ಸಾಪ್ತಾಹಿಕಪ್ರಭ

ಕಿನ್ನೌರ್ ಎಂಬ ಕಿನ್ನರಭೂಮಿ (ಬೆಟ್ಟ ಬುದ್ಧ ಹಿಮ 17)

'ತಶಿ, ನಿಮ್ಮಲ್ಲಿ ಒಬ್ಳನ್ನೇ ಎರಡು ಮೂರು ಮಂದಿ ಸೋದರರು ಮದುವೆಯಾಗ್ತಾರಲ್ಲ, ಅಂಥ ಯಾವುದಾದ್ರೂ ಕುಟುಂಬ ನಿನಗೆ ಗೊತ್ತಿದ್ಯಾ?' ..

'ತಶಿ, ನಿಮ್ಮಲ್ಲಿ ಒಬ್ಳನ್ನೇ ಎರಡು ಮೂರು ಮಂದಿ ಸೋದರರು ಮದುವೆಯಾಗ್ತಾರಲ್ಲ, ಅಂಥ ಯಾವುದಾದ್ರೂ ಕುಟುಂಬ ನಿನಗೆ ಗೊತ್ತಿದ್ಯಾ?'
ಹೀಗೇ ಪ್ರಯಾಣದ ಮಧ್ಯೆ ಒಮ್ಮೆ ತಶಿಯನ್ನು ಕೇಳಿದ್ದೆ. ಆತ ಆಘಾತದಿಂದ ಎಂಬಂತೆ ನನ್ನನ್ನೇ ಒಂದು ಸಲ ನೋಡಿ, ಇಲ್ಲವೆಂದು ತಲೆಯಾಡಿಸಿದ. 'ಈಗ ಯಾರೂ ಅಂಥದನ್ನೆಲ್ಲ ಮಾಡುವುದಿಲ್ಲ. ಎಲ್ಲ ಕಡೆ ಎಜುಕೇಶನ್ ಬರ್ತಾ ಇದೆಯಲ್ಲ' ಎಂದ.
ತಶಿಗೆ ನಿಜವಾಗಿಯೂ ಗೊತ್ತಿರಲಿಲ್ಲವೋ, ಗೊತ್ತಿದ್ದೂ ಹೇಳಲಿಲ್ಲವೋ ತಿಳಿಯಲಿಲ್ಲ. ಆದರೆ ಅಂಥದೊಂದು ಪದ್ಧತಿ ಹಿಮಾಲಯದಲ್ಲಿ ಇರುವುದು ನಿಜ. ಈಗಲೂ, ಆಧುನಿಕತೆಯ ಬೆಳಕನ್ನು ಇನ್ನೂ ಸಾಕಷ್ಟು ಕಾಣದ ಕೆಲವು ಪ್ರದೇಶಗಳಲ್ಲಿ ಈ ಪದ್ಧತಿ ಇನ್ನೂ ಇದೆ. ಅಂಥ ಪ್ರದೇಶವೇ ಕಿನ್ನೌರ್ ಕಣಿವೆ. ಅದು ನಾವು ಓಡಾಡಿದ ಸ್ಪಿಟಿ ಕಣಿವೆಯ ಮಗ್ಗುಲಲ್ಲೇ, ಉತ್ತರಕ್ಕೆ ಮಲಗಿತ್ತು. ಅದರಾಚೆಗೆ ಟಿಬೆಟ್.
ಮಹಾಭಾರತದ ಕತೆ ಬಲ್ಲವರಿಗೆ, ದ್ರೌಪದಿಗೆ ಐವರು ಗಂಡಂದಿರು ಎಂಬುದು ಗೊತ್ತಿರುತ್ತದೆ. ಹಿಮಾಲಯದಲ್ಲೇ ಹುಟ್ಟಿ ಬೆಳೆದು ಊರಿಗೆ ಬಂದ ಪಾಂಡವರಿಗೆ ಈ ಪದ್ಧತಿ ಅಸಹಜ ಅನಿಸಿರಲಿಕ್ಕೂ ಇಲ್ಲ. ಎಸ್.ಎಲ್.ಭೈರಪ್ಪನವರು, 'ಪರ್ವ' ಕಾದಂಬರಿಯಲ್ಲಿ ಇದನ್ನು ಸಹಜವಾಗಿಯೇ ಚಿತ್ರಿಸಿದ್ದಾರೆ. ಕಾದಂಬರಿ ಬರೆಯುವ ಮುನ್ನ ತಾನು ನಡೆಸಿದ ಕ್ಷೇತ್ರಕಾರ್ಯ, ಬಹುಪತಿತ್ವ ಪದ್ಧತಿಯ ಬಗ್ಗೆ ಪಡೆದುಕೊಂಡ ತಿಳಿವಳಿಕೆಯನ್ನೂ 'ಪರ್ವ ಬರೆದದ್ದು' ಲೇಖನದಲ್ಲಿ ದಾಖಲಿಸಿದ್ದಾರೆ. ಅವರು ಉಲ್ಲೇಖಿಸಿದ ಪ್ರದೇಶವೇ ಈ ಕಿನ್ನೌರ್. ಕಾಶ್ಮೀರದ ಒಂದೆಡೆ, ನೀಲಗಿರಿಯ ತೋಡರಲ್ಲಿ ಕೂಡ ಈ ಪದ್ಧತಿ ಅಲ್ಪಮಟ್ಟಿಗೆ ಇತ್ತಾದರೂ, ಕಿನ್ನೌರ್‌ನಷ್ಟಲ್ಲ.
ಬಹುಪತಿತ್ವ ಅನುಸರಿಸಲು ಇಲ್ಲಿನವರಿಗಿದ್ದ ಕಾರಣಗಳು ಮುಖ್ಯವಾಗಿ ಎರಡು- ಹೆಣ್ಣುಗಳ ಕೊರತೆ ಮತ್ತು ಕುಟುಂಬದ ಆಸ್ತಿ ಹರಿಹಂಚಾಗದಂತೆ ಕಾಯುವ ಜಾಣತನ. ನಮ್ಮಲ್ಲಿ ಹೊಸ ತಲೆಮಾರುಗಳು ಇಂಗ್ಲಿಷ್ ಶಿಕ್ಷಣ ಪಡೆದ ಮೇಲೆ ಹಳೆಯ ರೂಢಿ ಗಳನ್ನೆಲ್ಲ ತಿರಸ್ಕರಿಸುತ್ತ ಬರುವಂತೆಯೇ ಅಲ್ಲೂ ಆಯಿತು. ಇಂಥದೊಂದು ಪದ್ಧತಿಯೇ ಅವಮಾನಕಾರಿಯಾಗಿ ಕಾಣಿಸತೊಡಗಿತು. ತಶಿಗೂ ಕೂಡ, ನಮ್ಮ ಮುಂದೆ ಅದನ್ನು ಒಪ್ಪಿಕೊಳ್ಳದಂತೆ ತಡೆದದ್ದು ಅದೇ ಇರಬಹುದು. (ಈ ಬಗ್ಗೆ ವಿವರ ಬೇಕಾದವರು ಸರ್ವದಮನ್ ಸಿಂಗ್ ಬರೆದ 'ಪಾಲಿಯಾಂಡ್ರಿ ಇನ್ ಎನಿಶಿಯಂಟ್ ಇಂಡಿಯಾ' ಕೃತಿ ನೋಡಬಹುದು).
ಆದರೆ ಕಿನ್ನೌರ್ ಎಂಬ ಗಂಧರ್ವ ಕಣಿವೆಯ ಸೊಗಸು ಇಷ್ಟೇ ಅಲ್ಲ. ಇದು ಸಟ್ಲೆಜ್ ನದಿಯ ಆಡುಂಬೊಲ. ಸ್ಪಿಟಿ ವ್ಯಾಲಿಯಂತೆಯೇ ಇದೂ  ಶೀತ ಮರುಭೂಮಿ. ಆದರೆ ಸ್ಪಿಟಿಗಿಂತ ಹೆಚ್ಚಿನ ಹಸಿರನ್ನು ಹೊದ್ದಿದೆ. ಸೇಬು ಬೆಳೆಯುತ್ತದೆ, ಪೈನ್ ಮರಗಳಿವೆ. ಮನಮೋಹಕ ಸರೋವರಗಳಿವೆ. ಅತ್ತ ಟಿಬೆಟ್, ಇತ್ತ ಭಾರತದ ನಡುವಿನ ಕೊಂಡಿ. ಹೀಗಾಗಿ  ಬೌದ್ಧ ಹಾಗೂ ಹಿಂದೂ ಧರ್ಮಗಳ ಮುಖಾಮುಖಿಯ ನೆಲ. ಈ ಮುಖಾಮುಖಿ ಸಂಘರ್ಷದ್ದಲ್ಲ, ಸಾಮರಸ್ಯದ್ದು. ಮೌರ್ಯರಿಂದ ಹಿಡಿದು ಬ್ರಿಟಿಷರವರೆಗೂ ಈ ನೆಲವನ್ನು ಎಲ್ಲರೂ ಆಳಿದ್ದರೂ, ಯಾರ ಪ್ರಭಾವವನ್ನೂ ಅತಿಯಾಗಿ ಹಚ್ಚಿಕೊಳ್ಳದೆ, ತನ್ನದೇ ಮಣ್ಣಿನ ಗಂಧವನ್ನು ಇಂದಿಗೂ ಅಪ್ಪಿಕೊಂಡು ಇರುವ ಊರು. ಗೋಧಿ, ಬಾರ್ಲಿ, ಬಟಾಣಿ, ತರಕಾರಿ ಬೆಳೆಯುತ್ತಾರೆ. ಪ್ರವಾಸಿಗರಿಗೆ ಈ ನೆಲ ತೆರೆದದ್ದೇ 1989ರಲ್ಲಿ.
ಇಲ್ಲಿಗೆ ದೈವಿಕತೆಯ ಆವರಣ ತಂದುಕೊಟ್ಟಿರುವುದು ಕಿನ್ನರ ಕೈಲಾಸ ಪರ್ವತ. ಇದು ನಮ್ಮಲ್ಲಿ ಪ್ರಸಿದ್ಧವಾದ 'ಕೈಲಾಸ ಮಾನಸ ಸರೋವರ'ವಲ್ಲ. ಅದಿರುವುದು ಟಿಬೆಟ್‌ನಲ್ಲಿ. ಇದು ಭಾರತದಲ್ಲಿಯೇ ಇದೆ. ಮಾನಸ ಸರೋವರಕ್ಕಿಂತಲೂ ಕಠಿಣವಾದ, ಶುದ್ಧ ಚಾರಣದ ಹಾದಿ ಈ ಪರ್ವತದ್ದು. ಇದರ ಎತ್ತರ 21,325 ಅಡಿ. ಇದನ್ನು ಮೊದಲು ಏರಲು ಯತ್ನಿಸಿದವರ ಸಾಹಸ ಎವರೆಸ್ಟ್ ಸಾಧಕರ ಕತೆಯಂತೆಯೇ ಹೃದಯಂಗಮ, ರೋಚಕ. ಎಲ್ಲ ಪರ್ವತಗಳಂತೆಯೇ ಇದರ ಹಿನ್ನೆಲೆಯಲ್ಲೂ ಒಂದು ಕತೆ. ಭಸ್ಮಾಸುರನನ್ನು ಸೃಷ್ಟಿಸಿ, ಅವನ ಕಾಟ ತಡೆಯಲಾಗದೆ ಕೈಲಾಸದಿಂದ ಓಡಿಹೋದ ಶಿವ, ಬಂದು ಅಡಗಿ ಕುಳಿತದ್ದೇ ಈ ಬೆಟ್ಟದಲ್ಲಂತೆ.
ಕಿನ್ನೌರ್‌ನವರು ಇಂದಿಗೂ, ತಾವು ಪಾಂಡವರ ಸಂತಾನ ಎಂದು ಹೇಳಿಕೊಂಡು ಹೆಮ್ಮೆಪಡುತ್ತಾರೆ. ನಮ್ಮ ಮಹಾಭಾರತ ಪುರಾಣಾದಿಗಳಲ್ಲಿ ಬರುವ ಯಕ್ಷ ಕಿನ್ನರ ಕಿಂಪುರುಷ ಸಿದ್ಧ ಇತ್ಯಾದಿ ದೇವಗಣಗಳ ಹೆಸರನ್ನು ನೀವು ಕೇಳಿಯೇ ಇರುತ್ತೀರಿ. ಅದೇ ಕಿನ್ನರರೇ ಇವರು ಎಂದರೆ ನಿಮಗೆ ಆಶ್ಚರ್ಯವಾಗುತ್ತದೆಯೆ? ನನಗಂತೂ ಆಗದು. ಹಿಮ ಸುರಿಯುವ, ಮೌನವೂ ಏಕಾಂತವೂ ರಿಂಗಣಗುಣಿತವಾಡುವ ಈ ಪರ್ವತಗಳ ಸಂದುಗೊಂದುಗಳಲ್ಲಿ ವಾಸಿಸುವ, ಹೊರಗಿನವರಿಗೆ ಎಂದೂ ಪೂರ್ತಿಯಾಗಿ ಅರ್ಥವಾಗದೆ ನಿಗೂಢವಾಗಿಯೇ ಉಳಿಯುವ, ಅತ್ಯಪೂರ್ವ ಜಾನಪದ ಸಂಗೀತ ನೃತ್ಯಗಳನ್ನು ಜೀವಾಳವಾಗಿ ಪಡೆದಿರುವ ಇಲ್ಲಿನ ಜನರಿಗೆ ಕಿನ್ನರರು ಎಂಬ ಅಭಿದಾನ ಚೆನ್ನಾಗಿಯೇ ಒಪ್ಪುತ್ತದೆ.
ಈ ಕಿನ್ನರರ ನಾಟ್ಯದ ರುಚಿ ನಮಗೆ ಹತ್ತಿದ್ದು ಪಿನ್ ಕಣಿವೆಯ ಉತ್ಸವದಲ್ಲಿ. ಕುಂಗ್ರಿ ಮೊನಾಸ್ಟ್ರಿಯ ಅಂಗಳದಲ್ಲಿ ನೆರೆದಿದ್ದ ಕಲಾವಿದರಲ್ಲಿ ಅನೇಕ ಮಂದಿ ಕಿನ್ನೌರ್‌ನಿಂದ ಬಂದಿದ್ದವರು. ಅವರ ಉಡುಗೆ ತೊಡುಗೆಗಳೇ ಅವರು ಈ ಗ್ರಹದವರೇ ಅಲ್ಲ ಅನಿಸುವಂತೆ ಇತ್ತು. ಉದ್ದನೆಯ ಬಿಳಿ ಕೆಂಪು ನಿಲುವಂಗಿಗಳು, ಸೊಂಟಕ್ಕೆ ಬಣ್ಣಬಣ್ಣದ ಮಣಿಪಟ್ಟಿಗಳು, ತಲೆಯ ಮೇಲೆ ಥರಾವರಿ ಟೋಪಿಗಳು, ಎಲ್ಲೂ ಪ್ಲಾಸ್ಟಿಕ್ ಎಂಬ ಕೃತಕ ಸಾಧನದ ಹಂಗಿಲ್ಲದ, ಅಪ್ಪಟ ಸ್ಥಳೀಯ ಉಣ್ಣೆ ಬಟ್ಟೆಗಳು ಮತ್ತು ಮಣಿಗಳಿಂದ ಹೆಣೆದ ತೊಡುಗೆಗಳು. ಕಾಲಗೆಜ್ಜೆಗಳನ್ನು ಗಿಲಕ್ ಎನಿಸುತ್ತ, ತಂಬೂರಿಯಂತಹ ವಾದ್ಯವೊಂದನ್ನು ಮೃದುವಾಗಿ ಮಿಡಿಯುತ್ತ, ಒಬ್ಬರ ಹಿಂದೆ ಒಬ್ಬರಂತೆ ಹೆಜ್ಜೆ ಹಾಕುತ್ತ, ದಮನ್ ವಾದ್ಯದ ಲಯಕ್ಕೆ ಅವರು ಕುಣಿಯುತ್ತಿದ್ದರೆ, ಮನಸ್ಸು ಸಮ್ಮೋಹನಕ್ಕೆ ಸಿಕ್ಕಿದಂತಾಗಿತ್ತು. <


(ಮುಂದಿನ ವಾರ- ಹಿಮಚಿರತೆಯ ಹೆಜ್ಜೆ ಜಾಡು)


-ಹರೀಶ್ ಕೇರ
harishkhera@gmail.com
ಚಿತ್ರಗಳು: ಪ್ರಿಯಾ ಕೆರ್ವಾಶೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!

'ಇಂಡಿಯಾ' ಮೈತ್ರಿಕೂಟದ ಒಗ್ಗಟ್ಟು ಮುರಿಯುತ್ತಿದೆಯೇ? ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂಗೆ ಅರ್ಜಿ, 4 ಪ್ರಮುಖ ಪಕ್ಷಗಳು "ದೂರ ದೂರ"

'ನೀನು ಭಯೋತ್ಪಾದಕ ಇಲ್ಲಿಂದ ಹೋಗು': ಅಮೆರಿಕದಲ್ಲಿ Nobel ಯೂನಸ್ ವಿರುದ್ಧ ಬಾಂಗ್ಲಾ ವಲಸಿಗರಿಂದ ಘೋಷಣೆ, Video

ಮುಖ್ಯ ಚುನಾವಣಾ ಆಯುಕ್ತರಿಗೆ ಪದ್ಮ ಪ್ರಶಸ್ತಿಗಳೇ ಲಂಚ: ಕೇಂದ್ರ ಸಚಿವ ಪಿಯೂಷ್ ಗೋಯಲ್ ಸ್ಫೋಟಕ ಹೇಳಿಕೆ