ಸುಮ್ಮನೆ ಈ ಕಥೆ ಓದಿ...
ಎಲ್ಲ ತಂದೆ ತಾಯಿಗಳ ಆಸೆಯಂತೆ ನಾನು ಸಾಫ್ಟ್‌ವೇರ್ ಎಂಜಿನಿಯರಿಂಗ್ ಪದವಿ ಪಡೆದೆ. ಅವಕಾಶಗಳ ಸ್ವರ್ಗವಾಗಿರುವ ಅಮೆರಿಕ ಮೂಲದ ಕಂಪನಿಯಲ್ಲಿ ಕೆಲಸಕ್ಕೆ ಸೇರಿ, ಅಮೆರಿಕಕ್ಕೆ ಹೋದಾಗ ನಾನು ಕಂಡ ಕನಸು ಸಾಕಾರಗೊಂಡಿತ್ತು. ನಾನು ಎಲ್ಲಿರಬೇಕಿತ್ತು, ಅಲ್ಲೇ ಇದ್ದೇನೆ ಎಂಬ ಭಾವ ಆವರಿಸಿತ್ತು. ಇಲ್ಲಿ ಎರಡ್ಮೂರು ವರ್ಷಗಳ ಕಾಲ ಚೆನ್ನಾಗಿ ದುಡಿದು ಸಂಪಾದಿಸಿಕೊಂಡು, ಭಾರತಕ್ಕೆ ಮರಳಿ ಸೆಟ್ಲ್ ಆಗಬೇಕೆಂಬುದು ನಿರ್ಧಾರ. ಇಂಥ ನಿರ್ಧಾರ ಬಹುತೇಕ ಎಲ್ಲ ಸಾಫ್ಟ್‌ವೇರ್ ಎಂಜಿನಿಯರ್‌ಗಳದ್ದಾಗಿರುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.
ನನ್ನ ಅಪ್ಪ ಸರ್ಕಾರಿ ಉದ್ಯೋಗಿ. ನಿವೃತ್ತಿಯಾದ ಬಳಿಕ ಸಿಂಗಲ್ ಬೆಡ್ ರೂಂ ಫ್ಲ್ಯಾಟ್ ಖರೀದಿಸುವುದು ಮಾತ್ರ ಆತ ಮಾಡಬಹುದಾದ ಸಾಧನೆ. ನನಗೆ ಆತನಿಗಿಂತಲೂ ಹೆಚ್ಚಿನದ್ದು ಏನಾದರೂ ಮಾಡಬೇಕೆಂಬ ಬಯಕೆ. ಆದರೆ, ಅಮೆರಿಕದಲ್ಲಿದ್ದಾಗ ಮನೆ ನೆನಪಾಗುತ್ತಿತ್ತು. ಒಬ್ಬಂಟಿ ಭಾವ ಕಾಡುತ್ತಿತ್ತು. ಹೀಗಾಗಿ, ಅಗ್ಗದ ಇಂಟರ್‌ನ್ಯಾಷನಲ್ ಫೋನ್ ಕಾರ್ಡ್‌ಗಳನ್ನು ಬಳಸಿ ವಾರಕ್ಕೆ ಒಂದು ಬಾರಿಯಾದರೂ ಅಮ್ಮನೊಂದಿಗೆ ಮಾತನಾಡುತ್ತಿದ್ದೆ. ಹೀಗೆಯೇ ಎರಡು ವರ್ಷ ಕಳೆದು ಹೋಯಿತು. ಮ್ಯಾಕ್ ಡೋನಾಲ್ಡ್‌ನ ಬರ್ಗರ್, ಪಿಜ್ಜಾಗಳು, ಡಿಸ್ಕೋ ಸಾಮಾನ್ಯವಾಯಿತು. ಈ ಎರಡು ವರ್ಷದಲ್ಲಿ ವಿದೇಶಿ ವಿನಿಮಯದ ಹಾವು ಏಣಿ ಆಟ ನೋಡುತ್ತಾ ರುಪಾಯಿ ಮೌಲ್ಯ ಕುಸಿದಾಗ ಸಂತೋಷವಾಗುತ್ತಿತ್ತು.
ಕೊನೆಗೆ ಒಂದು ದಿನ ಮದುವೆ ಮಾಡಿಕೊಳ್ಳಬೇಕೆಂದು ನಿರ್ಧರಿಸಿದೆ. ಈ ವಿಷಯವನ್ನು ಅಪ್ಪ ಅಮ್ಮನಿಗೆ ಹೇಳಿದೆ. ನನಗೆ ಸಿಕ್ಕಿರುವುದೇ ಹತ್ತೇ ದಿನ ರಜೆ! ಅದರಲ್ಲೇ ಎಲ್ಲವೂ ಮುಗಿಯಬೇಕು ಎಂದೂ ತಿಳಿಸಿದೆ. ಭಾರತಕ್ಕೆ ಹೋಗಲು ಅಗ್ಗದ ವಿಮಾನದಲ್ಲಿ ಟಿಕೆಟ್ ಬುಕ್ ಮಾಡಿದೆ. ಅಂತಿಮವಾಗಿ ಭಾರತಕ್ಕೆ ಬರುವಾಗ ಫ್ರೆಂಡ್‌ಗಳಿಗೆ ಗಿಫ್ಟ್‌ಗಳನ್ನು ತೆಗೆದುಕೊಂಡೆ. ಒಂದು ವೇಳೆ ಮಿಸ್ ಆದರೆ ಫ್ರೆಂಡ್ ಸರ್ಕಲ್‌ನಲ್ಲಿ ಸುಮ್ಮನೆ ಪುಕಾರುಗಳು ಹಬ್ಬುತ್ತವೆ. ಹಾಗಾಗದಂತೆ ಎಚ್ಚರ ವಹಿಸಬೇಕೆಂದು ನಿಶ್ಚಿಯಿಸಿಕೊಂಡು ಭಾರತಕ್ಕೆ ಬಂದೆ. ಮನೆಗೆ ಬಂದು ವಾರ ಪೂರ್ತಿ ಬರೀ ಫೋಟೋಗಳನ್ನು ನೋಡುವುದು ಮತ್ತು ಯಾವ ಹುಡುಗಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿ ಕಳೆದೆ. ಸಮಯ ಬೇರೆ ಮುಗಿದು ಹೋಗುತ್ತಿತ್ತು. ಅಂತಿಮವಾಗಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆ. ಇನ್ನೂ ಮಜಾ ಅಂದರೆ ಕೊನೆಯ ಎರಡ್ಮೂರು ದಿನಗಳಲ್ಲಿ ನಾನು ಮದುವೆಯಾಗಲೇಬೇಕಿತ್ತು. ಯಾಕೆಂದರೆ ನನಗೆ ರಜೆ ಇರಲಿಲ್ಲ. ಮದುವೆಯಾದೆ. ಬಳಿಕ ಅಪ್ಪ ಅಮ್ಮನಿಗೆ ಒಂದಿಷ್ಟು ದುಡ್ಡು ಕೊಟ್ಟು, ನೆರೆಹೊರೆಯವರಿಗೆ ಅವರನ್ನು ನೋಡಿಕೊಳ್ಳಿ ಎಂದು ಪತ್ನಿ ಜತೆ ಅಮೆರಿಕಕ್ಕೆ ಹೊರಟು ಬಂದೆ.
ನನ್ನ ಹೆಂಡತಿಗೆ ಅಮೆರಿಕ ಖುಷಿ ಕೊಟ್ಟಿತು. ಆಕೆಯೂ ಅದನ್ನು ಅನುಭವಿಸಿದಳು. ಆದರೆ, ಎರಡು ತಿಂಗಳ ಬಳಿಕ ಆಕೆಗೆ ಅಮೆರಿಕ ಬೋರ್ ಆಗ ತೊಡಗಿತು. ಭಾರತಕ್ಕೆ ಕರೆ ಮಾಡುವುದು ಹೆಚ್ಚಿತು. ವಾರಕ್ಕೆ ಎರಡು ಬಾರಿ, ಇಲ್ಲವೇ ಒಮ್ಮೊಮ್ಮೆ ಮೂರು ಬಾರಿ ಕರೆ ಮಾಡುವುದು ಹೆಚ್ಚಾಯಿತು. ಹಾಗೆಯೇ ನನ್ನ ಉಳಿತಾಯ ಕೂಡಾ ಕಡಿಮೆಯಾಗತೊಡಗಿತು!
ಎರಡು ವರ್ಷವಾದ ಬಳಿಕ ನಮಗೆ ಎರಡು ಮಕ್ಕಳಾದವು. ಒಂದು ಗಂಡು ಮತ್ತೊಂದು ಹೆಣ್ಣು. ತುಂಬಾ ಮುದ್ದಾದ ಮಕ್ಕಳು. ಆ ದೇವರು ನಮಗೆ ನೀಡಿದ ಕಾಣಿಕೆ ಎಂದೇ ಭಾವಿಸಿದೆವು. ಪ್ರತಿ ಸಾರಿ ನಾನು ಅಪ್ಪ ಅಮ್ಮನ ಜತೆ ಮಾತನಾಡುವಾಗ ಅವರು, ಮೊಮ್ಮಕ್ಕಳನ್ನು ನೋಡಬೇಕು. ಭಾರತಕ್ಕೆ ಬಾ ಎಂದು ಒತ್ತಾಯಿಸುತ್ತಿದ್ದರು. ನಾನೂ ಪ್ರತಿ ವರ್ಷ ಭಾರತಕ್ಕೆ ಹೋಗಲೇಬೇಕು ಎಂದು ಯೋಜಿಸುತ್ತಿದೆ. ಆದರೆ, ಕೆಲಸದ ಒತ್ತಡ ಮತ್ತು ಹಣಕಾಸಿನ ಸಮಸ್ಯೆಯಿಂದ ಸಾಧ್ಯವಾಗುತ್ತಿರಲಿಲ್ಲ. ವರ್ಷಗಳು ಹಾಗೆಯೇ ಉರಳುತ್ತಾ ಹೋದವು. ಭಾರತಕ್ಕೆ ಹೋಗುವುದು ಕನಸಂತಾಯಿತು.
ಆಗ ಒಂದು ದಿನ ನನ್ನ ಅಪ್ಪ ಅಮ್ಮ ಹಾಸಿಗೆ ಹಿಡಿದಿದ್ದಾರೆ ಎಂಬುದು ಗೊತ್ತಾಯಿತು. ಹೇಗಾದರೂ ಮಾಡಿ ಈ ಬಾರಿಯಾದರೂ ಹೋಗಲೇಬೇಕು ಎಂದು ಪ್ರಯತ್ನಿಸಿದೆ. ಆದರೆ, ರಜೆ ಸಿಗಲೇ ಇಲ್ಲ. ಆದರೆ, ಸ್ವಲ್ಪ ದಿನಗಳ ಬಳಿಕ ಬಂದ ಸುದ್ದಿ ಎಂದರೆ, ನನ್ನ ಅಪ್ಪ ಅಮ್ಮ ಸತ್ತು ಹೋಗಿದ್ದರು. ಅವರ ಅಂತಿಮ ಸಂಸ್ಕಾರಕ್ಕೆ ಹೋಗಲೂ ನನ್ನಿಂದ ಸಾಧ್ಯವಾಗದಿದ್ದಕ್ಕೆ ನಮ್ಮ ಸಮುದಾಯದವರೇ ತಾವೇ ಮುಂದೆ ನಿಂತು ಆ ಕೆಲಸವನ್ನು ಮಾಡಿ ಮುಗಿಸಿದ್ದರು. ನನ್ನ ಅಪ್ಪ ಅಮ್ಮ ಕಡೆಗೂ ತಮ್ಮ ಮೊಮ್ಮಕ್ಕಳ ಮುಖವನ್ನೇ ನೋಡದೆ ಸತ್ತು ಹೋದರು. ಇದು ನನ್ನನ್ನು ಖಿನ್ನತೆಗೆ ನೂಕಿತು.
ಮತ್ತೆರಡು ವರ್ಷಗಳು ಕಳೆದು ಹೋದವು. ನನ್ನ ಹೆಂಡತಿಯ ಒತ್ತಾಸೆ ಹಾಗೂ ಮಕ್ಕಳ ವಿರೋಧದ ಮಧ್ಯೆಯೂ ಭಾರತದಲ್ಲೇ ವಾಸಿಸಬೇಕೆಂದು ಬಂದೆ. ಅದಕ್ಕಾಗಿ ಒಳ್ಳೆ ಸ್ಥಳದಲ್ಲಿ ಜಾಗ ಖರೀದಿಸಲು ಪ್ರಯತ್ನಿಸಿದೆ. ಇತ್ತೀಚಿನ ವರ್ಷಗಳಲ್ಲಿ ಭೂಮಿ ಬೆಲೆ ಗಗನಕ್ಕೆ ಮುಟ್ಟಿದ್ದರಿಂದ ಕೊಳ್ಳಲು ಸಾಧ್ಯವಾಗಲಿಲ್ಲ. ಅನಿವಾರ್ಯವಾಗಿ ಅಮೆರಿಕಕ್ಕೆ ಮರಳಲೇಬೇಕಿತ್ತು. ಆದರೆ, ನನ್ನ ಹೆಂಡತಿ ಮಾತ್ರ ಅಮೆರಿಕಕ್ಕೆ ಬರಲು ಬಿಲ್‌ಕುಲ್ ಒಪ್ಪಲಿಲ್ಲ. ಮಕ್ಕಳು ಮಾತ್ರ ಭಾರತದಲ್ಲಿರಲು ತಯಾರಿರಲಿಲ್ಲ. ಇಬ್ಬರು ಮಕ್ಕಳೊಂದಿಗೆ ಅಮೆರಿಕಕ್ಕೆ ವಾಪಸಾದೆ. ಆದರೆ ಬರುವಾಗ ಹೆಂಡತಿಗೆ, ಎರಡು ವರ್ಷಗಳಾದ ಬಳಿಕ ವಾಪಸು ಬರುತ್ತೇನೆ ಎಂದು ಪ್ರಾಮಿಸ್ ಮಾಡಿದೆ.
ದಿನಗಳು ಕಳೆದವು. ಮಗಳು ಅಮೆರಿಕದ ಹುಡುಗನೊಂದಿಗೆ ಮದುವೆಯಾಗಲು ನಿರ್ಧರಿಸಿದಳು. ಮಗನಿಗೆ ಅಮೆರಿಕದ ಬದುಕು ಒಗ್ಗಿಹೋಗಿತ್ತು. ಇನ್ನು ಸಾಕು. ಎಲ್ಲವನ್ನು ಸುತ್ತಿಕೊಂಡು ಭಾರತಕ್ಕೆ ಬಂದೆ. ತಕ್ಕ ಮಟ್ಟಿಗೆ ಹಣವಿತ್ತು ಒಳ್ಳೆಯ ಪ್ರದೇಶದಲ್ಲಿ ಎರಡು ಬೆಡ್ ರೂಂ ಫ್ಲ್ಯಾಟ್ ಕೊಂಡುಕೊಂಡೆ. ನನಗೀಗ 60 ವರ್ಷ. ಫ್ಲ್ಯಾಟ್‌ನಿಂದ ಹೊರಗೆ ಹೋಗುವುದು ಹತ್ತಿರದ ದೇವಸ್ಥಾನಕ್ಕೆ ಹೋದಾಗ ಮಾತ್ರ. ಅದು ಪ್ರತಿನಿತ್ಯದ ರೂಟಿನ್. ನನ್ನ ಪ್ರೀತಿಯ ಮಡದಿ ಕೂಡಾ ಈಗ ಬಿಟ್ಟು ಹೋಗಿದ್ದಾಳೆ.
ಆದರೆ, ನನಗೆ ಕೆಲವೊಮ್ಮೆ ಏನು ಅನಿಸುತ್ತದೆಯೆಂದರೆ, ಇದೆಲ್ಲಾ ಬೇಕಿತ್ತಾ? ನನ್ನ ಅಪ್ಪ ಭಾರತದಲ್ಲಿದ್ದೂ ಅವನ ಹೆಸರಿನಲ್ಲಿಂದು ಮನೆ ಮಾಡಿಕೊಂಡ. ನಾನು ಮಾಡಿದ್ದು ಅದನ್ನೇ ಅಲ್ಲವೇ? ಅದಕ್ಕಿಂತ ಹೆಚ್ಚಿನದ್ದು ಏನೂ ಇಲ್ಲ. ನಾನು ಅಪ್ಪ ಅಮ್ಮ ಮತ್ತು ಮಕ್ಕಳನ್ನು ಕೇವಲ ಒಂದು ಎಕ್ಸ್‌ಟ್ರಾ ಬೆಡ್‌ರೂಂ ಸಲುವಾಗಿ ಕಳೆದುಕೊಂಡೆ ಅನಿಸುತ್ತದೆ. ಕಿಟಕಿಯಿಂದ ಆಚೆ ನೋಡಿದರೆ, ಮಕ್ಕಳು ಕುಣಿಯುತ್ತಿದ್ದಾರೆ. ಹಾಳಾದ ಈ ಕೇಬಲ್ ಟಿವಿಯಂದಾಗಿ ನಮ್ಮ ಹೊಸ ತಲೆಮಾರು ಹಾಳಾಗುತ್ತಿದೆ. ನಮ್ಮ ಮೌಲ್ಯಗಳನ್ನು ಮತ್ತು ಸಂಸ್ಕೃತಿಯನ್ನು ಕಳೆದುಕೊಳ್ಳುತ್ತಿದ್ದಾರೆ. ಆವಾಗ ಆವಾಗ ನಾನು ಚೆನ್ನಾಗಿದ್ದೀನಾ ಅಂತ ಮಕ್ಕಳು ಕಾಲ್ ಮಾಡುತ್ತಾರೆ. ಪುಣ್ಯಕ್ಕೆ ಅವರು ಅಷ್ಟಾದ್ರೂ ಮಾಡುತ್ತಾರೆ. ಆದರೆ, ನಾನು ಸತ್ತ ಮೇಲೂ ನನ್ನ ಅಂತ್ಯಕ್ರಿಯೆಯನ್ನು ನಮ್ಮ ಸಮುದಾಯದವರೇ ಮಾಡಬೇಕಾಗುತ್ತದೆಯೇನೋ?
ಕಥೆ ಓದಿದ್ದೀರಲ್ಲ... ಈಗೇನು ಅನಿಸುತ್ತದೆ. ಇದು ಅನಾಮಧೇಯ ಸಾಫ್ಟ್‌ವೇರ್ ಎಂಜಿನಿಯರೊಬ್ಬನ ಕಥೆ ಮಾತ್ರವಲ್ಲ. ನಮ್ಮ ಎಲ್ಲರ ಬದುಕು ಹೀಗೆಯೇ ಇದೆ. ಸಾಮರ್ಥ್ಯ ಇರುವಷ್ಟು ದಿನ ಕಾಲಿಗೆ ಚಕ್ರ ಕಟ್ಟಿಕೊಂಡು, ಬಿಡುವಿಲ್ಲದೆ ದುಡಿಯುತ್ತೇವೆ. ಈ ಅಮೂಲ್ಯ ಜೀವನದ ಕೊನೆಯಲ್ಲಿ ನಾವು ಸಾಧಿಸಿದ್ದಾರೂ ಏನು ಎಂದು ಲೆಕ್ಕ ಹಾಕಿದಾಗ ಏನೂ ಅಂದರೆ ಏನೂ ಇರುವುದಿಲ್ಲ (ಕೆಲವರನ್ನು ಹೊರತುಪಡಿಸಿ). ಹಾಗಿದ್ದಾಗ್ಯೂ ಯಾಕಾಗಿ ಈ ಧಾವಂತದ ಜೀವನ? ಜೀವನ ಅಂದ್ರೆ ಇಷ್ಟೇನಾ? ಇದರ ಹೊರತಾಗಿಯೂ ಲೈಫ್ ಇಲ್ಲವಾ? ತಂದೆ ಮಾಡಿದ ಒಂದು ಮನೆಗೆ ಮತ್ತೊಂದು ಕೋಣೆ ಸೇರಿಸುವಷ್ಟರಲ್ಲಿ ನಮ್ಮ ಜೀವನ ಮುಗಿದು ಹೋಗುತ್ತಾ? ಇದು ಸಾಫ್ಟ್‌ವೇರ್ ಕ್ಷೇತ್ರದ ಭ್ರಮೆನಾ ಅಥವಾ ಎಲ್ಲ ಕ್ಷೇತ್ರಗಳ ಹಣೆಬರಹ ಇಷ್ಟೇನಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗುವುದೇ ಇಲ್ಲ. ಉತ್ತರ ಹುಡುಕುತ್ತಾ ಹೋಗುವುದು ಜೀವನವಾಗಿಬಿಡಬಹುದು.
ಇತ್ತೀಚಿನ ದಿನಗಳಲ್ಲಿ ಜೀವನ ಅಂದರೆ, ಚೆನ್ನಾಗಿ ಓದು. ಯಾವುದಾದರೂ ಒಳ್ಳೆಯ ಕೆಲಸಕ್ಕೆ ಸೇರು. ಇಲ್ಲಾಂದರೆ, ಹೊರ ದೇಶಕ್ಕೆ ಹೋಗಿ ಚೆನ್ನಾಗಿ ಸಂಪಾದಿಸು. ಮದುವೆಯಾಗಿ ಸೆಟ್ಲ್ ಆಗು. ಅಪ್ಪ ಕಟ್ಟಿಸಿದ ಮನೆಗಿಂತಲೂ ಚೂರು ದೊಡ್ಡದಾದ ಮನೆ ಕಟ್ಟಿಸು. ಆ ಮೇಲೆ ಮಕ್ಕಳಿಗೆ ಒಂದಿಷ್ಟು ಆಸ್ತಿ ಮಾಡು. ಅವರಿಗೆ ಒಳ್ಳೆಯ ಶಿಕ್ಷಣ ಕೊಡಿಸು. ಅಲ್ಲಿಗೆ ಜೀವನ ಮುಗೀತು. ಆದರೆ, ಇದೆಲ್ಲವನ್ನು ಹೊರತುಪಡಿಸಿಯೂ ಜೀವನವಿದೆ. ಅದನ್ನು ನಾವು ಕಂಡುಕೊಳ್ಳಬೇಕು. ಆಗಲೇ ನಮ್ಮ ಬದುಕಿಗೆ ಸಾರ್ಥಕತೆ ದಕ್ಕುತ್ತದೆ. ಇಲ್ಲವೆಂದರೆ, ನಮ್ಮ ಇಡೀ ಜೀವನ ಒಂದು ಎಕ್ಸ್‌ಟ್ರಾ ಬೆಡ್ ರೂಂ ಸುತ್ತವೇ ಗಿರಕಿ ಹೊಡೆದು ಬಿಡುತ್ತದೆ. ಇಂಥದೊಂದು ಅಪರೂಪದ ಜೀವನ ದರ್ಶನ ಮಾಡಿಸುವ ಬರಹ ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ. <
= ಮಲ್ಲಿಕಾರ್ಜುನ ತಿಪ್ಪಾರ
mtippar@gmail.com