ಸಾಪ್ತಾಹಿಕಪ್ರಭ

ನಾಸ ಪ್ರಸಂಗ

ಯಕ್ಷಗಾನದಲ್ಲಿ ವಿರಳವಾಗಿ ಪ್ರದರ್ಶನಗೊಳ್ಳುವ ರಾಮಾಯಣದ ಪಂಚವಟಿ ಪ್ರಸಂಗದ ಒಂದು ಭಾಗ 'ನಾಸಚ್ಛೇದ'. ಅನಿವಾರ್ಯವಾದ ವನವಾಸದಲ್ಲಿ ಶ್ರೀರಾಮ ಪಂಚವಟಿಯಲ್ಲಿ ಬೀಡು ಬಿಟ್ಟಾಗ ರಕ್ಕಸರ ಉಪಟಳ ಕುರಿತಾಗಿ ಮುನಿಗಳು ದೂರಿಡುತ್ತಾರೆ. ಮೃಗ ಬೇಟೆಗೆ ಬಂದ ರಕ್ಕಸಿ ಶೂರ್ಪನಖಿ, ರಾಮನನ್ನು ಕಂಡು ಮೋಹಿಸಿ ಅವನನ್ನು ವರಿಸಲು ವೇಷ ಮರೆಸಿಕೊಂಡು ಬರುತ್ತಾಳೆ. ರಕ್ಕಸಿಯ ತಂತ್ರ ಅರಿತ ರಾಮ 'ನಾನು ವಿವಾಹಿತ. ತಮ್ಮ ಲಕ್ಷ್ಮಣನನ್ನು ಕೇಳು' ಎನ್ನುತ್ತಾನೆ. ಲಕ್ಷ್ಮಣ ಆಕೆಯನ್ನು ಮದುವೆಯಾಗಲು ತಿರಸ್ಕರಿದರೂ, ಅಣ್ಣನೇ ನಿನ್ನನ್ನು ಕಳುಹಿಸಿದ್ದೆನ್ನುವ ಕುರಿತು ಕುರುಹು ತಂದರೆ ಯೋಚಿಸುವುದಾಗಿ ಹೇಳುತ್ತಾನೆ. ನಂತರ ರಾಮನ ಆದೇಶದಂತೆ ರಕ್ಕಸಿಯ ಮೂಗನ್ನು ಕತ್ತರಿಸಿ ಕಳುಹಿಸುತ್ತಾನೆ. ನಾಸಚ್ಛೇದಗೊಂಡು ಅಪಮಾನಗೊಂಡ ಶೂರ್ಪನಖಿ ಇದಕ್ಕೆ ಪ್ರತೀಕಾರ ಮಾಡಲು ಅಣ್ಣನ ಬಳಿ ಒಂದಕ್ಕೆರಡು ಕಥೆ ಹೇಳಿ ಮುಂದೆ ಸೀತಾಪಹಾರವಾಗಿ ರಾಮಾಯಣಕ್ಕೆ ಕಾರಣಳಾಗುತ್ತಾಳೆ.
ಕಲಾಕದಂಬ ಆರ್ಟ್ಸ್ ಸೆಂಟರ್ ಸಂಸ್ಥೆಯು ಪ್ರತಿ ತಿಂಗಳು ನೀಡುತ್ತಾ ಬಂದಿರುವ 'ಮಾಸದ ಮೆಲುಕು' ಸರಣಿಯ 23ನೇ ಕಾರ್ಯಕ್ರಮದಲ್ಲಿ 'ನಾಸಚ್ಛೇದ' ಯಕ್ಷಗಾನ ಪ್ರಸಂಗ ಇತ್ತೀಚೆಗೆ ಬೆಂಗಳೂರಿನ ಚಿಕ್ಕಲಸಂದ್ರದ ಮನೋರಂಜಿನಿ ಸಾಂಸ್ಕೃತಿಕ ವೇದಿಕೆಯಲ್ಲಿ ಶ್ರೀ ಸಿದ್ಧಿಗಣಪತಿ ದೇವಾಲಯದ ಸಾಂಸ್ಕೃತಿಕ ವಿಭಾಗದ ಸಹಯೋಗದೊಂದಿಗೆ ನಡೆಯಿತು. ಪ್ರಸಂಗವನ್ನು ಕಲಾವಿದರು ಅಚ್ಚುಕಟ್ಟಾಗಿ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.
ಶೂರ್ಪನಖಿಯಾಗಿ ರಾಜೇಶ್ ಆಚಾರಿ ಅವರ ಮುಖವರ್ಣಿಕೆ, ರಂಗದಲ್ಲಿನ ಆರ್ಭಟ, ಮಾಯಾ ಶೂರ್ಪನಖಿಯಾಗಿ ರಾಧಾಕೃಷ್ಣ ಉರಾಳ ಅವರ ಅಭಿನಯ ಮತ್ತು ಲಾಲಿತ್ಯ, ಲಕ್ಷ್ಮಣನಾಗಿ ಬಂದ ಸುರೇಶ್ ತಂತ್ರಾಡಿ, ನೃತ್ಯ ಅಬ್ಬರ ಮುಮ್ಮೇಳದ ಶಕ್ತಿಯನ್ನು ಅನಾವರಣಗೊಳಿಸಿತು. ಕುರುಹು ತಂದಾಗ ಅದನ್ನು ನೋಡಿ ಅಣ್ಣನ ಆಣತಿಯನ್ನು ಕುರಿತು ತೀರ್ಮಾನಿಸುವ ಸಂದರ್ಭ ಲಕ್ಷ್ಮಣ ಬಹಳ ಹೊತ್ತು ಕುಣಿಯುವ ಸನ್ನಿವೇಶ ಸೃಷ್ಟಿಸುವುದು ಯಕ್ಷಗಾನದಲ್ಲಿ ಸಾಮಾನ್ಯವಾದರೂ, ರಂಗದಲ್ಲಿ ಜೊತೆ ಪಾತ್ರದ ಪೋಷಣೆಗೆ ಸಮಸ್ಯೆಯೆನಿಸುವುದು ಸಹಜ. ಇಂತಹ ಸನ್ನಿವೇಶವನ್ನು ತಮ್ಮ ಮದುವೆಯ ಕನಸು, ಸರಸವಾಡುವ ಕಲ್ಪನೆಯಂಥ ಅಭಿನಯದ ಮೂಲಕ ಮಾಯಾ ಶೂರ್ಪನಖಿ ತೋರಿದ್ದು ಆಕರ್ಷಣೀಯ.
ಆದರ್ಶ ಪುರುಷನೆನಿಸುವ ರಾಮ ಹೆಣ್ಣನ್ನು ಹೀಗೆ ಗೋಳು ಹೊಯ್ದದ್ದು ಸರಿಯೇ ಎಂಬ ಜಿಜ್ಞಾಸೆ ಕೆಲವರನ್ನು ಕಾಡುವುದಿದೆ. ತಪ್ಪು ಮಾಡುವವರು ಯಾರೇ ಆದರೂ ಶಿಕ್ಷಾರ್ಹರು. ಎಲ್ಲಾ ಕಡೆ ಆವರಿಸಿಕೊಂಡಿರುವ ರಕ್ಕಸರನ್ನು ಹುಡುಕಿ ಹೋಗುವುದಕ್ಕಿಂತ ಅವರೇ ತಮ್ಮನ್ನು ಹುಡುಕಿ ಬರುವಂತೆ ಮಾಡಿ, ನಿಂತ ನಿಲುವಿನಲ್ಲಿ ಅವರನ್ನೆಲ್ಲ ಕೊಲ್ಲುವ ಉದ್ದೇಶ ರಾಮನದು. ಹೀಗೆ ಸಾಂದರ್ಭಿಕ ಚಿಂತನಾಪೂರ್ವಕ ಅರ್ಥಗಾರಿಕೆಯನ್ನು ರಾಮನ ಪಾತ್ರ ನಿರ್ವಹಿಸಿದ  ಅಂಬರೀಷ್ ಭಟ್ ನೀಡಿದರು. ವಿಶ್ವನಾಥ ಉರಾಳ ಸೀತೆಯಾಗಿ, ದೇವರಾಜ ಕರಬ ಮುನಿಗಳ ಪೋಷಕ ಪಾತ್ರವನ್ನು ನಿರ್ವಹಿಸಿದ್ದರು.
ಯಕ್ಷಗಾನವನ್ನು ಆಕರ್ಷಣೆಗೊಳಿಸುವಲ್ಲಿ ಹಿಮ್ಮೇಳದ ಪ್ರಬುದ್ಧತೆ ಅತಿ ಮುಖ್ಯ. ಸಾಂಪ್ರದಾಯಿಕ ಶೈಲಿಗೆ ಹೊಸತನದ ಲೇಪ ಕೊಡುವ ಪ್ರಯತ್ನವನ್ನು ಭಾಗವತರಾಗಿ ಶಂಕರ್ ಬಾಳಕುದ್ರು ಮಾಡಿದರೆ ಮದ್ದಲೆ ವಾದನದಲ್ಲಿ ರಾಜೇಶ್ ಆಚಾರಿ, ಚಂಡೆ ನುಡಿಸುವಲ್ಲಿ ಅಮೃತದೇವ ಜತೆಯಾದರು. ನೇಪಥ್ಯದಲ್ಲಿ ನಿತ್ಯಾನಂದ ನಾಯಕ್, ಮುರಳೀಧರ ನಾವಡ, ಚಿದಾನಂದ ಕುಲಕರ್ಣಿ, ಸತ್ಯನಾರಾಯಣ, ಪ್ರತಾಪ್, ಕೆ.ಎನ್. ಅಡಿಗ, ಅಶೋಕ ಉಡುಪ, ಮಮತ ಆರ್.ಕೆ. ಅವರ ಸಹಕಾರವಿತ್ತು.

-ಡಾ. ಕೌಶಿಕ್ ಉರಾಳ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೀವೂ ಪ್ರಧಾನಿ ಮೋದಿಯಂತೆಯೇ ದಬ್ಬಾಳಿಕೆದಾರರು, ಧೈರ್ಯವಿದ್ದರೆ 'ನಿಮ್ಮ ಆ ಚಿಕ್ಕ ಶಾಲು' ಧರಿಸಿ ಹೊರ ಬಂದು ನೋಡಿ: BJP-RSSಗೆ ರಾಹುಲ್ ಗಾಂಧಿ ಸವಾಲು

SC/ST ಮೀಸಲಾತಿ ಹೆಚ್ಚಳ ರದ್ದು: ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಬಿಗ್ ಶಾಕ್, ಭಾರೀ ಹಿನ್ನಡೆ..!

ಕಾವೇರಿ ಕಗ್ಗಂಟು: "ಕುಡಿಯಲು ನಮಗೇ ನೀರಿಲ್ಲ, ತಮಿಳುನಾಡಿಗೆ ಕೊಡೋದು ಹೇಗೆ..?" ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ ವಾದ..!

ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್ ಭದ್ರಕೋಟೆ ಮುರಿಯಲು BJP-JDS ರಣತಂತ್ರ; HDK ನೇತೃತ್ವದಲ್ಲಿ ಮಹತ್ವದ ಸಭೆ..!

ಮಲೆನಾಡು, ಕರಾವಳಿ ರೈಲ್ವೆ ಯೋಜನೆಗಳಿಗೆ ಕೇಂದ್ರ ಸರ್ಕಾರ ಆದ್ಯತೆ: ಕೇಂದ್ರ ಸಚಿವ ವಿ. ಸೋಮಣ್ಣ