ಗ್ವಾಲಿಯರ್ ಘರಾಣೆಯ ರಕ್ತ ಚರಿತೆ!
(ಕಳೆದ ವಾರದಿಂದ)
ಬಡೇ ಮಹಮ್ಮದ್ ಖಾನರೂ 'ವಾಹ್ ಬೇಟಾ ಕ್ಯಾ ಬಾತ್ ಹೈ' ಎನ್ನುತ್ತ, ಅಷ್ಟಕ್ಕೇ ಸುಮ್ಮನಿರದೇ 'ಶಹಬಾಸ್ ಬೇಟೆ. ಏಕ್ ಬಾರ್ ಔರ್ ವಹೀ ತಾನ್‌ಲೊ' ಎಂದು ಬಿಟ್ಟರು.
ಇಲ್ಲಿ ಅವರ ಒಳಗಿನ ಆ ದ್ವೇಷದ ವಿಷ ಕೆಲಸ ಮಾಡಿತ್ತು. ಆ ತಾನನ್ನು ಎರಡನೇ ಬಾರಿ ಹಾಡಿದರೆ ಎಂತಹ ಅನಾಹುತವಾಗಬಹುದೆಂಬುದನ್ನು ಚೆನ್ನಾಗಿ ತಿಳಿದಿದ್ದೂ ಕೂಡ, ಒಂದೋ ಹಸ್ಸೂ ಖಾನ್ 'ಇಲ್ಲ' ಎಂದು ಆ ರಂಗಮಂಚಕ್ಕೆ - ಕಲೆಗೆ ತಿರಸ್ಕಾರ ಮಾಡಬೇಕು ಅಥವಾ ಆ ತಾನನ್ನು ಇನ್ನೊಮ್ಮೆ ಹಾಡುವ ಮಹಾ ಸಾಹಸಕ್ಕಿಳಿಯಬೇಕು. ಈ ರೀತಿಯಾಗಿ ಬಡೇ ಮಹಮ್ಮದ್ ಖಾನ್ ಕುತಂತ್ರದಿಂದ ಹಸ್ಸೂ ಖಾನರನ್ನು ಸತ್ವ ಪರೀಕ್ಷೆಗೆ ಒಡ್ದಿದರು.
ಹಸ್ಸೂ ಖಾನ್ ವಿಚಲಿತರಾಗಲೇ ಇಲ್ಲ. ಅವರಿಗೆ ಈ ಹೊಸ ಸಾಹಸದಿಂದಾಗುವ ಅನಾಹುತದ ಕಲ್ಪನೆ ಇದ್ದರೂ ಆ ಸಾಹಸದ ಸ್ಪರ್ಧೆಯನ್ನು ಅಷ್ಟೇ ಉತ್ಸಾಹದಿಂದ ಸ್ವೀಕರಿಸಿದ ಅವರು, ಎರಡನೇ ಬಾರಿ 'ಖಡಕ್ ಬಿಜಲೀ ತಾನ್' ಅನ್ನು ಹಾಡಿಯೇ ಬಿಟ್ಟರು. ಅದೊಂದು ಸಂಗೀತ ಇತಿಹಾಸದ ಅಪೂರ್ವ ಕ್ಷಣ. ಇಂಥ ಪ್ರಾಣಾಂತಿಕ ಸಾಹಸವನ್ನು ಕಂಡ ಕಲಾರಸಿಕರೂ ಅವಾಕ್ಕಾಗಿ ಕುಳಿತಿದ್ದರು. ಹಿಂದೆ ಯಾರೂ ಮಾಡಿರದಿದ್ದ, ಮುಂದೆ ಯಾರೂ ಮಾಡಲು ಅಸಾಧ್ಯವಾದ ಸುವರ್ಣ ಇತಿಹಾಸವನ್ನು ಸೃಷ್ಟಿಸಿದ್ದರು. ಹಸ್ಸೂ ಖಾನ್ ಅದ್ಭುತವಾಗಿ ಹಾಡಿದರು. ಆದರೆ ಮಾನವ ದೇಹಕ್ಕೆ ಅದರದೇ ಮಿತಿಗಳಿರುತ್ತವೆ ಅಲ್ಲವೆ? ಅವರೋಹದಲ್ಲಿ ಇನ್ನೇನು ತಾನ್ ಮುಗಿಯುತ್ತದೆ ಎನ್ನುವಾಗ ಹಸ್ಸೂಖಾನರ ಎಡ ಪಕ್ಕೆಲಬುಗಳ ಸ್ನಾಯುಗಳೆಲ್ಲ ಪೂರ್ತಿ ಬಿಗಿದು ಅವರ ಉಸಿರು ಕಟ್ಟಿ ಹೋಯಿತು. ಇಷ್ಟಾದರೂ ಹಸ್ಸೂ ಖಾನ್ ಅದನ್ನು ನಿಲ್ಲಿಸಲಿಲ್ಲ. ತಮ್ಮ ಪ್ರಾಣವೇ ಪಣಕ್ಕಿದ್ದರೂ, ಉಸಿರೇ ನಿಲ್ಲುತ್ತಿದ್ದರೂ, ಕರಾರುವಕ್ಕಾಗಿ, ಅಷ್ಟೇ ಅಂದವಾಗಿ ಆ ತಾನನ್ನು ಹಾಡಿ ಮುಗಿಸಿದಾಗ ಇಡೀ ದರ್ಬಾರದ ತುಂಬ ಕಿವಿಗಡಚಿಕ್ಕುವ ಕರತಾಡನ. ಆದರೆ ಹಸ್ಸೂ ಖಾನ್ ಒಮ್ಮೆ ಎದೆಯ ಮೇಲೆ ಕೈಯಿಟ್ಟು ಅಲ್ಲೇ ನೆಲಕ್ಕುರುಳಿದರು. ಅವರ ಬಾಯಿಯಿಂದ ರಕ್ತ ಚಿಮ್ಮಿತು. ದರ್ಬಾರದ ತುಂಬ ಹಾಹಾಕಾರ. ರಾಜ ವೈದ್ಯರೂ ಧಾವಿಸಿ ಬಂದು ಹಸ್ಸೂ ಖಾನರನ್ನುಳಿಸಲು ಪ್ರಯತ್ನಿಸಿದರು. ಆದರೆ ಸಂಗೀತ ಲೋಕದ ದುರ್ದೈವ. ಕಲಾರಸಿಕರೆಲ್ಲ ಕಂಬನಿ ಮಿಡಿಯುತ್ತಿರಲು ಕೆಲವೇ ಕ್ಷಣಗಳಲ್ಲಿ ಹಸ್ಸೂ ಖಾನ್ ಅಲ್ಲೇ ಆ ಸಭೆಯಲ್ಲಿ ಕೊನೆಯುಸಿರೆಳೆದರು.
ಗ್ವಾಲಿಯರ್‌ನ ಉದಯಿಸುತ್ತಿದ್ದ ಪ್ರಭಾವೀ ಸೂರ್ಯ ದ್ವೇಷದ ಕರಿನೆರಳಲ್ಲಿ ಸಿಲುಕಿದರೂ, ತನ್ನ ರಕ್ತದಲ್ಲೇ ಇತಿಹಾಸವನ್ನು ಬರೆದು ಮರೆಯಲಾರದಂತೆ ತನ್ನ ಮುದ್ರೆಯೊತ್ತಿ ಅಸ್ತಂಗತನಾಗಿದ್ದ. ಸಂಗೀತಗಾರಿಗೆ ಇಂಥ ಸತ್ವಪರೀಕ್ಷೆಗಳು ಕಾಲಕಾಲಕ್ಕೆ ಬಂದಿವೆ - ಬರುತ್ತಲೇ ಇವೆ. ಅಂಥ ಅಗ್ನಿಪರೀಕ್ಷೆಯನ್ನು ಎದುರಿಸಿ, ಸಂಗೀತ ಪ್ರಾಣಕ್ಕಿಂತ ಹೆಚ್ಚು ಎಂಬ ಮಾತನ್ನು ಕೃತಿಯಲ್ಲಿ ತೋರಿಸಿ, ಸಂಗೀತ ಲೋಕದ ಧ್ರುವನಕ್ಷತ್ರವಾಗಿ ಮಿಂಚಿ ಮರೆಯಾದರು ಹಸ್ಸೂ ಖಾನ್.
- ಶ್ರುತಿ ಭಟ್
shrutikbhat@gmail.com