ಹುತ್ತದ ಹಾಡು
ಜೂನ್ 9ರಂದು ಸಂಜೆ ಬೆಂಗಳೂರಿನ ಕೆ.ಎಚ್. ಕಲಾಸೌಧದಲ್ಲಿ ನೂಕುನುಗ್ಗಲು. ಟಿಕೆಟ್ಗಾಗಿ ಪರದಾಟ. ತಾಮುಂದು ನಾಮುಂದು ಎಂಬ ಅವಸರ. ಅಲ್ಲೇನು ಸಿನಿಮಾ ಪ್ರದರ್ಶನ ಇರಲಿಲ್ಲ. ಅದೇನು ಸೆಲೆಬ್ರಿಟಿಗಳ ಶೋನೂ ಆಗಿರಲಿಲ್ಲ. 'ಅಂತರಂಗ' ತಂಡವು ಟಿ.ಪಿ. ಕೈಲಾಸಂ ಅವರ 'ಹುತ್ತದಲ್ಲಿ ಹುತ್ತ' ನಾಟಕವನ್ನು ಏರ್ಪಡಿಸಿತ್ತು.
ಮಾಲ್ಗಳಲ್ಲಿ 3ಡಿ ಸಿನಿಮಾಗಳು ಮೇಳೈಸುತ್ತಿರುವ ಈ ಯುಗದಲ್ಲೂ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡ ಈ ನಾಟಕಕ್ಕೆ ಅದ್ಭುತ ಪ್ರತಿಕ್ರಿಯೆ ದೊರಕಿದ್ದು ಕೈಲಾಸಂ ಅವರ ಮೋಡಿಯ ಕಾರಣಕ್ಕಾಗಿ.
ಒಟ್ಟು ಆರು ಪಾತ್ರ ಪಾತ್ರಗಳು. ಎಲ್ಲವೂ ಇಂಗ್ಲಿಷ್ಗನ್ನಡದ ಸರಹದ್ದಿನಲ್ಲೇ ಅಭಿನಯಿಸಿದವು. ನಿರ್ದೇಶಕ ಡಾ. ಬಿ.ವಿ. ರಾಜಾರಾಂ ಕರ್ತೃವಿಗೆ ಚ್ಯುತಿ ಬಾರದಂತೆ ಮೂಲ ಏಳು ಪಾತ್ರಗಳನ್ನು ಆರಕ್ಕೆ ಇಳಿಸಿ ರಂಗಕ್ಕೆ ಹೊಂದಿಸಿದ್ದು ನಾಟಕದ 53ನೇ ಯಶಸ್ಸಿನ ಹೆಜ್ಜೆಯಾಯಿತು.
ಇಂಗ್ಲಿಷ್ ಮತ್ತು ಕನ್ನಡ ನಾಟಕಗಳೆರಡನ್ನೂ ನೋಡುವ ಈಗಿನ ಜನರೇಷನ್ಗೆ ಒಂದೇ ನಾಟಕದಲ್ಲೇ ಇವೆರಡು ಭಾಷೆಯನ್ನಲ್ಲದೇ ಸಂಸ್ಕೃತವನ್ನೂ ಸ್ಫುರಿಸಿದ್ದಾರೆ. ಸಾಮಾಜಿಕ ನಾಟಕದಲ್ಲೂ ಪೌರಾಣಿಕ ಪಾತ್ರಗಳ ಛಾಯೆ ತಂದಿರುವುದು ಇಲ್ಲಿನ ವಿಶೇಷ.
ಕನ್ನಡದಷ್ಟೇ ಬ್ರಿಟಿಷ್ ಇಂಗ್ಲಿಷನ್ನೂ ಲೀಲಾಜಾಲವಾಗಿ ಹರಿಯಬಿಡುವ ಕಪ್ಪಣ್ಣನ ಪಾತ್ರದಲ್ಲಿ ವೈ.ವಿ. ಗುಂಡೂರಾವ್ ಮಿಂಚಿದ್ದಾರೆ. ಆಂಗಿಕ ಅಭಿನಯ ಮತ್ತು ಸಂಭಾಷಣಾ ಶೈಲಿ ಮೆಚ್ಚುಗೆಯಾಗುತ್ತದೆ. ಸುಬ್ಬಮ್ಮನ ಪಾತ್ರಧಾರಿಯಾಗಿ ರಂಗನಾಥರಾವ್ ಆಗಿನ ಕಾಲದ ಧೀರ ನಡೆಯ ಅಜ್ಜಿಯ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅಲ್ಲಲ್ಲಿ ಅವರ ಸಂಭಾಷಣೆಗಳು ನಗೆಯನ್ನುಕ್ಕಿಸುತ್ತವೆ. 'ಪ್ರಾರಬ್ಧವೇ, ಇಂಗ್ಲಿಷ್ ಮಾತಾಡ್ಬೇಡಾ ನಾನೀಗ ಮಡೀಲಿದ್ದೀನಿ', 'ಹಾಳಾದೋನೇ ಎಷ್ಟು ಜ್ಞಾಪಕ ಶಕ್ತಿಯೋ ನಿಂದು' ಎಂಬ ಸಂಭಾಷಣೆಗಳು ಕ್ಲಿಕ್ಕಾಗಿವೆ. ಈ ಸುಬ್ಬಮ್ಮನ ಪಾತ್ರವನ್ನು ಸತತವಾಗಿ ಮಾಡಿದ ಎಸ್.ಕೆ. ಮಾಧವರಾವ್ರನ್ನು ತಂಡ ಸ್ಮರಿಸಿತು. ಅನಾರೋಗ್ಯವನ್ನೂ ಲೆಕ್ಕಿಸದೆ ಐವತ್ತನೇ ಪ್ರದರ್ಶನದಲ್ಲಿ ಅಭಿನಯಿಸಿದ್ದೂ ಅವರ ರಂಗಪ್ರೀತಿಗೆ ಸಾಕ್ಷಿ.
ಹಿರಣ್ಣಯ್ಯನ ಪಾತ್ರಧಾರಿಯಾಗಿ ಎಚ್.ವಿ. ನಟರಾಜ್ ಇಂಗ್ಲಿಷ್ ಬಾರದವರಂತೆ ನಟಿಸಿ, ಪಾತ್ರಕ್ಕೆ ತೂಕ ತಂದಿದ್ದಾರೆ. ಬೋರನಾಗಿ ಸುರೇಶ್ ಅಭಿನಯಿಸಿದ್ದು, ಅವರ ಗೂನು ಬೆನ್ನು ನಡಿಗೆಯ ವೈಖರಿ, ಆಗಾಗ ಹಿಂದಿನ ಘಟನೆಗಳ ಮೆಲುಕು ಹಾಕುವಿಕೆ ಪ್ರೇಕ್ಷಕನಿಗೆ ತುಂಬಾ ಹಿಡಿಸುತ್ತದೆ. ಈ ಪಾತ್ರಕ್ಕಾಗಿಯೇ ಬರೆದ ಸಂಭಾಷಣೆ 'ಮೇಲಿನವರು ನಿನ್ನ ಬರುವಿಕೆಯನ್ನು ಮತ್ತು ನಿನ್ನಿಂದ ಸೇವೆಯನ್ನು ನಿರೀಕ್ಷಿಸುತ್ತಿದ್ದಾರೆ' ಎಂಬುದು ಜೀತ ಪದ್ಧತಿಯನ್ನು ಒಪ್ಪುವವರಿಗೆ ನೇರವಾಗಿ ಚುಚ್ಚುವಂತಿದೆ.
ಸರೋಜದೇವಿಯಾಗಿ ಅರ್ಚನಾ ಶ್ಯಾಂ ಜೋಡಿದಾರ್ ರಾಮರಾವ್ಗೆ ಟೈಪಿಸ್ಟ್ ಕಂ ಸ್ಟೆನೋ ಆಗಿ ಬಂದು ಜೋಡಿದಾರರ ಮನೆಯನ್ನು ಅಲುಗಾಡಿಸುವ ಪಾತ್ರ ವಿಶೇಷವಾಗಿದೆ. ಕೆಲಸಕ್ಕೆ ಸೇರಿದ ಹೊಸತರಲ್ಲಿ ಒಂದು ಥರ, ನಂತರ ಮತ್ತೊಂದು ಥರ, ಕ್ಲೈಮ್ಯಾಕ್ಸ್ನಲ್ಲಿ ಇನ್ನೊಂದು ಥರದಲ್ಲಿ ಅಭಿನಯಿಸಿ ಇಷ್ಟವಾಗುತ್ತಾರೆ. ಜೋಡಿದಾರ್ ರಾಮರಾವ್ ಪಾತ್ರಧಾರಿ ರಾಂ ಮಂಜೋನಾಥ್ ಪೆದ್ದು ಪೆದ್ದಾಗಿಯೇ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಪಾತ್ರದ ಒಳಗನ್ನು ಅರಿತು ಮುಂದೋಡುತ್ತಾರೆ. ಅವರ ನೋಬೆಲ್ ಪಾರಿತೋಷಕದ ಕನಸನ್ನು ನನಸು ಮಾಡಿಕೊಳ್ಳುವ ಒಂದೇ ಗುರಿಯಲ್ಲಿ ಎಷ್ಟೆಲ್ಲಾ ಅವಾಂತರಗಳು ಘಟಿಸುವಂತೆ ಮಾಡುವ ಪಾತ್ರಕ್ಕೆ ಹೊಂದಿಕೊಂಡಿದ್ದಾರೆ.
ಷೇಕ್ಸ್ಪಿಯರ್ ನಾಟಕದ ಸಂಭಾಷಣೆಯನ್ನು ಪರಿಚಯಿಸುತ್ತಾ 'ಜೀವನ ಎಂದರೆ ನಾಟಕದ ಸ್ಟೇಜ್ ಅಲ್ಲ, ಸ್ಟೇಜ್ನಲ್ಲಿ ಸುಸ್ತಾದಾಗ ವಿರಮಿಸೋಕೆ ಸೈಡ್ವಿಂಗ್ ಇರುತ್ತೆ, ಇಲ್ಲಿ ಇರೋಲ್ಲ' ಎಂದು ನಾಟಕದ ಪಾತ್ರದಿಂದ ಹೇಳಿಸುವ ಕೈಲಾಸಂ, ಒಂದು ಸಂಸಾರದ ಸಣ್ಣ ಎಳೆಯನ್ನು ತಮ್ಮ ಇಂಗ್ಲಿಷ್ ಮಿಶ್ರ ಸಂಭಾಷಣೆಗಳಿಂದ ಪೋಣಿಸಿ ದೃಶ್ಯಗಳನ್ನು ರೂಪಿಸಿ ನಗೆಯ ಲೇಪ ಹಚ್ಚಿ ಎತ್ತರಕ್ಕೇರುತ್ತಾರೆ. ಎರಡು ದೃಶ್ಯಗಳನ್ನು ಒಂದೇ ರಂಗದ ಮೇಲೆ ವಿಭಜಿಸಿ, ಎರಡು ದೃಶ್ಯಗಳನ್ನು ಏಕ ಕಾಲಕ್ಕೆ ಅಭಿನಯಿಸುತ್ತಾ, ಸಂಭಾಷಿಸುತ್ತಾ ನಡೆಸುವ ಪ್ರಕ್ರಿಯೆ ಈಗಿನ 'ಪ್ಯಾರ್ಲೆಲ್ ಎಡಿಟಿಂಗ್' ತಂತ್ರಜ್ಞಾನಕ್ಕೆ ಹೊಂದಿಕೆಯಾಗುತ್ತೆ ಎಂದರೆ ಅವರ ಬುದ್ಧಿಶಕ್ತಿಗೆ ಎರಡು ಸಲಾಂ.
ಅರ್ಚನಾ ಶ್ಯಾಂ, ಸುರೇಶ್ ಮತ್ತು ಎಚ್.ವಿ. ನಟರಾಜ್ ನಿರಂತರವಾಗಿ ಈ ನಾಟಕದ ಎಲ್ಲಾ 53 ಪ್ರಯೋಗಗಳಲ್ಲೂ ಅಭಿನಯಿಸಿದವರು. ವಿಜಯ ಬೆಣಚ ಅವರ ರಂಗಸಜ್ಜಿಕೆ, ಕನ್ನರ ಪಾಡಿ ರಾಮಕೃಷ್ಣ ಅವರ ಪ್ರಸಾಧನ, ರುದ್ರಯ್ಯ ಅವರ ಬೆಳಕು ದೃಶ್ಯಗಳಿಗೆ ಪೂರಕ. ಈ ನಾಟಕದ ಯಶಸ್ಸಿಗೆ ಪ್ರಮುಖವಾಗಿ ರಂಗದ ಹಿಂದೆಯೇ ನಿಂತು ದುಡಿದವರು ಅಂಕಲ್ ಶ್ಯಾಂ.
-ಸಂಕೇತ್ ಗುರುದತ್ತ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.