ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಮಗನ ಮೊರೆ

Mainashree
Updated On : 8 Jun 2013, 2:31 am

ಒಂದು ಊರು. ಗೋಪಯ್ಯ ಎಂಬಾತ ತನ್ನ ಪತ್ನಿ, ಮಗನೊಂದಿಗೆ ಅಲ್ಲಿ ವಾಸವಿದ್ದ. ಪ್ರತಿದಿನ ಹತ್ತಿರದ ಹಳ್ಳಿಗಳ ಸಂತೆಯಲ್ಲಿ ಬೀಗ, ಕೀಲಿಕೈ ರಿಪೇರಿಯಲ್ಲಿ ತೊಡಗುವುದು ಅವನ ಕೆಲಸ. ಪತ್ನಿ ನೀಲಮ್ಮ, ಮಗ ವಿನಯ ಆತನ ಶ್ರಮದ ದುಡಿಮೆಗೆ ಸಹಕಾರ ನೀಡುತ್ತಿದ್ದರು. ವಿನಯನನ್ನು ಶಾಲೆಯಲ್ಲೇ ಅತಿ ಬುದ್ಧಿಶಾಲಿ ವಿದ್ಯಾರ್ಥಿಯನ್ನಾಗಿ ರೂಪಿಸಬೇಕು. ಎಷ್ಟೇ ಕಷ್ಟವಾದರೂ ಸರಿ. ಮುಂದೆ ಆತ ವೈದ್ಯನೋ, ತಂತ್ರಜ್ಞನೋ ಆಗಬೇಕೆಂಬ ಕನಸು ಅವರದು. ಆ ಉದ್ದೇಶಕ್ಕಾಗಿ ನಿಂಗಮ್ಮನೂ ಹೂ ಕಟ್ಟುವುದು, ಊಟದ ಎಲೆ ಹೊಲಿಯುವುದರಲ್ಲಿ ನಿರತಳಾಗಿ ಒಂದಷ್ಟು ಸಂಪಾದಿಸುತ್ತಿದ್ದಳು. ಗೋಪಯ್ಯ ತಾನೇನು ಕಡಿಮೆ ಎನ್ನುವಂತೆ ಸಂಜೆ ಆರು-ಆರೂವರೆಗೆ ಮನೆಗೆ ವಾಪಸ್ಸಾಗುತ್ತಿದ್ದವನು ಎಂಟೂವರೆಗೆ ಬರಲಾರಂಭಿಸಿದ್ದನು.
ಹೀಗಿರಲು ಒಂದು ದಿನ ಗೋಪಯ್ಯ ಮಾದಳ್ಳಿ ಸಂತೆಯಿಂದ ವಹಿವಾಟು ಮುಗಿಸಿಕೊಂಡು ರಾತ್ರಿ ಒಂಬತ್ತೂವರೆಗೆ ಮನೆಗೆ ಬಂದಿದ್ದ. ನೀಲಮ್ಮ ಇಷ್ಟು ತಡವೇಕೆ ಅಂತ ಬೇಸರಪಟ್ಟಳು. ಹೀಗೇ ದುಡಿದರೆ ಆರೋಗ್ಯ ಹದಗೆಡುವುದಿಲ್ಲವೆ ಎಂದು ಪೇಚಾಡಿದಳು. ವಿನಯ 'ಅಪ್ಪ, ನೀನು ಗಂಟೆಗೆ ಎಷ್ಟು ಹಣ ಸಂಪಾದಿಸುತ್ತೀಯ ಹೇಳು' ಎಂದು ಕೇಳಿದ. ಗೋಪಯ್ಯ ಸಿಟ್ಟಿನಿಂದ, 'ಎಂಥ ಅಧಿಕಪ್ರಸಂಗಿ ನೀನು. ಯಾರಾದರೂ ತಂದೆಗೆ ಹೀಗೆ ಪ್ರಶ್ನಿಸುವುದುಂಟೆ? ಸುಮ್ಮನೆ ಓದಿನ ಕಡೆ ಗಮನ ಕೊಡು. ನಿನಗಾಗಿಯೇ ಅಲ್ಲವೇ ನಾವು ಈ ಅವಸ್ಥೆ ಪಡ್ತಿರೋದು' ಎಂದು ಗದರಿದ. ವಿನಯ ಪುನಃ ಅದೇ ಪ್ರಶ್ನೆಯನ್ನು ಕೇಳಿದಾಗ, ಗೋಪಯ್ಯ ಮಗನ ಕಿವಿ ಹಿಂಡಿ ಓದುವ ಕೊಠಡಿಗೆ ದೂಡಿದ್ದ.
ನೀಲಮ್ಮ ಪತಿಗೆ ಊಟ ಬಡಿಸಿ ತಾನೂ ಊಟ ಮಾಡಿದಳು. ಮಗು ಎಷ್ಟು ನೊಂದುಕೊಂಡಿತೋ ಏನೋ ಎಂದು ದಂಪತಿ ಪರಿತಪಿಸಿದರು. 'ನೀವು ತಾಸಿಗೆ ಇಷ್ಟು ದುಡ್ಡು ಅಂತ ಹೇಳಿದ್ದರೇನು ಗಂಟು ಹೋಗುತ್ತಿತ್ತು?' ಎಂದು ನೀಲಮ್ಮ ಗಂಡನನ್ನು ತರಾಟೆಗೆ ತೆಗೆದುಕೊಂಡಳು. ಗೋಪಯ್ಯನಿಗೂ ಹೆಂಡತಿ ಮಾತು ಹೌದೆನ್ನಿಸಿತು. ತಾನು ಅಷ್ಟೊಂದು ಸಿಟ್ಟಾಗಬಾರದಿತ್ತು ಎಂದೆಲ್ಲ ಯೋಚಿಸಿದ. ಮೆಲ್ಲಗೆ ಮಗನಿದ್ದ ಕೊಠಡಿಯ ಬಾಗಿಲನ್ನು ತೆಗೆದ. ಅಲ್ಲಿ ಮೂಲೆಯಲ್ಲಿ ಪುಸ್ತಕ ಹಿಡಿದು ಮಗ ಮಂಕಾಗಿ ಕುಳಿತಿದ್ದ. ಗೋಪಯ್ಯ ಅವನ ಬಳಿ ಹೋಗಿ ಬೆನ್ನು ಸವರಿದ, 'ಮಗು, ನನ್ನಿಂದ ನಿನಗೆ ಬಹಳ ನೋವಾಗಿದೆ. ಇನ್ನು ಮುಂದೆ ಖಂಡಿತವಾಗಿಯೂ ನಿನ್ನೊಡನೆ ಒರಟಾಗಿ ನಡೆದುಕೊಳ್ಳುವುದಿಲ್ಲ' ಎಂದು ಮೃದುವಾಗಿ ಮಗನ ಕೆನ್ನೆ ಚುಂಬಿಸಿ, ತಾನು ಗಂಟೆಗೆ ಹತ್ತು ರುಪಾಯಿ ಗಳಿಸುವುದಾಗಿ ಹೇಳಿದ.
'ಅಪ್ಪ, ಇಲ್ಲಿ ನೋಡು ನನ್ನ ಹಾಸಿಗೆ ಕೆಳಗೆ' ಎಂದು ವಿನಯ ಹೇಳಲು, ಗೋಪಯ್ಯನಿಗೆ ಅಲ್ಲಿ ಕಂಡಿದ್ದೇನು? ತಾನು ಅವನಿಗೆ ಕೊಡುತ್ತಿದ್ದ ಪಾಕೆಟ್ ಮನಿಯಲ್ಲಿ ಆತ ಉಳಿಸಿದ ಹಣ. ಸುಮಾರು ಇನ್ನೂರು ರುಪಾಯಿ!
'ಒಳ್ಳೆಯದು ಮಗನೆ, ಖರ್ಚನ್ನು ಜಾಣತನದಿಂದ ಮಾಡುವ ಗುಣ ನಿನ್ನದು. ನಾನು ಕೊಡುತ್ತಿರುವುದರಲ್ಲೇ ಒಂದಷ್ಟು ಉಳಿತಾಯ ಮಾಡುತ್ತಿದ್ದೀಯಲ್ಲ. ಬಹಳ ಸಂತೋಷ' ಎಂದ ಗೋಪಯ್ಯ.
'ಅಪ್ಪಾ, ನನ್ನ ಒಂದು ಮಾತು ನಡೆಸಿಕೊಡುತ್ತೀಯಾ?'
'ಓಹೋ, ಖಂಡಿತ, ಏನು ಹೇಳು?'
'ಅಂಥದ್ದೇನೂ ಇಲ್ಲಪ್ಪ. ಈ ಇನ್ನೂರು ರು. ತೆಗೆದುಕೊ. ನಾಳೆಯಿಂದ ಇನ್ನು ಇಪ್ಪತ್ತು ದಿನವಾದರೂ ನನಗಾಗಿ ಒಂದು ಗಂಟೆ ಮುಂಚಿತವಾಗಿ ಮನೆಗೆ ಬರುತ್ತೀಯಾ?'
ಗೋಪಯ್ಯನಿಗೆ ಮಗನನ್ನು ಅಪ್ಪಿಕೊಳ್ಳುವುದರ ಹೊರತಾಗಿ ಬೇರೇನೂ ತೋಚಲಿಲ್ಲ.

-  ಬಿಂಡಿಗನವಿಲೆ ಭಗವಾನ್


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments