ಸ್ವಕೃತ?
ಲಾಬಿ ಮತ್ತು ರಾಜಕೀಯ. ಈ ಪದಗಳು ಇಂದು ಪಡೆದುಕೊಂಡಿರುವ ಅರ್ಥಗಳನ್ನು ವಿವರಿಸುವ ಅವಶ್ಯಕತೆಯಿಲ್ಲ. ಸ್ವಜನ, ಸ್ವಪಕ್ಷಗಳ ಹಿತಾಸಕ್ತಿಗಳನ್ನು ಮಾತ್ರ ಗಮನದಲ್ಲಿರಿಸಿಕೊಂಡು ಮಾಡುವ ಎಲ್ಲಾ ತರಹದ ಕ್ರಿಯೆಗಳಿಗೂ ಇದೊಂದು ಪರ್ಯಾಯ ಪದವಾಗಿ ಚಲಾವಣೆಯಲ್ಲಿದೆ. ಲಾಬಿ, ರಾಜಕೀಯ ಪ್ರವೇಶಿಸದೆ ಇರುವ ಕ್ಷೇತ್ರಗಳು ಯಾವುದಾದರೂ ಇದೆಯೆ ಎಂದು ದುರ್ಬೀನು ಹಾಕಿಕೊಂಡು ಹುಡಕಬೇಕಾಗಿದೆ. ಅಂತಹುದರಲ್ಲಿ ಜನಜೀವನದ ನಾಡಿ ಎಂದೇ ಬಿಂಬಿತವಾಗಿರುವ ಇಂದಿನ ಸಾಹಿತ್ಯ, ಅದರ ಮುಖವಾಣಿಯೆಂದೇ ಬಿಂಬಿತವಾದ ಸಾಹಿತ್ಯಿಕ ಪತ್ರಿಕೆಗಳ ಮೇಲೂ ಈ ಲಾಬಿ, ರಾಜಕೀಯಗಳು ತಮ್ಮ ನೆರಳನ್ನು ಬೀಳಿಸಿವೆ.
ಸಾಹಿತ್ಯಿಕ ಪತ್ರಿಕೆಗಳಲ್ಲಿ ಕಂಡುಬರುವ ಇಂತಹ ಪ್ರವೃತ್ತಿಗೆ ಯಾವುದಾದರೊಂದು ವಾದ, ಇಸಂ, ಧೋರಣೆಗೆ ಕಟ್ಟುಬಿದ್ದ ಸಂಪಾದಕರುಗಳು, ಅಂತಹ ಸರಕಿಗೆ ಸಂಪನ್ಮೂಲ ವ್ಯಕ್ತಿಗಳಾದ ಲೇಖಕರು, ಸಾಹಿತಿಗಳು, ವಿಮರ್ಶಕರೆಂಬ ಹೆಸರಿನ ಅರವತ್ತನಾಲ್ಕು ವಿದ್ಯೆಗಳಲ್ಲೂ ಪಾರಂಗತರಾಗಿದ್ದೇವೆಂಬ ಭ್ರಮೆಯ ಸಕಲ ಕಲಾ ವಲ್ಲಭರೇ ಕಾರಣಕರ್ತರು.
ಗೋಪಾಲಕೃಷ್ಣ ಅಡಿಗ, ಯು.ಆರ್. ಅನಂತಮೂರ್ತಿ, ಕೆ.ವಿ. ಸುಬ್ಬಣ್ಣ ಅವರಂತಹ ಧೀಮಂತರು ಪ್ರಾರಂಭಿಸಿದ ಸಾಹಿತ್ಯಿಕ ಪತ್ರಿಕೆಗಳು ಇಹಲೋಕ ತ್ಯಜಿಸಿ ಎಷ್ಟೋ ವರ್ಷಗಳಾಗಿವೆ. ಈಗ ಉಳಿದಿರಬಹುದಾದ ಪತ್ರಿಕೆಗಳು ಅವುಗಳ ಸಂಪಾದಕರುಗಳ ಮರ್ಜಿ, ಹಣದ ಅಡಚಣೆ, ಇತ್ಯಾದಿಗಳಿಂದ ಮಾಸಿಕವಾಗಿ ಪ್ರಾರಂಭ ಮಾಡಿದ್ದು ದ್ವೈಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ, ಕೊನೆಗೆ ವಾರ್ಷಿಕ ಸಂಚಿಕೆಯಾಗಿ ಪರಿವರ್ತನೆಯ ಹಾದಿಯಲ್ಲಿವೆ. ಪ್ರತಿವರ್ಷದ ಕೊನೆಯಲ್ಲಿ ಚಂದಾದಾರರ ಕೊರತೆ ಮಾಮೂಲಾದ ಸಮಸ್ಯೆಯಾಗಿದೆ. ಇನ್ನು ಕೆಲವು ಸಾಹಿತ್ಯಾಭಿಮಾನಿಗಳು ಪಾಪ, ಸಂಪಾದಕರು ಚಂದಾದಾರರನ್ನು ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ಮೂರ್ನಾಲ್ಕು ವರ್ಷ ಪುಕ್ಕಟೆಯಾಗಿ ಸಾಹಿತ್ಯಿಕ ಪತ್ರಿಕೆಗಳನ್ನು ಕಳಿಸುತ್ತಿದ್ದರೂ ಹಣ ಕಳಿಸದೆ, ಅಥವಾ ಪತ್ರಿಕೆ ಬೇಡವೆನ್ನದೆ ಮುಗುಂ ಆಗಿ ಉಳಿದು ಬಿಟ್ಟಿರುತ್ತಾರೆ. ಹೀಗಾಗಿ ಸಾಹಿತ್ಯಿಕ ಪತ್ರಿಕೆಗಳಿಗೆ ಪ್ರತಿವರ್ಷ ಖೋತಾ ಬಜೆಟ್ ಮಾಮೂಲಿಯಾಗಿ ಹೋಗಿದೆ. ಸುಮಾರು ಒಂದು ಸಾವಿರದೊಳಗೆ ಪ್ರಸಾರ ಸಂಖ್ಯೆಯಿರುವ ಈ ಪತ್ರಿಕೆಗಳಿಗೆ ಜಾಹಿರಾತು ಕೊಡುವ ಉದಾರಿಗಳು ತಾನೆ ಯಾರಿದ್ದಾರು? ಇದು ಸಾಹಿತ್ಯಿಕ ಪತ್ರಿಕೆಗಳ ಅಲ್ಪಾಯಸ್ಸಿಗೆ ಒಂದು ಕಾರಣ.
ಇನ್ನೊಂದು ಸ್ವಲ್ಪ ಸೂಕ್ಷ್ಮವಾದದ್ದು ಎಂದು ಬೇಕಾದರೂ ಅರ್ಥೈಸಿಕೊಳ್ಳಬಹುದು. ಅದೆಂದರೆ ಈ ಸಾಹಿತ್ಯಿಕ ಪತ್ರಿಕೆಗಳ ಸಂಪಾದಕರುಗಳು, ವ್ಯವಸ್ಥಾಪಕರುಗಳು ತಮ್ಮ ಪತ್ರಿಕೆಗಳಿಗೆ ಲೇಖನ, ವಿಮರ್ಶೆ, ಕವನ ಇತ್ಯಾದಿ ಬರೆಯುವವರ, ಬರೆಸಬೇಕಾಗಿರುವವರ ಒಂದು ಪ್ಯಾನಲ್ ಅನ್ನು (ಬೇಕಾದರೆ ಚಿಂತಕರ, ಚಿಂತಾಕ್ರಾಂತರ ಚಾವಡಿಯೆನ್ನಿ) ಮೊದಲೇ ನಿರ್ಧರಿಸಿಕೊಂಡು ಬಿಟ್ಟಿರುತ್ತಾರೆ. ಅಲ್ಲಿ ಅವರುಗಳದೇ ಪಾರುಪತ್ಯ. ಜತೆಗೆ ಇಂತಂತಹ ಸಾಹಿತಿಗಳ ಬಗ್ಗೆಯೇ ಬರೆಯಬೇಕೆಂಬ ಅಲಿಖಿತ ನಿಯಮ ಬೇರೆ. ಅವರುಗಳನ್ನು ಬಿಟ್ಟು ಬೇರೆಯವರ ಬಗ್ಗೆ ಒಂದು ಸಾಲೂ ಇಲ್ಲ. ಇಷ್ಟೊಂದು ಅಡ್ಡಿ ಆತಂಕಗಳ ಚಕ್ರವ್ಯೂಹ ಭೇದಿಸಿ ಇತರರು ಬರೆದ ಒಂದು ಲೇಖನವೋ, ವಿಮರ್ಶೆಯೋ ಪ್ರಕಟವಾದರೆ ಅದು ಬರೆದವನ ಪೂರ್ವಜನ್ಮದ ಪುಣ್ಯವೇ ಸರಿ.
ಕೆಲವೇ ಕೆಲವು ಆಯ್ದ ಸಾಹಿತಿಗಳ ಬಗ್ಗೆ ಅವರಿಗೆ ಅದೆಷ್ಟೇ ಖ್ಯಾತಿಯಿರಲಿ, 'ಪೀಠಗಳು' 'ಪ್ರಶಸ್ತಿಗಳು' ಪ್ರಶಂಸೆಗಳ ಸಂಪತ್ತಿರಲಿ. ಒಂದೆರಡು ವರ್ಷ ಅವರುಗಳ ಬಗ್ಗೆ ಬರೆಯಲಿ (ಅಂದರೆ ಐದಾರು ಸಂಚಿಕೆಗಳಲ್ಲಿ) ಬೇಡವೆಂದವರ್ಯಾರು? ಅದೇ ರೀತಿ 'ನಿಲಯದ' ಕಲಾವಿದರು ಹಾಡಿದ್ದೇ ಹಾಡು. ಒಂದು ವರ್ಷ ಕೇಳೋಣ. ನಂತರವೂ ಅದೇ ರಾಗ ಅದೇ ಹಾಡನ್ನು ಕೇಳೆಂದರೆ ಹೇಗೆ? ಮುಚ್ಚಿಕೊಂಡಿರುವ ಕಿಟಕಿ ಬಾಗಿಲುಗಳನ್ನು ತೆರೆದು ಹೊಸ ಗಾಳಿ, ಬೆಳಕು ಬರುವಂತೆ ಮಾಡಬೇಕಲ್ಲವೆ? ಆಪರೇಟಿಂಗ್ ಸಿಸ್ಟಮ್ಸ್ನ ಹೊಸ ಹೊಸ ವರ್ಷನ್ಗಳು ಬರಬೇಕಲ್ಲವೇ? 3ಜಿ, 4ಜಿ ಮೊಬೈಲುಗಳು ಬಂದರೂ ನನಗೆ ಲ್ಯಾಂಡ್ ಲೈನೇ ಸಾಕೆಂದರೆ ಸರಿಯೆ?
ಇಂತಹ ಸಾಹಿತ್ಯಿಕ ಪತ್ರಿಕೆಗಳಿಗೆ ಛಲ ಬಿಡದ ತ್ರಿವಿಕ್ರಮನಂತೆ ನೀವು ಬರೆಯುತ್ತಾ ಹೋದಂತೆಲ್ಲಾ ಕೈಬರಹ ಗುಂಡಗಾಗುತ್ತದೆ; ಅಂಚೆ ವೆಚ್ಚ, ಕೊರಿಯರ್ಗೆ ಕಾಸು ಕೊಟ್ಟು ಕೊಟ್ಟು ನಿಮ್ಮ ಜೇಬು ಸಣ್ಣಗಾಗುತ್ತಾ ಹೋಗಿ ಕೊನೆಗೊಂದು ದಿನ ಆ ಪತ್ರಿಕೆಯ ಸಹವಾಸವೇ ಬೇಡವೆಂದು ಬಿಟ್ಟು ಬಿಡುತ್ತೀರಿ. ಕೆಲವು ಸಾಹಿತ್ಯಿಕ ಪತ್ರಿಕೆಗಳಿಗಂತೂ ಪ್ರತಿಕ್ರಿಯೆ ಕಾಲಂ ಎಂದರೆ ಏಕೋ ಅಲರ್ಜಿ. ಸುಮಾರು ಎಂಬತ್ತು ಪುಟಗಳಷ್ಟಿರುವ ಒಂದು ಸಂಚಿಕೆಯಲ್ಲಿ ಒಂದೆರಡು ಪುಟಗಳನ್ನು ಓದುಗರ ಪ್ರತಿಕ್ರಿಯೆಗಾಗಿ ಮೀಸಲಿಟ್ಟರೆ ಏನೂ ಬಾಧಕವಿಲ್ಲ. ಬಾಲಿಶವಾದ ಲೇಖನ, ಪ್ರತಿಕ್ರಿಯೆ ಪ್ರಕಟಿಸಿ ಎಂದ ಯಾರೂ ಹೇಳುವುದಿಲ್ಲ; ನಿರೀಕ್ಷಿಸುವುದೂ ಇಲ್ಲ. ಜೊಳ್ಳನ್ನೆಲ್ಲಾ ತೂರಿ ಕಾಳುಗಳಲ್ಲಿ ಆಯ್ದು ಪ್ರಕಟಿಸಲಾಗುವುದಿಲ್ಲವೆ? ಯಾವುದೇ ಕೆಲಸಕ್ಕಾಗಲೀ ಫೀಡ್ಬ್ಯಾಕ್ ಎನ್ನುವುದು ಅವಶ್ಯವಲ್ಲವೆ?
ಸಾಹಿತ್ಯಿಕ ಪತ್ರಿಕೆಗಳಿಗೆ ಇನ್ನೊಂದು ಬಗೆಹರಿಸಲಾಗದ ಸಮಸ್ಯೆಯಿದೆ. ಅದ್ಯಾವುದೆಂದರೆ ವರ್ತಮಾನದ ಸಂಗತಿಗಳತ್ತ ಗಮನಹರಿಸದೇ ಇರುವುದು. ಇದನ್ನು ಒಂದು ನಿದರ್ಶನದ ಮೂಲಕ ಸ್ಪಷ್ಟಪಡಿಸುತ್ತೇನೆ. ಕನ್ನಡದ ಒಂದು ಕಾದಂಬರಿ ಬಗ್ಗೆಯೋ, ಸಿನಿಮಾ ಬಗ್ಗೆಯೋ, ಅಥವಾ ಕರ್ನಾಟಕ ಇಲ್ಲವೆ ನಮ್ಮ ದೇಶದ ಯಾವುದಾದರೊಂದು ಸಮಸ್ಯೆಯ ಬಗ್ಗೆ ವಾದ ವಿವಾದಗಳು, ಚರ್ಚೆಗಳು ದಿನಪತ್ರಿಕೆಗಳಲ್ಲಿ, ಅವುಗಳ ವಾಚಕರ ಪತ್ರ ಅಥವಾ ಅದಕ್ಕಾಗೇ ಮೀಸಲಾದ ಪುಟಗಳಲ್ಲಿ ದಿನಗಟ್ಟಳೆ, ವಾರಗಟ್ಟಳೆ ನಡೆಯುತ್ತಿರುವಾಗ ಈ ಸಾಹಿತ್ಯಿಕ ಪತ್ರಿಕೆಗಳು ಜಪಾನಿನ ಜನಪದ, ಸ್ವೀಡನ್ನ ಸಿನಿಮಾ, ಕ್ಯೂಬಾದ ಕವಿಯೊಬ್ಬನ ಕವನ ಸಂಕಲನ ಅಥವಾ ಚೀನಾದ ಕಮ್ಯುನಿಸ್ಟ್ ಮುಳ್ಳುಗಳ ನಡುವೆಯೂ ಅರಳುತ್ತಿರುವ ಪ್ರಜಾತಂತ್ರದ ಕೆಂಪು ಗುಲಾಬಿಗಳ ಬಗ್ಗೆ ಪುಟಗಟ್ಟಳೆ ಬರೆಯುತ್ತಾ, ಬರೆಸುತ್ತಾ ಅಂತಹ ಸಿನಿಮಾ ಕವನ, ಜನಜಾಗೃತಿ ನಮ್ಮಲ್ಲಿ ಏಕೆ ಇಲ್ಲ ಎಂದು ವಿಷಾದ ಯೋಗದಲ್ಲಿ ಪ್ರಶ್ನಿಸುತ್ತಾ ಕೂತಿರುತ್ತಾರೆ. ಇವುಗಳಿಗಿಂತ ಇತ್ತೀಚೆಗೆ ದಿನಪತ್ರಿಕೆಗಳು, ಅವುಗಳ ಸಾಪ್ತಾಹಿಕ ಪ್ರಭಗಳು, ಪುರವಣಿಗಳು ಮತ್ತು ವಾರದಲ್ಲಿ ಐದಾರು ದಿನಗಳು ತಪ್ಪದೆ ಪ್ರಕಟವಾಗುವ ಅವುಗಳ ದೈನಿಕ ಪುರವಣಿಗಳೇ ದೊಡ್ಡ ಕೆಲಸ ಮಾಡುತ್ತಿವೆ. ಜನಮನದ ನಾಡಿ ಬಡಿತಕ್ಕೆ ಸ್ಪಂದಿಸುತ್ತಿವೆ. ಸಾಹಿತ್ಯಿಕ ಪತ್ರಿಕೆಗಳಿಗೆ ಜನಪ್ರಿಯವೆಂದರೆ ಏನೋ ಅನುಮಾನ; ರಾಜ್ಯ, ದೇಶದ ಸಮಸ್ಯೆಗಳಿಗೆ ಒತ್ತುಕೊಟ್ಟರೆ ಎಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಸಮರ್ಥಿಸಿದಂತಾಗಿ ಬಿಡುತ್ತದೋ, ತಮ್ಮ ವಿಶ್ವ ಮಾನವತ್ತ್ವದ ಕಳಕಳಿಗೆ ಎಲ್ಲಿ ಭಂಗವಾಗುತ್ತದೋ ಎಂಬ ಕಳವಳ. ಈ ವ್ಯಾಧಿಗೆ ಮದ್ದಿಲ್ಲ. ಸಾಹಿತ್ಯಿಕ ಪತ್ರಿಕೆಗಳ 'ಪುನರಪಿ ಜನನಂ ಪುನರಪಿ ಮರಣಂ' ಎಂಬ ಭಜನೆಗೂ ಕೊನೆಯಿಲ್ಲ.
-ಮು.ಅ. ಶ್ರೀರಂಗ, ದೊಡ್ಡಬಳ್ಳಾಪುರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.