ಸುಂದರಿಗೆ ಮುತ್ತಿಡಲು ನಿಧಾನಿಸಬಾರದು!
ವಿಶ್ವದ ಫಿರಂಗಿಗಳು ಆಗ ಯುದ್ಧದ ತುತ್ತೂರಿ ಬಾರಿಸುತ್ತಿದ್ದವು. ಜಪಾನನ್ನು ಹೇಗಾದರೂ ಪಾನ್ ಥರ ಜಗಿದು ಕೆಂಪುಕಾರಿಸಬೇಕೆನ್ನುವುದು ಅಮೆರಿಕದ ಗುದದಲ್ಲಿ ಸಿಲುಕಿದ ಅವಸರ. ತವರು ನೆಲಕ್ಕಿಂತ, ಹತ್ತಿರದ ಚೀನಾದಲ್ಲಿ ನಿಂತು ಬಾಂಬುಗುಳಿದರೆ ಜಪಾನು ಜಖಂ ಆಗುತ್ತದೆ. ಹಾಗಂದುಕೊಂಡು ಅಮೆರಿಕ, ಚೀನಾಕ್ಕೆ ಲೆಕ್ಕಮಾಡಿ ಕಳುಹಿಸಿದ ಹತ್ತು ಸಹಸ್ರ ಸೈನಿಕರಲ್ಲಿ ಲೆಫ್ಟಿನೆಂಟ್ ವಿಲಿಯಂ ಲೆಡೆರರ್ ಒಬ್ಬನಾಗಿದ್ದ. 1936ರಲ್ಲಿ ನೇವಿ ಅಕಾಡೆಮಿಯಲ್ಲಿ ಪದವಿ ಮುಗಿಸಿ ಹೊರಟವನಿಗೆ, ಎರಡನೇ ವಿಶ್ವಯುದ್ಧಕ್ಕಿಂತ ತಾನಾಡುತ್ತಿದ್ದ ಬೇಸ್‌ಬಾಲ್ ಮ್ಯಾಚಿನಲ್ಲೇ ಎಷ್ಟೋ ಥ್ರಿಲ್ಲಿರುತ್ತದೆ, ಪಕ್ಕನೆ ರಿಸಲ್ಟು ಸಿಗುತ್ತದೆ ಅಂತನ್ನಿಸಲು ಶುರುವಾಯಿತು. ಎಳೆಯುವ ಸಿಗರೇಟಿನ ಕಿಕ್ಕು ಸಾಲುತ್ತಿಲ್ಲ. ರಾತ್ರಿಯಿಡೀ ಇಡಿಯಾಗಿ ಭೋಗಿಸಿದ ಸಣ್ಣಕಣ್ಣಿನ ಮುದಿ ಚೀನೀ ಸೂಳೆಯ ಚಮಕ್ ತನ್ನ ತೆಕ್ಕೆಯ ಬಲಕ್ಕೆ ಸಾಟಿಯಾಗುತ್ತಿಲ್ಲ. ಮೈಯ್ಯ ನರಗಳೊಳಗೆ ಮುಗ್ಗಲು ವಾಸನೆಯ ಅಫೀಮಿನ ಫಿದಾ ಇಂಗುತ್ತಿಲ್ಲ. ಚುಂಗ್‌ಕಿಂಗ್ ದ್ವೀಪದ ಕ್ಷಿತಿಜದಲ್ಲಿ 'ಯುಎಸ್‌ಎಸ್ ಟುಟ್ಯಿಲಾ' ಗನ್‌ಬೋಟಿನ ಮೇಲೆ ಕೂತು, ಆ ಸಮುದ್ರ ರಾಶಿಯೊಳಗೆ ಹೂತು ಹೋಗಿದ್ದ ಜೀವನ ದೃಷ್ಟಿಯನ್ನು ಹುಡುಕಲು ಲೆಡೆರರ್‌ನ ಹಣೆಯಲ್ಲಿ ಮೂರನೆಯ ಕಣ್ಣೇ ಇಲ್ಲ.
ಬಂದೆಷ್ಟು ದಿನವಾಯಿತು? ಡೈರಿಯ ಕೊನೆಯ ಪುಟದಲ್ಲಿದ್ದ ಕ್ಯಾಲೆಂಡರಿಗೆ ಬೆರಳಿಟ್ಟ. ಅಲ್ಲಿ ಟೀ ಚೆಲ್ಲಿ, ತಾರೀಖುಗಳೆಲ್ಲ ಆ ಕಲೆಯೊಳಗೆ ಕಲೆತುಹೋಗಿವೆ. ಭೂತವೆಲ್ಲ ವ್ಯರ್ಥ ವ್ಯವಕಲನ. ಭವಿಷ್ಯವನ್ನು ಹುಡುಕಿ ಕೊಡುವವರಾರು? ಅದೇ ಬ್ಯಾಗಿನಲ್ಲಿ ಒಂದಿಷ್ಟು ಪುಸ್ತಕಗಳು ಕಂಡವು. ಎಲ್ಲವೂ ಅರ್ನೆಸ್ಟ್ ಹೆಮಿಂಗ್ವೇಯ ಕಾದಂಬರಿಗಳು. ಕರ್ತವ್ಯದ ನಡುವೆ ಬೇಜಾರಾದಾಗಲೆಲ್ಲ ಹೆಮ್ಮಿಂಗ್ವೇ ಅವನನ್ನು ಕಾಡತೊಡಗಿದ್ದ. ಲೆಡೆರರ್ ಅವನ ಥರ ಬರೆಯಲು ಹೊರಟ. ಸೋತ. ಹೊರಟ. ಸೋತ. ಪೆನ್ನು ಕೆಳಗಿಟ್ಟ. ಚೀನಾದಿಂದ ತುಂಬಾ ದೂರವಿದ್ದ ಆ ದ್ವೀಪದಲ್ಲಿ ಸ್ಕಾಚ್ ವಿಸ್ಕಿ ಸದಾ ಸಿಗುತ್ತಿತ್ತು ಎಂದಾದರೆ ಅದು ಲೆಡರರ್ ಬಳಿಯಷ್ಟೇ.
ಹೆಮ್ಮಿಂಗ್ವೇಯ ಮೂರನೇ ಹೆಂಡತಿ ಮಾರ್ಥಾ ಗೆಲ್ಹಾರ್ನ್ 'ಕೊಲ್ಲಿಯರ್ಸ್ ವೀಕ್ಲಿ'ಯ ರಿಪೋರ್ಟರ್. ಚೀನಾದಲ್ಲಿನ ವಿಶ್ವಯುದ್ಧದ ನೇರ ಚಿತ್ರಣವನ್ನು ಅಮೆರಿಕದ ತುದಿಗೆ ತಲುಪಿಸಲು ಅವಳು ಚುಂಗ್‌ಕಿಂಗ್ ದ್ವೀಪಕ್ಕೆ ಅಸೈನ್‌ಮೆಂಟ್ ಹಾಕಿಸಿಕೊಂಡು ಬಂದಳು. ಅಲೆಮಾರಿ ಸ್ವಭಾವದ ಪತಿ ಹೆಮ್ಮಿಂಗ್ವೇಯೂ ಮಾರ್ಥಾ ಜತೆಗೇ ಬಂದಿದ್ದ. ಹೆಂಡತಿಗೇನೋ ಕೆಲಸ ಇತ್ತು. ಆದರೆ, ಈತನಿಗೆ ಇಡೀ ಬದುಕಿನಲ್ಲಿ ಕೆಲಸ ಮಾಡಿಯೇ ಗೊತ್ತಿಲ್ಲ. ಅಲ್ಲಿ ಇಲ್ಲಿ ಗಾಳ ಹಾಕಿದ. ಹಸಿಮೀನನ್ನು ಬೆಂಕಿಯಲ್ಲಿ ಕರಟಿಸಿ ತಿಂದ. ತಂದ ಸಿಗರೇಟುಗಳೆಲ್ಲ ಬಾಯಿಗಿಟ್ಟ ಕೂಡಲೇ ಸುಟ್ಟುಹೋದವು. ಯಾಕೋ ಹೆಮಿಂಗ್ವೇಗೂ ಆ ದ್ವೀಪ ಬೇಸರದ ತುಂಡು ಭೂಮಿ ಅನ್ನಿಸತೊಡಗಿತು. ಸಪ್ಪೇಯೇರಿದ್ದ ಬಾಯಿಯನ್ನು ನೆನೆದು, ಯಾರೋ ಬಳಿ ವಿಸ್ಕಿ ಕೇಳಿದ. ಅವನು ಲೆಡೆರರ್‌ನ ವಿಳಾಸ ಕೊಟ್ಟ.
ಟಕ್ ಟಕ್ ಟಕ್ ಎಂದು ಬಡಿದುಕೊಳ್ಳುತ್ತಿದ್ದ ಬಾಗಿಲನ್ನು ತೆರೆದಾಗ ಎದುರಿಗಿದ್ದವನು ಹೆಮಿಂಗ್ವೇ. ಆ ದೈತ್ಯಕಾರದ ದೇಹ ಕೇವಲ ತೆಳು ಅಂಗಿ ಮತ್ತು ಬರ್ಮುಡಾ ಚೆಡ್ಡಿಯಲ್ಲಿ ಎದುರಿಗಿತ್ತು. ಕಾದಂಬರಿಯ ಮುಖಪುಟದಲ್ಲಿದ್ದ ಬ್ಲ್ಯಾಕ್ ಆ್ಯಂಡ್ ವೈಟ್ ಫೋಟೋಗೂ, ಮುಂದಿದ್ದ ನೈಜ ಕಲರ್ ಆಕೃತಿಗೂ ವ್ಯತ್ಯಾಸ ಗುರುತಿಸದಷ್ಟು ದಡ್ಡನೇನಲ್ಲ ಲೆಡೆರರ್. ಏಕೆಂದರೆ, ಹೆಮಿಂಗ್ವೇ ಬಿಟ್ಟರೆ ಮತ್ತೊಬ್ಬ ಸಾಹಿತಿ ಅವನ ನೆನಪಲ್ಲಿ ಮಸುಕು. ತಾನು ಇಷ್ಟು ದಿನ ಆರಾಧಿಸಿದ ಸಾಹಿತಿ ಈಗ ಮನೆ ಬಾಗಿಲಿಗೇ ಬಂದಿದ್ದಾನೆ. ಸಂತೋಷದಿಂದ ಲೆಡೆರರ್ ಎದೆಯೊಡೆದು ಸಾಯುವುದೊಂದು ಬಾಕಿ.
ಹೆಮಿಂಗ್ವೇ ಒಂದಿಷ್ಟು ಡಾಲರುಗಳನ್ನು ಎಣಿಸಿ, 'ಸ್ಕಾಚ್ ವಿಸ್ಕಿ ಎಷ್ಟಿದೆ, ಅಷ್ಟೂ ಕೊಟ್ಟುಬಿಡು' ಎಂದ. ಆದರೆ, ಲೆಡೆರರ್ ಯಾವತ್ತೂ ವಿಸ್ಕಿಯನ್ನು ಮಾರಿದವನಲ್ಲ. ಅದರಲ್ಲೂ ಈಗಿರುವುದೇ ಡಜನ್ ಸ್ಕಾಚ್. 'ಕಥೆ ಬರೆಯುವುದನ್ನು ಹೇಳಿಕೊಡುವುದಾದರೆ 6 ಬಾಟಲಿ ಸ್ಕಾಚ್ ಕೊಡುತ್ತೀನಿ' ಎಂದ ಲೆಡೆರರ್. ಹೆಮಿಂಗ್ವೇ ಮರುಮಾತಿಲ್ಲದೆ ಒಪ್ಪಿಕೊಂಡ.
ನಂತರ ಕೆಲವು ದಿನ ಲೆಡೆರರ್ ಡ್ಯೂಟಿಗೆ ರಜೆ ಬರೆದು ಹೆಮಿಂಗ್ವೇನ ಬಾಲ ಹಿಡಿದು ಓಡಾಡಿದ. ಸೃಜನಶೀಲ ಲೇಖಕ ಅಂತ ಯಾರೊಟ್ಟಿಗೂ ಮಾತಾಡದೆ, ಸಾರ್ವಜನಿಕವಾಗಿ ಬೆರೆಯದೆ, ಮಡಿವಂತಿಕೆಯಲ್ಲೇ ಮುದುಡಿ ಬರೆಯುವ ಲೇಖಕರಿಗೂ ಹೆಮಿಂಗ್ವೇಗೂ ವ್ಯತ್ಯಾಸ ಕಂಡ. ದ್ವೀಪದಲ್ಲಿದ್ದ ಸಾಮಾನ್ಯನೊಂದಿಗೆ ಬೆರೆತು ಕಥೆಗಳಿಗೆ ಬುನಾದಿ ಹಾಕಿಕೊಳ್ಳುತ್ತಿದ್ದ. ಆ ದ್ವೀಪದಲ್ಲಿ ಸ್ವತಃ ಲೆಡೆರರ್ರೇ ನೋಡದ ಜಾಗಕ್ಕೆಲ್ಲ ಹೆಮಿಂಗ್ವೇ ಕರೆದೊಯ್ದು ಅಚ್ಚರಿ ಹುಟ್ಟಿಸಿದ. ಬದುಕನ್ನು ಕಥೆಯಾಗಿಸುವುದು ಹೇಗೆ ಎಂಬ ಗುಟ್ಟನ್ನೆಲ್ಲ ವಿಸ್ಕಿಯ ಋಣ ಮರೆತೂ ಹೇಳಿಬಿಟ್ಟ ಹೆಮಿಂಗ್ವೇ.
ಅಂದೊಮ್ಮೆ ಹೆಮಿಂಗ್ವೇ ಹೊರಡುವ ದಿನ ಬಂತು. ಲೆಡೆರರ್‌ಗೆ ಕೇಳಿದ, 'ನಿನ್ನ ಬಳಿಯಿದ್ದ 6 ಸ್ಕಾಚ್ ಖಾಲಿ ಮಾಡಿದೆಯಾ?'. 'ಇಲ್ಲ. ಹಾಗೆಯೇ ಇದೆ' ಎಂದ ಲೆಡೆರರ್. ಹೆಮಿಂಗ್ವೇ ನಗುತ್ತಾ, 'ಸುಂದರ ಹುಡುಗಿಗೆ ಮುತ್ತಿಕ್ಕಲು ನಿಧಾನಿಸಬಾರದು, ವಿಸ್ಕಿಯನ್ನು ಓಪನ್ ಮಾಡಲು ತಡಮಾಡಬಾರದು' ಎಂದು ಹೇಳಿ ವಿಶೇಷ ಹೆಲಿಕಾಪ್ಟರ್‌ನಲ್ಲಿ ಚುಂಗ್‌ಕಿಂಗ್ ದ್ವೀಪದಿಂದ ಮೇಲೆದ್ದ!
ಕೂಡಲೇ ತನ್ನ ಗನ್ ಬೋಟಿನ ಬಳಿಯೋಡಿದ ಲೆಡೆರರ್, ಬಚ್ಚಿಟ್ಟ ವಿಸ್ಕಿಯ ಬಾಟಲ್ ಓಪನ್ ಮಾಡಿ ನೋಡಿದಾಗ ಅಲ್ಲಿ ವಿಸ್ಕಿ ಇರಲಿಲ್ಲ! ಆ ಬಾಟಲಿಯೊಳಗೆ ಕಡಲ್ಗಳ್ಳರು ಟೀಯನ್ನು ತುಂಬಿಸಿಟ್ಟಿದ್ದರು! ನಂತರ ವಿಲಿಯಂ ಲೆಡೆರರ್ 'ಆಲ್ ದಿ ಶಿಪ್ಸ್ ಎಟ್ ಸೀ', 'ದಿ ಅಗ್ಲಿ ಅಮೆರಿಕನ್' ಸೇರಿದಂತೆ 19 ಕೃತಿ ಬರೆದು ಕಥೆಗಾರರ ಸಾಲಿಗೆ ಸೇರಿದ.
ಒಂದು ಅನುಮಾನ, ವಿಸ್ಕಿ ಕಥೆ ಕಲಿಸುತ್ತಾ?
- ಕೀರ್ತಿ
್ಞ್ಟಟ್ಜಛ್ಠ್ಞಜಜ್ಠಝ್ಝಿಅ್ಜಟಛ್ಝಟ.್ಛ್ಟಟ