ಜೆಟ್ ಫಟ್
ಏರ್ ಫ್ರಾನ್ಸ್ ಜೆಟ್ ವಿಮಾನ ಪ್ಯಾರಿಸ್ನಿಂದ ನ್ಯೂಯಾರ್ಕ್ಗೆ ಹೊರಡುವ ತಯಾರಿಯಲ್ಲಿತ್ತು. ಗಗನಸಖಿಯರು, ಪ್ರಯಾಣಿಕರಿಗೆ ಮುಗುಳ್ನಗೆ ಸೂಸಿ, ಸೂಕ್ತ ಸಲಹೆ ಸೂಚನೆಗಳನ್ನು ನೀಡುತ್ತಾ ತಂಪು ಪಾನೀಯಗಳೊಂದಿಗೆ ಆದರಾತಿಥ್ಯದಲ್ಲಿ ತೊಡಗಿದ್ದರು. ಕಾಕ್ಪಿಟ್ನಲ್ಲಿ ಮೂವರು ಪೈಲೆಟ್ಗಳು ಕಾರ್ಯನಿರತರಾಗಿದ್ದು ತಮ್ಮತಮ್ಮ ವಿಭಾಗಕ್ಕೆ ಸಂಬಂಧಿಸಿದ ತಾಂತ್ರಿಕ ಸಿದ್ಧತೆಗಳನ್ನು ನೋಡಿಕೊಳ್ಳುತ್ತಿದ್ದರು.
'ಕಾಂಕಾರ್ಡ್ ಜೆಟ್' ವಿಮಾನ ಜಗತ್ತಿನ ಎಲ್ಲ ವಿಮಾನಗಳಲ್ಲಿ ಅತೀ ವಿಶಾಲವಾದ ರೆಕ್ಕೆಗಳನ್ನು (ವಿಂಗ್) ಹೊಂದಿದ್ದು, ಕೊಕ್ಕರೆ ಆಕಾರದ ಮೂತಿ, ದೀರ್ಘ ದೇಹ ಹಾಗೂ ಬಾಲವನ್ನು ಹೊಂದಿರುವಂಥದು. ದೇಹದ ಅಗಲ ಬಹಳವೇನಲ್ಲ. ಆದರೆ, ಅದರ ವೇಗ ಕಲ್ಪನೆಗೂ ಮೀರಿದ್ದು. ಇಂಥ ಪ್ರತಿಷ್ಠಿತ ವಿಮಾನದಲ್ಲಿ ಜನ ಸಾಮಾನ್ಯರು ಪ್ರವಾಸ ಮಾಡುವ ಕಲ್ಪನೆ ಮಾಡುವರೆ ಹೊರತಾಗಿ ಅದು ಸಾಧ್ಯವಾಗುವಂಥದ್ದಲ್ಲ. ಆದರೆ ಹೊರಡುವ ತಯಾರಿಯಲ್ಲಿದ್ದ ಈ ವಿಮಾನದಲ್ಲಿ ಶ್ರೀಮಂತ ಪ್ರವಾಸಿಗರೊಂದಿಗೆ ಮಧ್ಯಮ ವರ್ಗದ ಒಂದು ಜೋಡಿ ಕೂಡ ಇತ್ತು. ಅವರು 20 ವರ್ಷ ಕಾಲ ಹಣ ಕೂಡಿಟ್ಟು ತಮ್ಮ ಕನಸನ್ನು ನನಸು ಮಾಡಿಕೊಂಡು ವಿಮಾನ ಏರಿದ್ದರು. ಪ್ರಯಾಣಿಕರೆಲ್ಲ ಸಿರಿವಂತರು, ರಾಜಕಾರಣಿಗಳು, ಅಧಿಕಾರಿಗಳು ಆಗಿದ್ದು ಬಹಳೇ ಖುಷಿಯಲ್ಲಿದ್ದರು.
ಕಾಂಕಾರ್ಡ್ನ ಎಂಜಿನ್ಗಳು ಕೆಲಸ ಪ್ರಾರಂಭಿಸಿದ್ದವು. ವಿಮಾನವು ರನ್ ವೇದಲ್ಲಿ ಚಲಿಸಿ ಆಕಾಶಕ್ಕೇರಬೇಕಾದ ಪ್ರಾರಂಭಿಕ ಹಂತದ ಎಲ್ಲ ಸಿದ್ಧತೆಗಳು ಮುಗಿದಿದ್ದವು. ಕಂಟ್ರೋಲ್ ಟವರ್ನಿಂದ ಕೊನೆಯ ಸೂಚನೆ ಬರುತ್ತಿದ್ದಂತೆ ವಿಮಾನದ ಬಾಗಿಲು ಮುಚ್ಚಿಕೊಂಡಿತ್ತು. ದೀರ್ಘ ಕಾಯದ ಕಾಂಕಾರ್ಡ್ ರಾಜ ಗಾಂಭೀರ್ಯದಿಂದ ರನ್ ವೇದಲ್ಲಿ ಚಲಿಸಲಾರಂಭಿಸಿ, ವೇಗವನ್ನು ಹೆಚ್ಚಿಸುತ್ತ ಸುದೀರ್ಘ ರನ್ ವೇದಲ್ಲಿ ಸಾಗಿ, ಇನ್ನೇನು ಆಕಾಶಕ್ಕೇರಬೇಕೆಂದಾಗ, ಕಂಟ್ರೋಲ್ ಟವರ್ನಿಂದ ಸೂಚನಾ ಕರೆ ಬಂದಿತ್ತು. ವಿಮಾನದ ಎಡಗಡೆ ಇರುವ ರೆಕ್ಕೆ ಹಿಂದುಗಡೆ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಆತಂಕದ ಸೂಚನಾ ಕರೆಯನ್ನು ಕಾಕ್ಪಿಟ್ನಲ್ಲಿದ್ದ ಪೈಲಟ್ಗಳು ಕೇಳಿಸಿಕೊಂಡಿದ್ದರು. ಆದರೆ, ಈಗಾಗಲೇ ನೆಲ ಬಿಟ್ಟು 300 ಕಿ.ಮೀ. ವೇಗದಲ್ಲಿ ಹಾರಲಾರಂಭಿಸಿದ್ದ ವಿಮಾನವನ್ನು ಮರಳಿ ಭೂಮಿಗೆ ತರುವುದು ಅಸಾಧ್ಯದ ಮಾತಾಗಿತ್ತು. ಯಾವುದೇ ಸ್ಥಿತಿಯಲ್ಲಿ ಅದು ಮುಂದೆ ಸಾಗಲೇಬೇಕಾಗಿತ್ತು. ವಿಮಾನದ ಚಾಲಕರಿಗೆ ಇದು ಗೊಂದಲವನ್ನು ಉಂಟುಮಾಡಿತ್ತು. ವಿಮಾನದ ಹಿಂಬದಿಯಲ್ಲಿ ಬೆಂಕಿ ಕಾಣಿಸಿಕೊಂಡು, ಕ್ಷಣಕ್ಷಣಕ್ಕೆ ಅದು ಭೀಕರವಾಗುತ್ತಿರುವ ದೃಶ್ಯ ಕೆಳಗಿನ ಜನರಿಗೆ ಆತಂಕವನ್ನುಂಟುಮಾಡಿತ್ತು. ವಿಮಾನದ ಚಾಲಕರು ಎಲ್ಲವನ್ನೂ ಪುನಃ ಪರಿಶೀಲಿಸಿದರು. ಎಂಜಿನ್ಗಳು, ಕಂಪ್ಯೂಟರ್ಗಳು, ತಾಂತ್ರಿಕ ವ್ಯವಸ್ಥೆಗಳು ಸರಿಯಾಗಿ ಕೆಲಸ ಮಾಡುತ್ತಲಿದ್ದವು. ಆದರೆ ವಿಮಾನವು ನೆಲ ಬಿಟ್ಟು ಆಕಾಶಕ್ಕೇರಿದಾಗ, ಒಳಗೆ ಸೇರಿಕೊಳ್ಳಬೇಕಾಗಿದ್ದ ವಿಮಾನದ ಎಡ ಭಾಗದ ಗಾಲಿಗಳು ಒಳ ಸೇರದೆ ಇರುವ ವಿಷಯ ಕಂಪ್ಯೂಟರ್ನಲ್ಲಿ ದಾಖಲಾಗಿತ್ತು. ಕಂಟ್ರೋಲ್ ಟವರ್ನಲ್ಲಿದ್ದ ಪೈಲಟ್ ಆಫೀಸರ್ಗಳಿಗೆ ಏನು ಸೂಚನೆ ಕೊಡಬೇಕು ಎನ್ನುವುದು ತಿಳಿಯದಾಗಿತ್ತು. ಕೆಳಗೆ ಆತಂಕದಲ್ಲಿದ್ದ ಜನ, ಇನ್ನೇನು ವಿಮಾನ ಸ್ಫೋಟ ಆಗುವುದೆಂಬ ಭಯದಲ್ಲಿ ತತ್ತರಿಸುತ್ತಿದ್ದರೆ, ಕಾಕ್ಪಿಟ್ನಲ್ಲಿ ಏನು ಮಾಡಬೇಕೆಂದು ತಿಳಿಯದೇ ಚಾಲಕರು ಕೈಕೈ ಹಿಸುಕಿಕೊಳ್ಳುತ್ತಲಿದ್ದರು. ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಈ ಅವಘಡದ ಕಲ್ಪನೆ ಇರದೇ ಅವರು ತಮ್ಮ ತಮ್ಮ ವಿಚಾರಗಳಲ್ಲಿ ಮಗ್ನರಾಗಿದ್ದಾರೆ ಹಾಗೂ ವಿಮಾನಯಾನದ ಖುಷಿಯಲ್ಲಿದ್ದಾರೆ.
ಕಂಟ್ರೋಲ್ ಟವರ್ನಿಂದ ಆಪತ್ಕಾಲಿಕ ಸೈರನ್ ಕೂಗುತ್ತಿರುವಂತೆ, ಆಕಾಶಕ್ಕೇರಿದ ವಿಶಾಲ ಕಾಯದ ಕಾಂಕಾರ್ಡ್ ಜೆಟ್, ತರಗೆಲೆಯಂತೆ ಗಿರಕಿ ಹೊಡೆಯುತ್ತಾ ರನ್ ವೇದಿಂದ ಸುದೀರ್ಘ ಅಂತರದಲ್ಲಿದ್ದ ಹೋಟೆಲ್ ಮೇಲೆ ಅಪ್ಪಳಿಸಿ, ಹೊತ್ತಿ ಉರಿಯಲಾರಂಭಿಸಿತು. ವಿಮಾನದಲ್ಲಿದ್ದ ಎಲ್ಲ 130 ಮಂದಿ ನೋಡನೋಡುತ್ತಿರುವಂತೆ ಬೆಂಕಿಗಾಹುತಿಯಾದರು. ಇದೆಲ್ಲ ನಡೆದದ್ದು 2000ನೇ ಇಸವಿಯಲ್ಲಿ. ಅದಾಗಿ ಮೂರು ವರ್ಷ ಬಳಿಕ ಕಾಂಕಾರ್ಡ್ ಜೆಟ್ಗಳನ್ನು ನಾಗರಿಕ ವಾಯುಯಾನದಿಂದ ಶಾಶ್ವತವಾಗಿ ದೂರವಿಡಲಾಯಿತು. ಕಾಂಕಾರ್ಡ್ ಜೆಟ್ ತೆರೆಗೆ ಸರಿದು ದಶಕ ಸಂದ ಹಿನ್ನೆಲೆಯಲ್ಲಿ ಇದೊಂದು ನೆನಪು.
ವಿಮಾನ ರನ್ ವೇದಿಂದ ಆಕಾಶಕ್ಕೇರುತ್ತಿರಬೇಕಾದರೆ, ಕೆಲವೊಂದು ಸಂದರ್ಭಗಳಲ್ಲಿ ತಾಂತ್ರಿಕ ದೋಷದಿಂದ ಅದರ ಗಾಲಿಗಳು ಒಳ ಸೇರದೇ ಹಾಗೆಯೇ ಪ್ರಯಾಣಿಸಿದ ಘಟನೆಗಳು ಜರುಗಿವೆ. ಆದರೆ ಇಲ್ಲಿ ಈ ವಿಮಾನದ ಗಾಲಿಗಳು ಒಳ ಸೇರದೆ ಇರುವ ಕಾರಣಕ್ಕಾಗಿ ಬೆಂಕಿ ಹೊತ್ತಿಕೊಂಡಿದ್ದು, ಚಾಲಕ ವರ್ಗಕ್ಕೆ ಬಿಡಿಸಲಾಗದ ಒಗಟಾಗಿ ಪರಿಣಮಿಸಿತ್ತು. ಕಂಟ್ರೋಲ್ ಟವರ್ನಿಂದ ಆಪತ್ಕಾಲಿಕ ಸೈರನ್ ಕೂಗುತ್ತಿರುವಂತೆ, ಆಕಾಶಕ್ಕೇರಿದ ವಿಶಾಲ ಕಾಯದ ಕಾಂಕಾರ್ಡ್ ಜೆಟ್, ತರಗೆಲೆಯಂತೆ ಗಿರಕಿ ಹೊಡೆಯುತ್ತಾ ರನ್ ವೇದಿಂದ ಸುದೀರ್ಘ ಅಂತರದಲ್ಲಿದ್ದ ಹೋಟೆಲ್ ಒಂದರ ಮೇಲೆ ನೇರವಾಗಿ ಅಪ್ಪಳಿಸಿ, ಛಿದ್ರಛಿದ್ರವಾಗಿ ಹೊತ್ತಿ ಉರಿಯಲಾರಂಭಿಸಿತ್ತು. ವಿಮಾನದಲ್ಲಿದ್ದ ಎಲ್ಲ 120 ಪ್ರಯಾಣಿಕರು, ಚಾಲಕರು ಹಾಗೂ ಸಿಬ್ಬಂದಿ ಬೆಂಕಿಗೆ ಆಹುತಿಯಾಗಿದ್ದರು. ಈ ಎಲ್ಲ ಘಟನೆಗಳು 2-3 ನಿಮಿಷಗಳ ಅವಧಿಯಲ್ಲಿ ಘಟಿಸಿದ್ದವು.
ಅಗ್ನಿಕಾಂಡವನ್ನು ತಹಬಂದಿಗೆ ತರಲು ನಾಲ್ಕು ತಾಸುಗಳೇ ಬೇಕಾಗಿದ್ದವು. ಸಾವಿರಾರು ಗ್ಯಾಲನ್ಗಳಿದ್ದ ವಿಮಾನದ ಇಂಧನ ಹೊತ್ತಿ ಉರಿಯುತ್ತಿರಬೇಕಾದರೆ, ಅದನ್ನು ನಂದಿಸುವುದು ಅಗ್ನಿಪರೀಕ್ಷೆ ಆಗಿತ್ತು. ಸಾಕಷ್ಟು ವಿಸ್ತಾರದಲ್ಲಿ ಹರಡಿ ಬಿದ್ದ ಕಾಂಕಾರ್ಡ್ನ ಅವಶೇಷಗಳನ್ನು ಸಂಗ್ರಹಿಸಿ, ಬೆಂಕಿ ಅನಾಹುತಕ್ಕೆ ಕಾರಣ ಹುಡುಕಲು ಪ್ರಯೋಗಾಲಯಕ್ಕೆ ಕಳುಹಿಸಲಾಯಿತು. ಕಷ್ಟಪಟ್ಟು ಅವಶೇಷಗಳ ಮಧ್ಯದಿಂದ 'ಬ್ಲಾಕ್ ಬಾಕ್ಸ್' ಹುಡುಕಿ ತೆಗೆದಿದ್ದರು. ಆತಂಕವಾದಿಗಳ ಯಾವ ಸೂಚನೆಗಳೂ ಕಂಡು ಬರಲಿಲ್ಲ. ಎಲ್ಲ ತಾಂತ್ರಿಕ ವ್ಯವಸ್ಥೆಗಳು ಹಾಗೂ ಫೈಲಟ್ಗಳು ಸರಿಯಾಗಿ ಕೆಲಸ ನಿರ್ವಹಿಸಿದ ಬಗ್ಗೆ ಮಾಹಿತಿ ದೊರೆಯಿತು. ವಿಮಾನ ನೆಲ ಬಿಟ್ಟು ಮೇಲೆ ಎದ್ದಾಗ, ಎಡ ಬದಿಯ ಗಾಲಿಗಳು ಒಳಸೇರದೇ ಇರುವ ವಿಷಯವು ಅಲ್ಲಿ ದಾಖಲಾಗಿತ್ತು. ಫೈಲಟ್ಗಳು ಈ ವಿಷಯ ಕುರಿತು ಚರ್ಚಿಸಿದ್ದೂ ರೆಕಾರ್ಡ್ ಆಗಿತ್ತು. ಆದರೆ ವಿಮಾನದ ಎಡಭಾಗದ ಪಕ್ಕದ ಹಿಂದುಗಡೆ ಬೆಂಕಿ ಹೊತ್ತಿಕೊಳ್ಳುವುದಕ್ಕೆ ಏನು ಕಾರಣ ಎಂಬುದನ್ನು ಯಾರಿಗೂ ಕಂಡು ಹಿಡಿಯಲಾಗಲಿಲ್ಲ. ಅಪಘಾತದ ನಾಲ್ಕನೇ ದಿನ ಅಪಘಾತದ ಕಾರಣಗಳನ್ನು ಕಂಡು ಹಿಡಿಯಲು ನೇಮಕವಾಗಿದ್ದ ತಜ್ಞರ ತಂಡ ರನ್ ವೇ ಅನ್ನು ಪರೀಕ್ಷಿಸಲು ತೆರಳಿದಾಗ ಅಲ್ಲಿ ಅವರಿಗೆ ಆಶ್ಚರ್ಯ ಕಾದಿತ್ತು. ರನ್ ವೇದ ಕೊನೆಯ ಎಡ ಭಾಗದಲ್ಲಿ ಅಂದಾಜು 2 ಅಡಿ ಉದ್ದಳತೆಯ ದಪ್ಪನೆಯ, ತುದಿಗಳು ಚೂಪಾಗಿದ್ದ ಅಲ್ಯೂಮಿನಿಯಂ ಪಟ್ಟಿ ಬಿದ್ದುಕೊಂಡಿತ್ತು. ಅದಕ್ಕೆ ರಿಬಿಟ್ ಕೂಡ್ರಿಸಲು ಅನುಕೂಲವಾಗುವಂತೆ ನಾಲ್ಕೈದು ತೂತುಗಳನ್ನು ಕೊರೆಯಲಾಗಿತ್ತು. ಹಾಗೆಯೇ ಇನ್ನೊಂದಿಷ್ಟು ಸ್ಥಳ ಪರಿಶೀಲನೆ ಕೈಗೊಂಡಾಗ ವಿಮಾನದ ಗಾಲಿಯ ಟಯರ್ನಿಂದ ಕಿತ್ತುಹೋದ ರಬ್ಬರ್ ತುಂಡೊಂದು ದೊರೆಯಿತು. ಅದು ಅಂದಾಜು 2 ಕಿಲೋ ಭಾರವಾಗಿತ್ತು. ಈ ಎರಡೂ ಸಂಶಯಾಸ್ಪದ ವಸ್ತುಗಳನ್ನು ಪರೀಕ್ಷೆಗೆ ಒಳಪಡಿಸಿದಾಗ, ಅಲ್ಯುಮಿನಿಯಂ ಪಟ್ಟಿ ಅಪಘಾತಕ್ಕೀಡಾದ ಕಾಂಕಾರ್ಡ್ ಜೆಟ್ ವಿಮಾನದ್ದು ಆಗಿರಲಿಲ್ಲ ಎಂದು ಕಂಡುಬಂದಿತ್ತು. ಅದು ಕಾಂಕಾರ್ಡ್ ವಿಮಾನ ರನ್ ವೇ ಮೇಲೆ ಸಾಗಿ ಹೋಗುವುದಕ್ಕಿಂತ 10 ನಿಮಿಷ ಮುಂಚೆ ಸಾಗಿ ಹೋದ ಬೇರೊಂದು ವಿಮಾನದ ಅವಶೇಷವಾಗಿತ್ತು. ಅದು, ವಿಮಾನದ ಭಾಗಗಳನ್ನು ಜೋಡಿಸುವಾಗ ಜೋಡಣೆ ಪಟ್ಟಿ ಆಗಿತ್ತು. ಈ ಸಾಧಾರಣ ಅಲ್ಯುಮಿನಿಯಂ ಪಟ್ಟಿಯೇ ಆವಘಡಕ್ಕೆ ಕಾರಣವಾಗಿತ್ತ್ತು.
ಹಾರಾಟದಲ್ಲಿ ಹಕ್ಕಿಗಳು ಬಡಿದು ವಿಮಾನಗಳು ನೆಲಕ್ಕೆ ಉರುಳಿದ ಉದಾಹರಣೆಗಳೂ ಇವೆ. ಇದಕ್ಕೆ ಕಾರಣ ವೇಗ ಹಾಗೂ ಭಾರಗಳಿಂದಾಗುವ ಶಕ್ತಿಯ ಪರಿಣಾಮ. ಈ ಅಪಘಾತಕ್ಕೂ ಆ ಸಂಗತಿಯೇ ಕಾರಣವಾಗಿತ್ತು. ಕಾಂಕಾರ್ಡ್ ಕೊನೆಯ ಹಂತದ ಪೂರ್ತಿ ವೇಗದಲ್ಲಿ ರನ್ ವೇದಲ್ಲಿ ಸುಮಾರು 300 ಕಿ.ಮೀ. ವೇಗದಲ್ಲಿ ಧಾವಿಸುತ್ತಿರುವಾಗ ಅದಾಗಲೇ ಸಾಗಿಹೋದ ವಿಮಾನದಿಂದ ಕಿತ್ತು ಬಿದ್ದ ಅಲ್ಯುಮಿನಿಯಂ ಪಟ್ಟಿ ಕಾಂಕಾರ್ಡ್ನ ಎಡ ಭಾಗದ ವಿಶಾಲವಾದ ವಿಂಗ್ನಲ್ಲಿ ಅಳವಡಿಸಿದ್ದ ಅನಿಲ ಸಂಗ್ರಹಕ್ಕೆ ಬಲವಾಗಿ ಅಪ್ಪಳಿಸಿತ್ತು.
ಇಲ್ಲಿ ವಿಮಾನದ ವ್ಯವಸ್ಥೆ ಕುರಿತಾಗಿ ಒಂದಿಷ್ಟು ವಿವರಿಸಬೇಕು. ನಾವೆಲ್ಲರೂ ವಿಮಾನ, ರೈಲು, ಕಾರು, ಹಡಗು, ಸಬ್ಮೆರಿನ್ ಹಾಗೂ ಸ್ಪೇಸ್ ಸೆಟ್ ಮುಂತಾದವುಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಅವುಗಳು ಯಾವ ರೀತಿಯಲ್ಲಿ ಕೆಲಸ ಮಾಡುತ್ತವೆ ಎಂಬುದನ್ನು ತಿಳಿದಿರುವುದಿಲ್ಲ. ತಿಳಿದುಕೊಳ್ಳದೇ ಇರುವುದಕ್ಕೆ ಕಾರಣ, ನಮಗೆ ಈ ಸಂಗತಿಗಳ ಬಗ್ಗೆ ಕುತೂಹಲ ಇಲ್ಲದೇ ಇರುವುದು ಅಷ್ಟೆ. ಇಂತಹ ದೈತ್ಯ ವಿಮಾನಗಳಿಗೆ ಸಾವಿರ ಸಾವಿರ ಗ್ಯಾಲನ್ಗಳ ಇಂಧನದ ಅವಶ್ಯಕತೆ ಇರುತ್ತದೆ. ಆಕಾಶದಲ್ಲಿ ಹಕ್ಕಿಯ ರೆಕ್ಕೆಗಳಂತೆ ತೋರುವ ವಿಮಾನದ ರೆಕ್ಕೆಗಳಲ್ಲಿ ಇಂಧನವನ್ನು ಸಂಗ್ರಹಿಸಿ ಇಡುತ್ತಾರೆ ಎಂದರೆ ಆಶ್ಚರ್ಯವಾಗಬಹುದು. ಯಾರು ಪ್ರತ್ಯಕ್ಷವಾಗಿ ಇಂತಹ ವಿಮಾನಗಳಲ್ಲಿ ಪ್ರಯಾಣಿಸುವರೋ ಹಾಗೂ ವಿಮಾನಗಳ ಕೆಲಸ ಕಾರ್ಯಗಳ ಬಗ್ಗೆ ಅಭ್ಯಾಸ ಮಾಡಿರುವರೋ ಅವರಿಗೆ ವಿಮಾನದ ವಿಶಾಲ ರೆಕ್ಕೆಗಳ ಕಲ್ಪನೆ ಇರುವುದು. ಈ ರೆಕ್ಕೆಗಳಲ್ಲಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಅನಿಲ ಸಂಗ್ರಹಕ್ಕೆ ಅವಕಾಶ ಇರುತ್ತದೆ. ಹಾಗೆಯೇ ಈ ಕಾಂಕಾರ್ಡ್ದ ರೆಕ್ಕೆಗಳಲ್ಲಿ ಅನಿಲ ಸಂಗ್ರಹ ಮಾಡಿದ್ದರು.
ಕಿತ್ತುಬಂದ ರಬ್ಬರ್ ತುಂಡು ಅನಿಲ ಸಂಗ್ರಹಕ್ಕೆ ಅಪ್ಪಳಿಸುವ ಮುನ್ನ, ವಿಮಾನದ ಗಾಲಿಗಳನ್ನು ಒಳ ಸೆಳೆಯುವ ವಿದ್ಯುತ್ ಜೋಡಣೆಯ ತಂತಿಗಳಿಗೆ ಅಪ್ಪಳಿಸಿ ಹೋಗಿತ್ತು. ಈ ಹೊಡೆತದಿಂದ ವೈರಿಂಗ್ ವ್ಯವಸ್ಥೆ ಕಡಿದು ಬಿದ್ದಿತ್ತು. ಅನಿಲ ಸಂಗ್ರಹದ ಟ್ಯಾಂಕಿಗೆ ಪೆಟ್ಟಾಗಿ ಸೋರಿ ಹೊರಬರುತ್ತಿದ್ದ ಅನಿಲಕ್ಕೆ ಕಡಿದು ಜೋತುಬಿದ್ದ ವಿದ್ಯುತ್ ತಂತಿಯ ಸಂಪರ್ಕದಿಂದಾಗಿ ತತ್ಕ್ಷಣದಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಇದೆಲ್ಲ ಕೆಲವೇ ಕ್ಷಣಗಳಲ್ಲಿ ಭೀಕರ ಅಪಘಾತಕ್ಕೆ ಕಾರಣವಾಗಿತ್ತು.
ವಿಮಾನ ಯಾನದಲ್ಲಿ ಅಲಕ್ಷ್ಯ ಹಾಗೂ ಅಸಂಬದ್ಧತೆಗೆ ಅವಕಾಶ ಇರುವುದಿಲ್ಲ. ಈ ಹಿಂದೆ ಅಮೆರಿಕದಲ್ಲಿ ಅಂತರಿಕ್ಷದಿಂದ ವಾಪಸು ಭೂಮಿಗೆ ಬರುತ್ತಿದ್ದ ಸ್ಪೇಸ್ ಶೆಟಲ್ ಇನ್ನು ಕೆಲವೇ ಕ್ಷಣಗಳಲ್ಲಿ ಭೂಸ್ಪರ್ಶ ಮಾಡಬೇಕೆಂದಿರುವಾಗ ಸ್ಫೋಟಗೊಂಡು ಭಾರತ ಸಂಜಾತೆ ಕಲ್ಪನಾ ಚಾವ್ಲಾ ಸಹಿತ 6 ಅಮೂಲ್ಯ ಜೀವಗಳು ಅಗ್ನಿಗೆ ಆಹುತಿಯಾಗಿದ್ದುವು. ಅದಕ್ಕೆ ಕಾರಣ ಸಾವಿರಾರು ಕಿ.ಮೀ. ವೇಗದಲ್ಲಿ ಭೂಮಿಗೆ ಧಾವಿಸಿ ಬರುತ್ತಿದ್ದ ಶೆಟಲ್ ಹೊರ ಮೈಗೆ ಜೋಡಿಸಿದ್ದ ಅಗ್ನಿ ನಿರೋಧಕ ಸಿಮೆಂಟ್ ಸೀಟುಗಳ ಜೋಡಣೆಯಲ್ಲಾದ ಅವ್ಯವಸ್ಥೆಗೆ ಕಾರಣವಾಗಿತ್ತು. ಹೀಗೆ ಅವಘಡ, ಅಪಘಾತಗಳಿಗೆ ಸಣ್ಣಸಣ್ಣ ಸಂಗತಿಗಳೇ ಸಾಕ್ಷಿಯಾಗುವುವು. ಈ ಅವಘಡದ ನಂತರ ಏರ್ ಫ್ರಾನ್ಸ್ ಕಂಪನಿ ತನ್ನ ಎಲ್ಲ ಕಾಂಕಾರ್ಡ್ ಜಟ್ ವಿಮಾನ ಯಾನ ರದ್ದು ಪಡಿಸಿತು. ಇದಾದ ಮೂರು ವರ್ಷ ಬಳಿಕ, 2003ರಲ್ಲಿ ಕೊನೆಯ ಯಾನವನ್ನು ಪೂರೈಸಿ ತನ್ನ ಎಲ್ಲ ಕಾಂಕಾರ್ಡ್ ವಿಮಾನಗಳನ್ನು ವಸ್ತು ಸಂಗ್ರಹಾಲಯದಲ್ಲಿ ಇರಿಸಿದೆ. <
-ಬಸವರಾಜ ಡಿ. ಕುಡಚಿ
8095340939.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.