ಮನದ ಬೇಲಿಯಾಚೆ...
ಮನದ ನೋವನ್ನು ಅರೆರೆ, ಅದು ನೋವು ಯಾಕಾದೀತು? ಹಿತವಾದ ನೋವು; ಅದೂ ಅಲ್ಲ. ಆ ಕ್ಷಣದಲ್ಲಿ ಅದು ಸುಖವೇ! ಛೇ, ಸುಖವೋ, ಸಂಕಟವೋ ಅಥವಾ ಸುಖವ ಹೊಮ್ಮಿಸುವ ಸಂಕಟವೋ. ಒಟ್ಟಿನಲ್ಲಿ ಹಿತವಾದ ನೋವೆಂದಿಟ್ಟುಕೊಳ್ಳೋಣ. ಅಂಥ ನೋವನ್ನೇ ಯಾರೊಂದಿಗೂ ತೋಡಿಕೊಳ್ಳಲಾಗದ, ತೋಡಿಳ್ಳದಿರಲಾರದ ಸನ್ನಿವೇಶಕ್ಕೆ ತೊಳಲಾಟ ಎನ್ನುವುದಾದರೆ ಬಹುಶಃ ಆ ತೊಳಲಾಟದಲ್ಲೇ ನಾನಿದ್ದೆ. ಹೇಳಬೇಕೆನಿಸಿದ್ದನ್ನು ಹೇಳದೇ ಎಷ್ಟೊಂದು ನೋವನ್ನು ಅನುಭವಿಸಿ ದಿನದಿನವೂ ಸಾಯುವುದನ್ನು ಕಂಡಾಗಲೆಲ್ಲ ಅನಿಸುತ್ತಿತ್ತು, 'ಎಂಥಾ ಭ್ರಷ್ಟತನ!' ಅನುಭವದ ತಹತಹಕ್ಕೆ ಹಾತೊರೆಯುವ ಮನಸ್ಸುಗಳೂ ನಂತರದ ಅಭಿವ್ಯಕ್ತಿಗೆ ಹಿಂಜರಿದು ಎಂಥದ್ದೋ ಹಂಗಿಗೆ ಬೀಳುತ್ತವಲ್ಲಾ? ಮೊದಲಿನದಕ್ಕೆ ಸಹಜ ಬಯಕೆ ಎಂಬ ವ್ಯಾಖ್ಯಾನವನ್ನು ಕಟ್ಟಿ ಕೈ ತೊಳೆದುಕೊಂಡು ಬಿಡಬಹುದು. ಮಿಂಚಿನ ಕ್ಷಣದಲ್ಲಿ ಆಗಿ ಹೋಗಿದ್ದಕ್ಕೆ ಅಚಾತುರ್ಯ ಎಂತಲೂ ಕರೆದು ಮಾಫ್ ಮಾಡಿಬಿಡಬಹುದು. ಆದರೆ, ಅದನ್ನು ಹೇಳದೇ ಬಚ್ಚಿಟ್ಟು ಮಡಿವಂತಿಕೆಯ ಸೋಗು ಹಾಕಿದರದು ಹಾದರವಲ್ಲವೇ?
ಹೇಳಬೇಕಾದ್ದನ್ನು ಹೇಳಲಿಕ್ಕಾಗದ ಮಿತಿಯಲ್ಲಿ ಎಲ್ಲವನ್ನೂ ಶಾಯಿಯ ಮೂಲಕ ಅಕ್ಷರ ರೂಪದಲ್ಲಿ ಕಕ್ಕಿ ಮನದ ಬಸಿರಿಳಿಸಿಕೊಂಡು ಹಗುರಾಗುವುದರ ಜತೆಗೆ ಬರಹಗಾರನ ಖ್ಯಾತಿ, ಸಂಭಾವಿತತನ ಎರಡನ್ನೂ ಪಡೆಯೋಣವೆಂದರೆ ನೆಟ್ಟಗೆ ಒಂದು ವಾಕ್ಯಕ್ಕೆ ಬೇಕಾದ ಪದಗಳೇ ದಕ್ಕುವುದಿಲ್ಲ. ಸ್ವಂತವನ್ನು ದಿಟ್ಟವಾಗಿ, ಸಂಕೋಚವಿಲ್ಲದೇ ಬಿಚ್ಚಿಟ್ಟು ಭಾಷಣಕ್ಕೆ ಭಾಷೆಯ ತೋರಣ ಕಟ್ಟಿ ಎಲ್ಲರಿಂದ ಭೇಷ್ ಎನಿಸಿಕೊಳ್ಳಬಹುದಿತ್ತೇನೋ. ಒಬ್ಬರೆದುರು ನಿಂತಾಗಲೇ ಅದುರುವ ಕಾಲು ವೇದಿಕೆಯ ಹತ್ತಿ ನಿಲ್ಲುವ ತ್ರಾಣವನ್ನೆಲ್ಲಿಂದ ಗಳಿಸಿಕೊಂಡೀತು? ಪ್ರಜ್ಞಾಪೂರ್ವಕ ಸ್ಥಿತಿ, ಆಯ್ಕೆ ಎರಡನ್ನೂ ದಾಟಿ ಮತ್ತಿನ್ನೇನನ್ನೋ ಪಡೆಯುವ ಹಂಬಲವಂತೂ ಮನದಲ್ಲಿ ದಿನೇದಿನೇ ವೃದ್ಧಿಸುತ್ತಲೇ ಸಾಗುತ್ತಿತ್ತು. ಅಪಘಾತಗಳು ಸಹಜ. ಎಲ್ಲರೂ ಹೇಳುವ ಮಾತು. ಹಾಗೆಂದು ಸುಮ್ಮನಿದ್ದು ಬಿಡುತ್ತಾರೆಂದೇನಿಲ್ಲ- ಜಾಗೃತೆಯಾಗಿರಬೇಕು. ಮೈಮೇಲೆ ಎಚ್ಚರವಿರಬೇಕಲ್ಲಾ? ಇಂದಿನ ವೇಗದ ಯುಗದಲ್ಲಂತೂ ಮೈಯಲ್ಲಾ ಕಣ್ಣಾಗಿರಬೇಕು. ತಪ್ಪು ನಮ್ಮದೇ ಆಗಿರಬೇಕೆಂದೇನೂ ಇಲ್ಲ. ಎದುರಿನವರು ಎಡವಿದರೂ ಅನುಭವಿಸುವವರು ನಾವೇ... ಮನೆಯ ಅಡುಗೂಲಜ್ಜಿಯೊಬ್ಬರೇ ಅಲ್ಲ, ಅಕ್ಕಪಕ್ಕದ ಗರತಿ(?) ಗಯ್ಯಾಳಿಗಳದ್ದೂ ಇದೇ ಉಪದೇಶ. ಆಗಿದ್ದು ಆಗಿ ಹೋಯಿತು. ಅದರ ಬಗ್ಗೆಯೇ ಯೋಚಿಸಿ ಕೊರಗುತ್ತಾ ಕುಳಿತುಕೊಳ್ಳುವುದಕ್ಕಿಂತ ಮುಂದಿನದರ ಬಗ್ಗೆ ಯೋಚಿಸುವುದು ಬುದ್ಧಿವಂತರ ಲಕ್ಷಣ ಎಂದು ಗೀತೋಪದೇಶ ಕೊಡಿಸುವವರೇ ಹಿಂದಿನ ಅನುಭವದ ಮೇಲೆ ಪಾಠ ಕಲಿಯಬೇಕು. ಎಲ್ಲವನ್ನೂ ಮರೆತು ಗೂಳಿಯಂತೆ ಮುನ್ನುಗ್ಗುತ್ತಿದ್ದರೆ, ಕೊಂಬಿನ ಜತೆಗೆ ತಲೆಯನ್ನೂ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿ ವಿಚಿತ್ರವಾದುದೊಂದು ಭಯವನ್ನು ಹುಟ್ಟಿಸುತ್ತಾರೆ. ಎರಡರ 'ನಡು'ವಿನ ಇಂಥ ಗೆರೆ ಸರಿ-ತಪ್ಪುಗಳ ನಡುವೆಯೂ ಇದೆ ಎಂಬುದನ್ನು ಬಲವಾಗಿ ನಂಬಿದ್ದಾಗಲೇ ಇವೆರಡರಿಂದ ಹೊರತಾದ ಇನ್ನೊಂದು ಮುಖದ ಪರಿಚಯವಾದದ್ದು. ಏಕೆಂದರೆ ಒಂದು ಸಲ ಮನಸ್ಸಿಗೆ ಇದು ಏನೂ ಅಲ್ಲ, ಸಹಜ ಅಂತನ್ನಿಸಿಬಿಟ್ಟರೆ ಈ ಜಗತ್ತಿನಲ್ಲಿ ಪಾಪಪ್ರಜ್ಞೆ ಎನ್ನುವುದೇ ಅಸ್ತಿತ್ವದಲ್ಲಿ ಇರುವುದಿಲ್ಲ. ಹಾಗೆಯೇ ಹೆಜ್ಜೆಗೊಂದು ಪಾಪ ಭೀತಿಗೆ ಸಿಲುಕಿ, ಇಡೀ ಜೀವನವನ್ನು ಕೊರಗಿನಲ್ಲೇ ಕಳೆಯುವುದರಲ್ಲೂ ಅರ್ಥವಿಲ್ಲ. ಅವೆರಡರ ಮಧ್ಯದ ಸ್ಥಿತಿಯೊಂದಿದ್ದರೆ ಅದನ್ನು ಪಶ್ಚಾತ್ತಾಪವೆಂದು ಕರೆಯುತ್ತಾರೇನೋ?
ಕೆಲವೊಮ್ಮೆ ಅನುಭವಗಳೇ ಮುಖ್ಯವಾಗಿ ವಸ್ತು, ವ್ಯಕ್ತಿ, ವಿಷಯಗಳು ಗೌಣವೆಂದು ಕಂಡುಬಿಡುವ ಅಪಾಯಗಳಿವೆ. ಅಂಥ ಅನುಭವದ ಹಂಬಲಕ್ಕೆ ಬಿದ್ದು, ಅದು ಹಠವಾಗಿ ಹೊರಹೊಮ್ಮಿ ಮುಂದುವರಿದದ್ದು ಅಷ್ಟಕ್ಕೇ ಸೀಮಿತವಾಗದೇ ಜೀವನದಲ್ಲಿ ಗೀಳಾಗಿ ಅಂಟಿಕೊಂಡುಬಿಡುವ ಅಪಾಯವೂ ಇದೆ. ಅದೇ ಕಾಲಕ್ಕೆ ಮನದ ತುಂಬ ಚಪಲವನ್ನೇ ತುಂಬಿಕೊಂಡು ಸೋಗಾಲಾಡಿತನದಲ್ಲಿ ತಿರುಗಾಡುವುದರಲ್ಲೂ ಅರ್ಥವಿಲ್ಲ. ಮೊದಲ ಪಾಪದ ಬಳಿಕದ ಪಶ್ಚಾತ್ತಾಪದ ಸ್ವರೂಪವೇ ಅಭಿವ್ಯಕ್ತಿ. ಅಂದರೆ ಆನಂತರ ಮತ್ತದು ಘಟಿಸದು ಎಂಬ ದೃಢ ನಿಶ್ಚಯದ ಸ್ಥಿತಿಯದು. ಪ್ರೀತಿಯ ಮರೀಚಿಕೆಯ ಬೆನ್ನತ್ತಿ ಮಿಂದವರುಂಟೇ? ತೀರಾ ಸಿನಿಕತನದ ಹೇಳಿಕೆಯಾದೀತು. ಪ್ರೀತಿಯಷ್ಟೇ ಅಲ್ಲ, ಸಂಬಂಧಗಳ ಗಟ್ಟಿತನಕ್ಕೆ ನಾವು ಕೊಟ್ಟದ್ದೆಷ್ಟು, ಪಡೆದದ್ದೆಷ್ಟು ಎಂಬೆರಡೂ ಮುಖ್ಯವಾಗುತ್ತವೆ. ಅಂಥ ಪ್ರೀತಿಯ ಮೇಲೆ ನಂಬಿಕೆಯಿಟ್ಟು ಕೊಟ್ಟು ಪಡೆದಿದ್ದೇನೆ. ಕೇವಲ ಪಶ್ಚಾತ್ತಾಪವಿಲ್ಲ. ಮುಂದೆ ಜೀವನದುದ್ದಕ್ಕೂ ಕೊಡುಕೊಳ್ಳುವುದರಲ್ಲೇ ಸಾಮರಸ್ಯ ಸಾಧಿಸುತ್ತೇವೆ ಎಂಬ ಭರವಸೆಯೊಂದಿಗೆ ಆ ಹುಡುಗನತ್ತ ತಿರುಗಿದೆ. ಅರೆ, ಅವನೆಲ್ಲಿ? ಗಾಬರಿಗೆ ಬಿದ್ದವಳ ಮೈಯೆಲ್ಲಾ ಬೆವರಿತು. ಅಷ್ಟೆ. ಎಚ್ಚರಾಗಿತ್ತು. ಸುಂದರ ಕನಸಿನ ಕೊನೆಯಲ್ಲಿ ಮೈಯೆಲ್ಲಾ ನೆನೆದು ತೊಪ್ಪೆ. ಜ್ವರ ಇಳಿಯುವಾಗ ಯಾವಾಗಲೂ ಬೆವರುತ್ತದಂತೆ. ಮನದ ಜ್ವರ ಇಳಿದು ಹಗುರಾಗಿತ್ತು.
-ರಾಧಾ ಸೋಚನಿ
abhyagatha@yahoo.co.in
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.