'ಕೌನ್ ಬನೇಗಾ ಕರೋಡ್‌ಪತಿ' ಯಲ್ಲಿ ಕೋಲ್ಯ 13ನೇ ಪ್ರಶ್ನೆ ತಲುಪಿದ.
ಅಮಿತಾಭ್: 25 ಲಕ್ಷ ಮೌಲ್ಯದ 13ನೇ ಕ್ವಶ್ಚನ್ ಈಗ ನಿಮ್ಮೆದುರಿದೆ. ಕಂಪ್ಯೂಟರ್ ಜಿ, ಪ್ರಶ್ನೆ ಸಿದ್ಧಗೊಳಿಸಿ...
ಒಂದೇ ಸೆಕೆಂಡಲ್ಲಿ ಚಕ ಚಕ ಅಂತ ಪ್ರಶ್ನೆ ಪರದೆ ಮೇಲೆ ಮೂಡಿತು.
ಅಮಿತಾಭ್: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಯಾರ ಮಗ?
ಎ) ಅಮಿತಾಭ್ ಬಚ್ಚನ್, ಬಿ) ಲಾಲೂ ಪ್ರಸಾದ್ ಯಾದವ್, ಸಿ) ಅಬ್ದುಲ್ ಕಲಾಂ, ಡಿ) ಮೊಹ್ಮದ್ ಅಜರುದ್ದೀನ್.
ನಿಮ್ಮ ಉತ್ತರ ಏನು?
(ಕೋಲ್ಯ ತಲೆ ಕೆರೆದುಕೊಳ್ಳತೊಡಗಿದ)
ಅಮಿತಾಭ್: ನಿಮ್ಮ ಪಾಲಿಗೆ ಎರಡು ಲೈಫ್‌ಲೈನ್‌ಗಳಿವೆ.
ಕೋಲ್ಯ: ಇಲ್ಲಾ, ನನಗೆ ಉತ್ತರ ಗೊತ್ತು. ಆದರೂ ಅನುಮಾನ. ಯಾವ್ದಕ್ಕೂ 'ಫಿಫ್ಟಿ- ಫಿಫ್ಟಿ' ಬಳಸ್ಕೋತ್ತೀನಿ.
ಅಮಿತಾಭ್: ಓಕೆ ಕಂಪ್ಯೂಟರ್ ಜಿ, 2 ತಪ್ಪು ಉತ್ತರಗಳನ್ನು ಡಿಲೀಟ್ ಮಾಡಿ, 2 ಆಯ್ಕೆಗಳನ್ನಷ್ಟೇ ಕೊಡು.
ಮತ್ತೆ ಒಂದೇ ಸೆಕೆಂಡಿನಲ್ಲಿ ಕಂಪ್ಯೂಟರ್ ಪರದೆ ಮೇಲೆ 2 ಉತ್ತರಗಳಷ್ಟೇ ಉಳಿದವು.
ಬಿ) ಲಾಲೂ ಪ್ರಸಾದ್ ಯಾದವ್.
ಡಿ) ಮೊಹ್ಮದ್ ಅಜರುದ್ದೀನ್.
ಈಗ ಅಮಿತಾಭ್ ಬಚ್ಚನ್‌ಗೆ ಶಾಕ್. 'ಅರೆ! ಈ ಕಂಪ್ಯೂಟರೇ ಸರಿ ಇಲ್ವಾ?' ಎಂದುಕೊಂಡ್ರೂ ತಾನು ಕೂತ ಸ್ಥಾನಮಾನದ ಮರ್ಯಾದೆ ಕಾಪಾಡಿಕೊಳ್ಳುವ ಸಲುವಾಗಿ ಕಾರ್ಯ ಕ್ರಮ ಮುಂದುವರಿಸಿದ.
ಆದರೆ, ಈ ಎರಡು ಉತ್ತರಗಳೂ ಕೋಲ್ಯನಲ್ಲಿ ಗಲಿಬಿಲಿ ಮೂಡಿಸಿದವು.
ಅಮಿತಾಭ್: ಏನು, ಉತ್ತರ ಗೊತ್ತಾಯ್ತಾ?
ಕೋಲ್ಯ: ಇಲ್ಲ, ಯಾಕೋ ಕನ್‌ಫ್ಯೂಸ್ ಆಗ್ತಿದೆ. ನಾನು ಫ್ರೆಂಡ್‌ಗೆ ಕಾಲ್ ಮಾಡ್ಬಹುದಾ?
ಅಮಿತಾಭ್: ಓ, ಧಾರಾಳವಾಗಿ. ಯಾರಿಗೆ ಕಾಲ್ ಮಾಡ್ತೀರಾ?
ಕೋಲ್ಯ: ಇಲ್ಲಾ ಈ ಉತ್ತರಕ್ಕೆ ನಾನು ಜಯಾ ಬಚ್ಚನ್ ಅವರನ್ನೇ ಕೇಳ್ಬೇಕು!