ಈ ಬಾರಿ ಬಿಚ್ಚಿರುವುದು ಮನವನ್ನು
ಆ ಬೆಳಕಿನಲ್ಲಿ, ಅದು ಬೆಳಕೋ, ಕತ್ತಲೆಯೋ ಅಥವಾ ಅವೆರಡರ ನಟ್ಟ'ನಡು'ವಿನ ಸ್ಥಿತಿಯೋ... ಅಂತೂ ಅಲ್ಲಿ ನಮ್ಮ 'ಅವು'ಗಳೆಲ್ಲವೂ ಹಾಗೆ ಕುಣಿಯುತ್ತಿದ್ದರೆ ಕಿತ್ತು ತಿನ್ನುವ ಕಣ್ಣುಗಳೇ ಸಾವಿರ ಚೇಳುಗಳಾಗಿ ಮೈಮೇಲೆಲ್ಲಾ ಹರಿದಾಡುತ್ತಿದ್ದವು. ಮೊಟ್ಟ ಮೊದಲ ಬಾರಿಗೆ ಯಾವುದೇ ಯಂತ್ರದ ಸಹಾಯವಿಲ್ಲದೆ ಸ್ಕ್ಯಾನಿಂಗ್ ಸಾಧ್ಯ ಎಂಬುದು ನನ್ನ ಅರಿವಿಗೆ ಬಂದದ್ದು ಆ ಮಬ್ಬುಕತ್ತಲೆಯ(ಬೆಳಕಿನ) ವೇದಿಕೆಯಲ್ಲಿ. ಅವು ಅಕ್ಷರಶಃ ಹಸಿದ ತೋಳಗಳು. ಒಂದೇ ಒಂದಿಂಚು ಸಮತೋಲನ ತಪ್ಪಿದರೂ ನಮ್ಮ ಮೈಯ್ಯ ಮಾಂಸಗಳನ್ನೆಲ್ಲಾ ಹಸಿಹಸಿಯಾಗಿಯೇ ಕಿತ್ತು ತಿನ್ನಲು ಹವಣಿಸುತ್ತಿದ್ದ ಕ್ರೂರ ಮೃಗಗಳವು. ಹೀಗೂ ಉಂಟೆ ಎಂದು ಕೇಳಿಕೊಂಡರೆ ಪೂರ್ತಿ ಮಾನ ಮರ್ಯಾದೆಗಳನ್ನು ತೊರೆದು ನೇರವಾಗಿ ಕೇಳಿಗೇ ಕರೆಯುವ ಈ ಸಮಾಜದ ಸೋ ಕಾಲ್ಡ್ ಸಂಭಾವಿತರೇ ತುಂಬಿದ ವೈಭವೋಪೇತ ಹೋಟೆಲ್ನ ಸಭಾಂಗಣವದು. ಆದರೆ ವಿಚಿತ್ರ ನೋಡಿ, ಇವರೇ ಅಲ್ಲಿಂದ ಹೊರಹೋದ ಮೇಲೆ, ಬೆಳಕು ಹರಿದ ಮೇಲೆ ನಮ್ಮನ್ನು ಯಾವ ಮುಲಾಜೂ ಇಲ್ಲದೇ ಮಾನಬಿಟ್ಟವರೆಂದು ಜರೆಯುತ್ತಾರೆ. ಹೆಣ್ಣಿನ ಸ್ಥಾನಮಾನಗಳ ಬಗ್ಗೆ ಪುಟಗಟ್ಟಲೆ ಭಾಷಣ ಬಿಗಿಯುತ್ತಾರೆ. ಭಾರತೀಯ ಸಂಸ್ಕೃತಿ, ಅದರ ಮೌಲ್ಯಗಳೆಲ್ಲವೂ ಅವರಿಗೇ ಮಾರಾಟವಾದಂತೆ ಫೋಸು ಕೊಡುತ್ತಾರೆ. ಹಾಗೆಂದು ನಾವೇನೂ ಮರ್ಯಾದೆ ಬಿಟ್ಟು ಆ ಕಾಯಕಕ್ಕೆ ಇಳಿದವರಲ್ಲ. ಮರ್ಯಾದೆ ಬಿಡುವುದು ಅಂದರೆ ಅದೇನು ಸುಲಭದ ಕೆಲಸವೇ? ಎಷ್ಟೇ ನಿರ್ಗತಿಕನಿರಬಹುದು, ಮಾನಸಿಕ ಅಸ್ವಸ್ಥನೇ ಇರಬಹುದು. ಅವರನ್ನು ಸಹ ಸಂಕೋಚ ಕಾಡದೇ ಬಿಟ್ಟಿದ್ದಿಲ್ಲ. ಅಷ್ಟೇಕೆ? ಒಂದು ಕೆಲಸ ಮಾಡಿ, ಇಷ್ಟೆಲ್ಲಾ ಮಾನ ಮರ್ಯಾದೆಯ ಬಗ್ಗೆ ಹೇಳುತ್ತೀರಲ್ಲಾ? ಮನೆಯಲ್ಲಿ ನೀವೊಬ್ಬರೇ ಇದ್ದೀರಿ ಎಂದುಕೊಳ್ಳಿ. ಎಲ್ಲ ಕದಗಳೂ ಮುಚ್ಚಿವೆ. ಹಾಗಿದ್ದೂ ಸ್ನಾನ ಮುಗಿಸಿ ಕೊನೇ ಪಕ್ಷ ಮಲಗುವ ಕೊಠಡಿಯವರೆಗೆ ಬೆತ್ತಲೆಯಾಗಿ ನಿರ್ಭಿಢೆಯಿಂದ ಬಂದುಬಿಡಿ ನೋಡೋಣ? ಮುಜುಗರ ಕಾಡುವುದಿಲ್ಲವೇ? ಹಾಗಿದ್ದಾಗ, ತೀರಾ ಅಪರಿಚಿತ, ಮುಖ ಭಾವದ ತುಂಬ ಅಸಹ್ಯವನ್ನೇ ತುಂಬಿಕೊಂಡ, ಜೊಲ್ಲು ಸುರಿಸುತ್ತಾ ಸುತ್ತುವರಿಯುವ ಹತ್ತಾರು ಮಂದಿಯೆದುರು ಕನಿಷ್ಠ ಉಡುಗೆಯಲ್ಲಿ ಮೈ ಪ್ರದರ್ಶಿಸುತ್ತಾ ಕುಣಿಯುವುದೆಂದರೆ ಅದಿನ್ನೆಷ್ಟು ಅನಿವಾರ್ಯತೆ ನಮ್ಮನ್ನು ಕಾಡುತ್ತಿದ್ದಿರಬಲ್ಲುದು?
ನೀವು ಏನು ಬೇಕಾದರೂ ಕರೆದುಕೊಳ್ಳಿ, ಬಾರ್ಬಾಲೆಯರು ಅಂತಾನೋ, ಸುರಾಸುಂದರಿಯರಂತಾನೋ, ಲೈವ್ಬ್ಯಾಂಡ್ ನರ್ತಕಿಯರಂತಾನೋ, ಕೊನೆಗೆ ಕರೆವೆಣ್ಣುಗಳಂತಾನೇ ಇರಬಹುದು. ಅದು ನಮ್ಮ ನಮ್ಮ ವೃತ್ತಿ. ಅದನ್ನೇಕೆ ಅಷ್ಟೊಂದು ಹಗುರವಾಗಿ ಪರಿಗಣಿಸುವುದು? ಅಂಥಾ ಪರಿ ಹೀಗಳೆಯವುದು? ನನ್ನ ದೃಷ್ಟಿಯಲ್ಲಿ ಹಾಗೆ ಪರಿಗಣಿಸಲು ಆಗುವುದೇ ಇಲ್ಲ. ಕೇವಲ ಹಣಕ್ಕಾಗಿಯೇ ನಾವು ಮೈ ಪ್ರದರ್ಶಿಸೋದು, ಮಾರಿಕೊಳ್ಳುವುದು ಎಂಬುದಾಗಿದ್ದರೆ ಆ ಪ್ರಶ್ನೆ ಬೇರೆ ಇತ್ತಪ್ಪಾ. ಒಂದೇ ಒಂದು ಬಾರಿ ಯೋಚಿಸಿದ್ದೀರಾ? ಅಷ್ಟೆಲ್ಲಾ ವಿಕೃತ ಮನಸ್ಸುಗಳೆದುರು ನಾವು ಹಾಗೆ ಕುಣಿಯುವುದನ್ನು ಅದೆಷ್ಟು ಹೊಟ್ಟೆಗಳು ಅವಲಂಬಿಸಿರುತ್ತವೆ ಎಂಬುದು ನಿಮಗೆ ಗೊತ್ತೇ? ಅಲ್ಲಾ, ಇವತ್ತೇನು ನಾವು ಹೆಣ್ಣುಗಳು ಹೀಗೆ ಮೈ ಒಪ್ಪಿಸಿಕೊಳ್ಳುತ್ತಿರುವುದು? ನಾವು ಛೂಲಿಗೆ ಬಿದ್ದೇನು ಹೀಗೆ ವರ್ತಿಸುತ್ತಿರುವುದೇನು? ಯಾಕೆ, ಈ ಸಮಾಜ ರೂಪಿಸಿದ ನೈತಿಕತೆಯ ಚೌಕಟ್ಟನ್ನು ಮೀರಿಯೂ ಹೆಣ್ಣುಗಳನ್ನು ಭೋಗಕ್ಕೆ ಬಳಸಿಕೊಳ್ಳುವುದು ಈ ನೆಲದಲ್ಲಿ ನಿರಂತರವಾಗಿ ನಡೆದುಕೊಂಡೇ ಬಂದಿಲ್ಲವೇ? ಹೆಣ್ಣನ್ನು ಪೂಜಿಸುತ್ತೇವೆಂದು ಹೇಳಿಕೊಳ್ಳುವ ಈ 'ಪುಣ್ಯ'ನೆಲದಲ್ಲೂ ಇದರ ಪ್ರಮಾಣ ಕಡಿಮೆಯೇನೂ ಇಲ್ಲ. ಒಂದು ಮಾತು ಹೇಳಿಬಿಡುತ್ತೇನೆ ಕೇಳಿ, ಒಂದೊಮ್ಮೆ ನಾವು ಇರದೇ ಹೋಗಿದ್ದರೆ ಏನಾಗುತ್ತಿತ್ತು ಒಳಗಿರುವ ಗರತಿಯರ ಕಥೆ? ಮನೆಮನೆಗಳಲ್ಲೂ..., ಕಲ್ಪಿಸಿಕೊಳ್ಳಲೂ ಆಗಲಿಕ್ಕಿಲ್ಲ ಅಲ್ಲವೇ? ಇತಿಹಾಸವನ್ನೊಮ್ಮೆ ನೋಡಿ, ಈ ಸಮಾಜದ ಸ್ವಾಸ್ಥ್ಯವನ್ನು ಯಾರಾದರೂ ರಕ್ಷಿಸಿದ್ದೇ ಇದ್ದರೆ ಅದು ನಮ್ಮಂಥವರು ಎಂಬುದನ್ನು ಮರೆತು ಮಾತನಾಡುತ್ತಾರಲ್ಲಾ ಅದೇ ಸಮಾಜದ ಈ ಮಂದಿ, ಏನೆನ್ನಬೇಕಿವರಿಗೆ? ನಮ್ಮದ್ದೊಂದು ಸಮುದಾಯವಿಲ್ಲದಿದ್ದರೆ ವಿಕೃತ ಮನಸ್ಸುಗಳಿಗೆ ಸಿಲುಕಿ ಇಡೀ ಸ್ತ್ರೀಕುಲವೇ ಯಾವ ಪರಿ ನಲುಗುತ್ತಿದ್ದಿರಬಹುದು ಎಂಬುದನ್ನು ಊಹಿಸಲೂ ಅಸಾಧ್ಯ. ಆ ದೃಷ್ಟಿಯಿಂದ ನಮ್ಮ ತ್ಯಾಗ ಮಹತ್ತರವಾದುದು ಅಂತ ಒಂದು ದಿನವೂ ಅನ್ನಿಸಿಲ್ಲವೆ?
ಈ ಹಿನ್ನೆಲೆಯಲ್ಲಿಯೇ ನಮ್ಮ ಕಾಯಕಕ್ಕೆ ವೃತ್ತಿಯ ಮಾನ್ಯತೆ ನೀಡಬೇಕೆಂಬ ಕೂಗು ಎದ್ದಿದ್ದು. ಒಂದು ತಿಳಿದುಕೊಂಡು ಬಿಡಿ, ಮೈ ಒಪ್ಪಿಸಿದಷ್ಟು ಸುಲಭದಲ್ಲಿ ಮನಸ್ಸನ್ನು ಒಪ್ಪಿಸುವುದು ಯಾರಿಂದಲೂ ಸಾಧ್ಯವಿಲ್ಲ. ಹಾಗಂತ ಮನಸ್ಸಿಲ್ಲದೇ ಮೈ ಒಪ್ಪಿಸಿಕೊಳ್ಳುವುದು ಅದೆಷ್ಟು ಹಿಂಸೆ, ಅದೆಂಥಾ ನರಕ ಎಂಬುದು ನಮಗೆ ಮಾತ್ರವೇ ಗೊತ್ತು. ಹೀಗಾಗಿ ನಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುವ ಹೊಣೆಗಾರಿಕೆ ಈ ಸಮಾಜದ ಮೇಲಿಲ್ಲವೇ?
ನಾವೇನೂ ಬಯಸೀ ಬಯಸಿ ಇಂಥ ಚಟುವಟಿಕೆಗಳಿಗೆ ಬಂದದ್ದಲ್ಲ. ಬಹಳಷ್ಟು ಸಲ ಬಲವಂತವಾಗಿ, ಕೆಲವೊಮ್ಮೆ ಅನಿವಾರ್ಯತೆಯಿಂದ, ಇಲ್ಲವೇ ಮುಗ್ಧತೆಯೊಂದಿಗೆ ತಳ್ಳಲ್ಪಟ್ಟಿರುತ್ತೇವೆ. ದುರಂತ ಗೊತ್ತಾ? ಕಾನೂನಿನ ಬಲೆಗೆ ಬೀಳುವ ಸನ್ನಿವೇಶದಲ್ಲಿ, ಆನಂತರದಲ್ಲೂ ದೂಷಣೆಗೊಳಗಾಗುವುದು, ವ್ಯಂಗ್ಯ, ತಿರಸ್ಕಾರದ ದೃಷ್ಟಿಗೆ ತುತ್ತಾಗುವುದು ಮತ್ತೆ ನಾವೇ. ಎಲ್ಲ ರೀತಿಯಿಂದಲೂ ಸಂಕಷ್ಟ ಅನುಭವಿಸುವುದೂ ನಾವೇ. ಹೀಗೇಕೆ? ಅದರಲ್ಲಿ ನಮ್ಮ ತಪ್ಪೇನು? ಅಥವಾ ನಮ್ಮದು ಮಾತ್ರವೇ ತಪ್ಪೇ? ನಮ್ಮನ್ನು ಅಂಥ ಕೃತ್ಯಕ್ಕೆ ಎಳೆದ, ಬಳಸಿಕೊಳ್ಳುವ, ಬಳಸುವ ಹುನ್ನಾರ ತೋರುವ ಜನರಿಗೇನು ಶಿಕ್ಷೆ? ಇದು ಕೇವಲ ಸಾಮಾಜಿಕ, ನ್ಯಾಯಿಕ ಪ್ರಶ್ನೆಯಷ್ಟೇ ಅಲ್ಲ. ನೈತಿಕ, ನೈಸರ್ಗಿಕ ದೃಷ್ಟಿಯಿಂದಲೂ ನೋವು- ನಷ್ಟಗಳು ನಮಗೇ. ಗಂಡು ಅಕ್ಷರಶಃ ಒರೆಸಿಕೊಂಡು ಎದ್ದು ಹೊರಟುಬಿಡುತ್ತಾನೆ. ಪರಿಣಾಮದ ಕನಿಷ್ಠ ವಿವೇಚನೆಯನ್ನೂ ಮಾಡುವ ಗೋಜಿಗೆ ಆತ ಹೋಗುತ್ತಾನೇನು? ಹಾಗೆಂದು ಅದರ ಪರಿಜ್ಞಾನ ಅವನಿಗಿಲ್ಲ ಎನ್ನಲಾಗದು. ಏಕೆಂದರೆ ಆತ ಈ ಸೃಷ್ಟಿಯ ಭಾಗವೇ ಆಗಿರುತ್ತಾನೆ.
ಹೇಗೇ ಇರಲಿ, ಯಾವುದೇ ದೃಷ್ಟಿಯಿಂದಲೂ ನಮ್ಮ ಬಗ್ಗೆ ಮಾತನಾಡುವಾಗ, ವ್ಯಂಗ್ಯ, ಕುಚೇಷ್ಟೆಗಳಿಗೆ ಮುಂದಾಗುವಾಗ, ಮನ ಬಂದಂತೆ ಬಾಯಿ ಹರಿಬಿಡುವಾಗ ಕನಿಷ್ಠ ಆತ್ಮಾವಲೋಕನ, ಒಂದಿನಿತು ವಿವೇಚನೆ ಅಗತ್ಯವೆನಿಸುತ್ತದೆ. ಇಲ್ಲದಿದ್ದರೆ ನಿಯಂತ್ರಣದಲ್ಲಿ ನಡೆಯಬೇಕಾದದ್ದು ತೆರೆಮರೆಯಲ್ಲಿ ತನ್ನ ಕಬಂಧಬಾಹುವನ್ನು ಚಾಚುವ ಅಪಾಯವಿದೆ. ಕತ್ತಲಜಗತ್ತಿನ ಪಾತ್ರಧಾರಿಗಳೆಂದರೆ ಕಿತ್ತು ತಿನ್ನುವ ಹಸಿ ಮಾಂಸಗಳಷ್ಟೇ ಅಲ್ಲ ಎಂಬ ಜೀವನದ ಹಸಿ ಸಂಗತಿ ನೆನಪಿರಲಿ. ಹೊತ್ತು ಮುಳುಗುವ ಹೊತ್ತಲ್ಲಿ ಮನದಲ್ಲಿ ಹೊತ್ತಿ ಉರಿಯುತ್ತಿದ್ದ ಒಂದಷ್ಟನ್ನು ಹಂಚಿಕೊಂಡಿದ್ದೇನೆ. ಸ್ವೀಕರಿಸುವುದೂ ಬಿಡುವುದು ನಿಮಗೆ ಬಿಟ್ಟದ್ದು. ಕುಣಿಯುವ ಹೊತ್ತಾಯಿತು, ಹೊರಡ್ತೀನಿ.
- ರಾಧಾ ಸೋಚನಿ
abhyagatha@yahoo.co.in