ಸೇಬಿನ ತೋಟದ ಪಯಣಿಗರು
ಮನಾಲಿಯಿಂದ 24 ಕಿ.ಮೀ. ದೂರದ ನಗ್ಗರ್ ತಲುಪಿದಾಗ ಸಂಜೆ. ಮೈಮನಗಳೆಲ್ಲ ನುಗ್ಗುನುರಿಯಾಗಿದ್ದವು. ಅದು ನೂರಾರು ಕಿ.ಮೀ. ಪ್ರಯಾಣಿಸಿದ ಸುಸ್ತಷ್ಟೇ ಅಲ್ಲ. ಖಂಡಾಂತರಗಳನ್ನು ದಾಟಿದವರ ಸುಸ್ತು. ಸ್ಪಿಟಿ ಕಣಿವೆಯ ಮೈವಳಿಕೆ, ವಾತಾವರಣ, ಹವೆ ಎಲ್ಲವೂ ಮನಾಲಿಗಿಂತ ಭಿನ್ನ. ಅದು ಬಿಸಿಲು ನೆತ್ತಿಯ ಮೇಲೆ ಸುರಿವ, ಆದರೂ ಚಳಿ ಕೊರೆವ, ನೆತ್ತಿಯ ಮೇಲೆ ಮಂಜಿನ ಕಿರೀಟ ಹೊತ್ತ ಬೆಟ್ಟಗಳ ತವರು. ಇದು ದಟ್ಟ ಕಾಡಿನ, ದೂರದಲ್ಲಿ ಹಿಮ ಕರೆವ, ಭೋರ್ಗರೆವ ಬಿಯಾಸ್ ನದಿಯ, ಚಳಿಯನ್ನು ಹಿನ್ನೂಕುತ್ತಿರುವ ಕಟ್ಟಡಗಳ ನೆಲೆ.
ಸ್ಪಿಟಿ ವ್ಯಾಲಿಯ ಭವ್ಯರೌದ್ರ ಚೆಲುವನ್ನು ಕಂಡುಂಡು ಬಂದಿದ್ದ ನಮಗೆ, ಮನಾಲಿ ನಗರವನ್ನು ನೋಡುತ್ತಲೇ ಜಿಗುಪ್ಸೆ ಆವರಿಸತೊಡಗಿತ್ತು. ಯಾಕಾದರೂ ಮರಳಿ ಬಂದೆವೋ ಅನಿಸಲಾರಂಭಿಸಿತ್ತು. ಮನಾಲಿಯಿಂದ ನಗ್ಗರ್ವರೆಗೂ ಉದ್ದುದ್ದನೆಯ ಪೈನ್ ಮರಗಳು ಬೆಳೆದು ನಿಂತು ರಸ್ತೆಗೆ ನೆರಳು ಕೊಟ್ಟಿದ್ದವು. ರಸ್ತೆಯ ಪಕ್ಕದಲ್ಲೇ ಆಪಲ್ ತೋಟಗಳು ತುಂಬಿ ತೊನೆಯುತ್ತಿದ್ದವು. ಜೀಪು ನಿಲ್ಲಿಸಿ ಕೈಚಾಚಿದರೆ ರಸಭರಿತ ಸೇಬುಗಳು ಕೈಗೇ ಬಂದುಬಿಡುತ್ತಿದ್ದವು. ಜೀಪಿನಲ್ಲಿದ್ದ ಹುಡುಗಿಯರಿಬ್ಬರೂ ಒಮ್ಮೆ ಜೀಪು ನಿಲ್ಲಿಸಿ ಆಪಲ್ ಕೊಯ್ಯೋಣವೆಂದು ಅಂಗಲಾಚತೊಡಗಿದರು. ಪಾಪಿ ಚಾಲಕ, ನಿಲ್ಲಿಸಲೇ ಇಲ್ಲ!
ನಗ್ಗರ್ನಲ್ಲಿ ಹೋಂಸ್ಟೇ ತಲುಪಿಸಿ, ಡ್ರೈವರ್ ಮತ್ತು ತಶಿ ನಮ್ಮಿಂದ ಬೀಳ್ಕೊಂಡರು. ಇಲ್ಲಿ ಮನಾಲಿಯ ಪ್ರವಾಸೋದ್ಯಮದ ಒಂದು ಮಗ್ಗುಲಿನ ದರ್ಶನ ನಮಗಾಯಿತು. ಇಲ್ಲಿ ಎಲ್ಲ ಹಳೆ ಮನೆಗಳು, ಹೊಸ ಮನೆಗಳೂ ಹೋಂಸ್ಟೇ ಆಗಿಬಿಟ್ಟಿವೆ. ರೋಹ್ತಾಂಗ್ ಪಾಸ್ನಿಂದೀಚೆಗಿನ ಹಿಮಾಚಲ ಪ್ರದೇಶದ ಬಹುತೇಕ ಬೆಟ್ಟತಾಣಗಳು ಸಂಪೂರ್ಣ ಪ್ರವಾಸಿಮಯ, ಪ್ರವಾಸೋದ್ಯಮಭರಿತವಾಗಿವೆ. ಕೋಳಿಗೂಡಿನಂತಹ ನಾಲ್ಕು ರೂಮ್ ಇಟ್ಟವನೂ ತನ್ನದು ಲಾಡ್ಜ್ ಎಂದು ಹೇಳಿಕೊಳ್ಳುತ್ತಾನೆ. ಕೆಟ್ಟ ರುಚಿಯ ದಕ್ಷಿಣ ಭಾರತೀಯ ಖಾದ್ಯಗಳು ಸಿಗುತ್ತವೆ. ಆದರೆ ನಾವಿಳಿದ ಸ್ನೋವ್ಯೂ ಲಾಡ್ಜ್ ಸುಸಜ್ಜಿತವಾಗಿತ್ತು. ಇದರ ಯಜಮಾನ ದೇವಾಂಗ್ ಶರ್ಮಾ ನಮ್ಮನ್ನು ಸ್ವಾಗತಿಸಿ, ಟೆರ್ರೇಸ್ ಮೇಲೆ ಕೂರಿಸಿ ಸೊಗಸಾದ ಪುದಿನ ಟೀ ತಂದುಕೊಟ್ಟ. ನಮ್ಮ ತೋಟದಲ್ಲೇ ಬೆಳೆದ ಪುದಿನ ಎಂದ. ಬಗ್ಗಿ ನೋಡಿದರೆ, ಲಾಡ್ಜ್ನ ಹಿಂಬದಿಯಲ್ಲೇ ಆಪಲ್ ತೋಟ! ಅವತ್ತು ರಾತ್ರಿ ಅರೆಮಾಗಿದ, ಸೊಗಸಾದ ಆಪಲ್ಗಳು ನಮ್ಮ ಹೊಟ್ಟೆ ಸೇರಿದವು. 'ಫಾರ್ಮ್ ಫ್ರೆಶ್' ಸೇವಿಸಿದ ತೃಪ್ತಿ ನಮ್ಮದಾಯಿತು.
ಮರುದಿನದ ಶೆಡ್ಯೂಲ್ ದೇವಾಂಗ್ ಶರ್ಮನೇ ಹಾಕಿಕೊಟ್ಟಿದ್ದ. ಬೆಳಗ್ಗೆ ಎದ್ದು, ಆತನ ಹೆಂಡತಿ ಮಾಡಿಕೊಟ್ಟ ಆಲೂ ಪರಾಠೆಗಳನ್ನು ಹೊಟ್ಟೆಬಿರಿಯ ತಿಂದು, ಮನಾಲಿಗೆ ಹೋಗುವ ಬಸ್ಸು ಹಿಡಿದೆವು. ಸರಕಾರಿ ಬಸ್ಸು, ಕಂಡಕ್ಟರ್ ಟಿಕೆಟ್ ಕೊಡಲಿಲ್ಲ. ಇದು ಭಾರತದ ಎಲ್ಲ ಕಡೇನೂ ಹೀಗೇನಾ? ಮನಾಲಿಯಲ್ಲಿ ಹಿಡಿಂಬಾ ದೇಗುಲ, ಮನು ದೇಗುಲ, ವಸಿಷ್ಠ ಕುಂಡಗಳು ನೋಡಲೇಬೇಕಾದ ಸ್ಥಳಗಳೆಂದು ಹೇಳುವುದು ಕೇಳಿದ್ದೆ. ರಿಕ್ಷಾದವನು ನಮ್ಮನ್ನು ಬೆಟ್ಟವೊಂದರ ಮೇಲೆ ಕರೆದೊಯ್ದ. ನೂರಾರು ಅಂಗಡಿಗಳ ನಡುವೆ ಇಕ್ಕಟ್ಟಿನಲ್ಲಿ ಕೂತಂತಿತ್ತು ವಸಿಷ್ಠ ಕುಂಡ. ಗುಡಿಯಲ್ಲಿ ವಸಿಷ್ಠ ಋಷಿಯ ಧ್ಯಾನಮುದ್ರೆಯ ವಿಗ್ರಹ. ಹಿಂದುಗಡೆ ಬಿಸಿನೀರಿನ ಕುಂಡ. ನಡುವೆ ಹಲಗೆ ಹೊಡೆದು ಪುರುಷರಿಗೂ ಮಹಿಳೆಯರಿಗೂ ಪ್ರತ್ಯೇಕ ವಿಭಾಗ ಮಾಡಲಾಗಿತ್ತು. ಅಲ್ಲಿಗೆ ಹೋದ ಪ್ರಿಯಾ- ರಾಧಿಕಾ, ಬೆತ್ತಲೆ ಮೀಯುತ್ತಿದ್ದ ಹತ್ತಾರು ಹಿಡಿಂಬಿಯರನ್ನು ನೋಡಿ ಗಾಬರಿಯಿಂದ ವಾಪಸ್ಸಾದರು.
ನಮ್ಮ ಬುದ್ಧಿಜೀವಿಗಳಿಂದಲೂ, ಸನಾತನವಾದಿಗಳಿಂದಲೂ ಸದಾ ಹಿಗ್ಗಾಮುಗ್ಗಾ ಎಳೆದಾಡಲ್ಪಟ್ಟು ಚಚ್ಚಿಸಿಕೊಳ್ಳುತ್ತಿರುವ ಮನು ಎಂಬ ಮಹರ್ಷಿಯ ಫೇಸ್ಕಟ್ ಹೇಗಿದೆ ಎಂದು ನೋಡುವ ಕುತೂಹಲ ನನಗಿತ್ತು. ನಮ್ಮ ಶೆಡ್ಯೂಲ್ ಸಹಕರಿಸದ ಕಾರಣ ಮನು ಮಹರ್ಷಿಯ ದೇವಾಲಯ ನೋಡಲಾಗಲಿಲ್ಲ. ಮನಾಲಿಯ ಪ್ರಮುಖ ಆಕರ್ಷಣೆ ಎಂದರೆ ಹಿಡಿಂಬಾ ದೇವಾಲಯ. ಅದನ್ನು ನಾವು ಕಳೆದ ವಾರವೇ ನೋಡಿದ್ದೆವು. ವಸಿಷ್ಠ ಕುಂಡದಿಂದ ವಾಪಸಾಗುತ್ತ ದಾರಿಯಲ್ಲಿದ್ದ ಶಿವ ದೇವಾಲಯ, ರಾಮ ದೇಗುಲ ನೋಡಿದೆವು. ಅವು ಹಳೆಯ ಕಟ್ಟಡಗಳೆಂಬುದನ್ನು ಬಿಟ್ಟರೆ ವಿಶೇಷವೇನಿಲ್ಲ.
ಮಧ್ಯಾಹ್ನವಾಗಿತ್ತು. ಹೊಟ್ಟೆ ಚುರುಗುಡುತ್ತಿತ್ತು. ದಕ್ಷಿಣ ಭಾರತೀಯ ಊಟ ಸಿಗುತ್ತದೆ ಎಂದು ಬೋರ್ಡ್ ಹಾಕಿದ್ದ ಹೋಟೆಲೊಂದರ ಒಳನುಗ್ಗಿದೆವು. ಹೋಟೆಲಿನಾತ ಮುಕ್ಕಾಲು ಗಂಟೆ ಕಾಯಿಸಿ ಊಟ ತಂದಿಟ್ಟ. ನಾವು ಹೇಳಿದ್ದು ವೆಜ್ ಊಟಗಳನ್ನಾದರೂ, ಊಟದ ತಾಟಿನಲ್ಲಿ ನೊಣ, ಜಿರಲೆ ಮುಂತಾದ ಹಲವಾರು ನಾನ್ವೆಜ್ ಐಟಂಗಳಿದ್ದವು. ಎದ್ದು ಚೆನ್ನೈ- ಬೆಂಗಳೂರು ಸ್ಟೈಲಿನಲ್ಲಿ ಕೂಗಾಡಿದ ಮೇಲೆ ಎರಡು ಊಟದ ಹಣ ವಾಪಸು ಮಾಡಿದ.
ಮುಂದಿನ ವಾರ- ಸೋಲಾಂಗ್ ವ್ಯಾಲಿ ಕುದುರೆ ಲದ್ದಿ
- ಹರೀಶ್ ಕೇರ
harishkera@gmail.com
ಚಿತ್ರಗಳು: ಪ್ರಿಯಾ ಕೆರ್ವಾಶೆ