ಇಂದಿರಾ ರಮಣ ಲಂಕೇಶ ಪುರಾಣ
ಲಂಕೇಶರು ತಮಗೆ ತುಂಬಾ ಖುಷಿಯಾದಾಗ ಏನು ಮಾಡುತ್ತಿದ್ದರು? 'ಮೀಯಾಂವ್' ಎಂದು ಬೆಕ್ಕಿನಂತೆ ದನಿ ತೆಗೆಯುತ್ತಿದ್ದರು. ಟೀವಿಯಲ್ಲಿ ಬರುತ್ತಿದ್ದ ಒಂದು ಒಳ್ಳೆಯ ಹಾಡು ಇರಬಹುದು, ಕ್ರಿಕೆಟ್ನ ಒಂದು ಉತ್ತಮ ಹೊಡೆತ ಇರಬಹುದು, ತಮ್ಮ ಇಷ್ಟದ ಹೋಳಿಗೆ ತಾಟಿಗೆ ಬಿದ್ದ ಸಂಭ್ರಮ ಇರಬಹುದು. ಅದಕ್ಕೆ 'ಮೀಯಾಂವ್' ಎನ್ನುವುದೇ ಅವರ ಪ್ರತಿಕ್ರಿಯೆ.
ಲಂಕೇಶರು ತಮ್ಮ ಹೆಸರನ್ನು ಬದಲಿಸಿಕೊಳ್ಳಬೇಕೆಂದಿದ್ದರೆ? ಹೌದು, ಎನ್ನುತ್ತಾರೆ ಅವರ ಪತ್ನಿ ಇಂದಿರಾ.
ಕನ್ನಡದ ಒಬ್ಬ ಅಸಾಧಾರಣ ಬರೆಹಗಾರರಾಗಿದ್ದ ಪಿ.ಲಂಕೇಶರ ಬಗ್ಗೆ ಅವರ ಪತ್ನಿ ಇಂದಿರಾ ಅವರು ಬರೆದಿರುವ 'ಹುಳಿಮಾವು ಮತ್ತು ನಾನು' ಕೃತಿಯಲ್ಲಿ ಇಂಥ ಹಲವು ಮಾಹಿತಿಗಳಿವೆ. 'ಹುಳಿಮಾವಿನ ಮರ' ಲಂಕೇಶರು ತಮ್ಮ ಆತ್ಮಕಥನಕ್ಕೆ ಇಟ್ಟ ಹೆಸರು. ಆ ಹುಳಿಮಾವಿನ ಜೊತೆ ತಮ್ಮ ವೈವಾಹಿಕ ಬದುಕು ಹೇಗಿತ್ತು ತಮ್ಮ ಸಂಸಾರದ ಗಾಡಿ ಹೇಗೆ ಸಾಗಿತ್ತು, ಲಂಕೇಶರ ಯಶಸ್ಸಿನಲ್ಲಿ ತಮ್ಮ ಪಾಲೆಷ್ಟು, ಅಗಾಧವಾದ ಆಲದ ಮರದಂತೆ ಬೆಳೆದ ಲಂಕೇಶರ ಅಡಿಯಲ್ಲಿ ತಮ್ಮ ವ್ಯಕ್ತಿತ್ವವನ್ನು ತಾವು ಹೇಗೆ ಕಟ್ಟಿಕೊಂಡಿದ್ದು ಎಂಬುದನ್ನೆಲ್ಲ ಇಂದಿರಾ ಅವರು ಪುಟ್ಟಪುಟ್ಟ ವಿವರಗಳೊಂದಿಗೆ ನೀಡಿದ್ದಾರೆ.
'ಹುಳಿಮಾವಿನ ಮರ' ಓದಿ ಅಲ್ಲಿ ಅರಕೆ ಎನ್ನಿಸಿದ ಅದೆಷ್ಟೋ ಸಂಗತಿಗಳು ಇಲ್ಲಿಯ ವಿವರಗಳಿಂದ ಪೂರ್ಣಗೊಳ್ಳುತ್ತವೆ. ತಮ್ಮ ಹಾಗೂ ಲಂಕೇಶರ ನಡುವಿನ ಸುಮಾರು ನಾಲ್ಕು ದಶಕಗಳ ದಾಂಪತ್ಯವನ್ನು ಲಂಕೇಶರು ನಿಧನರಾದ ಒಂದು ದಶಕದ ಬಳಿಕ ನೆನಪಿಸಿಕೊಂಡು ಅತ್ಯಂತ ಸರಳವಾಗಿ, ಮನಸ್ಸಿಗೆ ತಟ್ಟುವಂತೆ ಇಂದಿರಾ ಅವರು ದಾಖಲಿಸಿದ್ದಾರೆ. ಲಂಕೇಶರ ಬದುಕಿನ ಏರಿಳಿತಗಳು, ಶಿವಮೊಗ್ಗೆಯ ಹಳ್ಳಿಯಿಂದ ಬಂದ ಈ ಎರಡು ಜೀವಗಳು ಬೆಂಗಳೂರಿನಂಥ ಊರಿನಲ್ಲಿ ಹೇಗೆ ತಮ್ಮತಮ್ಮ ನೆಲೆಯಲ್ಲಿ ಯಶಸ್ಸನ್ನು ಸಾಧಿಸಿದರು ಎಂಬುದನ್ನು ಇವರು ವಿವರಿಸುತ್ತಾರೆ.
ಲಂಕೇಶರು ತಮ್ಮ ತಾಯಿಯ ಇಷ್ಟಕ್ಕೆ ವಿರುದ್ಧವಾಗಿ ಇಂದಿರಾರನ್ನು ಮದುವೆಯಾಗಿದ್ದರು. ಅವರ ತಾಯಿಗೆ ತಮ್ಮ ಮಗಳ ಮಗಳನ್ನು ಲಂಕೇಶರಿಗೆ ಮದುವೆಮಾಡಿಸುವ ಇಚ್ಚೆ ಇತ್ತು. ಆದರೆ ತಾವು ಎತ್ತಿ ಆಡಿಸಿದ ಹುಡುಗಿ ಎಂಬ ಕಾರಣಕ್ಕೆ ಲಂಕೇಶರು ಆ ಸಂಬಂಧವನ್ನು ಒಪ್ಪುವುದಿಲ್ಲ. ಈ ಅಸಮಾಧಾನ ಅವರಿಗೆ ಕೊನೆಯವರೆಗೂ ಇರುತ್ತದೆ. ತಮ್ಮ ತಾಯಿ ಸತ್ತ ದಿನ ಲಂಕೇಶರು ತುಂಬಾ ಅಳುತ್ತಾರೆ. "ನಾನೆಂದೂ ಲಂಕೇಶರು ಅತ್ತಿದ್ದನ್ನು ನೋಡಿರಲಿಲ್ಲ. ಅವತ್ತು ಅವರು ಎಷ್ಟು ಅತ್ತರೆಂದರೆ ಅವರ ಕಣ್ಣುಗಳು ಪೂರಾ ಕೆಂಪಗಾಗಿದ್ದವು. ಲಂಕೇಶರು ತಮ್ಮ ತಾಯಿಯನ್ನು ಎಷ್ಟು ಇಷ್ಟಪಡುತ್ತಿದ್ದರು ಅಂತ ಅವರ 'ಅವ್ವ' ಕವನ ಓದಿದರೆ ತಿಳಿಯುತ್ತದೆ." ಎಂದು ಇಂದಿರಾ ಬರೆದಿದ್ದಾರೆ.
ಇಂಥ ತಾಯಿಯನ್ನು ತಮ್ಮ ಪತ್ನಿ ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬ ಬೇಸರ ಲಂಕೇಶರ ಅಂತರಂಗದಲ್ಲೆಲ್ಲೋ ಇತ್ತು ಅನ್ನಿಸುತ್ತದೆ. ಒಂದು ರಾತ್ರಿ ಊಟ ಮುಗಿಸಿದ ಮೇಲೆ ಗಂಡ ಹೆಂಡತಿ ಮಾತನಾಡುತ್ತ ಕುಳಿತಿದ್ದರು. ಲಂಕೇಶರು ಇದ್ದಕ್ಕಿದ್ದಂತೆ "ನೀನು ನನ್ನ ಅಪ್ಪನಂತವಳಾಗಿದ್ದರೆ ನನ್ನ ಅವ್ವ ಇಷ್ಟು ಬೇಗ ಸಾಯುತ್ತಿರಲಿಲ್ಲ" ಎಂದು ಜೋರಿನ ದನಿಯಲ್ಲಿ ಹೇಳುತ್ತಾರೆ. ಮದುವೆಯಾಗಿ ಅಷ್ಟು ವರ್ಷಗಳಾಗಿದ್ದರೂ ಲಂಕೇಶರು ಎಂದೂ ಪತ್ನಿಯನ್ನು ಗದರಿದವರಲ್ಲ. ಪರಸ್ಪರ ಜಗಳವಾಡಿದವರಲ್ಲ. ಲಂಕೇಶರ ಮೊದಲ ಅಬ್ಬರದಿಂದ ನೊಂದ ಇಂದಿರಾ ಮನೆಯಲ್ಲಿದ್ದ ಜಿರಲೆ ಔಷಧವನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸುತ್ತಾರೆ. ಲಂಕೇಶರು ಅವರನ್ನು ಸ್ಕೂಟರಿನ ಮೇಲೆ ಕೂರಿಸಿಕೊಂಡು ಆಸ್ಪತ್ರೆಗೆ ಕರೆದೊಯ್ದು ಬದುಕಿಸಿಕೊಳ್ಳುತ್ತಾರೆ. ಅವರೇ ನನ್ನ ಸರ್ವಸ್ವ ಎಂದು ಅಂದುಕೊಂಡಿದ್ದಾಗ ಗದರಿಸಿದ ಕಾರಣಕ್ಕೆ ನಾನು ಆತ್ಮಹತ್ಯೆಗೆ ಯತ್ನಿಸಿದೆನೇನೋ ಎಂದು ಇಂದಿರಾ ಹೇಳಿಕೊಂಡಿದ್ದಾರೆ.
ಲಂಕೇಶರು ಶಿವಮೊಗ್ಗದಲ್ಲಿ ಇದ್ದಾಗ ಸೈಕಲ್ಲಿನ ಮೇಲೆ ಕಾಲೇಜಿಗೆ ಹೋಗುತ್ತಿದ್ದರು. ಮದುವೆಯಾದ ಮೇಲೆ ಗಂಡ ಹೆಂಡತಿ ಇಬ್ಬರೂ ಸ್ಕೂಟರ್ ಕೊಳ್ಳಲು ಬಯಸುತ್ತಾರೆ. ಬಂಗಾರ ಮಾರಿ ಸ್ಕೂಟರ್ ಕೊಳ್ಳುತ್ತಾರೆ. ಆ ಸ್ಕೂಟರಿನ ಮೇಲೆಯೇ ಬೆಂಗಳೂರಿಗೆ ಬಂದದ್ದು. ಮಳೆ ನೀರು ತುಂಬಿದ ಗುಂಡಿಯಲ್ಲಿ ಸ್ಕೂಟರ್ ಜಾರಿ ಇಂದಿರಾ ಬಿದ್ದು ಗಾಯಗೊಂಡಿದ್ದು. ರಸ್ತೆ ಪಕ್ಕದಲ್ಲೇ ಬಟ್ಟೆ ಬದಲಿಸಿಕೊಂಡು ಬೆಂಗಳೂರಿಗೆ ಬಂದದ್ದು ಇವೆಲ್ಲ ಯವ್ವನದ ಸಾಹಸವಾಗಿ ತೋರುತ್ತದೆ. ಮದುವೆಗೆ ಮೊದಲೂ ಬೆಂಗಳೂರಿನಲ್ಲಿ ಕಾಲೇಜಿಗೆ ಹೋಗುತ್ತಿದ್ದ ಇಂದಿರಾ ಅವರನ್ನು ಭೇಟಿ ಮಾಡಲು ಲಂಕೇಶರು ಶಿವಮೊಗ್ಗದಿಂದ ಬರುತ್ತಿದ್ದರು. ಸಿನಿಮಾ ಹೊಟೇಲು ಎಂದೆಲ್ಲ ಅಲೆದಾಡುತ್ತಿದ್ದರು. ಆ ಬಳಿಕ ಅವರು ಕಾರು ಕೊಂಡಿದ್ದು, ಡ್ರೈವಿಂಗ್ ಮಾಡುವಾಗ ಲಂಕೇಶರು ಪೇಚಾಡುತ್ತಿದ್ದದ್ದು, ಹೊಸ ಎಸ್ಟೀಮ್ ಕಾರು ಕೊಂಡಾಗ ರಿಮೋಟ್ ಕಂಟ್ರೋಲ್ ಬಾಗಿಲನ್ನು ತಮ್ಮ ಪತ್ನಿಗೆ ಕರೆದು ತೋಸಿರಿ 'ಮಿಯಾಂವ್' ಎಂದಿದ್ದು ಎಲ್ಲ ಬರೆದಿದ್ದಾರೆ.
"ಲಂಕೇಶರು ಪತ್ರಿಕೆಯಲ್ಲಿ ನೀಲು ಹೆಸರಿನಲ್ಲಿ ಬರೆಯುತ್ತಿದ್ದ ಕವನಗಳು ಮತ್ತು ನಿಮ್ಮಿ ಹೆಸರಿನಲ್ಲಿ ಬರೆಯುತ್ತಿದ್ದ ಕಾಲಮ್ ತುಂಬಾ ಜನಪ್ರಿಯವಾಗಿದ್ದವು. ಅವರ ಹಸ್ತಾಕ್ಷರ ಬಲ್ಲವರಿಗೆ ನೀಲುವಿನ ಕರ್ತೃ ಲಂಕೇಶರೇ ಎಂದು ಗೊತ್ತಿತ್ತು. ಆದರೆ ಪತ್ರಿಕೆಯ ಸಿಬ್ಬಂದಿ ಮತ್ತು ಕೆಲವು ಗೆಳೆಯರ ಹೊರತಾಗಿ ಲಂಕೇಶರೇ ನಿಮ್ಮಿ ಎಂಬುದು ಬಹಳಷ್ಟು ಜನಕ್ಕೆ ಗೊತ್ತಿರಲಿಲ್ಲ.
ಈ ಎರಡೂ ಬರಹಗಳು ಲಂಕೇಶರಲ್ಲಿದ್ದ ಹೆಣ್ಣಿನ ಮನಸ್ಸನ್ನು ತೋರುತ್ತಿದ್ದವು. ನೀಲು ಕವನಗಳಂತೂ ಹೆಣ್ಣಿನ ಮನಸ್ಸು ಏನೆಲ್ಲಾ ಯೋಚಿಸುತ್ತದೆ, ಅನುಭವಿಸುತ್ತದೆ ಎಂಬುದನ್ನು ಸ್ಪಷ್ಟವಾಗಿ ಬಿಂಬಿಸುತ್ತಿದ್ದವು. ಮಹಿಳೆಯರ ಮನಸ್ಸನ್ನು ಇಷ್ಟ ಚೆನ್ನಾಗಿ ತಿಳಿದಿದ್ದ ಲಂಕೇಶರು ನನ್ನ ಮನಸ್ಸನ್ನು ಯಾಕೆ ಅರ್ಥಮಾಡಿಕೊಳ್ಳಲಿಲ್ಲ ಎಂದು ನನಗೆ ಅನ್ನಿಸುತ್ತಿತ್ತು." ಎಂದು ಇಂದಿರಾ ಬರೆದಿದ್ದಾರೆ.
ಲಂಕೇಶರು ಉತ್ತಮ ಬರೆಹಗಾರರಾಗಿದ್ದರೂ ಕೆಟ್ಟ ನಟ ಎಂಬುದು ಇಂದಿರಾ ಅಭಿಪ್ರಾಯ. ಶಿವಮೊಗ್ಗದಲ್ಲಿದ್ದಾಗ ಕಾಲೇಜಿನ ಮೇಸ್ಟ್ರೆಲ್ಲ ಸೇರಿ ಒಂದು ಇಂಗ್ಲಿಷ್ ನಾಟಕ ಮಾಡಿದ್ದರಂತೆ. ಅದಕ್ಕಾಗಿ ಲಂಕೇಶರು ಮೀಸೆ ಬೋಳಿಸಿದ್ದರಂತೆ. ಮೀಸೆ ಇಲ್ಲದ ಮುಖವನ್ನು ನೋಡಲು ಇಂದಿರಾಗೆ ಆಗುತ್ತಿರಲಿಲ್ಲ. ಆ್ಯಕ್ಟಿಂಗ್ ಕೂಡ ಕೆಟ್ಟದ್ದಾಗಿತ್ತು. 'ಮೊದಲು ಮೀಸೆ ಬೆಳೆಸಿ' ಎಂದು ಹೇಳಿದೆ ಎಂದಿದ್ದಾರೆ.
ಲಂಕೇಶರು ತಮ್ಮ ಹೆಸರನ್ನು ಬದಲಿಸಿಕೊಳ್ಳಲು ಆಲೋಚಿಸಿದ್ದರು ಎಂದರೆ ನಂಬುತ್ತೀರಾ? ನಂಬಲೇ ಬೇಕು, ಇಂದಿರಾ ಅವರೇ ಹೇಳಿದ ಮೇಲೆ.
ಮದುವೆ ಆಮಂತ್ರಣವನ್ನು ಸಿದ್ಧಪಡಿಸುತ್ತಿದ್ದಾಗ, 'ನನ್ನ ಹೆಸರನ್ನು ಬದಲಾಯಿಸಲಾ?' ಎಂದು ಕೇಳಿದರಂತೆ 'ಯಾಕೆ?' ಎಂದು ಇವರ ಮರು ಪ್ರಶ್ನೆ. 'ಎಲ್ಲರೂ ಲಂಕೇಶಪ್ಪ ಅಂದರೆ ರಾವಣ ಅಂತೆಲ್ಲ ಅಂತಾರೆ. ಅದಕ್ಕೆ' ಎಂದು ಹೇಳಿದರು. ಅದಕ್ಕೆ ಇಂದಿರಾ, 'ಏನೂ ಬೇಡ. ನಿಮಗೆ ಈ ಹೆಸರೇ ಚೆನ್ನಾಗಿದೆ' ಅಂದರು. ಲಂಕೇಶರು ಲಂಕೇಶಪ್ಪ ಎಂದು ಇದ್ದುದನ್ನು ಲಂಕೇಶ ಎಂದು ಸ್ವಲ್ಪ ಮಾರ್ಪಡಿಸಿದರು ಅಷ್ಟೇ.
ಲಂಕೇಶರ ವಿಕ್ಷಿಪ್ತ ನಡೆವಳಿಕೆಯಿಂದಾಗಿ ಇಂದಿರೆಯ ತಂದೆಗೆ ಈ ಮದವೆ ಇಷ್ಟವಿರಲಿಲ್ಲ. ಮದುವೆ ಆಹ್ವಾನ ಪತ್ರಿಕೆ ಮುದ್ರಿಸಲು ಹೋಗುವಾಗಲೂ ಅವರು ಮದುವೆ ನಿಲ್ಲಿಸೋಣವೇ ಎಂದು ಮಗಳನ್ನು ಕೇಳುತ್ತಾರೆ. ಲಂಕೇಶರಿಗೆ ಮನಸ್ಸು ಕೊಟ್ಟಿದ್ದ ಇಂದಿರಾ ಅಪ್ಪನ ಮಾತು ಒಪ್ಪುವುದಿಲ್ಲ. ಇದೇ ತಂದೆ ಮುಂದೆ ಲಂಕೇಶರು 'ಪಲ್ಲವಿ' ಸಿನಿಮಾಕ್ಕೆ ರಾಷ್ಟ್ರಪ್ರಶಸ್ತಿ ಪಡೆದಾಗ, ತಮ್ಮ ಮಗಳನ್ನು ಲಂಕೇಶ್ ಪತ್ನಿ ಎಂದು ಊರವರಿಗೆ ಪರಿಚಯಿಸುತ್ತಾರೆ.
ಲಂಕೇಶರು ಇನ್ನೊಬ್ಬ ಹೆಣ್ಣಿಗೆ ಬರೆದ ಪ್ರೇಮಪತ್ರ ಕಸದ ಬುಟ್ಟಿಯಲ್ಲಿ ನಾಲ್ಕು ಚೂರಾದ ಸ್ಥಿತಿಯಲ್ಲಿ ಇವರಿಗೆ ಸಿಗುತ್ತದೆ. ಹೆಂಡತಿ, ಮೂರು ಮಕ್ಕಳನ್ನೂ ಬಿಟ್ಟು ನಿನ್ನ ಜೊತೆ ಬರುವೆ ಎಂದು ಅವರು ಅದರಲ್ಲಿ ಬರೆದಿದ್ದರು. ಗಂಡನ ಮೇಲೆ ಅಪಾರ ವಿಶ್ವಾಸವಿದ್ದ ಇಂದಿರೆಗೆ ಇದನ್ನು ಅರಗಿಸಿಕೊಳ್ಳಲು ಸಾಧ್ಯವೇ ಆಗಲಿಲ್ಲ. ದಾಂಪತ್ಯದ ಮೊದಲ ಅಪಸ್ವರ ಕೇಳಿಸಿದ್ದು ಆಗಲೇ. ನಂತರ ಅವರು ತಮ್ಮ ತಾಳಿಯನ್ನೇ ಹರಿದುಕೊಂಡಿದ್ದರು. ಆ ಮೇಲೆ ತಮ್ಮ ವ್ಯಕ್ತಿತ್ವವನ್ನು ಲಂಕೇಶರಿಂದ ಬೇರೆಯಾಗಿ ಬೆಳೆಸಿಕೊಳ್ಳಬೇಕು ಎಂದು ನಿರ್ಧರಿಸಿ ಸೀರೆ ವ್ಯಾಪಾರ ಮಾಡುತ್ತಾರೆ. ಯಶಸ್ವಿ ಉದ್ಯಮಿಯಾಗುತ್ತಾರೆ.
ಲಂಕೇಶರೂ ಪ್ರೊಫೆಸರ್ಗಿರಿ ಬಿಟ್ಟು ಪತ್ರಿಕೆ ಆರಂಭಿಸುತ್ತಾರೆ. ನಡುನಡುವೆ ಸಿನಿಮಾ ತಯಾರಿಕೆ. ತಮ್ಮ ಪತಿಯ ಸಾಧನೆಯ ಬಗ್ಗೆ ಹೆಮ್ಮೆ, ಅವರ ಬಗ್ಗೆ ಅಪಾರವಾದ ಗೌರವ ಮತ್ತು ಪ್ರೀತಿ, ಅವರ ಬಗ್ಗೆ ಬೇರೆಯವರು ಕೆಟ್ಟದ್ದಾಗಿ ಮಾತನಾಡಿದರೆ ಕಡುಕೋಪ ಇಷ್ಟೆಲ್ಲ ಇದ್ದೂ ಒಂದು ಅಂತರ ಇಬ್ಬರ ನಡುವೆ ಬೆಳೆದುಬಿಟ್ಟಿದೆ.
'ಅವರಿಗೆ ಸಣ್ಣ ಸಮಸ್ಯೆಯಾದರೂ ನಾನು ಕಂಗಾಲಾಗುತ್ತಿದ್ದೆ. ಅವರೂ ಅಷ್ಟೇ. ನಾನು ಚಿಕ್ಕಪುಟ್ಟ ಕಷ್ಟ ಅನುಭವಿಸಿದರೂ ಲಂಕೇಶರು ಚಿಂತಾಕ್ರಾಂತರಾಗುತ್ತಿದ್ದರು... ಲಂಕೇಶರು ಕೂಡ ರಾಮನಂತಹ ಗಂಡನಾಗಿರಲಿಲ್ಲ. ಲಂಕೇಶರು ಆದರ್ಶ ಪತಿಯೂ ಆಗಿರಲಿಲ್ಲ. ಆತರೆ ತಮ್ಮ ಎಲ್ಲ ಮಿತಿಗಳ ಮತ್ತು ದುಮ್ಮಾನಗಳ ನಡುವೆಯೂ ಅವರು ತಮ್ಮಿಂದ ಸಾಧ್ಯವಾದದ್ದನ್ನು ನನಗೆ ಕೊಟ್ಟರು. ಸ್ವಾತಂತ್ರ್ಯ ಮತ್ತು ಗೌರವ ಕೊಟ್ಟರು. ಕಾಳಜಿ ವಹಿಸಿದರು. ಕಷ್ಟ ಎದುರಾದಾಗ ನನ್ನೊಂದಿಗಿದ್ದರು. ಒಬ್ಬ ಪತಿಯಿಂದ ಓರ್ವ ಹೆಂಡತಿಗೆ ಅದಕ್ಕಿಂತ ಇನ್ನೇನು ಬೇಕು?' ಎನ್ನುವ ಇಂದಿರಾ ತಮ್ಮ ಪತಿಯನ್ನು ಅವರ ತಪ್ಪುಗಳಿಗೆ ಕ್ಷಮಿಸಿದ್ದಾರೆ. ಅವರು ಒಳ್ಳೆಯ ಬರೆಹಗಾರ ಎನ್ನುವ ಬಗ್ಗೆ ಹೆಮ್ಮೆಪಟ್ಟಿದ್ದಾರೆ. ಎಂಥ ಕಷ್ಟದ ಸಂದರ್ಭದಲ್ಲಿಯೂ ಬೇರೆಯವರ ಮುಂದೆ ಕೈಯೊಡ್ಡದೆ, ಯಾವ ರಾಜಕಾರಣಿಗೂ ಸಲಾಮ್ ಹೊಡೆಯದೆ ಬದುಕಿದ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.
ಈ ಕೃತಿಯನ್ನು ಯಾವುದೇ ಸ್ತ್ರೀವಾದಿ ಸಿದ್ಧಾಂತದ ನೆಲೆಯಲ್ಲಿ ನೋಡಬೇಕಾಗಿಲ್ಲ. ಒಬ್ಬ ಗಂಡು ಮತ್ತು ಒಬ್ಬ ಹೆಣ್ಣು ಹೇಗೆ ಪರಸ್ಪರ ಅರ್ಥಮಾಡಿಕೊಂಡು ಪರಸ್ಪರ ಗೌರವಿಸಿ ಬದುಕಲು ಸಾಧ್ಯ ಎಂಬ ನೆಲೆಯಲ್ಲಿ ನೋಡಬೇಕು. ಜೊತೆಗೆ ಲಂಕೇಶರ 'ಹುಳಿಮಾವಿನ ಮರ'ದೊಂದಿಗೆ ಇದನ್ನು ಓದಬೇಕು. ಒಬ್ಬ ಶ್ರೇಷ್ಠ ಸಾಹಿತಿಗೆ ಪತ್ನಿ ಅರ್ಪಿಸಿದ ಅಕ್ಷರಾಂಜಲಿ ಇದು.
ಕೃತಿ: ಹುಳಿಮಾವು ಮತ್ತು ನಾನು, ಪ್ರಕಾರ: ಆತ್ಮಕಥನ
ಏಕೆ ಓದಬೇಕು?: ಲಂಕೇಶರನ್ನು ಅರಿಯಲು
ಪ್ರ: ಲಂಕೇಶ್ ಪ್ರಕಾಶನ, ಬೆಂಗಳೂರು, ಪುಟಗಳು 202,
ಬೆಲೆ ರು. 150
ಸನದಿ ನಾದ
ಬಿ.ಎ. ಸನದಿಯವರು ಕನ್ನಡದ ಪಿಸುದನಿಯ ಕವಿ ಎಂದು ಪ್ರೊ.ಎಸ್.ಜಿ. ಸಿದ್ದರಾಮಯ್ಯ ಹೇಳಿದ್ದಾರೆ. ಈ ಹಿರಿಯ ಕವಿಯ ಆಯ್ದ ಪ್ರಾತಿನಿಧಿಕ ಕವನಗಳನ್ನು ಸಂಪಾದಿಸಿರುವ ಅವರು 'ಶಾಂತಿಗೊಂದು ಸವಾಲು' ಎಂದು ಅದಕ್ಕೆ ಹೆಸರಿಟ್ಟಿದ್ದಾರೆ. ದೇಶದೇಶಗಳ ನಡುವೆ, ವ್ಯಕ್ತಿ ವ್ಯಕ್ತಿಗಳ ನಡುವೆ ಅಸಹನೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಶಾಂತಿಯ ಮಹತ್ವವನ್ನು ಸಾರುವ ಸನದಿಯಂಥವರು ಕಾವ್ಯ ರಚನೆ ಮಾಡುತ್ತಿರಬೇಕು. ಸನದಿಯವರು ಇದುವರೆಗೆ ಹದಿನೆಂಟು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. 'ಒಳಿತನಣಕಿಸುವಂತೆ/ ಖೊಳ ಖೊಳ ನಗುವ ಖಳನಾಯಕರ ಕೈಯಲ್ಲಿ/ ಸಿಡಿಬಾಂಬುಗಳು'/ ಎಂಬ ಆತಂಕದಲ್ಲಿ 'ನಿತ್ಯ ನಿರಂತರ ಜಪಿಸುತ್ತಿರುವುದೋ/ ಬರಿ ಶಾಂತಿಯದೇ ಕನಸು'/. ಈ ಕನಸು ನನಸಾಗುವಂತೆ ಪ್ರಚೋದಿಸುವ ಹಲವು ಕವನಗಳು ಈ ಸಂಗ್ರಹದಲ್ಲಿವೆ. ವರ್ತಮಾನದ ಸವಾಲುಗಳಿಗೆ ಸದಾ ಮುಖಾಮುಖಿಯಾಗುತ್ತ ಬಂದಿರುವ ಸನದಿಯವರು ಮನುಷ್ಯಜಾತಿ ತಾನೊಂದೇ ವಲಂ ಎಂಬ ಮಹಾ ವಾಕ್ಯದಲ್ಲಿ ನಂಬಿಕೆ ಇಟ್ಟವರು.
ಕೃತಿ: ಶಾಂತಿಗೊಂದು ಸವಾಲು, ಪ್ರಕಾರ: ಕಾವ್ಯ, ಏಕೆ ಓದಬೇಕು?: ಸನದಿ ಕಾವ್ಯಾಸ್ವಾದಕ್ಕೆ, ಪ್ರ: ನವಕರ್ನಾಟಕ ಪ್ರಕಾಶನ, ಬೆಂಗಳೂರು, ಪುಟಗಳು 168, ಬೆಲೆ ರು. 100
ಆಚಾರ್ಯ ವಿಚಾರ
ರಾಷ್ಟ್ರಾಭಿಮಾನಿಯಾದ ಡಾ.ಕೆ.ಎಸ್. ನಾರಾಯಣಾಚಾರ್ಯ ಅವರು 'ಸಂಯುಕ್ತ ಕರ್ನಾಟಕ' ಪತ್ರಿಕೆಯಲ್ಲಿ ಬರೆದ ಅಂಕಣ ಬರೆಹಗಳ ಸಂಪುಟ 'ರಾಷ್ಟ್ರೀಯ ಚಿಂತನೆಗಳು ಮತ್ತು ಪರಾಮರ್ಶೆಗಳು' 9 ಮತ್ತು 10ನೇ ಸಂಪುಟ ಇದೀಗ ಬಂದಿವೆ. ಸಂಪುಟ 9ರಲ್ಲಿ 43 ಮತ್ತು ಸಂಪುಟ 10ರಲ್ಲಿ 45 ಲೇಖನಗಳಿವೆ. ಪ್ರಚಲಿತ ವಿಷಯಗಳಿಗೆ ಭಾವತೀವ್ರತೆಯಿಂದ ಪ್ರತಿಕ್ರಿಯಿಸುವುದು ಆಚಾರ್ಯರ ಶೈಲಿ. ಯಾವುದೇ ವಿಷಯವಿರಲಿ ತಮ್ಮ ಪ್ರತಿಕ್ರಿಯೆಗೆ ವಿವಿಧೆಡೆಯಿಂದ ಮಾಹಿತಿಯನ್ನು ಸಮರ್ಥನೆಗಾಗಿ ಕಲೆಹಾಕಿ ಅವರು ಮಂಡಿಸುತ್ತಾರೆ. ಆಚಾರ್ಯರ ಪದಸಂಪತ್ತು ನಮ್ಮ ಪುರಾಣ, ಮಹಾಕಾವ್ಯಗಳಿಂದ ಬಂದದ್ದು. ಸತ್ಯ ಪ್ರಮಾಣದ ನಿಕಷಕ್ಕೆ ಅವರು ಪುರಾಣೇತಿಹಾಸಗಳಿಂದ ಉದಾಹರಣೆಗಳನ್ನು ನೀಡುತ್ತಾರೆ. ಟೀಕೆ ಈಟಿಯಂತೆ ತಿವಿಯುತ್ತವೆ. ಅದು ಸದುದ್ದೇಶದ, ಬದಲಾವಣೆಯನ್ನು ತರಬೇಕೆಂಬ ತುಡಿತದಿಂದ ಕೂಡಿದ್ದು. ಇದರಲ್ಲಿ ವೈಯಕ್ತಿಕ ಹಠ, ಹಗೆಗಳು ಇಲ್ಲ ಎಂದು ಲೇಖಕರು ಅರಿಕೆಯ ಮಾತಲ್ಲಿ ಸ್ಪಷ್ಟಪಡಿಸಿದ್ದಾರೆ.
ಕೃತಿ: ರಾಷ್ಟ್ರೀಯ ಚಿಂತನೆಗಳು ಮತ್ತು
ಪರಾಮರ್ಶೆಗಳು: 9, 10
ಪ್ರಕಾರ: ಅಂಕಣ ಬರೆಹ
ಏಕೆ ಓದಬೇಕು?: ರಾಷ್ಟ್ರಾಭಿಮಾನಿಯಾಗಲು
ಪ್ರ: ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ, ಪುಟಗಳು 192,
ಬೆಲೆ ರು. 150
ಬಯಲು ಸೀಮೆಯ ಕತೆಗಳು
ಕೃಷಿಕರು ಸ್ವಲ್ಪ ಹೆಚ್ಚೇ ಉಪ್ಪು ಹುಳಿ ಖಾರ ತಿಂದಿರುತ್ತಾರೆ. ಹೀಗಾಗಿ ಪ್ರೀತಿ, ಪ್ರೇಮ, ಸ್ವಾರ್ಥ, ಅಸೂಯೆ, ದ್ವೇಷ ಸ್ವಲ್ಪ ಅಧಿಕ ಪ್ರಮಾಣದಲ್ಲಿಯೇ ಇರುತ್ತವೆ. ಮೈಸೂರು ಭಾಗದ ಬಯಲುಸೀಮೆಯಿಂದ ಬಂದ ಬೊಮ್ಮನಾಯ್ಕನಹಳ್ಳಿ ಕೃಷ್ಣಪ್ಪ ಈ ಮಾನವ ವ್ಯಾಪಾರಗಳನ್ನೆಲ್ಲ ಅತ್ಯಂತ ಜೀವಂತವಾಗಿ ತಮ್ಮ ಕತೆಗಳಲ್ಲಿ ಚಿತ್ರಿಸಿದ್ದಾರೆ. ಅವರು ಈ ವರೆಗೆ ಬರೆದ ಕತೆಗಳೆಲ್ಲ ಈ 'ಬಯಲು ಸೀಮೆಯ ಕತೆಗಳು' ಕೃತಿಯಲ್ಲಿವೆ. ರೈತ ಕುಟುಂಬಗಳ ವಿಘಟನೆಯನ್ನು ತುಂಬ ವಿಷಾದದಿಂದ ಅವರು ಚಿತ್ರಿಸಿದ್ದಾರೆ. ಗಂಡು ಹೆಣ್ಣಿನ ಸಂಬಂಧಗಳ ಸಂಕೀರ್ಣತೆ, ಅವು ಕೂಡುವ ಮತ್ತು ಮುರಿಯುವ ವಿದ್ಯಮಾನಗಳನ್ನು, ಕೋರ್ಟು ಕಚೇರಿಗಳಿಗೆ ಅಲೆದು ಹಣವನ್ನು ಕಳೆದುಕೊಡು ನೆಮ್ಮದಿಯ ಜೀವನವನ್ನು ಹಾಳುಮಾಡಿಕೊಳ್ಳುವ ಪರಿಯನ್ನು, ಈ ವಿಘಟನೆಗಳ ನಡುವೆಯೇ ಮನುಷ್ಯತ್ವವನ್ನು ಸಾರುವ ಪ್ರಸಂಗಗಳನ್ನು ಇಲ್ಲಿ ನೋಡಬಹುದು. ಯಾವುದೇ ಸಿದ್ಧ ಸಿದ್ಧಾಂತಗಳಿಗೆ ಕತೆಗಳನ್ನು ಅವರು ಜೋತುಹಾಕದೆ ಬದುಕಿನ ಅನುಭವಗಳನ್ನು ಅಲ್ಲಿ ಧಾರೆ ಎರೆದಿದ್ದಾರೆ.
ಕೃತಿ: ಬಯಲು ಸೀಮೆಯ ಕತೆಗಳು, ಪ್ರಕಾರ: ಕತೆಗಳು, ಏಕೆ ಓದಬೇಕು?: ಬಯಲ ಬದುಕು ಅರಿಯಲು, ಪ್ರ: ರಂಗಮ್ಮ ಪ್ರಕಾಶನ, ಬೊಮ್ಮನಾಯಕನಹಳ್ಳಿ, ಬೇವೂರು, ಪುಟಗಳು 484 ಬೆಲೆ ರು. 250
ಸಂಗೀತದ ಒಳಪದರು
ಮುಂಬಯಿಯ ಪತ್ರಕರ್ತೆ ನಮಿತಾ ದೇವಿದಯಾಲ ಅವರು ಇಂಗ್ಲಿಷ್ನಲ್ಲಿ ಬರೆದ 'ಮ್ಯೂಸಿಕ್ ರೂಂ' ಎಂಬ ಕೃತಿಯನ್ನು ಸದಾನಂದ ಕನವಳ್ಳಿಯವರು 'ಸಂಗೀತ ಕೋಣೆ' ಹೆಸರಿನಲ್ಲಿ ಕನ್ನಡಿಸಿದ್ದಾರೆ. ಧೋಂಡೂಬಾಯಿ ಕುಲಕರ್ಣಿ ಎಂಬ ಹಿರಿಯ ಸಂಗೀತಗಾರ್ತಿಯ ಜೀವನಕತೆ ಈ ಪುಸ್ತಕದ ವಸ್ತು. ತುಂಬ ಸರಳ ಸ್ವಭಾವದವರೂ ಮುಗ್ಧರೂ ಆದ ಆ ಹಿರಿಯ ಚೇತನದ ಶಿಷ್ಯೆ ನಮಿತಾ ದೇವಿದಯಾಲ. ಗುರುವಿನ ಕಷ್ಟದ, ಆದರ್ಶದ ಬದುಕು, ಸಂಗೀತ ದಿಗ್ಗಜರ ಅನುಭವ ಕಥನಗಳೂ ಈ ಕೃತಿಯಲ್ಲಿವೆ. ಎಪ್ಪತ್ತೇಳಾದರೂ ಗಟ್ಟಿಮುಟ್ಟಾಗಿದ್ದ, ತಲೆಯಲ್ಲಿಯ ಕೂದಲು ಇನ್ನೂ ನೆರೆತಿರದ ಧೋಂಡುಬಾಯಿಯವರ ಕತೆಯನ್ನು ಹೇಳುತ್ತಲೇ ಆ ಕಾಲದ ಸಂಗೀತ ಕ್ಷೇತ್ರದ ಆಗುಹೋಗುಗಳ ಪರಿಚಯವನ್ನು ಈ ಕೃತಿ ಮಾಡಿಕೊಡುವುದು ವಿಶೇಷ. ಸಂಗೀತಗಾರರು ಮತ್ತು ಅವರ ಸಾಥಿದಾರರ ಸಂಬಂಧದ ಸೂಕ್ಷ್ಮಗಳ ಬಗೆಗೂ ಈ ಕೃತಿ ಬೆಳಕು ಚೆಲ್ಲುತ್ತದೆ.
ಕೃತಿ: ಸಂಗೀತದ ಕೋಣೆ, ಪ್ರಕಾರ: ಅನುವಾದ
ಏಕೆ ಓದಬೇಕು?: ಸಂಗೀತದ ಜ್ಞಾನಕ್ಕೆ, ಪ್ರ: ಅಭಿನವ, ಬೆಂಗಳೂರು
ಪುಟಗಳು 232 ಬೆಲೆ ರು. 150
ಪಂಡಿತರ ಔಷಧ
ಪಂಡಿತ ತಾರಾನಾಥರು ಹಲವು ವಿದ್ಯೆಗಳಲ್ಲಿ ಪರಿಣತರು. ಚಿಕ್ಕವಯಸ್ಸಿನಲ್ಲಿಯೇ ನಮ್ಮನ್ನು ಅಗಲಿಹೋದ ಅವರು ಭಾರತೀಯ ವೈದ್ಯಪದ್ಧತಿಯಲ್ಲಿ ಅಸಾಧಾರಣ ಸಾಧನೆ ಮಾಡಿದವರು. ಅವರ ವೈದ್ಯಕೀಯ ಕೀರ್ತಿ ವಿದೇಶಗಳಿಗೂ ಹಬ್ಬಿ ಅಲ್ಲಿಂದಲೂ ಜನರು ಕಲಿಯುವುದಕ್ಕೆಂದು ಇವರಲ್ಲಿಗೆ ಬರುತ್ತಿದ್ದರು. ಸಾಹಿತ್ಯ, ಸಂಗೀತ, ಪತ್ರಿಕೋದ್ಯಮ, ಯೋಗ, ಆಯುರ್ವೇದ ಹೀಗೆ ಹಲವು ಆಸಕ್ತಿಗಳ ಸಂಗಮವಾಗಿದ್ದ ತಾರಾನಾಥರು ವಿವಿಧ ಪತ್ರಿಕೆಗಳಿಗೆ ಸಾವಿರಾರು ಲೇಖನಗಳನ್ನು ಬರೆದಿದ್ದರು. ಅವನ್ನೆಲ್ಲ ಸಂಪಾದಿಸಿ ಅವರ ಸಮಗ್ರ ಸಾಹಿತ್ಯವನ್ನು ತರುವ ಯೋಜನೆ ರೂಪಿಸಲಾಗಿದೆ. ಆ ಮಾಲಿಕೆಯಲ್ಲಿ 'ರಸೌಷಧಿ' ಎಂಬುದು ಎರಡನೆಯ ಸಂಪುಟ. ಕರ್ನಾಟಕದ ಧನ್ವಂತರಿ ಎಂದು ಕರೆಯಲ್ಪಡುತ್ತಿದ್ದ ತಾರಾನಾಥರು ಇಂದು ಬಳಕೆಗೆ ಬಂದಿರುವ ಸಾವಯವ ವೈದ್ಯಪದ್ಧತಿಯನ್ನು ಎಂಟು ದಶಕಗಳ ಹಿಂದೆಯೇ ಚಾಲನೆಗೆ ತಂದಿದ್ದರು. ಅವರು ಬಿಟ್ಟುಹೋದ ಈ ಜ್ಞಾನ ಮನುಕುಲಕ್ಕೆ ಅವರ ಬಳುವಳಿ. ಎಂ.ಧ್ರುವನಾರಾಯಣ ಮತ್ತು ಕಿ.ರಂ.ನಾಗರಾಜ ಅವರು ಇದನ್ನು ಸಂಪಾದಿಸಿದ್ದಾರೆ.
ಕೃತಿ: ರಸೌಷಧಿ, ಪ್ರಕಾರ: ವೈದ್ಯಕೀಯ ಲೇಖನಗಳು, ಏಕೆ ಓದಬೇಕು?: ವೈದ್ಯಕೀಯ ಅರಿಯಲು, ಪ್ರ: ಅಭಿನವ, ಬೆಂಗಳೂರು, ಪುಟಗಳು 348 ಬೆಲೆ ರು. 300
-ಡಾ. ವಾಸುದೇವ ಶೆಟ್ಟಿ