ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಸಾಹಿತ್ಯ ಪತ್ರಿಕೆ ನಡೆಸುವುದೇ ಒಂದು ಲಾಬಿ

Vishwanath S
Updated On : 22 Jun 2013, 12:23 pm

ಕಳೆದ ಭಾನುವಾರ ಸಾಪ್ತಾಹಿಕ ಪ್ರಭದಲ್ಲಿ ಪ್ರಕಟಗೊಂಡ 'ಸ್ವಕೃತ' ಎಂಬ ಸಾಹಿತ್ಯ ಪತ್ರಿಕೆಗಳ ಬಗೆಗಿನ ಬರಹ- ಸಾಹಿತ್ಯ ಪತ್ರಿಕೆಗಳ ಕುರಿತು ಒಂದು ಗಂಭೀರ ಆರೋಪ ಮಾಡಿದೆ. ವರ್ತಮಾನಕ್ಕೆ ಸ್ಪಂದಿಸದ ಮನೋಭಾವದಿಂದ ಅವು ಅಲ್ಪಾಯುಷಿಗಳಾಗುತ್ತಿವೆ ಎಂಬ ಫರ್ಮಾನು ಹೊರಡಿಸಿದೆ. ಒಂದು ಸಾಹಿತ್ಯ ಪತ್ರಿಕೆಯ ಸಂಪಾದಕನಾಗಿ ಇಂಥ ಹುರುಳಿಲ್ಲದ ಸಿನಿಕ ಬರಹಕ್ಕೂ ಉತ್ತರಿಸಬೇಕಾದ ಅನಿವಾರ್ಯತೆ ನನ್ನದಾಗಿದೆ. ಈ ಅವಕಾಶವನ್ನೊಂದು ಸಾಹಿತ್ಯ ಪತ್ರಿಕೆಗಳ ಬಗೆಗಿನ ಚರ್ಚೆಯಾಗಿ ರೂಪಿಸಲು ಬಯಸುತ್ತೇನೆ.
ಮೊದಲಿಗೆ ವರ್ತಮಾನಕ್ಕೆ ಸ್ಪಂದಿಸುವುದು ಎಂದರೆ, ಸಾಹಿತ್ಯ ಪತ್ರಿಕೆಗಳ ಸಂಚಿಕೆಗಳ ನಡುವಿನ ಅವಧಿ ಸಾಕಷ್ಟು ಸುದೀರ್ಘವಾದದ್ದು. ತಿಂಗಳು, ಎರಡು ತಿಂಗಳು ಅಥವಾ ಮೂರು ತಿಂಗಳ ನಿಯತತೆ ಹೊಂದಿರುವ ಪತ್ರಿಕೆಗಳು ವರ್ತಮಾನಕ್ಕೆ ಸ್ಪಂದಿಸುವ ಸ್ವರೂಪ ಭಿನ್ನವಾದದ್ದು ಹಾಗೂ ಬೇರೆಯದೇ ನೆಲೆಯದ್ದು. ಸದ್ಯದ ಆಗುಹೋಗುಗಳ ಬಗ್ಗೆ, ರೋಚಕ ಸಂಗತಿಗಳ ಬಗ್ಗೆ ಜನರ ಗಮನ ಸೆಳೆಯುವುದಕ್ಕೆ ದೊಡ್ಡ ಪತ್ರಿಕೆಗಳು, ಮೀಡಿಯಾಗಳು ಸದಾ ಸಿದ್ಧವಾದವುಗಳೇ. ಅದು ಅವುಗಳ ಗುಣ ಮತ್ತು ಅಗತ್ಯ- ದೋಷವೇನಲ್ಲ. ಅಂಥ ಪ್ರತಿಕ್ರಿಯೆಯನ್ನು ಸಾಹಿತ್ಯ ಪತ್ರಿಕೆಗಳಿಂದ ನಿರೀಕ್ಷಿಸುವುದು ಅಸಾಧು.
ದೊಡ್ಡ ದೊಡ್ಡ ಯುನಿವರ್ಸಿಟಿಗಳು, ಪುರಾತನ ಸಾಹಿತ್ಯ ಪರಿಷತ್ತು, ಸಾಹಿತ್ಯ ಅಕಾಡೆಮಿಗಳು ಮುಂತಾದ ಸಂಪನ್ಮೂಲ ಉಳ್ಳ, ಶಕ್ತ, ಸದೃಢ ಸಂಸ್ಥೆಗಳು ನಡೆಸಲಾರದೆ ಕೈಬಿಟ್ಟಿರುವ ಸಾಹಿತ್ಯಿಕ ಕಿರುಪತ್ರಿಕೆಗಳನ್ನು ಬೆರಳೆಣಿಕೆಯಷ್ಟು ಮಂದಿ ಒಂದು ಬದ್ಧತೆಯಿಂದ ಪ್ರಕಟಿಸುತ್ತಿದ್ದರೆ, ಅವುಗಳ ಬಗ್ಗೆ ಸಿನಿಕತನ ಯಾಕೆ? ಸಾಹಿತ್ಯ ಪತ್ರಿಕೆಯನ್ನು ನಡೆಸುವುದೇ ಒಂದು ಲಾಬಿ ಎಂದು ನಾನು ಭಾವಿಸುತ್ತೇನೆ. 'ಅಂದರಿಕೆ ಮಂಚಿವಾಳ್ಳು' (ಎಲ್ಲರಿಗೂ ಒಳ್ಳೆಯವನು) ಆಗಬೇಕಾದ ಅಗತ್ಯ ಅವುಗಳಿಗಿಲ್ಲ. ಉಳಿದ ಮಾಧ್ಯಮಗಳು ಸೃಷ್ಟಿಸುತ್ತಿರುವ ರೋಚಕತೆಗೆ ಎದುರಾಗಿ ಅವು ತಮ್ಮ ಪಾಡಿಗೆ ತಾವು ತಮ್ಮ ಪಾಲಿನ ಕೆಲಸವನ್ನು ಮಾಡುತ್ತಿವೆ. ಇಷ್ಟರ ಮೇಲೆ ಆಯಾ ಸಂಪಾದಕರು, ಅವರ ಸುತ್ತಲಿನ ಗುಂಪುಗಳಿಗಿರುವ ಬದ್ಧತೆ, ನಂಬಿಕೆ- ಇವುಗಳಿಗೆ ತಕ್ಕ ಹಾಗೆ ಆಯಾ ಪತ್ರಿಕೆಗಳು ಪ್ರಕಟವಾಗುತ್ತವೆ.
ಅದು ಅಪರಾಧವೇನಲ್ಲ. ಇತರ ಭಾಷೆಗಳಲ್ಲಿ ಕೆಲವು ಪ್ರಕಾಶನ ಸಂಸ್ಥೆಗಳೇ ಸಾಹಿತ್ಯ ಪತ್ರಿಕೆಗಳನ್ನು ಪ್ರಕಟಿಸುತ್ತವೆ. ಅವು ಕೆಲವು ಸಾವಿರ ಸಂಖ್ಯೆ ಪ್ರಸರಣ ಹೊಂದಿವೆ. ದುರದೃಷ್ಟವಶಾತ್ ನಮ್ಮಲ್ಲಿ ಅವು ಬೆಳೆಯಲಿಲ್ಲ.
ಜಾಹಿರಾತು ಯಾರು ಕೊಡುತ್ತಾರೆ ಅಂತ ಕೇಳಿದ್ದೀರಿ. ಅವು ನಮ್ಮ ಪಾಲಿನದೇನಲ್ಲ. ಕೊಡಬೇಕಾದ ಚಂದಾದಾರರು ಚಂದಾ ಕೊಟ್ಟರೆ ಅದೇ ಸಾಕು. ಕನ್ನಡಿಗರ ಔದಾರ್ಯ ಎಂದರೆ, ಒಂದು ಸಾವಿರ ಜನ ಚಂದಾದಾರರಲ್ಲಿ ಕೇವಲ ನೂರೈವತ್ತು ಜನ ತಮ್ಮ ಚಂದಾ ನವೀಕರಿಸುತ್ತಾರೆ. ಉಳಿದವರ್ಯಾರಿಗೂ ದುಡ್ಡು ಇಲ್ಲವೆಂದಲ್ಲ, ಕೊಡಬಾರದೆಂದೂ ಅಲ್ಲ, ಆದರೆ ಕೊಡಲ್ಲ. ಉಳಿದ ಎಂಬತ್ತು ಭಾಗ ಹಣ ಸಂಪಾದಕ ತನ್ನ ಜೇಬಿನಿಂದಲೋ, ಮತ್ತೊಬ್ಬರಿಗೆ ಕೈ ಒಡ್ಡಿಯೋ ತುಂಬಿಸಬೇಕು. ಕೋಟ್ಯಂತರ ಸರ್ಕಾರಿ ಹಣ ಪಡೆಯುವ ಸಾಹಿತ್ಯ ವಲಯ ಇಂಥ ಗಂಭೀರ ವಿಷಯದ ಕುರಿತು ಆಲೋಚಿಸುವ ದೊಡ್ಡ ಮನಸ್ಸು ಮಾಡುವುದಿಲ್ಲ.
ಸಂಪಾದಕ ಯಾವಾಗಲೂ ಮೊದಲ ಓದುಗನೇ. ಅಂಥ ಸಂಪಾದಕನನ್ನೇ ಮುಟ್ಟದ, ದಾಟದ ಬರಹ ಪತ್ರಿಕೆಯ ಓದುಗರನ್ನು ಎಂತು ಮುಟ್ಟೀತು? ಬರುವ ಬಹುಪಾಲು ಬರಹಗಳಲ್ಲಿ ಸಂಪಾದಕ ಎಷ್ಟೇ ಮುಕ್ತವಾಗಿ ಆಲೋಚಿಸಿ, ಲಾಬಿಗ್ರಸ್ತನಾಗದೇ ಇದ್ದರೂ, ಜೊಳ್ಳು ಕಳೆದು ಉಳಿಯುವುದು ಎಲ್ಲೋ ಕೆಲವು. ಚಟಕ್ಕೆ, ತೆವಲಿಗೆ ಬರೆಯುವ ಅನೇಕರ ಕೆಂಗಣ್ಣಿಗೆ, ಸಂಪಾದಕ ಗುರಿಯಾಗಬೇಕಾದ್ದು ಅವನಿಗೆ ಸಿಗುವ ಮೆಡಲು ಎಂದೇ ಭಾವಿಸುತ್ತೇನೆ.
ಒಳ್ಳೆಯ ಬರಹಕ್ಕೆ ಚಾತಕಪಕ್ಷಿಯ ಹಾಗೆ ಸಂಪಾದಕನೂ ಕಾಯುತ್ತಿರುತ್ತಾನೆ. ಆದರೆ, ಇವತ್ತು ಬೇರೆ ಬೇರೆ ಕಾರಣಗಳಿಗೆ ನಮ್ಮ ಲೇಖಕ ವಲಯ ಹಂಚಿಹೋಗಿದೆ. ಸಾಹಿತ್ಯೋದ್ಧಾರಕ್ಕೆ ದೊಡ್ಡ ಪತ್ರಿಕೆಗಳೂ ಪೈಪೋಟಿಗಿಳಿದಿರುವ ಕಾರಣ ನಮ್ಮ ಲೇಖಕರ ಮೊದಲ ಆದ್ಯತೆ ಅತ್ಯಂತ ಶೀಘ್ರವಾಗಿ ತಲುಪುವ ದೊಡ್ಡ ಪತ್ರಿಕೆಗಳೇ ಹೊರತು ಸಾಹಿತ್ಯ ಪತ್ರಿಕೆಗಳಲ್ಲ. ಜೊತೆಗೆ ಅವುಗಳಿಗಿರುವ ಗ್ಲ್ಯಾಮರು, ವರ್ಚಸ್ಸು  ಪಾಪ ಬಡಪಾಯಿ ಕಿರುಪತ್ರಿಕೆಗಳಿಗೆ ಎಲ್ಲಿಂದ ಬರಬೇಕು? ಹಾಗಾಗಿ ಇರುವ, ಚೆನ್ನಾಗಿ ಬರೆಯುವ ಒಂದು ಸಣ್ಣ ವಲಯದ ಲೇಖಕರ ಬರಹಕ್ಕೆ ಹೆಚ್ಚಿನ ಡಿಮ್ಯಾಂಡು. ಈ ವಿಷಯಕ್ಕೆ ಸಾಹಿತ್ಯ ಹಾಗೂ ದೊಡ್ಡ ಪತ್ರಿಕೆಗಳ ನಡುವೆ ಒಂದು ಸೂಕ್ಷ್ಮವಾದ ಪೈಪೋಟಿ ಇದೆ. ತಮ್ಮ ಬರಹಗಳು ದೊಡ್ಡ ಪತ್ರಿಕೆಗಳ ಅಗತ್ಯಕ್ಕೆ ತಕ್ಕ ಹಾಗೆ ರೆಕ್ಕೆ ಪುಕ್ಕ ಕತ್ತರಿಸಿಕೊಂಡು ಪ್ರಕಟಗೊಂಡರೂ ಒಪ್ಪಿಕೊಳ್ಳುವ ಅನಿವಾರ್ಯತೆ ಲೇಖಕರದೂ ಹೌದು. ಇವುಗಳ ಗಾತ್ರಕ್ಕೆ ಸರಿಹೊಂದದ ಬರಹಗಳು ಮಾತ್ರ ನಮ್ಮ ದಿಕ್ಕಿಗೆ ತಿರುಗುತ್ತವೆ.
ಇನ್ನು ಪ್ರತಿಕ್ರಿಯೆಗಳನ್ನು ಪ್ರಕಟಿಸುವ ಬಗ್ಗೆ. ಈ ಕಾಲಕ್ಕೆ ಬಹುಪಾಲು ಪ್ರತಿಕ್ರಿಯೆಗಳು 'ಚೆನ್ನಾಗಿವೆ, ಅಭಿನಂದನೆಗಳು' ಎಂಬ ಫೋನು, ಎಸ್ಸೆಮ್ಮೆಸ್ಸುಗಳಲ್ಲೇ ಮುಗಿಯುತ್ತವೆ. ಬರೆದು ಪ್ರತಿಕ್ರಿಯೆ ವ್ಯಕ್ತಪಡಿಸುವವರು ಕಡಿಮೆ. ಹಾಗೆ ಭಿನ್ನವಾಗಿ ಬರೆದದ್ದಕ್ಕೆ ಪ್ರಕಟಿಸಲು ಯಾವ ಸಂಪಾದಕರಿಗೂ, ಹಿಂಜರಿಕೆ ಇಲ್ಲ.
ಇನ್ನು ಸಾಹಿತ್ಯ ಲೋಕದ ಧೀಮಂತರಾದ ಅಡಿಗ, ಅನಂತಮೂರ್ತಿ, ಸುಬ್ಬಣ್ಣ ಮೊದಲಾದವರು ನಡೆಸಿದ ಪತ್ರಿಕೆಗಳು ಈಗಿಲ್ಲ ಅನ್ನುವ ಹಳಹಳಿಕೆಯ ಮಾತುಗಳು. ಯಾವ ಕಾಲಕ್ಕೂ ಹಿಂದಿರುವುದು ಚೆನ್ನಾಗಿಯೇ ಕಾಣುತ್ತದೆ. ಅವು ತಮ್ಮ ತಮ್ಮ ಕಾಲದ ಕೆಲಸಗಳನ್ನು ನಿರ್ವಹಿಸಿ, ನಿರ್ಗಮಿಸಿವೆ. ಅವು ಬದುಕಿದ್ದು, ನಡೆದಿದ್ದು ಆಯಾ ಧೀಮಂತರ ಕಾರಣಕ್ಕಷ್ಟೇ ಅಲ್ಲ. ಅದಕ್ಕೆ ಹೆಗಲು ಕೊಟ್ಟವರ, ದುಡಿದವರ ಪಡೆ ದೊಡ್ಡದೇ ಇತ್ತು. ನಮ್ಮ ಡೆಮಾಕ್ರಸಿಯ ದೊಡ್ಡ ಪವಾಡ ಎಂದರೆ, ಯಾವ ಅಕ್ಷರಮೋಹಿ ಸಾಮಾನ್ಯನೂ ಒಂದು ಪತ್ರಿಕೆ ನಡೆಸಿ, ತನ್ನ ದನಿಯನ್ನು ಸಮುದಾಯಕ್ಕೆ ತಲುಪಿಸಬಹುದು. ಅಂಥದ್ದು ನಮ್ಮಂಥ ಅನಾಮಿಕರ ಕಿರುಪತ್ರಿಕೆಯ ಹಿಂದಿರುವ ಆಶಯ ಹಾಗೂ ನಂಬಿಕೆ.
ಜನಪ್ರಿಯವಾದುದೆಲ್ಲದರ ಬಗ್ಗೆಯೂ ಅನುಮಾನ ಪಡಬೇಕಾದ್ದೇ ಸಾಹಿತ್ಯ ಪತ್ರಿಕೆಗಳು. ದೊಡ್ಡ ಮಾಧ್ಯಮಗಳು ತಮಗೆ ಬೇಕಾದ ಹಾಗೆ ಬರೆಯುವ, ನಿರೂಪಿಸುವ ಸಂಗತಿಗಳನ್ನು ಕುರಿತು ಟೀಕಿಸಬೇಕಾದ್ದು, ಚರ್ಚಿಸಬೇಕಾದ್ದು, ವಿಮರ್ಶೆಗೊಡ್ಡಬೇಕಾದ್ದು ಕಿರುಪತ್ರಿಕೆಗಳೇ. ಅದಕ್ಕೇ ಅವುಗಳನ್ನು ಪರ್ಯಾಯ ಮಾಧ್ಯಮ ಅಂತ ಗುರುತಿಸುತ್ತಾರೆ.
ಇನ್ನು ಚಿಂತಕರ ಚಾವಡಿ ಪಾರುಪತ್ಯ ಕುರಿತು- ಒಂದು ಆರೋಗ್ಯಕರ ಸಾಹಿತ್ಯ ವಾತಾವರಣದಲ್ಲಿ ವಿಚಾರವೊಂದನ್ನು ಒಪ್ಪುವ, ಹಾಗೂ ನಿರಾಕರಿಸುವ ಗುಂಪುಗಳು ಇದ್ದೇ ಇರುತ್ತವೆ. ಅವುಗಳ ಅಗತ್ಯಕ್ಕೆ ತಕ್ಕ ಹಾಗೆ ಆಯಾ ಗುಂಪಿನ ಸಾಹಿತ್ಯ ಪತ್ರಿಕೆಗಳು ಪ್ರಕಟಗೊಂಡಿರುವ ಇತಿಹಾಸ ಇದೆ. ಹಾಗಾಗಿ ಚಿಂತಕರ ಚಾವಡಿಯ ಬಗ್ಗೆ ದುಃಖಿಸುವ ಅಗತ್ಯವಿಲ್ಲ.
ಹೊಸ ಬರಹಗಾರರಿಗೆ ಸಾಹಿತ್ಯ ಪತ್ರಿಕೆಗಳೇ ಮೊದಲ ಮೆಟ್ಟಿಲು. ಶಾಶ್ವತ ಉದಯೋನ್ಮುಖರ ಕೆಲವು ಪ್ರಯತ್ನಗಳನ್ನು ಬಿಟ್ಟರೆ, ಬರೆಯಬಹುದಾದ ಪ್ರತಿಭಾವಂತರನ್ನು ಕಿರುಪತ್ರಿಕೆಗಳು ಪ್ರೋತ್ಸಾಹಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬಂದಿದೆ. ಇವುಗಳ ಬಗ್ಗೆ ಜಾಣಕುರುಡು ಅಗತ್ಯವಿಲ್ಲ.


-ಡಿ.ವಿ. ಪ್ರಹ್ಲಾದ್ ಸಂಪಾದಕ, ಸಂಚಯ
sanchaya.sahityapatrike@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement