ಕದನಕ್ಕೆ ಸಿದ್ಧ ಜಯ ಜಯ ಜಯಲಲಿತಾ
2013ನೇ ವರ್ಷ, ತಮಿಳುನಾಡಿನ ಅಣ್ಣಾ ಡಿಎಂಕೆ ಮುಖ್ಯಮಂತ್ರಿ ಜಯಲಲಿತಾ ಅವರ ಪಾಲಿಗೆ ದೊಡ್ಡ ಹೋರಾಟದ ವರ್ಷವೇ ಆಗಬಹುದು. ವರ್ಷದ ಮೊದಲ ಮಾಸವಾದ ಜನವರಿಯಲ್ಲೇ ಡಿಎಂಕೆ ನಾಯಕ ಕರುಣಾ ನಿಧಿ ವಿರುದ್ಧದ ಹೋರಾಟದಲ್ಲಿ ಒಂದು ದೊಡ್ಡ ವಿಜಯವನ್ನು ಗಳಿಸಿದ್ದರು.
ಆ ಕಾಲದಲ್ಲೇ ಜಯಲಲಿತಾ ಇದೇ ಅಂಕಣದಲ್ಲೇ ಕಾಣಿಸಿಕೊಂಡಿದ್ದು ನಿಜ. ಅದಾದ ಮೂರೇ ತಿಂಗಳಲ್ಲಿ ಮತ್ತೆ ಅವರು ಅಂಕಣಕ್ಕೆ ಬರಲು ಕಾರಣ ಅವರು ಕೈಗೊಂಡಿರುವ ಕೆಲವು ಕ್ರಮಗಳು.
ಜಯಲಲಿತಾ, ತಮ್ಮ ಅರವತ್ತೈದನೆಯ ವಯಸ್ಸಿನಲ್ಲಿ, ಈಗ ಏನು ಮಾಡಿದರೂ ಅದರ ಗುರಿ ಅವರ ರಾಜಕೀಯ ವೈರಿ ಎನ್ನಬಹುದಾದ ಡಿಎಂಕೆ ನಾಯಕ ಕರುಣಾ ನಿಧಿ ಅವರೇ. ಜಯಲಲಿತಾ ಅವರ ರಾಜಕೀಯವೆಲ್ಲವೂ ಈಗ ಕರುಣಾನಿಧಿ ಅವರ ಕ್ರಿಯೆಗಳಿಗೆಲ್ಲ ಪ್ರತಿಕ್ರಿಯೆ ನೀಡುವುದೇ ಸೀಮಿತ. ಆದರೆ ಅದೆಂತಹ ಅದ್ಭುತ ಪ್ರತಿಕ್ರಿಯೆ!
ತಮಿಳುನಾಡಿನಲ್ಲಿ ಈಗಿನ ಜ್ವಲಂತ ರಾಜಕೀಯ ಪ್ರಶ್ನೆ ಎಂದರೆ, ಶ್ರೀಲಂಕಾದಲ್ಲಿ ನಡೆದಿರುವ- ನಡೆಯುತ್ತಿರುವ ತಮಿಳರ ಮಾರಣಹೋಮ. ತಮಿಳುನಾಡಿನ ಜನರ ಪಾಲಿಗೆ ಇದು ನೇರವಾಗಿ ಅವರ ಹೃದಯವನ್ನೇ ಮುಟ್ಟಿ, ಭಾವನೆಗಳನ್ನು ಕೆರಳಿಸುತ್ತವೆ. ದ್ರಾವಿಡ ಪಕ್ಷಗಳೆಲ್ಲವೂ ಅಲ್ಲಿ ಈಗ ತಮ್ಮ ರಾಜಕೀಯ ಬೇಳೆಯನ್ನು ಬೇಯಿಸಿಕೊಳ್ಳಲು ಬಳಸುತ್ತಿರುವ ವಿಷಯ ಇದೇ.
ಒಂದು ಪ್ರಕಟಿತ ವರದಿಯಂತೆ, ಕಳೆದ ಐದು ವರ್ಷಗಳಲ್ಲಿ ಶ್ರೀಲಂಕಾದಲ್ಲಿ ಸುಮಾರು ನಲವತ್ತು ಸಹಸ್ರ ಮಂದಿಯ ಸಾಮೂಹಿಕ ಕೊಲೆಯಾಗಿದೆ. ಅವರಲ್ಲಿ ತಮಿಳರೇ ಜಾಸ್ತಿ ಎನ್ನುವುದು ನಿಜವಾದರೂ, ಮುಸ್ಲಿಮರ ಸಂಖ್ಯೆಯೂ ಗಮನಾರ್ಹವಾದದ್ದು. ಆಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಯ ವರದಿಯಲ್ಲೂ ಮಾರಣ ಹೋಮದ ಪ್ರಸ್ತಾಪವಿದೆ. ಆದರೆ ಅಂಕಿ-ಅಂಶಗಳ ವಿವರಗಳಿಲ್ಲ.
ಈ ಹಿನ್ನೆಲೆಯಲ್ಲಿ ಡಿಎಂಕೆ ನಾಯಕ ಕರುಣಾನಿಧಿ, ಕೇಂದ್ರದಲ್ಲಿ ಆಳುವ ಕೂಟಕ್ಕೆ ಬೆಂಬಲ ನೀಡಿ, ಅದರ ಮೂಲಕ ಗಳಿಸಿದ್ದ ರಾಜ್ಯಾಧಿಕಾರವನ್ನು ಪೂರ್ತಿಯಾಗಿ ಬಿಟ್ಟುಕೊಡಲು ಸಿದ್ಧವಾಗಿದ್ದನ್ನು ತಮಿಳರನ್ನು ಬಿಟ್ಟು, ಉಳಿದವರು ಅರ್ಥ ಮಾಡಿಕೊಳ್ಳುವುದು ಕಷ್ಟ. ಅದು ಹೃದಯದ ಸಂಬಂಧ, ಭಾಷೆಯ ಬಂಧನ.
ಕರುಣಾನಿಧಿ ತಮ್ಮ ಪಕ್ಷವನ್ನು ಕೇಂದ್ರದ ಆಳುವ ಕೂಟದಿಂದ ಹಿಂದಕ್ಕೆ ಪಡೆದು, ಕೇಂದ್ರದಲ್ಲಿ ಒಂದು ರೀತಿಯಲ್ಲಿ ಸರ್ಕಾರದ ಭದ್ರತೆಯನ್ನೇ ಅಲ್ಲಾಡಿಸಿದ್ದು, ತಮಿಳುನಾಡಿನಲ್ಲಿ ಒಂದು ಭಾರಿ ಸಾಹಸದಂತೆಯೇ ಕಂಡುಬಂದಿತ್ತು.
ಕೇಂದ್ರದ ಡಿಎಂಕೆ ಮಂತ್ರಿಗಳ ಮೇಲೆ ಹಲವು ಸಹಸ್ರ ಕೋಟಿ ರುಪಾಯಿಗಳ ಮೌಲ್ಯದ ಆರೋಪಗಳು ಕೇಳಿಬಂದು, ಒಬ್ಬ ಸಚಿವರು ಮಂತ್ರಿ ಸ್ಥಾನವನ್ನು ಬಿಟ್ಟು ಜೈಲಿನಲ್ಲಿ ಒಂದು ವರ್ಷ ಇರಬೇಕಾದಾಗ ಸ್ವಂತ ಸೋದರಳಿಯನೇ ಕೇಂದ್ರದಲ್ಲಿ ಮಂತ್ರಿ ಸ್ಥಾನವನ್ನು ಕಳೆದುಕೊಂಡಾಗ, ಮುದ್ದಿನ ಮಗಳೇ ಜೈಲಿಗೆ ಹೋದಾಗಲೂ ಕರುಣಾನಿಧಿ ರಾಜಕೀಯ ಪ್ರತೀಕಾರಕ್ಕೆ ಮುಂದಾಗಿರಲಿಲ್ಲ.
ಹಾಗೇನಾದರೂ ಅವರು ಕೇಂದ್ರ ಸರ್ಕಾರಕ್ಕೆ ತಮ್ಮ ಬೆಂಬಲವನ್ನು ಹಿಂದಕ್ಕೆ ಪಡೆದಿದ್ದರೆ ಮನೆಮಂದಿಯ ಅವ್ಯವಹಾರಗಳನ್ನು ಮುಚ್ಚಿಡಲು ಕೈಗೊಂಡ ಕ್ರಮ ಎನ್ನುವ ಹಿಯಾಳಿಕೆಗೆ ಒಳಗಾಗಬೇಕಾಗುತ್ತಿತ್ತು.
ಆದರೆ, ಶ್ರೀಲಂಕಾ ತಮಿಳರ ಮಾರಣ ಹೋಮದ ವಿಚಾರ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಮಾನವ ಹಕ್ಕುಗಳ ರಕ್ಷಣೆ ಅಧಿವೇಶನದಲ್ಲಿ ಬಂದಾಗ ಭಾರತ ಗಟ್ಟಿ ನಿಲವನ್ನು ತಾಳದೇ ಇದ್ದಿದ್ದನ್ನು ಪ್ರತಿಭಟಿಸಿ, ಸರ್ಕಾರದಿಂದ ತಮ್ಮ ಪಕ್ಷವನ್ನು ಕರುಣಾನಿಧಿ ಹಿಂದಕ್ಕೆ ಪಡೆದಾಗ, ತಮಿಳುನಾಡಿನಲ್ಲಿ ಹೀರೋ ಆಗುವ ಸಂಭವವಿತ್ತು.
ಶ್ರೀಲಂಕಾ ತಮಿಳರ ವಿಷಯದಲ್ಲಿ ಗಂಭೀರವಾದ, ತೂಕದ ಮಾತುಗಳನ್ನೇ ಆಡುತ್ತಿದ್ದ ಮುಖ್ಯಮಂತ್ರಿ ಜಯಲಲಿತಾ ಆಗ ಕರುಣಾನಿಧಿ ಕೈಗೊಂಡ ಕ್ರಮಕ್ಕಿಂತ ತೀವ್ರ ಸ್ವರೂಪದ ಕ್ರಮಕ್ಕೆ ಕೈಹಾಕಲೇ ಬೇಕಾಯಿತು.
ಆ ಸಮಯದಲ್ಲೇ ತಮಿಳುನಾಡಿನ ವಿಧಾನಸಭೆಯ ಅಧಿವೇಶನ ಸೇರಿದ್ದನ್ನು ಚೆನ್ನಾಗಿ ಬಳಸಿಕೊಂಡ ಜಯಲಲಿತಾ ಸದನದಲ್ಲೇ ಒಂದು ಅಧಿಕೃತ ನಿರ್ಣಯವನ್ನು ಮಂಡಿಸಿ, ಶ್ರೀಲಂಕಾದಲ್ಲಿನ ಮಾನವಹತ್ಯೆಗೆ ಅಲ್ಲಿನ ಸರ್ಕಾರವನ್ನೇ ಹೊಣೆಗಾರಿಕೆ ಹೊರುವಂತೆ ಕೇಂದ್ರ ಸರ್ಕಾರ ವಿಶ್ವಸಂಸ್ಥೆಯಲ್ಲೇ ನಿರ್ಣಯವನ್ನು ಮಂಡಿಸಬೇಕೆಂದು ಒತ್ತಾಯ ಪಡಿಸಿದರು.
ಆ ನಿರ್ಣಯವನ್ನು ತಮಿಳುನಾಡು ವಿಧಾನಸಭೆಯಲ್ಲಿ ವಿರೋಧಿಸುವುದಕ್ಕೆ ಯಾರೂ ಇರಲಿಲ್ಲ. ಆ ನಿರ್ಣಯವನ್ನು ಮಂಡಿಸುತ್ತಾ ಜಯಲಲಿತಾ ಮಾಡಿದ ಭಾಷಣ. ಯಾರೋ ಬರೆದುಕೊಟ್ಟದ್ದ ಭಾಷಣವಲ್ಲ. ನಿಜ. ಅದೊಂದು ಸಿದ್ಧಪಡಿಸಿದ್ದ ಭಾಷಣ, ಆದರೆ ಅದನ್ನು ಜಯಲಲಿತಾ ಬಳಸಿಕೊಂಡ ರೀತಿ - ನೀತಿ, ಪದಗಳ ಉಚ್ಚಾರಣೆ, ಧ್ವನಿಯ ಏರಿಳಿತ ಎಲ್ಲವೂ ಪ್ರಚಂಡವೆನ್ನುವಂಥ ಪರಿಣಾಮವನ್ನೇ ಬೀರಿದವು. ಟಿ.ವಿ. ವಾಹಿನಿಗಳಲ್ಲಿ ಅದರ ನೇರಪ್ರಸಾರವಾಗಿದ್ದು ತಮಿಳರ ಮನವನ್ನು ಮುಟ್ಟಿತ್ತು.
ಜಯಲಲಿತಾ, ಒಂದೇ ಒಂದು ಕಡೆಯಲ್ಲೂ ತೊದಲಲಿಲ್ಲ, ಒಂದೇ ಒಂದು ಇಂಗ್ಲಿಷ್ ಪದವನ್ನೂ ಬಳಸಲಿಲ್ಲ. ಅವರ ದೃಷ್ಟಿ ನೇರವಾಗಿ ಸದನದ ಸ್ಪೀಕರ್ ಕಡೆಗೇ ಇತ್ತು. ಸದನದಲ್ಲೇ ಬೆಂಬಲಿಗ ಸದಸ್ಯರು ಚಪ್ಪಾಳೆ ತಟ್ಟಿದಾಗ ಅವಶ್ಯವಿದ್ದಷ್ಟೇ ಸಮಯ ಕೊಟ್ಟಿದ್ದು.
ಆ ಭಾಷಣದ ಸಮಯದಲ್ಲಿ ಸ್ವಲ್ಪ ಕಾಲ ಕರುಣಾನಿಧಿ ಅವರೂ ಸದನದಲ್ಲಿದ್ದರು. ಜಯಲಲಿತಾ ಅವರತ್ತ ನೋಡಲೇ ಇಲ್ಲ.
ತಮಿಳುನಾಡಿನ ವಿಧಾನಸಭೆಯಲ್ಲಿ ನೆರೆರಾಷ್ಟ್ರವಾದ ಶ್ರೀಲಂಕಾದ ಆಂತರಿಕ ವ್ಯವಹಾರವನ್ನು ಪ್ರಸ್ತಾಪಿಸಿದ್ದು, ಅಲ್ಲಿ ಒಂದು 'ತಮಿಳು ಈಳಂ' ಸ್ಥಾಪನೆಗೆ ಕೇಂದ್ರ ಒತ್ತಾಯ ಪಡಿಸಬೇಕೆಂದು ಬಹಿರಂಗವಾಗಿ ಹೇಳಿದ್ದು ರಾಜತಾಂತ್ರಿಕ ರಾಜಕೀಯದಲ್ಲಿ ಒಂದು ಅಸಾಮಾನ್ಯ ಘಟನೆ.
ಜಯಲಲಿತಾ ಈಗ ಕೇಂದ್ರದ ಮುಂದೆ ಇಟ್ಟಿರುವ ಪ್ರಶ್ನೆ: ಭಾರತ ಸರ್ಕಾರ ಶ್ರೀಲಂಕಾ ತಮಿಳರನ್ನು ಭಾರತೀಯ ಸಂಜಾತರೆಂದು ಪರಿಗಣಿಸುವುದಿಲ್ಲವೇ?
ಅದೇ ಸಮಯದಲ್ಲೇ ಜಯಲಲಿತಾ ಶ್ರೀಲಂಕಾದ ಆಟಗಾರರು ಚೆನ್ನೈ ಐಪಿಎಲ್ ಕ್ರಿಕೆಟ್ ಪಂದ್ಯಗಳಲ್ಲಿ ಆಡಬಾರದೆನ್ನುವ ಷರತ್ತನ್ನು ವಿಧಿಸಿದ್ದಾರೆ.
ವಾಸ್ತವದಲ್ಲಿ ಈಗ ನಡೆದಿರುವುದು ಜಯಲಲಿತಾ, ಕರುಣಾನಿಧಿ ನಡುವಣ ಮೇಲಾಟ. ಆ ವಿಚಾರದಲ್ಲಿ ಯಾರು ಏನೇ ಭಾವಿಸಲಿ, ಜಯಲಲಿತಾ ಅವರಿಗೆ ಅವರ ಗುರಿಯೇ ಮುಖ್ಯ. ಅದನ್ನು ತಪ್ಪು ಎನ್ನಬಹುದೇನು?
- ಸತ್ಯ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.