ಕನ್ನಡ ಪ್ರಜ್ಞೆಯ ಕೊಂಕಣಿ ಕತೆಗಳು
ಸಾಮಾನ್ಯವಾಗಿ ಕೊಂಕಣಿಗರೆಂದರೆ ಗೌಡಸಾರಸ್ವತ ಬ್ರಾಹ್ಮಣರು ಎನ್ನುವ ಕಲ್ಪನೆ ಇದೆ. ಕನ್ನಡಿಗರೆಂದರೆ ಅದು ಜಾತಿ ಸೂಚಕವಲ್ಲ. ಹಾಗೆಯೇ ಕೊಂಕಣಿಗರೆಂದರೆ ಅದೂ ಜಾತಿಸೂಚಕ ಅಲ್ಲ. ಈ ಗೌಡಸಾರಸ್ವತ ಬ್ರಾಹ್ಮಣರಲ್ಲದೆ ಕ್ರೈಸ್ತರು ದೊಡ್ಡ ಸಂಖ್ಯೆಯಲ್ಲಿ ಕೊಂಕಣಿ ಮಾತನಾಡುತ್ತಾರೆ. ಅವರಲ್ಲದೆ ದೈವಜ್ಞ ಬ್ರಾಹ್ಮಣರಲ್ಲಿಯೂ ಒಂದು ವರ್ಗದವರು ಕೊಂಕಣಿ ಮಾತನಾಡುತ್ತಾರೆ. ವಾಣಿಗಳು, ಸೇರೆಗಾರರು, ಕಾರವಾರದ ಕೊಂಕಣ ಮರಾಠರು, ಕೊಮಾರಪಂತರು, ಖಾರ್ವಿಗಳು ಮೊದಲಾದವರೂ ಕೊಂಕಣಿ ಮಾತೃಭಾಷೆಯವರು. ಈ ಕೊಂಕಣಿ ಭಾಷಿಕರು ಕರ್ನಾಟಕ, ಗೋವಾ, ಕೇರಳ ಮತ್ತು ಮಹಾರಾಷ್ಟ್ರಗಳಲ್ಲಿ ಹರಡಿಕೊಂಡಿದ್ದಾರೆ. ಕೊಂಕಣಿ ಭಾಷಿಕರಿಗಿರುವ ಅನುಭವ ದ್ರವ್ಯದ ವಿಸ್ತಾರವನ್ನು ಸೂಚಿಸುವುದಕ್ಕಾಗಿ ಮಾತ್ರ ಈ ಉಲ್ಲೇಖ.
ಕೊಂಕಣಿ ಸಾಹಿತ್ಯವೆಂದರೆ ಈ ಎಲ್ಲ ಜನಸಮುದಾಯದ ಬದುಕಿನ ಪ್ರತಿಬಿಂಬ. ಬೇರೆಬೇರೆ ಲಿಪಿಯಲ್ಲಿ ಅವರು ಸಾಹಿತ್ಯ ರಚಿಸಿದರೂ ಆ ಸಾಹಿತ್ಯದ ಆತ್ಮ ಮಾತ್ರ ಒಂದೇ. ಉಳಿದ ಭಾರತೀಯ ಸಾಹಿತ್ಯಕ್ಕೆ ಸರಿ ಎನಿಸುವಷ್ಟು ವೈವಿಧ್ಯಮಯವಾದ ಸಾಹಿತ್ಯ ಕೊಂಕಣಿಯಲ್ಲೂ ರಚನೆಯಾಗಿದೆ.
'ಕೊಂಕಣಿ ಭಾಸ ಆನಿ ಸಂಸ್ಕೃತಿ ಪ್ರತಿಷ್ಠಾನ'ವು 'ಆಧುನಿಕ ಕೊಂಕಣಿ ಕತೆಗಳು' ಎಂದು ಕೊಂಕಣಿಯ ವಿವಿಧ ಲೇಖಕರ 24 ಕತೆಗಳನ್ನು ಇಲ್ಲಿ ಅನುವಾದಿಸಿ ಕೊಟ್ಟಿದೆ. ಡಾ.ಗೀತಾ ಶೆಣೈ ಇದರ ಸಂಪಾದಕರು. ಇದೊಂದು ಪ್ರಾತಿನಿಧಿಕ ಸಂಕಲನವಾಗುವ ಹಾಗೆ ಎಲ್ಲ ಭಾಗದವರ ಕತೆಗಳನ್ನು ಅಡಕಗೊಳಿಸಿದ್ದಾರೆ.
ಶೆಣೈ ಗೋಂಯಬಾಬ (ವಾಮನ ರಘುನಾಥ ವರ್ದೆ ವಾಲವಲೀಕರ) ಕೊಂಕಣಿ ನವೋದಯ ಸಾಹಿತ್ಯದ ಆದ್ಯರು. ಈ ಸಂಕಲನದ ಮೊದಲ ಕತೆ ಅವರದೇ. 'ನನ್ನ ಅಮ್ಮ ಎಲ್ಲಿ ಹೋದಳು' ಆಧುನಿಕ ಕೊಂಕಣಿ ಸಾಹಿತ್ಯದ ಮೊದಲ ಕತೆ ಎಂದು ಪರಿಗಣಿತವಾಗಿದೆ. ಐದು ವರ್ಷದ ಪುಟ್ಟ ಪೋರನ ತಾಯಿ ಆಕಸ್ಮಿಕವಾಗಿ ಸತ್ತುಹೋಗುತ್ತಾಳೆ. ಸಾವೆಂದರೇನು ಎಂಬುದನ್ನು ಅರಿಯಲಾಗದ ಈ ಬಾಲಕ ತಾಯಿಯನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳುತ್ತ, ಆಕೆಯನ್ನು ಮತ್ತೆಮತ್ತೆ ಪಡೆದುಕೊಳ್ಳಬೇಕೆಂಬ ಆರ್ತತೆಯಲ್ಲಿ ಅನ್ನ ನೀರು ತೊರೆದು ತಾನೂ ಅವಳಿರುವಲ್ಲಿಗೇ ತೆರಳುವ ಚಿತ್ರಣ ಕರುಳು ಕಿವುಚುವಂಥದ್ದು. ಭಕ್ತನೊಬ್ಬ ನಿರ್ಗುಣ ನಿರಾಕಾರ ದೇವರನ್ನು ಸಾಕ್ಷಾತ್ಕರಿಸಿಕೊಳ್ಳುವ ಅಮಾಯಕ ಮುಗ್ಧತೆಯನ್ನು ಇದು ಹೋಲುತ್ತದೆ. ಕತೆಯ ಕೊನೆಯಲ್ಲಿ ಭಗವದ್ಗೀತೆಯಲ್ಲಿ ಕೃಷ್ಣ ಅರ್ಜುನನಿಗೆ ಹೇಳಿದ ಮಾತನ್ನು ಉಲ್ಲೇಖಿಸಿರುವುದು ಇದನ್ನು ಸಮರ್ಥಿಸುತ್ತದೆ. ಗೋಂಯಬಾಬ ಈ ಕತೆಯ ಮೂಲಕ ಕೊಂಕಣಿ ಕತೆಗಳಿಗೆ ಹೊಸ ದಿಕ್ಕನ್ನು ನಿರ್ದೇಶಿಸಿದ್ದಾರೆ.
ಇನ್ನೊಂದು ಕತೆ ಗಜಾನನ ರಘುನಾಥ ಜೋಗ ಅವರ 'ರುದ್ರ'. ಬಾಲ ವಿಧವೆಯೊಬ್ಬಳ ಕತೆ ಇದು. ಬಾಯೋಭಟನಿ ಬುದ್ಧಿವಂತೆ, ಚತುರೆ. ಆಕೆ ಈ ಸಮಾಜದಲ್ಲಿ ಅನುಭವಿಸುವ ವೇದನೆಯನ್ನು ಅತ್ಯಂತ ಸಂಯಮದಿಂದ ಜೋಗ ಚಿತ್ರಿಸಿದ್ದಾರೆ. ಸಂಪ್ರದಾಯವು ಎಳೆಯ ಬದುಕನ್ನು ಹೇಗೆ ದಮನಿಸಿತು ಎಂಬುದನ್ನು ಕತೆಯು ತಣ್ಣಗೆ ಹೇಳುತ್ತದೆ. ಬಾಯೋ ಭಟನಿ ಇಷ್ಟಪಟ್ಟಿದ್ದರೆ ದತ್ತುಭಟ್ಟನ ಜೊತೆ ಸೇರಿ ಸಂಸಾರ ಸುಖವನ್ನು ಅನುಭವಿಸಬಹುದಿತ್ತು. ಆದರೆ ಬ್ರಹ್ಮ ದೇವಾಲಯದಲ್ಲಿ ಕೈ ಹಿಡಿದ ಆತನ ಕೆನ್ನೆಗೆ ಆಕೆ ಹೊಡೆದುಬಿಡುತ್ತಾಳೆ. ದತ್ತು ಭಟ್ಟ ಹೋಗಿ ಬಿಟ್ಟ. ಮತ್ತೆಂದೂ ಅವಳ ಬಳಿ ಬರಲಿಲ್ಲ. ಪಶ್ಚಾತ್ತಾಪದಿಂದ ಆತ ಶುದ್ಧನಾದ. ಗುಡಿಯಲ್ಲಿಯ ಶುದ್ಧತೆಯನ್ನೂ ಕಾಯ್ದುಕೊಂಡ. ಆದರೆ ಬಾಯೋಭಟನಿಯ ಬದುಕು ಮಾತ್ರ ಕಿತ್ತು ನೆಟ್ಟ ತೆಂಗಿನ ಮರದಂತೆ ಬಾಡುತ್ತಲೇ ಹೋಯಿತು. ದತ್ತುಭಟ್ಟನ ಕೆನ್ನೆಗೆ ಹೊಡೆದದ್ದು ಅಪ್ರಯತ್ನಪೂರ್ವಕವಾದದ್ದು, ಅವಳ ಸಂಸ್ಕಾರದಿಂದ ಬಂದ ಪ್ರೇರಣೆಯಿಂದ ಘಟಿಸಿದ್ದು. ಆದರೆ ಅವಳ ಅಂತರ್ಯದಲ್ಲಿ ಮಾತ್ರ ದತ್ತುಭಟ್ಟನ ಜೊತೆ ನನ್ನ ಮದುವೆಯಾಗಿದ್ದರೆ ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುತ್ತಲೇ ಇರುತ್ತದೆ. ಸಂಪ್ರದಾಯವನ್ನು ಮೀರಲಾಗದ ಅಸಹಾಯಕತೆ ಇಳಿವಯಸ್ಸಿನಲ್ಲಿ ನೆನಪುಗಳಾಗಿ ಅವಳನ್ನು ಕಾಡಿದೆ.
ಅದೇ ರೀತಿ ಕಿಶೂ ಬಾರ್ಕೂರ್ ಬರೆದ 'ಪಿರೇರಿಯ ಪುತ್ರಿಯರು' ಕತೆ. ಬಾರ್ಕೂರ್ ಅವರು ಕುಶಲ ಕಥನಕಾರರು. ಒಬ್ಬ ಹುಡುಗನ ಯವ್ವನೋದಯದ ಕಲ್ಪನೆಗಳನ್ನು ಪೆದ್ರು ಎಂಬ ಬಾಲಕ ಪಿರೇರಿಯ ಪುತ್ರಿಯರ ಬಗ್ಗೆ ಕನಸು ಕಾಣುವ ರೀತಿಯಲ್ಲಿ ವರ್ಣಿಸಿದ್ದಾರೆ. ಅವರದೇ ಇನ್ನೊಂದು ಕತೆ 'ಅಪ್ಪನ ಸೈಕಲ್' ಕೂಡ ಇದರಲ್ಲಿದೆ. ಕಥಾವಸ್ತುವಿನ ನಿರ್ವಹಣೆಯಲ್ಲಿ ಬಾರ್ಕೂರ್ ಎತ್ತಿದ ಕೈ.
ಎಡ್ವಿನ್ ಜೆ.ಎಫ್.ಡಿಸೋಜಾ ಅವರ ಬಣ್ಣದ ಕಡ್ಡಿಗಳು, ಕೆಂಬೆರಳ್ಳಿ ಮತ್ತು ಪ್ರಿಯ ಸಾಂತಾಕ್ಲೊಸ್ ಎಂಬ ಮೂರು ಕತೆಗಳು ಈ ಸಂಗ್ರಹದಲ್ಲಿವೆ. ನಗರ ಪ್ರಜ್ಞೆಯ ಪಾತ್ರಗಳು ಇವರ ಕತೆಗಳಲ್ಲಿವೆ. 'ಬಣ್ಣದ ಕಡ್ಡಿಗಳು' ಕತೆಯಲ್ಲಿ ಬಡ ಕ್ರಿಶ್ಚಿಯನ್ ಕೂಲಿಕಾರ್ಮಿಕ ದಂಪತಿ ತಮ್ಮ ಮಗನನ್ನು ಆಂಗ್ಲ ಮಾಧ್ಯಮದ ಶಾಲೆಯಲ್ಲಿ ಓದಲು ಸೇರಿಸುತ್ತಾರೆ. ಬುದ್ಧಿವಂತನಾದ ಅವನ ಬಗ್ಗೆ ಮೇಲ್ವರ್ಗದ ಮಕ್ಕಳಲ್ಲಿ ಅಸೂಯೆ. ಶಿಕ್ಷಕಿ ಅವನಿಗೆ ಬಣ್ಣದ ಕಡ್ಡಿಯನ್ನು ಕೊಟ್ಟಿದ್ದು, ವೆರಿಗುಡ್ ಎಂದು ಹೇಳಿದ್ದು ಬಾಲಕನಲ್ಲಿ ಹೆಮ್ಮೆ ಮೂಡಿಸಿದೆ. ಆ ಮಕ್ಕಳೊಂದಿಗೆ ತನ್ನ ಅಪ್ಪ ಲಾರಿಯಿಂದ ಪೈಪುಗಳನ್ನು ಇಳಿಸುವುದನ್ನು ನೋಡುವುದಕ್ಕೆ ಹೋಗುತ್ತಾನೆ. ತನ್ನನ್ನು ಟೀಕಿಸಿದವನ ಬಾಯಿ ಮುಚ್ಚಿಸಲು ತನ್ನ ತಂದೆ ತಾಯಿಯ ಹೆಸರನ್ನು ಪೇರಿಸಿಟ್ಟ ಪೈಪುಗಳ ಮೇಲೆ ಎತ್ತರದಲ್ಲಿ ಬರೆಯಲು ಹತ್ತಿದ ಅವನು ಕಾಲುಜಾರಿ ಬಿದ್ದು ಸಾಯುತ್ತಾನೆ. ಮೇಲ್ವರ್ಗದವರ ಅಸೂಯೆಯನ್ನು, ಬಡವರ ಅಸಹಾಯಕತೆಯನ್ನು ಇದರಲ್ಲಿ ತೀವ್ರವಾಗಿ ಚಿತ್ರಿಸಲಾಗಿದೆ.
ವರ್ಗಸಂಘರ್ಷ, ಜಾತಿ ಸಂಘರ್ಷ, ಕಂದಾಚಾರಗಳ ವಿರುದ್ಧದ ಸಂಘರ್ಷ ಹೀಗೆ ಸರ್ವಗ್ರಾಹಿಯಾಗುವ ಇಲ್ಲಿಯ ಕತೆಗಳು ಕನ್ನಡ ಪ್ರಜ್ಞೆಯನ್ನು ಹೊಂದಿರುವುದು ವಿಶೇಷ. ಈ ಅನುವಾದಿತ ಕತೆಗಳನ್ನು ಓದುತ್ತಿದ್ದರೆ ಮೂಲ ಕನ್ನಡದ ಕತೆಗಳನ್ನೇ ಓದುತ್ತಿರುವಂತೆ ತೋರುತ್ತದೆ. ಇದಕ್ಕೆ ಕಾರಣ ಹೆಚ್ಚಿನ ಕೊಂಕಣಿಗರು ಕನ್ನಡದ ಮಣ್ಣಿನಲ್ಲಿಯೇ ಬೆಳೆದವರಾಗಿರುವುದು. ಅನುವಾದಗಳು ಎರಡು ಸಂಸ್ಕೃತಿಗಳನ್ನು ಅರಿಯುವುದಕ್ಕೆ ಅನುವು ಮಾಡಿಕೊಡುತ್ತವೆ ಎಂಬುದು ಇಲ್ಲಿ ನೆನಪಾಗುತ್ತದೆ.
ಇಲ್ಲಿ ಈ ಸಂಕಲನದ ಸಂಪಾದಕರು ಕನ್ನಡದ ಹಾಗೆಯೇ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ ಇತ್ಯಾದಿ ಸಾಹಿತ್ಯಕ ಚಳವಳಿಗಳನ್ನು ಆಧರಿಸಿ ಕೊಂಕಣಿ ಕತೆಗಳನ್ನು ಆಯ್ಕೆ ಮಾಡಿದ ಹಾಗೆ ತೋರುವುದಿಲ್ಲ. ಅವರ ಪ್ರಸ್ತಾವನೆಯಲ್ಲಿಯೂ ಈ ವಿಚಾರದ ಪ್ರಸ್ತಾವ ಇಲ್ಲ. ಅಲ್ಲಿಯ ಸಾಹಿತ್ಯ ಚಳವಳಿಗಳ ಬಗ್ಗೆ ಸಂಕ್ಷಿಪ್ತದಲ್ಲಿ ಹೇಳಬಹುದಿತ್ತು. ಕೊಂಕಣಿ ಕಥಾಸಾಹಿತ್ಯದ ಚಾರಿತ್ರಿಕ ಬೆಳವಣಿಗೆಯನ್ನು ಈ ಸಂಕಲನದಿಂದ ಗುರುತಿಸುವುದು ಸಾಧ್ಯವಿಲ್ಲ. ಆದರೆ ಹಲವು ಒಳ್ಳೆಯ ಕತೆಗಳನ್ನು ಓದಿದ ಖುಷಿಯಂತೂ ಇದರಿಂದ ಸಿಗುತ್ತದೆ.
ಜೋಲಿ ಲಾಲಿ
ಲೇಖಕಿ ಜ್ಯೋತಿ ಗುರುಪ್ರಸಾದ್ ಅವರು 'ವಾರ್ತಾಭಾರತಿ' ಪತ್ರಿಕೆಯಲ್ಲಿ ಬರೆದ ಅಂಕಣ ಬರೆಹಗಳ ಸಂಕಲನ 'ಜೋಲಿ ಲಾಲಿ'. ಇದರಲ್ಲಿ 84 ಲೇಖನಗಳಿವೆ. ಅಂಕಣಬರೆಹಗಳಿಗೆ ಪ್ರತಿ ವಾರ ವಿಷಯವನ್ನು ಆಯ್ಕೆಮಾಡಿಕೊಳ್ಳುವುದು ಸವಾಲಿನ ಕೆಲಸ. ಸಾಮಾನ್ಯವಾಗಿ ಆ ವಾರದ ಅವಧಿಯಲ್ಲಿ ಸಂಭವಿಸಿದ ಘಟನೆಗಳೇ ಈ ಬರೆಹಗಳಿಗೆ ವಿಷಯವಾಗಿರುತ್ತವೆ. ಸಮಕಾಲೀನತೆಗೆ ಮುಖಾಮುಖಿಯಾಗಿ ತಮ್ಮ ಅಭಿಪ್ರಾಯವನ್ನು ಮಂಡಿಸುವುದು ಅಂಕಣಕಾರರ ಕಾಯಕ. ಜ್ಯೋತಿಯವರ ಶೈಲಿ ಆಕರ್ಷಕವಾಗಿದೆ. ಕನ್ನಡ ಭಾಷೆ, ಕನ್ನಡದ ಘನವಂತರು, ಮನುಷ್ಯ ಸಂಬಂಧ, ಕುಟುಂಬ ಸಂಬಂಧ ಇವುಗಳ ಜೊತೆಗೆ ಪ್ರಸ್ತುತ ರಾಜಕೀಯವನ್ನೂ ಅವರು ವಸ್ತುವಾಗಿಸಿಕೊಂಡಿದ್ದಾರೆ. ಹೇಮಾಮಾಲಿನಿಯನ್ನು ರಾಜ್ಯಸಭೆಗೆ ರಾಜ್ಯದಿಂದ ಆಯ್ಕೆ ಮಾಡಿದಾಗ ಅವರು ಕೇಳುವ ಪ್ರಶ್ನೆ, 'ಹೇಮಾಮಾಲಿನಿ ಆಯ್ಕೆ ಮಹಿಳೆಯರಿಗೆ ಸಂದ ಗೌರವವೆ?' ಸಮಾಜದ ಸೋಗಲಾಡಿಗಳನ್ನು ಕಂಡಾಗ ಅವರನ್ನು ಖಂಡಿಸಿದ ಲೇಖನಗಳೂ ಇದರಲ್ಲಿವೆ. ಲೇಖನಗಳ ಬೀಸು ದೊಡ್ಡದಾಗಿದೆ.
ಕೃತಿ: ಜೋಲಿ ಲಾಲಿ, ಪ್ರಕಾರ: ಅಂಕಣ ಬರೆಹ, ಏಕೆ ಓದಬೇಕು?: ಓದುವ ಖುಷಿಗೆ
ಪ್ರ:ದೇಸಿ ಪುಸ್ತಕ, ಬೆಂಗಳೂರು
ಕನ್ನಡ ಗೀತಗೋವಿಂದ
ಭಾರತೀಯ ಸಂಸ್ಕೃತ ಸಾಹಿತ್ಯದಲ್ಲಿ ಜಯದೇವ ಅವರಿಗೆ ಪ್ರಮುಖ ಸ್ಥಾನವಿದೆ. ವೈಷ್ಣವ ಭಕ್ತರು ಇವರನ್ನು ಅಪಾರವಾಗಿ ಗೌರವಿಸುತ್ತಾರೆ. ಇವರ ಕಾಲ 12ನೆ ಶತಮಾನ. ಬಂಗಾಳದ ಕೊನೆಯ ಹಿಂದೂ ರಾಜ ಲಕ್ಷ್ಮಣ ಸೇನನ ಕಾಲದಲ್ಲಿ ಇವರು ಇದ್ದರು. ಇವರ 'ಗೀತಗೋವಿಂದ' ಬಹು ಪ್ರಸಿದ್ಧ ಕಾವ್ಯ. ಇದರಲ್ಲಿ 12 ಸರ್ಗಗಳು, 24 ಅಷ್ಟಪದಿಗಳು, 386 ಶ್ಲೋಕಗಳಿವೆ. ವಿರಹ ಮತ್ತು ಶೃಂಗಾರದ ಈ ಕಾವ್ಯ ಹರಿ ಭಕ್ತರಿಗೆ ಪವಿತ್ರ ಗ್ರಂಥ. ಇದನ್ನು ವಿ.ಎಂ.ಶರ್ಮ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಶಾಂತ ಕವಿಗಳು ಇದನ್ನು ಪದ್ಯರೂಪದಲ್ಲಿಯೇ ಈ ಮೊದಲು ಅನುವಾದಿಸಿದ್ದರು. ನಂತರ ಕೆಲವು ಗದ್ಯರೂಪದ ಅನುವಾದಗಳೂ ಇದ್ದವು. ಪ್ರಸ್ತುತ ಶರ್ಮ ಅವರ ಅನುವಾದ ಪದ್ಯರೂಪದ್ದು. ಒಂದು ಪುಟದಲ್ಲಿ ಮೂಲ ಸಂಸ್ಕೃತ ಪಾಠ ಇನ್ನೊಂದು ಪುಟದಲ್ಲಿ ಕನ್ನಡ ಪದ್ಯಾನುವಾದ ಇರುವುದು ಅಭ್ಯಾಸಿಗಳಿಗೆ ಬಹಳ ಅನುಕೂಲವಾಗಿದೆ. ಈ ಅನುವಾದದಲ್ಲಿ ಶರ್ಮರ ಕಾವ್ಯಹೃದಯ, ಜೊತೆಗೆ ಪಾಂಡಿತ್ಯವನ್ನೂ ನೋಡಬಹುದು.
ಕೃತಿ: ಮಧುರಾಲಾಪ, ಪ್ರಕಾರ: ಅನುವಾದ. ಏಕೆ ಓದಬೇಕು?: ಗೀತ ಗೋವಿಂದ ಆಸ್ವಾದಿಸಲು
ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ, ಶಿವಮೊಗ್ಗ, ಪುಟಗಳು 120 ಬೆಲೆ ರು. 75
ಕನ್ನಡ ಲಿಪಿ ಸುಧಾರಣೆ
ಕನ್ನಡ ಲಿಪಿಯ ಮೂಲ ಬ್ರಾಹ್ಮಿ ಲಿಪಿ. ಕಾಲದಿಂದ ಕಾಲಕ್ಕೆ ಇದು ಪರಿಷ್ಕಾರಗೊಂಡು ಇಂದಿನ ರೂಪವನ್ನು ತಳೆದಿದೆ. ಮೊದಲು ರಾಜಾಜ್ಞೆಗಳನ್ನು ಕಲ್ಲಿನ ಮೇಲೆ ಕೊರೆಸುತ್ತಿದ್ದರು. ಈ ಕಾರಣಕ್ಕೆ ಕನ್ನಡ ಲಿಪಿ ದುಂಡಗಿದೆ. ಕನ್ನಡ ಲಿಪಿಯಲ್ಲಿ ಒತ್ತಕ್ಷರಗಳು ಇರುವುದರಿಂದ ಬರೆಯುವುದು ಕ್ಲಿಷ್ಟ ಎಂದು ಲಿಪಿ ಸುಧಾರಣೆಗೆ ಹಲವರು ಕೈಹಾಕಿದ್ದಾರೆ. ನಮ್ಮ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪನವರ ಪುತ್ರ ಕರ್ನಾಟಕ ವಿಶ್ವವಿದ್ಯಾನಿಲಯದ ಭೌತಶಾಸ್ತ್ರದ ನಿವೃತ್ತ ಪ್ರೊಫೆಸರ್ ಎನ್.ಉಮಾಕಾಂತ ಅವರೂ ಕನ್ನಡ ಲಿಪಿಯ ಸುಧಾರಣೆ ಬಗ್ಗೆ ಎಂಬತ್ತರ ದಶಕದಲ್ಲಿಯೇ ಪ್ರಯತ್ನ ಮಾಡಿ ಉಪನ್ಯಾಸ ನೀಡಿದ್ದರು. ಲೇಖನಗಳನ್ನೂ ಬರೆದಿದ್ದರು. ಇದೀಗ ರಾಘವೇಂದ್ರ ಮುಜುಂದಾರ್ ಗಂಗಾವತಿಯವರು ಅಂತಹ ಒಂದು ಪ್ರಯತ್ನ ಮಾಡಿ ತಾವು ಸಂಶೋಧಿಸಿರುವ ಕನ್ನಡ ಪರ್ಯಾಯ ಲಿಪಿಗೆ 'ಪುಣ್ಯಕೋಟಿ ಫಾಂಟ್ಸ್' ಎಂದು ಹೆಸರಿಟ್ಟಿದ್ದಾರೆ. ಭಾಷೆ ನಿಂತ ನೀರಲ್ಲ. ತನಗೆ ಬೇಕಾದ ಬದಲಾವಣೆಯನ್ನು ಅದು ತನ್ನಿಂದತಾನೆ ಪಡೆಯುತ್ತದೆ. ಆದರೆ ಲಿಪಿ ಹಾಗಲ್ಲ. ಯಾರಾದರೂ ಕ್ರಮ ಕೈಗೊಳ್ಳಬೇಕು.
ಕೃತಿ: ಪುಣ್ಯಕೋಟಿ ಫಾಂಟ್ಸ್, ಪ್ರಕಾರ: ಸಂಶೋಧನೆ
ಏಕೆ ಓದಬೇಕು?: ಲಿಪಿ ರಹಸ್ಯ ಅರಿಯಲು
ಪ್ರ: ಲೇಖಕರೇ ಪ್ರಕಾಶಕರು, ಪುಟಗಳು 116 ಬೆಲೆ ರು. 99
ಕ್ಯಾನ್ಸರ್ ಗೆದ್ದವರು
ಕ್ಯಾನ್ಸರ್ ಒಂದು ಮಾರಕ ರೋಗ. ಇದಕ್ಕೆ ಚಿಕಿತ್ಸೆಯೇ ಇಲ್ಲ, ಕ್ಯಾನ್ಸರ್ ಬಂದರೆ ಸಾವು ಖಚಿತ ಎಂಬೆಲ್ಲ ನಂಬಿಕೆಗಳು ಇದ್ದವು. ಇಂದು ವೈದ್ಯಕೀಯ ವಿಜ್ಞಾನ ಬಹಳ ಮುಂದುವರಿದಿದೆ. ಚಿಕ್ಕಚಿಕ್ಕ ಊರುಗಳಲ್ಲಿಯೂ ಕ್ಯಾನ್ಸರ್ ಪತ್ತೆಮಾಡುವ, ಉಪಶಮನ ಮಾಡುವ ಸೌಲಭ್ಯಗಳು ಇವೆ. ಪತ್ರಕರ್ತ ಕೃಷ್ಣ ವಟ್ಟಂ ಅವರು 1990ರ ಸುಮಾರಿಗೆ ಕ್ಯಾನ್ಸರ್ಗೆ ತುತ್ತಾಗಿದ್ದರು. ಅವರ ಅನ್ನನಾಳದಲ್ಲಿ ಕ್ಯಾನ್ಸರ್ ಆಗಿತ್ತು. ಆರಂಭಿಕ ಅವಸ್ಥೆಯಲ್ಲಿಯೇ ಇದು ಪತ್ತೆಯಾಯಿತು. ಮುಂಬಯಿಯಲ್ಲಿ ಟಾಟಾ ಮೆಮೋರಿಯಲ್ ಆಸ್ಪತ್ರೆಯಲ್ಲಿ ಅವರಿಗೆ ಶಸ್ತ್ರಚಿಕಿತ್ಸೆಯಾಗಿ ಅವರು ಗುಣಮುಖರಾದರು. ಸುಮಾರು 23 ವರ್ಷಗಳ ಹಿಂದಿನ ತಮ್ಮ ಕ್ಯಾನ್ಸರ್ ಜೊತೆಗಿನ ಹೋರಾಟವನ್ನು ವಟ್ಟಂ ಅವರು ಇಲ್ಲಿ ವಿವರಸಿದ್ದಾರೆ. ಕ್ಯಾನ್ಸರ್ ರೋಗಿಗಳಿಗೆ ಧೈರ್ಯ ತುಂಬುವ ಬರೆಹ ಇದು. ಕ್ಯಾನ್ಸರ್ ರೋಗದ ಬಗ್ಗೆ, ಅದರ ಚಿಕಿತ್ಸೆಯ ಬಗ್ಗೆ ಹಲವು ಒಳನೋಟಗಳನ್ನು ಈ ಕೃತಿ ಹೊಂದಿದೆ.
ಕೃತಿ: ಕ್ಯಾನ್ಸರನ್ನು ಗೆದ್ದ ಸಂತಸ, ಪ್ರಕಾರ: ಅನುಭವ ಕಥನ, ಏಕೆ ಓದಬೇಕು?: ಮನದ ಖಿನ್ನತೆ ದೂರಮಾಡಲು, ಪ್ರ: ಶ್ರೀರಾಜೇಂದ್ರ ಪ್ರಿಂಟರ್ಸ್ ಅಂಡ್ ಪಬ್ಲಿಷರ್ಸ್, ಮೈಸೂರು, ಪುಟಗಳು 152, ಬೆಲೆ ರು. 100
ಕಾಲಜ್ಞಾನ ಸಾಹಿತ್ಯ
ಕನ್ನಡ ಸಾಹಿತ್ಯದ ಉದಯಕಾಲದಲ್ಲೇ ಕಾಲಜ್ಞಾನ ಸಾಹಿತ್ಯವೂ ಹುಟ್ಟಿಕೊಂಡಿದೆ. ಕಾಲಜ್ಞಾನವೆಂದರೆ ಭವಿಷ್ಯದಲ್ಲಾಗುವ ಸಂಗತಿಗಳನ್ನು ಮೊದಲೇ ಹೇಳುವುದು. ಇದೊಂದು ರೀತಿಯಲ್ಲಿ ಒಗಟಿನಂತೆ ಇರುತ್ತದೆ. ಕನ್ನಡದಲ್ಲಿ ಕಾಲಜ್ಞಾನ ಸಾಹಿತ್ಯವನ್ನು ಸಂಗ್ರಹಿಸಿ ಅದನ್ನು ಪ್ರಕಟಿಸಿದವರಲ್ಲಿ ಮೊದಲಿಗರು ಫ.ಗು.ಹಳಕಟ್ಟಿಯವರು. ಕಾಲಜ್ಞಾನವು ಶಾಸ್ತ್ರಗಳನ್ನು ಆಧರಿಸಿದ ಸಾಹಿತ್ಯವಲ್ಲ. ಅದು ಅಂತಃಸ್ಫುರಣ. ಡಾ.ಮಾಣಿಕರಾವ್ ಧನಶ್ರೀಯವರು 'ಕನ್ನಡದಲ್ಲಿ ಕಾಲಜ್ಞಾನ ಸಾಹಿತ್ಯ' ಎಂಬ ವಿಷಯದಲ್ಲಿ ಪಿಎಚ್.ಡಿ. ಮಹಾಪ್ರಬಂಧವನ್ನು ಬರೆದಿರುವರು. ಇದರಲ್ಲಿ ವೀರಶೈವ ಕವಿಗಳು ಕಾಲಜ್ಞಾನ ಸಾಹಿತ್ಯವನ್ನು ರಚಿಸಿದ ಉದ್ದೇಶವೇನು, ಅದರ ಹುಟ್ಟಿಗೆ ಕಾರಣ ಮತ್ತು ಪ್ರೇರಣೆಯನ್ನೊದಗಿಸಿದ ಅಂಶಗಳು ಯಾವವು, ಅವುಗಳಿಂದ ಸಾಹಿತ್ಯಕ್ಕಾದ ಪ್ರಯೋಜನವೇನು, ಜಾಗತಿಕ ಕಾಲಜ್ಞಾನ ಸಾಹಿತ್ಯಕ್ಕೂ ಕನ್ನಡ ಕಾಲಜ್ಞಾನ ಸಾಹಿತ್ಯಕ್ಕೂ ಇರುವ ಸಾಮ್ಯ ವೈಷಮ್ಯಗಳೇನು ಇವೇ ಮೊದಲಾದ ವಿಷಯಗಳನ್ನು ಚರ್ಚಿಸಿದ್ದಾರೆ. ಕನ್ನಡಕ್ಕೆ ಇದೊಂದು ಅಪರೂಪದ ಕೃತಿಯಾಗಿದೆ.
ಕೃತಿ: ಕನ್ನಡದಲ್ಲಿ ಕಾಲಜ್ಞಾನ ಸಾಹಿತ್ಯ, ಪ್ರಕಾರ: ಸಂಶೋಧನೆ, ಏಕೆ ಓದಬೇಕು?: ಹೊಸ ಜ್ಞಾನ ಪಡೆಯಲು, ಪ್ರ: ರೂಪ ಪ್ರಕಾಶನ, ಮೈಸೂರು, ಪುಟಗಳು 468, ಬೆಲೆ ರು. 320
ಗೌರಿ ಕಂಡದ್ದು
ಗೌರಿ ಲಂಕೇಶ್ ಅವರು ತಮ್ಮ ಪತ್ರಿಕೆಯ ಅಂಕಣದಲ್ಲಿ 'ಕಂಡಹಾಗೆ' 2008- 2010ರ ಅವಧಿಯಲ್ಲಿ ಬರೆದದ್ದು ಈಗ ಸಂಕಲನವಾಗಿ ಕೃತಿ ರೂಪದಲ್ಲಿ ಬಂದಿದೆ. ಅವರೇ ಹೇಳಿಕೊಂಡಿರುವ ಹಾಗೆ, 'ಜನಪ್ರಿಯ ವಾರಪತ್ರಿಕೆಯೊಂದ ಸಂಪಾದಕಿಯಾಗಿ ನಿತ್ಯದ ಆಗುಹೋಗುಗಳನ್ನು ಗಮನಿಸುತ್ತಾ, ಆ ವಾರದ ಪತ್ರಿಕೆಯನ್ನು ಆದಷ್ಟು ಚಂದವಾಗಿ ರೂಪಿಸಲು ಪ್ರಯತ್ನಿಸುತ್ತಾ, ನನ್ನ ಅಂಕಣದಲ್ಲಿ ಏನನ್ನು ಕುರಿತು ಬರೆಯಬೇಕೆಂದು ಚಿಂತಿಸುತ್ತಾ ಒಂದು ವಾರವೂ ಬಿಡದೆ ಬರೆಯುವುದಿದೆಯಲ್ಲ ಅದು ಹಲವೊಮ್ಮೆ ತೃಪ್ತಿಯನ್ನು ಕೊಡುವಂತಹದ್ದು, ಹಾಗೆಯೇ ಕೆಲವೊಮ್ಮೆ ಆತಂಕವನ್ನೂ ಮೂಡಿಸುವಂತಹದ್ದು!' ಹತ್ತು ಹಲವು ಸಮಕಾಲೀನ ವಿಷಯಗಳು ಈ ಅಂಕಣದಲ್ಲಿವೆ. ಆ ಸಂದರ್ಭದಲ್ಲಿ ಬರೆದ ಬರೆಹವನ್ನು ಇಂದು ಓದಿದಾಗ ಅಂದಿನ ಆ ಅಭಿಪ್ರಾಯ ಎಷ್ಟು ಸರಿಯಾಗಿತ್ತು ಎಂಬ ಒಂದು ಅಂದಾಜು ಸಿಗಬಹುದೇನೋ? ಆದರೆ ಅಂಥ ಅಂದಾಜು ಮಾಡುವುದಕ್ಕಿಂತ ಇವುಗಳಲ್ಲಿರುವ ವಿಷಯದ ವ್ಯಾಪ್ತಿ, ಬರೆಹದ ಆಪ್ತತೆ ಇವುಗಳಿಗಾಗಿ ಇವನ್ನು ಓದಬೇಕು. ಸಮಕಾಲೀನ ಸಮಾಜದ ವಿವೇಕವನ್ನು ಜಾಗೃತಗೊಳಿಸುವ ದಿಶೆಯಲ್ಲಿ ಗೌರಿ ಬರೆಹಗಳು ಮುಖಮಾಡಿವೆ.
ಕೃತಿ: ಕಂಡಹಾಗೆ, ಪ್ರಕಾರ: ಅಂಕಣ ಬರೆಹ, ಏಕೆ ಓದಬೇಕು?: ಗೌರಿ ಜಗತ್ತು ಅರಿಯಲು
ಪ್ರ: ಲಂಕೇಶ್ ಪ್ರಕಾಶನ, ಬೆಂಗಳೂರು, ಪುಟಗಳು 256, ಬೆಲೆ ರು. 150
ಪಿಬಿಎಸ್
ಕನ್ನಡ ಸಿನಿಮಾ ಹಿನ್ನೆಲೆ ಗಾಯಕರಲ್ಲಿ ಪಿ.ಬಿ.ಶ್ರೀನಿವಾಸ್ ಅವರು ತಮ್ಮ ಛಾಪನ್ನು ಅಚ್ಚಳಿಯದೇ ಉಳಿಸಿಹೋಗಿದ್ದಾರೆ. ಮೂರು ಸಾವಿರಕ್ಕೂ ಅಧಿಕ ಹಾಡುಗಳನ್ನು ಅವರು ಹಾಡಿದ್ದಾರೆ. ರಾಜಕುಮಾರ್ ಅವರ ಶರೀರಕ್ಕೆ ಪಿಬಿಎಸ್ ಶಾರೀರ ಆಗಿದ್ದರು ಎಂಬ ಮಾತಿದೆ. ಯಾವುದೇ ಹಾಡಿರಲಿ ಅದು ಶ್ರೀನಿವಾಸರ ಕಂಠದಿಂದ ಹೊರಬಂದರೆ ಕೇಳುಗ ಪರವಶನಾಗದೆ ಇರುತ್ತಿರಲಿಲ್ಲ. ಇಂಥ ಶ್ರೀನಿವಾಸ ಅವರು ಇಂದು ನಮ್ಮೊಡನಿಲ್ಲ. ಅವರ ಬಗ್ಗೆ ಅವರ ಆತ್ಮೀಯರು ಬರೆದ ಲೇಖನಗಳ ಸಂಗ್ರಹ 'ಸರಳ ಸಜ್ಜನಿಕೆಯ ಡಾ.ಪಿ.ಬಿ. ಶ್ರೀನಿವಾಸ್'. ಈ ಕೃತಿಯನ್ನು ಗೌರಿ ಸುಂದರ್ ಅವರು ಸಂಪಾದಿಸಿದ್ದಾರೆ. ಇಲ್ಲಿಯ ಲೇಖಕರು ಹಲವು ಆತ್ಮೀಯ ಕ್ಷಣಗಳನ್ನು ್ಲಲಿ ಮೆಲುಕುಹಾಕಿದ್ದಾರೆ. ಪ್ರತಿವಾದಿ ಭಯಂಕರ ಶ್ರೀನಿವಾಸ ಆಚಾರ್ಯಲು ಸಣ್ಣ ಮಗುವಿನಂಥ ಹೃದಯ ಹೊಂದಿದ್ದರು ಎಂಬುದು ಈ ಕೃತಿ ಓದಿದಾಗ ತಿಳಿಯುವುದು. ಪಿಬಿಎಸ್ ಸ್ವತಃ ಸಾಹಿತಿಯೂ ಹೌದು. ಅವರು ಅನೇಕ ಕವಿತೆಗಳನ್ನು ರಚಿಸಿದ್ದಾರೆ. ರಾಜಕುಮಾರ್ ಅವರ ಬಗ್ಗೆ ಬರೆದ ಎರಡು ಕವಿತೆಗಳು ಇದರಲ್ಲಿವೆ.
ಕೃತಿ: ಸರಳ ಸಜ್ಜನಿಕೆಯ ಡಾ.ಪಿ.ಬಿ.ಶ್ರೀನಿವಾಸ್, ಪ್ರಕಾರ: ಸಂಪಾದನೆ
ಏಕೆ ಓದಬೇಕು?: ಪಿಬಿಎಸ್ ಅವರನ್ನು ಅರಿಯಲು
ಪ್ರ: ಸುಂದರ ಪ್ರಕಾಶನ, ಬೆಂಗಳೂರು, ಪುಟಗಳು 258, ಬೆಲೆ ರು. 180
- ಡಾ. ವಾಸುದೇವ ಶೆಟ್ಟಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.