ಸಿನಿ ಗಾಳಿ ಸಹಿ ಹಾಕಿದೆ ಮನದಲ್ಲಿ...
ಭಾರತೀಯ ಸಿನಿಮಾಕ್ಕೆ ಹೇಳಿಕೊಳ್ಳುವುದಕ್ಕೆ ನೂರು ವರ್ಷಗಳ ಚರಿತ್ರೆ ಇದೆ. ಆದರೆ ಸಿನಿಮಾ ನೋಡುಗರಿಗೆ, ಪ್ರತಿಯೊಬ್ಬರಿಗೂ ಅವರವರದೇ ಚರಿತ್ರೆಯಿದೆ. ಅದು ಭಾವನೆ, ಕನಸು, ಥಿಯೇಟರಿನ ಕತ್ತಲು- ಬೆಳಕುಗಳ ಸಂಗಮದಲ್ಲಿ ಮೂಡುವ ಚರಿತ್ರೆ. ಅಂಥದೊಂದು ನೋಡುಗನ ಸ್ವಗತ ಇಲ್ಲಿದೆ...
ನನ್ನ ಅಜ್ಜ ಈಗ ಇಲ್ಲ. ಅವರಿದ್ದುದು ಉಡುಪಿಯ ಸಮೀಪದ ಪಡುಕುದ್ರು. ಅಂದರೆ ತೋನ್ಸೆಯಲ್ಲಿ. ಆಗ ನಾವಿದ್ದುದು ಪುತ್ತೂರಿನಲ್ಲಿ. ನನ್ನ ಅಜ್ಜನಿಗೆ ಸಿನಿಮಾದ ಹುಚ್ಚು ಎಷ್ಟಿತ್ತು ಎನ್ನುವುದನ್ನು ಪರದೆಯ ಮೇಲೆ ಮೂಡಿಸಬೇಕೇ ಹೊರತು ಅನ್ಯ ಮಾರ್ಗವೇ ಇಲ್ಲ! ಅಕ್ಷರಗಳು ಪ್ರೊಜೆಕ್ಟರಿನ, ಬೆಳಕಿನ, ಫಿಲ್ಮಿನ ಕೆಲಸಗಳನ್ನು ಒಟ್ಟಿಗೆ ಮಾಡುವುದರಿಂದ ಮತ್ತು ಅಕ್ಷರಗಳು ಬಿಳಿ ಹಾಳೆಯ ಮೇಲೆ ಮೂಡುವುದರಿಂದ ಬರವಣಿಗೆಯ ಮೂಲಕವೂ ಚಲನಚಿತ್ರವನ್ನು ತೋರಿಸಬಹುದೋ ಏನೋ! ನನ್ನಜ್ಜ ಪುತ್ತೂರಿಗೆ ಬರುವ ಮೊದಲು ಪತ್ರ ಬರೆದು ವಿಚಾರಿಸುತ್ತಿದ್ದುದೆ ಅರುಣಾ ಟಾಕೀಸಿನಲ್ಲಿ ಯಾವ ಸಿನಿಮಾ ನಡೆಯುತ್ತಿದೆ ಎನ್ನುವುದನ್ನೇ! ಅವರು ಈಗಾಗಲೆ ಉಡುಪಿಯಲ್ಲಿ ಆ ಚಿತ್ರ ನೋಡಿದ್ದರೆ ಬರುವಂಥ ಕಾರ್ಯಕ್ರಮವನ್ನು ಒಂದು ವಾರ ಮುಂದೂಡುತ್ತಿದ್ದರು. ಇದು ನನ್ನಜ್ಜನ ಸಿನಿಮಾ ಪ್ರೀತಿ!
ಭಾಷಾ ವ್ಯಾಮೋಹದ ಯಾವ ಕಟ್ಟು ಪಾಡುಗಳೂ ಇಲ್ಲದೆ ಶಿವಾಜಿ ಗಣೇಶನ್, ಎಂ.ಜಿ. ರಾಮಚಂದ್ರನ್, ರಾಜ್ಕುಮಾರ್, ಉದಯಕುಮಾರ್, ಕಲ್ಯಾಣ್ಕುಮಾರ್, ಪದ್ಮಿನಿ, ಬಿ. ಸರೋಜಾದೇವಿ, ಜಯಲಲಿತ, ಜಯಂತಿ, ಆರ್. ನಾಗೇಶ್, ನರಸಿಂಹರಾಜು ಇವರನ್ನೆಲ್ಲಾ ತುಂಬಿಕೊಂಡು ಹಾಗೆಯೇ ಮೌನವಾಗಿ ಒಂದಾಗುತ್ತಿದ್ದರು ನನ್ನಜ್ಜ! ನನ್ನ ಸಿನಿಮಾ ಹುಚ್ಚು ಪ್ರಾಯಃ ತಾಯಿ ಕಡೆಯಿಂದ ಬಂದ ಬಳುವಳಿಯೆ ಆಗಿರಬೇಕು! ನನ್ನ ತಂದೆ ಅದನ್ನು ಅಷ್ಟೇನೂ ಹಚ್ಚಿಕೊಂಡವರಲ್ಲ; ಅವರ ತಂದೆಯವರಂತೂ ಸಿನಿಮಾದ ಬಗ್ಗೆ ಮಾತನಾಡಿದ್ದನ್ನು ನಾನು ಕೇಳಿಲ್ಲ. ಸಿನಿಮಾ ಎಂದರೆ ನನ್ನ ತಾಯಿಯ ತಂದೆ ಎನ್ನುವಷ್ಟರ ಮಟ್ಟಿಗೆ ಮಾತೃಪ್ರೇಮ ಬೆಳೆದು ಬಂದಿದೆ! ಈಗಲೂ ಆ ಪ್ರೀತಿ ಉಳಿದಿರುವುದು ಈ ಕಾರಣಕ್ಕಾಗಿಯೆ ಇರಬೇಕು!
ನಾವು ಮೊಮ್ಮಕ್ಕಳೆಲ್ಲಾ ತೋನ್ಸೆಗೆ ಹೋದಾಗ ಕಾರು ಮಾಡಿ ಉಡುಪಿಗೆ ಕರೆದುಕೊಂಡು ಹೋಗಿ ಎರಡೆರಡು ಸಿನಿಮಾ ತೋರಿಸಿ, ಹೋಟೆಲಿನಲ್ಲಿ ಊಟ, ತಿಂಡಿ ಮಾಡಿಸಿ ಕಪ್ಪು ಬಿಳುಪಿನ ಕನಸುಗಳನ್ನು ಹೃದಯಕ್ಕಿಳಿಸಿದವರೂ ಅವರೇ ಅಲ್ಲವೆ? ಅದಕ್ಕೆ ಇರಬೇಕು ಮೂರು ನಾಲ್ಕು ಸ್ನೇಹಿತರೆಲ್ಲಾ ಒಟ್ಟಾಗಿ ಪುತ್ತೂರಿನಿಂದ ಬೆಳ್ಳಂ ಬೆಳಗ್ಗೆಯೆ ಹೊರಟು ಮಂಗಳೂರು ಸೇರಿ ವಿಶ್ವಭವನದಲ್ಲಿ ಅವಲಕ್ಕಿ, ಮೊಸರು ತಿಂದು ಬೆಳಗಿನ ದೇಖಾವೆಗೆ ತಯಾರಾಗಿ ಜ್ಯೋತಿಯೆದುರೋ, ಸೆಂಟ್ರಲಿನೆದುರೋ ಕ್ಯೂ ನಿಂತು ಬಿಡುತ್ತಿದ್ದೆವು! ಮಾರ್ನಿಂಗ್ ಶೋ ಮುಗಿದ ಕೂಡಲೆ ಮ್ಯಾಟನಿ, ಅದು ಮುಗಿದ ಕೂಡಲೆ ಸಂಜೆಯ ಶೋ ನೋಡಿ, ಮೈಸೂರಿಗೆ ಹೋಗುವ ರಾತ್ರಿ ಬಸ್ಸಿನಲ್ಲಿ ನಿಂತುಕೊಂಡೇ ಪ್ರಯಾಣ ಮಾಡಿ ನಡುರಾತ್ರಿ ಊರು ಸೇರುತ್ತಿದ್ದ ಅನುಭವ ಹಳೇ ಸಿನಿಮಾದ ಹಾಡಿನಂತೆ ಈಗಲು ನೆನಪಾಗುತ್ತಲೆ ಇರುತ್ತದೆ! ಈ ನಡುವೆ ಊಟ ಮಾಡಿದರೂ ತಿನ್ನದಿದ್ದರೂ ನಮಗೆ ಏನೂ ಅನಿಸುತ್ತಲೇ ಇರಲಿಲ್ಲ! ಹುಚ್ಚಿಗೆ ನೋವಿದೆಯೆ ನೀವೇ ಹೇಳಿ! ಕೆಲವೊಮ್ಮೆ 3 ಸಿನಿಮಾ ನೋಡಿದ್ದು ಸಾಕಾಗದೆ ರಾತ್ರೆ 9.30ರ ಶೋ ನೋಡಿ ಸುಜಾತದಲ್ಲೋ, ವಿಶ್ವ ಭವನದಲ್ಲೋ ರೂಂ ಮಾಡಿ ಇರುಳು ಕಳೆದದ್ದೂ ಇದೆ! 60ರ ದಶಕದಲ್ಲಿ ಸಿನಿಮಾ ಬಿಟ್ಟರೆ ಬೇರೇನಿತ್ತು ಹೇಳಿ? ಸಿನಿಮಾ ನೋಡದವರನ್ನು ಕಂಡಾಗ ನಮಗೆ ಆಶ್ಚರ್ಯವಾಗುತ್ತಿತ್ತು. ಸಿನಿಮಾ ನೋಡದೆ ಬದುಕುವುದೂ ಸಾಧ್ಯವೆ ಎನ್ನುವ ಪ್ರಶ್ನೆಗೆ ಸಾಧ್ಯವೆ ಇಲ್ಲ ಎನ್ನುವ ಉತ್ತರ ಸಿದ್ಧವಾಗಿಯೆ ಇರುತ್ತಿದ್ದ ಕಾಲದಲ್ಲಿ ನಾವಿದ್ದೇವೆನ್ನುವುದೆ ಹೆಮ್ಮೆಯ ವಿಷಯವಲ್ಲವೆ?
1960ರಿಂದ ನಾನು ಸಿನಿಮಾ ನೋಡುತ್ತಿದ್ದೇನೆ. ನನಗಾಗ 10 ವರ್ಷ. ಅದರ ಹಿಂದೆಯೂ ಅಮ್ಮನ ಜೊತೆ ಸಿನಿಮಾ ನೋಡಿರಲೂಬಹುದು! ಅಂದರೆ ನೂರು ವರ್ಷಗಳ ಸಿನಿಮಾ ರಂಗದ ಇತಿಹಾಸದಲ್ಲಿ 53 ವರ್ಷಗಳ ಒಡನಾಟ ನನ್ನದು! 'ಬಂಗಾರದ ಮನುಷ್ಯ' ಬಿಡುಗಡೆಯಾದಾಗ ನಾನು ಮೈಸೂರಿನಲ್ಲಿ ಎಂ.ಎ. ಮಾಡುತ್ತಿದ್ದೆ. ಒಂದೇ ಸಿನಿಮಾವನ್ನು ಐದಾರು ಬಾರಿ ನೋಡಿದ್ದು ಅದೇ ಮೊದಲು! ಹೋಟಲಿನಲ್ಲಿ ಊಟಕ್ಕೆ ಹೋಗುವಾಗ ಬಂಗಾರದ ಮನುಷ್ಯನ ರೆಕಾರ್ಡ್ ಹಾಕಿ ಎಂದು ನಾವು ಒತ್ತಾಯ ಮಾಡುತ್ತಿದ್ದೆವು. ಒಮ್ಮೆಯಂತೂ ರೆಕಾರ್ಡ್ ಹಾಕಲಿಲ್ಲವೆಂದು ಮಂಡ್ಯ ಕಡೆಯ ಹುಡುಗರು ಗಲಾಟೆ ಮಾಡಿದ್ದರು. ನಗುನಗುತಾ ನಲೀ ನಲಿ ಎಂದು ಕೇಳಿದ ಮೇಲೆಯೆ ಅನ್ನ ಸಾರು ಗಂಟಲೊಳಗೆ ಇಳಿಯುತ್ತಿತ್ತು ಎಂದರೆ ಅಚ್ಚರಿಪಡಬೇಡಿ! ಆಗ ನನಗೆ 23ರ ಹರೆಯ! ಮೊನ್ನೆ ಮೊನ್ನೆ ಕಿಚ್ಚ ಸುದೀಪ್ ಅಭಿನಯದ 'ಬಚ್ಚನ್' ನೋಡಿದಾಗ ನನಗೆ 63ರ ಹಿರಿಯ ನಾಗರಿಕನ ಪಟ್ಟ ಲಭಿಸಿಯಾಗಿತ್ತು. ಸಿನಿಮಾ ನೋಡುತ್ತಾ, ನೋಡುತ್ತಾ, ಅದರಲ್ಲಿ ಬರುವ ಇಷ್ಟದ ಹಾಡುಗಳನ್ನು ಮೆಲುಕು ಹಾಕುತ್ತಾ ಹಾಕುತ್ತಾ ಬದುಕು ಬೆಳ್ಳಿ ಪರದೆಯ ಮೇಲೆ ಬಣ್ಣಗಳನ್ನು ಬಳಿದಿದೆ, ಬವಣೆಗಳನ್ನು ಬಿತ್ತಿದೆ, ಸುಖಗಳನ್ನು ಸುತ್ತಿವೆ, ಕಷ್ಟಗಳನ್ನು ಕಟ್ಟುಕೊಟ್ಟಿವೆ. ಸಿನಿಮಾಗಳಲ್ಲಿ ಬರುವಂಥ ನೋವು ನಲಿವುಗಳಿಗೆ ನಾವು ಸಾಕ್ಷಿಯಾಗುವುದರಲ್ಲೂ ಒಂದು ಗಮ್ಮತ್ತಿದೆ ಎನ್ನುವ ಸತ್ಯ ಅರಿವಾಗಿದೆ.
ಈಗ ಮೊದಲಿನ ಹಾಗೆ ದಿನಕ್ಕೆರಡು ಮೂರು ಸಿನಿಮಾಗಳನ್ನು ನೋಡಲಾರೆ! ಹೋಗಲಿ ಬಿಡಿ ಎಂದರೆ ವಾರಕ್ಕೊಂದು ಸಿನಿಮಾ ಕೂಡಾ ನೋಡುವ ಸ್ಥಿತಿಯಲ್ಲಿ ಇಲ್ಲ. ಹೀಗಿದ್ದೂ ಸಿನಿಮಾ ನೋಡುವ ಹಂಬಲ ಒಳಗೆ ಇದ್ದೇ ಇದೆ. ಇದು ಸೈಕಲ್ ತುಳಿದ ಹಾಗೆ. ಈಜಿದ ಹಾಗೆ! ಒಮ್ಮೆ ಕಲಿತರೆ ಮುಗಿಯಿತು. ಆಮೇಲೆ ಒಂದು ವರ್ಷದ ಬಿಡುವಿನ ಬಳಿಕವೂ ಯಾರಾದರೂ ಸೈಕಲ್ ಕೊಟ್ಟರೆ ತುಳಿದೇ ತುಳಿಯುತ್ತೇವೆ. ಸಿನಿಮಾ ನೋಡುವ ಆಸೆಯೂ ಹೀಗೆಯೇ! ಕಣ್ಣುಗಳು ಪತ್ರಿಕೆಯಲ್ಲಿ ಬರುವ ಸಿನಿಮಾಗಳ ಜಾಹಿರಾತುಗಳನ್ನು ನೋಡುತ್ತಲೆ ಇರುತ್ತವೆ. ಯಾವುದಾದರೂ ಚಲನಚಿತ್ರ ಎರಡು ಮೂರು ವಾರ ಓಡಿದರೆ ಏನೋ ಇದೆಯೆನಿಸಿ ಮನಸ್ಸು ಆ ಸಿನಿಮಾದ ಕನಸು ಕಾಣತೊಡಗುತ್ತದೆ! ನಿಮಗೆ ಆಶ್ಚರ್ಯವಾಗಬಹುದು, ಅದೇ ಸಮಯ ಹೆಂಡತಿಯೋ, ಮಗಳೋ ಆ ಸಿನಿಮಾಕ್ಕೆ ಹೋಗೋಣವೆ ಎಂದು ಕೇಳಿಯೇ ಕೇಳುತ್ತಾರೆ! ಇದು ಸಿನಿಮಾದ ಹಂಬಲಕ್ಕಿರುವ ಒಂದು ಮಾನಸಿಕ ಆಯಾಮ! ಈ ಆಯಾಮದಲ್ಲಿ ಎರಡು ಮನಸುಗಳು ಒಂದೇ ಕನಸು ಕಾಣುತ್ತವೆ. ಹಾಗೆ, ಒಂದು ಮುಸ್ಸಂಜೆ 7 ಗಂಟೆಯ ಶೋಗೆ ಕುಟುಂಬ ಸಮೇತ ಹೊರಟೇ ಹೊರಡುತ್ತೇವೆ!
ಹಿಂದೆ, ಊರಿನ ಪರಿಚಿತ ಟಾಕೀಸಿನಲ್ಲಿ ಪರಿಚಿತ ಗೇಟ್ಕೀಪರಿನ ಸ್ಪರ್ಶದಲ್ಲಿ, ಫ್ಯಾನಿನ ಕೆಳಗಿನ ಅವೇ ಸೀಟುಗಳಲ್ಲಿ ಕುಳಿತು ನೋಡಿದ ಸಿನಿಮಾಗಳ ಲೆಕ್ಕವಿಡುವಂತಿಲ್ಲ. ಮುಂದಿನ ವಾರ ಯಾವ ಸಿನಿಮಾ ಎನ್ನುವ ಮಾಹಿತಿ ಮೊದಲೇ ಸಿಗುತ್ತಿದ್ದುದರಿಂದ ಆ ಸಿನಿಮಾ ಬರುವ ದಿನಾಂಕವನ್ನು ಕಾಯುವುದರಲ್ಲೂ ಒಂದು ಮಜಾವಿತ್ತು! ಪರೀಕ್ಷೆಗಳ ನಡುವೆ ಮೂರು ದಿನಗಳ ಬಿಡುವಿದ್ದರೆ ಒಂದು ಸಿನಿಮಾ ನೋಡುವುದಂತೂ ಗ್ಯಾರಂಟಿ! ಸಿನಿಮಾ ನೋಡಿ ನಾನು ಫೈಲ್ ಆದದ್ದೇ ಇಲ್ಲ. ಸಿನಿಮಾ ನೋಡಿದ ಮಾರನೆಯ ದಿನ ಬರೆದ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳು ಬಂದದ್ದೂ ಇದೆ.
ಆ ಕಾಲವೆ ಹಾಗಿತ್ತು ಅನ್ನಿ! ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳು ನಮಗೆ ಕ್ಲಾಸ್ ಪರೀಕ್ಷೆಗಳ ಹಾಗೆಯೇ ಭಾಸವಾಗುತ್ತಿತ್ತು! 'ಪರೀಕ್ಷಾ ಜ್ವರ' ಆಗ ಇರಲೇ ಇಲ್ಲ! ಒಂದಿಷ್ಟು ಇದ್ದವರೂ 'ಎರಡು ಕನಸು' ನೋಡಿ ಬಂದು ಜ್ವರ ಬಿಟ್ಟಿತು ಎಂದುಕೊಳ್ಳುತ್ತಿದ್ದರು. ಮನೆಯೊಳಗಿನ ಟಿ.ವಿ., ಕಂಪ್ಯೂಟರಿಗಿಂತ ಹೊರಗಿನ ಥಿಯೇಟರ್ ಒಳ್ಳೆಯದಲ್ಲವೆ? ಪರೀಕ್ಷೆಗಳಿವೆಯೆಂದು ಟಾಕೀಸ್ ಬಂದ್ ಮಾಡಿದ ಉದಾಹರಣೆ ಇದೆಯೆ?
ಈಗ ಥಿಯೇಟರ್ ಸಂಸ್ಕೃತಿಯೂ ಬದಲಾಗಿದೆ. ಹಳೆ ಕಾಲದ ಟಾಕೀಸುಗಳಿಗೆ ಟಾಂಗ್ ಕೊಡುವಂತೆ 'ಬಿಗ್ ಸ್ಕ್ರೀನ್'ಗಳು ಬಂದಿವೆ. ಮಲ್ಟಿಫ್ಲೆಕ್ಸ್ಗೆ ಹೋಗಿ ಸ್ಕ್ರೀನ್ ನಂ. 1, ಅಥವಾ 3ರಲ್ಲಿ ಆರಾಮವಾಗಿ ಕುಳಿತು ಸಿನಿಮಾ ನೋಡಿದ ಮೇಲೆ ನನ್ನ ಹೆಂಡತಿಯೂ ಟಾಕೀಸಿಗೆ ಹೋಗಿ ಸಿನಿಮಾ ನೋಡುವುದೆ ಇಲ್ಲವೆನ್ನುತ್ತಿದ್ದಾಳೆ. ಆದರೆ ನನ್ನ ಮನಸಿರುವುದು ಪರಂಪರೆಯ ಪರದೆಯ ಮೇಲೆಯೇ! ಆ ಟಾಕೀಸ್, ಅದರ ಪರದೆ, ಅಲ್ಲಿನ ಇಡೀ ವಾತಾವರಣಕ್ಕೆ ಬಾಲ್ಯವನ್ನು ಕೆಣಕಿ ಕಾಡುವ, ಕಾಡಿ ನೆನಪಾಗಿ ಉಳಿಯುವ ಅದ್ಭುತ ಶಕ್ತಿಯಿದೆ! ಆ ಅದ್ಭುತ ಆಕರ್ಷಣೆ ಈ ಆಧುನಿಕ ಪರದೆಯ ಪರಿಸರಕ್ಕೆ ಇಲ್ಲವೇ ಇಲ್ಲ! ಊರಿನ ಥಿಯೇಟರಿನ ಎದುರೇ ಒಂದು ಸ್ವೀಟ್ಸ್ಟಾಲ್ ಇತ್ತು. ಅಲ್ಲಿನ ಗೋಧಿ ಹಲ್ವಾದ ರುಚಿಯೇ ರುಚಿ! ಮಧ್ಯಂತರದ ಎರಡು ಹಾಡುಗಳ ವಿರಾಮದಲ್ಲಿ ಓಡೋಡಿ ಅಲ್ಲಿಗೆ ಹೋಗಿ ಹಲ್ವಾ ತಿಂದು ಅದರ ಪರಿಮಳದ ಜೊತೆಗೆ ಇನ್ನೇನು ಸಿನಿಮಾ ಮತ್ತೆ ಶುರುವಾಗುತ್ತದೆ ಎನ್ನುವಾಗ ಸ್ವಸ್ಥಾನ ಸೇರುತ್ತಿದ್ದ ಥ್ರಿಲ್ ಇನ್ನೂ ಹಸಿಯಾಗಿಯೇ ಇದೆ. ಒಬ್ಬ ಮುದುಕನಿದ್ದ, ಅವನ ಹೆಸರನ್ನು ನಾವು ವಿಚಾರಿಸಿಯೆ ಇಲ್ಲ. ಆತ ಮಾಡುತ್ತಿದ್ದ ಮಸಾಲೆ ಕಡ್ಲೆಯ ರುಚಿ ಯಾವ ಸಿನಿಮಾದ ಫೈಟಿಂಗ್ ಸೀನ್ಗೂ ಕಡಿಮೆಯಿರಲಿಲ್ಲ.
ನನ್ನ ಅಜ್ಜನಿಗೊಂದು ಇಂಗ್ಲೀಷ್ ಪಿಕ್ಚರ್ ತೋರಿಸಬೇಕು ಎನ್ನುವ ಮಹಾ ಆಸೆಯೊಂದು ಕೊನೆಗೂ ಈಡೇರಲೆ ಇಲ್ಲ! 70 ಮತ್ತು 80ರ ದಶಕದಲ್ಲಿ ನಾನು ಮತ್ತು ನನ್ನ ಸ್ನೆಹಿತ ನಾಗರಾಜ ಜವಳಿ ನ್ಯೂ ಚಿತ್ರ ಟಾಕೀಸಿನಲ್ಲಿ ನೋಡಿದ ಇಂಗ್ಲಿಷ್ ಸಿನಿಮಾಗಳಲ್ಲಿ ಒಂದು ದೊಡ್ಡ ಅನುಕೂಲವಿತ್ತು. ವಾರಕ್ಕೆ ಒಂದು ಅಥವಾ ಎರಡು ಸಿನಿಮಾಗಳು ಬದಲಾಗುತ್ತಿದ್ದವು! ಹಿಂದಿ, ಕನ್ನಡ ಸಿನಿಮಾಗಳು ವಾರಗಟ್ಟಲೆ ಓಡುತ್ತಿದ್ದವು. ಹೀಗಾಗಿ ವಾರಕ್ಕೆ ಒಂದೆರಡು ಸಿನಿಮಾಗಳನ್ನಾದರೂ ನೋಡಲೇ ಬೇಕು ಎನ್ನುವವರಿಗೆ ಕರೆದು ಮಣೆ ಹಾಕುತ್ತಿದ್ದುದು ನ್ಯೂಚಿತ್ರ ಮತ್ತು ಆಂಗ್ಲ ಚಲನಚಿತ್ರಗಳು. ನನ್ನವಳಿಗೂ ಇಂಗ್ಲೀಷ್ ಸಿನಿಮಾ ಎಂದರೆ ಅಷ್ಟಕ್ಕಷ್ಟೇ! ಆದರೂ ಅವಳನ್ನು ಜುರಾಸಿಕ್ ಪಾರ್ಕ್ನಲ್ಲಿ ಅಡ್ಡಾಡಿಸಿದ್ದೆ ಮತ್ತು ಟೈಟಾನಿಕ್ನಲ್ಲಿ ಪ್ರವಾಸ ಕರೆದುಕೊಂಡು ಹೋಗಿದ್ದೆ! ಟೈಟಾನಿಕ್ ನೋಡುತ್ತಿದ್ದರೆ ಅಜ್ಜ ಎಷ್ಟು ಖುಷಿಪಡುತ್ತಿದ್ದರೋ ಏನೋ! ಆದರೆ ಅದು ಬರುವುದಕ್ಕಿಂತ ಎಷ್ಟೋ ಮೊದಲು ಅವರು ಪರದೆಯಾಚೆ ಹೋಗಿಯಾಗಿತ್ತು!
ನಮ್ಮ ಕನಸುಗಳಿಗೆ ಕಚಗುಳಿಯಿಟ್ಟ ಸಾಧನಾ ಈಗಿಲ್ಲ! ಆದರೆ ನಮ್ಮೆಲ್ಲರ ಕನಸುಗಳ ರಾಣಿ ಹೇಮಾ ಮಾಲಿನಿ ಈಗಲೂ ಶುದ್ಧ ನೀರಿನ ಜಾಹೀರಾತಿನಲ್ಲಿ ಬಂದು ಶೋಲೆಯ ಬಸಂತಿಯ ನೆನಪು ಮಾಡಿಕೊಡುತ್ತಿದ್ದಾಳೆ! ಸಿನಿಮಾಕ್ಕೆ ಸಾವಿಲ್ಲ, ಸಿನಿಮಾದ ಹೀರೋ ಹೀರೋಯಿನ್ಗಳು ಸಾಯುವುದಿಲ್ಲ! ಹಳೇ ಸಿನಿಮಾಗಳನ್ನು ನೋಡುವಾಗಲೆಲ್ಲಾ ಅವರು ಮತ್ತೆ ಹುಟ್ಟಿಬರುತ್ತಾರೆ. ಬಂಗಾರದ ಮನುಷ್ಯ, ಮಯೂರ ಅಥವಾ ಬೇಡರ ಕಣ್ಣಪ್ಪ ನೋಡುವಾಗ ಡಾ.ರಾಜ್ಕುಮಾರ್ ಮತ್ತೆ ಎದ್ದು ಬರುತ್ತಾರಲ್ಲಾ ಹಾಗೆ! ಅಂದ ಹಾಗೆ ಶಿವಪ್ಪಾ ಕಾಯೋ ತಂದೆ ಹಾಡು ನಮಗೆ ಕಂಠಪಾಠವಾದದ್ದು ಯಾವ ಜಮಾನಾದಲ್ಲಿ? ಆ ಹಾಡು ಹಾಡಿ ಸ್ಕೂಲಿನಲ್ಲಿ ಬಹುಮಾನ ಬಂದದ್ದು ನನ್ನ ಹೊರತು ಬೇರೆ ಯಾರಿಗಾದರೂ ನೆನಪಿರಲು ಸಾಧ್ಯವೇ? ನಮ್ಮ ನಮ್ಮ ನೆನಪಿನ ಸಿನಿಮಾದಲ್ಲಿ ನಾವೇ ನಾಯಕರಾಗಿ ಮೆರೆದದ್ದು, ಫೈಟ್ ಮಾಡಿದ್ದು, ಕುದುರೆ ಪಳಗಿಸಿದ್ದು, ಆನೆ ಮಣಿಸಿದ್ದು ಸತ್ಯವೇ? ರೀಲೇ?
ಈಗ ಎಲ್ಲವೂ ಬದಲಾಗಿದೆ! 25 ವಾರ 50 ವಾರ ಓಡುತ್ತಿದ್ದ ಕಾಲದಿಂದ 10 ದಿನ 25 ದಿನ ಸಿನಿಮಾಗಳು ಬಿಡುವ ಕಾಲಕ್ಕೆ ಬಂದು ಮುಟ್ಟಿದ್ದೇವೆ. ಥಿಯೇಟರ್ಗಳು ಮುಚ್ಚುತ್ತಿವೆ! ಇರುವ ಟಾಕೀಸುಗಳ ಆಸನಗಳು ಹರಿದಿವೆ; ಹೋಗಲಿ ಎಂದರೆ ಅದೆಷ್ಟೋ ಥಿಯೇಟರ್ಗಳಲ್ಲಿ ಇಡೀ ಸಿನಿಮಾವನ್ನು ಡಿಮ್ ಲೈಟಿನಲ್ಲಿ ತೋರಿಸುತ್ತಿದ್ದಾರೆ! ಸಿನಿಮಾದ ಉಸಿರೆ ಬೆಳಕು! ಪ್ರೊಜಕ್ಟರಿನೊಳಗಿಂದ ಬರುವ ಬೆಳಕು ಮಂದವಾದರೆ ಸಿನಿಮಾ ನೋಡಿದ ಅನುಭವವೆ ಹಾಳಾಗುತ್ತದೆ! ಏನೋ ಇಷ್ಟು ದುಡ್ಡು ಉಳಿಸಲು ಬೆಳಕಿಗೇ ಚೌಕಾಶಿ ಮಾಡಿದರೆ ಹೇಗೆ?
ಸಿನಿಮಾ ಇಲ್ಲದ ನಿತ್ಯದ ಬದುಕನ್ನು ಊಹಿಸುವುದೂ ಸಾಧ್ಯವಿಲ್ಲ! ಸಿನಿಮಾ ಬದುಕಿನ ಐದನೆಯ ಆಯಾಮ! ಅದಕ್ಕೆ ಸಿನಿಮಾ ಉಳಿಯಬೇಕು. ಥಿಯೇಟರಿನೊಳಗೆ ಹೊಸ ಸೀಟುಗಳು ಬರಲಿ; ತಂಪು ಗಾಳಿ ಓಡಾಡಲಿ, ಗೇಟ್ ಕೀಪರ್ ಮತ್ತೆ ಮಿತ್ರನಾಗಲಿ, ಆಗ ಅರವತ್ತಲ್ಲ ಎಪ್ಪತ್ತು ತುಂಬಿದರೂ ನಾನು, ನನ್ನಂಥವರು ಸಿನಿಮಾ ನೋಡುತ್ತಾರೆ. ನೋಡುತ್ತಲೆ ಇರುತ್ತಾರೆ.
- ಎಚ್. ರಮೇಶ ಕೆದಿಲಾಯ