ಕರೆಯಿತೇ ಹಿಮಗಿರಿಯ ಕಂದರ?
ಮರುದಿನ ಬೆಳಗ್ಗೆ ಎದ್ದಾಗ, ಕಾಝಾದಲ್ಲಿ ಚಟುವಟಿಕೆಗಳು ಆರಂಭವಾಗಿದ್ದವು. ಲಾಡ್ಜ್ನ ಕುಕ್ ಮೋಟಾಭಾಯಿ ಬೆಳಗ್ಗಿನ ಖಿಚಡಿ ಸಿದ್ಧಪಡಿಸಿದ್ದ. ಚಂದ್ರತಾಲ್ ತಲುಪುವಾಗ ಸಂಜೆಯಾಗಲಿತ್ತು. ನಮ್ಮ ದಾರಿಖರ್ಚಿಗೆ ಬೇಕಾದ ಸ್ಯಾಂಡ್ವಿಚ್ ಮಾಡಿಟ್ಟಿದ್ದ. ಬಿಲ್ ಸೆಟಲ್ ಮಾಡುವಾಗ, ಲಾಡ್ಜ್ ಓನರ್ ತ್ಸೇರಿಂಗ್, ತಾನೂ ಬತಾಲ್ ವರೆಗೆ ಬರುತ್ತೇನೆಂದ. ಕಾಝಾ- ಮನಾಲಿ ದಾರಿಯ ನಡುವೆ ಸಿಗುವ ಬತಾಲ್, ಪುಟ್ಟ ಊರು. ಅಲ್ಲಿಂದ ಮನಾಲಿಗೆ ಬಸ್ಸು ಹಿಡಿವ ಯೋಜನೆ ಅವನದು.
ತಶಿ ನಮ್ಮನ್ನು ಸೇರಿಕೊಂಡ. ಸುಮೋ, ಕಾಝಾದ ನಿರ್ಜನವಾದ ಪುಟ್ಟ ಪೆಟ್ರೋಲ್ ಬಂಕ್ನಲ್ಲಿ ಹೊಟ್ಟೆಗೆ ತುಂಬಿಸಿಕೊಂಡು ಪಟ್ಟಣ ಬಿಟ್ಟಿತು. ಸ್ಪಿಟಿ ನದಿಗೆ ಅಡ್ಡವಾಗಿ ಕಟ್ಟಿದ ಮರದ ಪಟ್ಟಿಗಳ, ಕಬ್ಬಿಣದ ಗರ್ಡರ್ ಹಾಕಿದ ಸೇತುವೆಯನ್ನು ಗಡಗಡವೆನ್ನಿಸುತ್ತಾ ದಾಟಿತು. ಈಚೆ ದಡ ತಲುಪಿ ಹಿಂದಿರುಗಿ ನೋಡಿದಾಗ ಕಾಝಾ, ಇನ್ನೇನು ರೆಕ್ಕೆ ಬಿಡಿಸಲಿರುವ ಬೃಹತ್ ಚರಿತ್ರಪೂರ್ವ ಯುಗದ ಪಕ್ಷಿಯೊಂದರ ಥರ ಕಾಣಿಸಿತು. ಸೂರ್ಯನ ಕೆಂಪು ಕಿರಣಗಳು ಮನೆಯ ಮಾಡುಗಳನ್ನು ಮೆತ್ತಗೆ ನೆಕ್ಕುತ್ತಿದ್ದವು. ನಾಲ್ಕೈದು ದಿನಗಳ ಕಾಲ ನಮಗೆ ಹಿಮಾಲಯದ ಮಡಿಲ ಊರೊಂದರ ಸಂಸ್ಕೃತಿಯ ದರ್ಶನ ಮಾಡಿಸಿದ್ದ ಊರು ನಮಗೆ ವಿದಾಯ ಹೇಳುತ್ತಿತ್ತು.
'ಇಲ್ಲೆಲ್ಲ ಹಿಮ ತುಂಬಿಕೊಂಡಾಗ ಹೇಗಿರುತ್ತದೋ, ಆಗ ಬರಬೇಕು...' ಪ್ರಿಯಾ ನನ್ನ ಮನಸ್ಸಿನ ಮಾತನ್ನೂ ಹೇಳಿದ್ದಳು. ದಾರಿ ಈಗ ಉದ್ದಕ್ಕೆ ತೆರೆದಿತ್ತು. ಅಕ್ಕಪಕ್ಕದಲ್ಲಿ ಪರ್ವತಗಳು, ಕಣಿವೆಗಳು ತಮ್ಮ ಅಪೂರ್ವ ಸೌಂದರ್ಯದೊಂದಿಗೆ ಹಿಂದಕ್ಕೆ ಹಾಯುತ್ತಿದ್ದವು. ಕಾಝಾಕ್ಕೆ ಬರುವಾಗ ಇದೇ ದಾರಿಯಲ್ಲಿ ಬಂದಿದ್ದರೂ, ಅದು ಬಸ್ ಆಗಿದ್ದುದರಿಂದ ನಮಗೆ ಬೇಕೆಂದಲ್ಲಿ ನಿಲ್ಲಿಸುವಂತಿರಲಿಲ್ಲ. ಈಗ ನಮಗೆ ಬೇಕಾದಲ್ಲಿ ವಾಹನ ನಿಲ್ಲಿಸಿ ಫೋಟೋ ತೆಗೆಯಲು ಅವಕಾಶವಿತ್ತು. ಆದರೆ, ಹಿಮಾಲಯದ ಅಗಾಧ ಚೆಲುವಿನ ರಾಶಿಯ ಮುಂದೆ ನಮ್ಮ ಫೋಟೋ ತೆಗೆಯುವ ಸಾಮರ್ಥ್ಯ ಕೈಚೆಲ್ಲಿತು. ಒಂದರ ಹಿಂದೊಂದರಂತೆ ಸೊಬಗಿನ ಸೀಮೆಯ ದ್ವಾರಗಳು ಅನಂತವಾಗಿ ತೆರೆಯುತ್ತ ಹೋದರೆ ಎಷ್ಟು ಕಡೆ ಅಂತ ನಿಲ್ಲಿಸುತ್ತೀರಿ?
ದಾರಿಯಲ್ಲಿ ಕೆಲವು ನನ್ರಿಗಳು ಸಿಕ್ಕಿದವು. ನನ್ರಿ ಅಂದರೆ ಮೊನಾಸ್ಟ್ರಿಯೇ. ಆದರೆ ಈ ಮೊನಾಸ್ಟ್ರಿಗಳಲ್ಲಿ ಸನ್ಯಾಸಿನಿಯರು ಮಾತ್ರ ಇರುತ್ತಾರೆ. ಪಾಂಗ್ಮೊ, ಮೊರಾಂಗ್ ನನ್ರಿಗಳು ಇಂಥವು. ಹಲ್, ಹಂಸ ಎಂಬಂಥ ಹೆಸರಿನ ಊರುಗಳೂ ದಾರಿಯಲ್ಲಿ ಸಿಕ್ಕವು. ಕೆಲವೊಮ್ಮೆ ಬೆಟ್ಟಗಳು ತುಸು ದೂರ ಸರಿದು, ವಿಶಾಲ ಬಯಲುಗಳನ್ನು ನಿರ್ಮಿಸುತ್ತಿದ್ದವು. ಅಂಥ ಬಯಲಿನ ಮೇಲಿನ ಆಕಾಶದಲ್ಲಿ ಯಾರಾದರೂ ಹಾರುತ್ತಿದ್ದರೆ, ಕೆಳಗೆ ವಿಶಾಲ ಹಸಿರು ಮಣ್ಣ ಬಣ್ಣದ ಭಿತ್ತಿಯ ಮೇಲೆ ಚಿಕ್ಕ ಕಪ್ಪು ಚುಕ್ಕಿಗಳಾಗಿ ನಾವು ಚಲಿಸುವುದನ್ನು ಕಾಣಬಹುದಿತ್ತು.
ಅಂಥ ವಿಶಾಲ ಬಯಲೊಂದು ಮುಗಿದು ಕಡಿದಾದ ಬೆಟ್ಟಗಳ ಅಂಚಿಗೆ ನಮ್ಮ ವಾಹನ ಏರಿತು. ಬೆಟ್ಟಗಳ ಸಂದುಗೊಂದುಗಳಲ್ಲಿ ನುಸಿದು ಹೋಗತೊಡಗಿತು. ಮನಾಲಿಯಿಂದ ಬರುತ್ತಿದ್ದಾಗ 'ಮೆಕಾನಾಸ್ ಗೋಲ್ಡ್' ಚಿತ್ರದಲ್ಲಿ ಕಾಣುವ ಗ್ರಾಂಡ್ ಕ್ಯಾನನ್ನಂತಿದೆ ಎಂದು ಮಹೇಶ ಹೇಳಿದ್ದನಲ್ಲ, ಅದೇ ಜಾಗ. ಅಲ್ಲೇ, ತ್ಸೇರಿಂಗ್ ವಾಹನ ನಿಲ್ಲಿಸಿದ.
'ಅಲ್ಲಿ, ಕೆಳಗೆ ನೋಡಿ' ಎಂದ. ನೋಡಿದೆವು. ಪ್ರಪಾತ ದೃಷ್ಟಿ ತಲುಪದವರೆಗೂ ಇಳಿದಿತ್ತು. ಬೇರೇನೂ ಕಾಣಲಿಲ್ಲ.
'ಅಲ್ಲೊಂದು ಕಾರು ಬಿದ್ದಿದೆ. ಮೊನ್ನೆ ರಾತ್ರಿ ಬಿದ್ದಿದ್ದು' ಎಂದ.
ಬೆಚ್ಚಿದೆವು. ಕಣ್ಣನ್ನು ಸಾಧ್ಯವಿದ್ದಷ್ಟು ಕಿರಿದಾಗಿಸಿ ನೋಡಿದೆವು. ಹೌದು, ಅಲ್ಲಿತ್ತು... ಒಂದೊಮ್ಮೆ ಕಾರೆಂದು ಹೇಳಬಹುದಾಗಿದ್ದ ಲೋಹದ ಗುಪ್ಪೆ.
ಮನಾಲಿಯಿಂದ ಕಾಝಾಕ್ಕೆ ಬರುತ್ತಿದ್ದ ಕಾರದು. ಬೆಟ್ಟಗಳ ನಡುವಿನ ಸುತ್ತುಬಳಸು ದಾರಿಯ ಪ್ರಯಾಣದ ಶ್ರಮದಿಂದ ಚಾಲಕ ತುಸು ತಾಳ್ಮೆಗೆಟ್ಟಿದ್ದಾನೆ. ಎಡಬದಿಯ ಚಕ್ರ ದಾರಿಯ ತುಸುವೇ ಅಂಚಿಗೆ ಹೋಗಿದೆ. ಅಷ್ಟೇ. ಕಾರಿನಲ್ಲಿದ್ದ ಇಬ್ಬರ ಹೆಣವನ್ನು ನಿನ್ನೆ ಎತ್ತಲಾಗಿದೆ. ಕಾರಿನ ಮಾಲಿಕ ನನ್ನ ಪರಿಚಯದವನೇ. ಪ್ರತಿನಿತ್ಯ ಈ ದಾರಿಯಲ್ಲಿ ಓಡಾಡುತ್ತಿದ್ದವನೇ. ಇದಿಷ್ಟು ತ್ಸೇರಿಂಗ್ ಹೇಳಿದ ವಿಷಯ.
ನಾವು ನಿಂತಿದ್ದ ದಾರಿಯ ಭಯಾನಕತೆ ಅರಿವಾಗಿ ಒಂದು ಕ್ಷಣ ಮೈ ಕಂಪಿಸಿತು.
(ಮುಂದಿನ ವಾರ: ಕುಂಝುಮ್ಜುಮ್ಜುಮ್!)
-ಹರೀಶ್ ಕೇರ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.