ಸಾಪ್ತಾಹಿಕಪ್ರಭ

ಭಾವನೆಗಳ ದೀಪೋತ್ಸವ (ಬುಕ್ ಶಾಪ್)

ಕವಿತೆ ಮಾತ್ರ/ ಕತ್ತಲಗರ್ಭ ಸೀಳಿ/ ಮೃಗತ್ವವನ್ನು ಕೊಂದು/ ಮೃದುತ್ವವ ಹನಿಸಿ/ ಬೆಳಕಿನ ತಿಳಿಗೊಳದಲ್ಲಿ ಮೀಯಿಸಿ/ ಚುಕ್ಕಿಚಂದ್ರಮರ ನಾಡಿಗೆ ಕರೆದೊಯ್ಯುತ್ತದೆ/- ಎಂಬ ನಂಬುಗೆಯಿಂದ ಕಾವ್ಯ ರಚನೆಗೆ ಕೈಹಾಕಿರುವ ಟಿ. ಸತೀಶ್ ಜವರೇಗೌಡ ಅವರು ತಮ್ಮ 'ಹೊಳೆ ಜಂಗಮನ ಜೋಳಿಗೆ' ಸಂಕಲನದಲ್ಲಿ ಹಲವು ಉತ್ತಮ ಕವಿತೆಗಳನ್ನು ನೀಡಿದ್ದಾರೆ. 'ಒಂದು ಹನಿ ಮಳೆಯಲ್ಲಿ; ಹಸಿರಿದೆ, ಉಸಿರಿದೆ, ಸೂರಿದೆ, ಊರಿದೆ, ಜೀವದನಿಯಿದೆ, ಭಾವಬನಿಯಿದೆ' ಎಂಬಂಥ ಗೇಯ ಗೀತೆಗಳನ್ನೂ ಅವರು ರಚಿಸಿದ್ದಾರೆ. 'ನಿನ್ನದೇ ಮನೆಯಂಗಳದಲ್ಲಿನ/ ಮಾಸಿದ ರಂಗೋಲಿಯ ಮೌನ/ ನೆಲ ಮುಗಿಲ ಮೀರಿ ನಿಂತಿದೆ'/- ಇಂಥ ಪ್ರತಿಮೆಗಳು ಸತೀಶ್ ಅವರ ಕಾವ್ಯ ಸಾಮರ್ಥ್ಯದ ಬಗ್ಗೆ ಭರವಸೆಯನ್ನು ಮೂಡಿಸುತ್ತದೆ. ಸಮಕಾಲೀನ ಸಮಸ್ಯೆಗಳು ದುರಂತಗಳ ಕಡೆಗೂ ಕವಿ ಗಮನ ಹರಿಸಿದ್ದಾರೆ. ಬಡತನ, ಸಾಮರಸ್ಯವಿಲ್ಲದ ಸಮಾಜ ಅವರ ಕಾವ್ಯದ ವಸ್ತುವಾಗಿದೆ. 'ಯಾರು ಕೊಂದರು?' ಕವಿತೆ ಇದಕ್ಕೆ ಉತ್ತಮ ನಿದರ್ಶನ. ಸತೀಶ್ ಅವರ ಕಾವ್ಯದ ಬನಿ ಬತ್ತದಿರಲಿ.
ಕೃತಿ: ಹೊಳೆ ಜಂಗಮನ ಜೋಳಿಗೆ.
ಪ್ರಕಾರ: ಕವನ
ಏಕೆ ಓದಬೇಕು?: ಕವಿತೆಯ ಪಿಸುಮಾತು ಕೇಳಲು
ಪ್ರ: ಪ್ರತಿಭಾ ಪ್ರಕಾಶನ, ಮಂಗಲ, ಮಂಡ್ಯ ತಾ. ಪುಟಗಳು 88, ಬೆಲೆ ರು. 60


ಪ್ರಶ್ನೆಗಳಲ್ಲೇ ಬೆಂಗಳೂರು
ಬೆಂಗಳೂರು ಅಂದರೆ ಏನು? ವಿಧಾನಸೌಧವೆ, ಮೆಟ್ರೋ ರೈಲೆ, ರಾಜಕುಮಾರ್ ಅವರೆ, ಇಸ್ಕಾನ್ ಟೆಂಪಲ್ಲೆ, ಎಂ.ಜಿ.ರೋಡೆ, ಕಮರ್ಷಿಯಲ್ ಸ್ಟ್ರೀಟೆ, ಇನ್ಫೋಸಿಸ್ಸೆ, ಅನಂತಮೂರ್ತಿಯವರೆ, ಶಿವರುದ್ರಪ್ಪನವರೆ, ಕನ್ನಡಸಾಹಿತ್ಯ ಪರಿಷತ್ತೆ? ಇವೆಲ್ಲವುಗಳ ಮೊತ್ತವೇ ಬೆಂಗಳೂರು. ಬೆಂಗಳೂರಿನ ಬಗ್ಗೆ ಹಲವಾರು ಕುತೂಹಲಗಳಿವೆ. ಈ ಎಲ್ಲ ಕುತೂಹಲಗಳಿಗೆ ನಾರಾಯಣ ರಾಯಚೂರು ಅವರು ತಮ್ಮ 'ನಮ್ಮ ಬೆಂಗಳೂರು.. ನಮಗೆಷ್ಟು ಗೊತ್ತು???' ಕೃತಿಯಲ್ಲಿ ಉತ್ತರ ನೀಡಲು ಯತ್ನಿಸಿದ್ದಾರೆ. ಇವು ಪ್ರಶ್ನೋತ್ತರಗಳ ರೂಪದಲ್ಲಿ ಇವೆ. ಏಳು ನೂರು ಪ್ರಶ್ನೆಗಳಿಗೆ ಅವರು ಇಲ್ಲಿ ಉತ್ತರ ನೀಡಿದ್ದಾರೆ. ಇವೆಲ್ಲವನ್ನು ಓದಿದ ಮೇಲೆ ಬೆಂಗಳೂರಿನ ಒಂದು ಸಮಗ್ರ ಚಿತ್ರ ನಮಗೆ ದೊರೆಯುತ್ತದೆ. ಬೆಂಗಳೂರಿನ ಕುರಿತ ಯಾವುದಾದರೂ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಇದೊಂದು ಉಪಯುಕ್ತ ಕೈಪಿಡಿ. ಇಲ್ಲಿಯ ಮಾಹಿತಿಯ ಸಂಗ್ರಹದ ಹಿಂದೆ ನಾರಾಯಣ ಅವರ ಶ್ರಮ ಎದ್ದು ಕಾಣುತ್ತದೆ.
ಕೃತಿ: ನಮ್ಮ ಬೆಂಗಳೂರು; ನಮಗೆಷ್ಟು ಗೊತ್ತು???
ಪ್ರಕಾರ: ಮಾಹಿತಿ
ಏಕೆ ಓದಬೇಕು?: ಬೆಂಗಳೂರಿನ ಬಗ್ಗೆ ತಿಳಿಯಲು
ಪ್ರ: ಜಯಂತ್ ಬುಕ್ ಏಜೆನ್ಸಿ, ಬೆಂಗಳೂರು. ಪುಟಗಳು 100, ಬೆಲೆ ರು. 55



ಧಾರ್ಮಿಕ ವಿಧಿವಿಧಾನಗಳು
ಹಿಂದೂ ಧರ್ಮದಲ್ಲಿ ಜನನ, ಉಪನಯನ, ಮದುವೆ, ಸಾವು ಇತ್ಯಾದಿ ಸಂದರ್ಭಗಳಲ್ಲಿ ವಿಶಿಷ್ಟ ರೀತಿಯ ಆಚರಣೆಗಳು ಇರುತ್ತವೆ. ಇವು ಪ್ರದೇಶದಿಂದ ಪ್ರದೇಶಕ್ಕೆ, ಜಾತಿಯಿಂದ ಜಾತಿಗೆ, ಪಂಗಡ, ಉಪಪಂಗಡಗಳಿಗೆ ಭಿನ್ನವಾಗಿರುತ್ತವೆ. ಈ ರೀತಿ ನೀತಿ ಪದ್ಧತಿ ಆಚರಣೆಗಳನ್ನು ಚಿತ್ರಲೇಖ ಸಿಂಗ್ ಮತ್ತು ಪ್ರೇಮನಾಥ್ ಅವರು ಇಂಗ್ಲಿಷಿನಲ್ಲಿ ಬರೆದಿದ್ದರು. ಅದನ್ನು ಸು. ರುದ್ರಮೂರ್ತಿ ಶಾಸ್ತ್ರಿ ಕನ್ನಡಿಸಿದ್ದಾರೆ. ಉಪನಯನದಲ್ಲಿ ಜನಿವಾರವನ್ನು ಹೇಗೆ ತಯಾರಿಸಬೇಕು, ಎಷ್ಟು ಗಂಟುಗಳನ್ನು ಹಾಕಬೇಕು ಎಂಬ ವಿವರಗಳು ಇದರಲ್ಲಿವೆ. ಮದುವೆಯ ಪ್ರಕಾರಗಳು ಎಷ್ಟಿವೆ, ಹಿಂದೂ ವಿವಾಹ ಕಾಯ್ದೆ ಏನು ಹೇಳುತ್ತದೆ, ಹೆಣ್ಣು ಗಂಡಿನ ಆಯ್ಕೆ ಹೇಗಿರಬೇಕು, ಸತ್ತ ನಂತರ ಉತ್ತರಕ್ರಿಯೆಗಳು ಹೇಗೆ ನಡೆಯುತ್ತವೆ, ಸತ್ತವರು ದೆವ್ವ ಪಿಶಾಚಿಗಳಾಗುತ್ತಾರೆಯೆ, ಶವ ದಹನವನ್ನು ಹೇಗೆ ಮಾಡುತ್ತಾರೆ, ಗುಂಡಿಯನ್ನು ಹೇಗೆ ಮುಚ್ಚಬೇಕು, ತೋರಣ ಹೇಗೆ ಕಟ್ಟಬೇಕು ಎಂಬಂಥ ವಿವರಗಳೆಲ್ಲ ಇವೆ.
ಕೃತಿ: ಹಿಂದು ರೀತಿ ನೀತಿಗಳು ಪದ್ಧತಿಗಳು ಮತ್ತು ಆಚರಣೆಗಳು
ಪ್ರಕಾರ: ಅನುವಾದ, ಏಕೆ ಓದಬೇಕು?: ಸಾಂಪ್ರದಾಯಿಕ ಬದುಕನ್ನು ಅರಿಯಲು, ಪ್ರ: ಐಬಿಎಚ್ ಪ್ರಕಾಶನ, ಬೆಂಗಳೂರು. ಪುಟಗಳು 204, ಬೆಲೆ ರು. 145



ಸ್ವಪ್ನ ಸಾದೃಶ್ಯ
ಕನ್ನಡ ಸಿನಿಮಾ ರಂಗಕ್ಕೆ ಸುಮಾರು ಎಪ್ಪತ್ತೈದು ವರ್ಷಗಳು ತುಂಬಿವೆ. ಇಂಥ ಸಂದರ್ಭದಲ್ಲಿ ಈ ರಂಗದ ಏಳು ಬೀಳು ಸಾಧನೆಗಳು ಮತ್ತು ಸಾಧ್ಯತೆಗಳ ಕಡೆಗೆ ಒಂದು ನೋಟವನ್ನು ಹರಿಸುವುದು ಸೂಕ್ತವೇ. ಹಿಂದಿ ಸಿನಿಮಾದ ಮಾರುಕಟ್ಟೆಗೆ ಹೋಲಿಸಿದರೆ ಕನ್ನಡದ್ದು ತುಂಬಾ ಚಿಕ್ಕದ್ದೇ. ಪಕ್ಕಾ ವಾಣಿಜ್ಯ ಲೆಕ್ಕಾಚಾರದ ಸಿನಿಮಾ, ಪಕ್ಕಾ ಕಲಾತ್ಮಕ ಸಿನಿಮಾ ಹಾಗೂ ಅವೆರಡರ ಕಲಸುಮೇಲೋಗರದ ಸಿನಿಮಾಗಳು ಇಂದು ಬರುತ್ತಿವೆ. ಸಿನಿಮಾ ಒಂದರ ಬಗ್ಗೆ ಗಂಭೀರ ಚರ್ಚೆ, ವಿಮರ್ಶೆ ಕೇವಲ ಸಾಂಸ್ಕೃತಿಕ ಅಧ್ಯಯನ ಮಾತ್ರವಲ್ಲ, ಬದಲಿಗೆ ಸಿನಿಮಾ ಎಂಬ ಕಲಾ ಪ್ರಕಾರಕ್ಕೂ ಸಹಕಾರಿ ಎನ್ನುವ ನೆಲೆಯಲ್ಲಿ ಒಂದು ದಶಕದ ಹದಿಮೂರು ಚಿತ್ರಗಳ ವಿಮರ್ಶೆ, ಚಿಂತನೆ ಇಲ್ಲಿದೆ. ಸಿನಿಮಾ ಪ್ರಕಾರದ ವಿಮರ್ಶೆಯ ಮಾನದಂಡಗಳ ಬಗ್ಗೆ ಇಲ್ಲಿಯ ಲೇಖನಗಳು ಚರ್ಚೆಯನ್ನು ಹುಟ್ಟುಹಾಕುವುದರಲ್ಲಿ ಸಂಶಯವಿಲ್ಲ. ಈ ಕಾರಣಕ್ಕೆ ಇದೊಂದು ವಿಶಿಷ್ಟ ಕೃತಿಯಾಗಿದೆ.
ಕೃತಿ: ಸ್ವಪ್ನ ಸಾದೃಶ್ಯ, ಪ್ರಕಾರ: ಸಿನಿಮಾ ಚಿಂತನೆ, ಏಕೆ ಓದಬೇಕು?: ಚಿತ್ರರಂಗದ ಒಳನೋಟ ತಿಳಿಯಲು, ಪ್ರ: ಸಂವಾದ ಡಾಟ್ ಕಾಂ, ಬೆಂಗಳೂರು. ಪುಟಗಳು 132, ಬೆಲೆ ರು. 90


ಕುವೆಂಪು ಕಾವ್ಯಯಾನ
ಕುವೆಂಪು ಅವರ ಕಾವ್ಯವನ್ನು ಓದುವ ಸುಖವೇ ಬೇರೆ. ಡಾ.ಬಿ.ಆರ್. ಸತ್ಯನಾರಾಯಣ ಅವರು ಕುವೆಂಪು ಕವಿತೆಗಳ ಪುನರವಲೋಕನ ಮಾಡಿದ್ದಾರೆ. 'ಇಲ್ಲಿಯ ಬರಹಗಳು ಕುವೆಂಪು ಕಾವ್ಯದ ವಿಮರ್ಶೆಯಲ್ಲ; ಕೇವಲ ಮರು ಓದು... ನಾನು ವಿಮರ್ಶಕನಲ್ಲ; ಕೇವಲ ಒಬ್ಬ ಓದುಗ ಮಾತ್ರ... ಒಬ್ಬ ಓದುಗನಾಗಿ, ಕೆಲವು ಕವನಗಳ ಸಾಂದರ್ಭಿಕ ಹಿನ್ನೆಲೆಯಲ್ಲಿ ನಡೆಸಿದ ಕಾವ್ಯಯಾತ್ರೆಯ ಫಲವೇ ಈ ಬರಹಗಳು.' ಎಂದು ಹೇಳಿದ್ದಾರೆ. ಈ ಕವನಗಳು ಯಾವ ಸಂದರ್ಭದಲ್ಲಿ ಹುಟ್ಟಿದವು ಎಂಬ ಸಾಂದರ್ಭಿಕ ಅರಿವನ್ನು ಇಲ್ಲಿ ಲೇಖಕರು ಹೊರಹಾಕಿದ್ದಾರೆ. ಕವಿತೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಲು ಇದು ಅನುಕೂಲವಾಗಿದೆ. ಕುವೆಂಪು ಕಾವ್ಯದ ಬಗ್ಗೆ ಆಸಕ್ತಿಯನ್ನು ಕೆರಳಿಸುವುದೇ ಇಲ್ಲಿಯ ಬರೆಹಗಳ ಮೂಲ ಉದ್ದೇಶ. ಪಾಮರರು ಲೇಖಕರ ದೃಷ್ಟಿಯಲ್ಲಿದ್ದರೂ ಇದು ಪಂಡಿತರಿಗೂ ಮಾನ್ಯವಾದ ಕೃತಿ. ಕುವೆಂಪು ಪ್ರಸ್ತುತತೆಯನ್ನು ಇದು ಬಿಚ್ಚಿ ಹೇಳುತ್ತದೆ.
ಕೃತಿ: ಕುವೆಂಪು ಕಾವ್ಯಯಾನ
ಪ್ರಕಾರ: ಸಾಂದರ್ಭಿಕ ಕವಿತೆಗಳ ರಸಯಾತ್ರೆ
ಏಕೆ ಓದಬೇಕು?: ಕುವೆಂಪು ಕಾವ್ಯದ ರಸಾಸ್ವಾದನೆಗೆ
ಪ್ರ: ದೇಸಿ ಪುಸ್ತಕ, ಬೆಂಗಳೂರು. ಪುಟಗಳು 288, ಬೆಲೆ ರು. 200


ಶಮಂತ ಸಮನ್ವಯ
ಪತ್ರಕರ್ತೆ ಡಿ.ಎಸ್. ಶಮಂತ ಅವರು ಪತ್ರಿಕೆಗಳಿಗೆ ಬರೆದ ರಂಗಭೂಮಿ ಮತ್ತು ಸಿನಿಮಾ ಪ್ರಪಂಚಕ್ಕೆ ಸೇರಿದ ಲೇಖನಗಳ ಸಂಕಲನ 'ಸಮನ್ವಯ'. ಇದರಲ್ಲಿ ಐವತ್ತೊಂದು ಲೇಖನಗಳಿವೆ. ಕೆಲವು ಸಂಸ್ಥೆಗಳ ಬಗ್ಗೆ ಬರೆದಿದ್ದರೆ ಇನ್ನು ಕೆಲವು ವ್ಯಕ್ತಿಗಳ ಬಗ್ಗೆ ಬರೆದಿರುವರು. ಕನ್ನಡದಲ್ಲಿ ರಂಗಭೂಮಿ ಮತ್ತು ಸಿನಿಮಾ ಬರೆವಣಿಗೆಗೆ ವಿಶಿಷ್ಟ ಆಯಾಮವನ್ನು ತಂದುಕೊಟ್ಟ ಕೆಲವು ಬರೆಹಗಳನ್ನು ಇಲ್ಲಿ ಗುರುತಿಸಬಹುದು. ತಾವು ಬರೆಯಲು ಆರಂಭಿಸಿದ ಕಾಲದಲ್ಲಿ ಇದ್ದ ಬರೆವಣೆಗೆಗೆ ಭಿನ್ನವಾಗಿ ಉದ್ದೇಶಪೂರ್ವಕ ಎನ್ನುವಂತೆ ಬರೆಯಲು ಆರಂಭಿಸಿದ ಶಮಂತಾ ಅದರಲ್ಲಿ ಯಶಸ್ವಿಯಾದರು ಕೂಡ. ಜಯಂತಿ, ಅಂಬರೀಷ, ಜಿ.ವಿ.ಅಯ್ಯರ್, ಬಿ.ಎಸ್.ರಂಗಾ ಮೊದಲಾದವರ ಬಗ್ಗೆ ಬರೆದ ಲೇಖನಗಳು ಮಾಹಿತಿಪೂರ್ಣವಾಗಿವೆ. ಶಮಂತಾ ಅವರ ಚಾರಣ ಸಾಹಸದ ಬಗೆಗಿನ ಲೇಖನಗಳೂ ಇಲ್ಲಿವೆ. ಕರ್ನಾಟಕದ ರಂಗ ಚಳುವಳಿಯನ್ನು ಗುರುತಿಸುವ ಚಾರಿತ್ರಿಕ ದಾಖಲೆಯಾಗಿ ಇಲ್ಲಿಯ ಲೇಖನಗಳು ನಿಲ್ಲುತ್ತವೆ.
ಕೃತಿ: ಶಮಂತ ಸಮನ್ವಯ
ಪ್ರಕಾರ: ಪತ್ರಿಕಾ ಲೇಖನಗಳು
ಏಕೆ ಓದಬೇಕು?: ರಂಗಭೂಮಿ, ಸಿನಿಮಾ ಬಗ್ಗೆ ಅರಿಯಲು
ಪ್ರ: ಐಬಿಎಚ್ ಪ್ರಕಾಶನ, ಬೆಂಗಳೂರು. ಪುಟಗಳು 288, ಬೆಲೆ ರು. 200


= -ಡಾ. ವಾಸುದೇವ ಶೆಟ್ಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ