ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಎರಡು ನಕ್ಷತ್ರ

Lingaraj Badiger
Updated On : 1 Jun 2013, 4:10 am

ಇಂದು, ದಕ್ಷಿಣ ಭಾರತೀಯ ಚಲನಚಿತ್ರರಂಗದ ಇಬ್ಬರು ಮಹಾನ್ ಸಾಧಕರ ಹುಟ್ಟುಹಬ್ಬ. ಅವರು- ಮಣಿರತ್ನಂ ಮತ್ತು ಇಳಯರಾಜ. ಒಬ್ಬರು ಸಿನಿಮಾ ನಿರ್ದೇಶನಕ್ಕೆ ಹೊಸ ಭಾಷ್ಯ ಬರೆದವರು. ಮತ್ತೊಬ್ಬರು ಸಿನಿಮಾ ಸಂಗೀತಕ್ಕೆ ಹೊಸ ಮೆರುಗು ತಂದವರು. ಇಬ್ಬರೂ ಭಾರತವಲ್ಲದೇ, ಹೊಸ ಜಗತ್ತಿಗೂ ಚಿರಪರಿಚಿತರು. ಆದರೆ, ಅದೆಲ್ಲಕ್ಕಿಂತ ಹೆಚ್ಚಾಗಿ ಕನ್ನಡ ಸಿನಿ ರಸಿಕರಿಗೆ ಆಪ್ತರಾದವರು.

ಹೌದು. ಕನ್ನಡ ಚಿತ್ರ ರಸಿಕರೆಂದರೆ ಹಾಗೇ. ಭಾಷೆ, ದೇಶಗಳ ಹಂಗಿಲ್ಲದೆ ಸಿನಿಮಾಗಳನ್ನು ಪ್ರೀತಿಸುವವರು. ಉತ್ತಮವಾದುದು ಯಾವ ಭಾಷೆಯಲ್ಲಿದ್ದರೂ ಸರಿ ಎರಡೂ ಕೈಗಳಿಂದ ಅದನ್ನು ಸ್ವಾಗತಿಸುವವರು. ಅಪ್ಪಿ ಮುದ್ದಾಡುವವರು. ಅದೊಂದೇ ಕಾರಣಕ್ಕಾಗಿಯೇ ಈ ಇಬ್ಬರೂ ಕನ್ನಡದ ಮಂದಿಗೆ ಆಪ್ತರು.

ಅದು, 80ರ ದಶಕ. ಭಾರತೀಯ ಸಿನಿಮಾರಂಗ ತನ್ನ ಸಂಪ್ರದಾಯಬದ್ಧ ಚಿತ್ರ ತಯಾರಿಕೆ ಶೈಲಿಯಿಂದ ವಿಮುಖವಾಗಿ ಹೊಸ ದಿಕ್ಕಿನತ್ತ ಮುಖಮಾಡಿ ನಿಂತಿತ್ತು. ಆ ಸಂದರ್ಭದಲ್ಲಿ, ಚಿತ್ರರಂಗವನ್ನು ಹೊಸ ದಿಶೆಯತ್ತ ಕೊಂಡೊಯ್ಯಲು ಸನ್ನದ್ಧರಾದ ನಿರ್ದೇಶಕರೆಂಬ ಕೆಲ ಜಗಜಟ್ಟಿಗಳಲ್ಲಿ ಮಣಿರತ್ನಂ ಕೂಡಾ ಒಬ್ಬರು. ಕಥೆ  ಹೆಣೆಯುವುದರಲ್ಲಿ, ಚಿತ್ರಕಥೆ ನೇಯುವುದರಲ್ಲಿ, ಅಷ್ಟೇ ಅಲ್ಲ... ದೃಶ್ಯ ಸಂಯೋಜನೆ, ಬೆಳಕಿನ ಸಂಯೋಜನೆ... ಹೀಗೆ ಚಿತ್ರವೊಂದರ ವಿವಿಧ ವಿಭಾಗಗಳಲ್ಲಿ ಹೊಸತನ ತಂದವರು. ಒಂದೇ ಮಾತಿನಲ್ಲಿ ಹೇಳುವುದಾದರೆ, ಸಿನಿಮಾಗಳಿಗೆ ಹೊಸ ವ್ಯಾಖ್ಯಾನ ಬರೆದವರು.

ಇಷ್ಟೇ ಅಲ್ಲ. ಮಣಿರತ್ನಂ ಅವರ ವಿಶೇಷತೆಗಳಲ್ಲಿ ಪ್ರಮುಖವಾದದ್ದೆಂದರೆ, ಚಿತ್ರದಿಂದ ಚಿತ್ರಕ್ಕೆ ಅವರು ಬೆಳೆದ ರೀತಿ. ಪ್ರತಿ ನಿರ್ದೇಶಕನಿಗೂ ಇರಬೇಕಾದ ಗುಣ ಇದು. ವಸ್ತು ವಿಷಯಗಳನ್ನು ಆಯ್ದುಕೊಳ್ಳುವುದರಿಂದ ಹಿಡಿದು, ಕಥೆ ಹೇಳುವ ಶೈಲಿ, ತಾಂತ್ರಿಕತೆ- ಹೀಗೆ ಮುಂತಾದ ಎಲ್ಲಾ ವಿಷಯಗಳಲ್ಲೂ ಕಾಲಕ್ಕೆ ತಕ್ಕಂತೆ ಅಪ್ ಡೇಟ್ ಆದವರು ಮಣಿರತ್ನಂ. ಅವರ ಇತ್ತೀಚಿನ ಚಿತ್ರಗಳಾದ 'ಯುವ', 'ರಾವಣ್‌', 'ಕಡಲ್‌'- ಹೀಗೆ ಯಾವುದೇ ಚಿತ್ರಗಳನ್ನು ತೆಗೆದುಕೊಳ್ಳಿ. ಅವುಗಳ ತಾಂತ್ರಿಕತೆಯ ಬಗ್ಗೆ ಎಲ್ಲೂ ಎರಡು ಮಾತಿಲ್ಲ.
ಇಂಥ ವಿಶಿಷ್ಟತೆಯಿಂದಲೇ ಅವರು ತಮ್ಮದೇ ಆದ ಅಭಿಮಾನಿ ಬಳಗಗಳನ್ನು ಸೃಷ್ಟಿಸಿಕೊಂಡವರು. ಮಣಿರತ್ನಂ ಚಿತ್ರವೊಂದು ರಿಲೀಸ್ ಆಗುತ್ತಿದೆಯೆಂದರೆ, ಒಂದು ವರ್ಗ ಆ ಬಿಡುಗಡೆ ದಿನಕ್ಕಾಗಿ ಚಾತಕಪಕ್ಷಿಯಂತೆ ಕಾಯುತ್ತಿತ್ತು. ನಟ- ನಟಿಯರಂತೂ ಅವರ ಚಿತ್ರಗಳಲ್ಲಿ ಒಂದು ಪುಟ್ಟ ಪಾತ್ರ ಸಿಕ್ಕರೂ ಸಾಕು ಜೀವನ ಸಾರ್ಥಕ ಎನ್ನುವಂತಿತ್ತು. (ಈಗಲೂ ಆ ಅಭಿಪ್ರಾಯ ಮಾಸಿಲ್ಲ).

ನಿಮಗೆ ನೆನಪಿರಲಿ... ಅಂದು ಈಗಿರುವಷ್ಟು ಮಾಧ್ಯಮಗಳ ಭರಾಟೆಯಿರಲಿಲ್ಲ. ಆದರೂ, ಆಗಲೂ ಮಣಿ ತಮ್ಮ ಚಿತ್ರಗಳಿಗೊಂದು ಕ್ರೇಜ್ ತಂದುಕೊಟ್ಟಿದ್ದರು.
ಅಂಥ ಮಣಿ ತಮ್ಮ ಚಿತ್ರಜೀವನವನ್ನು ಆರಂಭಿಸಿದ್ದು ಕನ್ನಡ ಚಿತ್ರರಂಗದಿಂದಲೇ ಎಂಬುದು ಮತ್ತೊಂದು ಹೆಮ್ಮೆಯ ವಿಷಯ. ಎಲ್ಲರಿಗೂ ಗೊತ್ತಿರುವಂತೆ ಅದು ಪಲ್ಲವಿ ಅನುಪಲ್ಲವಿ. 1983ರಲ್ಲಿ ತೆರೆಕಂಡು ಮೂವತ್ತು ವರ್ಷಗಳನ್ನೇ ಪೂರೈಸಿದೆ. ಅದರೊಂದಿಗೆ ಅವರೂ ಮೂವತ್ತು ವರ್ಷಗಳನ್ನು ಪೂರೈಸಿದ್ದಾರೆ. ಸಾಕಷ್ಟು ಬೆಳೆದಿದ್ದಾರೆ, ಮಾಗಿದ್ದಾರೆ. ಆದರೂ, ಅವರಲ್ಲಿರುವ ಚಿತ್ರ ತಯಾರಕ ಮಾತ್ರ ಯವ್ವನಸ್ಥ. ಅಂದಿಗೂ, ಇಂದಿಗೂ ಮುಂದೆಂದಿಗೂ ಇರುವಂಥ ಚಿರಯವ್ವನಸ್ಥ.

ಇನ್ನು ಇಳಯರಾಜಾ ಅವರ ಬಗ್ಗೆ ಹೇಳಬೇಕೆಂದರೆ, ಮಣಿರತ್ನಂ ಬಗ್ಗೆ ಇಷ್ಟು ಹೊತ್ತು ಏನು ಹೇಳಲಾಯ್ತೋ ಅದೆಲ್ಲವನ್ನೂ ಡಿಟ್ಟೋ, ಡಿಟ್ಟೋ ಇವರ ಬಗ್ಗೆಯೂ ಹಾಗೇ ಹೇಳಬೇಕಾಗುತ್ತೆ. ಆದರೆ, ಸ್ವಲ್ಪ ಬದಲಾಯಿಸಬೇಕಷ್ಟೇ. ಮಣಿ ಅವರು ಚಿತ್ರ ನಿರ್ದೇಶನದಲ್ಲಿ ಹೊಸತನ ತಂದರೆ, ಇವರು ಸಂಗೀತಕ್ಕೆ ಹೊಸ ಸ್ಪರ್ಶ ತಂದವರು. ಸಿನಿಮಾ ಸಂಗೀತದಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡಿದವರು. ಕನ್ನಡ ಚಿತ್ರಸಂಗೀತಕ್ಕೂ ಸೇವೆ ಸಲ್ಲಿಸಿದವರು. 'ಗೀತಾ' ಚಿತ್ರದ 'ಜೊತೆಯಲಿ ಜೊತೆಜೊತೆಯಲಿ...', 'ಪಲ್ಲವಿ ಅನುಪಲ್ಲವಿ' ಚಿತ್ರದ 'ನಗುವಾ ನಯನ...' ಮುಂತಾದ ಅನೇಕ ಹಾಡುಗಳನ್ನು ಕನ್ನಡ ಚಿತ್ರರಸಿಕರು ಎಂದೂ ಮರೆಯಲಾರರು. ಇವರ ಸಂಗೀತ ನಿರ್ದೇಶನದಲ್ಲಿ ಒಂದು ಹಾಡು ಹಾಡಲು ಅವಕಾಶ ಸಿಕ್ಕರೆ ಸಾಕಪ್ಪಾ ಅಂತ ಆಸೆ ಪಡುವ ಗಾಯಕರು ಆಗಲೂ ಇದ್ದರು. ಈಗಲೂ ಇದ್ದಾರೆ. ಹೀಗೆ, ಹಲವು ಗೌರವ, ಪುರಸ್ಕಾರ, ಎಲ್ಲಕ್ಕಿಂತ ಹೆಚ್ಚಾಗಿ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ವಿರಾಜಮಾನರಾಗಿರುವ ಇಳಯರಾಜ ಅವರ ಸಂಗೀತವೂ ಎಂದಿಗೂ ಚಿರನೂತನ.

ಜುಗಲ್‌ಬಂದಿ
ಮಣಿರತ್ನಂ ಹಾಗೂ ಇಳಯರಾಜ ಇಬ್ಬರೂ ಹಲವಾರು ಚಿತ್ರಗಳಿಗೆ ಒಟ್ಟಾಗಿ ದುಡಿದಿದ್ದಾರೆ. ಇವರಿಬ್ಬರ ಜುಗಲ್‌ಬಂದಿಯಲ್ಲಿ ಅತ್ಯುತ್ತಮ ಚಿತ್ರಗಳು ಬಂದಿವೆ. ಇತ್ತೀಚೆಗೆ ಬಿಡುಗಡೆಯಾದ ಭಾರತೀಯ ಚಿತ್ರರಂಗದ ಮರೆಯಲಾಗದ 100 ಚಿತ್ರಗಳ ಪಟ್ಟಿಯಲ್ಲಿ 'ನಾಯಗನ್‌' ಕೂಡಾ ಒಂದು. ಅದೂ ಇವರಿಬ್ಬರ ಸಹ ದುಡಿಮೆಯಿಂದ ಹೊರಬಂದ ಚಿತ್ರ. ವಿಶೇಷವೆಂದರೆ, ಹಲವಾರು ಚಿತ್ರಗಳಲ್ಲಿ ಕಾಂಬಿನೇಷನ್ ಹೊಂದಿದ್ದ ಈ ಇಬ್ಬರು ಹುಟ್ಟುಹಬ್ಬವನ್ನು ಒಂದೇ ದಿನ ಆಚರಿಸಿಕೊಳ್ಳುತ್ತಿರುವುದೂ ಮತ್ತೊಂದು ವಿಶೇಷ.

-ಚೇತನ್ ಓ.ಆರ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments