ಹೀಗೊಂದು ಕತೆ
'ಈಗ ನಾವೇನು ಮಾಡಬೇಕು ಅನ್ನುವುದರ ಕುರಿತ ಅವನ ಯೋಜನೆಗಿಂತ ನನ್ನ ಯೋಜನೆಯೇ ಸರಿಯಾದದ್ದು ಅಂತ ನನಗೆ ಆಗಾಗ ಅನಿಸಿದ್ದಿತ್ತು. ಹಿಂದೆ ಕೆಲವೊಮ್ಮೆ ನಾನು ತಪ್ಪಿದ್ದಾಗ, ಅವನದು ಸರಿಯಾಗಿತ್ತು ಅನ್ನುವುದೂ ನನಗೆ ಗೊತ್ತಿದೆ. ಹೀಗಾಗಿ ನಾನು ಅವನ ತಪ್ಪು ನಿರ್ಧಾರವೇ ಸರಿ ಇರಬಹುದು ಅಂದುಕೊಂಡು, ಅದನ್ನು ನಾನು ನಂಬಲಾರೆ ಅಂತ ಒಳಗೊಳಗೇ ಹೇಳಿಕೊಂಡರೂ, ಅವನು ತಪ್ಪು ನಿರ್ಧಾರ ತೆಗೆದುಕೊಳ್ಳಲು ಬಿಟ್ಟುಬಿಡುತ್ತೇನೆ. ತದನಂತರ, ಹಿಂದೆ ಹಲವು ಬಾರಿ ಆದಂತೆ, ಅವನ ನಿರ್ಧಾರವೇ ಸರಿಯಾಗಿರುತ್ತದೆ. ಅಥವಾ, ಅವನ ನಿರ್ಧಾರ ಆಗಲೂ ತಪ್ಪೇ. ಯಾವಾಗೆಂದರೆ, ನಿಜ ಪರಿಸ್ಥಿತಿಗಳು ಆಗಿನ ಪರಿಸ್ಥಿತಿಗಳಿಗಿಂತ ಭಿನ್ನವಾಗಿದ್ದಾಗ. ಅಥವಾ ನನಗೆ ಅರ್ಥವಾಗದಂತಹ ಪರಿಸ್ಥಿತಿಯಿದ್ದಾಗ'
ಇದೊಂದು ಸಣ್ಣಕತೆ. ಇದರ ಹೆಸರು 'ಅವನು ಹೇಗೆ ಮತ್ತೆ ಮತ್ತೆ ಸರಿ'. ಇದನ್ನು ಬರೆದವರು ಲಿಡಿಯಾ ಡೇವಿಸ್. ನಿಮ್ಮ ಊಹೆ ಸರಿ, ಈಕೆ ಕಳೆದ ವಾರ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿ ಗೆದ್ದಾಕೆ. ಇದನ್ನು ಸಣ್ಣಕತೆ ಎನ್ನಬಹುದೆ? ಇದನ್ನು ಬರೆದವರಿಗೆ ಪ್ರತಿಷ್ಠಿತ ಬೂಕರ್ ಪುರಸ್ಕಾರ ಬರಬಹುದಾದರೆ, ನಮ್ಮ ಚೇತನ್ ಭಗತ್ಗೂ, ಶೋಭಾ ಡೇಗೂ, ದೊಡ್ಡರಂಗೇಗೌಡರಿಗೂ, ಡುಂಡಿರಾಜರಿಗೂ ಯಾಕೆ ಬರಬಾರದು?
ಈ ಕಥೆಯೇನೋ ಸ್ವಲ್ಪ ಸಿಲ್ಲಿ ಅನ್ನಿಸುವಂತೆಯೇ ಇದೆ. ಆದರೆ ಅಮೆರಿಕ ಮೂಲದ ಈ ಲೇಖಕಿ, ಅಲ್ಬೆನಿ ವಿಶ್ವವಿದ್ಯಾಲಯದಲ್ಲಿ ಸೃಜನಶೀಲ ಬರಹಗಾರಿಕೆ ವಿಷಯದ ಪ್ರೊಫೆಸರ್. ನೂರಾರು ಪುಟ್ಟ ಪುಟ್ಟ ಕಥೆಗಳನ್ನು ಬರೆದಿರುವ ಈಕೆಯ ಕೊಡುಗೆ ವಿಮರ್ಶಕರಿಂದ ಶ್ಲಾಘಿಸಲ್ಪಟ್ಟಿದೆ. ತತ್ವಶಾಸ್ತ್ರದಲ್ಲಿ ಘನವಾದ ಕೆಲಸ ಮಾಡಿದ್ದಾಳೆ.
ದಿ ಗ್ರೇಟ್ ಗ್ಯಾಟ್ಸ್ಬಿ
ನಮ್ಮಲ್ಲಿ ದೇವದಾಸ್ ಕತೆಯನ್ನು ಹಿಡಿದುಕೊಂಡು ಮತ್ತೆ ಮತ್ತೆ ಫಿಲಂಗಳು ಬಂದಿವೆ. ಹಾಗೇ ಹಾಲಿವುಡ್ನಲ್ಲೂ ಕ್ಲಾಸಿಕ್ ಕೃತಿಗಳನ್ನು ಮಗುಚಿ ಮಗುಚಿ ಚಿತ್ರಿಸಿ ತೆರೆಗೆ ತರುವವರಿದ್ದಾರೆ. ಈ ವಾರ ತೆರೆಗೆ ಬಂದ 'ದಿ ಗ್ರೇಟ್ ಗ್ಯಾಟ್ಸ್ಬಿ' ಎಂಬುದು ಅಂಥದೊಂದು ಚಿತ್ರ. ಇದರ ಮೂಲ ಎಫ್.ಸ್ಕಾಟ್ ಫಿಟ್ಜೆರಾಲ್ಡ್ನ ಇದೇ ಹೆಸರಿನ ಕಾದಂಬರಿ. ಇದೊಂದು ಶತಮಾನದ ಕ್ಲಾಸಿಕ್, 'ಅಮೆರಿಕನ್ ಡ್ರೀಮ್' ಎಂಬ ಬೊಗಳೆಯನ್ನು ಪುಸ್ ಎನಿಸಿದ ಕೃತಿ ಎಂದೆಲ್ಲ ಹೊಗಳುವವರಿರುವಂತೆ, ಮಹಾ ಬೋರಿಂಗ್ ಕೃತಿ ಅನ್ನುವವರೂ ಇದ್ದಾರೆ. ಈ ಕತೆಯನ್ನಿಟ್ಟುಕೊಂಡು ಹಲವಾರು ಮೂವಿಗಳು ಬಂದಿವೆ. ಬಾಜ್ ಲುರ್ಮನ್ನ ಇತ್ತೀಚೆಗಿನ ಆವೃತ್ತಿಯನ್ನು, ನಮ್ಮ ಅಮಿತಾಭ್ ಬಚ್ಚನ್ ನಟಿಸಿದ್ದಾರೆ ಎಂಬ ಕಾರಣಕ್ಕೆ ನೋಡಬಹುದು. ನಮ್ಮಲ್ಲಿ ಶ್ರೇಷ್ಠ ಸಾಹಿತಿಗಳ ಕಾದಂಬರಿ ಆಧರಿಸಿದ ಚಿತ್ರ ಬಂದರೆ 'ಕಲಾತ್ಮಕ' ಎನಿಸಿಕೊಂಡು ಸಾಯುತ್ತದೆ; ಹಾಲಿವುಡ್ನಲ್ಲಿ ಅದು ಕಮರ್ಷಿಯಲ್ಲಾಗಿಯೂ ಗೆಲ್ಲುತ್ತದೆ.
ಇನ್ನೊಂದು ದಡ
ಒಮ್ಮೆ ಬೌದ್ಧ ಯತಿ ಉಗ್ಯೆನ್ ದೇಶವೆಲ್ಲ ತಿರುಗಾಡಿ, ವಾಪಸು ತನ್ನೂರಿಗೆ ಬಂದ. ಆತ ಮನೆ ಸೇರಬೇಕಾಗಿದ್ದರೆ, ಎದುರಲ್ಲಿ ಹರಿಯುತ್ತಿದ್ದ ದೊಡ್ಡ ನದಿಯೊಂದನ್ನು ದಾಟಬೇಕಾಗಿತ್ತು. ಭೋರ್ಗರೆದು ಹರಿಯುತ್ತಿದ್ದ ನದಿಯನ್ನು ನೋಡಿ, ಅದನ್ನು ದಾಟುವ ದಾರಿಗಾಣದೆ ಯತಿ ಸುಮ್ಮನೆ ಕುಳಿತ.
ತುಸುಹೊತ್ತಿನಲ್ಲಿ ಆಚೆ ದಡದಲ್ಲಿ ಬೌದ್ಧ ಗುರುವೊಬ್ಬ ಕಾಣಿಸಿದ. ಉಗ್ಯೆನ್ ಆಶೆಯಿಂದ ಆತನನ್ನು ಕೂಗಿ ಕರೆದ: 'ಓ ಗುರುವೇ, ನಾನು ಆಚೆ ದಡವನ್ನು ಹೇಗೆ ಸೇರಬಹುದು ಹೇಳುತ್ತೀಯಾ?'
ವಿಸ್ಮಯದಿಂದ ಉಗ್ಯೆನ್ನನ್ನು ನೋಡಿದ ಗುರು ಹೇಳಿದ- 'ನೀನೀಗ ಆಚೆ ದಡದಲ್ಲೇ ಇದ್ದೀಯ!'
-ಕೇರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.