-ಹಳದಿರಾಣಿಯ ಹೊಳಪು
ಚಿನ್ನದ ಬೆಲೆ ಗಗನಕ್ಕೇರಿದೆ. ಆದರೆ, ಇಲ್ಲೊಬ್ಬಳು ಹೊನ್ನಿನ ರಾಣಿ ಬಂದುಬಿಟ್ಟಿದ್ದಾಳೆ. ಮಾರ್ಚ್ ಬಂತೆಂದು ನೆನಪಿಸುತ್ತಿದ್ದಾಳೆ. ಅವಳೇ ಹಳದಿರಾಣಿ.
'ತಬುಬುಯ', 'ಟೆಕೊಮಾ', 'ಎಲ್ಲೋ ತಬುಬುಯ', 'ಕ್ಯಾರಿಬೀನ್ ಟ್ರಂಪೆಟ್ ಟ್ರೀ' ಎಂಬ ಹೆಸರುಗಳೂ ಇವೆ ಆಕೆಗೆ. ಪರೀಕ್ಷೆಗಳು ಆರಂಭವಾಗುವ ಸಮಯದಲ್ಲಿ ಅರಳುವುದರಿಂದ 'ಎಕ್ಸಾಮ್ ಫ್ಲವರ್' ಅಂತನೂ ಅಡ್ಡಹೆಸರಿದೆ ಈಕೆಗೆ.
ಸಸ್ಯಶಾಸ್ತ್ರದ ಬಿಗ್‌ನೊನಿಯಾಸಿ ಕುಟುಂಬಕ್ಕೆ ಸೇರಿದ ಈ ಮರ ಸುಮಾರು 15-25 ಅಡಿ ಎತ್ತರ ಬೆಳೆಯುತ್ತದೆ. ಹೂ ಬಿಡುವ ಸಮಯ ಫೆಬ್ರವರಿಯಿಂದ ಮಾರ್ಚ್. ಈ ವೇಳೆ ಎಲೆಗಳೆಲ್ಲ ಉದುರಿ ಉದುರಿ ಮರದ ತುಂಬಾ ಹೂಗಳು ತುಂಬಿಬಿಡುತ್ತವೆ. ಇಡೀ ಮರವೇ ಹಳದಿಯಾಗಿ ತುಂಬಾ ಸುಂದರವಾಗಿ ಕಾಣುತ್ತದೆ. ಮಕರಂದ ಹೀರಲು ಬರುವ ದುಂಬಿಗಳು, ಮರದ ಕೆಳಗೆ ಹಳದಿ ಹೂ ಹಾಸಿಗೆ ಇವೂ ಈ ವೃಕ್ಷಕ್ಕೆ ಇನ್ನೆರಡು ಆಕರ್ಷಣೆಗಳು. ಈ ಮರದ ಮೂಲ ದಕ್ಷಿಣ ಅಮೆರಿಕ. ಅಲ್ಲಿ 'ಟ್ರೀ ಆಫ್ ಗೋಲ್ಡ್ ಅಂತಲೇ ಪ್ರಸಿದ್ಧಿ. ಇದು ಮುಖ್ಯವಾಗಿ ಅಲಂಕಾರಿಕ ಮರ. ರಸ್ತೆ ಬದಿಗೆ ಇದು ಅದ್ಭುತ ಆಕರ್ಷಣೆ. ಬೆಂಗಳೂರಲ್ಲಿ ನಗರ ಅರಣ್ಯ ಯೋಜನೆಯಲ್ಲಿ ಈ ಮರಗಳನ್ನು ಬಹುಸಂಖ್ಯೆಯಲ್ಲಿ ಬೆಳೆಸಲಾಗಿದೆ. ಈ ಮರವನ್ನು ಬೋನ್ಸಾಯ್ ರೀತಿಯಲ್ಲೂ ಬೆಳೆಸಬಹುದೆಂಬ ಮಾಹಿತಿಯಿದೆ. ಇನ್ನೂ ಈ ಮರಗಳನ್ನು ಬೆಳೆಸೋಣ, ಉಳಿಸೋಣ, ಹೂಗಳನ್ನು ನೋಡಿ ಆನಂದಿಸೋಣ. ನಿತ್ಯದ ಜಂಜಾಟ ಮರೆತು ರಿಲ್ಯಾಕ್ಸ್ ಆಗೋಣ...
= ವೀಣಾ ಅನಂತ್