ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಾಪ್ತಾಹಿಕಪ್ರಭ

ಪ್ರೀತಿಗೇನು ಕ್ವಾಲಿಫಿಕೇಷನ್?

Mainashree
Updated On : 23 Mar 2013, 2:46 am

ಕಣ್ಣ ಹನಿದು ಕರೆದೆ ನಾನು, ಸಾಂತ್ವನಕ್ಕೆ ಬರದೇ ಹೋದೆ ನೀನು. ಎದೆಯ ಹಂದರದಲ್ಲಿ ಮಡುಗಟ್ಟಿ ಕುಳಿತಿರುವ ನೋವನ್ನು ನಿನಗೆ ಅರ್ಥ ಮಾಡಿಸುವುದಾದರೂ ಹೇಗೆ? ಸಾರಿ ಸಾರಿ ಮಾತನಾಡಿಸಿದರೂ ಬಗ್ಗುತ್ತಿಲ್ಲ. ನಿನಗೆ ಹೇಳುವ ಬದಲು ಗುಡ್ಡಕ್ಕೆ ಹೇಳಿದ್ದರೂ ಅದು ಕರಗುತ್ತಿತ್ತು. ಲವ್ ಯೂ ಅಂದಷ್ಟು ಸುಲಭವಾ ಪ್ರೀತಿ ಪಡೆಯೋ ಹಾದಿ? ಕಷ್ಟಪಟ್ಟು ಓದಿದರೆ, ಎಂಥ ಶತಮೂರ್ಖನೂ ಈ ಪರೀಕ್ಷಾ ವ್ಯವಸ್ಥೆಯಲ್ಲಿ ರ್ಯಾಂಕ್ ಗಳಿಸಿಬಿಡಬಹುದು. ಅದರೆ ಹುಡುಗಾ, ಒಂದು ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವುದಿದೆಯಲ್ಲಾ, ಅದು ಅಷ್ಟು ಸುಲಭದಲ್ಲಿಲ್ಲ ಆಯ್ತಾ? ಒಂದೇ ಒಂದು ಬೊಗಸೆ ಪ್ರೀತಿಗಾಗಿ ಈ ಜಗತ್ತಿನಲ್ಲಿ ಪರಿತಪಿಸುವ ಎಷ್ಟು ಮಂದಿಯಿದ್ದಾರೆ ಅನ್ನೋದು ಗೊತ್ತಾ ನಿನಗೆ? ನಮ್ಮೆಲ್ಲ ಆತ್ಮಾಭಿಮಾನ, ಲಜ್ಜೆ, ಅಹಂಕಾರ, ಬಿಗುಮಾನಗಳನ್ನೆಲ್ಲಾ ಕಟ್ಟಿಟ್ಟು ಪ್ರೀತಿಯ ಭಿಕ್ಷೆ ಬೇಡುತ್ತಾ ಜೀವನದುದ್ದಕ್ಕೂ ನಿಂತಿರುತ್ತಾರೆ. ಎಲ್ಲೋ ಬೀದಿಯಲ್ಲಿ ನಿಂತು ತುತ್ತು ಅನ್ನ ಕಾಣದೇ, ಮಾಸಿದ ಬಟ್ಟೆಯಲ್ಲಿ ತಿರುಗುವ ಒಂದು ಹುಡುಗಿಗೂ ಲವ್ ಯೂ ಅಂತ ಹೇಳುವುದಿಲ್ಲವೇಕೆ? ಗಡಿಯಲ್ಲಿ ಜೀವದ ಹಂಗು ತೊರೆದು ನಿಂತು ವೈರಿಗಳ ಗುಂಡಿಗೆ ಎದೆ ಒಡ್ಡಿದ ಯುವಕನ ಹೆತ್ತೊಡಲು ಹಂಬಲಿಸುವ ಪ್ರೀತಿಯನ್ನು ಕೊಡಬೇಕು ಅಂತ ಅನ್ನಿಸುವುದೇ ಇಲ್ಲವೇ? ಹರೆಯಕ್ಕೇ ಗಂಡನನ್ನು ಕಳಕೊಂಡು, ಕರುಳಕುಡಿಗಾಗಿ ಎಲ್ಲೆಲ್ಲೋ ಕೂಲಿ ಮಾಡುವ ವಿಧವೆಯ ಮೇಲೆ ಪ್ರೀತಿ ಹುಟ್ಟುವುದಿಲ್ಲವೆ? ಕಪ್ಪಗೆ, ಕುಳ್ಳಗೆ ಸ್ವಾಟೆ ಹರಿದವಳೊಂದಿಗೆ ಪ್ರೀತಿ ಹಂಚಿಕೊಳ್ಳಲು ಮನಸ್ಸೇ ಬರುವುದಿಲ್ಲವೇ? ಅವರನ್ನೆಲ್ಲಾ ಪ್ರೀತಿಸಬೇಕು ಅಂಥ ಈ ಜಗತ್ತಿನಲ್ಲಿ ಯಾವ ಹುಡುಗನಿಗೂ ಅನ್ನಿಸುವುದೇ ಇಲ್ಲ ಯಾಕೆ? ಯಾರೋ ಒಬ್ಬಳು ಸುಂದರಿ ಸ್ವಲ್ಪ ಸಲುಗೆಯಿಂದ ಮಾತಾಡಿಸಿದಳು, ನಗುತ್ತಾ ಓಡಾಡಿದಳು ಎಂದ ಮಾತ್ರಕ್ಕೆ ಅವಳ ಮುಂದೆ ಮಂಡಿಯೂರಿ ಅತ್ಯಂತ ನಿರ್ಲಜ್ಜ ರೀತಿಯಲ್ಲಿ, ದೈನೇಸಿಯಾಗಿ 'ಪ್ಲೀಸ್, ನನ್ನ ಪ್ರೀತಿಸ್ತೀಯಾ' ಅಂತ ಅಂಗಾಲಾಚುವುದಿದೆಯಲ್ಲಾ ಅದರಂಥ ಯಾತಾನಾದಾಯಕ ಕೆಲಸ ಮತ್ತೊಂದು ಇದೆಯಾ? ಆದರೂ ನೀವು ಹುಡುಗರು ಅದಕ್ಕೆ ಹಿಂದೆಗೆಯುವುದಿಲ್ಲ.
ಒಂದು ಮಾತು ಹೇಳಿಬಿಡುತ್ತೇನೆ, ಇಷ್ಟೆಲ್ಲಾ ಮಾಡುವ ನಿಮ್ಮದು ಖಂಡಿತಾ ನಿಜವಾದ ಪ್ರೀತಿ ಅಲ್ಲ. ಹಾಗಂತ ಒಮ್ಮೆಯಾದರೂ ನಿಮ್ಮನ್ನು ನೀವು ಕೇಳಿಕೊಂಡಿದ್ದೀರಾ? ನಿಮಗೆ ಯಾಕೆ ಈ ಹುಡುಗಿ ಇಷ್ಟ ಅಂದರೆ ಅವಳ ಕಣ್ಣು, ಮೂಗು, ಮಾತು ಹೀಗೆ ಏನೇನೋ ಬಡಬಡಿಸ್ತೀರ. ಯಾವತ್ತಿಗೂ 'ಅವಳು ನನಗೆ ಅತ್ಯಂತ ಅನುರೂಪಳು. ನನ್ನನ್ನು ಅರ್ಥ ಮಾಡಿಕೊಂಡು ಬದುಕುವ ಸಾಮರ್ಥ್ಯವನ್ನು ಅವಳಲ್ಲಿ ನಾನು ಕಂಡಿದ್ದೇನೆ. ನಾನೂ ಅವಳಿಗೆ ಪೂರ್ತಿ ಹೊಂದುತ್ತೇನೆ. ಅವಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಬಲ್ಲೆ' ಅಂತ ಹೇಳುವುದೇ ಇಲ್ಲ. ಅಂದರೆ ನೀವು ಪ್ರೀತಿಸಿದ್ದು ಅವಳನ್ನಲ್ಲ. ಅವಳ ಮೂಗು, ಬಾಯಿ, ಸ್ವಾಟೆ, ನಗು ಇಷ್ಟಕ್ಕೆ ನಿಮ್ಮ ಪ್ರೀತಿ ಸೀಮಿತವೇ? ಇದಕ್ಕೂ ಮೀರಿದ ಸತ್ಯ ಏನು ಗೊತ್ತಾ? ನಿಮ್ಮ ಬಳಿ ಒಂದು ಹುಡುಗಿ ಸುಳಿದಾಡುತ್ತಾಳೆ, ನಿಮ್ಮೊಂದಿಗೆ ಸಲುಗೆ ತೋರಿ ಮಾತಾಡಿದ್ದಾಳೆ, ನಿಮ್ಮ ನೋಡಿ ನಗುತ್ತಾಳೆ ಎಂಬುದೇ ನಿಮಗೆ ದೊಡ್ಡದೊಂದು ಐಶ್ವರ್ಯ ಸಿಕ್ಕ ಸಂಗತಿ. ಹರೆಯಕ್ಕೆ ಬಂದ ಹೊಸ್ತಿಲಿನಲ್ಲಿ ಹೆಣ್ಣಿನ ಗಾಳಿಯೇ ನಿಮ್ಮನ್ನು ಪ್ರೀತಿಯ ಭ್ರಮೆಗೆ ತಳ್ಳಿಬಿಡುತ್ತದೆ. ಅಷ್ಟಕ್ಕೇ ನೀವು ಅವಳನ್ನು ಲವ್ ಮಾಡುವ ನಿರ್ಧಾರಕ್ಕೆ ಬಂದುಬಿಡುತ್ತೀರಿ. ಅದನ್ನು ತೀರಾ ವಾಚಾಳಿಯಂತೆ ಹೇಳಿ ಮುಗಿಸಿಬಿಡುತ್ತೀರಿ. ಒಪ್ಪದಿದ್ದಾಕ್ಷಣ, ನೂರಾರು ವರಸೆಗಳು. ಸತ್ತೇ ಹೋಗುತ್ತೇನೆ ಎಂಬ ಬೆದರಿಕೆ. ಆ ಕ್ಷಣದಲ್ಲಿ ನಿಮ್ಮನ್ನು ಜೀವಕ್ಕೆ ಜೀವ ಕೊಟ್ಟು ಪ್ರೀತಿಸುವ, ಪ್ರೀತಿಸುತ್ತಿರುವ, ಸುಂದರ ಬದುಕಿನ ಕನಸಿನ ಹಂದರ ಹರಡಿ ಕುಳಿತ ಮನೆಯವರಾರೂ ನೆನಪಿಗೆ ಬರುವುದೇ ಇಲ್ಲ ಅಲ್ಲವೇ?
ಇಲ್ಲೇ ನೀವು ಎಡವುವುದು. ಎಷ್ಟೇ ಹೇಳಿದರೂ ಹುಚ್ಚಿಗೆ ಬಿದ್ದು ಬರುವ ನೀವು ಕೊನೆಗೊಮ್ಮೆ ಅವಳಲ್ಲಿ ನಿಮಗೆ ಇಷ್ಟವಾಗದ, ನಿಮ್ಮ ಸ್ವಭಾವಕ್ಕೆ ಹೊಂದಿಕೆಯಾಗದ, ನಿಮ್ಮ ನಿರೀಕ್ಷೆಯನ್ನು ತಲುಪದ ಗುಣಗಳನ್ನು ಕಂಡಾಗ ಸಿಡಿದು ಬೀಳುತ್ತೀರಿ. ಕೋಪಿಸಿಕೊಳ್ಳುತ್ತೀರಿ. ಸಲ್ಲದ ನೆಪ ಹೂಡಿ ಜಗಳ ತೆಗೆಯುತ್ತೀರಿ. ಮೊಂಡಿಗೆ ಬಿದ್ದು ಮಾತು ಬಿಡುತ್ತೀರಿ. ಹೊರತೂ ಅದರೊಂದಿಗೆ ರಾಜಿಗೆ ಮನಸ್ಸು ಮಾಡುವುದೇ ಇಲ್ಲ. ಯಾಕೆ ಪ್ರೀತಿಯೆಂಬುದೇ ರಾಜಿ ಅನ್ನೋದು ನಿಮಗೆ ಗೊತ್ತಿಲ್ಲವೇ? ತ್ಯಾಗವಿಲ್ಲದ ಪ್ರೀತಿ ಅದೆಂಥದ್ದು? ನಾನೇಕೆ ಸೋಲಬೇಕು ಎಂಬಂಥ ಅಹಂಕಾರ ತೋರುತ್ತೀರಲ್ಲಾ? ಪ್ರೀತಿಸಿದ ಮನಸುಗಳ ನಡುವೆ ಎಂಥಾ ಸೋಲು, ಗೆಲುವುಗಳು ಹುಡುಗಾ? ನೀನು ಮಾಡಿದ್ದೂ ಇದನ್ನೇ ಅಲ್ಲವೇ? ಇದೇ, ಇದೇ ಕಾರಣಕ್ಕೇ ಅಲ್ಲವೇ ಬಹುತೇಕ ಪ್ರೀತಿ ಅರ್ಧಕ್ಕೆ ಮುಗಿದು ಹೋಗುತ್ತಿರುವುದು? ಅಷ್ಟೂ ಆಗಿ ಮುಂದುವರಿದು ಮದುವೆಯಾದರೆ ವರ್ಷ ಕಳೆಯುವುದರಲ್ಲಿ ಬದುಕು ಹಳಸಲಾಗಿಬಿಡುವುದು. ಕೊನೆಗೊಮ್ಮೆ ಸಿಗರೇಟು, ಕುಡಿತ, ಗುಟ್ಕಾದ ದಾಸರಾಗಿ ದೇವದಾಸ್ ಫೋಸು ಕೊಡುವ, ಆ ಮೂಲಕ ಗೆಳೆಯರ, ಬಂಧುಗಳ ವರ್ಗದಲ್ಲಿ ಇಲ್ಲದ ಸಿಂಪಥಿ ಗಿಟ್ಟಿಸಿಕೊಳ್ಳುವ ಹಂಬಲ ಯಾಕೆ ಬೇಕು ಹೇಳಿ?
ಒಂದು ಮಾತು ನೆನಪಿಟ್ಟುಕೊ ಗೆಳೆಯಾ. ತಾರುಣ್ಯವೊಂದೇ ಪ್ರೀತಿಗೆ ಇರುವ ಕ್ವಾಲಿಫಿಕೇಶನ್ ಅಲ್ಲ. ಹುಡುಗಿ ಹತ್ತಿರ ಓಡಾಡುತ್ತಿದ್ದಾಳೆ, ಮಾತಾಡುತ್ತಿದ್ದಾಳೆ, ನಗುತ್ತಾಳೆ, ಬದುಕಿನ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದಾಳೆ, ಭಾವನೆಗಳಿಗೆ ಪಕ್ಕಾಗುತ್ತಿದ್ದಾಳೆ, ಜತೆಯಲ್ಲಿ ಓಡಾಡುತ್ತಿದ್ದಾಳೆ ಎಂದ ಮಾತ್ರಕ್ಕೆ ಅವಳಿಗೆ 'ಲವ್ ಯೂ' ಅಂತ ಹೇಳಲೇಬೇಕಿಲ್ಲ. ಹಾಗೆ ಹೇಳಲೇಬೇಕೆ? ಹಾಗಿದ್ದರೆ ಅದಕ್ಕೆ ನಿನ್ನ ಅರ್ಹತೆಯೇನು ಎಂಬುದನ್ನು ಮೊದಲು ಕೇಳಿಕೊ. ಮುಂದಿನ ಎಲ್ಲ ಜವಾಬ್ದಾರಿಗಳಿಗೂ ನಾನು ಯೋಗ್ಯನೇ ಎಂದು ವಿಮರ್ಶೆಗೆ ಇಳಿ. ಅದಕ್ಕೆ ಉತ್ತರ ಸಿಕ್ಕ ಮೇಲೂ ನನ್ನ ಪ್ರೀತಿಯ ಕೋರಿಕೆಗೆ ಹುಡುಗಿ ಉತ್ತರಿಸಲೇಬೇಕೆ? ಅದೂ ಪಾಸಿಟಿವ್ ಉತ್ತರ ಆಗಿರಲೇಬೇಕೆ ಎಂಬುದನ್ನು ಯೋಚಿಸು. ನೀನು ಇವನ್ನೆಲ್ಲಾ ಯೋಚಿಸಿದ್ದರೆ ನನ್ನ ಪ್ರೀತಿಸುತ್ತೇನೆಂದು ಹೇಳಿ ಬಂದು, ನಾನು ಒಲ್ಲೆ ಎಂದದ್ದಕ್ಕೇ ಮುನಿಸಿಕೊಂಡು ಹೀಗೆ ಸತಾಯಿಸುತ್ತಿರಲಿಲ್ಲ. ಎಷ್ಟೇ ಬೇಸರವಾದರೂ ಎತ್ತಿ ಎಸೆಯಲಾಗದಂಥದ್ದು ಬದುಕು. ಸಣ್ಣಪುಟ್ಟ ಸಂಗತಿಗಳೆಲ್ಲ ಹೀಗೆ ಗುಡ್ಡವಾಗಬೇಕಿಲ್ಲ ಗೆಳೆಯಾ. ಸುಮ್ಮನೆ ಇಂಥದ್ದನ್ನೆಲ್ಲ ಬಿಟ್ಟು ಬದುಕಿನ ಸಾಧನೆಗೆ ಹೊರಡು. ನಿನ್ನ ಗುರಿಗೆ ನಾನು ಹೆಗಲು ಕೊಡುವೆ ಒಂದು ಒಳ್ಳೆಯ ಗೆಳತಿಯಾಗಿ.
ಇಷ್ಟನ್ನೂ ನಾನು ನಿನಗೆ ಹೇಳುತ್ತಿದ್ದುದ್ದು ಹೀಗೆ ಅರೆಬೆಂದ ಪ್ರೀತಿಯಲ್ಲಿ ಸಿಲುಕಿ, ಕೈಸುಟ್ಟುಕೊಂಡ ಅನುಭವದಿಂದಲೇ. ಹಾಗೂ ನಾನೂ ಒಮ್ಮೆ ಸುಟ್ಟುಕೊಂಡು ನೋಡುತ್ತೇನೆ ಎಂಬುದಾಗಿದ್ದರೆ ನಿನ್ನಷ್ಟ. ಅದಿಲ್ಲದಿದ್ದರೆ ನಾಳೆ ಬೆಳಗ್ಗೆ ಕಾಲೇಜಿನಲ್ಲಿ ಮುಂದಿನ ಬೆಂಚಿನಲ್ಲಿ ನೀಟಾಗಿ ಕೂದಲು ಬಾಚಿಕೊಂಡು ಬಂದು ಕೂತಿರುತ್ತೀಯ, ಜಾಣ ಮರಿಯಂತೆ.

-ರಾಧಾ ಸೋಚನಿ
abhyagatha@yahoo.co.in

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments