ಬೆಕ್ಕು ನನ್ನ ಎಡಗಡೆಯಿಂದ
ಅಡ್ಡ ಹಾದು ಹೋಯಿತೋ
ಅಥವಾ
ನಾನು ಬೆಕ್ಕಿನ ಬಲಗಡೆಯಿಂದ
ಅಡ್ಡ ಹಾದು ಹೋದೆನೋ
ಎಲ್ಲ ಹೇಳಿಕೊಳ್ಳದ
ಒಳಚರ್ಚೆಗಳಾದವು
ಅದೂ ಹೇಳಿಕೊಂಡಿರಬೇಕು
ತನ್ನವರ ಬಳಿ
ಮನುಷ್ಯನೊಬ್ಬ ಅಡ್ಡ ಹಾದು ಹೋದ ಬಗ್ಗೆ
ಎಡವಟ್ಟಾದ ಘಳಿಗೆಯ ಬಗ್ಗೆ
ಯಾಕಾದರೂ ನಾನು ಹೋದೆನೋ
ಅಡ್ಡ ಪಾಪ
ಮನುಷ್ಯನನ್ನು ನಂಬದ ಅದರ
ಕಣ್ಣುಗಳಲ್ಲಿ ಆರದ ಕೆಂಪು
ಬಟ್ಟಲ ಹಾಲಲ್ಲಿ ಮೀಸೆ
ತೋಯಿಸಿಕೊಂಡ ಬೆಕ್ಕು
ಪಟಪಟ ಮೈಜಾಡಿಸಿದಾಗ
ಬಿಳಿ ಚುಕ್ಕೆಗಳು ಗೋಡೆಯ ಮೇಲೆ
ಸದ್ಯ
ರಕ್ತದಲಿ ಮೀಸೆ ನೆನೆಸಿಕೊಳ್ಳಲಿಲ್ಲ!
ಮರಿ ಹುಲಿ ಬೆಕ್ಕಾಗಿ ಪುಕ್ಕಲಾಗಿ
ಮನುಷ್ಯರ ಬಳಿ ಉಳಿದದ್ದು ನೆನಪಾಗಿ
ಅದಾವ ವಂಶಾವಳಿ ಕಣ್ಣತಪ್ಪಿಸಿ
ಬೆಕ್ಕಾಗಿ ಮೂಡಿತೋ
ಥೇಟ್ ಹುಲಿ ನಡಿಗೆಯಲ್ಲಿ
ಹಾಲಿನ ಡಬರಿಗೆ ಬಾಯಿಹಾಕಿ
ಸಂಚಿನಲಿ ಒಲೆಯ ಬಳಿ ಇಲಿಗೆ ಕಾದು
ಮನುಷ್ಯನ ಕಾಲು ಕಾಲಿಗೆ ತೊಡರುವ
ಜೀವ ಮೀಸೆಯಡಿ ಪೆದ್ದು ನಗೆ
ಹಗೆಯ ಮರೆತ ಮುದಿ ಹುಲಿಯ ನೆರಳಂತೆ
ನನ್ನ ಎಡದಿಂದ ಬಲಕ್ಕೆ ಅದೋ
ಅದರ ಬಲದಿಂದ ಎಡಕ್ಕೆ ನಾನೋ
ಹಾದು ಹೋದ ಹಾದಿಗಳು
ಯಾಕೋ ಊರೊಳಗೆ
ಹುಲಿಗಳೇ ಹಾದು ಹೋದಂತಾಗಿ
ಅಡವಿಯೊಳಗೆ ಇಲಿಗಳು ಬೆವೆತು
ಅಡುಗೆಮನೆಯಲ್ಲಿ
ಹುಲಿಯೊಂದು ಹಾಲನ್ನು ಚಪ್ಪರಿಸಿದಂತಾಗಿ
ಕಾಡೊಳಗೆ ಬೆಕ್ಕುಗಳು ಮೀಸೆ ನೀವಿಕೊಂಡವು!
- ವಾಸುದೇವ ನಾಡಿಗ್