ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಸಿನಿ ಮಹಾತ್ಮೆ

Lingaraj Badiger
Updated On : 1 Jun 2013, 5:34 am

ನೂರು ಎಂಬುದು ಸಿನಿಮಾ ಮಂದಿಗೆ ಪ್ರಿಯವಾದ ಸಂಖ್ಯೆ. ನೂರು ದಿನ ಓಡಿ ಓಡಿ ಮರುಳು ಮಾಡುವುದು ಎಲ್ಲ ಸಿನಿಮಾಗಳ ಕನಸು. ಅಂಥ ಭಾರತೀಯ ಸಿನಿಮಾಗಳಿಗೆ ಈಗ ನೂರು ವರ್ಷ ವಯಸ್ಸು.

ನಾನಿರುವುದೆ ನಿಮಗಾಗಿ...
ನಾಡಿರುವುದು ನಮಗಾಗಿ...
ಕಣ್ಣೀರೇಕೆ? ಬಿಸಿಯುಸಿರೇಕೆ?
ಬಾಳುವಿರೆಲ್ಲಾ ಹಾಯಾಗಿ


ಕೇಳಿ ಕೇಳಿ ಮರುಳಾಗಿ ಎನ್ನುವಂತಿದ್ದ 'ಮಯೂರ' ಚಿತ್ರದ ಹಾಡು ಅದು. ಅಲ್ಲಿ ನಮಗೆ ಕಂಡಿದ್ದು ಕೇವಲ ರಾಜ್‌ಕುಮಾರ್ ಎಂಬ ನಟನಷ್ಟೇ ಅಲ್ಲ. ಒಬ್ಬ ವ್ಯಕ್ತಿ ಹೇಗೆ ಒಂದು ಶಕ್ತಿ ಆಗಬಲ್ಲ ಎಂಬುದಕ್ಕೊಂದು ಉದಾಹರಣೆ ಅದು. ಹೆಗಲ ಮೇಲೆ ಕೈಯಿಟ್ಟು, 'ನಿಮ್ಮೆಲ್ಲ ಕಷ್ಟಗಳಿಗೂ ನಾನಿದ್ದೇನೆ' ಎನ್ನುವ ಅಭಯದ ಅನುಭವ.  ಸುಳ್ಳು ಸುಳ್ಳೇ ಆದರೂ ನಮ್ಮ ಎಲ್ಲ ಕಷ್ಟಗಳಿಗೂ ಅವನಿದ್ದಾನೆ ಎಂಬ ನಂಬಿಕೆ. 'ಪಲ್ ಭರ್ ಕೆ ಲಿಯೇ ಕೋಯಿ ಮುಝೇ ಪ್ಯಾರ್ ಕರ್‌ಲೇ, ಝೂಟಾ ಹೀ ಸಹೀ' ಎನ್ನುವ ಮನಸ್ಥಿತಿಗೆ ಬೇಕಿದ್ದ ಸಾಂತ್ವನ. ಅದು ಒಂದು ಸಿನಿಮಾ ಮತ್ತು ಒಬ್ಬ ಕಲಾವಿದ ಮಾಡಬಹುದಾದ ಮ್ಯಾಜಿಕ್. 

ನೂರು ಎಂಬುದು ಸಿನಿಮಾ ಮಂದಿಗೆ ಪ್ರಿಯವಾದ ಸಂಖ್ಯೆ. ನೂರು ದಿನ ಓಡಿ ಓಡಿ ಮರುಳು ಮಾಡುವುದು ಎಲ್ಲ ಸಿನಿಮಾಗಳ ಕನಸು. ಅಂಥ ಭಾರತೀಯ ಸಿನಿಮಾಗಳಿಗೆ ಈಗ ನೂರು ವರ್ಷ ವಯಸ್ಸು.

ಸಿಗರೇಟು ಸೇದುವವರು ಅಪರಿಚಿತರಾದರೂ ಸುಲಭವಾಗಿ ಸ್ನೇಹಿತರಾಗುತ್ತಾರಂತೆ. ಆ ಲೈಟರ್ ಕಿಡಿಯಂತೆಯೇ ಈ ಸಿನಿಮಾ ಕಿಡಿ ಕೂಡ. ಸಿನಿಮಾ ಅಭಿರುಚಿಯೊಂದೇ ಹಲವಾರು ಜನರನ್ನು ಸೇರಿಸಬಲ್ಲದು. ಫೇಸ್‌ಬುಕ್ಕಿನಲ್ಲಿ ಹಾಕಿದ ತನ್ನ ನೆಚ್ಚಿನ ನಟ, ಗಾಯಕನ ಹಾಡನ್ನು ಲೈಕ್ ಮಾಡಿದ ಅಪರಿಚಿತರಿಗೂ ಒಂದು ಫ್ರೆಂಡ್ ರಿಕ್ವೆಸ್ಟ್ ಕಳಿಸಬೇಕು ಎನ್ನಿಸುವಂತೆ ಮಾಡುವುದು ಸಿನಿಮಾ.

ಭಾರತೀಯ ಮನಸ್ಥಿತಿಗೆ ಖುಷಿ ಕೊಡುವ ಎರಡು ಪ್ರಮುಖ ವಿಷಯಗಳಲ್ಲಿ ಕ್ರಿಕೆಟ್ ಮತ್ತು ಸಿನಿಮಾಗೆ ದೊಡ್ಡ ಸ್ಥಾನ. ಹಾಗೆ ನೋಡಿದರೆ ಎರಡರಲ್ಲೂ ಇರುವ ಹೋಲಿಕೆಗಳು ಅಚ್ಚರಿ ಹುಟ್ಟಿಸುತ್ತವೆ. ಸೆಂಚುರಿ, ಹ್ಯಾಟ್ರಿಕ್, ಗುಡ್ ಓಪನಿಂಗ್, ಪಾರ್ಟ್‌ನರ್‌ಶಿಪ್, ಸೆಕೆಂಡ್ ಇನ್ನಿಂಗ್ಸ್ ಎಂಬ ಪದ ಬಳಕೆಗಳು ಅಲ್ಲಿಗೂ ಇಲ್ಲಿಗೂ ಸಲ್ಲುತ್ತವೆ. ಸೈಟ್ ಸ್ಕ್ರೀನ್‌ಗಳು, ಸಿಲ್ವರ್ ಸ್ಕ್ರೀನ್‌ಗಳಾಗುತ್ತವೆ. ಅಲ್ಲಿ ಬ್ಯಾಟ್ಸ್‌ಮನ್‌ಗಳು ಓಡುತ್ತಾರೆ, ಇಲ್ಲಿ ಸಿನಿಮಾಗಳು ಓಡುತ್ತವೆ. ಅರ್ಧ ಅವಧಿ ಮುಗಿದರೆ ಇಲ್ಲಿ ಇಂಟರ್‌ವಲ್, ಅಲ್ಲಿ ಇನ್ನಿಂಗ್ಸ್ ಬ್ರೇಕ್. ಕ್ಲಾಪ್ ಸದ್ದು ಅಲ್ಲೂ, ಇಲ್ಲೂ ಕೇಳಿಸುತ್ತದೆ. ಶಾಟ್ ಸೆಲೆಕ್ಷನ್ ಎರಡೂ ಕಡೆ ತುಂಬಾ ಮುಖ್ಯ. ಅಲ್ಲಿ ಬ್ಯಾಡ್ ಲೈಟ್ ಮತ್ತು ಇಲ್ಲಿ ಗುಡ್ ಲೈಟಿಂಗ್. ವರ್ಲ್ಡ್ ಕಪ್ ಇರಲಿ, 'ಸ್ಟಾರು ಕಟ್ಟುವ ಶುಭವೇಳೆ' ಇರಲಿ, ಎರಡೂ ಕಡೆ ನಿರೀಕ್ಷೆಗಳು ಯಾವಾಗಲೂ ಮುಗಿಲೆತ್ತರದಲ್ಲೇ. ಹುಸಿಯಾದಾಗಿನ ನಿರಾಸೆಯೂ ಅಂಥದ್ದೇ. ಸೆಂಚುರಿ ಹೊಡೆದರೆ ಬ್ಯಾಟ್ ಎತ್ತುತ್ತಾನೆ ಬ್ಯಾಟ್ಸ್‌ಮನ್. ಸಿನಿಮಾ ನೂರು ದಿನ ಓಡಿದರೆ ಸಮಾರಂಭ ನಡೆಯುತ್ತದೆ. ಆಮೇಲೆ  ಪ್ರೆಸೆಂಟೇಷನ್ ಸೆರೆಮನಿ ಇದ್ದದ್ದೇ. ತೀರಾ ಎಷ್ಟರಮಟ್ಟಿಗೆ ಎಂದರೆ, ಮಳೆ ಕೂಡ ಎರಡೂ ವಿಷಯದಲ್ಲಿ ಪರಿಣಾಮ ಬೀರಬಲ್ಲದು. ತೆರೆಯ ಮೇಲೆ ಮಳೆ ಸುರಿದರೆ ಸಾಂಗು ಶುರುವಾಗುತ್ತದೆ. ಇಲ್ಲಿ ಮಳೆ ಸುರಿದರೆ ಸ್ಟೇಡಿಯಂನಲ್ಲಿ ಮ್ಯಾಚ್ ಕ್ಯಾನ್ಸಲ್ ಆಗುತ್ತದೆ. ಅದೇ ಹೊತ್ತಿಗೆ ಹೊರಗೆ ಮಳೆಯಾದರೆ ಚಿತ್ರಮಂದಿರದಲ್ಲಿ ಫಸ್ಟ್ ಶೋ, ಸೆಕೆಂಡ್ ಶೋಗಳ ಕಲೆಕ್ಷನ್ ಡಲ್ ಆಗುತ್ತದೆ. ಆದರೆ, ಕ್ರಿಕೆಟ್ ಆಟಗಾರರಿಗೆ ನಿವೃತ್ತಿಯ ಮಿತಿಯಿದೆ. ಕಲಾವಿದರಿಗೆ ಮಾತ್ರ ಕಲೆಯ ಜೊತೆ 'ಆಮರಣಾಂತ ಸಹವಾಸ'.

ಸಾವಿರ ಪದಗಳು ಹೇಳುವುದನ್ನು ಒಂದು ಚಿತ್ರ ಹೇಳುತ್ತದೆ ಎನ್ನುತ್ತಾರೆ. ಹಾಗೆ ಸಾವಿರ ಸತ್ಯಗಳನ್ನು, ಉಪದೇಶಗಳನ್ನು ನಮ್ಮ ಸಂಬಂಧಿಕರೋ, ಸ್ನೇಹಿತರೋ ಹೇಳಿದರೆ ಅದು ರುಚಿಸುವುದಿಲ್ಲ. ಆದರೆ ಅದೇ ವಿಷಯ ತೆರೆಯ ಮೇಲೆ ಬಂದರೆ ಅದು ಒಂಚೂರು ತಾಗುತ್ತದೆ. ಅದು ಸಿನಿಮಾದ ಶಕ್ತಿ. ಪ್ರೇಕ್ಷಕನಿಗಷ್ಟೇ ಅಲ್ಲ, ಕಥೆಗಾರ, ನಿರ್ದೇಶಕ, ಕಲಾವಿದ ಕೂಡ ನಿಜವಜೀವನದಲ್ಲಿ ತನಗೆ ಹೇಳಿಕೊಳ್ಳಲು ಕಷ್ಟವಾದುದನ್ನು ಸಿನಿಮಾ ಮೂಲಕ ಸುಲಭವಾಗಿ ಹೇಳಿಕೊಂಡು ಹಗುರಾಗಿಬಿಡುತ್ತಾನೆ. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ನಿಜಜೀವನದಲ್ಲಿ ಒಂದೇ ವೃತ್ತಿ ಮಾಡಲು ಸಾಧ್ಯ. ಹೆಚ್ಚೆಂದರೆ ಎರಡು, ಮೂರು. ಆದರೆ ಒಬ್ಬ  ನಟ ತನ್ನ ಜೀವನದಲ್ಲಿ ಒಬ್ಬ ಡಾಕ್ಟರ್, ಸ್ಟೂಡೆಂಟ್, ಟೀಚರ್, ಕಳ್ಳ, ಪೊಲೀಸ್, ಕುಡುಕ, ಸಭ್ಯ, ಎಲ್ಲವೂ ಆಗಬಲ್ಲ. ತಾನು ಬಂಗಾರದ ಮನುಷ್ಯನೂ ಆಗಬಹುದು, ನಮಕ್ ಹರಾಮ್ ಕೂಡ ಆಗಬಹುದು ಎಂಬುದು ಅವನಿಗೆ ಸಿನಿಮಾ ಕೊಟ್ಟಿರುವ ಅದ್ಭುತ ಸೌಲಭ್ಯ. ಬಾಲನಟರಾಗಿ ಸಿನಿಮಾರಂಗಕ್ಕೆ ಕಾಲಿಟ್ಟವರು, ಪೋಷಕ ನಟರಾಗಿರುವ ಹೊತ್ತಲ್ಲೂ, ತಮ್ಮ ಹಿಂದಿನ  ಜೀವನದ ಪ್ರತಿಯೊಂದು ಹೆಜ್ಜೆಯನ್ನೂ ಮತ್ತೆ ಮತ್ತೆ ತಿರುಗಿ ನೋಡಿಕೊಳ್ಳುವ ಅವಕಾಶ. ನಮಗೆಲ್ಲಾ ನಮ್ಮ ಬಾಲ್ಯ, ಯೌವ್ವನ, ಮಧ್ಯವಯಸ್ಸಿನ ಒಂದೆರಡು ಪೋಟೋಗಳು, ಹೆಚ್ಚೆಂದರೆ ಒಂದೆರಡು ವಿಡಿಯೋಗಳು ಸಿಗಬಹುದು. ಆದರೆ ಈಗಲೂ ಬೇಡಿಕೆ ಇರುವ ಅಮಿತಾಭ್ ಬಚ್ಚನ್‌ರಂಥ ಸಿನಿಮಾ ತಾರೆಯರಿಗೆ ಆರಂಭದಿಂದ ಇಲ್ಲಿಯವರೆಗಿನ, ತಮ್ಮ ಕೆರಿಯರ್‌ನ ಪ್ರತಿಯೊಂದು ವರ್ಷದಲ್ಲೂ ಚಿತ್ರದಲ್ಲೂ ತಮ್ಮ ದೇಹ,
ಹೇರ್‌ಸ್ಟೈಲ್, ಮುಖ ಚಹರೆಯಲ್ಲಿ ಕಾಲಕ್ರಮೇಣ ಆದ ಬದಲಾವಣೆಗಳನ್ನು ನೋಡಿ ಅಚ್ಚರಿಪಡಬಹುದು. ಕೂದಲು ಬೆಳ್ಳಗಾದ, ಸುಕ್ಕಿನ ಮುಖದ ದಿನಗಳಲ್ಲೂ ನಟಿಯೊಬ್ಬಳು ತನ್ನ ಸೌಂದರ್ಯದಿಂದ ಹರೆಯದ ಹುಡುಗರನ್ನು ನಿದ್ದೆಗೆಡಿಸಿದ ಸೊಕ್ಕಿನ ದಿನಗಳಿಗೆ ಮತ್ತೆ ಮತ್ತೆ ಕನ್ನಡಿ ಹಿಡಿಯಬಹುದು. ಈಗ ನನ್ನನ್ನು ಕೇಳುವವರಿಲ್ಲ ಎಂಬ ದುಃಖಕ್ಕೆ ಒಂದಿಷ್ಟು ಸಾಂತ್ವನ ದೊರಕಿಸಿಕೊಡೂಬಹುದು.

ಭಾರತೀಯ ಮನಸ್ಥಿತಿಯಲ್ಲಿ ಸಿನಿಮಾ ಎಂಬುದು ನಮ್ಮ ದೈನಂದಿನ ಸುಖಗಳಲ್ಲೊಂದು. ನಮ್ಮ ಮನೆಗಳಲ್ಲಿ ದೇವರ ಮುಂದೆ ದೀಪ ಹಚ್ಚುವ ಹೊತ್ತಿಗೆ ಸಂಜೆ ಟೆಂಟ್‌ಗಳಲ್ಲೂ ದೀಪ ಹತ್ತಿಕೊಳ್ಳುತ್ತವೆ. ಪ್ರೊಜೆಕ್ಟರ್ ರೂಮಿನಲ್ಲಿ ರೀಲುಗಳನ್ನು ಸುತ್ತಿಕೊಂಡ ಗಾಲಿ ಉರುಳುತ್ತಿದ್ದಂತೆ ನಮ್ಮ ಕನಸುಗಳು ಅರಳಿಕೊಳ್ಳುತ್ತವೆ, ನೆನಪುಗಳ ಗಾಳಿ ಬೀಸಲಾರಂಭಿಸುತ್ತದೆ. ದೇವರ ಮನೆಯಲ್ಲಿ ಶನಿ ಮಹಾತ್ಮೆ, ಚಿತ್ರಮಂದಿರದಲ್ಲಿ ಸಿನಿ ಮಹಾತ್ಮೆ.

ನಾವು ಸಿನಿಮಾವನ್ನು ಕೇವಲ ಮನರಂಜನೆ ಎಂದುಕೊಂಡಿದ್ದಿದ್ದರೆ 'ನಮ್ಮ ರಾಜ್ಯ ದೇಶಕ್ಕೋಸ್ಕರ ನೀವು ಏನು ಮಾಡಿದ್ದೀರಿ?' ಎಂದು ಕಲಾವಿದರನ್ನು ಕೇಳಬಹುದಾದ ಹಕ್ಕು ನಮಗಿದೆ ಎಂಬ ಭ್ರಮೆ ಹುಟ್ಟುತ್ತಿರಲಿಲ್ಲ. ಕೆಲವೊಮ್ಮೆ ಸಿನಿಮಾ ಎಂಬುದು ನಮ್ಮ ಭರವಸೆಯ ದಾರಿ ಕೂಡ. ಮುಂದಿನ ಶುಕ್ರವಾರ ನನ್ನ ನೆಚ್ಚಿನ ನಟನ ಸಿನಿಮಾ ಬಿಡುಗಡೆಯಾಗುತ್ತದೆ ಎಂದರೆ ಅದು ನಮ್ಮ ಆ ಏಳು ದಿನಗಳನ್ನು ನಿರೀಕ್ಷೆಯ ಖುಷಿಯಲ್ಲೇ ಸುಖವಾಗಿಡಬಲ್ಲದು. ನಮ್ಮ ಎಲ್ಲ ಕಷ್ಟಗಳ ತೂಕವನ್ನು ಒಂದಷ್ಟು ಕಡಿಮೆ ಮಾಡುವ ತಾಕತ್ತು ಆ ನಿರೀಕ್ಷೆಗಿರುತ್ತದೆ. ಮೊದಲ ಚಿತ್ರದಲ್ಲಿ ಹಿಟ್ ಆದ ಜೋಡಿಯನ್ನು ಗಂಡ ಹೆಂಡಿರು ಎನ್ನುವಷ್ಟೆ ಪ್ರೀತಿಯಿಂದ ನೋಡುತ್ತೇವೆ. ಅದರ ಬಳಿಕ ಮುಂದಿನ ಸಿನಿಮಾದಲ್ಲಿ ಅವನು ಇನ್ಯಾರೊಂದಿಗೋ, ಅವಳು ಇನ್ಯಾರೊಂದಿಗೋ ಮರ ಸುತ್ತಿದರೆ ನಮಗೆ ಜೀರ್ಣಿಸಿಕೊಳ್ಳುವುದು ಕಷ್ಟವೇ ಎನ್ನುವಷ್ಟು ಅಮಾಯಕವಾದದ್ದು ನಮ್ಮ ಸಿನಿಮಾ ಪ್ರೀತಿ. ಹಾಗಂತ ಸಿನಿಮಾಕ್ಕೆ ಭಾಷೆಯ ಹಂಗಿಲ್ಲ. ಸಿನಿಮಾ ಪ್ಯಾರಡೈಸೋ ಎಂಬ ಇಟಾಲಿಯನ್ ಚಿತ್ರವಿರಲಿ, ಇನ್ಯಾವುದೋ ಅರ್ಥವಾಗದ ಹಂಗರಿ ಭಾಷೆಯ ಸಿನಿಮಾ ಇರಲಿ ನಮ್ಮ ಸಿನಿಮಾ ಹಂಗರ್ ಅಲ್ಲಿಯೂ ಜೀವಂತ. ಸಿನಿಮಾ ಎಂದರೆ  ನಿಜಕ್ಕೂ ಅದು ಪ್ಯಾರಡೈಸೇ.

ಚಿಕ್ಕವರಿದ್ದಾಗಂತೂ ಒಳ್ಳೆಯ ಸಿನಿಮಾ ಕೆಟ್ಟ ಸಿನಿಮಾ ಎಂಬ ಕೆಟಗರಿಗಳೇ ಇಲ್ಲ. ನಮ್ಮ ಬುದ್ಧಿವಂತಿಕೆಯ ಕಿರಿಕಿರಿ ಇಲ್ಲ. ಜಡ್ಜ್‌ಮೆಂಟ್‌ಗಳ ಹಾವಳಿ ಇಲ್ಲ. ಆಗ ನೋಡಿದ್ದೆಲ್ಲಾ ಒಳ್ಳೆಯ ಚಿತ್ರವೇ. ನಮ್ಮ ಪಾಲಿಗೆ, ಪರೀಕ್ಷೆ ಮುಗಿದ ದಿನ ಸಂಜೆ ನೋಡಿದ ಫಸ್ಟ್ ಶೋ ಈಸ್ ದಿ ಬೆಸ್ಟ್ ಶೋ. ಆ ಖುಷಿಯನ್ನು ಇನ್ಯಾರು ನೀಡಲು ಸಾಧ್ಯ.

ಆದರೆ ಈಗೀಗ ಸೀನ್ ಬದಲಾದಂತಿದೆ. ಟೆಂಟ್‌ನಲ್ಲಿ ವಿರಾಮದ ಹೊತ್ತಿಗೆ ಮಾರುತ್ತಿದ್ದ ಖಾರ ಮಂಡಕ್ಕಿ, ಬರ್ತಾ ಬರ್ತಾ ಚಿಪ್ಸ್ ಆದಂತೆ, ಮೆಲ್ಲಮೆಲ್ಲನೆ ಚಿಪ್ಸ್‌ನಿಂದ ಪಾಪ್‌ಕಾರ್ನ್ ಆದಂತೆ ಸಿನಿಮಾ ಬಗೆಗಿನ ನಮ್ಮ ಮನಸ್ಥಿತಿಯಲ್ಲೂ ಬದಲಾವಣೆಗಳಾಗಿವೆ. ಈಗೀಗ 'ನಾನಿರುವುದೆ ನಿಮಗಾಗಿ' ಮೂಡಿನಲ್ಲಿ ಸಿನಿಮಾ ನೋಡುವವರ ಸಂಖ್ಯೆ ಕಡಿಮೆ. ಸಿನಿಮಾ ಏನಿದ್ದರೂ ವೀಕೆಂಡ್‌ನ ಹಲವು ಖುಷಿಗಳಲ್ಲಿ ಒಂದು ಅಷ್ಟೆ.

ಸೋಮವಾರದಿಂದ ಶುಕ್ರವಾರದವರೆಗಿನ ಕೆಲಸಗಳ ನಡುವೆ ನಮ್ಮ ನೆಚ್ಚಿನ ನಟ, ನಟಿ, ಸಿನಿಮಾ ನೆನಪಾಗುವುದು ಅಪರೂಪ. ಕ್ಯೂನಲ್ಲಿ ನಿಂತು ಒದ್ದಾಡಿ ಟಿಕೆಟ್ ತೆಗೆದುಕೊಳ್ಳಲು ಮಾಡುತ್ತಿದ್ದ ಸಂತಸದ ಸಾಹಸ ಈಗ ನಮಗೆ ಕಿರಿಕಿರಿ ಎನಿಸುತ್ತದೆ. ಫೇಸ್‌ಬುಕ್‌ನಲ್ಲಿ ಸಿನಿಮಾವೊಂದರ ಪ್ರಚಾರ ನೋಡುತ್ತೇವೆ. ಇಂಟರ್‌ನೆಟ್‌ನ ಬುಕ್ ಮೈ ಶೋಗಳಲ್ಲಿ ಆ ಸಿನಿಮಾ ಯಾವ ಚಿತ್ರಮಂದಿರದಲ್ಲಿದೆ ಎಂಬ ವಿಚಾರ ತಿಳಿದುಕೊಳ್ಳುತ್ತೇವೆ. ಸಿನಿಮಾವನ್ನು, ಸಿನಿಮಾದವರನ್ನು ಕೇವಲ ಮೆದುಳಿನಿಂದ ನೋಡುತ್ತೇವೆ. ನಮ್ಮಲ್ಲಿ ಬಹುತೇಕರು ಸಾಫ್ಟ್‌ವೇರ್ ಎಂಜಿನಿಯರ್‌ಗಳಾಗಿ, ರಿಯಲ್ ಎಸ್ಟೇಟ್ ವ್ಯವಹಾರ ಮಾಡಿ, ಸ್ವಂತ ಉದ್ಯಮಿಗಳಾಗಿ, ಹೆಚ್ಚು ಕಮ್ಮಿ ಸಿನಿಮಾ ನಟರಷ್ಟೇ ಹಣ ಗಳಿಸುತ್ತಿದ್ದೇವೆ. ಹಾಗಾಗಿ ಸಿನಿಮಾ ನಟರಿಗೂ ನಮಗೂ ಇದ್ದ ಆರ್ಥಿಕ ಅಂತರ ಕಡಿಮೆಯಾಗಿದೆ. ಅದು, ಸಿನಿಮಾದವರೆಂದರೆ, ಅವರು ನಮಗಿಂತ ದೊಡ್ಡವರು ಎಂಬ ಭಾವವನ್ನು ಮೆಲ್ಲ ಮೆಲ್ಲನೆ ಅಳಿಸಿಹಾಕಲು ಯತ್ನಿಸುತ್ತಿದೆ.

ಇದು ಹೌದೇ? ಇದ್ದರೂ ಇರಬಹುದೇನೋ! ಆದರೂ..ಬಹುಶಃ ಇರಲಿಕ್ಕಿಲ್ಲವೇನೋ.. ಎಂಥ ದೊಡ್ಡ ಸಾಹುಕಾರನೇ ಇರಲಿ, ವಿದೇಶಕ್ಕೆ ಹೋಗುವಾಗಲೂ, ವಿಮಾನದಲ್ಲಿ ತನ್ನ ನೆಚ್ಚಿನ ನಟನೊಬ್ಬ ಸಿಕ್ಕರೆ, ಮೈ ಮುದ್ದೆ ಮಾಡಿಕೊಂಡು ಸಂಕೋಚದಿಂದಲೇ 'ನಾನು ನಿಮ್ಮ ಅಭಿಮಾನಿ, ನಿಮ್ಮ ಜೊತೆ ಒಂದು ಫೋಟೋ ತೆಗೆಸಿಕೊಳ್ಳಬಹುದಾ?' ಎಂದು ಕೇಳುತ್ತಾನೆ. ಫೋಟೋ ತೆಗೆಸಿಕೊಳ್ಳುತ್ತಿರುವ ಅವನ ಮುಖದಲ್ಲಿ ಇದು ನಿಜವೋ ಕನಸೋ ಎಂಬ ಗೊಂದಲ, ಜೀವನ ಸಾರ್ಥಕ ಎನಿಸುವಂಥ ಸಂಭ್ರಮ. ಪಕ್ಕದಲ್ಲಿ ನಿಂತ  ಅಭಿಮಾನಿಯ ಹೆಗಲ ಮೇಲೆ ಕೈ ಹಾಕಿ ಮೆಲ್ಲನೆ ಅದುಮಿ ನಗುತ್ತಾ ಕ್ಯಾಮೆರಾಕ್ಕೆ ಪೋಸ್ ಕೊಡುವ ಆ ನಟನ  'ಕಣ್ಣನೋಟದಲ್ಲಿ ಕೇಳಿಸುವುದು' ಮತ್ತದೇ ಹಾಡು... 'ನಾನಿರುವುದೆ ನಿಮಗಾಗಿ....!'

- ಹರಿ
harikannadaprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments