ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಚಂದ್ರನ ಬೆಳಕು

Mainashree
Updated On : 8 Jun 2013, 2:29 am

ಅಲ್ಲಿ ಕನಸುಗಳಿಗೆ ಆಕಾರ ಕೊಡಲಾಗುತ್ತದೆ. ಅದು ಎಂ. ಚಂದ್ರಶೇಖರ ಪ್ರತಿಷ್ಠಾನ!
ಇಲ್ಲಿ ಮುಖ್ಯವಾಗಿ ನಾಟಕ ಅಭಿನಯ, ಜತೆಗೆ ಸಂಗೀತ, ಕ್ರಾಫ್ಟ್ ವರ್ಕ್, ಪರಿಸರ ಉಳಿಸುವಿಕೆ, ಪರಿಸರ ನೈರ್ಮಲ್ಯ ಅಲ್ಲದೆ, ಶಿಸ್ತುಬದ್ಧ ಜೀವನ ಕ್ರಮಗಳ ಕುರಿತು ವಿಶೇಷ ಉಪನ್ಯಾಸ ಮಾಮೂಲಿ. ಬೆಂಗಳೂರಿನ ಬನ್ನೇರುಘಟ್ಟ ಸಮೀಪದ ಗೊಟ್ಟಿಗೆರೆಯ ಶ್ರೀ ರಾಮಕೃಷ್ಣ ಸಮಗ್ರ ಶಿಕ್ಷಣ ಕೇಂದ್ರದ ಎಂ. ಚಂದ್ರಶೇಖರ ಭವನ ರಂಗಮಂದಿರದಲ್ಲಿ ಎರಡು ತಿಂಗಳು ಮಕ್ಕಳಿಗಾಗಿ ಉಚಿತ ಬೇಸಿಗೆ ರಂಗ ತರಬೇತಿ ಶಿಬಿರ ನಡೆಯಿತು. 20ಕ್ಕೂ ಹೆಚ್ಚು ಉತ್ಸಾಹಿ ಬಡ ಮಕ್ಕಳಿಗೆ ಇಲ್ಲಿ ಉಚಿತ ತರಬೇತಿ ನೀಡಲಾಯಿತು.
ಮಕ್ಕಳ ರಂಗ ತರಬೇತಿ ಶಿಬಿರಕ್ಕೆಂದೇ ಇಲ್ಲಿ 28 ಎಕರೆ ಜಮೀನನ್ನು ಮೀಸಲಿಡಲಾಗಿದೆ. ಪ್ರತಿಷ್ಠಾನದ ಸಂಸ್ಥಾಪಕ ದಿ.ಎಂ. ಚಂದ್ರಶೇಖರ್ ಸಾಂಸ್ಕೃತಿಕವಾಗಿ ಕಾಳಜಿಯುಳ್ಳವರು. ಈಗ ಅವರ ಮಗ ಎಂ.ಸಿ. ನರೇಂದ್ರ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಬಾರಿಯ ಶಿಬಿರದಲ್ಲಿ ನಾಲ್ವರು ರಂಗವಿದ್ಯೆ ಧಾರೆಯೆರೆದರು. ಮಹಾಂತೇಶ್ ದೇಗಾವಿ, ಸಿತಾರಾ, ರವಿಕುಮಾರ್ ಬಾಣಸಂದ್ರ ಮತ್ತು ನಾಗರಾಜ್. ಈ ಶಿಬಿರದಲ್ಲಿ ಸಮಾರೋಪವಾಗಿ 'ನಾಣಿ ಭಟ್ಟನ ಸ್ವರ್ಗದ ಕನಸು' ನಾಟಕವನ್ನು ಮಕ್ಕಳೇ ಪ್ರದರ್ಶಿಸಿದ್ದು ವಿಶೇಷ. ಸಿತಾರಾ ಇದನ್ನು ನಿರ್ದೇಶಿಸಿದರು.
ಈ ಹಿಂದೆ ಆರ್.ಡಿ.ಕಾಮತ್ ಅವರ 'ಹೃದಯ ದೇಗುಲ' ನಾಟಕವನ್ನು ಮಕ್ಕಳು ಮನೋಜ್ಞವಾಗಿ ಅಭಿನಯಿಸಿ, ಪ್ರೇಕ್ಷಕರ ಮನಸೂರೆಗೊಳಿಸಿದ್ದು ಸುಳ್ಳಲ್ಲ. ಕುವೆಂಪು ಅವರ 'ಬಲಿದಾನ' ನಾಟಕವಂತೂ ಸೂಪರ್ ಹಿಟ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಎರಡು ಬಾರಿ ಮಾತ್ರ ರಂಗದ ಮೇಲೆ ಬಂದಿರುವ ಈ ನಾಟಕ ತದನಂತರ ಮೈಸೂರಿನ ರಂಗಾಯಣ, ಸಂಸ ಬಯಲು ರಂಗಮಂದಿರ, ಬೆಳಗಾವಿ ಮತ್ತು ಇದೇ ಪ್ರತಿಷ್ಠಾನದ ರಂಗಮಂದಿರಲ್ಲಿ ಎರಡು ಬಾರಿ ಪ್ರದರ್ಶನ ಕಂಡಿದೆ. 'ಬಲಿದಾನ'ವನ್ನು ಮುಂದಿನ ದಿನಗಳಲ್ಲಿ ಕುವೆಂಪು ಜನ್ಮನೆಲ ಕುಪ್ಪಳಿಯಲ್ಲೂ ಪ್ರದರ್ಶಿಸುವ ಯೋಚನೆ ಇದೆ. ಈ ಬಾರಿಯ ಮಕ್ಕಳ ರಂಗ ತರಬೇತಿ ಶಿಬಿರಕ್ಕೆ ಜೂ.8ರಂದು (ನಿನ್ನೆ) ತೆರೆ ಬಿದ್ದಿದೆ.
ಎಂ. ಚಂದ್ರಶೇಖರ ಪ್ರತಿಷ್ಠಾನ ರಂಗ ತರಬೇತಿ ಡಿಪ್ಲೋಮ ತರಗತಿ ಆರಂಭಿಸುವ ಯೋಜನೆಯನ್ನೂ ಕೈಗೆತ್ತಿಕೊಂಡಿದೆ. ನೀನಾಸಂ, ರಂಗಾಯಣ ಇವೆರಡಕ್ಕಿಂತಲೂ ವಿಭಿನ್ನವಾಗಿ ಕೆಲಸ ಮಾಡಬೇಕೆಂಬ ಆಸ್ಥೆಯಿದೆ. ಮಕ್ಕಳ ಮನೋವಿಕಾಸಕ್ಕೆ ಹತ್ತಿರವಾಗುವಂಥ ಕಾರ್ಯಕ್ರಮಗಳನ್ನು ರೂಪಿಸುವುದೇ ಮುಖ್ಯ ಗುರಿ. ಪ್ರತಿಷ್ಠಾನದ ಈ ಗುರಿ ಈಡೇರಲಿ.

- ಶ್ರೀನಿಧಿ ಒಡಿನಾಳ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement