ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಒಳಗಿನ ಗುಟ್ಟು

Lingaraj Badiger
Updated On : 1 Jun 2013, 5:39 am

ವಿಶಾಲಪುರದ ಮಹಾರಾಜ ರಾಜೇಂದ್ರನಿಗೆ ಅರಮನೆಯ ಕಾವಲವನ್ನು ಬಲಪಡಿಸಲು ಹತ್ತು ಮಂದಿ ಬಲಿಷ್ಠರನ್ನು ಸೇರಿಸಿಕೊಳ್ಳಬೇಕು ಎನ್ನಿಸಿತು. ಸರಿಯಾಗಿ ಆರಿಸಲು ರಾಜ್ಯದಲ್ಲೆಲ್ಲಾ ಡಂಗುರ ಹೊಡೆಸಿ ವೀರರನ್ನು ಅರಮನೆಗೆ ಬರಹೇಳಿದನು. ಮಹಾರಾಜನ ಬಳಿ ಸಣ್ಣ ಊಳಿಗವಾದರೂ ಗೌರವ ಎಂದು ಬಗೆದು ಅರಮನೆಗೆ ಸಾವಿರಾರು ಮಂದಿ ಬಂದು ಸೇರಿದರು.

ಮಂತ್ರಿಯು ಹೋಗಿ ಅವರನ್ನೆಲ್ಲಾ ಪರಿಶೀಲಿಸಿ ಇಪ್ಪತ್ತು ಮಂದಿಯನ್ನು ಆರಿಸಿ ರಾಜೇಂದ್ರನಲ್ಲಿಗೆ ಕರೆತಂದು, 'ಪ್ರಭೂ, ಬಂದಿರುವವರಲ್ಲಿ ಒಳ್ಳೆಯ ಬಲಿಷ್ಠರಾದ ಈ ಇಪ್ಪತ್ತು ಮಂದಿಯನ್ನು ತಾವು ಪರೀಕ್ಷಿಸಿ ಊಳಿಗಕ್ಕೆ ಸೇರಿಸಿಕೊಳ್ಳಬಹುದು' ಎಂದು ಅವರನ್ನೆಲ್ಲಾ ರಾಜನೆದುರಿಗೆ ನಿಲ್ಲಿಸಿದ.

ರಾಜನು ತನ್ನ ಪ್ರೀತಿಪಾತ್ರರಾದ ಜಯಸಿಂಹ, ರಾಜಸಿಂಹ ಎಂಬ ಇಬ್ಬರು ಭಟರನ್ನು ಕರೆದು ಅವರಿಗೆ ಹತ್ತು ಹತ್ತು ಮಂದಿಯನ್ನು ಒಪ್ಪಿಸಿ, 'ಇವರನ್ನು ಕತ್ತಿವರಸೆ, ಕುದುರೆ ಸವಾರಿ, ಗದೆಯೊಂದಿಗೆ ಹೊಡೆದಾಟಗಳಲ್ಲಿ ತಯಾರಿ ಮಾಡಿರಿ. ಇವರನ್ನು ಉತ್ತಮ ಭಟರನ್ನಾಗಿ ತಯಾರು ಮಾಡುವುದು ನಿಮ್ಮ ಹೊಣೆ' ಎಂದ.
ಅವರಿಬ್ಬರೂ ಹೊಸಬರನ್ನು ತಮ್ಮೊಂದಿಗೆ ತಂತಮ್ಮ ಆಖಾಡಗಳಿಗೆ ಕರೆದೊಯ್ದರು. ಅಂದಿನಿಂದಲೇ ತಯಾರಿ ಆರಂಭವಾಯಿತು.

ಒಂದು ತಿಂಗಳ ನಂತರ ರಾಜನಿಗೆ ತನ್ನ ಹೊಸ ಭಟರ ತಯಾರಿ ಹೇಗೆ ನಡೆಯುತ್ತಿದೆಯೆಂದು ನೋಡುವ ಮನಸ್ಸಾಯಿತು. ಮಂತ್ರಿಯನ್ನು ಕರೆದುಕೊಂಡು ಮೊದಲಿಗೆ ಜಯಸಿಂಹನ ಆಖಾಡಕ್ಕೆ ಹೋದರು. ಅವನು ನಮಸ್ಕರಿಸಿ, ಅವರನ್ನು ಒಳಗೆ ಕರೆದೊಯ್ದನು. ಅಲ್ಲಿ ತಯಾರಿ ಪಡೆಯುತ್ತಿದ್ದ ವೀರೆಲ್ಲ ಮೆತ್ತನೆಯ ಹಾಸಿಗೆಯ ಮೇಲೆ ಮಲಗಿದ್ದರು. ಯಾರೋ ಬಂದರೆಂಬ ಅರಿವಾದರೂ ಎದ್ದುನಿಲ್ಲದೆ ಮಲಗಿ ನಿದ್ರೆಹೋದವರಂತಿದ್ದರು.
ಮಂತ್ರಿಗೆ ಆಶ್ಚರ್ಯವಾಯಿತು. ಮುಜುಗರವಾಯಿತು. ರಾಜ, ಮಂತ್ರಿ ಬಂದಿರುವಾಗ ಭಟರು ಮಲಗಿರುವುದೆಂದರೇನು? ಜಯಸಿಂಹ, ಭಟರನ್ನು ಎಚ್ಚರಿಸಲು ಹೋದಾಗ ರಾಜನು, 'ಬಿಡು, ಸಾಮು ಮಾಡಿ ನಿದ್ರಿಸಿದ್ದಾರೆ' ಎಂದು ಹೇಳಿದ. ಆ ಭಟರೆಲ್ಲಾ ತಿಂದು ಕೊಬ್ಬಿದ್ದರು. ಸಾಮು ಮಾಡಿ ಖಂಡಗಳು ಎದ್ದು ಕಾಣುತ್ತಿದ್ದವು. ಆ ಮಟ್ಟಿಗೆ ತಯಾರಿ ಚೆನ್ನಾಗಿತ್ತು.
ಅಲ್ಲಿಂದ ಹೊರಟು ರಾಜ, ಮಂತ್ರಿ ರಾಜಸಿಂಹನ ಆಖಾಡಕ್ಕೆ ಹೋದ. ಅಲ್ಲಿನ ಭಟರು ನೆಲದ ಮೇಲೆ ಒರಗಿದ್ದರು. ರಾಜ ಬಂದೊಡನೆ ಧಿಗ್ಗನೆದ್ದು ರಾಜ, ಮಂತ್ರಿಗಳಿಗೆ ನಮಸ್ಕಾರ ಮಾಡಿ ತಲೆಬಾಗಿ ನಿಂತರು. ಅವರು ಊಳಿಗಕ್ಕೆ ಸೇರಿದಾಗಿನಿಂದ ಕೃಶರಾಗಿದ್ದರು, ಬಲಿಷ್ಠರಂತಿರಲಿಲ್ಲ.

ಮಹಾರಾಜರು ಕೋಪಗೊಂಡು, 'ರಾಜಸಿಂಹ, ನನ್ನ ಅಪ್ಪಣೆಯನ್ನು ನೀನು ಸರಿಯಾಗಿ ಪಾಲಿಸಲಿಲ್ಲ. ತಯಾರಿ ಕೊಡು ಎಂದು ಭಟರನ್ನಿತ್ತರೆ ನೀನು ಅವರಿಗೆ ಅರೆಹೊಟ್ಟೆ ಅನ್ನ ಇಕ್ಕಿದ್ದಿ. ನೆಲದ ಮೇಲೆ ಮಲಗಿಸಿದ್ದಿ. ನಿನಗೆ ವೀರಭಟರನ್ನು ತಯಾರಿಸುವ ಕ್ರಮ ತಿಳಿಯದು. ನೀನು ತಯಾರಿಸಿರುವವರನ್ನೂ, ಜಯಸಿಂಹ ತಯಾರಿಸಿರುವವರನ್ನೂ ಎಲ್ಲರೂ ನೋಡಲಿ. ನಿನ್ನ ಬಣ್ಣ ಹೊರಬೀಳಲಿ' ಎಂದು ಹೇಳಿ ಹೊರಟುಹೋದ.

ಇಬ್ಬರೂ ಅರಮನೆಗೆ ಹೋದ ನಂತರ ಮಂತ್ರಿಯು, ಪ್ರಭು, ತಮ್ಮ ಅಭಿಪ್ರಾಯ ಸರಿಯಾಗಿ ತೋರುತ್ತಿಲ್ಲ. ರಾಜಸಿಂಹನೇ ಸರಿಯಾಗಿ ತಯಾರು ಮಾಡಿದ್ದಾನೆ. ಜಯಸಿಂಹನಿಗೆ ತನ್ನ ಕೆಲಸ ತಿಳಿಯದು ಎಂದ.
ರಾಜನು, 'ಹಾಗೋ! ನಿಮ್ಮ ಕಣ್ಣಿಗೆ ರಾಜಸಿಂಹನ ನರಪೇತಲ ನಾರಾಯಣರು ಮಹಾ ಭಟರಾಗಿ ತೋರಿಬಂದರೋ?' ಎಂದು ಕೇಳಿದ.

'ಹಾಗಲ್ಲ ಪ್ರಭು, ವೀರರು ಹಾಯಾಗಿ ನಿದ್ರಿಸಬಾರದು. ಶತ್ರುಗಳು ಬಂದರೆ ತಟ್ಟನೆ ಎದ್ದು ಎದುರಿಸುವಂತೆ ಇರಬೇಡವೇ? ತಿಂದು ಕೊಬ್ಬಿದ ಆಳು ಅಲಂಕಾರಕ್ಕೆ ಆದಾನೇ ಹೊರತು ಆಪತ್ತನ್ನು ಎದುರಿಸಲಲ್ಲ. ಅಲ್ಲದೇ ಜಯಸಿಂಹನ ಆಳುಗಳು ಸೋಮಾರಿಗಳು. ನೀವು ಬಂದರೂ ಎದ್ದುನಿಲ್ಲುವ ವಿನಯವಿಲ್ಲದ ಉದ್ಧಟರು. ಇನ್ನು ನಿರ್ಧಾರ ನಿಮಗೇ ಬಿಟ್ಟಿದ್ದು' ಎಂದ ಮಂತ್ರಿ.

ರಾಜನು, 'ನಿಮ್ಮ ಸಲಹೆಗಳು ಹಿಂದಿನಂತೆಯೇ ನಿರ್ಭೀತವಾಗಿ, ನಿಷ್ಪಕ್ಷಪಾತವಾಗಿ, ನಿಖರವಾಗಿ ಇವೆಯೇ ಎಂದು ಪರೀಕ್ಷಿಸಲು ಹಾಗೆ ಹೇಳಿದೆ. ನಾಳೆ ದರ್ಬಾರಿನಲ್ಲಿ ಸನ್ಮಾನ ರಾಜಸಿಂಹನಿಗೇ ಹೊರತು ಜಯಸಿಂಹನಿಗಲ್ಲ' ಎಂದ.

- ಶಿವರಾಮ ಭಟ್, ಹತ್ತೊಕ್ಕಲು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments