತ್ರಗಳ ಮೂಲಕ ವಿದೇಶಿ ರೈತನ ಬದುಕನ್ನು ಕಟ್ಟಿಕೊಡುವ ನಿರ್ದೇಶಕಿ, ಪಕ್ಕದಲ್ಲೇ ಒಂದು ನಗರವನ್ನು ಸೃಷ್ಟಿಸುತ್ತಾರೆ. ಅಲ್ಲಿ ವಲಸೆ ಬಂದ ಸ್ಪ್ಯಾನಿಷ್ ಕಾರ್ಮಿಕ ಈ ಮನೆಗೆ ಪ್ರವೇಶವಾದ ನಂತರ ಈ ಎರಡು ಮುಖ್ಯ ಪಾತ್ರಗಳ ನಡುವೆ ಅಂತರ, ಸಿಟ್ಟು ಮತ್ತಷ್ಟು ಹೆಚ್ಚುತ್ತದೆ. ನಿರ್ದೇಶಕಿ ಸೆವೆರೈನ್ ಕೊರ್ನಾಮುಸಾಝ್ ಅವರದ್ದು ಚಿತ್ರರಂಗದಲ್ಲಿ ದೊಡ್ಡ ಹೆಸರಲ್ಲದಿದ್ದರೂ, ಏಳು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಐದು ಕಿರುಚಿತ್ರಗಳಿಗೆ ಸಂಕಲನ, ನಾಲ್ಕು ಚಿತ್ರಗಳ ಕಥೆಗಾರ್ತಿ ಆಗಿರುವ ಈಕೆ, ಎರಡು ಚಿತ್ರಗಳನ್ನು ನಿರ್ಮಿಸಿದ್ದಾರೆ. ಯುರೋಪಿಯನ್ ಚಿತ್ರೋತ್ಸವಗಳಲ್ಲಿ ತಮ್ಮ ಚಿತ್ರಗಳ ಮೂಲಕ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಿರುವ ಸೆವೆರೈನ್, 'ಕೊಯೆರ್ ಅನಿಮಲ್‌' ಚಿತ್ರದ ಮೂಲಕ ಒರಟು ವ್ಯಕ್ತಿಯ ಯಜಮಾನಿಕೆಯಲ್ಲಿ ನಲುಗುತ್ತಿರುವ ನಿಸ್ಸಾಹಾಯಕ ಹೆಣ್ಣಿನ ದುಗುಡವನ್ನು ನಿರೂಪಿಸುತ್ತಾರೆ. ತಾನು ಒಬ್ಬ ಹೆಣ್ಣಾಗಿರುವುದರಿಂದ ತೆರೆ ಮೇಲೆ ಹೆಣ್ಣಿನ ಅಂತರಂಗವನ್ನು ನೋಡುಗನ ಮುಂದಿಡುವಲ್ಲಿ ಸೆವೆರೈನ್ ಯಶಸ್ವಿಯಾಗಿದ್ದಾರೆ.
ಹತ್ತಾರು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು, ನಿರ್ದೇಶಕಿ ಸೆವೆರೈನ್‌ಗೆ ಹೆಸರು ತಂದುಕೊಟ್ಟಿರುವ ಈ ಚಿತ್ರದ ಕಥೆ ಸ್ವಿಸ್ ಪರ್ವತಗಳಲ್ಲಿ ನಡೆಯುತ್ತದೆ. ಹೊತ್ತು ಮುಳುಗುವ ಮುನ್ನವೇ ಪರ್ವತಗಳಲ್ಲಿರುವ ಸಾಕು ಪ್ರಾಣಿಗಳನ್ನು ಒಂದೆಡೆ ಸೇರಿಸುವುದು, ಮರುದಿನ ಸೂರ್ಯ ಉದಯಿಸುವ ಮುನ್ನವೇ ಹಾಲು ಕರೆದು ಪಕ್ಕದ ನಗರದ ಡೈರಿ ವಾಹನಕ್ಕೆ ಹಾಕಿಬರುವ ಒರಟು ರೈತ, ಈತ ಎದ್ದಾಗ ಆತನೊಂದಿಗೆ ಎಚ್ಚರಗೊಂಡು ನೋಯುತ್ತಿರುವ ಹೊಟ್ಟೆಗೆ ಬಟ್ಟೆ ಕಟ್ಟಿಕೊಂಡು ಕೆಲಸಕ್ಕಿಳಿದರೆ ತಡರಾತ್ರಿವರೆಗೂ ಯಂತ್ರದಂತೆ ದುಡಿಯುವ ಈತನ ಪತ್ನಿ. ಇದು ಇವರಿಬ್ಬರ ನಿತ್ಯ ಬದುಕು. ಆದರೆ ಕೈ ಹಿಡಿದ ಸಂಗಾತಿಯನ್ನೇ ಪಶುವಿನಂತೆ ಕಾಣುವ, ಆಕೆಯ ನೋವಿಗೆ, ಭಾವನೆಗಳಿಗೆ ಸ್ಪಂದಿಸದ ಒರಟು ಗಂಡನ ಜೊತೆ ಆಕೆಯ ಬದುಕು ಅತ್ತ ಸಾಯಲೂ ಆಗದ, ಇತ್ತ ಬದುಕಲೂ ಆಗದ ಸ್ಥಿತಿ. ಕಟ್ಟಿಕೊಂಡವಳ ಮನಸ್ಸಿಗಿಂತ ದೇಹವನ್ನು ಮಾತ್ರ ಬಯಸುವ ಈತ, ಮೃಗದಂತೆ ಆಕೆಯ ಮೇಲೆ ಸಂಸಾರದ ಹೆಸರಿನಲ್ಲಿ ಅತ್ಯಾಚಾರ ಮಾಡುತ್ತಾನೆ. ಈತನ ವರ್ತನೆಯಿಂದ ಬೇಸತ್ತ ಆಕೆ ಅದೇ ವರ್ಪತಗಳಲ್ಲಿರುವ ಬಂಡೆಯಂತೆ ನಿರ್ಜೀವಿಯಾಗಿ ಜೀವಿಸುತ್ತಿದ್ದಾಳೆ. ಈ ನಡುವೆ ಕೆಲಸದ ಒತ್ತಡ ದಿನೇ ದಿನೇ ಹೆಚ್ಚಾಗುತ್ತಿರುವುದರಿಂದ ಸ್ಪೇನ್‌ನಿಂದ ವಲಸೆ ಬಂದ ಕಾರ್ಮಿಕನೊಬ್ಬನನ್ನು ಕಡಿಮೆ ಸಂಬಳದ ಕೆಲಸಕ್ಕೆ ಕರೆದುಕೊಂಡು ಬರುತ್ತಾನೆ. ಕಾರ್ಮಿಕನೊಂದಿಗೆ ತನ್ನ ಪತ್ನಿ ಸಲುಗೆಯಿಂದ ಇದ್ದಾಳೆಂದು ಭಾವಿಸಿ ಆಕೆಯ ಮೇಲೆ ಮತ್ತಷ್ಟು ಒರಟುತನ ಪ್ರದರ್ಶಿಸುತ್ತಾನೆ. ಆದರೆ ಮನೆಯಾಕೆಯ ಜೀವಚ್ಛವದ ಬದುಕಿಗೆ ಈ ಕಾರ್ಮಿಕನೇ ಮೋಕ್ಷ ಕಲ್ಪಿಸುತ್ತಾನೆ.
ಒಂದು ಪುಟ್ಟ ನಗರ, ಅದರಿಂದ ತುಸು ದೂರದಲ್ಲಿರುವ ಪರ್ವತಗಳ ನಡುವೆ ಇರುವ ಒಂದು ಮನೆ, ಅಲ್ಲಿ ಮೂರು ಪಾತ್ರಗಳು, ನಗರದಲ್ಲಿ ನಾಲ್ಕೈದು ಪಾತ್ರಗಳ ಮೂಲಕವೇ ಕಥೆ ಹೇಳುವ ನಿರ್ದೇಶಕಿ, ಲೊಕೇಶನ್, ಪಾತ್ರಗಳ ದೃಷ್ಟಿಯಿಂದ ಚಿತ್ರ ಎಲ್ಲೂ ಬೋರ್ ಹೊಡೆಸುವುದಿಲ್ಲ. ಆದರೆ ಆ ನಿರ್ಜೀವ ಬೆಟ್ಟಗಳನ್ನು ಜೀವಂತಗೊಳಿಸುವ ಛಾಯಾಗ್ರಹಣ ಚಿತ್ರದ ಬಹು ದೊಡ್ಡ ಬೆನ್ನೆಲುಬು. ಸಾಮಾನ್ಯವಾಗಿ ಫ್ರಾನ್ಸ್ ಅಥವಾ ಯುರೋಪಿಯನ್‌ನ ಕೌಟುಂಬಿಕ, ಪ್ರೇಮ ಚಿತ್ರಗಳೆಂದರೆ ಭಾರತೀಯ ಚಿತ್ರಗಳಲ್ಲಿ ನಿಷೇಧಿಸಲ್ಪಟ್ಟ ವಯಸ್ಕರ ದೃಶ್ಯಗಳು ತುಸು ಹೆಚ್ಚಾಗಿರುತ್ತವೆ. ಆದರೆ ಇಲ್ಲಿ ಆ ರೀತಿಯ ಒಂದೆರಡು ದೃಶ್ಯಗಳಿದ್ದರೂ, ನೋಡುಗನ ಗಮನ ಸೆಳೆಯುವುದು.
ಮನೆಯ ಯಜಮಾನನ ಸಿಟ್ಟಿಗೆ ಗುರಿಯಾಗುವ, 'ಇವತ್ತು ಭಾನುವಾರ. ಹೀಗಾಗಿ ಕೆಲಸಕ್ಕೆ ರಜೆ' ಎಂದು ರೇಡಿಯೋ ಕೇಳುತ್ತ ಕೂರುವ ಸ್ಪ್ಯಾನಿಷ್ ಕಾರ್ಮಿಕನ ಪಾತ್ರದ ಮೂಲಕ ಹಾಸ್ಯದ ಲೇಪನ ಕೂಡ ಮಾಡಿದ್ದಾರೆ ನಿರ್ದೇಶಕಿ. ಹಾಗೆ ನೋಡಿದರೆ ಮನೆ ಯಜಮಾನ ಒರಟು ಎನ್ನಿಸಿದರೂ ಆತನಲ್ಲೂ ಸಂಭ್ರಮಿಸುವ ಗುಣ ಇದೆ. ಹೆಂಡತಿ, ತಾಯಿ ಆಗುತ್ತಿದ್ದಾಳೆಂದು ತಿಳಿದು ತಾನೊಬ್ಬನೇ ಷಾಂಪೇನ್ ಕುಡಿದು ಸಂಭ್ರಮಿಸುತ್ತಾನೆ. ಈ ಕಾರಣಕ್ಕೆ ಬಿಟ್ಟುಹೋದ ಪತ್ನಿಯನ್ನು ಮತ್ತೆ ತನ್ನ ಕೈಹಿಡಿಯುವ ಪ್ರಯತ್ನ ಮಾಡುತ್ತಾನೆ. ತೀರಾ ಸರಳ ಕಥೆಯನ್ನು ಹೇಳಿರುವ ಸೆವೆರೈನ್, ಚಿತ್ರದ ನಿಜವಾದ ಅಂತರಂಗವನ್ನು ಅರ್ಥಮಾಡಿಕೊಳ್ಳುವುದು ತುಸು ಕಷ್ಟ ಎನ್ನಿಸಬಹುದು. ಒಂದು ಕುಟುಂಬದ ನೈಜ ಬದುಕಿನ ಚಿತ್ರಣವನ್ನು ಆಧರಿಸಿರುವ ಈ ಚಿತ್ರ, ಸ್ವಿಸ್ ಪರ್ವತಗಳ ನಡುವಿನ ರೈತನ ಬದುಕನ್ನು ತೋರಿಸುತ್ತದೆ.

- ಆರ್. ಕೇಶವಮೂರ್ತಿ
keshavarkm1@gmail.com


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತೀಯ ನಾವಿಕರ ಸುರಕ್ಷತೆ ಮುಖ್ಯ; ನಾಗರಿಕ ಮೂಲಸೌಕರ್ಯಗಳ ಮೇಲಿನ ದಾಳಿ ಸ್ವೀಕಾರಾರ್ಹವಲ್ಲ: ಇರಾನ್‌ಗೆ ಅಜಿತ್ ದೋವಲ್

ಜರ್ಮನಿಯ ವಸತಿ ಕಟ್ಟಡದಲ್ಲಿ ಶಂಕಿತ ಬೆಂಕಿ ಅವಘಡ: 3 ಭಾರತೀಯರು ಸಾವು!

ಹನಿಟ್ರ್ಯಾಪ್ ಪಿತೂರಿ ಪ್ರಶ್ನಿಸಿದ್ದಕ್ಕೆ ಕಿರುಕುಳ; JDS ಕಾರ್ಯಕರ್ತ CCB ವಶಕ್ಕೆ: ಕುಮಾರಸ್ವಾಮಿ ಆಕ್ರೋಶ

ಕಾಂಗ್ರೆಸ್‌ನ ಆಂತರಿಕ ಕಲಹದಿಂದ 'ಮೂರನೇ ಮುಖ್ಯಮಂತ್ರಿ' ಬಂದರೂ ಅಚ್ಚರಿ ಇಲ್ಲ: ಬಿ.ವೈ ವಿಜಯೇಂದ್ರ; Video

ಯೂಟ್ಯೂಬರ್ ಧ್ರುವ್ ರಾಠಿಗೆ ಸಂಕಷ್ಟ: 8 ವರ್ಷಗಳ ಹಿಂದಿನ ಪ್ರಕರಣಕ್ಕೆ ಮರುಜೀವ; ದೆಹಲಿ ಕೋರ್ಟ್ ಸಮನ್ಸ್!