ಕರೆಯುತಿದೆ ಹಿಮಗಿರಿ ಕಂದರ!
ಕೃಷ್ಣ ದೇವಸ್ಥಾನಕ್ಕಿಂತಲೂ ನಮಗೆ ಮುಖ್ಯವಾಗಿದ್ದದ್ದು ರೋರಿಚ್ ಮನೆ. ಇದ್ಯಾವ ರೋರಿಚ್ ಅಂತ ತಲೆಕೆಡಿಸಿಕೊಂಡಿರಾ? ನಮ್ಮ ಟಾಗೋರರ ಸೊಸೆ, ಬಾಲಿವುಡ್ನ ಮೊತ್ತಮೊದಲ ಹೀರೋಯಿನ್, ಅಭಿಜಾತ ಕಲಾವಿದೆ ದೇವಿಕಾರಾಣಿಯನ್ನು ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಕಲಾವಿದ ಸ್ವೆತೊಸ್ಲಾವ್ ರೋರಿಚ್ ನೆನಪಿರಬೇಕಲ್ಲ? ಅವರ ತಂದೆ ನಿಕೋಲಸ್ ರೋರಿಚ್ ಕೂಡ ಮಹಾ ಸೃಜನಶೀಲ ಸಾಮರ್ಥ್ಯದ ಕಲಾವಿದ. ಅವರ ಮನೆ ಇರುವುದು ಇದೇ ನಗ್ಗರ್ನಲ್ಲಿ, ಬೆಟ್ಟವೊಂದರ ತುತ್ತತುದಿಯಲ್ಲಿ.
1880ರಲ್ಲಿ ಕರ್ನಲ್ ರೆನಿಕ್ ಎಂಬ ಬ್ರಿಟಿಷ್ ಈ ಮನೆಯನ್ನು ಕಟ್ಟಿಸಿದ. ಸಂಪೂರ್ಣ ಮರದಿಂದಲೇ ಕಟ್ಟಿದ್ದು ಎಂಬುದು ಇದರ ಹೆಗ್ಗಳಿಕೆ. 1921ರಲ್ಲಿ ಭಾರತ ತೊರೆದು ಯುರೋಪ್ಗೆ ತೆರಳುವಾಗ ಇದನ್ನು ಮಂಡಿಯ ರಾಜನಿಗೆ ಮಾರಿದ. 1928ರಲ್ಲಿ ರಷ್ಯಾದಿಂದ ಇಲ್ಲಿಗೆ ಬಂದ ರೋರಿಚ್, ತನ್ನ ಏಕಾಂತಕ್ಕೂ, ಕಲಾಚಟುವಟಿಕೆಗೂ ಈ ಮನೆ ಸೂಕ್ತವೆಂದು ಕಂಡು ಇದನ್ನು ಖರೀದಿಸಿದ. ಇಂದು ಇದು ರೋರಿಚ್ ನೆನಪಿನ ಮ್ಯೂಸಿಯಂ.
ನಿಕೋಲಸ್, ಸ್ವೆತೋಸ್ಲಾವ್, ದೇವಿಕಾರಾಣಿಯರ ಹಲವಾರು ಪೇಂಟಿಂಗ್ಗಳನ್ನು ಇಲ್ಲಿ ಸಂರಕ್ಷಿಸಿಡಲಾಗಿದೆ. ಅವರ ಬಹುತೇಕ ಕೃತಿಗಳು ನ್ಯೂಯಾರ್ಕ್ನ ಮನೆಯಲ್ಲಿವೆ. ಅವರು ನಿತ್ಯಜೀವನಕ್ಕೆ ಬಳಸುತ್ತಿದ್ದ ರಾಜವೈಭೋಗದ ವಸ್ತುಗಳನ್ನು ಜತನದಿಂದ ಇಡಲಾಗಿದೆ. ಮನೆಯ ನೆಲಮಹಡಿಯಲ್ಲಿ ಪೇಂಟಿಂಗ್ಗಳು ಪ್ರದರ್ಶನಕ್ಕಿವೆ. ಅಲ್ಲೇ ಸ್ವೆತೋಸ್ಲಾವ್ ಅವರ ಕೃತಿಗಳ ಮಿನಿಯೇಚರ್ಗಳು, ಪುಸ್ತಕಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಮೇಲ್ಮಹಡಿಯ ಒಳಗೆ ಪ್ರವೇಶವಿಲ್ಲ. ಆದರೆ ನಾಲ್ಕು ಸುತ್ತಲೂ ಇರುವ ಕಿಟಕಿಗಳಿಂದ ಒಳಗಡೆ ಹೇಗಿದೆ ನೋಡಬಹುದು. ಈ ಮನೆ ಹೇಗಿದೆ ಎಂದರೆ, ಸುತ್ತಲೂ ಅಗಲವಾದ ಬಾಲ್ಕನಿ ಮನೆಯನ್ನು ಸುತ್ತುವರಿದಿದೆ. ಇಲ್ಲಿ ನಿಂತರೆ ಇಡೀ ಕುಲು ಕಣಿವೆಯ ಭವ್ಯ ಮನೋಹರ ರೌದ್ರ...(ಇನ್ನೂ ಏನೆಲ್ಲ ವಿಶೇಷಣ ಬೇಕೋ ಹಾಕಿಕೊಳ್ಳಿ) ನೋಟ ಕಾಣಿಸುತ್ತದೆ. ರೋರಿಚ್ ಮನೆತನಸ್ತರ ಸೌಂದರ್ಯಪ್ರಜ್ಞೆ, ರಸಿಕತೆ, ಧ್ಯಾನಶೀಲತೆಗೆ ಈ ಮನೆ ಸಾಕ್ಷಿಯಾಗಿದೆ. ಸ್ವೆತೋಸ್ಲಾವ್ ಹಾಗೂ ನಿಕೋಲಸ್ರ ಚಿತ್ರಗಳ ಸೊಬಗು ಹಾಗೂ ಅವುಗಳ ಹಿಂದಿರುವ ತಾತ್ವಿಕತೆಗಳನ್ನು ಅರಿತವರಿಗೆ, ಈ ಪರ್ವತ ಹಿನ್ನೆಲೆ ಎಷ್ಟು ಮಹತ್ವಪೂರ್ಣವಾದುದೆಂದು ಅರಿವಾಗಬಹುದು. ಅದರಲ್ಲೂ ಸ್ವೆತೋಸ್ಲಾವ್ನ ರಚನೆಗಳ ಹಿಂದಿನ ಮೂಲ ಸ್ರೋತವೇ ಹಿಮಾಲಯ ಪರ್ವತಗಳು. ಇಲ್ಲಿಗೆ ಬಂದ ಬಳಿಕ ಆತ ಚಿತ್ರಿಸಿದ್ದೆಲ್ಲ ಪರ್ವತಚಿತ್ರಗಳೇ ಎನ್ನಬಹುದು. ಒಂದೇ ಬೆಟ್ಟವನ್ನೇ ಚಳಿಗಾಲ, ಮಳೆಗಾಲ, ಬೇಸಿಗೆ, ಬೆಳಗ್ಗೆ, ಸಂಜೆ ಎಂದೆಲ್ಲ ಬೇರೆ ಬೇರೆ ನೆರಳು ಬೆಳಕು ಹವಾಮಾನಗಳ ಭಿನ್ನ ವಿನ್ಯಾಸಗಳಲ್ಲಿ ಈತ ಚಿತ್ರಿಸಿದ್ದಿದೆ. ಸ್ವೆತೋಸ್ಲಾವ್ ಹುಟ್ಟಿದ್ದು ರಷ್ಯಾದಲ್ಲಿ, ಕಲಿತದ್ದು ನ್ಯೂಯಾರ್ಕ್ನಲ್ಲಿ, ಚಿತ್ರಿಸಿದ್ದು ಭಾರತವನ್ನು. ಎಲ್ಲಿಯ ಮಾಮರ, ಎತ್ತಣ ಕೋಗಿಲೆ? ಎಂದುಕೊಳ್ಳುತ್ತಾ ಆ ವಿಶಾಲ ಬಾಲ್ಕನಿಯಲ್ಲಿ ನಾನು ಧ್ಯಾನಸ್ಥನಾದೆ. ಎದುರು ಪಾತಾಳದಲ್ಲಿ ಬಿಯಾಸ್ ಮೊರೆಮೊರೆಯುತ್ತಾ ಹಿಮಾಲಯಕ್ಕೆ ವಿದಾಯ ಹೇಳುತ್ತಿತ್ತು. ನಾವೂ ಹಿಮಾಚಲಕ್ಕೆ ವಿದಾಯ ಹೇಳುವ ಸಮಯ ಹತ್ತಿರವಾಗುತ್ತಿತ್ತು.
ರೋರಿಚ್ ಮನೆಯ ನೆನಪಿಗಾಗಿ ಪ್ರಿಯಾ, ಸ್ವೆತೋಸ್ಲಾವ್ನ ತಾಯಿ- ಮಗುವಿನ ಪೇಂಟಿಂಗ್ನ ಪೇಪರ್ವೇಟ್ ಕೊಂಡಳು. ನಾನು ಸ್ವೆತೋಸ್ಲಾವ್ ಹಿಮಾಲಯದ ಬಗ್ಗೆ ಬರೆದ 'ಹಾರ್ಟ್ ಆಫ್ ಏಷ್ಯಾ' ಪುಸ್ತಕ ತೆಗೆದುಕೊಂಡೆ. ರೋರಿಚ್ ಚಿತ್ರಕಲೆಯಲ್ಲಿ ಮಾತ್ರವಲ್ಲ, ಭಾರತೀಯ ತತ್ವಜ್ಞಾನದಲ್ಲೂ ಪ್ರಕಾಂಡ ಪಾಂಡಿತ್ಯ ಹೊಂದಿದ್ದನೆಂದು ನಿರೂಪಿಸುವ ಕೃತಿ ಇದು. ಇದು ಹಿಮಾಲಯ, ಅಲ್ಲಿನ ಯೋಗಿಗಳ ಯೌಗಿಕಶಕ್ತಿ, ಬುದ್ಧಮತದ ಸೊಗಸು, ಕಲ್ಕಿ ಹುಟ್ಟಲಿರುವನೆಂದು ಪುರಾಣಗಳಲ್ಲಿ ಹೇಳಲಾದ 'ಶಂಭಾಲಾ' ಎಂಬ ನಾಡಿನ ಕುರಿತು ವಿಶ್ಲೇಷಣೆ ಇವೆಲ್ಲವನ್ನು ಹೊಂದಿದ ಕೃತಿ.
=
ರೋರಿಚ್ ಮನೆಯಿಂದ ಹೊರಬಿದ್ದ ಬಳಿಕ ನಾವು ನೋಡಿದ್ದು ನಗ್ಗರ್ನ ಅರಮನೆಯನ್ನು. ಮೊದಲು ನಗ್ಗರ್ ಇಡೀ ಕುಲುವಿಗೆ ರಾಜಧಾನಿಯಾಗಿತ್ತು. 1460ರಲ್ಲಿ ರಾಜಾ ಸಿಧ್ ಸಿಂಗ್ ಇದನ್ನು ಕಟ್ಟಿಸಿದ. ಮರ ಮತ್ತು ಕಲ್ಲುಗಳ ಸಹಯೋಗದಿಂದ ಕಟ್ಟಡ ಕಟ್ಟುವ ಬೆಟ್ಟಪ್ರದೇಶಗಳ ವಾಸ್ತುಶಿಲ್ಪದ ವೈಖರಿಗೆ ಇದು ಅನನ್ಯ ಉದಾಹರಣೆ. ಇಂದು ರಾಜ್ಯ ಸರ್ಕಾರದ ಅಧೀನದಲ್ಲಿರುವ ಇದು ದುಬಾರಿ ಹೋಟೆಲ್ ಆಗಿದೆ. ರಾಜ ಮಲಗಿದ ಮಂಚದಲ್ಲಿ ಕೂರುತ್ತೀರಾ? ಐದು ಸಾವಿರ ರುಪಾಯಿ ಕಕ್ಕಿ! ಇದನ್ನು ನೋಡಿ ಸುಸ್ತಾಗಿ, ಹೊರಗೋಡಿ ಬಂದು ಬದುಕಿದೆಯಾ ಬಡಜೀವವೇ ಎಂದು ಉಸಿರುಬಿಟ್ಟೆವು.
ಮಧ್ಯಾಹ್ನ ಲಾಡ್ಜ್ನಲ್ಲಿ ದೇವಾಂಗ್ ಶರ್ಮ ಸೊಗಸಾದ ಊಟ ನೀಡಿದ. ನಾನು ಪತ್ರಿಕೆಯಲ್ಲಿ ಕೆಲಸ ಮಾಡುತ್ತಿರುವುದು ಎಂಬುದು ಗೊತ್ತಾಗುತ್ತಲೂ, 'ನಮ್ಮ ಊರಿನ ಬಗೆಗೂ ಬರೀರಿ, ನಮ್ಮ ಹೋಂ ಸ್ಟೇ ಕುರಿತೂ ಬರೀರಿ' ಎಂದೆಲ್ಲ ತಲೆ ತಿಂದ.
=
ಒಂದು ಸಂಗತಿ ಬರೆಯಲು ಮರೆತಿದ್ದೆ: ನಾವು ಕುಂಜುಂ ಪಾಸ್ನಲ್ಲಿ ಕುಂಜುಂ ದೇವಿಗೆ ನಮಸ್ಕಾರ ಹೊಡೆಯುತ್ತಿದ್ದ ಹೊತ್ತಿನಲ್ಲೇ, ಅಲ್ಲಿಂದ ಅನತಿ ದೂರದಲ್ಲಿದ್ದ ಬಾರಹ ಶಿಗ್ರಿ ಗ್ಲೇಶಿಯರ್ನಲ್ಲಿ ಇನ್ನೊಂದು ಜಗನ್ನಾಟಕದ ದೃಶ್ಯ ತೆರೆದುಕೊಳ್ಳುತ್ತಿತ್ತು. ಅದಾಗಷ್ಟೆ ಗ್ಲೇಶಿಯರ್ನ ಮಧ್ಯಭಾಗವನ್ನು ಚಾರಣ ತಂಡವೊಂದು ವತಲುಪಿತ್ತು. ಕೋಲೂರಿಕೊಂಡು ನಡೆಯುತ್ತಿದ್ದ ಆ ತಂಡದ ನಾಯಕನ ಕೋಲಿಗೆ ಏನೋ ಸಿಕ್ಕಿದಂತಾಗಿ, ಎಳೆದು ನೋಡಿದ. ಆತ ಕಂಡದ್ದು ಕೊಳೆಯದೆ ಬಿದ್ದಿದ್ದ ಮನುಷ್ಯನ ಶವವೊಂದನ್ನು. ಆಘಾತದಿಂದ ಅಗೆಯುತ್ತಾ ಹೋದವರಿಗೆ ಸಿಕ್ಕಿದ್ದು ನಾಲ್ಕು ಶವಗಳು. ನಾಲ್ಕು ವರ್ಷಗಳ ಹಿಂದೆ ಚಾರಣಕ್ಕೆ ಹೋಗಿ ಹಿಮದ ನಡುವೆ ನಾಪತ್ತೆಯಾಗಿದ್ದ ನಾಲ್ಕು ಮಂದಿಯ ಶವಗಳು ಅಲ್ಲಿ ದೊರೆತಿದ್ದವು. ಈ ಸಂಗತಿಯನ್ನು ನಾವು ಬಂದಿಳಿದ ದಿನ ದೇವಾಂಗ್ ಶರ್ಮಾ ಹೇಳಿದ್ದ. ಹಿಮಾಚಲದ ದಿನಪತ್ರಿಕೆಗಳ ಮುಖಪುಟದ ತುಂಬ ಅದೇ ಸುದ್ದಿ.
=
ಹಿಮಾಚಲಕ್ಕೆ ಹೋಗಿ ಬಂದೆ. ಮಹೇಶನಿಗೆ ಕಾಡುವ ಬಿಂಬಗಳಾಗಿ, ರಾಧಿಕಾಗೆ ಅಚ್ಚರಿಯ ಮೂಟೆಯಾಗಿ, ಪ್ರಿಯಾಗೆ ಭವ್ಯತೆ ಮತ್ತು ಅಧ್ಯಾತ್ಮದ ಪ್ರತೀಕವಾಗಿ ಕಾಡಿದ ಹಿಮಾಲಯ. ನನ್ನ ಜ್ಞಾನಕೋಶದಲ್ಲಿ ಮಾತ್ರ ನಿರಂತರ ಅತೃಪ್ತಿಯಾಗಿ ಉಳಿಯಿತು. ಮುಟ್ಟಿದೆ, ಮುಟ್ಟಲಿಲ್ಲ; ನೋಡಿದೆ, ನೋಡಲಿಲ್ಲ; ಸವಿದೆ, ಸವಿಯಲಿಲ್ಲ ಎಂಬ ಭಾವ. ನಾಲ್ಕು ದಿನ ಪ್ರವಾಸಿಯಾಗಿ ಹೋಗಿಬಂದರೆ ಅಲ್ಲಿನ ಮಣ್ಣುಬೇರುಗಳನ್ನು ಮುಟ್ಟಿ ತಡಕಿ ತಿಳಿದಂತಾಗುತ್ತದೆಯೆ? ಅಸಾಧ್ಯ ಎಂಬುದು ನನಗೂ ಗೊತ್ತು. ನನ್ನದು ಸಣ್ಣ ಬೊಗಸೆ. ಕಿರಿದು ಕಣ್ಣು. ನಾನು ನೋಡಿದ ಬುದ್ಧ, ಹಿಮ, ಬೆಟ್ಟಗಳು ನಿಜವೋ, ಕನಸೋ? ನಾನು ಹಿಮಚಿರತೆಯನ್ನು ನೋಡಿದೆನೋ ಅಥವಾ ಅದು ನನ್ನ ಭ್ರಮೆಯೋ? ಉತ್ತರಿಸುವುದು ಸುಲಭವಲ್ಲ. ಆದರೆ, ಅದು ನನ್ನನ್ನು ನೋಡಿರಬಹುದಲ್ಲವೆ?
ಅಡಿಗರ ಸಾಲುಗಳು ನೆನಪಾಗುತ್ತಿವೆ: 'ಹಿಮಗಿರಿಯ ಕಂದರ, ಕರೆಯಿತೆಷ್ಟು ಜನರ?' ದೂರದಲ್ಲಿ ಕುಳಿತು ಕನವರಿಸುತ್ತೇನೆ: ಕರೆಯುತಿದೆ ಹಿಮಗಿರಿಯ ಕಂದರ, ಈ 'ಕಂದ'ರ. ಎಂದು ಹೋಗುವೆನು ಅಲ್ಲಿಗೆ? ನನ್ನ ಪ್ರೀತಿಯ ತಥಾಗತನ, ಶಿವನ, ಹಿಮದ, ಹಿಮಚಿರತೆಯ, ಮೌನಮುಗ್ಧ ಪರ್ವತಪಂಕ್ತಿಗಳ ನಾಡಿಗೆ?
(ಮುಗಿಯಿತು)
-ಹರೀಶ್ ಕೇರ
harishkera@gmail.com
ಚಿತ್ರ: ಪ್ರಿಯಾ ಕೆರ್ವಾಶೆ