ತೂಗುವೆ ತೊಟ್ಟಿಲ!
ಒಮ್ಮೆ ಬೆಳಿಗ್ಗೆ ಎದ್ದವನೆ ಹಾಗೆ ಸುಮ್ಮನೆ ಮನೆ ಮುಂದೆ ಇದ್ದ ಕುಂಡಗಳಲ್ಲಿನ ಗಿಡಗಳನ್ನು ದಿಟ್ಟಿಸುತ್ತಿದ್ದೆ. ಏನೋ ಗಾಳಿಗೆ ಅತ್ತಿಂದಿತ್ತ ತೂಗುತ್ತಿತ್ತು. ಎಲಲೇ, ಏನಿದು ಗಿಡಕ್ಕೆ ಬಾಯಿ, ಕಣ್ಣು ಮತ್ತು ಕೈಗಳು ಮೂಡಿಬಂದು, ಕೈ ಚಾಚಿ ತೊಟ್ಟಿಲು ತೂಗಲು ತಯಾರಿ ನಡೆಸಿದೆಯೆ ಎಂದುಕೊಳ್ಳುತ್ತಿರುವಾಗಲೇ ಎಲ್ಲವೂ ಹಸಿರಾಗಿದ್ದ ಎಲೆಗಳ ಮರೆಯಲ್ಲಿ ತಕ್ಷಣಕ್ಕೆ ಏನೆಂದು ತಿಳಿಯಲಿಲ್ಲ. ಗಮನಿಸಿದಾಗ ಮಿಡಿ ಪ್ರಾರ್ಥನಾ ಕೀಟವೊಂದು (ಕ್ಠಿಛಣ್ಝಟ್ಜಿ ಂಛಟಿಡ್ಝಿಡ), ತನ್ನ ಉದ್ದ ಶರೀರವನ್ನು ಚಾಚಿ ಪ್ರಾರ್ಥನೆಯ ಭಂಗಿಯಲ್ಲಿ ಎದುರಾಳಿಯ ಮುಂದೆ ಕುಳಿತಿರುವಂತೆ ಭಾಸವಾಯಿತ್ತು. ತೊಟ್ಟಿಲು ತೂಗುವಂತೆ ಕಡ್ಡಿಯಂತಿರುವ ಶರೀರವನ್ನು ಗಾಳಿಯಲ್ಲಿ ಆಡಿಸುತ್ತಲೇ ವಿವಿಧ ಭಂಗಿಗಳಿಂದ ತನ್ನ ಸುರಕ್ಷತೆಗಾಗಿ ಸೆಣಸಲು ನಿಲ್ಲುತ್ತಿದ್ದ ರೀತಿ ಕುತೂಹಲಕಾರಿಯಾಗಿತ್ತು.
ಜೀವಗೋಳ ಸಮೃದ್ಧವಾಗಿರುವುದು ಮತ್ತು ಸುಂದರವಾಗಿರುವುದು ಅಲ್ಲಿ ಬದುಕುವ ಎಲ್ಲಾ ಜೀವಿಗಳ ನಡುವಿನ ಸಂಕೀರ್ಣ ಸಂಬಂಧ ಮತ್ತು ವೈವಿಧ್ಯತೆಯಿಂದ. ಪ್ರತಿಜೀವಿಯು ತನ್ನದೇ ಆದ ಮಹತ್ವ ಮತ್ತು ಪಾತ್ರ ಹೊಂದಿರುತ್ತದೆ. ಕೀಟಗಳ ಪ್ರಪಂಚ ತುಂಬಾ ರೋಚಕ, ವಿಸ್ಮಯ ಮತ್ತು ವೈವಿಧ್ಯತೆಯಿಂದ ಕೂಡಿದೆ.
ಪ್ರಾರ್ಥನಾ ಕೀಟ ನಮ್ಮ ಜನಪದದಲ್ಲಿ ಪೂಜನೀಯ ಸ್ಥಾನವನ್ನೆ ಪಡೆದುಕೊಂಡಿದೆ. ಅದು ಮನೆಗಳಲ್ಲಿ ಕಾಣಿಸಿಕೊಂಡರೆ ಆ ಮನೆಯಲ್ಲಿ ತೊಟ್ಟಿಲು ತೂಗುತ್ತದೆ ಅಥವಾ ಸದ್ಯದಲ್ಲೆ ಮಗು ಜನಿಸುತ್ತದೆ ಎನ್ನುವ ನಂಬಿಕೆ ಕೂಡ ಕೆಲವು ಕಡೆ ಪ್ರಚಲಿತದಲ್ಲಿದೆ. ನಂಬಿಕೆ ಏನೇ ಇದ್ದರೂ, ಅದು ತನ್ನ ಉದ್ದ ಮುಂಗಾಲುಗಳನ್ನು ಪ್ರಾರ್ಥ್ಥನೆಗೆ ಕುಳಿತಂತೆ ಮಡಚಿ ನಿಲ್ಲುವುದೆ ಇತರ ಸಣ್ಣ ಕೀಟಗಳನ್ನು ಬೇಟೆಯಾಡುವುದಕ್ಕೆ. ಆ ಕಾಲುಗಳಲ್ಲಿರುವ ಮುಳ್ಳಿನಂತಹ ರಚನೆಗಳು ತುಂಬಾ ಚೂಪಾಗಿದ್ದು ಬಲಿ ತಪ್ಪಿಸಿಕೊಳ್ಳದಂತೆ ಹಿಡಿಯಲು ಮತ್ತು ಬಾಯಿಗೆ ತುರುಕಲು ಅನುಕೂಲಕರವಾಗಿವೆ. ಅದರ ಶರೀರದ ಗಾತ್ರಕ್ಕೆ ಹೋಲಿಸಿದರೆ ದೊಡ್ಡ ಗಾತ್ರದ ಸಂಯುಕ್ತ ಕಣ್ಣುಗಳು ಪರಿಸರವನ್ನು ಸೂಕ್ಷ್ಮವಾಗಿ ಗಮನಿಸಿ ಯಾವುದಾದರು ಬಲಿ ಬೀಳುವುದೆ ಎಂದು ಗಮನಿಸುತ್ತಿರುತ್ತವೆ. ಮಳೆಗಾಲದಲ್ಲಿ ಶರೀರ ಬಣ್ಣವನ್ನು ಹಸಿರಾಗಿಯೂ, ಬೇಸಿಗೆಯಲ್ಲಿ ಒಣ ಕಡ್ಡಿಯಂತೆಯೂ ಬದಲಾಯಿಸಿಕೊಳ್ಳುವ ಇದು ಬಣ್ಣ ಬದಲಾಯಿಸುವಿಕೆಗೆ ಮತ್ತು ಅನುಕರಣೆಗೆ ಒಳ್ಳೆಯ ಉದಾಹರಣೆ.
-ಡಾ. ತೈಲೂರು ದೇವರಾಜ್