ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಹಿಮದ ಚಾಪೆಯಡಿ ಪ್ರೇಮದ ಛಾಪು

Lingaraj Badiger
Updated On : 16 Mar 2013, 4:26 am

ಚಿತ್ರ: ದಿ ರೋಡ್ ಹೋಂ (1999)
ಭಾಷೆ: ಮ್ಯಾಂಡರೀನ್ (ಉತ್ತರ ಚೀನಾ)
ನಿರ್ದೇಶನ: ಝಾಂಗ್ ಇಮೂ
ಅವಧಿ: 89 ನಿಮಿಷ

ತಾರಾಗಣ: ಝಾಂಗ್ ಝೀಯಿ, ಸುನ್ ಹಂಗೇಲಿ, ಝಾಂಗ್ ಹೋ, ಝೋ ಯೂಲಿನ್.
'ಈ ಹಿಮದ ಬೆಟ್ಟಗಳು, ಈ ರಸ್ತೆಗಳೇ ನನ್ನ ತಂದೆ, ತಾಯಿಯ ಅಮರಪ್ರೇಮದ ಒಂದು ಭಾಗವಾಗಿವೆ' ಎನ್ನುತ್ತಾನೆ ಮಗ. ಆತ ಗತಕಾಲದ ತಮ್ಮ ಜನ್ಮದಾತರ ಪ್ರೇಮದ ಪುಟಗಳನ್ನು ನೆನಪಿಸಿಕೊಳ್ಳುತ್ತ ಅದೇ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿರುವಾಗ ಭಾವುಕನಾಗಿ ಹೀಗೊಂದು ಮಾತು ಹೇಳುತ್ತಾನೆ. ಚಿತ್ರದ ನಡುವೆ ಬರುವ ಈ ಸಂಭಾಷಣೆಯೊಂದೇ ದೂರದ ಚೀನಾ ಭಾಷೆಯ ಪ್ರೇಮಿಗಳ ಕಥೆ ನಮಗೆ ಆತ್ಮೀಯ ಎನ್ನಿಸಿಬಿಡುತ್ತದೆ. ಅಷ್ಟರೊಳಗೆ ಸಾಮಾನ್ಯ ಹುಡುಗಿ ಮತ್ತು ಶಿಕ್ಷಕನ ಪ್ರೇಮದ ಪುಟಗಳು ಅನಾವರಣಗೊಂಡು ಚಿತ್ರ ನೋಡುಗನ ಮನಸ್ಸಿನಲ್ಲಿ ತುಂಬಿಕೊಳ್ಳುತ್ತವೆ.
ಹಿಮದ ಗಡ್ಡೆಗಳಿಂದ ಕೂಡಿದ ಬೆಟ್ಟಗಳ ತಪ್ಪಲಿನಲ್ಲಿ ತೆರೆದುಕೊಳ್ಳುವ ಆ ಪ್ರೇಮಭರಿತ ಚಿತ್ರ 'ದಿ ರೋಡ್ ಹೋಂ'. ಉತ್ತರ ಚೀನಾದಲ್ಲಿ ಹೊಸ ಅಲೆಯ ಚಿತ್ರಗಳ ಹಿಂದೆ ನಿರಂತರವಾಗಿ ಓಡುವ ಝಂಗ್ ಇಮೂ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರವಿದು. ಅತ್ಯಂತ ಸಹಜ ಎನ್ನಿಸುವ ಪ್ರೇಮದ ಜೊತೆಗೆ ವಿದ್ಯಾವಂತರಾಗಿ ಹಳ್ಳಿಗಳನ್ನು ಬಿಟ್ಟು ನಗರ ಸೇರುತ್ತಿರುವ ಕಾಲಘಟ್ಟದಲ್ಲಿ ತಾನು ಕಲಿತ ವಿದ್ಯೆ ಮಕ್ಕಳಿಗೆ ಉಪಯೋಗವಾಗಬೇಕು ಎನ್ನುವ ಯುವ ಶಿಕ್ಷಕನ ಕನಸು, ಇದಕ್ಕೆ ಕೈ ಜೋಡಿಸುವ ಹಳ್ಳಿ ಜನ, ತಾವೇ ಮುಂದೆ ನಿಂತು ಶಾಲೆ ನಿರ್ಮಿಸುವ ಸಾರ್ವಜನಿಕರು, ಮೇಸ್ಟ್ರು ಪಾಠ ಮಾಡುತ್ತಿದ್ದರೆ ಪ್ರತಿ ದಿನ ಶಾಲೆ ಮುಂದೆ ಕುತೂಹಲದಿಂದ ನೋಡುವ ಊರಿನವರ ಮುಗ್ಧತೆ, ಪ್ರೀತಿಯ ನೋಟ ಬೀರುವ ಹುಡುಗಿ...
ಹೀಗೆ ತುಂಬಾ ಆಪ್ತವಾಗುವ ಅಂಶಗಳೊಂದಿಗೆ ಚಿತ್ರವನ್ನು ಕಟ್ಟಿಕೊಡುವ ನಿರ್ದೇಶಕ ಝಾಂಗ್ ಇಮೂ ಅವರದ್ದು ಅಂತಾರಾಷ್ಟ್ರೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು. ತಮ್ಮ ಪ್ರತಿ ಚಿತ್ರವನ್ನೂ ಜನಸಮುದಾಯದ ಕನ್ನಡಿಯಂತೆ ಬಳಸುವುದು ಈತನ ಸಿನಿಮಾ ಕೃಷಿಯ ವಿಶೇಷತೆ. ಅಲ್ಲದೆ ವಾಣಿಜ್ಯ ಪ್ರಧಾನ (ಕಮರ್ಷಿಯಲ್) ಚಿತ್ರಗಳನ್ನು ನೀಡುವ ಮೂಲಕ ಚಿತ್ರಜಗತ್ತಿನ ಮಾರುಕಟ್ಟೆಯಲ್ಲಿ ಸದ್ದು ಮಾಡಿದವರು. ಪ್ರೀತಿ, ಪ್ರೇಮ, ಜನ ಸಾಮಾನ್ಯರ ತಳಮಳ, ಮುಖ್ಯವಾಗಿ ಉತ್ತರ ಮತ್ತು ನೈರುತ್ಯ ಚೀನಾದ ಜನರ ಕಥೆಗಳನ್ನು ತೆರೆಗೆ ತಂದ ಹೆಗ್ಗಳಿಕೆ ಈತನಿಗೆ ಸೇರುತ್ತದೆ.  
ಈತನ ಸಿನಿಮಾ ಪಯಣ ಕೇವಲ ನಿರ್ದೇಶನಕ್ಕೆ ಮಾತ್ರ ಸೀಮಿತವಾಗಿಲ್ಲ. ನಟನೆ, ಛಾಯಾಗ್ರಹಣ, ನಿರ್ಮಾಣ, ಬರವಣಿಗೆಯಲ್ಲಿ ಗುರುತಿಸಿಕೊಂಡವರು. ಚಿತ್ರರಂಗದ ಪ್ರತಿ ವಿಭಾಗದಲ್ಲೂ ತಮ್ಮ ಪ್ರತಿಭೆಯನ್ನು ಮೆರದ ಈತ, ಕಿರುತೆರೆಗಾಗಿ ಎರಡು ಸಾಕ್ಷ್ಯ ಚಿತ್ರಗಳನ್ನೂ ನಿರ್ದೇಶಿಸಿದ್ದಾನೆ. 'ಮತ್ತೆ ಪಾಶ್ಚಿಮಾತ್ಯ ಸಿನಿಮಾ ಜಗತ್ತಿನ ಪ್ರೇಕ್ಷಕರು ನನ್ನ ಚಿತ್ರಗಳಿಂದ ಸ್ಫೂರ್ತಿ ಪಡೆದುಕೊಳ್ಳುತ್ತಿದ್ದಾರೆ. ಅಂತಾರಾಷ್ಟ್ರೀಯ ಮಾಧ್ಯಮಗಳೂ ಚೀನಿ ಸಂಸ್ಕೃತಿಯ ಮಹತ್ವವನ್ನು ಸಾರುತ್ತಿವೆ. ಚೀನಾದ ಹೊಸ ಅಲೆಯ ಸಿನಿಮಾಗಳಿಂದ ಇದೆಲ್ಲ ಸಾಧ್ಯವಾಯಿತು' ಎಂದು ಹೆಮ್ಮೆಯಿಂದ ತಮ್ಮ ಚಿತ್ರಗಳ ಕುರಿತು ಹೇಳಿಕೊಳ್ಳುತ್ತಾರೆ ಇಮೂ.
ಬೋ ಷಿ ಅವರ 'ರಿಮೇಂಬರ್‌ನೆಸ್‌' ಕಾದಂಬರಿ ಆಧರಿತ ಚಿತ್ರ ಇದು. ಮಂಜುಗಡ್ಡೆಯ ಬೆಟ್ಟಗಳಿಂದ ಆವೃತವಾಗಿರುವ ಹಳ್ಳಿ ಅದು. ಲೆಕ್ಕ ಹಾಕಿದರೆ ಒಟ್ಟಾಗುವ ಐವತ್ತರಿಂದ ಎಪ್ಪತ್ತು ಮನೆಗಳ ಹಳ್ಳಿ ಅದು. ಬೇಸಿಗೆಯಲ್ಲಿ ಹಿಮದ ಮಳೆಯ ನಿತ್ಯ ಸ್ಪರ್ಶ, ಚಳಿಗಾಲದಲ್ಲಿ ಹಸಿರು ಹೊನ್ನಿನ ಬೆಚ್ಚನೆಯ ಅಪ್ಪುಗೆ, ಪ್ರಕೃತಿಯ ರಮ್ಯತೆ. ಇಂಥ ಊರಿಗೆ ಆಗಮಿಸುವ ಶಿಕ್ಷಕ ಊರಿನ ಜನರ ಜೊತೆ ಸೇರಿ ಅಲ್ಲಿ ಶಾಲೆಯೊಂದನ್ನು ಕಟ್ಟಿ ಹಿಮದ ಬೆಟ್ಟಗಳ ತಪ್ಪಲಿನಲ್ಲಿ ಮಕ್ಕಳಿಗೆ ಅಕ್ಷರಾಭ್ಯಸ ಆರಂಭಿಸುತ್ತಾನೆ. ಅದುವರೆಗೂ ಶಾಲೆ- ಪಾಠ, ಶಿಕ್ಷಕನನ್ನು ಕಾಣದ ಆ ಊರಿನ ಜನ, ನಿತ್ಯ ಶಾಲೆ ಶುರುವಾದ ಕೂಡಲೇ ಅಲ್ಲಿ ಕುತೂಹಲದಿಂದ ಗುಂಪುಗೂಡುತ್ತಾರೆ. ಶಿಕ್ಷಕ ಊರಿಗೆ ಬಂದ ಮೊದಲ ದಿನದ ಮೊದಲ ನೋಟದಲ್ಲೇ ಆತನತ್ತ ಆಕರ್ಷಿತಳಾಗುವ ಹುಡುಗಿ ಮುಂದೆ ಶಿಕ್ಷಕನ ಪ್ರೀತಿಗಾಗಿ ಹಂಬಲಿಸುತ್ತಾಳೆ. ಜೊತೆಗೆ ಆತ ತಮ್ಮೂರಿನ ಮಕ್ಕಳಿಗೆ ಅಕ್ಷರ ಹೇಳಿಕೊಂಡಬೇಕೆಂಬ ಉತ್ಸಾಹ, ಕಾಳಜಿ ಕೂಡ ಆಕೆಗೆ ಇಷ್ಟವಾಗುತ್ತದೆ. ಮುಂದೆ ಮೇಸ್ಟ್ರಿಗೂ ಆಕೆಯ ಮೇಲೆ ಪ್ರೀತಿ ಹುಟ್ಟುತ್ತದೆ.
ಆದರೆ ಇವರಿಬ್ಬರ ಪ್ರೇಮ ಪಯಣದಲ್ಲಿ ಎದುರಾಗುವ ಕಾತರ, ಕುತೂಹಲ, ತಿರುವುಗಳು, ಅವರ ಮೊದಲ ನೋಟಗಳ ಪರಸ್ಪರ ವಿನಿಮಯ, ಶಾಲೆಯಲ್ಲಿ ಪಾಠ ಮಾಡುವ ಸದ್ದು ಕೇಳಿದ ಕೂಡಲೇ ಏದುಸಿರು ಬಿಡುತ್ತ ಓಡುವ ಹುಡುಗಿ ಚಿತ್ರ ನೋಡುವ ಪ್ರೇಕ್ಷಕನ ಅಚ್ಚುಮೆಚ್ಚಿನ ಪ್ರೇಮಿಯಾಗಿಬಿಡುತ್ತಾಳೆ. ಕೇವಲ ಇಲ್ಲಿ ಇಬ್ಬರ ಪ್ರೀತಿ, ಪ್ರೇಮಕ್ಕೆ ಮಾತ್ರ ಕಥೆ ಸೀಮಿತವಲ್ಲ. ಶಾಲೆ ನಿರ್ಮಿಸಿ ಅಕ್ಷಕರ ಕಲಿಸಿಕೊಡುವ ಊರಿನ ಜನರ ಸಾಮೂಹಿಕ ಪ್ರಯತ್ನದ ಮೂಲಕ ಸಾಮಾಜಿಕ ಅರಿವು ಮೂಡಿಸುವುದಕ್ಕೆ ನಿರ್ದೇಶಕ ತನ್ನ ಚಿತ್ರವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾನೆ. ಶಿಕ್ಷಕ ಸತ್ತ ಮೇಲೂ ಆತನ ಪತ್ನಿ, 'ನಿಮ್ಮ ತಂದೆ ತುಂಬಾ ಪ್ರಾಮಾಣಿಕ ವ್ಯಕ್ತಿ. ಹಳ್ಳಿ ಮಕ್ಕಳಿಗೆ ವಿದ್ಯೆ ಕಲಿಸಬೇಕೆಂಬುದು ಅವರ ದೊಡ್ಡ ಆಸೆ. ನೀನೂ ಶಿಕ್ಷಕನಾಗಬೇಕು ಎಂದು ಅವರ ಕನಸಾಗುತ್ತು. ಆದರೆ ನೀನು ನಗರದಲ್ಲಿ ಎಂಜಿನಿಯರ್ ಆದೆ. ನಿಮ್ಮ ತಂದೆಗಾಗಿ ಒಂದೇ ಒಂದು ದಿನ ಈ ಶಾಲೆಯಲ್ಲಿ ಪಾಠ ಮಾಡ್ತಿಯಾ?' ಎಂದು ತನ್ನ ಮಗನಿಗೆ ಹೇಳುವ ಮಾತುಗಳಲ್ಲಿ ಪ್ರೀತಿಯೂ ಇದೆ, ಹಾಗೆ ಸಾಮಾಜಿಕ ಸಂದೇಶವೂ ಚಿತ್ರದಲ್ಲಿ ಅಡಗಿದೆ.
ಶಾಲೆ ಕಟ್ಟಡ ನಿರ್ಮಾಣದಲ್ಲಿ ತೊಡಗಿದವರಿಗೆ ಊರಿನ ಜನ ನಿತ್ಯ ಸಾಮೂಹಿಕವಾಗಿ ಊಟದ ವ್ಯವಸ್ಥೆ ಮಾಡುವುದು, ಸಾರ್ವಜನಿಕರ ಜೊತೆ ಸೇರಿ ಶಾಲೆ ನಿರ್ಮಾಣದ ಕೆಲಸದಲ್ಲಿರುವ ಶಿಕ್ಷಕನಿಗೆ ವಿಶೇಷವಾಗಿ ಅಡುಗೆ ತಯಾರಿಸಿಕೊಂಡು ಹೋಗಿ ತಾನು ತಂದಿರುವ ಊಟವನ್ನೇ ಶಿಕ್ಷಕ ಸ್ವೀಕರಿಸಬೇಕೆಂದು ಕಾತರದಿಂದ ಕಾಯುವ ಹುಡುಗಿ, ಶಾಲಾ ಮಕ್ಕಳ ಜೊತೆ ಗುಡ್ಡ, ಬೆಟ್ಟದಲ್ಲಿ ತಿರುಗಾಡುವಾಗ ಶಿಕ್ಷಕನನ್ನು ಹಿಂಬಾಲಿಸುವ ಅದೇ ಹುಡುಗಿ, ಪದಗಳ ವರ್ಣನೆಗೆ ನಿಲುಕದ ಆಕೆಯ ಕಣ್ಣಂಚಿನ ನೋಟ ಮತ್ತು ಭಾವನೆಗಳು, ಇಬ್ಬರ ಮೊದಲ ಬೇಟಿ, ಮೇಸ್ಟ್ರು ತೀರಿಕೊಂಡಾಗ ಒಬೊಬ್ಬರಾಗಿ ಅವರ ಪಾರ್ಥೀವ ಶರೀರವನ್ನು ಹೊತ್ತು ತರುವ ವಿದ್ಯಾರ್ಥಿಗಳು... ಹೀಗೆ ಚಿತ್ರದ ಪ್ರತಿ ದೃಶ್ಯವೂ ಅಲ್ಲಿನ ಹಿಮ, ಹಸಿರು ವನದಷ್ಟೇ ಸುಂದರ ಮತ್ತು ಮೋಹಕ. ಯುವ ಮನಸ್ಸುಗಳ ಸಹಜ ಪ್ರೀತಿ, ಪ್ರೇಮದ ಜೊತೆಗೆ ಪ್ರಸ್ತುತ ಚೀನಾದ ಹಿಂದುಳಿದ ಹಳ್ಳಿಗಳ ಚಿತ್ರಣವನ್ನು ಕಟ್ಟಿಕೊಡುವ 'ದಿ ರೋಡ್ ಹೋಂ' ಚಿತ್ರ ನೋಡುಗನ ಭಿನ್ನ ಕಲ್ಪನೆಗಳಿಗೆ ಕನ್ನಡಿಯಾಗುತ್ತದೆ.

= ಆರ್. ಕೇಶವಮೂರ್ತಿ
keshavarkm1@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement