ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಬಾಂಡ್, ರಸ್ಕಿನ್ ಬಾಂಡ್

Mainashree
Updated On : 8 Jun 2013, 2:37 am

ಇಂಗ್ಲಿಷ್ ಸಾಹಿತ್ಯಪ್ರಿಯರಿಗೆ ಜೇಮ್ಸ್ ಬಾಂಡ್‌ಗಿಂತಲೂ ಹೆಚ್ಚು ಇಷ್ಟವಾಗುವವನೆಂದರೆ ರಸ್ಕಿನ್ ಬಾಂಡ್. ಬೆಟ್ಟತಾಣವೊಂದರಲ್ಲಿ ತಣ್ಣಗೆ ತನ್ನ ಪಾಡಿಗೆ ತಾನಿದ್ದುಕೊಂಡು, ಮಕ್ಕಳಿಗೂ ಹಿರಿಯರಿಗೂ ಏಕಕಾಲಕ್ಕೆ ಇಷ್ಟವಾಗುವಂಥದನ್ನು ಬರೆಯುತ್ತಾ ಕಾಲ ಕಳೆಯುತ್ತಿರುವ ರಸ್ಕಿನ್, ಎಲ್ಲ ಸಾಹಿತ್ಯಪ್ರೇಮಿಗಳ ಪ್ರಾಥಮಿಕ ಓದಿಗೆ ಕಡ್ಡಾಯ ಲೇಖಕ. ಮೊನ್ನೆ ಈತನಿಗೆ 79 ವರ್ಷ ತುಂಬಿತು. ದಣಿವರಿಯದ ಈತ, ಇಷ್ಟು ವರ್ಷಗಳ ತನ್ನ ಡೆಹ್ರಾಡೂನ್ ಜೀವನದ ನೆನಪುಗಳನ್ನು 'ಗಾರ್ಲಂಡ್ ಆಫ್ ಮೆಮೊರೀಸ್‌' ಎಂಬ ಕೃತಿಯಲ್ಲಿ ಮತ್ತೆ ಮೊಗೆಮೊಗೆದು ಕೊಟ್ಟಿದ್ದಾರೆ.
ಒಂದು ರೀತಿಯಲ್ಲಿ ನಮ್ಮ ತೇಜಸ್ವಿ ಥರಾ ಇರುವ ವ್ಯಕ್ತಿಯಾದ ಈ ಬಾಂಡ್, ಹಸಿರು ಸಿರಿಯ ನಡುವೆ ಇದ್ದು ಅದರ ಬಗೆಗೇ ಬರೆದವರು. ಅವರದೊಂದು ಕವಿತೆಯ ಕನ್ನಡಾವತಾರ ಇಲ್ಲಿದೆ. ಇದು ತನ್ನ ತಂದೆತಾಯಿಗಳೊಡನೆ ಊರಿಗೆ ಹೋದ ತಮ್ಮ ದತ್ತು ಮೊಮ್ಮಗ ರಾಕೇಶ್‌ನನ್ನು ನೆನೆಸಿಕೊಂಡು ಬರೆದದ್ದು.
'ಕಳೆದ ರಾತ್ರಿ ನಾನು ಗಾಳಿಯಾಗಿದ್ದೆ. ನದಿಯ ಮೇಲೆ ಹಾದು, ಏಳು ಬೆಟ್ಟಗಳನ್ನೇರಿದೆ. ಕಣಿವೆಯನ್ನೆಲ್ಲ ನೋಡುತ್ತಾ ಮರಗಳ ಸುತ್ತಲೂ ತಿರುಗಿದೆ. ಪುಟ್ಟ ಮನೆಯ ಸುತ್ತ ತಿರುಗುತ್ತಾ ಕಿಟಕಿಯ ಮೂಲಕ ನಿನ್ನ ಕಂಡೆ. ಈ ಗಾಳಿಯ ಅವರು ಒಳಗೆ ಬಿಡಲಿಲ್ಲ, ಚಳಿಗಾಳಿ! ಅಲ್ಲೇ ಸುಳಿದೆ, ಬೊಬ್ಬಿರಿಯಲು ಹಿಂಜರಿದೆ. ಹತಾಶ ಮನುಷ್ಯನಂತೆ, ನಿದ್ರಿತ ಪರ್ವತಗಳ ಮೇಲಿಂದ ನನ್ನ ನೆಲೆಯತ್ತ ನಿಧಾನ ಸಾಗಿದೆ. ನಿಶ್ಚಲತೆಯ ಮೌಲ್ಯ ನನಗೆ ಯಾವಾಗ ತಿಳಿಯುತ್ತದೆ?'


ಕಳಪೆ ಬರಹ
ಕೆಟ್ಟದಾಗಿ ಬರೆಯುವವರ ಕುರಿತು ಎಲ್ಲರಿಗೂ ಸಿಟ್ಟಿರುತ್ತೆ. ಯಾರೋ ಹೇಳಿದ್ದು ನೆನಪಾಗುತ್ತಿದೆ: ತುಂಬಾ ಕಳಪೆಯಾಗಿ ಬರೆಯುವವರಿಗೆ ನಾವು ಕೊಡಬಹುದಾದ ಶಿಕ್ಷೆ ಅಂದರೆ, ಇನ್ನಷ್ಟು ಕಳಪೆಯಾದದ್ದನ್ನು ಅವರಿಗೇ ಬಲವಂತವಾಗಿ ಓದಿಸುವುದು. ಕಳಪೆ ಬರಹಗಳ ಬಗ್ಗೆ ಸಿಟ್ಟು ಮಾಡಿಕೊಂಡವರು ಹೇಳಿದ್ದು ಇಲ್ಲಿದೆ:
    ತಾನು ಹೇಗೆ ಆ ಬೃಹತ್ ಗ್ರಂಥವನ್ನು ಬರೆದೆ ಎಂಬ ಬಗ್ಗೆ ಆಕೆ ಗಂಟೆಗಟ್ಟಲೆ ನಮ್ಮನ್ನು ಕೊರೆದುಹಾಕಿದಳು. ಅದರ ಬದಲು ಒಂದು ಸಣ್ಣ ಕ್ಷಮಾಯಾಚನೆ ಸಾಕಿತ್ತು. (ಪಿ.ಜಿ.ವುಡ್‌ಹೌಸ್)
    ಕೆಟ್ಟ ಬರಹ ಅಂದ್ರೆ ಕೊಳಕು ಬರಹಗಾರಿಕೆ ಮತ್ತು ತಪ್ಪು ಅಬ್ಸರ್ವೇಶನ್ ಮಾತ್ರವೇ ಅಲ್ಲ. ಅದು ಮನುಷ್ಯರು ಏನು ಮಾಡುತ್ತಾರೆಂಬ ವಾಸ್ತವವನ್ನು ನೋಡಲು ನಿರಾಕರಿಸುವ ಭಂಡತನ. ಈ ಕೊಲೆಗಾರರು ಮಿದು ಹೃದಯದ ವೃದ್ಧೆಯರನ್ನು ತಮ್ಮ ಪುಸ್ತಕಗಳಿಂದ ಸಾಯಿಸಿಬಿಡಬಲ್ಲರು!(ಸ್ಟೀಫನ್ ಕಿಂಗ್)
    ಸುಮ್ಮನೆ ಕುಳಿತು ಬರೆಯುವುದರಿಂದ ನಿಮ್ಮ ಬುದ್ಧಿ ವಿಕಸಿತವಾಗುವುದಿಲ್ಲ, ಪೃಷ್ಠ ಅಗಲವಾಗುತ್ತದಷ್ಟೇ.(ಅರ್ನೆಸ್ಟ್  ಹೆಮಿಂಗ್‌ವೇ)
    ಒಳ್ಳೆಯ ಕಾದಂಬರಿ ಬರೆಯುವುದಕ್ಕೆ ಮೂರು ಸೂತ್ರಗಳಿವೆ. ದುರದೃಷ್ಟವಶಾತ್, ಅವು ಯಾರಿಗೂ ಗೊತ್ತಿಲ್ಲ. (ಸಾಮರ್‌ಸೆಟ್ ಮಾಮ್)

ಎರಡು ಮಳೆಹನಿ
ಆಕಾಶದಲ್ಲಿ ತೇಲುತ್ತಿದ್ದ ಮೋಡದಲ್ಲಿದ್ದ ಎರಡು ಮಳೆಹನಿಗಳು ಬಲೇ ಫ್ರೆಂಡ್ಸ್ ಆಗಿದ್ದವು. ಭೂಮಿಗೆ ತೆರಳುವ ಸಮಯ ಹತ್ತಿರ ಬಂದಂತೆ ಅವುಗಳ ಗೆಳೆತನ ಮತ್ತೂ ಗಾಢವಾಯಿತು. ಆ ಕ್ಷಣವೂ ಬಂದೇ ಬಂತು. ಮೋಡದಿಂದ ಹೊರಬಿದ್ದ ಎರಡೂ ಅಕ್ಕಪಕ್ಕದಲ್ಲೇ ಸಾಗುತ್ತಾ ಬೆಟ್ಟದ ಶಿಖರದ ಕೋಡುಗಲ್ಲಿಗೆ ಅಪ್ಪಳಿಸಿದವು. ಅವುಗಳಲ್ಲೊಂದು, ಪಶ್ಚಿಮದತ್ತ ಸಿಡಿದು, ಅತ್ತ ಹರಿಯುವ ಹೊಳೆಯನ್ನು ಸೇರಿ ಅರಬ್ಬೀ ಸಮುದ್ರ ಸೇರಿತು. ಇನ್ನೊಂದು ಹನಿ ಪೂರ್ವದತ್ತ ಹರಿದು ಬಂಗಾಲ ಕೊಲ್ಲಿಯ ಪಾಲಾಯಿತು. ಎರಡೂ ಮತ್ತೆಂದಾದರೂ ಸೇರುತ್ತವಾ? ಸಸ್ಪೆನ್ಸ್!
ಕತೆ ಅಂದುಕೊಂಡಿರಾ? ಹಾಗೆಂದುಕೊಂಡರೆ ಅದೇ ಅನ್ನಿ. ಆದರೆ ನಿಜವಾಗಲೂ ಹೀಗಾಗುತ್ತದಂತೆ. ಮಳೆಗಾಲ ಶುರುವಾಯಿತಲ್ವಾ, ಅದಕ್ಕೇ ಈ ವಿಷಯ ಹೇಳಿದೆ ಅಷ್ಟೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement