ಅಣಬೆ ಬೇಕೆ ಅಣಬೆ
ಮಣ್ಣು ಗೆದ್ದಲು
ಮೆದುಳಿನಾಕಾರದ ಗೆದ್ದಲ ಹುಟ್ಟು
ಕಲಾಕೃತಿಯಂತೆ ಮೇಲೆದ್ದು ನಿಂತ ಹುತ್ತ
ಜೀವ ಮಿಡಿತದ ಗತ್ತು!
ಹೃದಯವೆ ನೆಲದ ಮೇಲೆ
ಮಲಗಿರುವಂತೆ
ಹೇಗೆ ಮಿಡಿಯುತ್ತಿದೆ ನೋಡಿ...
ಹುತ್ತದೊಳಗೆ ಗೆದ್ದಲ ಹುಟ್ಟಿನೊಳಗೆ
ಎಷ್ಟೊಂದು ಜೀವ ಸಂಚಾರ!
ಯಾವ ಋಷಿಯ ಹೃದಯವೊ
ಅಥವಾ
ಯಾವ ಋಷಿ ಒಳಗೆ
ಜೀವ ಸಂಕುಲದ ಒಳಿತಿಗೆ
ತಪಸ್ಸಿಗೆ ಕುಳಿತಿರುವನೊ...!
ಹುತ್ತವೋ ಜೀವ ಮಿಡಿತದ ಕಣ್ಣೋ
ಹುತ್ತದೊಳಗಿನ ಹುಟ್ಟೋ
ಜೀವ ಮಿಡಿತದ ಆತ್ಮನೋ...?
ಅಂತೂ ನನ್ನ ಹುತ್ತಗಟ್ಟಿದ
ಗೆದ್ದಲಿನ ಹುಟ್ಟಿನಾಕಾರದ
ಮೆದುಳಿನಿಂದ ಅಣಬೆಗಳು ಪುಟಿದೇಳುತ್ತಲಿವೆ
ಮಳೆ ಬಿದ್ದು
ಹದವಾಗಿ ಹುಟ್ಟಿಗೆ ಹಿತವಾಗಿ
ಮುಗುಳು ನಕ್ಕಿದ್ದರ ಸಂಕೇತವೆಂಬಂತೆ
ಪುಟಿದೇಳುತ್ತಲಿವೆ
ಶ್ವೇತವರ್ಣದ
ಮಣ್ಣಿನ ಗಮಲು ಮೈಗಂಟಿಸಿಕೊಂಡ
ತಾಜಾ ತಾಜಾ ಅಣಬೆಗಳು
ಈಗ ಗಲ್ಲಿ ಗಲ್ಲಿ ಸುತ್ತಲು ಅಣಿಯಾಗಿದ್ದೇನೆ
ನೀವೂ ಅಣಿಯಾಗಿ
ನನ್ನ ತಲೆ ಮೇಲೆ ಪುಟಿದು ನಿಂತಿರುವ
ಅಣಬೆಗಳನ್ನು ಕಿತ್ತು ನಿಮ್ಮ ಹೊಟ್ಟೆಗಿಳಿಸಲು
ನೀವೂ ಅಣಿಯಾಗಿ
ಹೊಟ್ಟೆಗಿಳಿದ ಅಣಬೆ ಮೆದುಳು ಸೇರಿ
ಹುತ್ತಗಟ್ಟಿ ಹುಟ್ಟುಕಟ್ಟಿ
ಮಳೆಬಿದ್ದ ಹದಕ್ಕೆ ತಲೆ ಮೇಲೆ
ಅಣಬೆಗಳು ಪುಟಿಯಲು
ಅಣಬೆ ಬೇಕೆ ಅಣಬೆ
ಎಂದು ಗಲ್ಲಿ ಗಲ್ಲಿಯಲಿ ನನ್ನಂತೆ ಕೂಗಲು!
-ಮನಹಳ್ಳಿ ರಮೇಶಬಾಬು