ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಗ್ವಾಲಿಯರ್ ಧಾರೆ

ಹದಿನೆಂಟನೇ ಶತಮಾನದ ಕೊನೆಯ ಭಾಗ, ಮಿಯಾ ತಾನಸೇನ್‌ನ ವೈಭವದ ಕಾಲ ಕಳೆದು ಸರಿಸುಮಾರು ಮೂರು ಶತಮಾನಗಳೇ ಕಳೆದಿದ್ದವು.

Lingaraj Badiger
Updated On : 1 Jun 2013, 5:44 am

ಬಕ್ಷ ಪಕ್ಷಿ ಗುನುಗಿತು...

ಹದಿನೆಂಟನೇ ಶತಮಾನದ ಕೊನೆಯ ಭಾಗ, ಮಿಯಾ ತಾನಸೇನ್‌ನ ವೈಭವದ ಕಾಲ ಕಳೆದು ಸರಿಸುಮಾರು ಮೂರು ಶತಮಾನಗಳೇ ಕಳೆದಿದ್ದವು. ಗ್ವಾಲಿಯರ್ ಮಾತ್ರ ಎಂದಿನಿಂದಲೂ ತನ್ನ ಸಂಗೀತ ಸತ್ವವನ್ನು, ಪ್ರೇಮವನ್ನು, ಹಸಿವನ್ನೂ ಹಾಗೆಯೇ ಉಳಿಸಿಕೊಂಡೇ ಬಂದಿತ್ತು. ಆಗ ಗ್ವಾಲಿಯರ್ ದರಬಾರಿನಲ್ಲಿ ಗಾಯಕರಾಗಿ ಮೆರೆದು ಸಂಗೀತಕ್ಕೆ ತಮ್ಮ ವಿಶಿಷ್ಟ ಶೈಲಿಯ ಕೊಡುಗೆ ನೀಡಿ, ಅದನ್ನು ಸಮರ್ಥವಾಗಿ ತಮ್ಮ ಮುಂದಿನ ಜನಾಂಗಕ್ಕೂ ನೀಡಿ ಒಂದು ಪರಂಪರೆ, ಘರಾನೆಯನ್ನೇ ಹುಟ್ಟುಹಾಕಿದ ಮಹಾನ್ ಗಾಯಕ ಉಸ್ತಾದ್ ನತ್ತನ್ ಪೀರ್ ಬಕ್ಷ. ಇಂದು ಈ ಘರಾಣೆ, ಗ್ವಾಲಿಯರ್ ಘರಾನೆ ಎಂಬ ಹೆಸರಿನಿಂದ ವಿಶಾಲವಾಗಿ ಬೆಳೆದು ಹೆಮ್ಮರವಾಗಿ ಸಂಗೀತದ ಮೂಲ ಘರಾಣೆ ಎಂದು ಗುರುತಿಸಲ್ಪಟ್ಟು ಎಷ್ಟೋ ಜನ ಮಹಾನ್ ಮಹಾನ್ ಕಲಾವಿದರ ಉಗಮಕ್ಕೆ ಕಾರಣೀಭೂತವಾಗಿ ಶಾಸ್ತ್ರೀಯ ಸಂಗೀತದ ವೈಭವಕ್ಕೆ, ಭವ್ಯತೆಗೆ ಬುನಾದಿಯಾಗಿದೆ.
ಧ್ರುಪದ ಗಾಯನದ ಕಾಲದ ನಂತರ ಹುಟ್ಟಿದ ಮೊದಲ ಘರಾನೆಯಾಗಿ, ಧ್ರುಪದ ಶೈಲಿಯ ಅಂದವನ್ನೂ ತನ್ನಲ್ಲಿ ಅಳವಡಿಸಿಕೊಂಡ ಈ ಘರಾನೆಯಲ್ಲಿ ಎದ್ದು ಕಾಣುವ ಅಂಶವೆಂದರೆ ಈ ಗಾಯಕರು ಅವರ ಹಾಡಿನಲ್ಲಿ ಬಳಸುವ ಪರಿಶುದ್ಧ 'ಆ' ಕಾರ. ಕೇವಲ ಹಾಡಿನೊಳಗಿನ ಪದಗಳನ್ನೇ ಬಳಸುತ್ತ ಹಾಡುವುದಿಲ್ಲ ಇವರು. ನಿರಾಕಾರದ ಮೂಲ ಸ್ವರೂಪವಾದ 'ಆ' ಕಾರದಿಂದ ಹಾಡಿ ಸ್ವರಗಳನ್ನು ಮತ್ತೆ ಮತ್ತೆ ಸಾಣೆ ಹಿಡಿದ ವಜ್ರದಂತೆ ಹೊಳಪಿಸುತ್ತಾರೆ. ಸ್ವರದ ಪರಿಶುದ್ಧತೆಯ ಈ ಅನಾವರಣ ತುಂಬ ಕಠಿಣವೂ, ಆನಂದಮಯವೂ ಆಗಿದೆ.
ಒಳ್ಳೇ ಗರಡಿಯಲ್ಲಿ ವರ್ಷಗಟ್ಟಲೆ ಪಳಗಿರುವವನ ದೇಹದ ಸ್ನಾಯುಗಳೆಲ್ಲ ಚುರುಕಾಗಿ ಹೇಗೆ ಬೇಕಾದರೂ ಬಗ್ಗಿಸಬಲ್ಲಂತೆ ಗ್ವಾಲಿಯರ್ ಘರಾನೆಯಲ್ಲಿ ಧ್ವನಿಪೆಟ್ಟಿಗೆಯನ್ನು ಹೇಗೆ ಬೇಕಾದರೂ ಮಣಿಸಬಲ್ಲಂತೆ ಅದಕ್ಕೆ ಶಿಕ್ಷಣ ಕೊಡುವ ಒಂದು ವಿಶಿಷ್ಟ ಶೈಲಿಯೇ ಇದೆ. ಕೇವಲ ಧ್ವನಿಯೊಂದೇ ಅಲ್ಲ, ಅದೇ ತೀಕ್ಷ್ಣತೆಯಲ್ಲಿ ಬುದ್ಧಿಯನ್ನೂ ಪಳಗಿಸಿರುತ್ತಾರೆ. ಧ್ವನಿ ತಾನು ಹೆಚ್ಚು ಎಂದರೆ ಬುದ್ಧಿ ತಾನು ಇನ್ನೂ ಹೆಚ್ಚು ಎನ್ನುವಂತೆ ಒಂದಕ್ಕೊಂದು ಪೈಪೋಟಿಯಾಗುವ ರೀತಿಯಲ್ಲಿ ತಯಾರಿಗೊಳಿಸಿರುತ್ತಾರೆ.
ಅದಕ್ಕೇ ಉತ್ತಮವಾದ ಗ್ವಾಲಿಯರ್ ಗಾಯಕಿಯನ್ನು ಕೇಳಿದವರೊಬ್ಬರು ಆ ಗವಾಯಿಗಳನ್ನು ಕೇಳುತ್ತಿದ್ದರು, 'ಅಲ್ಲ... ನೀವು ಯೋಚನೆ ಮಾಡಿ ಆಮೇಲೆ ಹಾಡ್ತೀರೋ ಅಥವಾ ಹಾಡಿ ಆಮೇಲೆ ಯೋಚನೆ ಮಾಡ್ತೀರೋ?' ಸಂದೇಹ ಸಹಜವೇ. ಆದರೆ, ಆ ಗಾಯಕಿ ಉಸಿರಾಟದಂತೆ, ಎದೆ ಬಡಿತದಂತೆ, ಇರುವಿಕೆಯಂತೆ... ನಮ್ಮ ಆಲೋಚನೆಗಳ ಹಿಂದಿರುವ ಅಮೂರ್ತ ಆಲೋಚನೆಗಳಂತೆ... ಗಾಯಕನ ಅಸ್ತಿತ್ವದ ಭಾಗವಾಗಿಬಿಟ್ಟಿರುತ್ತವೆ.
ಇಂಥ ಸಂಗೀತವನ್ನು ಉಸ್ತಾದ್ ನತ್ತನ್ ಪೀರ್ ಬಕ್ಷ ಕೇವಲ ತಾವು ಹಾಡಿದ್ದಲ್ಲದೇ ತಮ್ಮ ಮಕ್ಕಳಾದ ಖಾದಿರ್ ಬಕ್ಷ ಹಾಗೂ ಪೀರ್ ಬಕ್ಷ ಇಬ್ಬರಿಗೂ ಸಂಪೂರ್ಣ ಧಾರೆಯೆರೆದರು. ಹುಟ್ಟಿನಿಂದ ಸಂಸ್ಕಾರವಾಗಿ ಬಂದ ಅವರ ಕಲೆಗೆ ಸಾಧನೆಯ ಶಕ್ತಿ ನೀಡಿ ಉತ್ಕೃಷ್ಟ ಗಾಯಕರನ್ನಾಗಿಸಿದರು. ಆಗ ಗ್ವಾಲಿಯರ್ ಸಂಸ್ಥಾನದ ಮಹಾರಾಜರಾಗಿದ್ದವರು ಶ್ರೀ ದೌಲತರಾವ್ ಶಿಂದೆ. ಅದ್ಭುತ ಸಂಗೀತ ಪ್ರೇಮಿ. ಇವರ ಅಸ್ಥಾನ ಎಂದರೆ ಶ್ರೇಷ್ಠ ಗಾಯಕರೂ ವಾದಕರೂ ಧ್ರುಪದೀಯ ಹಾಡುಗಾರರೂ ಹಾಗೂ ಕಲಾರಸಿಕರ ಸ್ವರ್ಗ ಎಂದೇ ಎನ್ನುವಂತಿತ್ತು. ಆದರೆ, ಈ ಪರಂಪರೆಗೆ ಹೀಗೆ ಭದ್ರ ಬುನಾದಿ ಇದ್ದರೂ ದುರ್ದೈವವಶಾತ್ ಖಾದಿರ್ ಬಕ್ಷ್, 'ಹದ್ದು, ಹಸ್ಸು ಹಾಗೂ ನತ್ತೂ' ಎಂಬ ಮೂವರು ಮಕ್ಕಳನ್ನು ಹಡೆದು, ಇನ್ನುಳಿದವರೆಲ್ಲ ಚಿಕ್ಕವರಿರುವಾಗಲೇ ಅಕಾಲ ವಿಧಿವಶರಾದರು. ಪೀರ್ ಬಕ್ಷರಿಗಾದರೋ ಸಂತಾನ ಭಾಗ್ಯವೇ ಇರಲಿಲ್ಲ.
(ಮುಂದುವರಿಯುವುದು)

-ಶ್ರುತಿ ಭಟ್
shrutikbhat @gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement