ಇಡೀ ದೇಶದಲ್ಲಿ ಇನ್ನು ಸಂಯುಕ್ತ ಜನತಾದಳದ ಬಾವುಟ ಹಾಗೂ ಆ ಪಕ್ಷದ ಚುನಾವಣೆ ಚಿಹ್ನೆಯಾದ ಬಾಣ ಬೆಳಗುತ್ತಿರುವುದು ಬಿಹಾರದಲ್ಲಿ ಮಾತ್ರ. ಇತರ ಕೆಲವು ರಾಜ್ಯಗಳಲ್ಲಿ ಪಕ್ಷದ ಘಟಕಗಳಿದ್ದರೂ ಅವೆಲ್ಲವೂ ದುರ್ಬಲ ಘಟಕಗಳೇ.
ಈಗ ನಿತೀಶ್ ಕುಮಾರ್, ಬಿಹಾರದ ಸಂಯುಕ್ತ ಜನತಾದಳದ ಮುಖ್ಯಮಂತ್ರಿ. ಆದರೆ ಅವರು ನಡೆಸುತ್ತಿರುವುದು ಬಿಜೆಪಿಯ ಜತೆ ಸಮ್ಮಿಶ್ರ ಸರ್ಕಾರವನ್ನು- ಹೀಗಾಗಿ ಅವರು ರಾಷ್ಟ್ರಮಟ್ಟದಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಜನತಾಂತ್ರಿಕ ಕೂಟದಲ್ಲೇ ಇದ್ದಾರೆ. ಆದರೆ ಆ ಸಹಬಾಳ್ವೆ ಅವರಿಗೂ ಹಿತಕರವಾಗಿಲ್ಲ, ಬಿಜೆಪಿ ನಾಯಕರಿಗೂ ಮನಶಾಂತಿಯನ್ನು ನೀಡಿಲ್ಲ.
ಮೂಲತಃ ಅವರು ಲೋಕನಾಯಕ ಜಯಪ್ರಕಾಶ ನಾರಾಯಣರ ನಾಯಕತ್ವ ಒಪ್ಪಿಕೊಂಡಿದ್ದ ನಿತೀಶ್ ಪ್ರಖ್ಯಾತ ಸಮಾಜವಾದಿ ಚಿಂತಕ ಡಾ. ರಾಮಮನೋಹರ ಲೋಹಿಯಾ ಅವರ ಚಿಂತನೆಯ ದಿಕ್ಕನ್ನು ಮೆಚ್ಚಿದವರು. ಅಧಿಕಾರ ಸಿಕ್ಕಾಗ ಆ ಹಾದಿಯಲ್ಲೇ ಸಾಗಲು ಪ್ರಯತ್ನಿಸಿದ್ದಾರೆ. ಆ ಪ್ರಯತ್ನದಲ್ಲಿ ಸಾಕಷ್ಟು ಯಶಸ್ಸನ್ನು ಕಂಡಿದ್ದಾರೆ.
ಬಿಹಾರ ಸರ್ಕಾರದ ಕೆಲಸದಲ್ಲಿ ಅವರ ಜತೆ ಬಿಜೆಪಿಯ ಸ್ಥಳೀಯ ನಾಯಕರೂ ನಿಷ್ಠೆಯಿಂದ ಪಾಲ್ಗೊಂಡಿದ್ದಾರೆ, ಒಳ್ಳೆಯ ಹೆಸರನ್ನು ಸಂಪಾದಿಸಿದ್ದಾರೆ. ಆದರೆ ಬಿಜೆಪಿಯ ನಾಯಕ, ಈಗ ರಾಷ್ಟ್ರದ ಉದ್ದಗಲಕ್ಕೂ ಪ್ರಚಂಡ ರೀತಿಯ ಪ್ರಚಾರ ಪಡೆದಿರುವ, ಗುಜರಾತ್ ಸಿಎಂ ನರೇಂದ್ರ ಮೋದಿ ಅವರ ಕಾರ್ಯಶೈಲಿಯ ಸಂಬಂಧದಲ್ಲಿ ನಿತೀಶ್- ಮೋದಿ ನಡುವೆ ಜಗಳವಾಗಿದೆ. ಮೋದಿ ಬಿಹಾರಕ್ಕೆ ಪ್ರಚಾರಕ್ಕೆ ಬರಲೇಬಾರದೆಂದು ಚುನಾವಣೆ ಸಮಯದಲ್ಲೂ ನಿತೀಶ್ ಹಟ ಹಿಡಿದಿದ್ದರು.
ಗುಜರಾತಿನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸಂಯುಕ್ತ ಜನತಾದಳದ ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ, ಅಲ್ಲಿಗೆ ಪ್ರಚಾರಕ್ಕಾಗಿ ನಿತೀಶ್ ಹೋಗಲಿಲ್ಲ.
ಬಿಜೆಪಿ- ಸಂಯುಕ್ತ ಜನತಾದಳದ ಸಂಬಂಧ ಬಿಹಾರದ ಹೊರಗಡೆ ಇಲ್ಲ ಎನ್ನುವ ಮಾತನ್ನು ನಿತೀಶ್ ಆಡಿದ್ದೂ ಆಗಿದೆ. ಅದು ಹಾಗೇ ನಡೆದುಕೊಂಡು ಬಂದಿದೆ. ಆದರೆ ಈಗ ಬಿಜೆಪಿ, ನರೇಂದ್ರ ಮೋದಿ ಅವರನ್ನೇ ಪ್ರಧಾನಿ ಪೀಠದ ಅಭ್ಯರ್ಥಿಯಾಗಿ ಘೋಷಿಸಿದೆ, ನಿತೀಶ್ ಏನು ಮಾಡ್ತಾರೆ? ಅದು ಯಕ್ಷಪ್ರಶ್ನೆ.
ಬಿಹಾರದಲ್ಲಿ ನಿತೀಶರ ಪರಮಶತ್ರು ಎನ್ನಬಹುದಾದ ರಾಷ್ಟ್ರೀಯ ಜನತಾದಳದ ಲಾಲೂ ಪ್ರಸಾದ ಯಾದವ್, ನಿತ್ಯ ಆ ಪ್ರಶ್ನೆಯನ್ನು ಒಂದಲ್ಲ ಒಂದು ವೇದಿಕೆಯಲ್ಲಿ ಕೇಳುತ್ತಿದ್ದಾರೆ. ಸದ್ಯಕ್ಕೆ ಅದಕ್ಕೆ ನಿತೀಶ್ ಉತ್ತರ ಕೊಡುತ್ತಿಲ್ಲ. ಬಹುಕಾಲ ಈ ಮೌನ ನಡೆಯುವುದಿಲ್ಲ. ಬಿಹಾರದಲ್ಲೂ ನಿತೀಶ್ ಬಿಜೆಪಿ ವಿರೋಧಿ ನೀತಿಯನ್ನು ಪ್ರತಿಪಾದಿಸಿದರೆ, ಅಲ್ಲಿನ ಸರ್ಕಾರವನ್ನು ಉಳಿಸಿಕೊಳ್ಳುವುದು ಕಷ್ಟ. ಮುಂದಿನ ಲೋಕಸಭೆ- ವಿಧಾನಸಭೆ ಚುನಾವಣೆಗಳಲ್ಲಿ ದೊಡ್ಡ ರೀತಿಯಲ್ಲಿ ಗೆಲ್ಲುವುದಂತೂ ಕನಸಿನ ಮಾತು.
ಹೀಗಾಗಿ ನಿತೀಶ್ಕುಮಾರ್ ಈಗ ಅವರ ರಾಜಕೀಯ ಜೀವನದಲ್ಲಿ ವೈಯಕ್ತಿಕ ಮಟ್ಟದಲ್ಲಿ ದೊಡ್ಡ ಬಿಕ್ಕಟ್ಟನ್ನೇ ಎದುರಿಸಬೇಕಾಗಿದೆ.
ಬಿಹಾರದಲ್ಲಿ ತುರ್ತು ಪರಿಸ್ಥಿತಿಯ ಸಮಯದಲ್ಲಿ ಕರ್ಪೂರಿ ಠಾಕೂರ್, ಲಾಲೂ ಪ್ರಸಾದ ಯಾದವ್, ಜಾರ್ಜ್ ಫರ್ನಾಂಡಿಸ್, ಸತ್ಯೇಂದ್ರನಾಥ ಸಿನ್ಹಾ ಅವರೆಲ್ಲ ಒಟ್ಟಿಗೇ ಸಂಪೂರ್ಣ ಕ್ರಾಂತಿಯ ಹೋರಾಟದಲ್ಲಿ ಮುಳುಗಿದ್ದವರು. ಮೊದಲ ವಿಧಾನಸಭೆ ಚುನಾವಣೆಯಲ್ಲಿ (1977) ಹರ್ನಾತ್ ಕ್ಷೇತ್ರದಲ್ಲಿ ಸೋತರು. 1985ರಲ್ಲಿ ಅವರು ವಿಧಾನ ಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದು ಪಕ್ಷೇತರ ಅಭ್ಯರ್ಥಿಯಾಗಿ. ಅನಂತರ ಜನತಾದಳ ಸೇರಿದರು. 2003ರವರೆಗೂ ಅವರು ಬಿಹಾರ ಜನತಾದಳದ ನಾಯಕರೇ. ಆ ಕಾಲದಲ್ಲಿ ಲಾಲೂ ಪ್ರಸಾದ ಯಾದವ್ ಅವರೇ ಅತಿ ಹಿರಿಯ ನೇತಾರ.
1989ರಲ್ಲಿ ನಿತೀಶ್ ಲೋಕಸಭೆಗೆ ಆಯ್ಕೆಯಾಗಿ, ವಿಶ್ವನಾಥ ಪ್ರತಾಪಸಿಂಗ್ ಸಚಿವ ಸಂಪುಟದಲ್ಲಿ ಸಹಾಯಕ ಸಚಿವರಾಗಿ ಕೃಷಿ ಇಲಾಖೆಯ ಉಸ್ತುವಾರಿಯಲ್ಲಿದ್ದರು. 1991ರಲ್ಲಿ ಮತ್ತೆ ಲೋಕಸಭೆಗೆ ಆಯ್ಕೆ. ಆಗ ಜನತಾದಳದ ಕಾರ್ಯದರ್ಶಿ.
ಸ್ವಲ್ಪ ಕಾಲ ರೇಲ್ವೆ ಮಂತ್ರಿ. ಅನಂತರ ಬಿಹಾರದಲ್ಲಿ ಒಂದು ವಾರದ ಸಿಎಂ. ವಾಜಪೇಯಿ ಸರ್ಕಾದಲ್ಲೂ ರೇಲ್ವೆ ಮಂತ್ರಿಯಾಗಿದ್ದರು. ಸಂಸತ್ತಿನಲ್ಲಿ ಸಂಯುಕ್ತ ಜನತಾದಳದ ನಾಯಕರೂ ಆಗಿದ್ದರು.
ಲಾಲೂ ಪ್ರಸಾದ ಯಾದವ್ ಅವರ ವಿರುದ್ಧವಾಗಿ ಜಾರ್ಜ್ ಫರ್ನಾಂಡಿಸ್ ಜತೆ ಸೇರಿಕೊಂಡರು. 2005ರಲ್ಲಿನ ವಿಧಾನಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಜನತಾದಳವನ್ನು ಸೋಲಿಸಿದ ಕೀರ್ತಿಯೂ ಅವರದ್ದೇ. 2005-10ರಲ್ಲಿ ನಿತೀಶ್ ಬಿಹಾರದ ಸಿಎಂ. 15 ವರ್ಷ ಏಕಪ್ರಕಾರವಾಗಿ ರಾಜ್ಯದ ಸಿಎಂ ಆಗಿದ್ದ ಲಾಲೂ ಸೋತಿದ್ದರು.
ಅವಧಿಯಲ್ಲಿ ಬಿಹಾರ ಪ್ರಗತಿಯ ಹಾದಿಯಲ್ಲಿ ಸಾಗಿದ್ದು ನಿಜ. ಈಗಲೂ ಹಾಗೇ ನಿತೀಶ್ ರಾಜ್ಯವನ್ನು ನಡೆಸಿಕೊಂಡು ಬಂದಿದ್ದಾರೆ. ಅಲ್ಲಿ ಬೇಕಾದಷ್ಟು ಸುಧಾರಣೆಯಾಗಿದೆ ಎನ್ನುವುದೂ ನಿಜ. ಆದರೆ ಬೆಳವಣಿಗೆಯನ್ನು ಶೇಕಡಾವಾರು ಲೆಕ್ಕದಲ್ಲಿ ಅಳಿದಾಗ, ತೀರಾ ಕಡಿಮೆ ಬುನಾದಿಯ ಆಧಾರದ ಮೇಲೆ, ಸಾಧಿಸಿದ ಪ್ರಗತಿಯ ಲೆಕ್ಕದಲ್ಲಿ, ಸರಾಸರಿ ತಲಾ ವರಮಾನದ ಅಂದಾಜಿನಲ್ಲಿ, ಬಿಹಾರ ಭಾರತದಲ್ಲೇ ನಂಬರ್ ಒನ್ ರಾಜ್ಯ. ನರೇಂದ್ರ ಮೋದಿಯ ಗುಜರಾತ್ ಹನ್ನೊಂದನೆಯ ಸ್ಥಾನದಲ್ಲಿದೆ.
ಆದರೆ ಇದೇ ಸಮಗ್ರ ಪ್ರಗತಿಯ ಸೂಚ್ಯಂಕವಲ್ಲ. ಆ ಅಂದಾಜಿನಂತೆ ರಾಷ್ಟ್ರೀಯ ಸರಾಸರಿಯ ಅಂಕಿ 4.66ರಷ್ಟರ ಪ್ರಗತಿ. ಇದೇ ಪ್ರಗತಿಯ ಸೂಚ್ಯಂಕವಲ್ಲ. ಆದರೂ ನಿತೀಶ್ ಬಿಹಾರದಲ್ಲಿ ಒಂದು ರೀತಿಯಲ್ಲಿ ಪವಾಡ ಸದೃಶ ಸಾಧನೆಯನ್ನೇ ಪ್ರದರ್ಶಿಸಿರುವುದೂ ನಿಜ.
ಸಾಮಾಜಿಕ ನ್ಯಾಯ ವಿತರಣೆಯ ನೀತಿಯಲ್ಲೂ ಬಿಹಾರ ಮುಂದಿತ್ತು. ಅಲ್ಲಿನ ಅತಿ ಹಿಂದುಳಿದ ಜಾತಿ ಪಂಗಡಗಳಿಗೆ ರಾಜಕೀಯವಾಗಿ ಶೇ.50ರ ಮೀಸಲು ಸ್ಥಳೀಯ ಸಂಸ್ಥೆಗಳಲ್ಲಿ ಜಾರಿಯಲ್ಲಿದೆ. ಬಿಹಾರದಿಂದ ಜಾರ್ಖಂಡದ ಪ್ರದೇಶ ಪ್ರತ್ಯೇಕವಾಗಿ, ಬೇರೆ ರಾಜ್ಯವಾದ ಅನಂತರ ಬಿಹಾರದ ನಿಸರ್ಗ ಸಂಸತ್ತಿನ ಮೌಲ್ಯ ಕುಸಿದಿದೆ. ಖನಿಜ ಶ್ರೀಮಂತ ಜಿಲ್ಲೆಗಳೆಲ್ಲವೂ ಜಾರ್ಖಂಡದಲ್ಲೇ ಇರುವುದು.
ಈಗ ಬಿಹಾರ ಇಡೀ ದೇಶದಲ್ಲಿ ಕಡು ಬಡರಾಜ್ಯದಲ್ಲಿ ಒಂದು. ಆ ಕಾರಣದಿಂದ ಬಿಹಾರಕ್ಕೆ ಕೇಂದ್ರ ಸರ್ಕಾರ ವಿಶೇಷ ಸ್ಥಾನ-ಮಾನ ನೀಡಿ, ವಿಶೇಷ ನೆರವನ್ನು ಕೊಡಬೇಕು ಎನ್ನುವುದೇ ಆ ರಾಜ್ಯದ ಪ್ರಧಾನ ಬೇಡಿಕೆ. ಇದುವರೆಗೂ ಈ ಬೇಡಿಕೆಯನ್ನು ಯಾರೂ ಕಿವಿಯ ಮೇಲೆ ಹಾಕಿಕೊಂಡಿರಲಿಲ್ಲ. ಆದರೆ ಬಜೆಟ್ ಭಾಷಣದ ಸಮಯದಲ್ಲಿ ವಿತ್ತ ಮಂತ್ರಿ ಪಿ. ಚಿದಂಬರಮ್, ಆ ಬೇಡಿಕೆ ಕುರಿತು ತಮ್ಮ ಸಹಾನುಭೂತಿ ಇದೆ ಎಂದಷ್ಟೇ ಹೇಳಿ ಬಿಹಾರಿಗಳ ಆಸೆ ಚಿಗುರುವಂತೆ ಮಾಡಿದ್ದಾರೆ.
ಬಿಹಾರಿಗಳ ಈ ಒತ್ತಾಯವನ್ನು ದೆಹಲಿಗೆ ಪರಿಣಾಮಕಾರಿಯಾಗಿ ಮುಟ್ಟಿಸಲು, ಮಾರ್ಚ್ ಹದಿನೇಳರಂದು ನಿತೀಶ್ ಕುಮಾರ್ ದೆಹಲಿಯಲ್ಲೇ ಒಂದು ಮಹಾರ್ಯಾಲಿಯನ್ನು ನಡೆಸಲು ತೀರ್ಮಾನಿಸಿದ್ದಾರೆ. ದೆಹಲಿಗೆ ಕೆಲಸವನ್ನು ಹುಡುಕಿಕೊಂಡು ಹೋಗಿರುವ ಬಿಹಾರಿಗಳ ಸಂಖ್ಯೆ ಬಲು ದೊಡ್ಡದು. ದೆಹಲಿಯ ಬಡ ಬಿಹಾರಿಗಳ ರ್ಯಾಲಿಯ ಯಶಸ್ಸಂತೂ ಕಟ್ಟಿಟ್ಟ ಬುತ್ತಿ.
ಅದೇ ದಿನ, ಗುಜರಾತ್ ಸಿಎಂ ನರೇಂದ್ರ ಮೋದಿ ಮುಂಬೈನಲ್ಲಿ ಒಂದು ಮಹಾರ್ಯಾಲಿಗೆ ಮುಖ್ಯ ಅತಿಥಿಯಾಗಿ ಹೋಗಲಿದ್ದಾರೆ. ಇದೇನೂ ಉದ್ದೇಶ ಪೂರ್ವಕವಾಗಿ ದೆಹಲಿಯ ಬಿಹಾರಿ ರ್ಯಾಲಿಯ ದಿನದಂದೇ ಏರ್ಪಡಿಸಿದ ಪ್ರದರ್ಶನ ಅಲ್ಲ. ಆದರೂ ಈಗ ದೇಶದಲ್ಲಿ ಮೋದಿ- ನಿತೀಶ್ ಸಂಬಂಧ ಕುರಿತಂತೆ ಆಸಕ್ತಿ ಕೆರಳಿರುವ ಸಮಯದಲ್ಲಿ ಜನ ಒಂದೇ ದಿನದ ಎರಡು ರ್ಯಾಲಿಗಳ ವಿಚಾರವನ್ನು ಪ್ರಸ್ತಾಪಿಸುವುದು ಸಹಜ. ಕಾಂಗ್ರೆಸ್, ಈಗ ನಿತೀಶ್ ಕುಮಾರ್ ಅವರನ್ನು ಓಲೈಸಲು ಮುಂದಾದಲೂ ಆಶ್ಚರ್ಯವಿಲ್ಲ.
ನಿತೀಶ್ ಓದಿದ್ದು ಎಂಜಿನಿಯರಿಂಗ್ ಕಾಲೇಜಿನಲ್ಲಿ. ಅವರ ವೃತ್ತಿ ಜೀವನ ಆರಂಭವಾಗಿದ್ದು ಬಿಹಾರ ವಿದ್ಯುತ್ ಮಂಡಳಿಯ ನೌಕರರಾಗಿ. ಅವರ ಪತ್ನಿ ಮಂಜು ಕುಮಾರಿ ಸಿನ್ಹಾ ಅಧ್ಯಾಪಕಿ. ಅವರೀಗ ಜೀವಂತವಾಗಿಲ್ಲ. ನಿತೀಶ್ ಪುತ್ರ ನಿಶಾಂತ ಕೂಡ ಎಂಜಿನಿಯರ್. ರಾಜಕೀಯವಾಗಿ ಹಿಂದುಳಿದಿದ್ದ, ಆದರೆ ಕೃಷಿ ವಲಯದ ಪ್ರಭಾವಿ ಜನಾಂಗವಾದ ಕೊರ್ಮಿ ಜನಾಂಗಕ್ಕೆ ಸೇರಿದ ನಿತೀಶ್ ಹಲವು ಪ್ರಶಸ್ತಿಗಳಿಗೆ ಭಾಜನರು.
ನಿತೀಶ್ಗೆ ತಮ್ಮ ಭವಿಷ್ಯ ರಾಜಕೀಯದ ವೇದಿಕೆ ಕುರಿತಂತೆ ನಿರ್ಧಾರದ ಪ್ರಕಟಣೆಗೆ ಇನ್ನು ಬಹುಪಾಲು ಉಳಿದಿಲ್ಲ. ಮುಂದಿನ ವರ್ಷದ ಏಪ್ರಿಲ್ನಲ್ಲಿ ಲೋಕಸಭೆ ಚುನಾವಣೆ ನಡೆಯಬೇಕು.
ಆಂದರೆ ನಿತೀಶ್ ನಿರ್ಧಾರ (ಬಿಜೆಪಿ ಕೂಟದಲ್ಲೇ ಉಳಿಯುವುದೋ ಬೇಡವೋ ಎನ್ನುವ ವಿಚಾರದಲ್ಲಿ) ಈ ವರ್ಷಾಂತ್ಯದ ವೇಳೆಯಲ್ಲಾದರೂ ಪ್ರಕಟವಾಗಲೇಬೇಕು.
-ಸತ್ಯ