ಸಾಪ್ತಾಹಿಕಪ್ರಭ

ಸಿಎನ್‌ಆರ್

ಸಿ.ಎನ್. ರಾಮಚಂದ್ರನ್ ನಮ್ಮ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಅವರ ಸಮಗ್ರಸಾಹಿತ್ಯವನ್ನು ಗಮನಿಸಿದಾಗ ಎದ್ದು ಕಾಣುವ ಸಂಗತಿಯೆಂದರೆ ಅವರ ವಿಸ್ತಾರವಾದ ಆಳವಾದ ಅಧ್ಯಯನ. ಒಂದು ರೀತಿ ಅವರು ನಮ್ಮ ವಿದ್ವತ್ ಪರಂಪರೆಯ ಪ್ರತಿನಿಧಿಯಂತೆ ತೋರುತ್ತಾರೆ. ಆದರೆ ಅವರ ವಿದ್ವತ್ತು ಒಣ ಪಾಂಡಿತ್ಯವಲ್ಲವೆಂಬುದು ತಕ್ಷಣವೇ ಹೇಳಬೇಕಾದ ಮಾತು. ಮಾತ್ರವಲ್ಲ, ಅದು ಅವರಲ್ಲಿ ಪ್ರದರ್ಶನದ ಸಾಧನವೂ ಅಲ್ಲ. ವಿಮರ್ಶಕನ ವಿಸ್ತಾರ ಅಧ್ಯಯನ ಕೆಲವೊಮ್ಮೆ ಓದುಗನನ್ನು ದಿಗ್ಭ್ರಮೆಗೊಳಿಸುವ, ಗೊಂದಲಗೊಳಿಸುವ ಉಪಾಯವೂ ಆಗಬಲ್ಲುದು. ಅದರಿಂದ ಅವನಿಗೆ ಯಾವ ರೀತಿಯ ನೆರವೂ ಒದಗದಿರಬಹುದು. ಬೇರೊಂದು ನೆಲೆಯಲ್ಲಿ ಅದು ವಸಾಹತುಶಾಹಿಯ ದಿಗ್ವಿಜಯದ ಮತ್ತೊಂದು ಅವತಾರವೂ ಹೌದು. ರಾಮಚಂದ್ರನ್ ಅವರಿಗೆ ಇದೆಲ್ಲದರ ಅರಿವಿದೆ. ಈ ಅಪಾಯಗಳನ್ನು ಅವರು ಬಲ್ಲರು.
ವಸಾಹತೀಕರಣದ ಮುಖ್ಯ ಪರಿಣಾಮವೆಂದರೆ ದೇಸೀ ಪರಂಪರೆಯ ರಚನೆಗಳನ್ನು, ಆಯ್ಕೆಗಳನ್ನು ಅಪ್ರಸ್ತುತಗೊಳಿಸಿಬಿಡುವುದು,
ಬಹುಮುಖೀ ಸಂಸ್ಕೃತಿಯ ಸಾಧ್ಯತೆಗಳನ್ನು ನಾಶಪಡಿಸುವುದು. ಏಕಾಕೃತಿಯನ್ನು ನಿರ್ಮಿಸಿ ಅದನ್ನೇ ನ್ಯಾಯಬದ್ಧವೆಂದು ಪ್ರತಿಷ್ಠಾಪಿಸುವುದು. ಯಜಮಾನ ಸಂಸ್ಕೃತಿಯ ಈ ದಬ್ಬಾಳಿಕೆಯಿಂದ ಪಾರಾಗುವುದು ಹೇಗೆ? ರಾಮಚಂದ್ರನ್ ತಮ್ಮ ಅಧ್ಯಯನದಲ್ಲಿ ಈ ಸಮಸ್ಯೆಗೆ ಮುಖಾಮುಖಿಯಾಗುತ್ತಾರೆ. ವಸಾಹತುಶಾಹೀ ದಿಗ್ವಿಜಯವನ್ನು ಅರ್ಥ ಮಾಡಿಕೊಳ್ಳುತ್ತಲೇ, ಸೋತಂತಿರುವ ಸಮಾಜದ ಶಕ್ತಿಯ ಬಗೆಗೂ ನಂಬಿಕೆ ತಾಳಿ ಆ ಲೋಕವನ್ನು ಪ್ರವೇಶಿಸುತ್ತಾರೆ. ಹೀಗಾಗಿ ಪರ್ಯಾಯ ಹುಡುಕಾಟದಲ್ಲಿರುವ ನಮಗೆ ರಾಮಚಂದ್ರನ್ ಅವರ ಅಧ್ಯಯನ ಅನೇಕ ಉಪಯುಕ್ತ ಒಳನೋಟಗಳನ್ನು ನೀಡುತ್ತದೆ, ಹೊಸ ವಾಗ್ವಾದಗಳನ್ನು ಹುಟ್ಟುಹಾಕುತ್ತದೆ, ರೂಢಿಯ ಚಿಂತನಾಕ್ರಮಕ್ಕಿಂತ ಭಿನ್ನವಾಗಿ ಹೊಸ ಸಾಧ್ಯತೆಗಳನ್ನು ಅನಾವರಣ ಮಾಡುತ್ತದೆ.
ಕಳೆದ ಶತಮಾನ ಚಿಂತನೆಗಳ ಯುಗ. ವಿವಿಧ ಜ್ಞಾನಕ್ಷೇತ್ರಗಳಲ್ಲಿ ಅನೇಕ ಬಗೆಯ ಹೊಸ ಚಿಂತನೆಗಳು, ಪರಿಕಲ್ಪನೆಗಳು ರೂಪುಗೊಂಡು ನಮ್ಮ ಆಲೋಚನಾ ಕ್ರಮವನ್ನು, ಬದುಕಿನ ಬಗೆಗಿನ ನಮ್ಮ ಗ್ರಹಿಕೆಯನ್ನು ಬದಲಾಯಿಸಿವೆ, ವಿಸ್ತರಿಸಿವೆ.

ಸಂಸ್ಕೃತಿ-ಸಾಹಿತ್ಯ-ಸಮಾಜದ ಸಂಬಂಧ ಹೆಚ್ಚು ಜಟಿಲವಾಗಿದ್ದು, ಸಾಹಿತ್ಯದ ಪರಿಕಲ್ಪನೆ ಪಲ್ಲಟಗೊಂಡಿದೆ. ಇತಿಹಾಸ, ಸಮಾಜವಿಜ್ಞಾನ, ತಂತ್ರಜ್ಞಾನ- ಇವುಗಳಲ್ಲಾದ ಪ್ರಗತಿ ಸಾಹಿತ್ಯದ ಚಿಂತನೆಗಳನ್ನು ಪ್ರಭಾವಿಸಿವೆ. ಡೆರಿಡಾ, ಪ್ಯುಕೋ, ಮಾರ್ಕ್ಯೊತ್ಯಸ್, ಚಾಮ್‌ಸ್ಕಿ, ಸೂಸ್ಯೋ, ಸೈದ್, ಹಾಕೆಟ್, ಲೆವಿಸ್ಟ್ರಾಸ್ ಮೊದಲಾದ ಚಿಂತಕರು ಸಾಹಿತ್ಯ ಸಂಸ್ಕೃತಿಯನ್ನು ವಿಶ್ಲೇಷಿಸುವ ಕ್ರಮದ ಮೇಲೆ ಗಾಢ ಪ್ರಭಾವ ಬೀರಿದ್ದಾರೆ. ಈ ಎಲ್ಲ ಒತ್ತಡಗಳನ್ನು ನಾವು ತಾಳಿಕೊಂಡು, ನಮ್ಮ ಮೂಲಶಕ್ತಿಯನ್ನು ಕಳೆದುಕೊಳ್ಳದೆ ಚಿಂತಿಸುವುದು ಕಡಿದಾದ ಹಾದಿ. ಸಿಎನ್‌ಆರ್ ಈ ಕಡಿದಾದ ಹಾದಿಯನ್ನು ಕ್ರಮಿಸುತ್ತಿರುವ ಚಿಂತಕ. ಜಿ.ಎಸ್. ಶಿವರುದ್ರಪ್ಪನವರು ಹೇಳುವ ಹಾಗೆ ಡಾ.ಸಿ.ಎನ್. ರಾಮಚಂದ್ರನ್ ಅವರು ಸಮಕಾಲೀನ ಸಾಹಿತ್ಯ ಸಂದರ್ಭದ ಶ್ರೇಷ್ಠ ವಿಮರ್ಶಕರಲ್ಲಿ ಒಬ್ಬರು ಮಾತ್ರವಲ್ಲ, ಬಹುದೊಡ್ಡ ವಿದ್ವಾಂಸರೂ ಹೌದು.
ಇಂಗ್ಲಿಷ್ ಪ್ರಾಧ್ಯಾಪಕರಾದ ಸಿ.ಎನ್. ರಾಮಚಂದ್ರನ್ ಅವರಿಗೆ ಸಂಸ್ಕೃತ ವಾಙ್ಮಯದಲ್ಲಿ ಪ್ರವೇಶವಿದೆ. ಕನ್ನಡ ಪರಂಪರೆಯ ಬಗ್ಗೆ ಪ್ರೀತಿಯಿದೆ. ಮುಖ್ಯವಾಗಿ ನಮ್ಮ ಜಾನಪದದ ಬಗ್ಗೆ ಅವರಿಗಿರುವ ಆಸಕ್ತಿ, ಕಾಳಜಿ, ಸೂಕ್ಷ್ಮ ಅಧ್ಯಯನ ವಿಶೇಷವೆನ್ನಿಸುವಂಥದು. ಭಗವದ್ಗೀತೆ, ವಾಲ್ಮೀಕಿ ರಾಮಾಯಣ, ಅಭಿಜ್ಞಾನ ಶಾಕುಂತಲ, ಪಂಪ, ಎಡ್ವರ್ಡ್ ಸೈದ್, ಚಂದ್ರಶೇಖರ ಕಂಬಾರ, ಮಂಟೇಸ್ವಾಮಿ- ಈ ವಿಭಿನ್ನ ಚಿಂತನೆಗಳನ್ನು ಬಿಡಿಬಿಡಿಯಾಗಿ ನೋಡುತ್ತಿರುವ ನಮ್ಮ ಸಂದರ್ಭದಲ್ಲಿ ಹೀಗೆ ಇಡಿಯಾಗಿ ನೋಡುವ ಕ್ರಮವೇ ಸಿಎನ್‌ಆರ್‌ರನ್ನು ಮುಖ್ಯ ವಿಮರ್ಶಕರನ್ನಾಗಿಸಿದೆ.
ಸಿಎನ್‌ಆರ್ ಅವರ ಪ್ರಧಾನ ಆಸಕ್ತಿ ಸಂಸ್ಕೃತಿ ಚಿಂತನೆಯಾದರೂ ಅವರು ತಮ್ಮ ಸಾಹಿತ್ಯ ಕೃಷಿ ಆರಂಭಿಸಿದ್ದು ಕಾದಂಬರಿ ಮೂಲಕ. ಎಪ್ಪತ್ತರ ದಶಕದಲ್ಲಿ ಅವರ ಮೊದಲ ಕೃತಿ 'ಶೋಧ' ಪ್ರಕಟವಾಯಿತು. ಕರ್ನಾಟಕ, ಮಹಾರಾಷ್ಟ್ರ, ಅಮೆರಿಕ, ಸೌದಿ ಅರೇಬಿಯಾ, ಸೋಮಾಲಿಯಾ- ಹೀಗೆ ವಿವಿಧ ಪ್ರಾಂತ್ಯ, ದೇಶಗಳಲ್ಲಿ ವೃತ್ತಿಜೀವನ ನಡೆಸಿದ ರಾಮಚಂದ್ರನ್ ಅನೇಕ ಜಗತ್ತುಗಳ ನಡುವೆ ಬದುಕಿದವರು. ಈ ಅಲೆಮಾರಿತನ ಕಾದಂಬರಿಯ ವಸ್ತು. ಮುಂದೆ, ಬದುಕಿಗೆ ಅಗತ್ಯ, ಆದರೆ ನಾವು ಕಳೆದುಕೊಂಡ ಈ ಜೀವರತ್ನದ ಹುಡುಕಾಟವೇ ಅವರ ಚಿಂತನಾಕ್ರಮದ ಪ್ರಮುಖ ಆಸಕ್ತಿಯಾಯಿತು.
ರಾಮಚಂದ್ರನ್ ನಮ್ಮ ಉತ್ತಮ ಕತೆಗಾರರೂ ಹೌದು. ಅವರ 'ಕಸಾಂದ್ರ' ಕಥಾಸಂಕಲನ ನನಗೆ ಇಷ್ಟವಾದ ಸಂಕಲನಗಳಲ್ಲೊಂದು. ಅವರ ಬರವಣಿಗೆ ಅದು ವಿಮರ್ಶೆಯೇ ಇರಲಿ, ಪ್ರಬಂಧವೇ ಇರಲಿ, ಕತೆ, ಕಾದಂಬರಿಯೇ ಇರಲಿ- ಸೂಕ್ಷ್ಮ ವಿವರಗಳ ಮೂಲಕ ಅವರ ಬರವಣಿಗೆಯ ರಚನಾವಿನ್ಯಾಸ ರೂಪುಗೊಳ್ಳುತ್ತದೆ. ಅವರ ಕತೆಗಳ ಕಟ್ಟುವಿಕೆಯಲ್ಲೂ ಈ ಅಂಶವೇ ಪ್ರಧಾನವಾಗಿದೆ. ವ್ಯಕ್ತಿಯ ಸಂಕಟಗಳನ್ನು ಅದು ವೈಯಕ್ತಿಕವಿರಬಹುದು, ಸಾಮಾಜಿಕವಿರಬಹುದು, ವಿವರಗಳನ್ನು ಒಂದು ನಿರ್ದಿಷ್ಟ ಕ್ರಮದಲ್ಲಿ ವಿನ್ಯಾಸಗೊಳಿಸುವ ಮೂಲಕ ಅನುಭವಕ್ಕೆ ಕೊಡುತ್ತಾರೆ.
ನಾವು ಕಂಡ ಸತ್ಯವನ್ನು ಮತ್ತೊಬ್ಬರಿಗೆ ಕಾಣಿಸುವುದು ಎಲ್ಲ ಸಂವೇದನಾಶೀಲ ಮನಸ್ಸುಗಳ ಸಂಕಟ. ಈ ಸಂಕಟವನ್ನು ಸಿಎನ್‌ಆರ್ ಕಸಾಂದ್ರ ಕತೆಯಲ್ಲಿ ಮನಗಾಣಿಸುವ ಕ್ರಮ ಅವರ ಬಗ್ಗೆ ಗೌರವ ಮೂಡಿಸುತ್ತದೆ. ಅವರದು ಮೂಲತಃ  ಜಿಜ್ಞಾಸು ಪ್ರವೃತ್ತಿ. ಆದರೆ ಅವರಿಗೆ ಬದುಕಿನ ನಿಗೂಢಗಳ ಬಗ್ಗೆ, ವಿಶ್ಲೇಷಣೆಯ ಆಚೆ ನಿಂತು ಅಣಕಿಸುವ ಸತ್ಯದ ಬಗ್ಗೆ ಅಪಾರ ಕುತೂಹಲ. ಇಂತಹ ಕುತೂಹಲದ ಫಲವೇ  ಈ ಕಥಾಸಂಕಲನ. ಅಡಿಗರು ಹೇಳುವ ಜಾಗೃತ ಸುಪ್ತಪ್ರಜ್ಞೆಗಳ ಹಠಾತ್ ಸಂಯೋಗ ಇಲ್ಲಿ ಕತೆಗಳ ವಿನ್ಯಾಸವನ್ನು ರೂಪಿಸಿದೆ. ರಾಮಚಂದ್ರನ್ 'ಹುಲಿ ಬಂತು ಹುಲಿ' ಎಂಬ ರೇಡಿಯೋ ನಾಟಕವನ್ನೂ ಬರೆದಿದ್ದಾರೆ.
ಆದರೂ ಅವರ ಪ್ರಮುಖ ಕೃಷಿ ವಿಮರ್ಶಾಕ್ಷೇತ್ರದಲ್ಲಿ. ಇದುವರೆಗೆ ಅವರ ಹದಿನಾರು ವಿಮರ್ಶಾ ಸಂಕಲನಗಳು ಪ್ರಕಟವಾಗಿವೆ. ಇಂಗ್ಲಿಷ್‌ನಲ್ಲಿಯೂ ಅವರು ಕೃತಿಗಳನ್ನು ರಚಿಸಿದ್ದಾರೆ. ಅನುವಾದ ಕ್ಷೇತ್ರದಲ್ಲಿಯೂ  ಗಣನೀಯ ಸಾಧನೆ. ಎ.ಕೆ. ರಾಮಾನುಜನ್ ಅವರ ವಚನಗಳ ಅನುವಾದದ ನಂತರ ರಾಮಚಂದ್ರನ್ ಅವರ ಮಲೆ ಮಾದೇಶ್ವರ ಮೌಖಿಕ ಕಾವ್ಯದ ಅನುವಾದ ಒಂದು ಮುಖ್ಯ ಸಾಂಸ್ಕೃತಿಕ ಘಟನೆ.
ಸಿಎನ್‌ಆರ್ ಅತ್ಯಂತ ಸ್ನೇಹಶೀಲ ವ್ಯಕ್ತಿ, ಕುಟುಂಬ ವತ್ಸಲ. ತಾತ್ವಿಕ ಭಿನ್ನಾಭಿಪ್ರಾಯಗಳು ವೈಯಕ್ತಿಕ ಸಂಬಂಧಗಳನ್ನು ಹದಗೆಡಿಸದಂತೆ ಜತನದಿಂದ ಕಾಪಾಡಿಕೊಳ್ಳುವ ಎಚ್ಚರ ಅವರಿಗಿದೆ. ಆದರೆ ವಾದಪ್ರಿಯರು. ತಮ್ಮ ಅಭಿಪ್ರಾಯಗಳನ್ನು ಸಮರ್ಥಿಸಲು ಎಲ್ಲ ಬಗೆಯ ತರ್ಕಗಳನ್ನೂ ಬಳಸಿಕೊಳ್ಳುತ್ತಾರೆ. ಅಕೆಡಮಿಕ್ ಶಿಸ್ತು ಅವರ ವ್ಯಕ್ತಿತ್ವದ ಪ್ರಧಾನ ದ್ರವ್ಯ. ಕಳೆದ ಒಂದು ದಶಕದಿಂದ ಅವರ ನಿಕಟ ಒಡನಾಟದ ಭಾಗ್ಯ ಪಡೆದಿರುವ ನನಗೆ ಸಂಬಂಧಗಳನ್ನು ಅವರು ಗೌರವಿಸುವ ಪರಿ ಮಾದರಿ ಅನ್ನಿಸಿದೆ. ನಾನು, ಚಂದ್ರಶೇಖರ ಕಂಬಾರರು, ಸಿಎನ್‌ಆರ್- ಒಟ್ಟಾಗಿ ಕಳೆದ ಕೆಲವು ಸಂಜೆಗಳು ಬದುಕಿನ ಅತ್ಯಂತ ಸ್ಮರಣೀಯ ಕ್ಷಣಗಳು.
ರಾಮಚಂದ್ರನ್ ಅವರ ಆತ್ಮಕತೆ 'ನೆರಳುಗಳ ಬೆನ್ನುಹತ್ತಿ' ಹಾಗೂ ಅವರ ಬದುಕು-ಬರಹ ಕುರಿತ ಕೃತಿ 'ರೂಪಾಂತರ' ಬಿಡುಗಡೆಯಾಗುತ್ತಿರುವ ಈ ಸಂದರ್ಭದಲ್ಲಿ ನಾಡವರ ಪರವಾಗಿ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು.

ಇಂದು ಬಿಡುಗಡೆ
ಸಿ.ಎನ್.ರಾಮಚಂದ್ರನ್ ಅವರ ಆತ್ಮಕತೆ 'ನೆರಳುಗಳ ಬೆನ್ನುಹತ್ತಿ' ಹಾಗೂ ಅವರ ಬದುಕು-ಬರಹ ಕುರಿತ ಕೃತಿ 'ರೂಪಾಂತರ' ಇಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಟರ್‌ನಲ್ಲಿ ಬಿಡುಗಡೆ. ಅಂಕಿತ ಪುಸ್ತಕ ಪ್ರಕಟಿಸಿದೆ. ಕಾರ್ಯಕ್ರಮದಲ್ಲಿ ಚಂದ್ರಶೇಖರ ಕಂಬಾರ, ಬಿ.ಎ.ವಿವೇಕ ರೈ, ಪುರುಷೋತ್ತಮ ಬಿಳಿಮಲೆ, ಕುಂವೀ, ಟಿ.ಪಿ.ಅಶೋಕ, ರವಿ ಭಟ್ ಉಪಸ್ಥಿತರಿರಲಿದ್ದಾರೆ. <

 -ನರಹಳ್ಳಿ ಬಾಲಸುಬ್ರಹ್ಮಣ್ಯ.
 9902611666

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ